Saturday, 14th December 2024

ಅಭ್ಯಂಗ ಮಾಡಿ ಕೋವಿಡ್ ನಿಂದ ಬಚಾವಾದೆ !

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಕೋವಿಡ್ ಸಮಯದಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. ಆಯುರ್ವೇದ ವೈದ್ಯೆಯಾದ ನಾನು ಸುಮಾರು ಒಂದು ವರ್ಷದ ನನ್ನ ಮಗು ಹಾಗೂ ಪತಿಯ ಜತೆ ಲಾಕ್‌ಡೌನ್‌ನಲ್ಲಿ ಇದ್ದಂತಹ ಸಮಯ. ಆಯುರ್ವೇದ ವೈದ್ಯೆಯಾದ ಕಾರಣ ಬಹಳ ಶಿಸ್ತಿನ ಜೀವನನಡೆಸುವ ಪ್ರಯತ್ನ ಸದಾ ಇತ್ತು. ದಿನಚರ್ಯೆಯ ಪಾಲನೆಯಂತೂ ಇದ್ದೇ ಇತ್ತು. ಬಹುಮುಖ್ಯವಾಗಿ ನಿತ್ಯವೂ ‘ಅಭ್ಯಂಜನ ಸ್ನಾನ’
ಮಾಡ್ತಾ ಇದ್ದೆ.

ಅಂದರೆ ತಲೆ-ಮೈಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡುವುದು. ನನ್ನ ಪುಟ್ಟ ಮಗುವಿಗೂ ಸಹ ನಿತ್ಯ ಎಣ್ಣೆ ಸ್ನಾನ ಇದ್ದೇ ಇತ್ತು. ಅವಳಿಗೆ ಕೆಲವು ಸಲ ದಿನಕ್ಕೆ ಎರಡರಿಂದ ಮೂರು ಬಾರಿ ಕೂಡ ಇತ್ತು. ಪತಿಯೂ ಸಹ ಸುಮಾರಷ್ಟು ಆಯುರ್ವೇದದ ಕ್ರಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಶಿಸ್ತಿನಿಂದ ಪಾಲಿಸುತ್ತಿದ್ದರು. ಆದರೆ ಕೊರೋನಾ ದಾಳಿ ಇಡುವ ಕೆಲವು ತಿಂಗಳ ಹಿಂದೆ ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಅವರಿಗೆ ನಿತ್ಯ ಅಭ್ಯಂಗವನ್ನು ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.

ಯಾವುದೋ ಕೆಲಸದ ಮೇರೆಗೆ ಅವರು ಉತ್ತರ ಭಾರತಕ್ಕೆ ಹೋಗಿ ಬಂದ ಕೆಲವು ದಿನಗಳಲ್ಲಿಯೇ ’COVID Positive’ ಅಂತ ಡಿಟೆಕ್ಟ್ ಆಯ್ತು. ಜ್ವರ, ನೆಗಡಿ, ಕೆಮ್ಮು, ತಲೆನೋವು- ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿತ್ತು. ನಾನು ಆಯುರ್ವೇದ ವೈದ್ಯೆ ಆಗಿದ್ದರಿಂದ ಮನೆಯ ಚಿಕಿತ್ಸೆಯನ್ನು ಪ್ರಾರಂಭ ಮಾಡಿದೆ. ಆದರೆ ಎಲ್ಲರಿಗೂ ಆತಂಕ! ಮನೆಯಲ್ಲಿ ಒಂದು ವರ್ಷದ ಸಣ್ಣ ಮಗು ಇದೆ. ನೀನು ಇನ್ನೂ ಮಗುವಿಗೆ ಎದೆ ಹಾಲು ಕುಡಿಸ್ತಾ ಇದಿಯಾ. ಯಾಕೆ ರಿ ತಗೊಳ್ತಿಯಾ? ಗಂಡನನ್ನು ಆಸ್ಪತ್ರೆಗೆ ಸೇರಿಸಿ ’treatment ಕೊಡಿಸೋಣ’ ಅಂತ ಎಲ್ಲಾ ಕಡೆಯಿಂದ ಕಾಳಜಿಯ ಮಾತುಗಳು.

ಆದರೆ ಆಯುರ್ವೇದವನ್ನು ಸಂಪೂರ್ಣ ನಂಬಿದ ನಾನು ಆಯುರ್ವೇದ ನಮ್ಮನ್ನು ಖಂಡಿತ ರಕ್ಷಿಸುತ್ತದೆ ಅನ್ನುವ ಭರವಸೆಯಿಂದ ಚಿಕಿತ್ಸೆಯನ್ನು
ಮುಂದುವರಿಸಿದೆ. ಆಹಾರ-ಔಷಧಗಳನ್ನು ಕ್ರಮಬದ್ಧವಾಗಿ ನೀಡುವುದಕ್ಕೆ ಪ್ರಾರಂಭಿಸಿದೆ. Of course, ಬೇರೆ ಕೋಣೆಯಲ್ಲಿ ಅವರನ್ನು quarantine ಮಾಡಿದ್ದೆ. ಮಗುವಿಗೆ ’preventive care’ ಮಾಡ್ತಾ ಮಾಡ್ತಾ ನಾನು ಸಹ ಅದೇ ರೀತಿಯ ಎಚ್ಚರ ಕ್ರಮಗಳನ್ನು ತೆಗೆದುಕೊಂಡೆ. ಒಂದೇ ವಾರದಲ್ಲಿ ಪತಿ ಪೂರ್ತಿ ಗುಣಮುಖರಾಗಿ ಕೋವಿಡ್‌ನಿಂದ ಆಚೆ ಬಂದರು. ಮುಂಚಿನಿಂದಲೂ ಆಯುರ್ವೇದದ ಶಿಸ್ತಿನ ಬದುಕನ್ನು ನಡೆಸುತ್ತಾ ಬಂದಿದ್ದರಿಂದ ಅವರಿಗೆ ಕೋವಿಡ್ ಹೆಚ್ಚಾಗಿ ತೊಂದರೆ ಮಾಡಲಿಲ್ಲ.

ಜಾಸ್ತಿ ಅಪಾಯಗಳಿಲ್ಲದೆ ಬಹುಬೇಗನೆ ವ್ಯಾಧಿಯಿಂದ ಹೊರಬಂದರು. ಅಷ್ಟು ಹತ್ತಿರದಲ್ಲಿ, ಒಂದೇ ಮನೆಯಲ್ಲಿ ಇದ್ದರೂ ಸಹ ಕೊರೋನಾ ವೈರಸ್‌ಗೆ, ನನಗಾಗಲಿ ಅಥವಾ ನನ್ನ ಪುಟ್ಟ ಮಗುವಿಗಾಗಲಿ, ನಾವು ಹಾಕಿಕೊಂಡ ಲಕ್ಷ್ಮಣರೇಖೆಯನ್ನು ದಾಟಿ ಒಳ ನುಸುಳಿ ತೊಂದರೆ ಮಾಡಲು ಸಾಧ್ಯವಾಗಲಿಲ್ಲ. ಎಂತಹ ಒಂದು ಅಚ್ಚರಿಯ ವಿಷಯ ಅಲ್ವಾ?! ಇದು ಹೇಗೆ ಸಾಧ್ಯ ಆಯ್ತು? ಹಾಗಾದರೆ ನನಗೂ ಹಾಗೂ ನನ್ನ ಮಗುವಿಗೆ ಮಾಡಿಕೊಂಡ ಆ preventive
care ಯಾವುದು? ಒಂದೇ ಮಾತಿನಲ್ಲಿ ಹೇಳಬೇಕೆಂದರೆ – ನಮ್ಮನ್ನು ಕೋವಿಡ್ ನಿಂದ ಬಚಾವ್ ಮಾಡಿದ್ದೇ -‘ಅಭ್ಯಂಗ ಸ್ನಾನ’.

ಆಶ್ಚರ್ಯ ಆಯ್ತಾ ಸ್ನೇಹಿತರೆ? ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ COVID ಈನಂತಹ ಘೋರ ವ್ಯಾಧಿಯನ್ನೂ ಸಹ ಅಭ್ಯಂಜನದಿಂದ ದೂರ ಇಡಬಹುದು ಅಂದರೆ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲೇ ಬೇಕು ಅಲ್ವಾ?! ಅಭ್ಯಂಗ ಅಂದರೆ ನಿಜವಾಗಲೂ ಏನು ಅಂತ ಅರ್ಥ ಮಾಡಿಕೊಳ್ಳಲು ಈ ಘಟನೆ ನಿಮ್ಮನ್ನು ಸಾಕಷ್ಟು ಪ್ರೇರೇಪಿಸಿದೆ ಅಂತ ನಂಬಿ ಮುಂದುವರಿಸುತ್ತೇನೆ. ಆಯುರ್ವೇದ ಒಂದು ವೈದ್ಯಕೀಯ ಪದ್ಧತಿ ಅಷ್ಟೇ – ಅಂದರೆ ಖಾಯಿಲೆ ಬಂದಾಗ ಮಾತ್ರ ಆಯುರ್ವೇದ ಪ್ರಸ್ತುತ ಅಂತ ನಂಬಿರುವವರಿಗೆ, ಈ ವಿಷಯ ಹೊಸದಾಗಿರಬಹುದು- ಅದು ಏನು ಅಂದರೆ- ಆಯುರ್ವೇದ treatment ಗಿಂತಲೂ ಹೆಚ್ಚಾದ ಪ್ರಾಮುಖ್ಯತೆಯನ್ನು prevention ಗೆ ನೀಡಿದೆ.

ಖಾಯಿಲೆ ಬಂದಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ, ಖಾಯಿಲೆಯೇ ಬಾರದ ಹಾಗೆ ನೋಡಿಕೊಳ್ಳುವುದು ಜಾಣತನ ಅನ್ನುವುದು ಆಯುರ್ವೇದದ ಹಿತೋಪದೇಶ. ಅದನ್ನು ‘ಸ್ವಾಸ್ಥ್ಯ ರಕ್ಷಣೆ’ ಎಂದು ಕರೆದು, ಅದರಲ್ಲಿ ದಿನಚರ್ಯೆ, ಋತುಚರ್ಯೆ ಹಾಗೂ ಸದ್ವೃತ್ತಗಳೆಂಬ ವಿಷಯಗಳನ್ನು ಬಹಳ ವಿಸ್ತಾರವಾಗಿ ಉಲ್ಲೇಖಿಸಿ, ಆಯುರ್ವೇದವು ಮನುಕುಲದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸಿದೆ.

ಸ್ನೇಹಿತರೆ, ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನೂರಾರು ವಿಘ್ನಗಳಿವೆ – ಬಿಸಿಲು, ಚಳಿ, ಮಳೆ ರೂಪದ ಋತುಗಳಿಂದ ಪರಿಸರದಗುವ ಏರು-ಪೇರುಗಳಿಂದ
ದೇಹದ ಮೇಲಾಗುವ ಕೆಟ್ಟ ಪ್ರಭಾವಗಳು ಒಂದಾದರೆ, ನಮ್ಮ ತಪ್ಪು ಆಹಾರ-ವಿಹಾರ-ವಿಚಾರಗಳಿಂದ ತೊಂದರೆ ಇನ್ನೊಂದು. ಪ್ರತಿದಿನವೂ ಈ ತೊಂದರೆಗಳಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ, ಸ್ವಾಸ್ಥ್ಯವನ್ನು ಸದಾ ಕಾಪಾಡಿಕೊಳ್ಳುವ ವಿಧಾನವೇ ‘ದಿನಚರ್ಯೆ’. ದಿನಚರ್ಯೆಯ ಪಾಲನೆಯು ಸ್ವಾಸ್ಥ್ಯ ರಕ್ಷಣೆ ಮಾಡುವುದರ ಜೊತೆಗೆ ವರ್ಧನೆಯನ್ನೂ ಮಾಡುತ್ತದೆ.

‘ದಿನಚರ್ಯಾ’ ಎಂಬ ಶಬ್ದವೇ ತಿಳಿಸುವಂತೆ ಅದು ರಾತ್ರಿ ನಿದ್ರಿಸಿ ಬೆಳಿಗ್ಗೆ ಏಳುವುದರಿಂದ ಆರಂಭಿಸಿ, ಮತ್ತೆ ರಾತ್ರಿ ಮಲಗುವವರೆಗೆ ಆರೋಗ್ಯ ರಕ್ಷಣೆಯ ಸಲುವಾಗಿ ನಾವು ಮಾಡಬೇಕಾದ ಕ್ರಮಬದ್ಧವಾದ ಕೆಲಸಗಳು. ಇದು ಎಂದೋ ಒಂದೆರಡು ದಿನ ಆಚರಿಸುವ ಆಚರಣೆಯಲ್ಲ. ಇದು ಪ್ರತಿ ನಿತ್ಯ ಮಾಡುವ ಪ್ರಯಾಸ. ಈ ದಿನ ನಿತ್ಯದ ವ್ರತದ ಬಹುಮುಖ್ಯವಾದ ಭಾಗವೇ ‘ಅಭ್ಯಂಗ’. ಯಾಕೆ ಇದನ್ನು ಬಹುಮುಖ್ಯವಾದದ್ದು ಅಂತ ಹೇಳ್ತೀನಿ ಅಂದ್ರೆ – ಶಾಸದಲ್ಲಿ ‘ಅಭ್ಯಂಗಂ ನಿತ್ಯಂ ಆಚರೇತ್’ ಅಂತ ಹೇಳಿದ್ದಾರೆ. ಸಂಸ್ಕೃತ ವ್ಯಾಕರಣದ ಪರಿಚಯ ಇರುವವರಿಗೆ ‘ಆಚರೇತ್’ ಎಂಬ ಶಬ್ದ ಪ್ರಯೋಗದ ಪ್ರಾಮುಖ್ಯತೆ ಅರ್ಥವಾಗುತ್ತದೆ,

ಇದು ‘ವಿಧಿಲಿಂಗ್ ಲಕಾರ’ ಪದ . ಅಂದರೆ ಇದೊಂದು ‘ಆದೇಶ’. ಅಭ್ಯಂಗವನ್ನು ನಿತ್ಯ ಮಾಡಲೇಬೇಕು. ಬೇರೆ option ಇಲ್ಲ. Because
it is so vital in maintaining our health. ಹಾಗಾಗಿ ಇನ್ಮೇಲೆ ನೀವೆಲ್ಲರೂ-ನಾವೆಲ್ಲರೂ ನಮ್ಮ ನಿತ್ಯ ಕರ್ಮಗಳಲ್ಲಿ ದಿನಚರಿಯಲ್ಲಿ ಸೇರಿಸಿ ಕೊಳ್ಳಲೇ ಬೇಕಾದಂತಹ ಕೆಲಸವೆಂದರೆ ಅದು ‘ಅಭ್ಯಂಗ’! ದಿನ ನಿತ್ಯದ ಈ ಆಚರಣೆಯು ಕಾಲ ಕಳೆದಂತೆ, ಸೋಮಾರಿತನ ಬೆಳೆದಂತೆ, ವಾರಕ್ಕೊಮ್ಮೆಗೆ ಇಳೀತು.

ಹಾಗೆಯೇ ಸಮಯ ಸಿಕ್ಕಿದಾಗ ಯಾವಾಗಲಾದರೊಮ್ಮೆ ಮಾಡುವ ಹಂತ ತಲುಪಿತು. ನಂತರ ತೈಲಾ ಭ್ಯಂಜನದ ಹೆಸರಿನಲ್ಲಿ ವರುಷಕ್ಕೊಮ್ಮೆ ದೀಪಾ ವಳಿ ಹಬ್ಬದಲ್ಲಿ ಮಾತ್ರ ಪಾಲಿಸುವ ಆಚರಣೆಯಾಗಿ ಉಳಿಯಿತು. ಇಷ್ಟು ಮಾತ್ರವಲ್ಲದೆ- ಕೆಲವೊಮ್ಮೆ ತಲೆಗೆ, ಕೆಲವೊಮ್ಮೆ ದೇಹಕ್ಕೆ ಎಂಬ partial ಆಚರಣೆಯಾಗಿ ಬದಲಾಯಿತು. Fast paced world ನಲ್ಲಿ ಟೈಮ್ ಎಲ್ಲಿದೆ ಇದಕ್ಕೆಲ್ಲ, ಅನ್ನೋ ಕಾರಣವೇ ದೊಡ್ಡದಾಯಿತು. ಅದರ ಕಾರಣವಾಗಿಯೇ, ಇವತ್ತು ನಾವು ನೂರಾರು ಹೊಸ ಹೊಸ ರೋಗಗಳಿಗೆ ಬಲಿಯಾಗ್ತಾ, ಸ್ವಾಸ್ಥ್ಯವನ್ನು ರಕ್ಷಿಸಿಕೊಳ್ಳುವುದರಲ್ಲಿ fail ಆಗ್ತಾ ಇದ್ದೀವಿ.

ಹಾಗಾಗಿ ಮತ್ತೊಮ್ಮೆ ಒತ್ತಿ ಹೇಳ್ತೀನಿ ಕೇಳಿ – ‘ಅಭ್ಯಂಗಂ ನಿತ್ಯಂಆಚರೇತ್’ – ಅಭ್ಯಂಗವನ್ನು ಎಲ್ಲರೂ ದಿನನಿತ್ಯ ಮಾಡಲೇಬೇಕು!!! ಹಾಗಾದರೆ, ಅಭ್ಯಂಗ ಅಂದರೆ ಏನು? ‘ಎಣ್ಣೆ/ ತುಪ್ಪ/ ಬೆಣ್ಣೆ ಮುಂತಾದ ಸ್ನೇಹಯುಕ್ತ, ಜಿಡ್ಡಿನಿಂದ ಕೂಡಿದ ದ್ರವ್ಯಗಳನ್ನು ಅನುಲೋಮವಾಗಿ, ಅಂದರೆ ಲೋಮಕ್ಕೆ ಅನುಗುಣವಾಗಿ/ಕೆಳಮುಖವಾಗಿ, ಸುಸ್ಥಿತಿಯಲ್ಲಿ ಇರಿಸಿದ ದೇಹದ ಭಾಗಕ್ಕೆ ಹಚ್ಚುವುದೇ ಅಭ್ಯಂಗ’. ಅಭ್ಯಂಗ ಎಂದ ಮಾತ್ರಕ್ಕೆ ಯಾವುದೋ ತೈಲ, ಯಾವುದೋ ಸಮಯದಲ್ಲಿ, ಯಾವುದೋ ಕ್ರಮದಿಂದ ಹಚ್ಚಿ ತೊಳೆಯುವುದಲ್ಲ.

ಇದಕ್ಕೆ ಸಾಮಾನ್ಯ ಹಾಗೂ ವಿಶೇಷ ನಿಯಮಗಳಿವೆ. ವಿಧಿ ಇದೆ. ಕ್ರಮ ಇದೆ. ಕ್ರಮವನ್ನು ಸರಿಯಾಗಿ ಅರಿತು ಮಾಡಿದಾಗ ಮಾತ್ರ ಇದರಿಂದ ಸ್ವಾಸ್ಥ್ಯ ರಕ್ಷಣೆ
ಸಾಧ್ಯ. ಇವತ್ತು ಸ್ವಲ್ಪ free time ಇದೆ ಅಥವಾ Festival discount ಇದೆ ಅಂತ ದೇಹದ ಸ್ಥಿತಿಯನ್ನು ಗಮನಿಸದೇ spaಗಳಿಗೆ/ Massage
parlour ಗಳಿಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುವುದು ಖಂಡಿತವಾಗಿಯೂ ಇರುವ ತೊಂದರೆಗಳನ್ನು ಹೆಚ್ಚು ಮಾಡುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಅಭ್ಯಂಗದ ವಿಧಾನವನ್ನು ತಿಳಿದು ಕೊಳ್ಳುವುದು ಅತ್ಯವಶ್ಯಕ. ಅಭ್ಯಂಗವನ್ನು ಸಾಮಾನ್ಯವಾಗಿ ಎರಡು ವಿಧಾನಗಳಲ್ಲಿ ಕಾಣುತ್ತೇವೆ.

೧. ಚಿಕಿತ್ಸಾ ಭಾಗವಾಗಿ ಮಾಡುವ ಅಭ್ಯಂಗ-It is a part of specific treatment for specific diseases. ಇದರಲ್ಲಿ ರೋಗಿ ಗಳನ್ನು ಕನಿಷ್ಠ ೪೫ ನಿಮಿಷಗಳ ಕಾಲ ಮಲಗಿಸಿ ಮಾಡುವಂಥದ್ದು. ಚಿಕಿತ್ಸಕರು/ ಸಹಾಯಕರು ಇದನ್ನು ಮಾಡುತ್ತಾರೆ. ಇದನ್ನು ವೈದ್ಯರ ಮಾರ್ಗ ದರ್ಶನದಲ್ಲಿ ೭ ಬೇರೆ ಬೇರೆ ಭಂಗಿಗಳಲ್ಲಿ ಮಾಡುತ್ತಾರೆ.

೨. ಮತ್ತೊಂದು ವಿಧಾನ- ದಿನಚರ್ಯೆಯ ಭಾಗವಾಗಿ ಮಾಡುವಂಥದ್ದು. ವ್ಯಕ್ತಿಯು ನಿಂತುಕೊಂಡು ಸ್ವತಃ ತಾನೇ ದೇಹ ಪೂರ್ತಿ ಎಣ್ಣೆ ಹಚ್ಚಿ, ೬-೭ ನಿಮಿಷಗಳ ಬಳಿಕ ಸ್ನಾನ ಮಾಡುವುದು. ಸ್ವಾಸ್ಥ್ಯ ರಕ್ಷಣೆಗಾಗಿ ನಾವು ಮಾಡಬೇಕಾಗಿರುವುದೇ ಈ ವಿಧಾನದ ಅಭ್ಯಂಗವನ್ನು. ಹಾಗಾದರೆ ದಿನಚರ್ಯೆಯ ಭಾಗವಾಗಿ ಮಾಡುವ ವಿಧಾನ ಹೇಗೆ? ಸಮಯ- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ತಿಂಡಿ ತಿಂದು ಮಾಡುವುದು / ಹೊಟ್ಟೆ ಯಲ್ಲಿ ಆಹಾರ ಇನ್ನೂ ಜೀರ್ಣವಾಗುತ್ತಿರುವಾಗ ಮಾಡುವುದರಿಂದ ತೊಂದರೆಗಳಾಗುತ್ತದೆ.

ಹಾಗಾಗಿ ಖಾಲಿ ಹೊಟ್ಟೆಯಲ್ಲಿಯೇ ಬೆಳಿಗ್ಗೆ ಮಾಡತಕ್ಕದ್ದು. Ideally ವ್ಯಾಯಮದ ಮುನ್ನ – ಎಣ್ಣೆ ಹಚ್ಚಿ ವ್ಯಾಯಾಮ ಮಾಡಿ ಸ್ನಾನ ಮಾಡುವುದು –
ಇದು ಶಾಸೋಕ್ತ ಕ್ರಮ. ಇದಾಗದಿದ್ದಲ್ಲಿ ವ್ಯಾಯಾಮ-ಅಭ್ಯಂಗ-ಸ್ನಾನವನ್ನು ಮಾಡಬಹುದು. ನಿತ್ಯಾಭ್ಯಂಗ ಮಾಡಲು ಬೆಳಿಗ್ಗೆ ಖಾಲಿ ಹೊಟ್ಟೆ
ಯಲ್ಲಿ, ಬೆಚ್ಚಗೆ ಮಾಡಿದ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಇಲ್ಲಿ ನಮಗೆ ಎರಡು ಪ್ರಶ್ನೆಗಳು ಬರುತ್ತವೆ. ಎಣ್ಣೆಯನ್ನು ಹೇಗೆ ಬೆಚ್ಚಗೆ ಮಾಡಬೇಕು ಹಾಗೂ
ಯಾವ ಎಣ್ಣೆಯನ್ನು ತೆಗೆದುಕೊಳ್ಳಬೇಕು? ಎಣ್ಣೆಯನ್ನು ಹೇಗೆ ಬೆಚ್ಚಗೆ ಮಾಡಬೇಕು? ಅನ್ನುವ ಪ್ರಶ್ನೆಗೆ, ತೈಲವನ್ನು ಕುದಿಸಿದಂತೆ ಅದು ಗುಣಹೀನ ವಾಗುತ್ತದೆ ಅಂತ ಆಯುರ್ವೇದ ಹೇಳಿದೆ.

ಹಾಗಾಗಿ, ನೇರವಾಗಿ ಬೆಂಕಿಯ ಮೇಲೆ ಇದನ್ನು ಬಿಸಿ ಮಾಡುವ ಹಾಗೆ ಇಲ್ಲ. ಅಭ್ಯಂಗಕ್ಕೆ ಅಗತ್ಯವಿರುವ ತೈಲವನ್ನು ಬಟ್ಟಲಲ್ಲಿ ತೆಗೆದುಕೊಂಡು, ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಇಟ್ಟು ಬೆಚ್ಚಗಾಗುವಷ್ಟು ಬಿಸಿ ಮಾಡಿದ ಎಣ್ಣೆಯಿಂದ ಅಭ್ಯಂಗವನ್ನು ಮಾಡಬೇಕು. ಚರ್ಮದ ರಂಧ್ರಗಳನ್ನು ತೆರೆಯುವುದಕ್ಕಾಗಿ ಎಣ್ಣೆಯನ್ನು ಬಿಸಿ ಮಾಡುವುದು ಅವಶ್ಯಕ.

ಇನ್ನು, ಯಾವ ಎಣ್ಣೆಯನ್ನು ಉಪಯೋಗಿಸಬೇಕು? ಸಾಮಾನ್ಯವಾಗಿ ಉಷ್ಣ ಪ್ರದೇಶದಲ್ಲಿ, ಉಷ್ಣ ಕಾಲದಲ್ಲಿ, ಉಷ್ಣ ಪ್ರಕೃತಿಯವರು ತುಪ್ಪ/ ಕೊಬ್ಬರಿ
ಎಣ್ಣೆ ಬಳಸಬಹುದು. ಶೀತ ಪ್ರದೇಶ/ಶೀತಕಾಲ/ ಶೀತ ಪ್ರಕೃತಿಯವರು ಎಳ್ಳೆಣ್ಣೆಯನ್ನು ಬಳಸುವುದು ಉತ್ತಮ. ಇದು ಸಾಮಾನ್ಯ ನಿಯಮ. ಇವಲ್ಲದೆ,
ರೋಗಕ್ಕೆ ಅನುಗುಣವಾಗಿ ಹಲವಾರು ಔಷಧಿಯ ಎಣ್ಣೆಗಳನ್ನು ಬಳಸಬಹುದು.

ಮುಂದೆ, ಮಾಡುವ ವಿಧಾನವನ್ನು ಗಮನಿಸೋಣ: ಬೆಚ್ಚಗಿನ ಎಣ್ಣೆಯನ್ನು ಅಂಗೈ ತುಂಬುವಷ್ಟು ತೆಗೆದುಕೊಂಡು ಮೊದಲು ನೆತ್ತಿ ನೆನೆಯುವಷ್ಟು
ಹಾಕಬೇಕು. ಸಮಯವಿದ್ದರೆ ತಲೆಗೆ ಪೂರ್ತಿಯಾಗಿ ಸವರಿಕೊಳ್ಳಬಹುದು. ನಂತರ ಬೆಚ್ಚಗಿನ ಎಣ್ಣೆಯ ಹನಿಗಳನ್ನು ಎರಡೂ ಕಿವಿಗಳಿಗೆ ಹಾಕಬೇಕು. ಇದಾದ ಮೇಲೆ, ಎಣ್ಣೆಯನ್ನು ನಿಧಾನವಾಗಿ ಮುಖಕ್ಕೆ ಸವರಿಕೊಂಡು, ಮೂಗಿಗೂ ಸಹ ಎರಡು ಹನಿ ಎಣ್ಣೆಯನ್ನು ಬಿಟ್ಟುಕೊಳ್ಳಬೇಕು. ಅಥವಾ, ಕಿರುಬೆರಳನ್ನು ಎಣ್ಣೆಯಲ್ಲಿ ಅದ್ದಿ ಮೂಗಿನ ಹೊಳ್ಳಗಳ ಒಳಗೆ ಸವರಿಕೊಳ್ಳುವುದು.

ನಂತರ ಕತ್ತು, ಕೈಗಳು, ಎದೆ, ಹೊಟ್ಟೆ, ಬೆನ್ನು, ಪೃಷ್ಠ, ಕಾಲುಗಳಿಗೆ ನಂತರ ಪಾದಗಳಿಗೆ, ಅಭಿಮುಖವಾಗಿ ಮೇಲಿನಿಂದ ಕೆಳಮುಖವಾಗಿ ಅಂಗಾಂಗ ಗಳನ್ನು ಸ್ಥಿರವಾಗಿ ಇರಿಸಿ ಹಚ್ಚುವುದು. ನೆನಪಿಡಿ, ಯಾವಾಗಲೂ ಮೇಲೆನಿಂದ ಕೆಳಗೆ ಹಚ್ಚಬೇಕೇ ಹೊರತು ಕೆಳಗಿನಿಂದ ಮೇಲೆ ಉಜ್ಜಬೇಡಿ. ವಿಶೇಷವಾಗಿ ಕೆನ್ನೆ, ಹೊಟ್ಟೆ ಹಾಗೂ ಸಂಧಿ ಭಾಗಗಳಲ್ಲಿ ವರ್ತುಲಾಕಾರವಾಗಿ ಹಚ್ಚಬೇಕು. ಹೀಗೆ ಹಚ್ಚಿದ ಎಣ್ಣೆಯನ್ನು ಸುಮಾರು ಐದು ನಿಮಿಷಗಳ ಕಾಲ ಬಿಟ್ಟರೆ ಸಾಕು, ದೇಹವು ಚೆನ್ನಾಗಿ ಹೀರಿಕೊಳ್ಳುತ್ತದೆ. ಹಚ್ಚುವುದಕ್ಕೆ ಐದು ನಿಮಿಷ, ನೆನೆಯುವುದಕ್ಕೆ ಐದು ನಿಮಿಷ, ಒಟ್ಟು ೧೦ ನಿಮಿಷದಲ್ಲಿ ಮುಗಿಸಬಹುದು ನಿತ್ಯಾಭ್ಯಂಗವನ್ನು.

ಇದು ಯಾರಿಗೂ ಕಷ್ಟದ ಕೆಲಸವಲ್ಲ! ತೈಲಾಭ್ಯಾಂಜನದ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಹೊರಬಂದಾಗ ಸಿಗುವಷ್ಟು ಆನಂದ, ಆರಾಮ ಮತ್ತೆಲ್ಲೂ ಇಲ್ಲ! ಅಯ್ಯೋ ೧೦ ನಿಮಿಷ ಕೂಡ ಟೈಮ್ ಇಲ್ಲಪ್ಪ ಅಂತ ಮುಖ ಮುರಿಯುವವರಿಗೆ ಇನ್ನೊಂದು secret ಹೇಳ್ಕೊಡ್ತೀನಿ. ಪೂರ್ತಿ ದೇಹಕ್ಕೆ ಎಣ್ಣೆ ಹಚ್ಚುವುದು ಸಾಧ್ಯವಿಲ್ಲದಿದ್ದಾಗ- ನೆತ್ತಿ, ಕಿವಿ, ಪಾದಗಳಿಗಾದರೂ ಹಚ್ಚುವುದರಿಂದ ದೇಹವನ್ನು ಸಾಕಷ್ಟು ಮಟ್ಟಿಗೆ ಕಾಪಾಡಿಕೊಳ್ಳಬಹುದು!

Shortcut  ಕೊಟ್ಟ ಮೇಲೂ ತಡ ಯಾಕೆ? ಮಳೆಗಾಲದಲ್ಲಂತೂ ಅಭ್ಯಂಗಕ್ಕಿಂತ ಮಿಗಿಲಾದ ರಕ್ಷಾಕವಚ ಮತ್ತೊಂದಿಲ್ಲ! ಇಂದಿನಿಂದಲೇ ಆಚರಿಸಿ ಅಭ್ಯಂಗ ಸ್ನಾನವನ್ನು, ಇದು ಲಕ್ಷ್ಮಣರೇಖೆಯಾಗಿ ದೂರವಿಡುತ್ತದೆ ರೋಗ ರುಜಿನವನ್ನು!