Tuesday, 17th September 2024

ಆರೋಗ್ಯಕ್ಕೆ ತರವೇ ತರತರ ತರಕಾರಿ ?

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಇದು ಇಂಟರ್‌ನೆಟ್ ಯುಗ. ಗೂಗಲ್ಲೇ ನಮ್ಮ ಗುರು. ವಾಟ್ಸ್ ಆಪ್ ನಮ್ಮ ಆಚಾರ್ಯ. ಇನ್ಸ್ಟಾಗ್ರಾಮೇ ನಮ್ಮ ಕಾಲೇಜು. ಇನ್ನು ವಿಕಿಪೀಡಿಯಾ ಅಂತು ಭಗವಂತನೇ ಸರಿ. ಸೋಷಿಯಲ್ ಮೀಡಿಯಾದ ಪ್ರಭಾವ ನಮ್ಮ ಜೀವನದ ಮೇಲೆ, ಅದರಲ್ಲೂ ಆರೋಗ್ಯದ ಮೇಲೆ ಅಗಾಧ. ಯಾವುದೇ ಒಂದು ಚಿಕ್ಕ ಆರೋಗ್ಯ ಸಮಸ್ಯೆ ಶುರುವಾದ ಕೂಡಲೇ ಗೂಗಲ್ ಸರ್ಚ್ ಮಾಡಿ ಅದರ ಬಗ್ಗೆ ತಿಳಿದುಕೊಂಡು ತಾವೇ ಡಯಾಗ್ನೋಸಿಸ್ ಮಾಡಿಕೊಂಡು ಚಿಕಿತ್ಸೆಯನ್ನು ಮಾಡಿಕೊಳ್ಳುವ ಮಹಾನುಭಾವರಿಗೇನು ಕೊರತೆ ಇಲ್ಲ.

ಹೀಗಾಗಿ ಕೆಲವು ವೈದ್ಯರಗಳು ತಮ್ಮ ಕ್ಲಿನಿಕ್ ನಲ್ಲಿ ನೋಟಿಸ್ ಬೋರ್ಡ್ ಮೇಲೆ ಹೀಗೆ ಬರೆದಿರುತ್ತಾರೆ- Patients who come with self&diagnosis as taught by google will be charged double the consultation fees!ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಸೋಶಿಯಲ್ ಮೀಡಿ ಯಾದಲ್ಲಿ ಉತ್ತರ ಹುಡುಕುವುದರಿಂದ  ಪ್ರಯೋಜನಗಳಿಗಿಂತ ತೊಂದರೆಯೇ ಹೆಚ್ಚು ಅನ್ನುವುದು ನನ್ನ ಭಾವನೆ. ಈ ಭಾವನೆ ಮತ್ತಷ್ಟು ದೃಢವಾಗುವುದಕ್ಕೆ ಕ್ಲಿನಿಕ್‌ಗೆ ಬರುವ ನನ್ನ ಪೇಷೆಂಟ್‌ಗಳೇ ಕಾರಣ.

ಸೋಷಿಯಲ್ ಮೀಡಿಯಾ ಇನು ಯೆಂನ್ಸರ್‌ಗಳ ಮಾತುಗಳನ್ನೇ ವೇದವಾಕ್ಯವೆಂದು ಭಾವಿಸಿ, ಅದನ್ನು ಶಿರಸಾವಹಿಸಿ ಪಾಲಿಸಿ, ೧೦ ವರ್ಷಕ್ಕೂ ಹೆಚ್ಚು ಅಧ್ಯಯನ ಮಾಡಿ ಅಭ್ಯಾಸ ಮಾಡುವ ವೈದ್ಯರನ್ನೇ ಪ್ರಶ್ನೆ ಮಾಡುವ ರೋಗಿಗಳಿಗೆ ಏನು ಹೇಳೋಣ. ಇಂಟರ್‌ನೆಟ್‌ನಲ್ಲೂ ಹೆಲ್ತ್ ಕೋಚ್ ಹೆಸರಿನಲ್ಲಿ ಸ್ವಯಂಭೂ ವೈದ್ಯರಂತೆ ವರ್ತಿಸುವವರೇ ಹೆಚ್ಚು. ಮೊನ್ನೆ ಒಮ್ಮೆ, ತೀವ್ರವಾದ
ಉಸಿರಾಟದ ಸಮಸ್ಯೆಯಿಂದ ಬಂದ ವ್ಯಕ್ತಿಯೊಬ್ಬರಿಗೆ ನಾನು ಸಲಹೆ ನೀಡುವಾಗ ನಿಮಗೆ ಇಷ್ಟು ತೊಂದರೆಯಾಗಿರುವುದು ನೀವು ರಾತ್ರಿ ಸೇವಿಸುವ ಮೊಸರಿನಿಂದ ಅಂತ ಹೇಳಿದ ತಕ್ಷಣವೇ
ಅಸಮಾಧಾನದ ಛಾಯೆ ಅವರ ಮುಖವನ್ನು ಆವರಿಸಿತು. ಕಾರಣ, ಅವರ ಪಾಲಿಗೆ ದೇವರ ಸ್ವರೂಪವಾದ ಯೂಟ್ಯೂಬ್ ಸ್ಪೀಕರ್ ಒಬ್ಬರು ಹೇಳಿದ್ದ- ‘ಪ್ರತಿನಿತ್ಯ ಒಂದು ಕಪ್ ಮೊಸರನ್ನು ತಪ್ಪದೆ ಸೇವಿಸಬೇಕು’ ಎನ್ನುವ ಮಾತಿಗೆ ವಿರುದ್ಧವಾಗಿತ್ತು ನನ್ನ ಸಲಹೆ.

ಮತ್ತೊಂದು ಘಟನೆಯಲ್ಲಿ ೫೦ ವರ್ಷ ದ ವ್ಯಕ್ತಿ ಒಬ್ಬರು ಹೊಟ್ಟೆ ಉಬ್ಬರ, ಮಲಬದ್ಧತೆ, ಆಸಿಡಿಟಿ ಇಂದ ಬಳಲುತ್ತಿzಗ ಆಯುರ್ವೇದದ ಹೆಸರಿನಲ್ಲಿ ಬರುವ, ಶಾಸ್ತ್ರದ ಆಧಾರವಿಲ್ಲದ ಮನೆ
ಮದ್ದಿನ ಉಪಾಯಗಳ ಪ್ರಕಾರ ದಿನ ನಿತ್ಯವೂ ಹಸಿ ತರಕಾರಿಯ ಜ್ಯೂಸ್ ಮತ್ತು ಊಟದ ಜತೆ ಒಂದು ಕಪ್ ಹಸಿ ತರಕಾರಿ ಸೇವಿಸುವಂತೆ ಅವರಿಗೆ ಆದೇಶಿಸಲಾಯಿತು. ಈ ಅಭ್ಯಾಸವನ್ನು ಶುರು ಮಾಡಿದ ಕೆಲವು ದಿನಗಳು ಅವರಿಗೆ ಸ್ವಲ್ಪ ಆರಾಮವೆನಿಸಿದರೂ ಕೆಲವು ವಾರಗಳ ನಂತರ ಮೊದಲಿದ್ದ ಸಮಸ್ಯೆಗಳೆಲ್ಲವೂ ಎರಡು ಪಟ್ಟು ಉಲ್ಬಣವಾದ ಅನುಭವ. ತಕ್ಷಣವೇ ಆಯುರ್ವೇದ ವೈದ್ಯರೊಬ್ಬರ ಸಲಹೆಯನ್ನು ಪಡೆಯೋಣ ಎಂದು ಕ್ಲಿನಿಕ್‌ಗೆ ಬಂದರು.

ಅವರ ಪ್ರಶ್ನೆಯು ಹೀಗಿತ್ತು- ‘ಡಾಕ್ಟ್ರೇ, ಆಯುರ್ವೇದದ ಪ್ರಕಾರ ಹಸಿ ತರಕಾರಿಗಳ ಸೇವನೆ ತುಂಬಾ ಆರೋಗ್ಯಕರ , ದಿನ ನಿತ್ಯ ಅದನ್ನು ಹೆಚ್ಚು ಸೇವಿಸಿದಷ್ಟು ದೇಹಕ್ಕೆ ಒಳ್ಳೆಯದು ಎಂದು ಹೇಳುತ್ತಾರ, ಆದರೆ ನನಗೆ ಯಾಕೆ ಹಸಿ ತರಕಾರಿಯಿಂದ ಆರಾಮಾಗಲಿಲ್ಲ? ತೊಂದರೆಗಳೇಕೆ ಹೆಚ್ಚಾಯಿತು?’ ಇವರ ಈ ಪ್ರಶ್ನೆಯನ್ನು ಕೇಳಿದ ತಕ್ಷಣವೇ ನಿರ್ಧರಿಸಿದೆ, ಈ ವಿಷಯದ ಮೇಲೆ
ಒಂದು ಲೇಖನವನ್ನು ಬರೆಯಲೇ ಬೇಕೆಂದು. ಹಾಗಾದರೆ ಆಯುರ್ವೇದ ಶಾಸವು ನಿತ್ಯವೂ ಹಸಿ ತರಕಾರಿಯನ್ನು ತಿನ್ನಲು ಹೇಳುತ್ತಾ? ಹಾಗೆ ಮಾಡುವುದರಿಂದ ಸ್ವಾಸ್ಥ್ಯ ವರ್ಧನೆಯಾಗುತ್ತ
ದೆಯಾ? ತಿಳಿಯೋಣ ಬನ್ನಿ. ನಾವೆಲ್ಲರೂ ಮೊಟ್ಟ ಮೊದಲು ಮನದಟ್ಟು ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಸರಿಯಾದ ಆಯುರ್ವೇದ ಶಾಸ್ತ್ರವು ಹಸಿ ತರಕಾರಿ ಬಳಕೆಯನ್ನು ಸರ್ವಥಾ
ನಿಷೇಧಿಸಿದೆ.

ಇದು ಯಾರಿಗೂ, ಯಾವಾಗಲೂ ಒಳ್ಳೆಯದಲ್ಲ. ಯಾಕೆಂದರೆ ಆಯುರ್ವೇದದ ಪ್ರಕಾರ ತರಕಾರಿಗಳಿಗೆ ಗುಣಗಳಿಗಿಂತ ಅವಗುಣಗಳೇ ಹೆಚ್ಚು. Vegetables are the healthiest foods on planet ಅಂತ ನಂಬಿರುವವರು ಇದನ್ನು ಓದಿ ಶಾಕ್ ಆಗಿರಬಹುದು! ಹೌದು ಸ್ನೇಹಿತರೆ ಆಯುರ್ವೇದದ ಪ್ರಕಾರ vegetables are not superheroes! ಹಾಗಾದರೆ, ಯಾವುದಪ್ಪ ತರಕಾರಿಗಳಿಗಿರುವ ಅವಗುಣಗಳು? ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ತರಕಾರಿಗಳಲ್ಲಿ ನಾರಿನಂಶ ಬಹಳ ಹೆಚ್ಚು. ನಮ್ಮ ಜೈವಿಕ ವ್ಯವಸ್ಥೆಯು ಹಸಿಯಾದ ಈ ನಾರಿನಂಶವನ್ನು ಜೀರ್ಣಿಸಿಕೊಳ್ಳಲು ಸಶಕ್ತವಲ್ಲ. ಹಾಗಾಗಿ ತರಕಾರಿಗಳಲ್ಲಿರುವ ಅಧಿಕವಾದ ಈ ನಾರಿನ ಅಂಶದಿಂದಾಗಿ ಜರಣದ ವೇಗವು ಕಡಿಮೆಯಾಗಿ ನಾವು ಸೇವಿಸುವ ಆಹಾರವು ನಿಧಾನವಾಗಿ ಪಾಕಗೊಳ್ಳುತ್ತದೆ. ಅಧಿಕ ನಾರಿನಂಶದಿಂದ ಕರುಳಿನ ಕ್ರಿಯೆಗಳು ತಡೆಯುತ್ತವೆ.

ತರಕಾರಿಗಳಿಗೆ ಒಣಗಿಸುವ ಗುಣ ಇರುವುದರಿಂದ ಹಾಗೂ ಇವುಗಳಲ್ಲಿ ಸ್ವಾಭಾವಿಕವಾಗಿ ಜಿಡ್ಡಿನಂಶ ಇಲ್ಲದಿರುವುದರಿಂದ ಹಸಿ ತರಕಾರಿಯ ಸೇವನೆಯೂ ಕರುಳಿನ ಒಳ ಪದರಗಳನ್ನು
ಒಣಗಿಸುತ್ತದೆ. ಅಂತೆಯೇ ಮೂಳೆ ಮತ್ತು ಸಂಧಿಗಳ ಜಿಡ್ಡಿನ ರಕ್ಷಾ ಪದರಗಳನ್ನು ಸಹ ಇದು ಒಣಗಿಸುತ್ತದೆ. ಇದರಿಂದ ಮೂಳೆ ಸವೆತ, ಸಂಧಿಗಳಲ್ಲಿ ನೋವುಗಳು ಶುರುವಾಗುತ್ತದೆ.
ಹಸಿ ತರಕಾರಿಗಳು ನಮ್ಮ ದೇಹದ ಮಲಭಾಗವನ್ನೇ ಪೋಷಿಸುವುದರಿಂದ ಅಧೋವಾತವನ್ನು (ಹೂಸು) ಹೆಚ್ಚಿಸಿ ಮಲ ಮೂತ್ರಗಳ ವೇಗಭರಿತ ವಿಸರ್ಜನೆಗೆ ಇದು ಕಾರಣವಾಗುತ್ತದೆ. ಈ
ವೇಗಭರಿತ ವಿಸರ್ಜನೆಯಯಿಂದ ಜೀರ್ಣವಾಗುವಾಗ ಆಹಾರದಲ್ಲಿನ ಎಲ್ಲ ಪೋಷಕಾಂಶಗಳು ಸರಿಯಾಗಿ ಶರೀರದಲ್ಲಿ ಹೀರಲ್ಪಡದೆ ಮೂಳೆಗಳ ಕೊಳ್ಳುತನಕ್ಕೆ ಇವುಗಳು ಕಾರಣವಾಗುತ್ತದೆ.

This is one of the reasons for many deficiencies. ಇವುಗಳು ಕೋಷ್ಠದಲ್ಲಿ ವಾತವನ್ನು ಹೆಚ್ಚಿಸಿ ಹೊಟ್ಟೆಯುಬ್ಬರ, ಹೊಟ್ಟೆ ಬಿಗಿತ, ಹಸಿವೆ ಕಡಿಯಾಗುವಿಕೆಯ ಸಂಭವವನ್ನು ಹೆಚ್ಚು ಮಾಡುತ್ತದೆ. ಹಸಿ ತರಕಾರಿಗಳ ರೂಕ್ಷತೆಯಿಂದ ದೃಷ್ಟಿಯ ಚುರುಕುತನ ಕ್ರಮೇಣ ಕಡಿಮೆಯಾಗುತ್ತದೆ. ಚರ್ಮ ಮತ್ತು ಕೂದಲುಗಳಲ್ಲಿರುವ ನೈಜ ಕಾಂತಿ, ವರ್ಣ ಮತ್ತು ಸ್ನಿಗ್ಧತೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ. ಚರ್ಮವು ಕಾಂತಿಹೀನವಾಗಿ, ಒರಟಾಗಿ ಬೇಗ ಸುಕ್ಕುಗಟ್ಟಲು ಪ್ರಾರಂಭಿಸುತ್ತದೆ.

ನಮ್ಮ ದೇಹದಲ್ಲಿರುವ ಸಪ್ತ ಧಾತುಗಳಲ್ಲಿ ರಸ ಧಾತು, ರಕ್ತಧಾತು ಮತ್ತು ಶುಕ್ರ ಧಾತುಗಳ ಬದಲಾವಣೆಯೂ ಅತಿಯಾದ ಹಸಿ ತರಕಾರಿಯ ಸೇವನೆಯಿಂದ ಸಾಧ್ಯ. ಕ್ರಮೇಣ ಸ್ಮರಣ ಶಕ್ತಿಯ
ಕುಂದುವಿಕೆಯನ್ನು ಗಮನಿಸಬಹುದು. ಅಕಾಲ ವೃದ್ಧಾಪ್ಯದ ಸಂಕೇತಗಳನ್ನು ಹಸಿ ತರಕಾರಿ ಸೇವನೆಯು ತರುತ್ತವೆ. ಒಟ್ಟಾರೆ ಹೇಳಬೇಕಾದರೆ ನಮ್ಮ ಶರೀರದ ಧಾತುಗಳ ಪೋಷಣೆಯನ್ನು ಮಾಡಿ ಅವುಗಳನ್ನು ವಧಿಸುವ ಗುಣಗಳು ಈ ತರಕಾರಿಗಳಿಗಿಲ್ಲ. ಕೇವಲ ಶರೀರದ ಮಲದ ಭಾಗವನ್ನು ಮಾತ್ರ ಹೆಚ್ಚಿಸಿ ದೇಹದ ಬಲವನ್ನು ಕಡಿಮೆ ಮಾಡಿ, ಪೊಳ್ಳಾಗಿಸಿ ಕ್ರಮೇಣ ರೋಗಗಳ ಗೂಡಾಗಿಸುವಲ್ಲಿ ಸಂಶಯವಿಲ್ಲ. ಹಾಗಾಗಿ ತರಕಾರಿಗಳ ಈ ಅವಗುಣಗಳನ್ನು ಸರಿಯಾಗಿ ತಿಳಿದುಕೊಂಡು ಸೂಕ್ತವಾದ ಸಂಸ್ಕಾರಗಳನ್ನು ಈ ತರಕಾರಿಗಳಿಗೆ ನೀಡಿ ಅವುಗಳ ಸೇವನೆಯಿಂದ ಶರೀರೇಂದ್ರಿಯಗಳಿಗೆ ತೊಂದರೆ ಯಾಗದಂತೆ ಜವಾಬ್ದಾರಿಯಿಂದ ಬಳಸುವ ನಿಪುಣತೆಯನ್ನು ನಾವೆಲ್ಲರೂ ಕಲಿಯಬೇಕಾಗಿದೆ.

ಆಯುರ್ವೇದವು ತರಕಾರಿಗಳ ಅವಗುಣಗಳನ್ನು ಹೋಗಿಸಿ ಕೇವಲ ಸದ್ಗುಣಗಳನ್ನು ಹೆಚ್ಚಿಸುವ ಕ್ರಮಗಳನ್ನು ಉಪದೇಶಿಸುತ್ತದೆ. ಹಾಗಾದರೆ ಸಕ್ರಮ ತರಕಾರಿಗಳ ಬಳಕೆ ಹೇಗೆ ಮಾಡಬೇಕು?
ಮೊದಲಿಗೆ ತರಕಾರಿಗಳನ್ನು ಸದಾ ಬೇಯಿಸಿ ಉಪಯೋಗಿಸತಕ್ಕದ್ದು. ಇದನ್ನು ಪಾಕ ಮಾಡುವಾಗ ಅಡುಗೆಯಲ್ಲಿ ಆಯಾ ಪ್ರಾಂತ್ಯಗಳ ಪಾರಂಪರಿಕ ಎಣ್ಣೆಯ ಬಳಕೆಯನ್ನು ಕಡ್ಡಾಯವಾಗಿ ಮಾಡಲೇ ಬೇಕು. ಹೊರ ಪ್ರಾಂತ್ಯಗಳ, ದೇಹಕ್ಕೆ ಅಭ್ಯಾಸವಿಲ್ಲದ ಎಣ್ಣೆಗಳ ಬಳಕೆ ಬೇಡ. ಉದಾಹರಣೆಗೆ, ಭಾರತದಲ್ಲಿ ಆಲಿವ್ ಎಣ್ಣೆಯ ಬಳಕೆಯಿಂದ ಪ್ರಯೋಜನಗಳಿಗಿಂತ ತೊಂದರೆಯೇ ಹೆಚ್ಚಾಗಬಹುದು. ತರಕಾರಿಗಳನ್ನು ಈ ಎಣ್ಣೆಗಳ ಒಗ್ಗರಣೆ ಯಲ್ಲಿ ಬೇಯಿಸಿ ಭಾರತೀಯ ಪರಂಪರಾಗತವಾದ ಅಡುಗೆಗಳ ರೂಪದಲ್ಲಿ ಸೇವಿಸುವುದು ಉತ್ತಮ.

ರುಚಿರುಚಿಯಾದ ಒಗ್ಗರಿಸಿದ ಪಲ್ಯ, ಕೂಟು, ಅವಿಯಲ, ಗೊಜ್ಜು, ಹುಳಿ, ತಂಬುಳಿ, ಪಳದ್ಯ ಮುಂತಾದ ರೀತಿಯಲ್ಲಿ ತರಕಾರಿಗಳನ್ನು ಸೇವಿಸುವುದು ಬಹಳ ಆರೋಗ್ಯಕಾರಿ. ತರಕಾರಿಗಳನ್ನು
ಬೇಯಿಸಿ ನೀರು ಬಸಿದು ಬಳಸುವುದು ಒಳ್ಳೆಯದು. ಬೇಯಿಸುವಾಗ ವಿವಿಧ ದೇಶಿಯ ಮಸಾಲೆಗಳನ್ನು ಬಳಸುವುದರಿಂದ ಸುಲಭವಾಗಿ ಕರುಳಿನಲ್ಲಿ ಜೀರ್ಣಗೊಳ್ಳುತ್ತದೆ. ಉದಾಹರಣೆಗೆ
ಜೀರಿಗೆ, ಧನಿಯಾ, ಕಾಳುಮೆಣಸು, ಚಕ್ಕೆ ಲವಂಗಗಳನ್ನು ಹಿತಮಿತವಾಗಿ ಒಗ್ಗರಣೆಯಲ್ಲಿ ಬಳಸುವುದು ಲಾಭಕಾರಿ. ಆಯಾ ಪ್ರದೇಶಗಳಲ್ಲಿ ದೊರಕುವ ಆಯಾ ಹವಾಮಾನಗಳಲ್ಲಿ ದೊರಕುವ
ತರಕಾರಿಗಳು ಸದಾ ಸೇಫದ.

ದೇಶಾಂತರ, ಖಂಡಾಂತರದ ತರಕಾರಿಗಳ ನಿತ್ಯೋಪಯೋಗ ಬೇಡ. ಉದಾಹರಣೆಗೆ ಭಾರತದಲ್ಲಿ ಬ್ರೊಕಲಿ, ಟೊಮ್ಯಾಟೋ, ಜುಕಿನಿ ಇತ್ಯಾದಿ. ತರಕಾರಿಗಳನ್ನು ಸ್ಟೀಮ್ ಮಾಡಿ ಬಳಸುವಾಗ ಜತೆಗೆ ಸ್ವಲ್ಪ ಎಣ್ಣೆ ಮತ್ತು ಉಪ್ಪುಗಳನ್ನು ಹಾಕಿ ಬೇಯಿಸಿ ಉಪಯೋಗಿಸಬಹುದು. ಆದರೆ ಹಸಿ ತರಕಾರಿಗಳ ರಸ ಹಿಂಡಿ ಕುಡಿಯುವುದು, ಸೊಪ್ಪುಗಳನ್ನು ಹಿಂಡಿ ಜ್ಯೂಸ್‌ಗಳ
ರೂಪದಲ್ಲಿ ಸೇವಿಸುವುದು ಅಥವಾ ಸಲಾಡ್ ಗಳನ್ನು ಅತಿಯಾಗಿ ಬಳಸುವುದು ಎಂದಿಗೂ ಸ್ವಾಸ್ಥ್ಯವನ್ನು ವಧಿಸುವ ಅಭ್ಯಾಸಗಳಾಗುವುದಿಲ್ಲ. ಇದೇ ಸಂದರ್ಭದಲ್ಲಿ ನಿಮ್ಮ ಜತೆ ಒಂದು
ಸ್ವಾರಸ್ಯಕರವಾದ ಕಥೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ.. ಸಾವಿರಾರು ವರ್ಷಗಳ ಹಿಂದಿನ ಮಾತು.

ಒಂದು ಬಾರಿ ಕಾಗೆಯೊಂದು ಭಾರತ ಭೂಮಿಯ ಪ್ರಾಂತ್ಯದ ಉದ್ದಗಲಕ್ಕೂ ಇರುವ ಎಲ್ಲ ವೈದ್ಯರ ಮನೆಯ ಅಂಗಳಗಳಿಗೆ ಹಾರಿ ಹೋಗಿ ಕುಳಿತು ಕೂಗುತ್ತಿತ್ತು. ಕೋ=ರುಕ್? ಕೋ=ರುಕ್?
ಕೋ=ರುಕ್? ಎಂದು. ಈ ರೀತಿ ಎಲ್ಲರ ಮನೆಯ ಮುಂದೆಯೂ ಮೂರು ಬಾರಿ ಕೂಗಿ ನಂತರ ಉತ್ತರಕ್ಕಾಗಿ ಸುಮ್ಮನೆ ಕುಳಿತು ನಿರೀಕ್ಷಿಸುತ್ತಿತ್ತು. ಆ ಮನೆಯ ವೈದ್ಯರು ಏನೂ ಉತ್ತರ ನೀಡದಿದ್ದಾಗ ಮತ್ತೊಂದು ವೈದ್ಯರ ಮನೆಗೆ ಹಾರಿಹೋಗೆ ಮತ್ತೆ ಮೂರು ಬಾರಿ ಕೂಗುತ್ತಿತ್ತು. ಹೀಗೆ ಹಲವಾರು ವರ್ಷಗಳು ಕಳೆಯಿತು. ಇಡೀ ದೇಶ ಸುತ್ತಿ ಸುತ್ತಿ ಉತ್ತರಕ್ಕಾಗಿ ಹುಡುಕಾಟ
ಮುಂದುವರಿಯಿತು. ಈ ನಿಟ್ಟಿನಲ್ಲಿ ಒಮ್ಮೆ ದಕ್ಷಿಣದ ಕಡೆ ಬಂತು ಆ ಕಾಗೆ. ಅಲ್ಲಿ ಒಬ್ಬ ವೈದ್ಯರ ಮನೆಯಲ್ಲಿ ಕುಳಿತು ಕೂಗತೊಡಗಿತು. ಆ ವೈದ್ಯರು ಅತ್ಯಂತ ಕುಶಲಾಗ್ರಮತಿಗಳು. ಅವರಿಗೆ ಆ
ಕಾಗೆಯ ಪ್ರಶ್ನೆಗಳು ಅರ್ಥವಾಯಿತು. ಕಾಗೆ ಕೇಳುತ್ತಿದ್ದ ಆ ಮೂರು ಪ್ರಶ್ನೆಗಳು- ಯಾರು ಅರೋಗಿ? ಯಾರು ಅರೋಗಿ? ಯಾರು ಅರೋಗಿ? ಆ ವೈದ್ಯರು ಹೀಗೆ ಉತ್ತರಿಸಿದರು- ಹಿತ ಭುಕ್, ಮಿತ ಭುಕ್, ಅಶಾಕ ಭುಕ್ ಎಂದು.

ಅಂದರೆ ಸದಾ ಹಿತವಾದ ಆಹಾರವನ್ನು ಸೇವಿಸುವವನು ಅರೋಗಿ. ಮಿತವಾಗಿ ಸೇವಿಸುವವನು ಅರೋಗಿ. ಹಾಗೆಯೇ ಅಲ್ಪವೇ ಶಾಖಾಹಾರವನ್ನು ಅಂದರೆ ತರಕಾರಿಗಳನ್ನು ಸೇವಿಸು ವವನು ಅರೋಗಿ ಎಂದು. ಆ ಆಯುರ್ವೇದ ವೈದ್ಯರು ಅಷ್ಟಾಂಗ ಹೃದಯವೆಂಬ ಅತ್ಯಂತ ಮುಖ್ಯವಾದ ಆಯುರ್ವೇದ ಸಂಹಿತೆಯನ್ನು ರಚಿಸಿದ ಆಚಾರ್ಯ ವಾಗ್ಭಟರು. ಆ ದಿವ್ಯ ಕಾಗೆಯೇ ದೇವ ಧನ್ವಂತರಿ. ಸ್ನೇಹಿತರೆ, ಆಪ್ತರಾದ ಆಚಾರ್ಯ ವಾಗ್ಭಟರು ಕೊಟ್ಟ ಸಾರ್ವಕಾಲಿಕ ಸತ್ಯವಾದ ಆ ಮೂರು ಉತ್ತರಗಳು ನಮ್ಮ ಪಾಲಿಗೆ ವೇದವಾಕ್ಯವಾಗಬೇಕೇ ಹೊರತು ಇವತ್ತೊಂದು ಮಾತು ನಾಳೆ ಮತ್ತೊಂದು ಮಾತನಾಡುವ ಅರೆಬರೆ ತಿಳಿದುಕೊಂಡ ಸೋಶಿಯಲ್ ಮೀಡಿಯಾ ಇನ್ಲುಯೆನ್ಸರ್ ಗಳದ್ದಲ್ಲ.

ಆಚಾರ್ಯರ ಪ್ರಕಾರ ಅಶಾಕ ಭುಕ್ ಅಂದರೆ ಸ್ವಲ್ಪವೇ ತರಕಾರಿ ತಿನ್ನುವ ಮಾತ್ರ ಅರೋಗಿಯಾಗಿ ಉಳಿಯಬಹುದು. ಆಚಾರ್ಯರ ಮಾತುಗಳು ಸದಾ ನಮ್ಮ ಸ್ಮೃತಿಯಲ್ಲಿದ್ದರೆ ಸ್ವಾಸ್ಥ್ಯ
ಸಾಧನೆ ಎಂದೂ ಕಷ್ಟಕರವಲ್ಲ. ದಿನನಿತ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದು ಕೇಳಿದರೆ probably the simplest yet the most profound
answer would be & – ಹಿತ ಭುಕ್, ಮಿತ ಭುಕ್, ಅಶಾಕ ಭುಕ್.

Leave a Reply

Your email address will not be published. Required fields are marked *