Tuesday, 10th September 2024

ಆರೋಗ್ಯಕ್ಕಾಗಿ ನೀರು: ಇದರ ವಿಷಯ ನೂರು

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

‘ಸರ್ವಂ ದ್ರವ್ಯಂ ಪಾಂಚಭೌತಿಕಂ ಅಸ್ಮಿನ್ ಅರ್ಥೇ’ – ನಮ್ಮ ವೇದ, ಉಪನಿಷತ್ತು, ಶಾಸ್ತ್ರವೆಲ್ಲವೂ ಹೇಳುವಂತೆ ಇಡೀ ಸೃಷ್ಟಿಯೇ ಪಂಚಮಹಾಭೂತ ಗಳಿಂದ ಕೂಡಿದ್ದು – ಆಕಾಶ, ಗಾಳಿ, ಬೆಂಕಿ, ನೀರು, ಭೂಮಿ. ಇದರಲ್ಲಿ ಆಕಾಶಕ್ಕಿಂತ ವಾಯು, ವಾಯುವಿಗಿಂತ ಅಗ್ನಿಯು, ಅಗ್ನಿಗಿಂತ ಜಲವು, ಜಲಕ್ಕಿಂತ ನೆಲವು ಕಡಿಮೆ ವ್ಯಾಪ್ತಿ ಉಳ್ಳದ್ದು ಎಂಬುದು ಜ್ಞಾನಿಗಳ ಅಭಿಮತ.

ಹಾಗೆಯೇ, ಜಲವು ನೆಲಕ್ಕಿಂತ ಮೂರರಷ್ಟು ಹೆಚ್ಚಾಗಿದೆ ಎಂಬುದು ಇನ್ನೊಂದು ರೀತಿಯ ವಿಶ್ಲೇಷಣೆ. ಇದು ವಿಶ್ವದ ಮಾತು, ಬ್ರಹ್ಮಾಂಡದ ಮಾತು.
‘ಬ್ರಹ್ಮಾಂಡದಂತೆ ಪಿಂಡಾಂಡ’- ವಿಶ್ವದಂತೆಯೇ ದೇಹವು ಇರುವುದು. ಆದ್ದರಿಂದ ವಿಶ್ವದಲ್ಲಿ ಜಲದ ಅಂಶ ಹೆಚ್ಚಿರುವಂತೆ ಮನುಷ್ಯನ ದೇಹದಲ್ಲೂ ಘನಾಂಶಕ್ಕಿಂತಲೂ ದ್ರವಾಂಶವೇ ಹೆಚ್ಚು ಎಂಬುದು ಸಿದ್ಧವಾಗುತ್ತದೆ. ಈ ಸಿದ್ಧಾಂತಕ್ಕೆ ಅನುಸಾರ ದ್ರವ ರೂಪದ ನೀರಿನ ಮೇಲೆ ದೇಹದ ಎಲ್ಲ ಕ್ರಿಯೆಗಳು ಅವಲಂಬಿತ. ದೇಹದ ಎಲ್ಲಾ ಅವಯವಗಳ ಆರೋಗ್ಯ ಅವಲಂಬಿತ ಎಂದು ಹೇಳಿದರೆ ತಪ್ಪಾಗಲ್ಲ. ಆಯುರ್ವೇದದ ಸಿದ್ಧಾಂತವನ್ನು ಆಧಾರವಾಗಿ ಇಟ್ಟುಕೊಂಡು ಮಾತನಾಡಬೇಕೆಂದರೆ, ನಮ್ಮ ಶರೀರವು ದೋಷ-ಧಾತು-ಮಲಗಳ ಒಂದು ಒಕ್ಕೂಟ. ‘ದೋಷ’ ಎಂದರೆ ವಾತ-ಪಿತ್ತ-ಕಫಗಳೆಂಬ ತ್ರಿದೋಷಗಳು.

ದೇಹದ ಎಲ್ಲ ಕ್ರಿಯೆಗಳು ನಡೆಯುವುದೇ ಈ ದೋಷಗಳಿಂದ. ನಮ್ಮ ಜೀವನದ ಚಾಲಕ ವರ್ಗ. ದೇಹದ ಕ್ರಿಯೆಗಳು ನಡೆಯುವಾಗ ಉಂಟಾಗುವ ಸಾರ ಭಾಗಗಳೇ ‘ಧಾತು’ಗಳು. ಇವು ದೇಹದ ಧಾರಣೆಯನ್ನು ಮಾಡುತ್ತವೆ. ದೇಹದಲ್ಲಿ ಧಾತುಗಳು ೭ ವಿಧವಾಗಿವೆ- ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜಾ ಮತ್ತು ಶುಕ್ರ. ಇನ್ನು, ದೇಹದ ಕ್ರಿಯೆಗಳು ನಡೆಯುವಾಗ ಉಂಟಾಗುವ ಕಿಟ್ಟ/ ಮಲ ಭಾಗಗಳು- ‘ತ್ರಿಮಲ’ಗಳು. ಪುರೀಷ ಎಂದರೆ ಘನಮಲ, ಮೂತ್ರ ಹಾಗೂ ಸ್ವೇದ (ಬೆವರು) ದ್ರವ ಮಲಗಳು.

ಈ ದೋಷ-ಧಾತು-ಮಲಗಳಲ್ಲಿ ಅಧಿಕವಾಗಿ ದ್ರವ ಅಂಶವು ತುಂಬಿದೆ. ಅಂತೆಯೇ, ಇವುಗಳ ವೃದ್ಧಿ-ಕ್ಷಯ ಅಂದರೆ ಹೆಚ್ಚು ಕಡಿಮೆಯಾಗುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ನಾವು ಕುಡಿಯುವ ನೀರು. ದೋಷ- ಧಾತು-ಮಲಗಳು ದೇಹದಲ್ಲಿ ಏರುಪೇರಾದಾಗ ಅವುಗಳನ್ನು ನೀರಿನಿಂದಲೇ ಸರಿ ಮಾಡಬಹುದು. ನೀರಿನಿಂದಲೇ ದೇಹದ ಕ್ರಿಯೆಗಳನ್ನು ಮತ್ತೆ ಸಮತೋಲನಕ್ಕೆ ತರಬಹುದು. ಹಾಗಾಗಿಯೇ ನಮ್ಮ ವೇದದಲ್ಲಿ ‘ಆಪೋ ವೈ ಭೇಷಜಮ’
ಎಂದು ಹೇಳಿದ್ದಾರೆ.

ಅಂದರೆ ನೀರೇ ಔಷಧವು ಎಂದರ್ಥ. ಆಯುರ್ವೇದವು ಸಹ ನೀರನ್ನು ಔಷಧಕ್ಕೆ ಹೋಲಿಸಿದೆ. ಕಾರಣ, ದೋಷ-ಧಾತು- ಮಲಗಳ ವ್ಯತ್ಯಾಸಗಳನ್ನು ಸರಿದೂಗಿಸೋ ಸಾಮರ್ಥ್ಯ ಇದಕ್ಕಿದೆ ಅಂತ. ‘ಯೋಗವಾಹಿ’ ಎಂಬುದು ನೀರಿನ ಒಂದು ವಿಶೇಷ ಗುಣ. ಈ ವಿಶೇಷ ಗುಣದಿಂದಾಗಿ ನೀರಿನ ಮೂಲಕ ದೇಹದ ಎಲ್ಲ ಭಾಗಗಳು ಅತಿ ಬೇಗನೆ ಪ್ರಭಾವಿತವಾಗುತ್ತವೆ. ಆದ್ದರಿಂದಲೇ, ದಿನನಿತ್ಯ ಸೇವಿಸಿದ ಆಹಾರಗಳಾಗಲಿ, ಔಷಧಗಳಾಗಲಿ, ದೇಹ-ಧಾತುಗಳಾಗಿ ಮಾರ್ಪಡಲು ನೀರು ಅತ್ಯಂತ ಅವಶ್ಯಕ. ಇಂತಹ ಯೋಗವಾಹಿ ದ್ರವ್ಯವೇ ತಪ್ಪಾಗಿ ಸೇವಿಸಲ್ಪಟ್ಟರೆ ತಿಂದ ಯಾವ ಆಹಾರವೂ ದೇಹ ಧಾತುಗಳಾಗಿ ಮಾರ್ಪಾಡಲಾರವು. ಅಲ್ಲದೆ ರೋಗ ನಿವಾರಣೆಗಾಗಿ ಸೇವಿಸಿದ ಔಷಧವೂ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಹಾಗೆಯೇ, ನೀರನ್ನು ಆಯುರ್ವೇದದಲ್ಲಿ ‘ಜೀವನ’ ಅಂತ ಕೂಡ ಕರೀತಾರೆ. ಉದಾಹರಣೆಗೆ, ಸಾವಿನ ಅಂಚಲ್ಲಿರೋ ಜೀವಕ್ಕೆ ಒಂದು ಗುಟುಕು ನೀರು ಒಂದು ಕ್ಷಣ ಮಾತ್ರಕ್ಕಾದರೂ ಪ್ರಾಣಧಾರಣೆಗೆ ಕಾರಣವಾಗಬಹುದು. ಹಾಗೆಯೇ, ಬಿಸಿಲಿನಿಂದ ಬಳಲಿ ಬಾಯಾರಿದವಗೆ ನೀರು ಕೊಡುವಷ್ಟು ತೃಪ್ತಿ ಮತ್ತಾವ ವಸ್ತುವೂ ಕೊಡುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿಯೇ, ನೀರನ್ನು ‘ಜೀವನ’ಕ್ಕೆ ಹೋಲಿಸಿರುವುದು. ಆದರೆ ಇದೇ ಆಯುರ್ವೇದ ಶಾಸ್ತ್ರದಲ್ಲಿ
ಮತ್ತೊಂದು ಎಚ್ಚರಿಕೆಯ ಮಾತಿದೆ – ‘ಅತಿ ಅಂಬುಪಾನ’ ಅಂದರೆ ಅತಿಯಾದ ನೀರು ಸೇವನೆ ರೋಗಕ್ಕೆ ಕಾರಣ ಎಂದು.

ಅತಿಯಾದ ನೀರಿನ ಸೇವನೆಯಿಂದ ತೊಂದರೆಯಾದ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತೇನೆ. ೫೦ ವರ್ಷದ ಗಂಡಸು- ಅತಿಯಾದ ಗ್ಯಾಸ್ಟ್ರಿಕ್ ಟ್ರಬಲ್, ಹುಳಿತೇಗು, ತಲೆನೋವು, ಹೊಟ್ಟೆ ಉಬ್ಬರ, ಹಸಿವೆ ಕಡಿಮೆ, ಮಲ ಪ್ರವೃತ್ತಿಯಲ್ಲಿ ಏರುಪೇರು. ಮತ್ತೋರ್ವ ಯುವತಿಗೆ ಬೆಳಿಗ್ಗೆ
ಎದ್ದ ತಕ್ಷಣ ೫೦-೬೦ ಸೀನು, ಮೂಗಿನಿಂದ ನೀರಾದ ಗೊಣ್ಣೆಯ ಸ್ರಾವ, ಕಣ್ಣು ಕಡಿತ, ನೋಸ್ ಬ್ಲಾಕ್. ಮತ್ತೋರ್ವ ಮಹಿಳೆಗೆ ಅತಿಯಾದ ದೇಹ ಭಾರ ವೃದ್ಧಿ- ಕಾರಣ ಏನು ಇಲ್ಲ.

ಎಲ್ಲರ ರಿಪೋರ್ಟ್‌ಗಳು ಸಹಜವಾಗಿಯೇ ಇದೆ. ಮತ್ತೊಬ್ಬರಿಗೆ ಮಧುಮೇಹದ ಲಕ್ಷಣಗಳು. ಇನ್ನೊಬ್ಬರಿಗೆ ದೇಹದಲ್ಲಿ ಸಂಧಿಗಳ ಊತ. ಕೂಲಂಕಷವಾಗಿ ಪರಿಶೀಲಿಸಿ, ಅವರ ಮೆಡಿಕಲ್ ಹಿಸ್ಟರಿ ತೆಗೆದುಕೊಂಡಾಗ ಸಿಕ್ಕ ಒಂದು ಬಲವಾದ ಸಾಮಾನ್ಯ ಕಾರಣವೆಂದರೆ- ‘ಅತಿಯಾದ ನೀರು ಸೇವನೆ ’. ಅದೂ ಲೀಟರ್‌ಗಳಷ್ಟು! ನೀರನ್ನು ಎಷ್ಟು ಹೆಚ್ಚು ಕುಡಿದರೆ ಅಷ್ಟು ದೇಹಕ್ಕೆ ಒಳ್ಳೆಯದು ಎಂಬ ಭಾವನೆಯಲ್ಲಿ, ಬಾಯಾರಿಕೆ ಇಲ್ಲದಿದ್ದರೂ ‘ವಾಟರ್ ಅಲಾರಂ’ ಗಳನ್ನು ಉಪಯೋಗಿಸಿ ನೆನಪಿಸಿಕೊಂಡು ಕುಡಿಯುವ ಅಭ್ಯಾಸ ಇವರಲ್ಲಿ ಕಂಡುಬಂತು.

ಇವರೆಲ್ಲರಿಗೂ ನಾವು ನೀಡಿದ ಚಿಕಿತ್ಸೆ ಒಂದೇ ಒಂದು- ಅದು, ಅವರಿಗೆ ನೀರಿನ ಬಗ್ಗೆ ಅರಿವು ಮೂಡಿಸಿ, ನೀರಿನ ಸಕ್ರಮ ಬಳಕೆಯ ಜ್ಞಾನವನ್ನು ನೀಡಿದ ಕೆಲವೇ ತಿಂಗಳುಗಳಲ್ಲಿ ಅವರ ಎಲ್ಲ ಲಕ್ಷಣಗಳೂ ಶಮನವಾಗಿ ಆರಾಮಾದರು. ಆಯುರ್ವೇದದ ಪ್ರಕಾರ ನೀರಿನ ದುರ್ಬಳಕೆಯಿಂದ ನೆಗಡಿಯಿಂದ ಹಿಡಿದು ಮಧುಮೇಹದಂತಹ ಕಷ್ಟ ಸಾಧ್ಯವಾದ ಖಾಯಿಲೆಗಳು ಬರಬಹುದು ಅನ್ನುವುದು ಸ್ಪಷ್ಟ ವಾಕ್ಯ. ಆದರೆ ಎಷ್ಟೋ ಸಲ ನಮಗೆ ಬಂದಿರುವ ಖಾಯಿಲೆಗಳಿಗೆ ನೀರೇ ಕಾರಣ ಅಂತ ನಮಗೆ ಗೊತ್ತೇ ಇರುವುದಿಲ್ಲ. ನೀರು ಅತ್ಯಂತ ಆರೋಗ್ಯಕರವಾದ ವಸ್ತು ಎಂಬ ಗಾಢವಾದ ನಂಬಿಕೆಯಿರುವು ದರಿಂದ ನೀರು ಸಹ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ನಮಗೆ ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ.

ನನ್ನ ಹಲವಾರು ಪೇಷೆಂಟ್‌ಗಳನ್ನು ನಾನು ವಿಚಾರಿಸಿದಾಗ ಅವರಿಗೆ ನೀರಿನ ಬಗ್ಗೆ ಏನು ಭಾವನೆ ಇರುತ್ತೆ ಅಂದರೆ- ನೀರು ದೇಹವನ್ನು ಶುದ್ಧ ಮಾಡುತ್ತೆ, ಸ್ವಚ್ಛ ಮಾಡುತ್ತೆ, ಹಾಗಾಗಿ ಜಾಸ್ತಿ ನೀರು ಕುಡಿದರೆ ದೇಹ ಶುದ್ಧವಾಗಿರುತ್ತೆ ಅಂತ. ಹಾಗೆಯೇ, ಕೆಲವರ ಪ್ರಕಾರ ಊಟಕ್ಕೆ ಮುಂಚೆ ನೀರು ಕುಡಿಯಬೇಕು,
ಊಟದ ಜೊತೆ ಕುಡಿಯಬಾರದು, ಊಟದ ನಂತರ ಒಂದು ಗಂಟೆ ಬಿಟ್ಟು ಕುಡಿದರೆ ಮಾತ್ರ ಆರೋಗ್ಯಕರವಾಗಿ ಇರಬಹುದು- ಹೀಗೆ ಸುಮಾರು ಬೇರೆ ಬೇರೆ ಅಭಿಪ್ರಾಯ. ಆದರೆ, ಆಯುರ್ವೇದದ ಸಿದ್ಧ ವಾಕ್ಯ ಏನು ಅನ್ನೋದು ಮುಖ್ಯ. ಏಕೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಭಿಪ್ರಾಯಗಳು
ಅಥವಾಸೋ ಕಾಲ್ಡ್ ವಾಸ್ತವಾಂಶಗಳು ಇವತ್ತು ನಿಜ ಇದ್ದರೆ ನಾಳೆ ಬೇರೆ ಯಾವುದೋ ಸಂಶೋದನೆ ಪ್ರಕಾರ ಅದು ತಪ್ಪು ಅಂತ ಸಾಬೀತಾಗುತ್ತೆ.

ಹೀಗಾಗಿ ಅವುಗಳು ಸಾರ್ವಕಾಲಿಕ ಸತ್ಯವಲ್ಲ. ಆದರೆ, ಆಯುರ್ವೇದದ ಸಿದ್ಧಾಂತ ನಿತ್ಯ ಹಾಗೂ ಸರ್ವಥಾ ಸತ್ಯ. ಇದು ಎಷ್ಟೇ ಶತಮಾನಗಳು ಕಳೆದರೂ ನೂರಕ್ಕೆ ನೂರು ಪಟ್ಟು ನಿಜವಾಗಿಯೇ ಉಳಿದಿರುತ್ತೆ. ಹಾಗಾಗಿ, ನಮ್ಮ ಆರೋಗ್ಯದ ರಕ್ಷಣೆಗೆ ಆಯುರ್ವೇದ ಶಾಸದ ಮೊರೆ ಹೋಗುವುದು ಯಾವಾಗಲೂ
ಸುರಕ್ಷಿತ. ಆಯುರ್ವೇದ ಜೀವ ವಿಜ್ಞಾನದಲ್ಲಿ ನೀರಿನ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ. ಅದನ್ನು ನಾವು ತಿಳಿದುಕೊಂಡು ನೀರನ್ನು ಸರಿಯಾಗಿ ಉಪಯೋಗಿಸಿ ಸ್ವಾಸ್ಥ್ಯದ ಕಡೆ ಹೆಜ್ಜೆ ಇಡುವ ಪ್ರಯತ್ನ ಮಾಡೋಣ.

ಒಂದು ಉಪನ್ಯಾಸದಲ್ಲಿ ನಾನು ಆಯುರ್ವೇದದ ಬಗ್ಗೆ ಮಾತನಾಡುತ್ತಾ ಒಂದು ವಿಷಯ ಹೇಳಿದೆ, ಆಗ ಸುಮಾರು ಜನರ ಮುಖದಲ್ಲಿ ಆಶ್ಚರ್ಯ! ಹೌದಾ? ಅನ್ನೋ ಪ್ರಶ್ನೆ ಕಾಣುತ್ತಿತ್ತು. ಹಾಗಾದರೆ ಏನು ಹೇಳಿದೆ ನಾನು ಗೊತ್ತಾ? ಆಯುರ್ವೇದದ ಪ್ರಕಾರ ನೀರು ಒಂದು ಆಹಾರ ದ್ರವ್ಯ- ಅಂದರೆ ಆಹಾರದ ಗುಂಪಿಗೆ ನೀರು ಸೇರುತ್ತೆ. ಇದನ್ನ ನಾವು ದ್ರವಹಾರ ಎಂದು ಪರಿಗಣಿಸಬಹುದು. ಇದರ ಅರ್ಥವೇನೆಂದರೆ, ನೀರು ಕೂಡ ನಮ್ಮ ಜೀರ್ಣಾಂಗ
ದಲ್ಲಿ ಜೀರ್ಣವಾಗಲೇಬೇಕು. ಜೀರ್ಣವಾಗಿಯೇ ಮುಂದೆ ಹೋಗಬೇಕು. ಹಾಗೆ ಸುಮ್ಮನೆ ನದಿ ಹರಿದುಕೊಂಡು ಹೋಗೋ ತರ ಅಲ್ಲ ಅಂತ.

ಆಗ ಒಬ್ಬರು ಎದ್ದು ನಿಂತುಕೊಂಡು ಕೇಳಿದರು, ‘ಮೇಡಂ, ನಾನು ಏನು ಅಂದುಕೊಂಡಿದ್ದೇನೆ ಅಂದರೆ, ನಾವು ಕುಡಿಯೋ ನೀರು ಸಿಸ್ಟಮ್ ಅಲ್ಲಿ ಸರಾಗವಾಗಿ ಸಾಗಿ ಒಳಗೆ ಸ್ವಚ್ಛ ಮಾಡಿ toxins ನ flush out ಮಾಡುತ್ತೆ ಅಂತ. ನೀರು ಕೂಡ ಜೀರ್ಣವಾಗಬೇಕು, ಜೀರ್ಣವಾಗುತ್ತೆ ಅಂತ ಗೊತ್ತೇ ಇರಲಿಲ್ಲ.’ ಅದಕ್ಕೆ ನಾನು ಹೇಳಿದೆ, ‘ನೀರು ತೆಗೆದುಕೊಂಡ ತಕ್ಷಣ flush out ಆಗುವುದಕ್ಕೆ ನಮ್ಮ ಬಾಡಿ,toilet ನ commode ಅಲ್ಲ. ಇದು ಜೀವ
ಇರುವಂತಹ ಒಂದು ವ್ಯವಸ್ಥೆ. ನಾವು ಏನನ್ನು ಬಾಯಿಯ ಮೂಲಕ ತೆಗೆದುಕೊಂಡರೂ ಅದು ಅನ್ನನಾಳದ ಮೂಲಕ ಹೊಟ್ಟೆಗೆ ಸೇರಿ ಅಲ್ಲಿ
ಜಠರಾಗ್ನಿಯ ಸಂಪರ್ಕಕ್ಕೆ ಬಂದು, ಜೀರ್ಣಕ್ರಿಯೆಗೆ ಒಳಗೊಂಡು, ಸಾರಭಾಗ ಮತ್ತು ಮಲಭಾಗವಾಗಿ ಬೇರ್ಪಡೆಯಾಗುತ್ತದೆ. ಈ ಮಲಭಾಗದಲ್ಲಿ, ಘನ ಮಲವು ಮಲದ ರೂಪದಲ್ಲಿ ಆಚೆ ಹೋದರೆ, ದ್ರವ ಮಲವು ಮೂತ್ರ ಮತ್ತು ಬೆವರುಗಳ ಮೂಲಕ ದೇಹದ ಆಚೆ ಹೋಗುತ್ತದೆ.

ಇದೇ ರೀತಿ, ನಾವು ಪ್ರತಿ ಬಾರಿ ನೀರು ತೆಗೆದುಕೊಂಡಾಗಲೂ ಅದು ನಮ್ಮ ಉದರದಲ್ಲಿ “ಜಠರಾಗ್ನಿ” ಅಂದರೆ ನಮ್ಮ digestive fire ಸಂಪರ್ಕಕ್ಕೆ ಬರಬೇಕು. ಅಗ್ನಿಯು ತನ್ನ ಪ್ರಭಾವದಿಂದ ನೀರನ್ನು ಜೀರ್ಣಿಸಿಕೊಳ್ಳುತ್ತದೆ, ಹಾಗೆಯೇ ನೀರು ಸಹ ತನ್ನ ಪ್ರಭಾವವನ್ನು ಜಠರಾಗ್ನಿಯ ಮೇಲೆ ತೋರಿಸು ತ್ತದೆ. ಹಾಗಾಗಿ, ನಾವು ತೆಗೆದುಕೊಳ್ಳುವ ನೀರು ಸಕ್ರಮವಾಗಿಲ್ಲ, ಸರಿಯಾದ ಗುಣ ಹಾಗೂ ಪ್ರಮಾಣದಲ್ಲಿ ಇಲ್ಲವಾದಾಗ ಮೊದಲು ಹಾಳಾಗುವುದೇ ನಮ್ಮ ಜಠರಾಗ್ನಿ ಅಂದರೆ ನಮ್ಮ ಪಚನಕ್ರಿಯೆ. ಯಾಕೆಂದರೆ ನಮ್ಮ ಪಚನ ಕ್ರಿಯೆ ನಿಂತಿರುವುದು ನಮ್ಮ ಜಠರಾಗ್ನಿಯ ಮೇಲೆ. ಲೋಕದಲ್ಲಿ ಅಗ್ನಿಯ ಅಂಶವು ಹೆಚ್ಚಿನ ನೀರಿನಿಂದ ಆರಿ ಹೋಗುವುದು ಹೇಗೆ ಸಹಜವೋ ಹಾಗೆಯೇ ಅಗ್ನಿ ಪ್ರಧಾನವಾದ ನಮ್ಮ ಪಚನಕ್ರಿಯೆಯು ಅತಿಯಾದ ನೀರಿನಿಂದ ಮಂದವಾಗುವುದು ಅಷ್ಟೇ ಸಹಜ. ಆಯುರ್ವೇದದ ಪ್ರಕಾರ ಈ ಆರಿಹೋದ/ಮಂದವಾದ ಅಗ್ನಿ ಯನ್ನು “ಮಂದಾಗ್ನಿ” ಎಂದು ಕರೆಯುತ್ತೇವೆ.

ಇದು ನಮ್ಮ ಇಡೀ ಶರೀರದ metabolism ನ ಹಾಳುಮಾಡುತ್ತದೆ. ಶಾಸ ಹೇಳುತ್ತದೆ, ನಮ್ಮ ದೇಹದಲ್ಲಿ ಉದ್ಭವವಾಗುವ ಸರ್ವ ರೋಗಕ್ಕೂ
ಈ ಮಂದಾಗ್ನಿಯೇ ಕಾರಣ ಅಂತ. ಆರೋಗ್ಯ ಪಾಲನೆಯಲ್ಲಿ ಈ ಜಠರಾಗ್ನಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಈ ಅಗ್ನಿಯ
ರಕ್ಷಣೆಯ ಪ್ರಯತ್ನದಲ್ಲಿ ನೀರನ್ನು ಸರಿಯಾಗಿ ಸೇವಿಸುವುದು ಬಹಳ ಮುಖ್ಯವಾದ ಅಂಶವಾಗುತ್ತದೆ.’

ಆಯುರ್ವೇದವು ಬಿಡಿ ಬಿಡಿಯಾಗಿ ವಿವರಿಸುತ್ತಾ ಹೋಗುತ್ತದೆ – ನಾವು ಸೇವಿಸುವ ನೀರಿನ ಗುಣ ಹೇಗಿರಬೇಕು, ಎಷ್ಟು ಪ್ರಮಾಣ ದಲ್ಲಿ ನೀರನ್ನು ಕುಡಿಯಬೇಕು, ಯಾವಾಗ ಕುಡಿಯಬೇಕು, ಹೇಗೆ ಕುಡಿಯಬೇಕು, ಆಹಾರದ ಸಂಬಂಧದಲ್ಲಿ ನೀರಿನ ಸೇವನೆ ಹೇಗೆ, ನೀರನ್ನು ಯಾವಾಗ ಸೇವಿಸಬಾರದು, ಯಾರು ಸೇವಿಸಬಾರದು, ಯಾವ ಋತುವಿನಲ್ಲಿ ಯಾವ ರೀತಿಯ ನೀರನ್ನು ಸೇವಿಸಬೇಕು, ಬಿಸಿನೀರಿನ ಮಹತ್ತ್ವ, ನೀರಿನ ಔಷಧಿಯ ಗುಣಗಳು… ಹೀಗೆ ಹಲವಾರು ವಿಷಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ನೆನಪಿರಲಿ – ನೀರನ್ನು ಸೇವಿಸುವಾಗ ಈ ಎಲ್ಲ ವಿಷಯಗಳನ್ನು ಪರಿಗಣಿಸದೆ ಮನಬಂದಂತೆ, ಮನಬಂದಷ್ಟು ನೀರು ಸೇವಿಸಿದರೆ ಖಾಯಿಲೆ ತಪ್ಪಿದ್ದಲ್ಲ.

ಆಯುರ್ವೇ ದೋಕ್ತ ನೀರು ಸೇವನಾ ಕ್ರಮವನ್ನು ತಿಳಿದುಕೊಂಡು ನಮ್ಮ ದಿನನಿತ್ಯ ಆಹಾರ-ವಿಹಾರಗಳಲ್ಲಿ ಪಾಲಿಸಿದಾಗ ಖಂಡಿತವಾಗಿಯೂ ‘ನೀರು’ ಸಹ ‘ಜಾಹ್ನವೀ ತೋಯ’ದಂತೆ ಔಷಧವಾಗುವುದರಲ್ಲಿ ಯಾವ ಸಂಶಯವಿಲ್ಲ. ಸ್ನೇಹಿತರೆ, ನೀರು ಕುಡಿಯುವುದು ವಾಸ್ತವವಾಗಿ ನೀರು ಕುಡಿಯುವಷ್ಟು ಸುಲಭದ ಕೆಲಸವಲ್ಲ! ಶಂ ನೋ ದೇವೀರಭಿಷ್ಟಯ ಆಪೋ ಭವಂತು ಪೀತಯೇ | ಶಂ ಯೋರಭಿಸ್ರವಂತು ನಃ | ‘ನೀರು’ ನಮ್ಮ ಪಾಪ ನಿವಾರಣೆಯ ಮೂಲಕ ಸುಖವನ್ನುಂಟು ಮಾಡಲಿ. ನಮ್ಮ ಕಾರ್ಯಗಳಿಗೆ ಉಪಯುಕ್ತವಾಗಲಿ.

ನಮಗೆ ಕುಡಿಯಲು ಉಪಯೋಗವಾಗಲಿ. ರೋಗ ಬಂದಾಗ ಅದರ ಉಪಶಮನವನ್ನು ಮಾಡಲಿ. ಒಟ್ಟಾರೆ ನಮ್ಮ ಬಾಹ್ಯ ಅಭ್ಯಂತರ ಶುದ್ಧಿಯನ್ನುಂಟು ಮಾಡಲಿ ಎನ್ನುವ ಋಗ್ವೇದದ ಈ ಮಂಗಳವಾಣಿಯನ್ನು ನೆನಪಿಸಿಕೊಳ್ಳುತ್ತಾ ಈ ಲೇಖನವನ್ನು ಸಮಾಪ್ತಗೊಳಿಸುತ್ತೇನೆ.

Leave a Reply

Your email address will not be published. Required fields are marked *