Wednesday, 18th September 2024

ಬೀಸಿಯೇರುತ್ತ ಹೋದರೆ ಗತಿಯೇನು ?

ಕಳಕಳಿ

ಎಸ್.ಜಿ.ಹೆಗಡೆ

ದೇಶದ ವಿವಿಧೆಡೆ ಬೇಸಗೆಯು ಅಸಹನೀಯವಾಗಿ ಪರಿಣಮಿಸಿದೆ. ತಾಪಮಾನದ ಏರಿಕೆಯಿಂದಾಗಿ ಜನರು ಕಂಗಾಲಾಗುವಂತಾ ಗಿದೆ. ಅನೇಕರು ಬಿಸಿಯಾಘಾತದಿಂದ ಬಳಲಿ ಆಸ್ಪತ್ರೆ ಸೇರುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ತಾಪಮಾನ ಅತಿರೇಕದ ಮಟ್ಟಕ್ಕೆ ಮುಟ್ಟಿದೆ ಎನ್ನಲಾಗಿದೆ.

ವರ್ಷದಿಂದ ವರ್ಷಕ್ಕೆ ಹೀಗೆಯೇ ಬಿಸಿಯೇರುತ್ತಾ ಹೋದರೆ ಮುಂದೇನು ಗತಿ? ಸಾಮಾನ್ಯ ಸ್ಥಿತಿಯಲ್ಲಿದ್ದ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವುದೂ ಸಣ್ಣ ಸಂಗತಿಯಲ್ಲ. ಕಾವೇರುವ ಪ್ರಕ್ರಿಯೆ ಸಂಕೀರ್ಣವಾದದ್ದು. ಭೂಮಿಯಲ್ಲಿ ನೆಲದ ಭಾಗ ಮತ್ತು ಅದಕ್ಕಿಂತ ಹೆಚ್ಚಿನ ಜಲಮೂಲವಿದೆ. ಅವೆಲ್ಲವೂ ಒಟ್ಟಿಗೆ ಕಾದು ತಾಪಮಾನದಲ್ಲಿ ಹೆಚ್ಚಳವಾಗುವುದು ಕ್ಲಿಷ್ಟ ಪ್ರಕ್ರಿಯೆ. ಆದರೆ ತಾಪಮಾನದಲ್ಲಿನ ಅಸಹಜ ಏರಿಕೆಯು ಕಳವಳಕಾರಿ ಸಂಗತಿಯಾಗುತ್ತದೆ.

ಒಟ್ಟಾರೆ ಜಗತ್ತಿನ ತಾಪಮಾನದ ಏರಿಕೆಯನ್ನು ಗಮನಿಸಿದರೆ, ಕಳೆದ ೫೦ ವರ್ಷಗಳಿಂದ ಸರಾಸರಿ ಹೆಚ್ಚಿರುವುದು ೧.೦೮ ಡಿಗ್ರಿ ಸೆಲ್ಸಿಯಸ್. ಈ ಪ್ರಮಾಣವು ಅತ್ಯಂತ ಕಡಿಮೆಯೆನಿಸಿದರೂ, ಬಿಸಿಯ ಶೇಖರಣೆಯ ಮೊತ್ತ ಹಾಗೂ ಅದು ಬೀರುವ ಪರಿಣಾಮ ಅಗಾಧ. ತಾಪಮಾನದ ಏರಿಕೆಯ ಕಾರಣಗಳು ಸ್ಪಷ್ಟ ಮತ್ತು ಸರಳವಾಗಿವೆ. ಇಂಗಾಲದ ಡಯಾಕ್ಸೈಡ್ ಮತ್ತಿತರ ಹಸಿರುಮನೆ ಅನಿಲಗಳು ಹಾಗೂ ಕಲ್ಮಶಗಳು ಹವೆಯಲ್ಲಿ ಸೇರಿದಾಗ ಆರ್ದ್ರತೆಯಲ್ಲಿ ಮಿಳಿತವಾಗಿ ಉಷ್ಣತೆಯನ್ನು ಹಿಡಿದಿಡುತ್ತವೆ. ಆಗ ಬಿಸಿಯು ಸುಲಭವಾಗಿ ಹೊರ ಹೊಮ್ಮಿ ಶಿಥಿಲವಾಗುವುದಿಲ್ಲ.

ತಾಪಮಾನ ಹೀಗೆ ಏರಿಕೆಯಾಗಬಾರದೆಂದರೆ, ಪರಿಹಾರವೂ ಅಷ್ಟೇ ಸರಳ. ಅಂಥ ಕಲ್ಮಶಗಳು ಹವೆಯನ್ನು ಸೇರದಂತೆ ನಿಯಂತ್ರಿಸಬೇಕು, ಅಷ್ಟೇ. ವಿಷಯವು ಇಷ್ಟು ಸ್ಪಷ್ಟ ಮತ್ತು ಸರಳವಿದ್ದರೂ ನಿಖರವಾದ ಅನುಷ್ಠಾನ ಸುಲಭವಲ್ಲ. ಕಾರಣ, ಅಭಿ
ವೃದ್ಧಿಯ ಹಾದಿಯಲ್ಲಿ ಕೈಗಾರಿಕೆಗಳು ಬೆಳೆಯಲೇಬೇಕು, ವಾಹನಗಳು ಓಡಲೇಬೇಕು. ಕೃಷಿ ಉತ್ಪನ್ನಗಳ ಇಳುವರಿಗೆ ವಿವಿಧ ರೀತಿಯ ರಸಗೊಬ್ಬರ ಬೇಕೇ ಬೇಕು. ವಿದ್ಯು ಚ್ಛಕ್ತಿಯ ಉತ್ಪಾದನೆಗೆ ಮತ್ತಿತರ ಗಣಿಗಾರಿಕೆ ಕಾರ್ಯಕ್ಕೆ ಕಲ್ಲಿದ್ದಲನ್ನು ಒಮ್ಮೆಗೇ ನಿಷೇಧಿಸುವಂತಿಲ್ಲ.

ನಗರೀಕರಣ ವನ್ನು ಸ್ಥಗಿತಗೊಳಿಸುವಂತಿಲ್ಲ. ಒಟ್ಟಾರೆ ಹೇಳುವುದಾದರೆ ಯಾವೆಲ್ಲ ಬಾಬತ್ತುಗಳು ತಾಪಮಾನದ ಏರಿಕೆಗೆ ಕಾರಣ
ವಾಗಿವೆಯೋ ಅವನ್ನೆಲ್ಲ ಒಮ್ಮೆಗೇ ನಿಲ್ಲಿಸಿ ಕೈಕಟ್ಟಿ ಕೂರು ವಂತಿಲ್ಲ. ಅಂದಹಾಗೆ, ತಾಪಮಾನದ ನಿಯಂತ್ರಣದ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಯಲೇ ಬೇಕು, ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸರಕಾರದ ಕಾರ್ಯಾಚರಣೆಯ ಮೂಲಕ, ಪ್ರತಿಷ್ಠಿತ ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳ ಸಹಭಾಗಿತ್ವದ ನೆರವಿನಿಂದ ತಾಪಮಾನದ ಹತೋಟಿಗೆ ಸಾಕಷ್ಟು ಕಸರತ್ತು ನಡೆಯುತ್ತಿರುವುದು ಸರ್ವವಿದಿತ. ಆದರೆ ಇಂಥ ಜ್ವಲಂತ ಸಮಸ್ಯೆಗೆ ಒದಗುವ ನೈಜಸಮಾಧಾನ ಮಾತ್ರ ನಿಧಾನ ವಾದದ್ದು.

ತಾಪಮಾನದಲ್ಲಿನ ಅತಿರೇಕದ ಏರಿಕೆ ಬಹುತೇಕ ದೇಶಗಳಿಗೆ ‘ಬಿಸಿ’ ಮುಟ್ಟಿಸಿದೆ. ಥಾಯ್ಲೆಂಡ್, ಸಿಂಗಾಪುರ, ಚೀನಾ, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾ ವಲಯದ ದೇಶಗಳು, ಫಿಲಿಪೈನ್ಸ್, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಮಲೇಷ್ಯಾ ದೇಶಗಳು ಇಂಥ ‘ಫಲಾನು ಭವಿಗಳ’ ಪಟ್ಟಿಯಲ್ಲಿ ಸೇರಿವೆ. ಕೆಲಪ್ರದೇಶಗಳಲ್ಲಂತೂ ಬಿಸಿಲ ಧಗೆಯ ಕಾರಣದಿಂದಾಗಿ ಸಾವಿರಾರು ಶಾಲೆಗಳಿಗೆ ರಜಾ ನೀಡಲಾ ಗಿದೆ. ಜೂನ್ ತನಕವೂ ಎಲ್ಲೆಡೆ ಬಿಸಿಯ ಅಲೆ ಬಾಧಿಸಬಹುದು ಎಂಬ ಮುನ್ಸೂಚನೆಯಿದೆ.

ಸದ್ಯದ ಅಸಹನೀಯ ಬಿಸಿಲ ಝಳದ ಬಗ್ಗೆ ಸಿಂಗಾ ಪುರದ ‘ಅರ್ಥ್ ಅಬ್ಸರ್ವೇಟರಿ’ಯ ನಿರ್ದೇಶಕ ಪ್ರೊ.ಬೆಂಜಮಿನ್ ಹಾರ್ಟನ್ ಹೀಗೆನ್ನುತ್ತಾರೆ: ‘The level of heat the globe has experienced over the last 12 months both on the land and in the ocean has surprised science. We are not just prepared. There are very few, if any, places in the world that are resilient to this type of heat. Society needed to adopt’.

ಇಂದು ನಾವು ಎದುರಿಸುತ್ತಿರುವ ಅತಿರೇಕದ ತಾಪಮಾನದ ಸಂದರ್ಭದಲ್ಲಿ ಈ ಮಾತು ಅದೆಷ್ಟು ವಾಸ್ತವಿಕವಲ್ಲವೇ! ಕ್ಷಿಪ್ರ ಪರಿಹಾರವಿಲ್ಲದ ಈ ಘಟ್ಟದಲ್ಲಿ, ನಮ್ಮನ್ನು ನಾವೇ ಬಿಸಿಲಿನ ತಾಪದಿಂದ ಸುರಕ್ಷಿತವಾಗಿಸಿಕೊಳ್ಳುವುದು ಕಾಳಜಿಯುಕ್ತ ಕ್ರಮ. ಬೆಂಕಿ ಬಿದ್ದಾಗ ಬಾವಿಯನ್ನು ತೋಡ ಹೊರಟರೆ, ನೀರು ಸಿಗುವ ತನಕ ಬೆಂಕಿಯೇನೂ ಕಾಯುವುದಿಲ್ಲ. ಬೆಂಕಿ ಏಳದಂತೆ ಅಥವಾ ಬೆಂಕಿ ಬಿದ್ದಾಗ ಅದನ್ನು ಆರಿಸಬಲ್ಲ ಸನ್ನದ್ಧ ವ್ಯವಸ್ಥೆಯನ್ನು ನಿರ್ಮಿಸಿಡುವ ಕ್ರಮವು ಬೇರೆಯದೇ ವಿಚಾರ.

(ಲೇಖಕರು ಮುಂಬೈನ ಲಾಸಾ
ಸೂಪರ್ ಜೆನರಿಕ್ಸ್‌ನ ನಿರ್ದೇಶಕರು)

Leave a Reply

Your email address will not be published. Required fields are marked *