Thursday, 12th September 2024

ಸುರಿಯುವ ಎಲ್ಲಾ ಧಾರಾಕಾರ ಮಳೆಯೂ ಕುಂಭದ್ರೋಣವಲ್ಲ

ಇದೇ ಅಂತರಂಗ ಸುದ್ದಿ

vbhat@me.com

ಮಳೆಗಾಲದಲ್ಲಿ ಕನ್ನಡ ಪತ್ರಿಕೆಗಳ ಶೀರ್ಷಿಕೆಗಳಲ್ಲಿ ‘ಕುಂಭದ್ರೋಣ’ ಪದ ಬಳಕೆಯಾಗುವುದು ಸಾಮಾನ್ಯ. ಎಡೆ ಜಲಾವೃತವಾಗಿ, ಪ್ರವಾಹ ಉಂಟಾಗುವ ಧಾರಾಕಾರ ಮಳೆಯಾದಾಗ, ಈ ಪದ ಬಳಸುವುದುಂಟು. ಇತ್ತೀಚೆಗೆ ನಮ್ಮ ಪತ್ರಿಕೆಯ ಶೀರ್ಷಿಕೆಯಲ್ಲೂ ‘ಕುಂಭದ್ರೋಣ’ ಪದವನ್ನು ಬಳಸಿದ್ದರು.

ಬಹಳ ವರ್ಷಗಳ ಹಿಂದೆ, ‘ಕನ್ನಡಪ್ರಭ’ದಲ್ಲಿ ಶೀರ್ಷಿಕೆಯಲ್ಲಿ ಈ ಪದವನ್ನು ಖಾದ್ರಿ ಶಾಮಣ್ಣನವರು ಬಳಸಿದ್ದರಂತೆ. ಇದನ್ನು ಅವರೊಂದಿಗೆ ಕೆಲಸ ಮಾಡಿದ್ದವರೆಲ್ಲ ಬಹಳ ವರ್ಷಗಳ ಕಾಲ ನೆನಪು ಮಾಡಿಕೊಳ್ಳುತ್ತಿದ್ದರು. ಎಲ್ಲ ಮಳೆಯೂ ‘ಕುಂಭದ್ರೋಣ’ವಲ್ಲ. ಎಲ್ಲ ವರ್ಷವೂ ಅಂಥ ಮಳೆ ಬರುವುದಿಲ್ಲ. ಇದು ತೀರಾ ಅಪರೂಪಕ್ಕೆ ಬಳಕೆಯಾಗುವ ಪದ.  ಧಾರಾಕಾರ ಮಳೆಯಾಗಿದೆ ಎಂದ ಮಾತ್ರಕ್ಕೆ ಅದು ‘ಕುಂಭದ್ರೋಣ’ ಮಳೆ ಅಲ್ಲ. ಡೆಸ್ಕಿನಲ್ಲಿರುವವರು ತೀರಾ ಎಚ್ಚರಿಕೆಯಿಂದ, ಅಪರೂಪಕ್ಕೆ ಬಳಸುವ ಪದವಿದು.‘ಕುಂಭದ್ರೋಣ’ ಪದದ ಅರ್ಥವನ್ನು ನಿಘಂಟು ತಜ್ಞರಾಗಿದ್ದ ಪ್ರೊ.ಜಿ. (ಗಂಜಾಂ) ವೆಂಕಟಸುಬ್ಬಯ್ಯ ಅವರು ಹೀಗೆ ವಿವರಿಸುತ್ತಾರೆ- ಇದೊಂದು ಸಂಸ್ಕೃತದ ಸಮಾಸ ಶಬ್ದ, ದ್ವಂದ್ವ ಸಮಾಸ.

ಎರಡು ನಾಮಪದಗಳು ಸೇರಿ ಆಗಿರುವ ಸಮಾಸ ಶಬ್ದ. ಕುಂಭ ಎಂದರೆ ಮಡಕೆ ಅಥವಾ ಆ ಆಕಾರದ ಪಾತ್ರೆ. ದ್ರೋಣ ಎಂದರೆ ದೋಣಿಯಾಕಾರದ ಪಾತ್ರೆ. ದೊನ್ನೆ ಇದಕ್ಕೆ ಮಡಕೆ ದೋಣಿ ಎಂದು ಕನ್ನಡ ಶಬ್ದವನ್ನು ಯಾರೂ ನಿರ್ಮಾಣ ಮಾಡಿಲ್ಲ. ಮಾಡಿದರೆ ಅದಕ್ಕೆ ಅರ್ಥವೂ ಬರುವುದಿಲ್ಲ. ಸಂಸ್ಕೃತದಲ್ಲಿಯೂ ಅಷ್ಟೇ! ಕೇವಲ ‘ಕುಂಭದ್ರೋಣ’ ಎಂದೇ ಯಾರೂ ಉಪಯೋಗಿಸುವುದಿಲ್ಲ- ಮಳೆಗೆ ಸಂಬಂಧವಿಲ್ಲದೆ. ಕುಂಭದ್ರೋಣ ವರ್ಷ, ಕುಂಭದ್ರೋಣದಂಥ ಮಳೆ ಎಂದು
ಉಪಯೋಗಿಸುತ್ತಾರೆ.

ಸಾಮಾನ್ಯವಾಗಿ ಮಳೆ ಸುರಿಯುವುದು ಧಾರಾಕಾರವಾಗಿ, ಧಾರೆಧಾರೆಯಾಗಿ. ಆದರೆ ಕುಂಭದ್ರೋಣ ಮಳೆ ಎಂದರೆ ಮಡಕೆಯಲ್ಲಿ ತುಂಬಿರುವ ನೀರನ್ನು ಅಥವಾ ದೋಣಿ ಆಕಾರದ ಪಾತ್ರೆಯಲ್ಲಿ ತುಂಬಿರುವ ನೀರನ್ನು ಯಾರಾದರೂ ಆಕಾಶದಿಂದ ಕೆಳಗೆ ಸುರಿದರೆ ಅದು ಹೇಗೆ ಬೀಳುತ್ತದೆಯೋ, ಹಾಗೆ ಅಷ್ಟೇ ದಪ್ಪ ಆಕಾರದಲ್ಲಿ ಮಳೆ ಸುರಿಯುತ್ತಿದೆ ಎಂದರ್ಥ. ಇದು ಕೇವಲ ಉತ್ಪ್ರೇಕ್ಷೆ. ತುಂಬ ಬಿರುಸಿನಿಂದ ಬರುವ ಮಳೆ ಅದು. ಅದನ್ನೇ ಧಾರಾಕಾರಿ ಎಂದು ವರ್ಣಿಸುವುದಕ್ಕೆ
ಆಗುವುದಿಲ್ಲ. ಆದ್ದರಿಂದ ಮಡಕೆಗಳಿಂದ ಅಥವಾ ಪಾತ್ರೆಗಳಿಂದ ತುಂಬಿ ಸುರಿವಂತೆ ಎಂದು ಉತ್ಪ್ರೇಕ್ಷಿಸುವ ಸಮಾಸ ಶಬ್ದ ಅದು.

ಆದರೂ ಸಂಸ್ಕೃತ ಬಲ್ಲವರು ಕೂಡ ಕುಂಭದ್ರೋಣವರ್ಷ ಎಂದೂ ಪೂರ್ತಿಯಾಗಿ ಶಬ್ದವನ್ನು ಉಪಯೋಗಿಸುವುದೇ ಇಲ್ಲ. ‘ಕುಂಭದ್ರೋಣ’ ಎಂದರೆ ಕುಂಭ ದ್ರೋಣ ವರ್ಷ ಎಂದು ಅರ್ಥವಾಗುತ್ತದೆ ಎಂದು ಅವರ ನಿರೀಕ್ಷೆ. ಈ ಸಮಾಸವನ್ನು ಕನ್ನಡ ಕವಿಗಳು ಮಡಕೆ ದೊನ್ನೆ ಮಳೆ ಎಂದು ಯಾರೂ ಅನುವಾದ
ಮಾಡಿಲ್ಲ. ಕನ್ನಡದ ಪುಣ್ಯ. ಭಾಸ ಮಹಾಕವಿ ಇಂಥ ಮಳೆಯನ್ನು ಸುರಿಸುವ ಮೋಡಗಳನ್ನು ‘ಗಿರಿಸ್ನಾಪನಾಂಭೋಘಟಾಃ’ = ಗಿರಿಗಳಿಗೆ ಸ್ನಾನ ಮಾಡಿಸುವ ತುಂಬ ಭಾರಿ ಮಡಕೆಗಳು ಎಂದು ವರ್ಣಿಸಿದ್ದಾನೆ. ಇದು ಸಂಸ್ಕೃತದಲ್ಲಿ ತುಂಬ ಸುಂದರವಾದ ರೂಪಕಾಲಂಕಾರದ ಶಬ್ದ.

ಇಂದ್ರನಿಗೆ ಏಳು ಮೇಘಗಳ ಸೈನ್ಯ ಉಂಟಂತೆ. ಅವುಗಳ ಹೆಸರು ಹೀಗಿವೆ: ಆವರ್ತ, ಸಂವರ್ತ, ದ್ರೋಣ, ಪುಷ್ಕಲಾವರ್ತ, ಕಾಳ, ನೀಲ, ಮಹಾಕಾಳ, ದ್ರೋಣ ಎಂಬುದು ದೋಣಿಯ ಆಕಾರದ ಮೋಡ. ಅದನ್ನು ಮಗುಚಿದರೆ ಬೀಳುವಂತಹ ಮಳೆ ಇದು. ಪಂಪ ಭಾರತದಲ್ಲಿ ಒಂದು ಕಡೆ ಈ ವಾಕ್ಯವಿದೆ: ‘ಸಿಡಿಲ
ಬಳಗಮನೊಳಗೊಂಡ ದ್ರೋಣ, ಮಹಾದ್ರೋಣ, ಪುಷ್ಕಲಾವರ್ತ, ಸಂವರ್ತಕಗಳೆಂಬ ಮುಗಿಲ್ಗಳಂ ಬೆಸಸಿದಾಗಳ್ ಕವಿದುವು ಸಪ್ತ ಸಾಗರ ಜಲಂಗಳೆ ಲೋಕಮನೀಗಳ್ ಎಂಬಿನಂ ಮುಗಿಲ್ಗಳಲ್ಲಿ ಕರೆಯುತ್ತಿರೆ’. ಇದೇ ಕುಂಭದ್ರೋಣ. ಎಷ್ಟು ಮಳೆ ಬಿzಗ, ‘ಕುಂಭದ್ರೋಣ ಮಳೆ’ ಪ್ರಯೋಗವನ್ನು ಮಾಡಬೇಕು ಎಂಬ ಬಗ್ಗೆ ಸುದ್ದಿಮನೆಯಲ್ಲಿ ಸ್ಪಷ್ಟತೆಯಿಲ್ಲ.

ಆಕಾಶದಿಂದ ಕೊಡ ಅಥವಾ ಮಡಕೆಯಲ್ಲಿ ನೀರನ್ನು ಸುರಿದರೆ, ಯಾವ ರೀತಿ ಕಾಣುವುದೋ, ಮಳೆಯ ಧಾರೆ ಅದೆಷ್ಟು ದಪ್ಪವಿರಬಹುದೋ ಅದು ಕುಂಭದ್ರೋಣ ಮಳೆ. ಆಗ ಮಾತ್ರ ಈ ಪದವನ್ನು ಬಳಸಬಹುದು. ಕೆಲವು ಸಲ ಬಿರುಗಾಳಿ, ಗುಡುಗು, ಸಿಡಿಲಿನಿಂದ, ಆಲಿಕಲ್ಲಿನಿಂದ ಕೂಡಿದ ಮಳೆ ಬಿದ್ದಾಗ, ಇದನ್ನು ಬಳಸಬಾರದು. ಕಾರಣ ಅದು ಕುಂಭದ್ರೋಣ ಮಳೆ ಅಲ್ಲ. ಕುಂಭದ್ರೋಣ ಮಳೆ ಆಗಾಗ ಸುರಿಯುವುದಿಲ್ಲ. ಕೆಲವು ಸಲ ಟಿವಿ ಚಾನೆಲ್ಲುಗಳು ಸುದ್ದಿಯನ್ನು ವೈಭವೀಕರಿಸಲು ‘ಕುಂಭದ್ರೋಣ’ ಪದ ಪ್ರಯೋಗ ಮಾಡುವುದುಂಟು. ಅದು ಸರಿಯಲ್ಲ.

ಮುಸಲಧಾರೆ
ಮಳೆಗಾಲದಲ್ಲಿ ಕನ್ನಡ ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಆಗಾಗ ಕಂಡುಬರುವ ಇನ್ನೊಂದು ಪದವೆಂದರೆ ಮುಸಲಧಾರೆ. ಮುಸಲ ಅಂದರೆ ಒನಕೆ ಎಂದರ್ಥ. ನೀರಿನ ಧಾರೆ ಅಥವಾ ಸುರಿತ ಜೋರಾಗಿದ್ದರೆ, ಮಳೆಹನಿ ಒನಕೆಯ ಗಾತ್ರದಷ್ಟಿದ್ದರೆ, ಅಂಥ ಭಾರಿ ಮಳೆಗೆ ಮುಸಲಧಾರೆ ಎನ್ನುತ್ತಾರೆ. ಇದು ಕೂಡ ಮಳೆಯ ಹಾನಿಯನ್ನು ಉತ್ಪ್ರೇಕ್ಷೆಯಿಂದ ಬಳಸುವ ಪದ. ಮಳೆ ಅದೆಷ್ಟೇ ಜೋರಾಗಿದ್ದರೂ, ಒನಕೆ ಗಾತ್ರದಲ್ಲಿರುವುದಿಲ್ಲ. ಆದರೆ ತುಸು ಅತಿರಂಜಿತವಾಗಿ ಹೇಳುವಾಗ ಮಾತ್ರ ಈ ಪದವನ್ನು ಬಳಸುವುದುಂಟು. ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಅನಾಥೆ’ ಕೃತಿಯಲ್ಲಿ, ‘ಮುಸಲಧಾರೆಯಾದ ಮಳೆ, ಪರಿಚಯವಿಲ್ಲದ ಸ್ಥಳ, ಅವಳು ಎಲ್ಲಿಗೆ ತಾನೇ ಹೋದಾಳು?’ ಎಂದು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ, ಕನ್ನಡದ ಪತ್ರಿಕೆಯೊಂದರ ಶೀರ್ಷಿಕೆಯಲ್ಲಿ ಮುಸಲಧಾರೆ ಪದದ ಅರ್ಥ ಸರಿಯಾಗಿ ಗೊತ್ತಿಲ್ಲದ ಡೆಸ್ಕ್ ಪತ್ರಕರ್ತನ ಕೈಯಲ್ಲಿ ಒದ್ದೆ ಯಾಗಿತ್ತು! ಆತ ಹೆಡ್‌ಲೈನ್‌ನಲ್ಲಿ ‘ನಗರದಲ್ಲಿ ಮುಸುಕಿನಧಾರೆ’ ಎಂದು ಬಳಸಿದ್ದ. ಆದರೆ ಆ ಸುದ್ದಿಯನ್ನು ಓದಿದ ಓದುಗರಿಗೆ ಅದು ತಪ್ಪು ಎಂದು ಅನಿಸಲಿಲ್ಲ. ಕಾರಣ ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ ಇಡೀ ಬೆಂಗಳೂರು ನಗರಕ್ಕೆ ಕಪ್ಪು ಮುಸುಕು ಧರಿಸಿದಂತೆ ಭಾಸವಾಗಿತ್ತು. ಕೆಲ ಸಮಯದ ನಂತರ ‘ಧೋ’ ಎಂದು ಮಳೆ ಸುರಿಯಲಾರಂಭಿಸಿದ್ದರಿಂದ, ಆತ ‘ಮುಸುಕಿನಧಾರೆ’ ಎಂದು ಬಳಸಿದ್ದ. ಆದರೆ ಆತ ಬಳಸಬೇಕೆಂದಿದ್ದ ಪದ ಮುಸಲಧಾರೆ ಆಗಬೇಕಿತ್ತು.

ಮಳೆಕೊಯ್ಲು
ಕನ್ನಡದಲ್ಲಿ Zಜ್ಞಿ ಡಿZಠಿಛ್ಟಿ eZqಛಿoಠಿಜ್ಞಿಜಗೆ ಮಳೆಕೊಯ್ಲು ಎಂಬ ಪದವಿದೆ. ಇದು ಈಗ ಪ್ರಚಾರದಲ್ಲೂ ಇದೆ. ಪತ್ರಿಕೆಗಳಲ್ಲಿ ಈ ಪದ ಸರಾಗವಾಗಿ ಬಳಕೆ ಯಾಗುತ್ತಿದೆ ಮತ್ತು ಅದು ಎಲ್ಲರಿಗೂ ಅರ್ಥವೂ ಆಗುತ್ತಿದೆ. ಆದರೆ ಈ ಪದದ ಬಗ್ಗೆ ನಿಘಂಟು ತಜ್ಞ ಪ್ರೊ.ವೆಂಕಟಸುಬ್ಬಯ್ಯನವರಿಗೆ ತೃಪ್ತಿ ಇರಲಿಲ್ಲ. ಹಾಗೆಂದು ಅವರು ಈ ಪದವನ್ನು ಬಳಸಲೇ ಕೂಡದು ಎಂದು ಹೇಳಲಿಲ್ಲ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ನಿಘಂಟು ‘ಇಗೋ ಕನ್ನಡ’ದಲ್ಲಿ ಪ್ರಸ್ತಾಪಿಸಿದ್ದಾರೆ.

ಭಾರತದಲ್ಲಿ ಜನಸಂಖ್ಯೆ ನಿರೀಕ್ಷೆಯನ್ನು ಮೀರಿ ಬೆಳೆದಿದೆ. ಮಳೆ ಸರಿಯಾಗಿ ಆಗುತ್ತಿಲ್ಲ. ಭೂಮಿಯ ಅಂತರ್ಜಲದಲ್ಲಿ ಏರುಪೇರಾಗಿದೆ. ಈ ಕಾರಣದಿಂದ ವಿಜ್ಞಾನಿಗಳೂ ಪರಿಸರ ತಜ್ಞರೂ ಆಲೋಚನೆ ಮಾಡಿ ಮಳೆ ಬಿದ್ದಾಗ ದೊರಕುವಷ್ಟು ನೀರನ್ನೂ ಜನತೆಯ ಪ್ರಯೋಜನಕ್ಕಾಗಿ ಶೇಖರಿಸುವುದು ಸಾಧ್ಯವೇ ಎಂದು ಬೇರೆ ಬೇರೆ ಯೋಜನೆಗಳನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ಅದರಲ್ಲಿ Zಜ್ಞಿ ಡಿZಠಿಛ್ಟಿ eZqಛಿoಠಿಜ್ಞಿಜ ಎಂಬ ಇಂಗ್ಲಿಷ್ ಪದ ಪ್ರಮುಖವಾದುದು. ಈ ಶಬ್ದವು ಪರಿಸರ ವಿeನಿಗಳು ನಿರ್ಮಿಸಿರುವ ಶಬ್ದ. ಇದನ್ನು ಅನುಸರಿಸಿ ಕನ್ನಡದಲ್ಲಿ ‘ಮಳೆ ಕೊಯ್ಲು’ ಎಂಬ ಶಬ್ದವನ್ನು ನಿರ್ಮಾಣ ಮಾಡಿದ್ದಾರೆ.

ಏZqಛಿoಠಿ ಎಂದರೆ ಸುಗ್ಗಿಯಲ್ಲಿ ಪೈರನ್ನು ಕೂಡಿ ಹಾಕಿ, ರಾಶಿ ಮಾಡಿ ಸಾಗಿಸುವುದು. ನೀರನ್ನು ಹೀಗೆಯೇ ಶೇಖರಿಸುವ ಆಲೋಚನೆ ಇದು. ಮಳೆಯ ನೀರನ್ನು
ದಾಸ್ತಾನು ಮಾಡುವುದು. ದಾಸ್ತಾನು ಎಂಬ ಶಬ್ದವೂ ಕನ್ನಡದ್ದಲ್ಲ. ಅದು ಪಾರಸೀ ಭಾಷೆಯ ದಾಸ್ತನ್. ಆದರೂ ಆ ಶಬ್ದವೇ ಹೆಚ್ಚು ಸಮರ್ಪಕವಾಗಿತ್ತು.
ಪತ್ರಿಕಾಕರ್ತರಿಗೆ ಕೂಡಲೇ ಹೊಳೆದ ಶಬ್ದ ಕನ್ನಡದ ಕೊಯ್ಲು. ಅದನ್ನೇ ಎಲ್ಲರೂ ಉಪಯೋಗಿಸುತ್ತಿzರೆ. ಸಮೂಹ ಮಾಧ್ಯಮದ ಪ್ರಭಾವ ಯಾವಾಗಲೂ ಬಹು ದಟ್ಟವಾದದ್ದು. ಅದರಿಂದ ಏನು ಬೇಕಾದರೂ ಆಗಬಹುದು. ಹಾಗೆ ಶಾಶ್ವತವಾಗಿ ನಿಲ್ಲಲು ಪ್ರಯತ್ನ ಪಡುತ್ತಿರುವ ಶಬ್ದ ಕೊಯ್ಲು. ಮಳೆ ನೀರಿನ ದಾಸ್ತಾನು- ಮಳೆಯ ನೀರಿನ ಶೇಖರಣೆ ಹೆಚ್ಚು ಅರ್ಥಪೂರ್ಣವಾಗುವ ಪದಪುಂಜ. ಆದರೆ ಸ್ವಲ್ಪ ಉದ್ದ. ಪತ್ರಕರ್ತರಿಗೆ ಶಬ್ದಗಳು ಯಾವಾಗಲೂ ಚಿಕ್ಕದಾಗಿರಬೇಕು.
ಹೀಗಾಗಿ ಮಳೆ ಕೊಯ್ಲು ಉಳಿದು ಬದುಕುತ್ತಾ ಇದೆ.

ಹೊಟ್ಟೆಗೆ ಏನು ತಿಂತೀರಿ?
UeZಠಿ bಟ qsಟ್ಠ ಛಿZಠಿ? ಎಂದು ಯಾರಾದರೂ ಕೇಳಿದರೆ, ತಾವು ತಿನ್ನುವುದನ್ನು ಹೇಳಬಹುದು. ನಾನು ಊಟ ಮಾಡ್ತೇನೆ, ಊಟಕ್ಕೆ ಅನ್ನ ಸೇವಿಸುತ್ತೇನೆ, ರೋಟಿ ಸೇವಿಸುತ್ತೇನೆ ಎಂದು ಹೇಳಬಹುದು. ಇಲ್ಲವೇ ಪಿಜ್ಜಾ, ಬರ್ಗರ್ ಸೇವಿಸುತ್ತೇನೆ ಎಂದು ಹೇಳಬಹುದು.

ಅದೇ ಯಾರಾದರೂ ನಿಮ್ಮನ್ನು ‘ಹೊಟ್ಟೆಗೆ ಏನು ತಿಂತೀರಿ?’ ಎಂದು ಕೇಳಿದರೆ, ನೀವು ಏಕಾಏಕಿ ಕೆಂಡಾಮಂಡಲರಾಗುತ್ತೀರಿ. ಕಾರಣ ‘ಹೊಟ್ಟೆಗೆ ಏನು ತಿಂತೀರಿ?’ ಎನ್ನುವುದು ಕನ್ನಡದಲ್ಲಿ ಬೈಗುಳ. ‘ಹೊಟ್ಟೆಗೆ ಏನು ತಿಂತೀರಿ?’ ಅಂದ್ರೆ ಹೊಟ್ಟೆಗೆ ನೀವು ಅನ್ನ ತಿನ್ನುತ್ತಿಲ್ಲ ಎಂಬುದನ್ನು ಪ್ರಶ್ನಿಸಿದಂತೆ. ಎಲ್ಲರಿಗೂ ಗೊತ್ತು, ಮತ್ತೊಬ್ಬರು ಏನು ಸೇವಿಸುತ್ತಾರೆ ಎಂಬುದು. ಎಲ್ಲರೂ ಸೇವಿಸಬೇಕಾಗಿದ್ದನ್ನೇ ಸೇವಿಸುತ್ತಾರೆ. ಈ ಸಂಗತಿ ಗೊತ್ತಿದ್ದರೂ, ‘ಹೊಟ್ಟೆಗೆ ಏನು ತಿಂತೀರಿ?’ ಎಂದು ಕೇಳಿದಾಗ, ಹೊಟ್ಟೆಗೆ ಅನ್ನ ತಿಂತೀನಿ ಎಂದು ಸಮಾಧಾನದಿಂದ ಹೇಳುವುದಿಲ್ಲ. ‘ಹೊಟ್ಟೆಗೆ ಏನು ತಿಂತೀರಿ?’ ಎಂದು ಕೇಳಿದಾಗ ಪಿತ್ತ ನೆತ್ತಿಗೇರಿದವರಂತೆ ವರ್ತಿಸುತ್ತಾರೆ.

ಹಾಗೆ ನೋಡಿದರೆ, ಇದೊಂದು ಸುರಕ್ಷಿತವಾದ ಬೈಗುಳ. ಇದರಲ್ಲಿ ಅವಾಚ್ಯವೆನಿಸುವ ಪದಗಳೇ ಇಲ್ಲ. ವರನಟ ಡಾ.ರಾಜ್ ಕುಮಾರ್ ಅವರಿಗೆ ವಿಪರೀತ ಸಿಟ್ಟು ಬಂದಾಗ, ‘ಕತ್ತೆಬಡವ’ ಅಥವಾ ‘ಕತ್ತೆಬಡವಿ’ ಎಂದು ಬೈಯುತ್ತಿದ್ದರು. ಅದಕ್ಕೆ ಯಾವುದೇ ನಿರ್ದಿಷ್ಟ ಅರ್ಥವಿಲ್ಲ. ಬೊ*ಮಗ, ಸೂ*ಮಗ, ಬಡ್ಡಿ ಮಗ ಎಂದು ಯಾರನ್ನಾದರೂ ಬೈದರೆ ಯಥಾರ್ಥ ಭಾವಿಸಿ, ಬೇಸರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ‘ಕತ್ತೆಬಡವ’ ಅಂದರೆ ಸಿಟ್ಟು ಬರುವುದಿಲ್ಲ. ದಿವಂಗತ ಸಂಪಾದಕ ವೈಎನ್ಕೆ ಅವರಿಗೆ ಸಿಟ್ಟು ಬಂದಾಗ, ‘ನೀನು ಯಾವ ಮರದ ತೊಪ್ಪಲು’ ಎಂದು ಬೈಯುತ್ತಿದ್ದರು.

ಕೆಲ ವರ್ಷಗಳ ಹಿಂದೆ, ಖ್ಯಾತ ಅಣುವಿಜ್ಞಾನಿ ಡಾ. ರಾಜಾರಾಮಣ್ಣ ಅವರ ಆಫೀಸಿನಲ್ಲಿ ಕುಳಿತಾಗ, ಏನೋ ತಪ್ಪು ಮಾಡಿದ ಅವರ ಅಟೆಂಡರ್‌ಗೆ, ‘ಹೋಗಿ ಹೋಗಿ ಕೇಷ್ಟು ಲೋಕದಲ್ಲಿ ಬೀಳು’ ಎಂದು ಬೈದರು. ನನಗೆ ಇದ್ಯಾವ ಬೈಗುಳವಿದ್ದಿರಬಹುದು ಎಂದು ಅರ್ಥವಾಗಲಿಲ್ಲ. ಅದರ ಅರ್ಥವೇನು ಎಂದು ತಿಳಿದುಕೊಳ್ಳುವ ಆಸೆಯಾದರೂ, ಆ ಸಿಟ್ಟಿನ ಸನ್ನಿವೇಶದಲ್ಲಿ ಅವರನ್ನು ಕೇಳಲೂ ಮನಸ್ಸಾಗಲಿಲ್ಲ. ನಾನು ಸುಮ್ಮನಾದೆ.

ಅದಾಗಿ ಕೆಲ ದಿನಗಳ ನಂತರ, ಅವರು ನನ್ನನ್ನು ಬೆಂಗಳೂರು ಕ್ಲಬ್‌ಗೆ ಕರೆದುಕೊಂಡು ಹೋದರು. ವೇಟರ್ ಗುಂಡು ತಂದಿಟ್ಟ. ಅವರು ಹೇಳಿದ್ದೇ ಒಂದು, ಅವನು ತಂದಿಟ್ಟಿದ್ದೇ ಇನ್ನೊಂದು. ಡಾ.ರಾಜಾರಾಮಣ್ಣ ಅವರಿಗೆ ಹಠಾತ್ ಕೋಪ ಬಂದಿತು. ‘ನಾನು ಹೇಳಿದ್ದನ್ನು ತರುವುದನ್ನು ಬಿಟ್ಟು, ನೀನು ಬೇರೆಯದನ್ನು ತಂದೆ.
ಯಾಕೆ ಹೀಗೆ ಮಾಡ್ತೀರಪ್ಪ, ಹೋಗಿ ಹೋಗಿ ನೀನು ಕೇಷ್ಟು ಲೋಕದಲ್ಲಿ ಬೀಳಬೇಕು’ ಎಂದರು. ಬಿಡಬಾರದು, ಈಗ ಕೇಳಬೇಕು ಎಂದು ನಿರ್ಧರಿಸಿ, ’ಸಾರ್,
ಕೇಷ್ಟು ಲೋಕ ಅಂದ್ರೆ ಏನು, ಅದು ಎಲ್ಲಿದೆ?’ ಎಂದು ಕೇಳಿದೆ. ‘ಯಾರಿಗೆ ಗೊತ್ತು?’ ಎಂದವರೇ, ಪೆಗ್ ಏರಿಸಿದರು.

‘ಏನಿದು? ಕೇಷ್ಟು ಲೋಕಕ್ಕೆ ಹೋಗಿ ಬೀಳು ಎಂದು ಈಗ ತಾನೇ ಅವನಿಗೆ ಬೈದಿರಿ. ಅದರ ಅರ್ಥ ಗೊತ್ತಿರಲೇಬೇಕಲ್ಲ?’ ಎಂದೆ. ‘ಕೇಷ್ಟುಲೋಕ ಅಂದ್ರೆ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ. ಹಾಗ್ಯಾಕೆ ಬೈತಾರೆ ಎಂಬುದೂ ಗೊತ್ತಿಲ್ಲ. ನನ್ನ ತಂದೆಯವರಿಗೆ ಸಿಟ್ಟು ಬಂದಾಗ ಹಾಗೆ ಬೈಯುತ್ತಿದ್ದರು. ಒಮ್ಮೆ ನಾನು ಅವರಿಗೆ ಅದು
(ಕೇಷ್ಟುಲೋಕ) ಎಲ್ಲಿದೆ ಎಂದು ಕೇಳಿದಾಗ, ‘ಯಾವ ಪಿಶಾಚಿಗೆ ಗೊತ್ತು?’ ಎಂದು ರೇಗಿದ್ದರು. ನನಗೂ ಅದು ರೂಢಿಯಾಗಿಬಿಟ್ಟಿತು’ ಎಂದರು ಅಣುವಿಜ್ಞಾನಿ.

ಕೊನೆಗೆ ಅವರು ಅದಕ್ಕೆ ಸಮಜಾಯಿಷಿ ನೀಡಿದ್ದರು- ‘ನೋಡಿ, ಕೇಷ್ಟುಲೋಕ ಎಂಬುದು ಒಂದು ಭ್ರಾಮಕಲೋಕ ಅಥವಾ ಕಲ್ಪನಾಲೋಕವಿದ್ದಿರಬಹುದು. ನಮ್ಮ ಹಿರಿಯರಿಗೆ ಸಿಟ್ಟು ಬಂದಾಗ ಅವಾಚ್ಯ ಪದಗಳನ್ನು ಬಳಸಿ ಬಾಯಿ ಹೊಲಸು ಮಾಡಿಕೊಳ್ಳಲು, ಕೆಟ್ಟ ಪದ ಬಳಸಿ ತಮ್ಮ ಗೌರವ ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಹೀಗಾಗಿ ಅನಿಂದನಾತ್ಮಕ ಪದಗಳನ್ನು ಬಳಸಿ ಬೈಯುತ್ತಿದ್ದರು. ಕೇಷ್ಟುಲೋಕವೂ ಹಾಗೆ ಹುಟ್ಟಿದ್ದು’. ‘ಹೊಟ್ಟೆಗೆ ಏನು ತಿಂತೀರಿ?’ ಅಂದ್ರೆ ಕೆಲವರಿಗೆ ಕೋಪ ಬರಲು ಕಾರಣ ‘ಹೊಟ್ಟೆಗೆ ಅನ್ನವನ್ನೇ ತಿನ್ನುತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಆದ್ದರಿಂದ ನೀನು ಸೇವಿಸುತ್ತಿರುವುದು ಅನ್ನವಿರಲಿಕ್ಕಿಲ್ಲ, ಅಮೇಧ್ಯವೋ ಅಥವಾ ಬೇರೆ ಏನೋ ಇದ್ದಿರಬಹುದು’ ಎಂಬ ಅರ್ಥದಲ್ಲಿ ಧ್ವನಿಸುವುದರಿಂದ, ಹಾಗೆ ಯಾರೇ ಕೇಳಿದರೂ ಸಿಟ್ಟಾಗುತ್ತಾರೆ. ಆದರೂ ಆ ಮಾತಿನಲ್ಲಿ ಒಂದು ಪದವೂ ಬೈಗುಳವಿಲ್ಲ ಎಂಬುದನ್ನು ಒಪ್ಪಬೇಕು.

ಚಾಣಾಕ್ಷ ಜೇಬುಗಳ್ಳ
ಕೆಲ ದಿನಗಳ ಹಿಂದೆ, ಸುಮಾರು ನಲವತ್ತೈದು ವರ್ಷಗಳ ಹಿಂದಿನ ಅಲ್ಲಲ್ಲಿ ಹರಿದು ಹೋದ ‘ಕಸ್ತೂರಿ’ ಮಾಸಪತ್ರಿಕೆಯ ಸಂಚಿಕೆ ಸಿಕ್ಕಿತು. ಆ ಪತ್ರಿಕೆಯಲ್ಲಿ ನಾನು ತಪ್ಪದೇ ಓದುತ್ತಿದ್ದ ಒಂದು ಅಂಕಣವೆಂದರೆ ‘ಇದುವೇ ಜೀವ, ಇದು ಜೀವನ’. ಅದರಲ್ಲಿ ಶ್ರೀಮತಿ ಜಿ.ವಿ.ಕಾಮತ್ ಎಂಬುವವರು ತಮಗಾದ ಒಂದು ಅನುಭವ ವನ್ನು ಹಂಚಿಕೊಂಡಿದ್ದರು. ಆರು ತಿಂಗಳ ಮಗು ಕೇಶವನನ್ನು ಕೈಯತ್ತಿಕೊಂಡು ರೈಲಿನಲ್ಲಿ ಘಾಟ್‌ಕೋಪರ್‌ದಿಂದ ಮುಳುಂದಕ್ಕೆ ಹೋಗಬೇಕಾಗಿತ್ತು. ಬಂದ ರೈಲುಗಳೆಲ್ಲ ಜನರಿಂದ ತುಂಬಿ ಬರುತ್ತಿದ್ದರೂ ಅದರ ನುಗ್ಗದೇ ನಿರ್ವಾಹವಿರಲಿಲ್ಲ. ಕಷ್ಟಪಟ್ಟು ಲೇಡಿಸ್ ಕಂಪಾರ್ಟ್‌ಮೆಂಟಿನಲ್ಲಿ ನುಗ್ಗಿ ಒಂದು ಬದಿಯಲ್ಲಿ ನಿಂತೆ.
ಒಳಗೆ ಗದ್ದಲವೋ ಗದ್ದಲ. ಉಸಿರಾಡಲೂ ಕಷ್ಟವಾಗುತ್ತಿತ್ತು. ಐದು ನಿಮಿಷ ಕಳೆದಿರಬಹುದು. ಮಗು ರಚ್ಚೆ ಹಿಡಿದು ಅಳತೊಡಗಿತು.

ಸಮಾಧಾನ ಮಾಡಲು ಪ್ರಯತ್ನ ಪಟ್ಟಷ್ಟೂ ಅಳು ಹೆಚ್ಚುತ್ತಿತ್ತು. ರೈಲು ಮುಳುಂದಕ್ಕೆ ತಲುಪಿ ನಾನು ಸ್ಟೇಶನ್ನಿನಿಂದ ಹೊರಬಂದಾಗ, ಕೇಶವ ಅತ್ತು ಅತ್ತು ದಣಿದು ಮಲಗಿದ್ದ. ಸ್ಟೇಶನ್ನಿನ ಬಳಿಯ ಮಾರ್ಕೆಟ್ಟಿನಲ್ಲಿ ತರಕಾರಿ ಕೊಂಡು ಹಣ ಕೊಡಲು ಚೀಲಕ್ಕೆ ಕೈ ಹಾಕಿದಾಗ ಎದೆ ಧಸಕ್ ಎಂದಿತು. ಚೀಲದಲ್ಲಿಟ್ಟ ಹಣದ ಪರ್ಸ್ ಮಾಯ! ಪ್ಲಾಸ್ಟಿಕ್ಕಿನ ಚೀಲವನ್ನು ಬ್ಲೇಡಿನಿಂದ ಕತ್ತರಿಸಿ ಅದರೊಳಗಿದ್ದ ಹಣದ ಪರ್ಸನ್ನು ಯಾರೋ ತೆಗೆದಿದ್ದರು. ಗುರುತಿನ ತರಕಾರಿಯವನಿಗೆ ಹಣ ನಾಳೆ ಕೊಡುತ್ತೇನೆಂದು ಹೇಳಿ ಜೋಲುಬಿದ್ದ ಮುಖ ಹೊತ್ತು ಮನೆಗೆ ಬಂದೆ.

ಮಗುವಿನ ಬಟ್ಟೆ ಬದಲಿಸುವಾಗ ನನಗೆ ಅದರ ಕಾಲುಗಳ ಮೇಲೆ ಉಗುರಿನ ಕೆಂಪು ಗುರುತುಗಳನ್ನು ಕಂಡು ಅಚ್ಚರಿಯಾಯಿತು. ಉಗುರಿನಿಂದ ಗೀರಿದ ಸ್ಥಳ ಕೆಂಪಾಗಿ ರಕ್ತ ಬರುವಂತಿತ್ತು. ಮಗುವಿನ ಕಾಲಿಗೆ ಉಗುರುಗಳಿಂದ ಗಾಯ ಮಾಡುವುದರ ಮೂಲಕ ಅದು ಅಳುವಂತೆ ಮಾಡಿ ನನ್ನ ಗಮನವನ್ನು ಮಗುವಿನ ಕಡೆಗೆ ತಿರುಗಿಸಿ ಹ್ಯಾಂಡ್ ಬ್ಯಾಗಿನಲ್ಲಿದ್ದ ಪರ್ಸನ್ನು ಅಪಹರಿಸಿದ್ದರು ಕಿಸೆಗಳ್ಳರು. ಅಬ್ಬಾ! ಎಂದುಕೊಂಡೆ.

Leave a Reply

Your email address will not be published. Required fields are marked *