Saturday, 23rd November 2024

ಅಷ್ಟಕ್ಕೂ ನರಕ ಕೆಟ್ಟದ್ದೆಂಬ ಭಾವನೆ ಮೂಡಿಸಿದವರು ಯಾರು ?

ಇದೇ ಅಂತರಂಗ ಸುದ್ದಿ

vbhat@me.com

ಒಮ್ಮೆ ರಾಜಕಾರಣಿಯೊಬ್ಬ ನಿಧನನಾದ. ಆತ ನೇರವಾಗಿ ಸ್ವರ್ಗಕ್ಕೆ ಹೋದ. ಆಗ ಅವನಿಗೆ ಅನಿಸಿತು, ಯಾವುದಕ್ಕೂ ಒಂದು ಸುತ್ತು ಸ್ವರ್ಗ ಮತ್ತು ನರಕವನ್ನು ನೋಡಿ ಬರೋಣ, ನಂತರ ಸ್ವರ್ಗದಲ್ಲಿ ಉಳಿಯುವುದೋ, ನರಕದ ಎಂಬುದನ್ನು ತೀರ್ಮಾ ನಿಸಿದರಾಯಿತು.

ಆತ ಮೊದಲು ಸ್ವರ್ಗದೊಳಕ್ಕೆ ಕಾಲಿಟ್ಟ. ದ್ವಾರಪಾಲಕರು ಸ್ವಾಗತಿಸಿದರು. ಅಲ್ಲಿನ ವೈಭವ ಕಂಡು ದಿಗಿಲುಗೊಂಡ. ಆದರೆ ಅಲ್ಲಿದ್ದ ಜನರೆ ಶಾಂತವಾ ಗಿದ್ದರು. ಎಲ್ಲರೂ ತಮ್ಮ ಪಾಡಿಗೆ ಪ್ರಸನ್ನವದನರಾಗಿದ್ದರು. ಇಡೀ ಸ್ವರ್ಗದಲ್ಲಿ ಲೋಪ-ದೋಷಗಳೇ ಇರಲಿಲ್ಲ. ಎಲ್ಲವೂ ಕರಾರುವಾಕ್ಕು, ಅಚ್ಚುಕಟ್ಟುತನ, ಶಿಸ್ತು. ಅಲ್ಲಿ ದಂಗೆ, ಕೋಲಾಹಲ, ಗಲಾಟೆಯೇ ಇರಲಿಲ್ಲ.

ಪ್ರತಿಭಟನೆ, ರಾಸ್ತಾ ರೋಕೋ, ಧಿಕ್ಕಾರ, ಕೂಗಾಟ, ಹರತಾಳ, ದಿಲ್ಲಿ ಚಲೋ, ಉಪವಾಸ ಸತ್ಯಾಗ್ರಹ.. ಇವ್ಯಾವವೂ ಇರಲಿಲ್ಲ. ದಿಲ್ಲಿಯ ಅಧಿಕಾರ ಮತ್ತು ರಾಜಕಾರಣದಲ್ಲಿ ಅರ್ಧ ಶತಮಾನವನ್ನು ಕಳೆದ ಆ ರಾಜಕಾರಣಿಗೆ, ಸ್ವರ್ಗದ ವಾತಾ ವರಣ ಸ್ವಲ್ಪವೂ ಇಷ್ಟವಾಗಲಿಲ್ಲ. ಸ್ವರ್ಗದಲ್ಲಿ ಲವಲವಿಕೆ, ಜೀವಕಳೆ, ಜೀವನೋತ್ಸಾಹವೇ ಇಲ್ಲ ಎಂದೆನಿಸಿತು. ಸ್ವರ್ಗದಲ್ಲಿ ಎಲ್ಲಾ ಕಡೆ ಸುತ್ತಾಡಿದ ನಂತರ, ದ್ವಾರಪಾಲಕನಿಗೆ ಆ ದಿನದ ಪತ್ರಿಕೆಗಳನ್ನು ಕೊಡುವಂತೆ ರಾಜಕಾರಣಿ ಹೇಳಿದ. ಅದಕ್ಕೆ ಆತ, ‘ಕ್ಷಮಿಸಿ, ಸ್ವರ್ಗದಲ್ಲಿ ಪತ್ರಿಕೆಗಳಾಗಲಿ, ನ್ಯೂಸ್ ಚಾನೆಲ್ಲುಗಳಾಗಲಿ ಇಲ್ಲ.

ಏನಾದರೂ ಸುದ್ದಿಯಿದ್ದಾಗ ಮಾತ್ರ ಇಲ್ಲಿ ಪತ್ರಿಕೆಗಳನ್ನು ಮುದ್ರಿಸಲಾಗುತ್ತದೆ. ಇಲ್ಲಿ ಅಪಘಾತ, ಸಾವು-ನೋವು, ಪತ್ರಿಕಾ ಗೋಷ್ಠಿ, ಬಂದ್, ಮುಷ್ಕರ, ಹೊಡೆದಾಟ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ.. ಯಾವವೂ ನಡೆಯುವುದಿಲ್ಲ. ಹೀಗಾಗಿ ಇಲ್ಲಿ ಸುದ್ದಿಗೆ ಬರ. ಹೀಗಾಗಿ ಪತ್ರಿಕೆ-ನ್ಯೂಸ್ ಚಾನೆಲ್ಲುಗಳು ಇಲ್ಲ. ಸ್ವರ್ಗದಲ್ಲಿ ಎಲ್ಲರೂ ಬುದ್ಧನ ಹಾಗೆ ಕುಳಿತಿದ್ದರೆ, ಪತ್ರಕರ್ತ ರಿಗೇನು ಕೆಲಸ?’ ‘ಸಾಧ್ಯವೇ ಇಲ್ಲ. ಇಂಥ ವಾತಾವರಣದಲ್ಲಿ ನಾನು ಒಂದು ದಿನ ಸಹ ಇರಲಾರೆ’ ಎಂದ ರಾಜಕಾರಣಿ ದ್ವಾರಪಾಲಕನಿಗೆ, ‘ನರಕ ಹೇಗಿದೆ ನೋಡಿ ಬರೋಣ’ ಎಂದ. ಇಬ್ಬರೂ ಅಲ್ಲಿಗೆ ಹೊರಟರು.

ನರಕದ ಬಾಗಿಲಲ್ಲಿ ನಿಂತು ಇಣುಕಿದ. ಎಡೆ ಜೀವಕಳೆ, ಜನ ಕೂಗುತ್ತಿದ್ದರು, ಕಸೆಯುತ್ತಿದ್ದರು, ಡ್ಯಾ ಮಾಡುತ್ತಿದ್ದರು, ಹೊಡೆ ದಾಡುತ್ತಿದ್ದರು. ಹೆಜ್ಜೆ ಹೆಜ್ಜೆಗೆ ಬಾರು, ಹೊಟೇಲ, ಪಬ್, ಸಿನಿಮಾ ಹಾಲ್, ಅಲ್ಲಲ್ಲಿ ಪ್ರತಿಭಟನೆ, ಮೆರವಣಿಗೆ, ಮುಷ್ಕರ, ರಸ್ತೆ ತಡೆ ಚಳವಳಿ… ಎಲ್ಲಾ ಕಡೆ ಪತ್ರಿಕೆಗಳು ಕಾಣಿಸಿದವು. ಟಿವಿ ಆನ್ ಮಾಡಿದರೆ ಬ್ರೇಕಿಂಗ್ ನ್ಯೂಸ್. ಎಲ್ಲಿ ನೋಡಿದರೂ
ಕ್ರಿಯಾಶೀಲತೆ, ನಿರಂತರ ಚಟುವಟಿಕೆ. ಅಲ್ಲಿ ಆತ ಕಳೆದ ಸಂದರ್ಭದಲ್ಲಿ ಒಂದೇ ಒಂದು ನೀರಸ ಕ್ಷಣ ಎಂಬುದೇ ಇರಲಿಲ್ಲ. ಆತನಿಗೆ ನರಕದ ವಾತಾವರಣ ಕಂಡು ಬಲು ಖುಷಿ ಎನಿಸಿತು.

ಇದ್ದರೆ ಇಲ್ಲಿಯೇ ಇರಬೇಕು, ದಿಲ್ಲಿಗೂ, ಇಲ್ಲಿಗೂ ಯಾವ ವ್ಯತ್ಯಾಸವೇ ಇಲ್ಲ. Feeling at home ಅಂತಾರಲ್ಲ..
ಆ ವಾತಾವರಣ ನರಕದಲ್ಲಿದೆ.. ಹೀಗಾಗಿ ನರಕವನ್ನೇ ಆಯ್ದುಕೊಳ್ಳಬೇಕು ಎಂದು ರಾಜಕಾರಣಿಗೆ ಅನಿಸಿತು. ಆದರೆ ರಾಜಕಾರಣಿ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. ನರಕದಲ್ಲಿ ಇಷ್ಟು ಒಳ್ಳೆಯ ವಾತಾವರಣ ಇದ್ದರೂ, ಇಷ್ಟೊಂದು
ಜೀವನೋತ್ಸಾಹವಿದ್ದರೂ, ಯಾಕೆ ಭೂಮಿಯ ಮೇಲೆ ನರಕದ ಬಗ್ಗೆ ಅಷ್ಟೊಂದು ಕೆಟ್ಟ ಭಾವನೆ ಇದೆ? ಈ ಭಾವನೆಯನ್ನು ಮೂಡಿಸಿದವರು ಯಾರು? ಎಲ್ಲರೂ ಸ್ವರ್ಗಕ್ಕೆ ಹೋಗಲು ಯಾಕೆ ಬಯಸುತ್ತಾರೆ? ಈ ರೀತಿ ಸ್ವರ್ಗ ಮತ್ತು ನರಕಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿದವರು ಯಾರು? ಭೂಮಿಯ ಮೇಲೆ ಯಾರಾದರೂ ಸತ್ತರೆ ಸಾಕು, ಆತ ಸ್ವರ್ಗವಾಸಿಯಾದ ಅಂತಾರೆ.

ಅಪ್ಪಿತಪ್ಪಿಯೂ ನರಕವಾಸಿ ಅಂತ ಹೇಳುವುದಿಲ್ಲ, ಯಾಕೆ? ಆಗ ದ್ವಾರಪಾಲಕ ಮೆಲ್ಲಗೆ ಹೇಳಿದ – ‘ನರಕದಲ್ಲಿರುವ
ರಾಜಕಾರಣಿಗಳೆಲ್ಲ ತಮ್ಮ ತಮ್ಮ ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡು, ನಿರಂತರವಾದ ಈ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಬೇರೆ ರಾಜಕಾರಣಿಗಳು ನರಕಕ್ಕೆ ಬರಬಾರದು ಎಂದು ನರಕದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾರೆ.
ಸ್ವರ್ಗವೇ ಸರ್ವಸ್ವ, ಅದರಂಥ ಸ್ಥಳ ಮತ್ತೊಂದಿಲ್ಲ ಎಂಬ ಅತಿರಂಜಿತ ಕಲ್ಪನೆಯನ್ನು ಕಟ್ಟಿಕೊಡುತ್ತಿದ್ದಾರೆ.

ಆದರೆ ವಾಸ್ತವದಲ್ಲಿ ನರಕ ಹಾಗಿಲ್ಲ. ಭೂಮಿಯ ಮೇಲೆ ವಾಸಿದವರಿಗೆ ಸ್ವರ್ಗದಲ್ಲಿ ಒಂದು ದಿನವೂ ಇರಲು ಸಾಧ್ಯವಿಲ್ಲ. ನರಕವೂ ಮತ್ತೊಂದು ಭೂಮಿಯಾಗಬಾರದು ಎಂದು ಈ ರಾಜಕಾರಣಿಗಳು ಹಬ್ಬಿಸುತ್ತಿರುವ ವ್ಯವಸ್ಥಿತ ಅಪಪ್ರಚಾರದ ಭಾಗವಿದು. ಹೀಗಾಗಿ ಇಲ್ಲಿಗೆ ಬರುವವರನ್ನು ಉದ್ದೇಶಪೂರ್ವಕವಾಗಿ ಸ್ವರ್ಗಕ್ಕೆ ಕಳಿಸುವ ಹುನ್ನಾರವಿದು.’

ಆಗ ರಾಜಕಾರಣಿ ದ್ವಾರಪಾಲಕನನ್ನು ಕರೆದು, ಅವನ ಕೈಗೆ ಒಂದು ಕಂತೆ ನೋಟುಗಳನ್ನು ತುರುಕಿ, ‘ನಾನು ಯಾವ
ಕಾರಣಕ್ಕೂ ನರಕಕ್ಕೆ ಹೋಗಿದ್ದೇನೆ ಎಂದು ಯಾರಿಗೂ ಹೇಳಬೇಡ. ಅವರು ಸ್ವರ್ಗ ಸೇರಿದರು ಎಂದೇ ಪತ್ರಿಕಾ ಪ್ರಕಟಣೆ
ಹೊರಡಿಸು. ಅದು ಭೂಮಿಯಲ್ಲಿರುವ ಎಲ್ಲ ಪತ್ರಿಕೆ, ಟಿವಿ  ಚಾನೆಲ್ಲುಗಳಿಗೆ ತಲುಪುವಂತೆ ಮಾಡು. ಆದರೆ ನನ್ನ ಸೂಟ್
ಕೇಸ್, ಬ್ಯಾಗುಗಳನ್ನು ನರಕದ ಬಾಗಿಲ ಬಳಿ ಇಟ್ಟುಬಿಡು.

ನಾನು ನರಕದ ಹಾಯಾಗಿ ಇರುತ್ತೇನೆ’ ಎಂದ. ಇತ್ತ ಭೂಮಿಯಲ್ಲಿ ನ್ಯೂಸ್ ಚಾನೆಲ್ಲುಗಳು ‘ಸ್ವರ್ಗ ಸೇರಿದ ರಾಜಕಾರಣಿ’, ‘ಸ್ವರ್ಗವಾಸಿಯಾದ ರಾಜಕಾರಣಿ’ ಎಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸಲಾರಂಭಿಸಿದವು. ಮರುದಿನದ ಪತ್ರಿಕೆಗಳಲ್ಲೂ ಇದೇ ಹೆಡ್ ಲೈನ್‌ಗಳು ರಾರಾಜಿಸಿದವು.

ಸುಳ್ಳಿನ ಸರಮಾಲೆ ಅಂದ್ರೆ ಏನು?

ಒಂದು ಸುಳ್ಳನ್ನು ಹೇಳಿದರೆ, ಅದಕ್ಕೆ ಬೆಂಬಲವಾಗಿ ಇನ್ನೊಂದು ಸುಳ್ಳನ್ನು ಹೇಳಲೇಬೇಕು. ಕಾರಣ ಸುಳ್ಳು ಏಕಾಂಗಿ. ಅದಕ್ಕೆ ಹತ್ತಾರು ಸುಳ್ಳುಗಳ ಬೆಂಬಲ ಬೇಕಾಗುತ್ತದೆ. ಪದೇ ಪದೆ ಮತ್ತಷ್ಟು ಸುಳ್ಳುಗಳನ್ನು ಪೋಣಿಸುತ್ತಾ, ಅದನ್ನು ಸತ್ಯ ಎಂಬಂತೆ ಬಿಂಬಿಸಬೇಕಾಗುತ್ತದೆ.

ಸುಳ್ಳನ್ನು ಸತ್ಯ ಎಂದು ಬಿಂಬಿಸಲು, ಅದಕ್ಕೆ ಪೂರಕವಾಗಿ ಇನ್ನೂ ಕೆಲವು ಸುಳ್ಳುಗಳು ಬೇಕಾಗುತ್ತವೆ. ಹೀಗಾಗಿ ಸುಳ್ಳಿಗೆ ಸುಳ್ಳನ್ನು ಸೇರಿಸುತ್ತಾ, ಪೋಣಿಸುತ್ತಾ ಹೋದರೆ, ಅದೊಂದು ಸುಳ್ಳಿನ ಸರಮಾಲೆಯೇ ಆಗುತ್ತದೆ. ಯಾರೂ ಸಹ ಒಂದೇ ಸುಳ್ಳನ್ನು ಹೇಳುವುದಿಲ್ಲ. ಒಂದು ಸುಳ್ಳು ಹತ್ತಾರು ಸುಳ್ಳುಗಳನ್ನು ಹೇಳಿಸುತ್ತದೆ. ಆಗಲೇ ಸಿಕ್ಕಿ ಬೀಳುವುದು. ಒಂದು ಸುಳ್ಳು ಹೇಳಿದರೆ, ಸಪೋರ್ಟ್‌ಗೆ ಮತ್ತೊಂದು ಸುಳ್ಳನ್ನು ಅದರ ಪಕ್ಕದಲ್ಲಿ ನಿಲ್ಲಿಸಬೇಕಾಗುತ್ತದೆ ಮತ್ತು ಹೀಗೆ ನಿಲ್ಲಿಸುತ್ತಲೇ ಹೋಗ ಬೇಕಾಗುತ್ತದೆ.

ಹೀಗಾಗಿ ಸುಳ್ಳಿನ ಸರಮಾಲೆ, ಸುಳ್ಳಿನ ಕಂತೆ, ಸುಳ್ಳಿನ ಸರಪಟಾಕಿ ಎಂಬ ಪದಪ್ರಯೋಗಗಳು ಚಾಲ್ತಿಯಲ್ಲಿವೆ. ಈ ಮಾತನ್ನು ಹೇಳುವಾಗ ಯೋಗಿ ದುರ್ಲಭಜೀ ಹೇಳಿದ ಒಂದು ಪ್ರಸಂಗ ನೆನಪಾಗುತ್ತದೆ. ಒಮ್ಮೆ ಪುರೋಹಿತನೊಬ್ಬ ತನ್ನ ಕುದುರೆ ಯೊಂದಿಗೆ ಬೇರೆ ಊರಿಗೆ ಹೋಗುವಾಗ ಆತನಿಗೆ ಸುಸ್ತಾಯಿತು. ಅದನ್ನು ಮರಕ್ಕೆ ಕಟ್ಟಿ ಹಾಕಿ, ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದ. ಅದೇ ಮಾರ್ಗದಲ್ಲಿ ಬಲ್ಯ ನಡೆದು ಹೋಗುತ್ತಿದ್ದ. ಕುದುರೆಯನ್ನು ನೋಡಿದವನೇ ಅದರ ಹತ್ತಿರ ಹೋಗಿ, ಕೊರಳನ್ನು ನೇವರಿಸಿದ.

ಕುದುರೆಗೆ ಖುಷಿಯಾಯಿತು. ಬಲ್ಯನ ಸನಿಹ ಬಂದಿತು. ಆತ ಅದರ ಮೈದಡವಲಾರಂಭಿಸಿದ. ಅದೇ ಸಮಯಕ್ಕೆ ದಾರಿಹೋಕ ನೊಬ್ಬ ಬಂದ. ‘ಈ ಕುದುರೆ ನಿನ್ನದಾ?’ ಎಂದು ಕೇಳಿದ. ಇಲ್ಲ ಎಂದು ಹೇಳಿದ್ದರೆ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಬಲ್ಯ, ‘ಹೌದು, ಇದು ನನ್ನ ಕುದುರೆ’ ಎಂದುಬಿಟ್ಟ. ‘ಈ ಕುದುರೆಯನ್ನು ಮಾರಾಟ ಮಾಡುತ್ತೀಯಾ?’ ಎಂದ ದಾರಿಹೋಕ. ಆಗ ಬಲ್ಯ ತುಸು ಚಿಂತೆಗೆ ಬಿದ್ದ. ‘ಒಂದು ವೇಳೆ ನಾನು ಈ ಕುದುರೆಯನ್ನು ಮಾರಾಟ ಮಾಡ್ತೇನೆ ಅಂದ್ರೆ ನಿನಗೆ ಖರೀದಿಸುವ ತಾಕತ್ತಿದೆ ಯಾ?’ ಎಂದು ಕೇಳಿದ ಬಲ್ಯ. ಆ ಕುದುರೆಯ ನಿಜವಾದ ಬೆಲೆ ಎಷ್ಟಿರಬಹುದು ಎಂಬುದು ಬಲ್ಯನಿಗೆ ಗೊತ್ತಿರಲಿಲ್ಲ. ಹೀಗಾಗಿ ತುಸು ದುಬಾರಿ ಬೆಲೆಯನ್ನು ಹೇಳಿದರಾಯಿತೆಂದು ನಿರ್ಧರಿಸಿದ.

‘ನೀನು ಸೂಕ್ತ ಬೆಲೆ ಹೇಳಿದರೆ ಖರೀದಿಸುತ್ತೇನೆ’ ಎಂದ ದಾರಿಹೋಕ. ಆಗ ಬಲ್ಯ ಯಾವುದಕ್ಕೂ ದುಬಾರಿ ಬೆಲೆ ಹೇಳಿದರೆ
ಆತ ಖರೀದಿಸದೇ ಸುಮ್ಮನೆ ಹೋಗುತ್ತಾನೆ, ಒಂದು ವೇಳೆ ಖರೀದಿಸಿದರೆ, ಆ ಹಣವನ್ನು ಜೇಬಿಗಿಳಿಸಿಕೊಂಡು ಹೋದ ರಾಯಿತು. ಹೇಗಿದ್ದರೂ ಪುರೋಹಿತ ಮಲಗಿದ್ದಾನೆ, ಅಷ್ಟಕ್ಕೂ ಕುದುರೆ ನನ್ನದಲ್ಲವಲ್ಲ ಎಂದು ಭಾವಿಸಿ, ‘ಈ ಕುದುರೆಯ ಬೆಲೆ ಹತ್ತು ಸಾವಿರ ರುಪಾಯಿ’ ಎಂದ. ಆಗ ದಾರಿಹೋಕ ತಕ್ಷಣ ಹತ್ತು ಸಾವಿರ ರುಪಾಯಿ ಕೊಟ್ಟ.

ಇಷ್ಟು ಕಡಿಮೆ ಬೆಲೆಗೆ ಇಂಥ ಒಳ್ಳೆಯ ಕುದುರೆ ಸಿಗಬಹುದು ಎಂದು ಆತ ನಿರೀಕ್ಷಿಸಿರಲಿಲ್ಲ. ತಕ್ಷಣ ದಾರಿಹೋಕ ತಾನು ಖರೀದಿಸಿದ ಕುದುರೆಯೇರಿ ಅಲ್ಲಿಂದ ಹೊರಟುಹೋದ. ಅಷ್ಟೊತ್ತಿಗೆ ಪುರೋಹಿತನಿಗೆ ಎಚ್ಚರವಾಯಿತು. ಕುದುರೆಯನ್ನು ಕಟ್ಟಿದ ಮರದ ಹತ್ತಿರ ಹೋದ. ಕುದುರೆಯ ಯಜಮಾನ ಬರುತ್ತಿರುವುದನ್ನು ಗಮನಿಸಿದ ಬಲ್ಯ, ಏನು ಮಾಡಬೇಕೆಂದು ತೋಚದೇ, ಕುದುರೆಯ ಹಗ್ಗವನ್ನು ತನ್ನ ಕತ್ತಿನ ಸುತ್ತ ಕಟ್ಟಿಕೊಂಡು, ಬಾಯಲ್ಲಿ ಒಂದು ಹಿಡಿ ಹುಲ್ಲನ್ನು ತುರುಕಿಕೊಂಡ. ಇದನ್ನು ಗಮನಿಸಿದ ಪುರೋಹಿತನಿಗೆ ಆಶ್ಚರ್ಯವಾಯಿತು.

‘ಇದೇನು ಹೀಗೆ? ಕುತ್ತಿಗೆಯಲ್ಲಿ ಹಗ್ಗ, ಬಾಯಲ್ಲಿ ಹುಲ್ಲು? ಅಂದ ಹಾಗೆ ನನ್ನ ಕುದುರೆ ಎಲ್ಲಿ?’ ಎಂದು ಪುರೋಹಿತ ಕೇಳಿದ. ‘ಸ್ವಾಮಿ, ನಾನೇ ನಿಮ್ಮ ಕುದುರೆ’ ಎಂದ ಬಲ್ಯ. ‘ಏನು? ನೀನು ನನ್ನ ಕುದುರೆಯಾ? ನಿನಗೆ ತಲೆ ಕೆಟ್ಟಿದೆಯಾ?’ಎಂದು ಕೇಳಿದ ಪುರೋಹಿತ. ಆಗ ಬಲ್ಯ, ‘ಸ್ವಾಮಿ, ನಾನು ಹೇಳುವುದನ್ನು ಕೇಳಿ. ಮೂವತ್ತು ವರ್ಷಗಳ ಹಿಂದೆ ನಾನು ಮಾಡಿದ ಪಾಪಕ್ಕೆ ದೇವರು, ‘ನೀನು ಮುಂದಿನ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟು ಎಂದು ಶಾಪ ನೀಡಿದ್ದ. ಈಗ ತಾನೇ ಶಾಪ ಜಾರಿಗೆ ಬಂದಿದೆ. ಈಗ ನಾನು ಮನುಷ್ಯನಾಗಿದ್ದೇನೆ. ನನ್ನ ಹೆಸರು ಬಲ್ಯ ಅಂತ’ ಎಂದು ಹೇಳಿದ.

ಇಂಥ ಶಾಪಗಳಲ್ಲಿ ನಂಬಿಕೆಯಿದ್ದ ಪುರೋಹಿತ, ಅಲ್ಲಿಯೇ ಆಗಸ ನೋಡುತ್ತಾ, ‘ಭಗವಂತ ! ನಿನ್ನ ಲೀಲೆ ದೊಡ್ಡದು. ಬಲ್ಯ
ಮಾಡಿದ ಎಲ್ಲಾ ಪಾಪಗಳನ್ನು ಮರೆತು, ಆತನನ್ನು ಕ್ಷಮಿಸಿಬಿಡು, ಆತ ಕುದುರೆ ಆಗಲಿ’ ಎಂದು ಪ್ರಾರ್ಥಿಸಿದ. ಅನಂತರ ಬಲ್ಯನ ಕಡೆ ತಿರುಗಿ, ‘ಆಯ್ತು, ಏನು ಆಗಬೇಕಿತ್ತೋ ಅದು ಈಗ ಆಗಿ ಹೋಯಿತು. ಈಗ ನಾನು ಮುಂದಿನ ಊರಿಗೆ ಹೋಗಬೇಕು.

ನೀನು ಮನೆಗೆ ಹೋಗು. ನಾನು ಈಗ ಮಾರ್ಕೆಟಿಗೆ ಹೋಗಿ ಹೊಸ ಕುದುರೆಯನ್ನು ಖರೀದಿಸುತ್ತೇನೆ’ ಎಂದ. ಮಾರ್ಕೆಟಿನಲ್ಲಿ ಕುದುರೆ ವ್ಯಾಪಾರಿಯನ್ನು ಕಂಡು, ‘ತುರ್ತಾಗಿ ನನಗೊಂದು ಕುದುರೆ ಬೇಕಾಗಿದೆ.. ಹೊಸ ಕುದುರೆಯನ್ನು ತೋರಿಸುತ್ತೀಯ?’ ಎಂದ. ಅದಕ್ಕೆ ವ್ಯಾಪಾರಿ, ‘ಬನ್ನಿ ಪುರೋಹಿತರೇ, ಈಗ ತಾನೇ ಒಂದು ಒಳ್ಳೆಯ ಕುದುರೆ ಬಂದಿದೆ’ ಎಂದು ತೋರಿಸಿದ. ಪುರೋಹಿತ ಹೋಗಿ ನೋಡಿದರೆ, ಅವನದೇ ಕುದುರೆ! ಕುದುರೆ ಕಿವಿಯಲ್ಲಿ ‘ಬಲ್ಯ, ನಿನ್ನ ಎಲ್ಲಾ ಪಾಪಗಳನ್ನು ಮನ್ನಿಸು ಎಂದು ದೇವರಿಗೆ ಕೆಲ ಹೊತ್ತಿನ ಹಿಂದೆ ಪ್ರಾರ್ಥಿಸಿದ್ದೆ. ನೋಡು, ದೇವರು ದೊಡ್ಡವನು. ಆತ ಎಷ್ಟು ಶೀಘ್ರ ನಿನ್ನನ್ನು ಮತ್ತೆದ್ದಾ ಕುದುರೆಯನ್ನಾಗಿ ಮಾಡಿಬಿಟ್ಟಿದ್ದಾನೆ’ ಎಂದ.

ದಾರಿಹೋಕ ‘ಈ ಕುದುರೆ ನಿನ್ನದಾ?’ ಎಂದು ಕೇಳಿದ್ದಕ್ಕೆ ‘ಇಲ್ಲ’ ಎಂದು ಹೇಳಿದ್ದರೆ ಸಮಸ್ಯೆಯೇ ಆಗುತ್ತಿರಲಿಲ್ಲ. ‘ಹೌದು’ ಎಂದು ಹೇಳಿದ ಒಂದು ಸುಳ್ಳಿಗೆ, ಸುಳ್ಳಿನ ಸರಮಾಲೆಯನ್ನೇ ಪೋಣಿಸಬೇಕಾಯಿತು.

ಯಶಸ್ಸಿನ ಪಾಠಗಳು
ಮೊನ್ನೆ ಕಡತ ಯಜ್ಞ ಮಾಡುವಾಗ, ಈ ಬರಹ ಸಿಕ್ಕಿತು. ಪ್ರಾಯಶಃ ‘ರೀಡರ್ಸ್ ಡೈಜೆ’ನಲ್ಲಿ ಪ್ರಕಟವಾದ ಬರಹವಿದ್ದಿರಬಹುದು. ಅದನ್ನು ಬರೆದವರು ಯಾರು ಎಂಬುದು ಗೊತ್ತಿಲ್ಲ. ‘ಕಳೆದ ಐವತ್ತು ವರ್ಷಗಳಲ್ಲಿ ನಾನು ಕಂಡುಕೊಂಡ ಆರು ಯಶಸ್ಸಿನ ಪಾಠಗಳು ಮತ್ತು ಜೀವನಪಾಠಗಳು’ ಎಂಬುದು ಇದರ ಶೀರ್ಷಿಕೆ. ಆದರೆ ಈ ಬರಹದಲ್ಲಿ ಕೊನೆಯ, ಅಂದರೆ ಆರನೇ ಪಾಠ ಮತ್ತು ಬರೆದವರ ಹೆಸರು ಹರಿದು ಹೋಗಿತ್ತು.

ಹೀಗಾಗಿ ನಿಮಗೆ ಐದು ಪಾಠಗಳನ್ನಷ್ಟೇ ಇಲ್ಲಿ ಕೊಡುತ್ತಿದ್ದೇನೆ. ಇದನ್ನು ಯಾರೇ ಬರೆದಿರಲಿ, ಅವರಿಗೆ ಮನಸ್ಸಿನಂದು
ಧನ್ಯವಾದ ಹೇಳಿಬಿಡೋಣ. ೧. ಜೀವನದಲ್ಲಿ ಕೆಲವೇ ಕೆಲವು ಜನ ನಿಮ್ಮನ್ನು ಇಷ್ಟಪಡುತ್ತಾರೆ ಅಥವಾ ಪ್ರೀತಿಸುತ್ತಾರೆ. ಅವರು ಯಾರು ಎಂಬುದನ್ನು ಕೈಬೆರಳಿನಲ್ಲಿ ಎಣಿಸಬಹುದು. ಅಂಥವರನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು.
೨. ಜೀವನದಲ್ಲಿ ನೀವು ಸಾಧನೆ ಮಾಡಿದರೆ, ಯಶಸ್ವಿಯಾದರೆ, ಅನೇಕ ಜನ ನಿಮ್ಮನ್ನು ಪ್ರೀತಿಸುತ್ತಾರೆ. ಈ ಯಶಸ್ಸು ಹೋದ ಕ್ಷಣ ಅವರು ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸಿಬಿಡುತ್ತಾರೆ. (ಉದ್ಯಮಿ ವಿಜಯ ಮಲ್ಯ ಮತ್ತು ಬಿ.ಆರ್.ಶೆಟ್ಟಿ ಅವರನ್ನೊಮ್ಮೆ ನೆನಪಿಸಿಕೊಳ್ಳಿ) ಜನ ನಿಮ್ಮ ಯಶಸ್ಸನ್ನು ಪ್ರೀತಿಸುತ್ತಾರೆ, ನಿಮ್ಮನ್ನಲ್ಲ. ಇಂಥವರನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು.
೩. ನೀವು ಯಶಸ್ವಿ ಆಗದಿದ್ದಾಗ, ನಿಮ್ಮ ಕನಸುಗಳನ್ನು, ಯೋಚನೆಗಳನ್ನು ಹೆಚ್ಚು ಮಂದಿ ನಂಬುವುದಿಲ್ಲ. ನಿಮಗೂ ನಿಮ್ಮ ಬಗ್ಗೆ ನಂಬಿಕೆ ಇರುವುದಿಲ್ಲ.

೪. ಆಗ, ನಿಮ್ಮಲ್ಲಿ ಕನಸು, ಐಡಿಯಾಗಳಿದ್ದರೂ ನಿಮ್ಮಲ್ಲಿ ಪ್ರೇರಣೆ ಕ್ಷೀಣಿಸುತ್ತದೆ. ಇಂಥ ಸಂದರ್ಭದಲ್ಲಿ ಮೈಕೊಡವಿ ಎದ್ದು ನಿಲ್ಲಬೇಕು. ಕನಸನ್ನು ನನಸಾಗಿ ಮಾಡಲು ಪಣ ತೊಡಬೇಕು. ಆದರೆ ಇದು ಸುಲಭ ಅಲ್ಲ. ಅದಕ್ಕಾಗಿ ಜೀವನದಲ್ಲಿ ಸಾಧನೆ ಮಾಡುವವರು, ಯಶಸ್ವಿಯಾಗುವವರು ಬಹಳ ಕಮ್ಮಿ ಜನ.

೫. ಕ್ಲಾಸಿನಲ್ಲಿ ಮೊದಲ ಸ್ಥಾನ ಪಡೆದವರು ಜೀವನದಲ್ಲೂ ಮೊದಲ ಸ್ಥಾನ ಪಡೆಯುತ್ತಾರೆ ಎಂದೇನಿಲ್ಲ. ಜನ ಯಾವ ಉದ್ಯೋಗ ದಲ್ಲಿದ್ದಾರೋ, ಅವರು ಅಲ್ಲಿನ ಜನರನ್ನು, ತಮ್ಮನ್ನು ಮತ್ತು ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಅಂಕಪಟ್ಟಿಯ ಆಧಾರದ ಮೇಲೆ ಜನರನ್ನು ಅಳೆಯಬೇಡಿ. ಹಣ ಯಾವತ್ತಾದರೂ ಹೋಗಬಹುದು. ಅದನ್ನು ಯಾವಾಗ
ಬೇಕಾದರೂ ಗಳಿಸಬಹುದು. ಈಗಿನ ಸ್ಥಿತಿಯೇ ಶಾಶ್ವತ ಅಲ್ಲ. ಆರನೇ ಪಾಯಿಂಟ್ ಏನಿತ್ತೋ? ಗೊತ್ತಿಲ್ಲ, ಛೇ!

ವೈಫೈ ಮತ್ತು ಆಮ್ಲಜನಕ
ಕೆಲದಿನಗಳ ಹಿಂದೆ ಬೆಂಗಳೂರಿನ ತಮ್ಮ ಥರ್ಟಿ ಪಾರ್ಟಿ ಸೈಟಿನಲ್ಲಿ ನೂರೈವತ್ತಕ್ಕೂ ಹೆಚ್ಚು ಮರಗಳನ್ನು ಬೆಳೆದ ಸ್ನೇಹಿತರಾದ ಶಂಕರ್ ಅವರ ಮನೆಯಲ್ಲಿ ನೇತು ಹಾಕಿದ ಒಂದು ಪೋಸ್ಟರ್ ಗಮನ ಸೆಳೆಯಿತು. ಅದರಲ್ಲಿ ಬರೆದಿತ್ತು. ಒಂದು ವೇಳೆ ಈಗಿರುವ ಮರಗಳೆ ವೈಫೈ ಸಿಗ್ನಲ್ ನೀಡುವಂತಿದ್ದರೆ ಏನಾಗುತ್ತಿತ್ತು? ಆಗ ನಾವು ಎಲ್ಲ ಕಡೆಗಳಲ್ಲೂ ಗಿಡಗಳನ್ನು ನೆಡು ತ್ತಿದ್ದೆವು. ಮರಗಳನ್ನು ಕಡಿಯಲು ಬಿಡುತ್ತಿರಲಿಲ್ಲ. ಎಲ್ಲಿ ನೋಡಿದರೂ ಕಾಡು ಬೆಳೆದಿರುತ್ತಿತ್ತು. ಆ ಮೂಲಕ ನಾವು ಭೂಮಿ ಯನ್ನು ಸಂರಕ್ಷಿಸುತ್ತಿದ್ದೆವು. ವಿಷಾದದ ಸಂಗತಿ ಅಂದ್ರೆ ಮರಗಳು ನಮ್ಮ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನಷ್ಟೇ ಉತ್ಪಾದಿಸುತ್ತವೆ !

ಪರ್ವತಾರೋಹಿ ಮತ್ತು ಮನುಷ್ಯತ್ವ
ಪ್ರದೀಪ ಭಾಷ್ಯ ಮತ್ತು ಅಂಕಿತ್ ಬಾಬು ಅಧಿಕಾರಿ ಅವರು ಬರೆದ ‘ಶೆಪಾರ್’ ಎಂಬ ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿ ಬರೆದ
ಕೆಲವು ಸಾಲುಗಳು ಮನಕಲಕಿತು – ‘ಮೌಂಟ್ ಎವರೆಸ್ಟ್ ಏರುವಾಗ, ಪರ್ವತಾರೋಹಿಗಳು ಎಷ್ಟೊಂದು ಅಸಹಾಯಕ ರಾಗುತ್ತಾರೆಂದರೆ, ಸಾವಿನ ಅಂಚಿನಲ್ಲಿರುವ ತಮ್ಮ ಜತೆ ಹೆಜ್ಜೆ ಹಾಕುವ ಸಹ ಪರ್ವತಾರೋಹಿಗಳಿಗೆ ಯಾವ ಸಹಾಯವನ್ನೂ ಮಾಡಲು ಆಗುತ್ತಿಲ್ಲವಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಇನ್ನು ಕೆಲಕ್ಷಣಗಳಲ್ಲಿ ಅವರು ಸಾಯುತ್ತಾರೆ ಎಂಬುದು ಗೊತ್ತಿದ್ದರೂ,
ಪರ್ವತಾರೋಹಿಗಳು ತಮ್ಮ ಪಾಡಿಗೆ ಮುಂದಕ್ಕೆ ಹೆಜ್ಜೆ ಹಾಕುತ್ತಿರುತ್ತಾರೆ.

‘ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡಿ, ಪ್ಲೀಸ್ ಹೆಲ್ಪ್’ ಎಂದು ಪರಿಪರಿಯಾಗಿ ಬೇಡಿಕೊಂಡರೂ, ಮುಂದೆ ಹೋಗುತ್ತಾರೆ. ಒಂದು ವೇಳೆ ಅವರಿಗೆ ಸಹಾಯ ಮಾಡಲು ಅಲ್ಲಿ ನಿಂತರೆ, ಸಹಾಯಕ್ಕೆ ಮುಂದಾದವರೂ ತೊಂದರೆಗೆ ಸಿಲುಕುತ್ತಾರೆ. ಮನುಷ್ಯತ್ವ ಇಲ್ಲದವರು ಮಾತ್ರ ಸಾವಿನ ದವಡೆಯಲ್ಲಿದ್ದವರನ್ನು ಬಿಟ್ಟು ಮುಂದಕ್ಕೆ ಹೋಗಬಹುದು. ಆದರೆ ಅವರಿಗೆ ಸಹಾಯ ಮಾಡದೇ, ಅವರನ್ನು ಸಾಯಲು ಬಿಟ್ಟು ಮುನ್ನಡೆಯುವುದೇ ಸರಿಯಾದ ಮಾರ್ಗ.’