Wednesday, 11th December 2024

ಲಿವರ್‌ ಹಾಳುಗೆಡವುವ ಹೆಪಟೈಟಿಸ್ – ಸಿ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

ಕಳೆದ 2 ವಾರಗಳ ಮೊದಲು ಹೆಪಟೈಟಿಸ್ ‘ಸಿ’ ಬಗ್ಗೆ ಸಂಶೋಧನೆ ನಡೆಸಿದ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪಾರಿತೋಷಕ
ದೊರೆತ ಬಗ್ಗೆ ವಿವರವಾಗಿ ಬರೆದಿದ್ದೆ. ಈ ವಾರ ಹೆಪಟೈಟಿಸ್ ಬಗ್ಗೆೆ ಗಮನ ಹರಿಸೋಣ. ಹೆಪಟೈಟಿಸ್ ಎಂದರೆ ಲಿವರ್ ಅಥವಾ ಯಕೃತ್ತಿನ ಸೋಂಕು. ಲಿವರ್ ಸೋಂಕಿಗೆ ಒಳಗಾದಾಗ ಅದು ಮಾಡುವ ಕರ್ತವ್ಯದಲ್ಲಿ ವ್ಯತ್ಯಾಸವಾಗುವುದು ಸಹಜ.

ಲಿವರ್ ತೊಂದರೆಗೆ ಒಳಗಾಗುವ ಮುಖ್ಯ ಕಾರಣಗಳೆಂದರೆ – ಮಿತಿ ಮೀರಿದ ಮದ್ಯಪಾನ, ಹಲವು ವಿಷ ವಸ್ತುಗಳು, ಕೆಲವು ಔಷಧಗಳು, ಅಲ್ಲದೆ ಕೆಲವು ಕಾಯಿಲೆಗಳು. ಇವುಗಳೇ ಅಲ್ಲದೆ ಲಿವರ್ ತೊಂದರೆಗೆ ಒಳಗಾಗುವ ಅತೀ ಸಾಮಾನ್ಯ ಕಾರಣ ಎಂದರೆ ವೈರಸ್ ಸೋಂಕು. ಇವುಗಳಲ್ಲಿ ಮುಖ್ಯವಾದವು ಹೆಪಟೈಟಿಸ್ ಎ, ಬಿ ಮತ್ತು ಸಿ ವೈರಸ್ ಗಳು. ಈ ಮೂರೂ ಭಿನ್ನ ರೀತಿಯ ವೈರಸ್ ‌ಗಳು.

ಹೆಚ್ಚಿನ ಸಂದರ್ಭ ಈ ವೈರಸ್‌ಗಳು ಉಂಟು ಮಾಡುವ ರೋಗ ಲಕ್ಷಣಗಳು ಒಂದೇ ರೀತಿಯಲ್ಲಿರುತ್ತವೆ. ಆದರೆ ಅವು ಹರಡುವ ರೀತಿ ಭಿನ್ನ. ಅಲ್ಲದೆ ಲಿವರ್‌ಗೆ ಸೋಂಕು ಉಂಟು ಮಾಡುವ ರೀತಿಯೂ ಭಿನ್ನವೇ. ಹೆಪಟೈಟಿಸ್ ಎ ಸೋಂಕು ಹೆಚ್ಚಿನ ಸಂದರ್ಭ ಗಳಲ್ಲಿ ಕಲುಷಿತ ಆಹಾರ, ಮಾನವ ಮಲವು ಗೊತ್ತಿಲ್ಲದೇ ಸೇವನೆಯಾಗಿರುವುದು – ಈ ರೀತಿ ಬರುತ್ತದೆ. ಇದು ಬಹಳ ಕಡಿಮೆ ಅವಧಿಯ ಸೋಂಕು. ಹೆಚ್ಚಿನ ಸಂದರ್ಭಗಳಲ್ಲಿ ತನ್ನಿಂದ ತಾನೇ ಗುಣವಾಗುತ್ತದೆ.

ಆದರೆ ಹೆಪಟೈಟಿಸ್ ಬಿ ಮತ್ತು ಸಿ ಸೋಂಕುಗಳು ಆರಂಭದಲ್ಲಿ ಕಡಿಮೆ ಅವಧಿಯ ಸೋಂಕಿನ ರೀತಿ ಕಾಣಿಸಿಕೊಂಡು ನಂತರ ಸುದೀರ್ಘ ಕಾಲ ಲಿವರ್‌ನಲ್ಲಿ ಉಳಿದುಕೊಳ್ಳುತ್ತವೆ. ಹೆಪಟೈಟಿಸ್ ಎ ಮತ್ತು ಬಿ ಸೋಂಕುಗಳಿಗೆ ಲಸಿಕೆಗಳು ಲಭ್ಯವಿವೆ. ಆದರೆ
ಹೆಪಟೈಟಿಸ್ ಸಿ ಸೋಂಕಿಗೆ ಇನ್ನೂ ವ್ಯಾಕ್ಸೀನ್ ಲಭ್ಯವಿಲ್ಲ.

ಹೆಪಟೈಟಿಸ್ ಸಿ: ಈ ಸೋಂಕು ಲಿವರ್‌ಗೆ ತೀವ್ರ ರೀತಿಯ ಆಘಾತ ಅಥವಾ ತೊಂದರೆ ನೀಡುತ್ತದೆ. ಹೆಚ್ಚಿನ ಸಂದರ್ಭ ಈ ಹೆಪ ಟೈಟಿಸ್ ಸಿ ಕಲುಷಿತ ರಕ್ತದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇತ್ತೀಚಿನವರೆಗೆ ಈ ಕಾಯಿಲೆಗೆ ಚಿಕಿತ್ಸೆ ಎಂದರೆ ಪ್ರತೀ ವಾರವೂ ಇಂಜೆಕ್ಷನ್ ಮತ್ತು ಹಲವು ವಿಧದ ಮಾತ್ರೆಗಳು. ಆದರೆ ಹೆಚ್ಚಿನವರಿಗೆ ಈ ಔಷಧಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಎಂದರೆ ಅವರ ಆರೋಗ್ಯ ಸಮಸ್ಯೆಗಳು ಹಾಗೂ ಈ ಔಷಧಗಳು ಉಂಟು ಮಾಡುತ್ತಿದ್ದ ತೀವ್ರ ರೀತಿಯ ಪಾರ್ಶ್ವ ಪರಿಣಾಮಗಳು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಈಗ ದೀರ್ಘ ಕಾಲೀನ ಹೆಪಟೈಟಿಸ್ ಸೋಂಕನ್ನು ಪ್ರತಿ ದಿನ ತೆಗೆದುಕೊಳ್ಳುವ ಮಾತ್ರೆಗಳನ್ನು 2 ರಿಂದ 6 ತಿಂಗಳು ಸೇವಿಸುವುದರಿಂದ ಗುಣಪಡಿಸಬಹುದು. ಆದರೆ ದೌರ್ಭಾಗ್ಯ ಎಂದರೆ ಈ ಕಾಯಿಲೆಗೆ ತುತ್ತಾದ ಅರ್ಧದಷ್ಟು ಜನರಿಗೆ ತಮಗೆ ಈ ಸೋಂಕು ಬಂದಿದೆ ಎಂಬುದೇ ಗೊತ್ತಿರುವುದಿಲ್ಲ.

ಮುಖ್ಯ ಕಾರಣ ಎಂದರೆ ಕೆಲವರಲ್ಲಿ ಕಾಯಿಲೆಯ ಲಕ್ಷಣಗಳು ದಶಕಗಳ ಕಾಲ ಕಾಣಿಸಿಕೊಳ್ಳುವುದೇ ಇಲ್ಲ. ಹಾಗಾಗಿ ಹೆಚ್ಚಿನ ಪಾಶ್ಚಾತ್ಯ ದೇಶಗಳಲ್ಲಿ 18 – 79 ವರ್ಷ ದೊಳಗಿನ ಎಲ್ಲರನ್ನೂ ಅವರಿಗೆ ಲಿವರ್ ಕಾಯಿಲೆಯ ಲಕ್ಷಣಗಳು ಇರಲೀ ಇಲ್ಲದಿರಲೀ ಸೋಂಕಿನ ಬಗ್ಗೆ ಸ್ಕ್ರೀನ್ ಮಾಡುವ ವ್ಯವಸ್ಥೆ ಇದೆ. ಈ ಕಾಯಿಲೆ ಬರುವ ಹೆಚ್ಚಿನ ರಿಸ್ಕ್‌ ಜನರೆಂದರೆ 1945 ರಿಂದ 1965ರ ಮಧ್ಯೆ
ಜನಿಸಿದವರು ಎನ್ನಲಾಗಿದೆ. ಬೇರೆಯವರಿಗಿಂತ ಇವರುಗಳಿಗೆ 5 ಪಟ್ಟು ಜಾಸ್ತಿ ಸೋಂಕು ಬರುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.

ಕಾಯಿಲೆಯ ಲಕ್ಷಣಗಳು: ಮೊದಲೇ ತಿಳಿಸಿದಂತೆ ದೀರ್ಘಕಾಲೀನ ಹೆಪಟೈಟಿಸ್ ಸಿ ಸೋಂಕು ಬಹಳಷ್ಟು ವರ್ಷಗಳು ಕಾಯಿಲೆ ಯ ಲಕ್ಷಣಗಳನ್ನು ತೋರಿಸುವುದೇ ಇಲ್ಲ. ಸೋಂಕು ದೀರ್ಘಕಾಲವಾದ ಮೇಲೆ ಲಿವರ್‌ಗೆ ಹಾನಿ ಉಂಟು ಮಾಡುತ್ತದೆ. ಆಗ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮುಖ್ಯ ಲಕ್ಷಣಗಳೆಂದರೆ: ಒಮ್ಮೆಲೇ ಸುಲಭವಾಗಿ ರಕ್ತ ಸ್ರಾವಾಗುವುದು, ಹಾಗೆಯೇ ದೇಹದ ಹಲವೆಡೆ ಸಣ್ಣ ಸಣ್ಣ ರಕ್ತಸ್ರಾವ ಕಾಣಿಸಿಕೊಳ್ಳುವುದು, ವ್ಯಕ್ತಿಗೆ ಬಹಳ ಸುಸ್ತು ಎನಿಸುತ್ತದೆ. ಹಸಿವು ತೀವ್ರವಾಗಿ ಕುಂಠಿತಗೊಳ್ಳುತ್ತದೆ, ಚರ್ಮ ಮತ್ತು ಕಣ್ಣಿನ ಭಾಗ ಗಳು ಹಳದಿಯ ಬಣ್ಣಕ್ಕೆ ತಿರುಗುವುದು ಅಂದರೆ ಜಾಂಡೀಸ್ ಕಾಣಿಸಿಕೊಳ್ಳುವುದು. ಮೂತ್ರವು ತೀವ್ರವಾದ ಕಪ್ಪು ಅಥವಾ ಹಳದಿ ಬಣ್ಣಕ್ಕೆ ತಿರುಗುತ್ತದೆ.

ಚರ್ಮದ ಹಲವೆಡೆ ತುರಿಕೆ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಭಾಗದಲ್ಲಿ ನೀರಿನ ಅಂಶ ಸೇರಿಕೊಂಡು ಹೊಟ್ಟೆ ಉಬ್ಬರಿಸುತ್ತದೆ ಅಥವಾ ದೊಡ್ಡದಾಗುತ್ತದೆ. ಕಾಲಿನ ಭಾಗ ಊದಿಕೊಳ್ಳುತ್ತದೆ. ಹಸಿವು ತೀವ್ರವಾಗಿ ಕಡಿಮೆ ಆಗಿ ಆಹಾರ ಸೇವನೆ ಕಡಿಮೆ ಆಗುವು ದರಿಂದ ವ್ಯಕ್ತಿಯ ತೂಕ ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಕಾಯಿಲೆಯ ದೀರ್ಘಕಾಲದ ಪರಿಣಾಮವಾಗಿ ಆತನಿಗೆ ಮೆದುಳಿ ನಲ್ಲಿ ತೊಡಕು ಕಾಣಿಸಿಕೊಳ್ಳುವ ಹಂತ ಹೆಪಾಟಿಕ್ ಎನ್ಸಫಲೋಪತಿಗೆ ತಿರುಗುತ್ತದೆ. ಆ ಹಂತದಲ್ಲಿ ಅಂಥ ವ್ಯಕ್ತಿಗೆ ತೀವ್ರ ರೀತಿಯ ಅಸ್ತವ್ಯಸ್ಥತೆ, ಗಾಬರಿ ( Confusion), ನಿದ್ರೆಯ ಮಂಪರು ಹಾಗೂ ಮಾತು ತೊದಲಿಸುತ್ತದೆ. ಹಾಗೆಯೇ ಚರ್ಮದ ಭಾಗದಲ್ಲಿ ದೇಹದ ವಿವಿಧೆಡೆ ರಕ್ತ ನಾಳಗಳು ಎದ್ದು ಬರುವಂತೆ ಕಾಣುತ್ತಿರುತ್ತವೆ.

ಮೊದಲೇ ತಿಳಿಸಿದಂತೆ ಈ ದೀರ್ಘಕಾಲೀನ ಹೆಪಟೈಟಿಸ್ ಸಿ ಸೋಂಕು ಮೊದಲಿನ ಹಂತದಿಂದಲೇ ಮುಂದುವರಿಯುತ್ತದೆ. ಆದರೆ ಆರಂಭಿಕ ಹಂತ ಅಥವಾ ಅಕ್ಯೂಟ್ ಹೆಪಟೈಟಿಸ್ ಹಂತದಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ಆ ಹಂತದಲ್ಲಿ ವ್ಯಕ್ತಿಗೆ ಕಾಯಿಲೆಯ ಬಗ್ಗೆ ಅರಿವೇ ಮೂಡುವುದಿಲ್ಲ. ಕೆಲವರಿಗೆ ಈ ಹಂತದಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿ ಕೊಳ್ಳಬಹುದು.

ಅವೆಂದರೆ ಜಾಂಡಿಸ್, ಸುಸ್ತು, ವಾಂತಿ ಬರುವಂತೆ ಆಗುವುದು, ಜ್ವರ ಮತ್ತು ಮೈ ಕೈ ನೋವು. ಸಾಮಾನ್ಯವಾಗಿ ಈ ಆರಂಭಿಕ ಹಂತ ವೈರಸ್ ಸೋಂಕಿಗೆ ಒಳಗಾಗಿ 1 ರಿಂದ 3 ತಿಂಗಳ ನಂತರ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಅದು 2 ವಾರದಿಂದ 3 ತಿಂಗಳ ವರೆಗೂ ಮುಂದುವರಿಯುತ್ತದೆ. ಆರಂಭಿಕ ಹಂತ ಕಾಣಿಸಿಕೊಂಡ ಎಲ್ಲರಲ್ಲಿಯೂ ದೀರ್ಘಕಾಲೀನ ಸೋಂಕು ಕಾಣಿಸಿಕೊಳ್ಳುತ್ತದೆ ಅಂತೇನಿಲ್ಲ. ಕೆಲವರಲ್ಲಿ ಈ ಆರಂಭಿಕ ಸೋಂಕಿನ ಹಂತದ ನಂತರ ವೈರಸ್ ತನ್ನಿಂದ ತಾನೇ ದೇಹದಿಂದ ಹೊರ ಹೋಗಿ ಬಿಡುತ್ತದೆ.

ಇದನ್ನು ನಾವು Spontaneous Viral Clearance ಎನ್ನುತ್ತೇವೆ. ಆರಂಭಿಕ ಸೋಂಕು ಕಾಣಿಸಿಕೊಂಡು ಶೇ.15 – ಶೇ.25ರಷ್ಟು ಪ್ರಮಾಣದ ವ್ಯಕ್ತಿಗಳಲ್ಲಿ ಈ ರೀತಿಯ Spontaneous clearance ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಇನ್ನೊಂದು ಮುಖ್ಯ ವಿಚಾರ
ಎಂದರೆ ಈ ಆರಂಭಿಕ ಹಂತದಲ್ಲಿ ಕಾಯಿಲೆ ಪತ್ತೆ ಹಚ್ಚಲ್ಪಟ್ಟರೆ ಆಂಟಿವೈರಸ್ ಔಷಧಿಗಳಿಂದ ಚಿಕಿತ್ಸೆೆ ಮಾಡಿ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

ಕಾಯಿಲೆಯ ಕಾರಣಗಳು : ಈ ಕಾಯಿಲೆ ಹೆಪಟೈಟಿಸ್ ಸಿ ವೈರಸ್‌ನಿಂದ ಬರುತ್ತದೆ. ಸೋಂಕಿಲ್ಲದ ವ್ಯಕ್ತಿಯ ರಕ್ತಕ್ಕೆ ವೈರಸ್‌ನಿಂದ ಕಲುಷಿತ ರಕ್ತ ಪ್ರವೇಶ ಪಡೆದಾಗ ಅಂತಹ ವ್ಯಕ್ತಿಗೆ ಹೆಪಟೈಟಿಸ್ ಸಿ ಸೋಂಕು ಬರುತ್ತದೆ. ಪ್ರಪಂಚದಾದ್ಯಂತ ಈ ಸೋಂಕು
ಹಲವಾರು ಜೀನೋಟೈಪ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಇದರಲ್ಲಿ ವಿಜ್ಞಾನಿಗಳು ಮುಖ್ಯವಾಗಿ 7 ಮುಖ್ಯ ಜೀನೋಟೈಪ್‌ಗಳು ಮತ್ತು 67ಕ್ಕೂ ಹೆಚ್ಚು ಉಪಟೈಪ್ ಗಳನ್ನು ಗುರುತಿಸಿದ್ದಾರೆ. ಈ ಜೀನೋಟೈಪ್‌ಗಳು ಮುಖ್ಯ ಏಕೆಂದರೆ ಅವುಗಳ ಚಿಕಿತ್ಸೆ ಬೇರೆ ಬೇರೆ ಟೈಪ್ ಗಳಿಗೆ ಭಿನ್ನವಾಗಿರುತ್ತವೆ. ಕಾಯಿಲೆ ಬರುವ ರಿಸ್ಕ್ ಯಾರಲ್ಲಿ ಜಾಸ್ತಿ? ಆರೋಗ್ಯ ಕಾರ್ಯಕರ್ತರು, ಅದರಲ್ಲಿಯೂ ಕಲುಷಿತ ರಕ್ತವನ್ನು ತೆಗೆಯುವವರಿಗೆ ಅಕಸ್ಮಾತ್ ಸೂಜಿ ಅವರ ದೇಹಕ್ಕೆ ಚುಚ್ಚಿದಾಗ. ಡ್ರಗ್ಸ್ ಅಡಿಕ್ಟ್’‌‌ಗಳಿಗೆ – ಡ್ರಗ್ಸ್ ‌‌ಗಳನ್ನು ಇಂಜೆಕ್ಟ್‌ ಮಾಡಿಕೊಳ್ಳುವವರಿಗೆ. ಏಡ್ಸ್‌ ಸೋಂಕು ಇರುವವರಿಗೆ, ಸೋಂಕಿತ ಸೂಜಿಗಳಿಂದ ದೇಹಕ್ಕೆ ಹಚ್ಚೆ ಬರೆಯಿಸಿಕೊಳ್ಳುವವರಿಗೆ (Tattooing) , 1992 ಕ್ಕಿಂತ ಮೊದಲು ರಕ್ತ ವರ್ಗಾವಣೆ
ಅಥವಾ ಯಾವುದೇ ಅಂಗಾಂಗ ಕಸಿ ಚಿಕಿತ್ಸೆಗೆ ಒಳಗಾದವರಿಗೆ, 1987ಕ್ಕಿಂತ ಮೊದಲು ರಕ್ತದ ಹೆಪ್ಪುಗಟ್ಟುವ ಘಟಕಗಳನ್ನು ಸ್ವೀಕರಿಸಿದವರಿಗೆ, ದೀರ್ಘಕಾಲ ಹೀಮೋಡಯಾಲಿಸಿಸ್ ಚಿಕಿತ್ಸೆಗೆ ಒಳಗಾದವರಿಗೆ, ಹೆಪಟೈಟಿಸ್ ಸಿ ಸೋಂಕು ಇರುವ ಮಹಿಳೆ ಮಗು ಹೆತ್ತಾಗ ಅಂತಹ ಮಗುವಿಗೆ, ಜೈಲಿನಲ್ಲಿ ಇದ್ದವರಿಗೆ, 1945 – 1965ರ ಮಧ್ಯೆ ಜನಿಸಿದವರಿಗೆ – ಈ ವಯಸ್ಸಿನವರೆಗೆ ಹೆಪಟೈ ಟಿಸ್ ಸಿ ಸೋಂಕು ಬರುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.

ಕಾಯಿಲೆ ಉಂಟು ಮಾಡುವ ತೊಡಕುಗಳು: ದೀರ್ಘಕಾಲದ ಹೆಪಟೈಟಿಸ್ ಸಿ ಸೋಂಕು ಹಲವಾರು ತೊಡಕುಗಳಿಗೆ (Compli cations) ಕಾರಣವಾಗಬಲ್ಲದು. ಮುಖ್ಯವಾದದ್ದೆಂದರೆ ಲಿವರ್ ಸಿರೋಸಿಸ್: ದೀರ್ಘಕಾಲದ ಸೋಂಕು ಲಿವರ್‌ನಲ್ಲಿ ಸಿರೋಸಿಸ್ ಎಂಬ ಕಾಯಿಲೆಯನ್ನು ಉಂಟು ಮಾಡುತ್ತದೆ. ಸಿರೋಸಿಸ್ ಎಂದರೆ ಆರೋಗ್ಯವಂತ ಲಿವರ್ ಅಂಗಾಂಶಗಳು ಅನಾರೋಗ್ಯ ಹೊಂದಿ ಲಿವರ್ ನ ಕೆಲಸ ತೀವ್ರವಾಗಿ ಕುಂಠಿತವಾಗುತ್ತದೆ.

ಲಿವರ್ ಕ್ಯಾನ್ಸರ್: ಕೆಲವು ಪರ್ಸಂಟೇಜ್ ಜನರಲ್ಲಿ ಹೆಪಟೈಟಿಸ್ ಸಿ ಸೋಂಕು ಲಿವರ್‌ನಲ್ಲಿ ಕ್ಯಾನ್ಸರ್‌ಗೆ ತಿರುಗುತ್ತದೆ.

ಲಿವರ್ ಫೇಲ್ಯೂರ್: ದೀರ್ಘಕಾಲದ ಲಿವರ್ ಸಿರೋಸಿಸ್ ಕಾಯಿಲೆಯು ಲಿವರ್ ಫೇಲ್ಯೂರ್‌ಗೆ ತಿರುಗಿ ಲಿವರ್‌ನ ಕಾರ್ಯ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಸೋಂಕು ಬರದಿರಲು ಮುನ್ನೆೆಚ್ಚರಿಕೆ ಕ್ರಮಗಳೇನು?ಯಾವುದೇ ಡ್ರಗ್ಸ್‌‌‌ಗಳನ್ನು ಇಂಜೆಕ್ಷನ್ ರೀತಿ ಯಲ್ಲಿ ತೆಗೆದುಕೊಳ್ಳುವ ಹವ್ಯಾಸವಿದ್ದರೆ ಅದನ್ನು ಮೊದಲು ನಿಲ್ಲಿಸಬೇಕು. ದೇಹವನ್ನು ಚುಚ್ಚಿಕೊಳ್ಳುವ ಅಥವಾ ಹಚ್ಚೆ ಹಚ್ಚಿ ಕೊಳ್ಳುವ ಕ್ರಿಯೆಗಳ ಬಗ್ಗೆ ತೀವ್ರ ರೀತಿಯ ಎಚ್ಚರ ವಹಿಸಬೇಕು. ಸರಿಯಾಗಿ ನಿಷ್ಕ್ರಿಯಗೊಳಿಸಿದ ಉಪಕರಣಗಳನ್ನು ಉಪಯೋಗಿ ಸುವವರಲ್ಲಿ ಮಾತ್ರ ಹಚ್ಚೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಈ ರೀತಿಯ ಸೋಂಕು ಬರುವ ಸಾಧ್ಯತೆ ತುಂಬಾ ಜಾಸ್ತಿ.

ಲೈಂಗಿಕ ಕ್ರಿಯೆಯ ಬಗ್ಗೆ ಎಚ್ಚರ ವಹಿಸಬೇಕು. ಒಬ್ಬರಿಗಿಂತ ಜಾಸ್ತಿ ಜನರ ಜೊತೆ ಲೈಂಗಿಕ ಕ್ರಿಯೆ ತೊಡಗಿಕೊಳ್ಳುವವರಲ್ಲಿ ಈ ಸೋಂಕು ಬರುವ ಸಾಧ್ಯತೆ ಜಾಸ್ತಿ ಇರುವುದರಿಂದ ಈ ಹವ್ಯಾಸವನ್ನು ಆದಷ್ಟೂ ತಪ್ಪಿಸಬೇಕು. ಅಪರಿಚಿತರೊಡನೆ ಲೈಂಗಿಕ ಕ್ರಿಯೆ ನಡೆಸುವಾಗ ಕನಿಷ್ಠ ಎಂದರೆ ಕಾಂಡೋಮ್ ಉಪಯೋಗಿಸಬೇಕು.

ಈ ಕಾಯಿಲೆಯ ಚಿಕಿತ್ಸೆ ಹೇಗೆ?
ಹೆಪಟೈಟಿಸ್ ಸೋಂಕಿಗೆ ಆ್ಯಂಟಿವೈರಲ್ ಔಷಧಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ಉದ್ದೇಶ ಎಂದರೆ ದೇಹದಲ್ಲಿರುವ ವೈರಸ್‌ ಗಳನ್ನು ದೇಹದ ಹೊರಗೆ ಹಾಕುವುದು. ಚಿಕಿತ್ಸೆಗೆ ತೊಡಗಿ 12 ವಾರಗಳ ನಂತರ ದೇಹದಲ್ಲಿ ವೈರಸ್ ಇರಬಾರದು ಎಂಬುದು ಈ ಚಿಕಿತ್ಸೆೆಯ ಮೂಲ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಹಲವಾರು ಸಂಶೋಧಕರು ಹಲವು ಹೊಸ ರೀತಿಯ ಔಷಧಗಳು ಮತ್ತು ಮೊದಲೇ ಇದ್ದ ಔಷಧಗಳು – ಇವೆರೆಡನ್ನೂ ಸೂಕ್ತ ಪ್ರಮಾಣದಲ್ಲಿ ಒಳಗೊಂಡು ಚಿಕಿತ್ಸೆ ಮಾಡುತ್ತಿದ್ದಾರೆ. ಹಾಗಾಗಿ ಈಗೀಗ ಚಿಕಿತ್ಸೆೆಯ ಅವಧಿ ಮೊದಲಿಗಿಂತ ಕಡಿಮೆಯಾಗಿದೆ. ಔಷಧಗಳ ಪಾರ್ಶ್ವ ಪರಿಣಾಮಗಳೂ ತೀವ್ರವಾಗಿ ಕಡಿಮೆಯಾಗಿವೆ. ಔಷಧಗಳ ಚಿಕಿತ್ಸಾ ಗುಣವೂ ಜಾಸ್ತಿಯಾಗಿವೆ.

ಕೆಲವೊಮ್ಮೆ 8 ವಾರಗಳಲ್ಲೇ ಚಿಕಿತ್ಸೆ ಪೂರ್ಣಗೊಂಡು ವ್ಯಕ್ತಿ ಗುಣಮುಖನಾಗುತ್ತಾನೆ. ಯಾವ ಔಷಧಗಳನ್ನು ಉಪಯೋಗಿಸ ಬೇಕು ಹಾಗೂ ಎಷ್ಟು ಕಾಲ ಉಪಯೋಗಿಸಬೇಕು ಎಂಬ ಅಂಶವು ಹೆಪಟೈಟಿಸ್ ಸೋಂಕಿನ ಜೀನೋಟೈಪ್‌ಗಳ ಆಧಾರದ ಮೇಲೆ, ಲಿವರ್ ಎಷ್ಟು ತೊಂದರೆಗೆ ಒಳಗಾಗಿದೆ, ಈಗಾಗಲೇ ತೆಗೆದುಕೊಂಡಿರುವ ಚಿಕಿತ್ಸೆ ಹಾಗೂ ವ್ಯಕ್ತಿಯಲ್ಲಿ ಇರುವ ಇನ್ನಿತರ ಕಾಯಿಲೆ ಗಳು – ಈ ಎಲ್ಲವನ್ನೂ ಅವಲಂಬಿಸಿ ನಿರ್ಧಾರವಾಗುತ್ತದೆ. ಈ ಸೋಂಕಿನಲ್ಲಿ ಉಪಯೋಗಿಸುವ ಆ್ಯಂಟಿ ವೈರಲ್ ಔಷಧ ಗಳೆಂದರೆ – ಡಕ್ಲಟಸಾವಿರ್, ಎಲ್ಬಾಸ್ಟಿರ್ ಮತ್ತು ಗ್ರಾಜೋಫ್ರೆವಿರ್‌ಗಳ ಸಂಯುಕ್ತ, ಗ್ಲೆಸಾಪ್ರೆವಿರ್ ಮತ್ತು ಪಿಬ್ರೆಂಟಾಸ್ವಿರ್, ಲೆಟಿಪಾಸ್ವಿರ್ ಮತ್ತು ಸೋಫೋಸ್ಬುವಿರ್‌ಗಳ ಸಂಯುಕ್ತ, ಹಾಗೂ ಓಂಬಿಟಾಸ್ವಿರ್, ಪರಿಟಾಪ್ರೆವಿರ್ ಮತ್ತು ರಿಟೋನವಿರ್
ಮತ್ತು ಡಸಾಬುವಿರ್‌ಗಳ ಕಾಂಬಿನೇಷನ್.

ಲಿವರ್ ಕಸಿ ಚಿಕಿತ್ಸೆ: ಹೆಪಟೈಟಿಸ್ ಸಿ ಸೋಂಕಿನಿಂದ ಲಿವರ್‌ಗೆ ತುಂಬಾ ತೊಂದರೆ ಉಂಟಾಗಿ ಆರೋಗ್ಯವಲ್ಲದ ಜೀವಕೋಶ
ಗಳು ಜಾಸ್ತಿಯಾದಾಗ ಲಿವರ್ ಕಸಿ ಚಿಕಿತ್ಸೆ ಒಂದು ಸಾಧ್ಯತೆ. ರೋಗಿಯ ಹಾಳಾದ ಲಿವರನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಬೇರೆಯ ವ್ಯಕ್ತಿಯ ಆರೋಗ್ಯವಂತ ಲಿವರನ್ನು ಕಸಿ ಮಾಡಿ ಕುದಿಸಲಾಗುತ್ತದೆ. ಇದಕ್ಕೆ ಸರಿಯಾದ ಮ್ಯಾಚಿಂಗ್ ಲಿವರ್ ಸಿಕ್ಕುವುದು ಕಷ್ಟ
ಸಾಧ್ಯವೇ ಸರಿ. ಕಸಿ ಚಿಕಿತ್ಸೆ ಕೈಗೊಂಡ ನಂತರ ಚಿಕಿತ್ಸೆ ಪೂರ್ಣಗೊಳ್ಳುವುದಿಲ್ಲ. ಕಸಿಯಾದ ನಂತರವೂ ಆ್ಯಂಟಿ ವೈರಲ್ ಔಷಧ ಗಳನ್ನು ಕೊಡಬೇಕಾದ ಅವಶ್ಯಕತೆ ಇದೆ. ಇದರ ಉದ್ದೇಶ ಎಂದರೆ ಈ ಲಿವರ್‌ನ ಸೋಂಕಿಗೆ ಕಾರಣವಾಗುವ ಹೆಪಟೈಟಿಸ್ ಸಿ ಉಂಟು ಮಾಡಿದ್ದರೂ ಅದು ಇರುವುದು ವ್ಯಕ್ತಿಯ ರಕ್ತದಲ್ಲಿ. ಹಾಗಾಗಿ ಈ ರಕ್ತದಲ್ಲಿರುವ ವೈರಸ್ ಕಸಿಮಾಡಿಸಿಕೊಂಡ ಲಿವರ್‌ಗೂ ಸೋಂಕನ್ನು ಹಬ್ಬಿಸುವ ಸಾಧ್ಯತೆ ಇದ್ದೇ ಇದೆ. ಹಾಗಾಗಿ ಈ ಆ್ಯಂಟಿ ವೈರಲ್ ಔಷಧಗಳನ್ನು ಕೊಟ್ಟು ಹೊಸದಾದ ಕಸಿ ಮಾಡಿ ಕೂರಿಸಿಕೊಂಡ ಲಿವರ್‌ಗೆ ಸೋಂಕು ಬರದಿರುವಂತೆ ನೋಡಿಕೊಳ್ಳಬೇಕು.

ಲಸಿಕೆಗಳು: ಹೆಪಟೈಟಿಸ್ ಸಿ ವೈರಸ್‌ಗೆ ಇದುವರೆಗೆ ವ್ಯಾಕ್ಸೀನ್ ಲಭ್ಯವಿಲ್ಲ. ಆದರೆ ಹೆಪಟೈಟಿಸ್ ಎ ಮತ್ತು ಬಿ ವೈರಸ್‌ಗಳ ಲಸಿಕೆ ಗಳನ್ನು ವ್ಯಕ್ತಿಗೆ ಕೊಡುವುದು ಸುರಕ್ಷಿತ ಎಂದು ವೈದ್ಯರ ಅಭಿಮತ. ಕಾರಣ ಎಂದರೆ ಹೆಪಟೈಟಿಸ್ ಸಿ ಒಳಗಾದ ಲಿವರ್ ಮತ್ತೆ ಪುನಃ ಹೆಪಟೈಟಿಸ್ ಎ ಮತ್ತು ಬಿ ಸೋಂಕಿಗೆ ಒಳಗಾದರೆ ರಿಪೇರಿ ಮಾಡಲು ಸಾಧ್ಯವಿಲ್ಲದ ಹಾನಿ ಲಿವರ್‌ಗೆ ಆಗುತ್ತದೆ.