Friday, 13th December 2024

ಅನ್ನವನ್ನು ಕಸಿದವರು ಹೆದ್ದಾರಿ ಕ್ರೆಡಿಟ್‌ ಬಿಟ್ಟಾರೆಯೇ ?

ಅರ್ಜುನ್‌ ಶೆಣೈ

ಪ್ರತಾಪಸಿಂಹ! ೯೦ರ ದಶಕದಲ್ಲಿ ಹುಟ್ಟಿದ ನನ್ನಂಥವರಿಗೆ ಈ ಹೆಸರು ಗೊತ್ತಿರುವುದು ಈ ವ್ಯಕ್ತಿ ಒಬ್ಬ ಬರಹಗಾರರಾಗಿದ್ದರು ಎಂಬ ಕಾರಣಕ್ಕೆ. ವಿಶ್ವೇಶ್ವರ
ಭಟ್ಟರು ಮತ್ತು ಪ್ರತಾಪಸಿಂಹರ ಜತೆಯಾಟ ಯಾವೆಲ್ಲ ಪತ್ರಿಕೆಗಳಲ್ಲಿ ನಡೆಯುತ್ತ ಹೋಯಿತೊ, ಇವರಿಬ್ಬರ ಓದುಗಾಭಿಮಾನಿ ಬಳಗ ಇವರೊಂದಿಗೆ ಪತ್ರಿಕೆಯನ್ನೂ ಬದಲಿಸುತ್ತ ಸಾಗಿತು. ಪತ್ರಕರ್ತರಾಗಿ, ಪತ್ರಿಕೆಯ ಸಂಪಾದಕರಾಗಿ ಒಂದು ಸುದ್ದಿಮನೆ ಬಿಟ್ಟು ಇನ್ನೊಂದಕ್ಕೆ ತೆರಳುವುದು ಎಷ್ಟು ಕಷ್ಟವೋ ಅದೇ ರೀತಿ ಓದುಗರಿಗೂ ಒಂದರಿಂದ ಇನ್ನೊಂದಕ್ಕೆ ’ಸ್ವಿಚ್’ ಆಗುವುದು ಬಹಳ ಕಷ್ಟ ಮತ್ತು ನೋವಿನ ಸಂಗತಿ.

ಯಾಕೆಂದರೆ ಪತ್ರಿಕೆ ಕೇವಲ ಹಾಳೆಯಲ್ಲ, ಚಹಾ ಕೇವಲ ಪೇಯವಲ್ಲ. ಇವೆರಡಕ್ಕೂ ಪೂರ್ತಿ ದಿನವನ್ನು ‘ಕಂಟ್ರೋಲ್’ ಮಾಡುವ ತಾಕತ್ತಿರುತ್ತದೆ. ದಿನಪತ್ರಿಕೆಗಳು ಓದುಗರಿಗೆ ಭಾವನಾತ್ಮಕವಾಗಿ ‘ಕನೆಕ್ಟ್’ ಆಗಿರುತ್ತದೆ. ವಾಸ್ತವವೆಂದರೆ ಇವರಿಬ್ಬರ ಬರಹಗಳ ತಾಕತ್ತು ಅಂಥದ್ದಿತ್ತು. ಭಟ್ಟರು ರಾಜಕೀಯ ದೊಂದಿಗೆ ಪ್ರವಾಸ, ಲೌಕಿಕ-ಅಲೌಕಿಕ ವಿಚಾರಗಳ ಕುರಿತು ಬರೆದರೆ, ಅತ್ತ ಪ್ರತಿ ಶನಿವಾರ ಪ್ರಕಟಗೊಳ್ಳುತ್ತಿದ್ದ ‘ಬೆತ್ತಲೆ ಜಗತ್ತು’ ರಾಜಕೀಯ,  ಸಾಮಾಜಿಕ ಬೆಳವಣಿಗೆಗಳನ್ನು ಅಡಿಯಿಂದ ಮುಡಿಯವರೆಗೆ ಎಳೆಎಳೆಯಾಗಿ ವಿಶ್ಲೇಸುತ್ತಿತ್ತು. ಅದರಲ್ಲೂ ಪ್ರತಾಪಸಿಂಹರ ‘ನರೇಂದ್ರ ಮೋದಿ ಯಾರೂ ತುಳಿಯದ ಹಾದಿ’ ಪುಸ್ತಕ ಕನ್ನಡದ ಮನೆಮನಗಳನ್ನು ತಲುಪಿ ‘ಮೋದಿತನ’ವನ್ನು ಬಿತ್ತಿತು.

ಕನ್ನಡದಲ್ಲಿ ಮೋದಿಯವರ ಸಾಧನೆಯನ್ನು ಇತರ ಬರಹಗಾರರು ಬಿಡಿ, ಬಿಜೆಪಿಗರೇ ಮಾಡಿರಲಿಕ್ಕಿಲ್ಲ, ಆ ಮಟ್ಟಿಗೆ ಅದು ಕೆಲಸ ಮಾಡಿತು. ಇನ್ನು ಕೊಡಗಿನ ವೀರಗಾಥೆ, ಸೇನೆಯ ಬಗ್ಗೆ ಆಗಾಗ್ಗೆ ಬರೆದು ದೇಶಪ್ರೇಮವನ್ನು ಜಾಗೃತಗೊಳಿಸುತ್ತಿದ್ದುದರಲ್ಲಿ ಅವರ ಪಾಲು ಬಹಳಷ್ಟಿತ್ತು. ಎಸ್.ಎಂ. ಕೃಷ್ಣರ ಬಳಿಕ ಬಂದ ಸಮ್ಮಿಶ್ರ ಸರಕಾರಗಳ ಅಸಮರ್ಥತೆಯನ್ನು, ಸದನದ ಗದ್ದಲವನ್ನು, ಪಕ್ಷಗಳ ಅಸಡ್ಡೆತನವನ್ನು, ರಾಜಕಾರಣಿಗಳ ಎಲುಬಿಲ್ಲದ ನಾಲಗೆ ಯನ್ನು ತಮ್ಮ ಪದಕೋಶದಲ್ಲಿ ತಳಸೇರಿದ್ದ ಪದಗಳಿಂದಲೇ ಬರೆದು ಇರಿದರು. ಅವರ ಲೇಖನದ ಬಹುತೇಕ ಕೊನೆಯ ಸಾಲುಗಳು ಕಣ್ಣೀರನ್ನೋ, ರೋಷವನ್ನೋ ಉಕ್ಕೇರಿಸುತ್ತಿತ್ತು. ರ್ಶೀಕೆ ಓದಿದ ಓದುಗನನ್ನು ಕೊನೆಯ ಪೂರ್ಣರಾಮ ಕಾಣಿಸಿ, ಮನದಲ್ಲೊಂದು ಪ್ರಶ್ನೆ ಮೂಡಿಸಿದ ಬಳಿಕವೇ ಅಂದಿನ ಅಂಕಣ ನಿರ್ಲಿಪ್ತಗೊಳ್ಳುತ್ತಿತ್ತು.

ಅಂದು… ಇದ್ದಕ್ಕಿದ್ದಂತೆ ಎಲ್ಲೆಡೆ ಒಂದು ಬ್ರೇಕಿಂಗ್ ನ್ಯೂಸ್ ಹಬ್ಬಿತ್ತು. ಪ್ರತಾಪಸಿಂಹ ಪತ್ರಿಕೆ ತೊರೆದು ರಾಜಕೀಯ ಸೇರುವರು ಎಂಬ ಸುದ್ದಿಯದು. ಆ ಸಮಯದಲ್ಲಿ ಈ ಸುದ್ದಿ ಭಾರಿ ಸಂಚಲನವನ್ನು ಮೂಡಿಸಿತ್ತು. ರಾಜಕಾರಣವೆಂದರೆ ಮೂಗು ಮುರಿಯುವ, ಎಂದೂ ಸರಿಯಾಗದ ಅಡ್ಡಾದಿಡ್ಡಿಯ ದಟ್ಟದರಿದ್ರ ‘ವೃತ್ತಿ’ ಎಂದು ಮನಸ್ಸಲ್ಲಿ ಬಲವಾಗಿ ಬೇರೂರಿರುವ ಮತ್ತು ಅದನ್ನು ಅಷ್ಟೊಂದು ನೀಚತೆಗೆ ಕೊಂಡೊಯ್ದಿರುವ ರಾಜಕಾರಣಿಗಳು ನಮ್ಮಲ್ಲಿರುವಾಗ ಒಬ್ಬ ಉತ್ಕೃಷ್ಟ ಬರಹಗಾರ ನೊಬ್ಬನನ್ನು ಕಳೆದುಕೊಳ್ಳುವುದು ಓದುಗರಿಗೆ ಸುತಾರಾಂ ಇಷ್ಟರಲಿಲ್ಲ. ಈ ಸುದ್ದಿಗೆ ಪುಷ್ಟ ಕೊಡುವಂತೆ ವಿಶ್ವೇಶ್ವರ ಭಟ್ಟರು ‘ಮೈಸೂರಿಗೆ ಹೊರಟ ಪ್ರತಾಪ್‌ಗೆ ಶುಭವಾಗಲಿ’ ಎಂಬ ರ್ಶೀಕೆಯ ಲೇಖನವನ್ನು ಬರೆದು ಓದುಗರು ಕೇಳಿಸಿಕೊಂಡ ಸುದ್ದಿ ಕನಸಲ್ಲ ವೆಂದು ಸ್ಪಷ್ಟಪಡಿಸಿದರು. ಓದುಗರಿಗೆ ದೂರವಾದರೂ ಅಂದಿನಿಂದ ಪ್ರತಾಪಸಿಂಹ ಜನತೆಗೆ ಹತ್ತಿರಾದರು. ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಮುನ್ನುಗ್ಗಿದರು.

ಸಂಸದರಾಗಿ ಪ್ರತಾಪಸಿಂಹ ತಾನು ಬರೀ ಬರವಣಿಗೆಗಷ್ಟೆ ಸೀಮಿತ ಎಂದು ಭ್ರಮಿಸಿದ್ದವರನ್ನು ಸುಳ್ಳಾಗಿಸಿದರು. ತಮಗೆ ಸಿಕ್ಕ ಮತಕ್ಕೆ ಜನರ ವಿಶ್ವಾಸ ಕಳೆಯದಂತೆ ನೋಡಿಕೊಂಡರು. ಮೊದಲ ಚುನಾವಣೆಯಲ್ಲಿ ೩೧೬೦೮ ಮತಗಳ ಅಂತರದಿಂದ ಗೆದ್ದರು. ೨೦೧೮ರ ೧೨ನೇ ತಾರೀಕಿಗೆ ವಿಧಾನಸಭಾ
ಚುನಾವಣೆಯ ಪ್ರಚಾರದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ’ ಘೋಷಣೆ ಮಾಡಿದರು. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳ ಬಾಯಿಂದ ಬರುವ ಮಾತನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸುವುದು ಕಡಿಮೆ. ಆದರೆ ಪ್ರಧಾನಿಗಳ ಅಂದಿನ ಆ ಘೋಷಣೆ ಬರೀ ಮಾತಿನ ಭರವಸೆಯಾಗಿ ಉಳಿಯಲಿಲ್ಲ. ಮಾರ್ಚ್ ೨೪ನೇ ತಾರೀಕಿಗೆ ಮೈಸೂರಿಗೆ ಬಂದಿಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ‘ಎಕ್ಸ್‌ಪ್ರೆಸ್ ವೇ’ಗೆ ಗುದ್ದಲಿ ಪೂಜೆ ನೆರವೇರಿಸಿದರು.

ಆಗಲೂ ಚುನಾವಣೆ ಮುಗಿದಿರಲಿಲ್ಲವಾದ್ದರಿಂದ ಇದನ್ನೂ ಚುನಾವಣೆಯ ಗಿಮಿಕ್ಕು ಎಂದೇ ಭಾಸಲಾಯಿತು. ಇದೊಂದು ಹದಿನೈದಿಪ್ಪತ್ತು ವರ್ಷದ ಸುದೀರ್ಘ ಭರ್ಜರಿ ಯೋಜನೆ ಇದ್ದೀತೆಂದು ಲೆಕ್ಕ ಹಾಕಲಾಯಿತು. ಚುನಾವಣೆ ಕಳೆದು ಸಮ್ಮಿಶ್ರ ಸರಕಾರ ಬಂತು. ಆದರೆ ಎಕ್ಸ್‌ಪ್ರೆಸ್ ವೇ ಕಾಮಗಾರಿ ನಿಲ್ಲಲಿಲ್ಲ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪಸಿಂಹರ ಮತ್ತು ನಿಕಟ ಅಭ್ಯರ್ಥಿಯ ನಡುನ ಅಂತರ ಹಿಂದಿನ ಬಾರಿಗಿಂತ ನಾಲ್ಕು
ಪಟ್ಟಾಯಿತು. ೧೩೮೬೪೭ ಮತಗಳ ಅಂತರದಿಂದ ಪ್ರತಾಪಸಿಂಹ ಗೆಲುವು ಸಾಧಿಸಿದರು.

ಎಕ್ಸ್‌ಪ್ರೆಸ್‌ವೇ ವಿಚಾರದಲ್ಲಿ ಜಿದ್ದಿಗೆ ಬಿದ್ದರು. ಬಿಸಿಲಿಗಿಳಿದರು. ತಾವೇ ಖುದ್ದು ಸಮೀಕ್ಷೆಗಿಳಿದರು. ಎಲ್ಲೆಲ್ಲಿ ಏನೇನು ಸಮಸ್ಯೆ ಬಂದೀತು ಎಂದು ಚಿಂತನೆಗೆ
ಶುರುವಾದರು. ಪರಿಹಾರೋಪಾಯಗಳ ಕುರಿತೂ ಆಲೋಚಿಸಿದರು. ಇಂದು ಮೋದಿ ಸರ್ಕಾರದ ಅತ್ಯಂತ ಕಾರ್ಯತತ್ಪರ ಸಚಿವ ಯಾರೆಂದು ಕೇಳಿದರೆ  ಮೊದಲು ಕಾಣಿಸುವುದು ನಿತಿನ್ ಗಡ್ಕರಿ. ಯುಪಿಎ ಅವಧಿಯಲ್ಲಿ ದಿನಕ್ಕೆ ೧೨ ಕಿಲೋಮೀಟರುಗಳಷ್ಟಿದ್ದ ಹೆದ್ದಾರಿ ಕಾಮಗಾರಿಯ ವೇಗವನ್ನು ತಿವಿದು ೩೮ಕ್ಕೂ ಮೇಲಕ್ಕೆ ಕೊಂಡೊಯ್ದಿರುವುದು ಭರವಸೆಯ ಕೈಯ್ಯಲ್ಲಿ ಚುಕ್ಕಾಣಿ ಕೊಟ್ಟಿರುವುದರ ಫಲಿತಾಂಶವೇ ಹೌದು. ಹೆದ್ದಾರಿ ನಿರ್ಮಾಣದಲ್ಲಿ ಮೋದಿ ಸರ ಕಾರದ ಕ್ರಾಂತಿಯನ್ನೇ ಇಂದು ಕಾಣಬಹುದು. ದೂರ ದೃಷ್ಟಿತ್ವದ, ಭಷ್ಯತ್ತಿನ ದೃಷ್ಟಿಕೋನದ ನಿರ್ಮಾಣಗಳು ಬೊಕ್ಕಸಾರೋಗ್ಯಕ್ಕೂ,  ದೇಶಾರೋಗ್ಯಕ್ಕೂ ಚ್ಯುತಿ ತಾರದ ಕಾಮಗಾರಿಗಳು ದೇಶವನ್ನು ಉನ್ನತಿಯತ್ತ ಕೊಂಡೊಯ್ಯುತ್ತಿರುವುದು ಸತ್ಯ.

ಆದರೆ ಅದಕ್ಕೆ ತಕ್ಕ ತಂಡವೂ ಬೇಕು ಎನ್ನುವುದು ಸತ್ಯಾಂಶ. ತಮ್ಮ ಖಾತೆಯ ವಿಚಾರಕ್ಕೆ ಬಂದಾಗ ಗಡ್ಕರಿ ರಾಜಕೀಯ ಮಾಡಿದವರಲ್ಲ. ಗುದ್ದಲಿ
ಪೂಜೆಯಲ್ಲಿ ಅಲ್ಲಿನ ಶಾಸಕ, ಸಚಿವ, ಸರಕಾರ ಯಾವ ಪಕ್ಷದ್ದು ಎಂದು ನೋಡಿ ಕಾರ್ಯವೇಗದ ನಿರ್ಧಾರ ಮಾಡುವುದೂ ಅವರ ವ್ಯಕ್ತಿತ್ವವಲ್ಲ. ಹೆದ್ದಾರಿ ನಿರ್ಮಾಣದಲ್ಲಿ ಇಂದಿನ ದಾಖಲೆಯನ್ನು ನಾಳೆ ಮುರಿಯುವುದು ಅವರ ಏಕಮಾತ್ರ ಗುರಿ. ಗಡ್ಕರಿಯ ಜತೆಗೆ ಇತ್ತ ಪ್ರತಾಪಸಿಂಹರೂ ಹಿಂತಿರುಗಿ ನೋಡಲಿಲ್ಲ. ಬಿಸಿಲು ಮಳೆಗೆ ಲೆಕ್ಕಿಸದೇ ಶ್ರಮಿಸಿದರು. ಜಿದ್ದಿಗೆ ಬಿದ್ದರು.

ಪತ್ರಕರ್ತ ಮುರೂರು ವಿನಾಯಕ ಭಟ್ಟರು ಒಂದು ವಿಡಿಯೋ ಕಾರ್ಯಕ್ರಮದಲ್ಲಿ ಹೆದ್ದಾರಿ ನಿರ್ಮಾಣ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಿಂದ ಹಾಸನದ ಮೂಲಕ ಮಂಗಳೂರು ಮುಟ್ಟುವ ಪ್ರಯಾಣಿಕರಿಗೆ ಆ ಹೆದ್ದಾರಿಯೆಂದರೆ ಅತ್ಯಂತ ಅಸಹನೆಯಿದೆ. ಈ ವಿಚಾರ
ರಾಜಕೀಯ ಹೊಡೆದಾಟಕ್ಕೂ ಆಗಾಗ ಕಾರಣವಾಗಿದ್ದಿದೆ. ಕರಾವಳಿ ಬಿಜೆಪಿಯ ಭದ್ರಕೋಟೆ. ಘಾಟಿ ಎಂದರೆ ಅದು ಬಿಜೆಪಿಯ ಕ್ಷೇತ್ರ ಎಂಬಂತೆ ಕಲ್ಪನೆಯನ್ನು ಮೂಡಿಸಿ ಘಾಟಿ ದುಃಸ್ಥಿತಿಗೆ ಬಿಜೆಪಿಯೇ ನೇರಕಾರಣ ಎಂದು ಬಿಂಬಿಸಲಾಗಿದೆ.

ಆದರೆ ವಾಸ್ತವ ಅದಲ್ಲ, ಹಾಸನದಿಂದ ಸಕಲೇಶಪುರದ ನಡುವಿನ ಈ ೪೫ ಕಿಲೋಮೀಟರ್ ರಸ್ತೆ ೨೦೧೪ರಿಂದ ನಡೆಯುತ್ತಲೇ ಇರುವ ಈ ಕಾಮಗಾರಿ ಬರುವುದು ಹಾಸನ ಕ್ಷೇತ್ರದ ಸಂಸದರಾದ ಪ್ರಜ್ವಲ್ ರೇವಣ್ಣರ ವ್ಯಾಪ್ತಿಗೆ! ಇದೀಗ ಈ ರಸ್ತೆ ಕಾಮಗಾರಿ ಶುರುವಾಗಿ ಎಂಟು ವರ್ಷ ಕಳೆದೇ ಹೋಗಿದೆ. ಕಾಮಗಾರಿ ಇನ್ನೂ ನಡೆಯುತ್ತಲಿದೆ. ಕೆಲಸದ ವೇಗ, ಅಭಿವೃದ್ಧಿ ಟ್ರ್ಯಾಕ್ ಮಾಡುವವರೇ ಇಲ್ಲ. ಇದಕ್ಕೆ ಕಾರಣರು ಯಾರು? ಇಷ್ಟೇ ಅಲ್ಲ, ಇನ್ನೂ ಇಂತಹ ಅನೇಕ ಸಂಸದರ ನಿಷ್ಕ್ರಿಯತೆಯ ಪರಿಣಾಮವಾಗಿ ಕಾಮಗಾರಿಗಳು ನನೆಗುದಿಗೆ ಬಿದ್ದಿರುವ ಅನೇಕ ನಿದರ್ಶನಗಳು ಸಿಕ್ಕಾವು.

ಆದರೆ ಇತ್ತ ಪ್ರತಾಪಸಿಂಹರ ಸ್ಥಿತಿ ನೋಡಿ. ಬೆಂಗಳೂರಿನಿಂದ ಮೈಸೂರಿನ ಕಡೆಗೆ ಸಾಗುವ ಯಾವ ಜಿಲ್ಲೆಯಲ್ಲೂ ಬಿಜೆಪಿಯ ಪ್ರಾಬಲ್ಯವಿಲ್ಲ. ೯೦೦೦ ಕೋಟಿ ರುಪಾಯಿ ವೆಚ್ಚದ ೧೧೭ ಕಿಲೋಮೀಟರ್ ವ್ಯಾಪ್ತಿಯ ಈ ಹೆದ್ದಾರಿ ೪೯ ಅಂಡರ್‌ಪಾಸ್, ೧೩ – ಓವರ್, ೪ ರೈಲ್ವೇ – ಓವರ್, ೪೪ ಕಿರುಸೇತುವೆಗಳು, ೧೯ ಸೇತುವೆಗಳು ಒಳಗೊಂಡಿರುವಾಗ ಎಂತೆಂತಹ ಸವಾಲುಗಳು ಎದುರಾಗಿದ್ದೀತೆಂದು ಊಹಿಸಬಹುದು.

ಇಂದು ಇದೇ ಪ್ರತಾಪಸಿಂಹರ ಬೆವರನ್ನು ತಮ್ಮದು ಎಂಬ ದುಸ್ಸಾಹಸಕ್ಕೆ, ಕ್ಷುಲ್ಲಕ ರಾಜಕಾರಣಕ್ಕೆ ಕೆಲವರು ಇಳಿದಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಹಿಂದಿನ ಪರಿಶ್ರಮ ತಮ್ಮದು ಎಂಬಂತೆ ಕಪಟವಾಡುತ್ತಿದ್ದಾರೆ. ನೆಟ್ಟಗೆ ತಮ್ಮದೇ ಕ್ಷೇತ್ರದಲ್ಲಿ ಶಾಸಕನಾಗಲು ಯೋಗ್ಯತೆಯಿಲ್ಲದವರೂ ಇದರ ಕ್ರೆಡಿಟ್ ಬಯಸುತ್ತಿದ್ದಾರೆ. ಸತ್ಯ ಒಂದು ಪ್ರದಕ್ಷಿಣೆಹಾಕುವುದರೊಳಗೆ ಸುಳ್ಳು ಊರೆಲ್ಲ ಸುತ್ತಿರುತ್ತದೆಯಂತೆ, ಹಾಗೇ ಸಿಕ್ಕಸಿಕ್ಕ ಮೈಕಿನೆದುರು ಪುಂಗಿಯೂದುತ್ತಿದ್ದಾರೆ. ಕೇಂದ್ರದಲ್ಲಿ ಒಂಬತ್ತು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ.

ಮೈಸೂರು- ಬೆಂಗಳೂರಿನಲ್ಲಿ ಬಿಜೆಪಿಯ ಸಂಸದರಿರುವಾಗ, ತುಷ್ಟೀಕರಣದ ರಾಜಕಾರಣ ಮಾಡುವ ಇವರು ಅದ್ಯಾವಾಗ, ಎಲ್ಲಿಂದ ಎದ್ದು ಹಾರೆಗುದ್ದಲಿ ತಂದು ಕೆಲಸ ಶುರು ಮಾಡಿದರೆಂದೇ ಸ್ಪಷ್ಟವಾಗುತ್ತಿಲ್ಲ. ಎರಡು ತಿಂಗಳಲ್ಲಿ ಎದುರಾಗುವ ಚುನಾವಣೆ ಸುಳ್ಳಿನ ಕಂತೆಯ ಗಂಟನ್ನು ಬಿಚ್ಚಲು ಅಣಿಯಾಗುವಂತಿದೆ ಇವರ ಮಾತಿನ ಮೋಡಿ. ಒಬ್ಬ ಜನಪ್ರತಿನಿಧಿ ನಿರಂತರ ಕೆಲಸವೊಂದರ ಪ್ರಗತಿಯ ಹಿಂದೆ ಬಿದ್ದರೆ ಅದರ ಫಲಿತಾಂಶವೇನು ಎಂದು
ಪ್ರತಾಪಸಿಂಹ ಸಾರಿ ಸಾರಿ ಹೇಳಿದ್ದಾರೆ. ಇಚ್ಛಾಶಕ್ತಿಯೊಂದಿದ್ದರೆ ಅಸಾಧ್ಯದ ಕಾರ್ಯವೇನೂ ಇಲ್ಲ ಎಂದು ಸಾಬೀತುಪಡಿಸಿದ್ದಾರೆ.

ಬೇರೆ ಪಕ್ಷ ಬಿಡಿ, ಮಂಗಳೂರು, ಬೆಂಗಳೂರಿನ ಜನರೇ ನಮಗೂ ಇಂತಹ ಸಂಸದರು ಬೇಕು ಎಂದು ಹಲುಬುತ್ತಿದ್ದಾರೆ. ದೇಶದ ಅನೇಕ ಗಣ್ಯರು ಜಾಲತಾಣಗಳಲ್ಲಿ ಎಕ್ಸ್‌ಪ್ರೆಸ್‌ವೇನ ಕಾಮಗಾರಿ ಮತ್ತು ವಿನ್ಯಾಸವನ್ನು ಕೊಂಡಾಡುತ್ತಿದ್ದಾರೆ. ವಾಸ್ತವ ಹೀಗಿರುವಾಗ ಪ್ರತಾಪಸಿಂಹರ ಬೆವರಿನ -ಲವನ್ನು ಕಾಂಗ್ರೆಸು ಮತ್ತು ಜೆಡಿಎಸ್ಸು ಕದಿಯಲು ಹೊರಟಿರುವುದು ಹತಾಶೆಯ ಪರಮಾ  ವಧಿಯಂತೆ ಕಾಣಿಸುತ್ತದೆ. ಬಡಮಕ್ಕಳ ತಟ್ಟೆಯನ್ನು ಕಸಿದವರು ಈಗ ಹೆದ್ದಾರಿಯ ಕ್ರೆಡಿಟ್ಟನ್ನು ಕಸಿಯುತ್ತಿರುವುದು ಅನಿರೀಕ್ಷಿತವಾದುದೇನಲ್ಲ ಬಿಡಿ.

ಇಂತಹ ಅನಗತ್ಯ ವಿವಾದಗಳಿಗೆ ಹೆದರುವ ಅಗತ್ಯವಿಲ್ಲ. ಅಂತಿಮವಾಗಿ ಎಲ್ಲವನ್ನೂ ನಿರ್ಧರಿಸುವವರು ಮತದಾರರೇ ಹೊರತು ಮೈಕಾಸುರರಲ್ಲ. ವಾಸ್ತವವನ್ನು ಅರ್ಥೈಸಿಕೊಳ್ಳಲಾಗದ ಮೂಢನಲ್ಲ ಮತದಾರ. ಅಷ್ಟಕ್ಕೂ ಹಾದಿಬೀದಿಯ ಟಗರು, ನರಿ, ತೋಳಗಳಿಗೆ ಪ್ರತಾಪಸಿಂಹ ಹೆದರುವ ಅಗತ್ಯವಿಲ್ಲ. ಟಗರುಗಳು ತಿವಿಯಲು ಬಂದಾವು, ನರಿಗಳು ಕೆಡವಲು ಉಪಾಯ ಹೂಡಿಯಾವು, ತೋಳಗಳು ಊಳಿಟ್ಟಾವು. ಆದರೆ ಸಿಂಹ ಸಿಂಹವೇ ಅಲ್ಲವೇ?