ದಾಸ್ ಕ್ಯಾಪಿಟಲ್
dascapital1205@gmail.com
ಏತದ್ದೇಶ ಪ್ರಸೂತಸ್ಯ ಸಕಾಶಾದಾಗ್ರ ಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ ||
ಹಿಂದೊಂದು ದಿನ, ಈ ದೇಶದ ಬುದ್ಧಿಜೀವಿಗಳಿಂದ ಪ್ರಪಂಚದ ಸರ್ವರೂ ತಮ್ಮ ಚಾರಿತ್ರ್ಯವನ್ನು ಚಿತ್ರಿಸಿಕೊಂಡರು ಎಂದು ಮನು ಹೇಳುತ್ತಾನೆ. ನಮ್ಮ ಯಾವುದೇ ಜ್ಞಾನಕ್ಕೆ, ಅರಿವಿಗೆ ಪ್ರತ್ಯಕ್ಷ, ಅನುಮಾನ, ಶಾಸ್ತ್ರ ಅಥವಾ ಶಬ್ದ ಅಥವಾ ಆಗಮ ಆಧಾರ ವಾಗಿರುತ್ತದೆ.
ಇವುಗಳಲ್ಲಿ ಪ್ರತ್ಯಕ್ಷ ಮತ್ತು ಅನುಮಾನ ಬಹುಮುಖ್ಯ. ಪ್ರತ್ಯಕ್ಷವನ್ನು ಮಾತ್ರ ಸ್ವೀಕರಿಸುವ ಚಾರ್ವಾಕರ ಜ್ಞಾನ ಮೀಮಾಂಸೆಯು ಎಲ್ಲ ದಾರ್ಶನಿಕರು ಒಪ್ಪಿರುವ ಅನುಮಾನವನ್ನು ಅಲ್ಲಗಳೆಯುತ್ತಾ ಹೋಗುವುದನ್ನೇ ಧೋರಣೆಯಾಗಿಸಿಕೊಂಡಿದೆ. ಆದರೆ, ಅನುಮಾನವೂ ಪ್ರಧಾನ. ಹೊಗೆಯಿದ್ದಲ್ಲಿ ಬೆಂಕಿ ಇರಲೇಬೇಕು ತಾನೆ? ವ್ಯಾಪ್ತಿಯೇ ಅನುಮಾನಕ್ಕೆ ಆಧಾರ. ಇಂಥ ವ್ಯಾಪ್ತಿಯೇ ಸಂಶಯಾತೀತ ಜ್ಞಾನಕ್ಕೆ ಮೂಲಕಾರಣವಾಗಿರುತ್ತದೆ.
ಆಗಲೇ ಸತ್ಯದ ದರ್ಶನವಾಗುವುದು. ಆದರೆ, ಚಾರ್ವಾಕರಿಗೆ ಅದು ಸಹ್ಯವಾಗದೇ ಎಲ್ಲವನ್ನೂ ಊಹೆಯೆಂದೇ ಕರೆಯುತ್ತಾ ರೆಂಬುದು ಸ್ಪಷ್ಟ. ಕಣ್ಣಿಗೆ ಕಂಡದ್ದು ಮಾತ್ರ ಸತ್ಯವೆಂಬುದು ಅವರ ವಾದ. ಕಣ್ಣಿಗೆ ಕಾಣದ್ದೂ ಸತ್ಯವೆಂಬ ಅರಿವು ಅಷ್ಟು ಸುಲಭಗ್ರಾಹ್ಯವಲ್ಲ. ಕಾಷ್ಠದಲ್ಲಿ ಬೆಂಕಿ, ಹಾಲಿನಲ್ಲಿ ತುಪ್ಪ, ಗಾಳಿಯಲ್ಲಿ ಶಕ್ತಿ, ನೀರಿನಲ್ಲಿ ಬೆಂಕಿಯಿದೆ, ಪ್ರಾರ್ಥನೆಯಲ್ಲಿ ಸುಖ ವಿದೆ, ಧ್ಯಾನದಲ್ಲಿ ಏಕಾಗ್ರತೆಯಿದೆ- ಇವುಗಳೆಲ್ಲಾ ಅನುಭವಿಸಿಯೇ ಸತ್ಯಪ್ರಮಾಣವೆಂದು ತಿಳಿಯಬೇಕೋ? ಅನುಭವಜನ್ಯ ನುಡಿಗಳು ಸಾಕೋ?
***
ವಿವೇಕಾನಂದ, ಗಾಂಧಿ ಮುಂತಾದವರು ಭಾರತೀಯ ದರ್ಶನವು ಕೇವಲ ಚಿಂತನ ಪರವಲ್ಲ. ಕ್ರಿಯಾಪರವಾಗಿದೆ. ಆದುದರಿಂದ ವೇದಾಂತವು ಹೋರಾಟವನ್ನು, ಕ್ರಿಯೆ ಯನ್ನು ಪರಿಶ್ರಮಪೂರ್ವಕ ಸಾಧನೆಯನ್ನು ಪ್ರೇರೇಪಿಸುತ್ತದೆ ಎನ್ನುತ್ತಾರೆ. ಕೃಣ್ವಂತೋ ವಿಶ್ವಮಾರ್ಯಂ- ವಿಶ್ವವನ್ನೇ ಸುಸಂಸ್ಕೃತಗೊಳಿಸೋಣ.
ತೇಜಸ್ವಿನಾವಧಿತಮಸ್ತು, ಮಾ ವಿದ್ವಿಷಾವಹೈ- ತೇಜಸ್ವಿಯಾಗಿರಲಿ ನಾವು ಓದುವ ಓದು, ವಿದ್ವೇಷವೆಮ್ಮೊಳಗೆ ಮೂಡದಿರಲಿ.
ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ- ನಾವು ಉದಾರ ಚಾರಿತ್ರ್ಯವುಳ್ಳವರಾಗಿ, ವಿಶ್ವವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬ, ಎಂಬ ಭಾವ ಬೆಳೆಸೋಣ.
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ- ಹೆತ್ತ ತಾಯಿ ಹೊತ್ತ ನೆಲ ಸ್ವರ್ಗಕ್ಕಿಂತ ಮಿಗಿಲು. ಭದ್ರಂ ಕರ್ಣೇಭಿಃ ಶ್ರುಣು ಯಾಮ- ನಾವು ಕಿವಿಯಿಂದ ಒಳ್ಳೆಯ ಶಬ್ದಗಳನ್ನೇ ಕೇಳೋಣ; ಕಣ್ಣಿಂದ ಒಳ್ಳೆಯದನ್ನೇ ನೋಡೋಣ; ಕಟ್ಟುಮಸ್ತಾದ ದೇಹ ಪಡೆದ ನಾವು ಒಳ್ಳೆಯ ಕಾರ್ಯ ಮಾಡೋಣ. ಸತ್ಯಂ ವದ; ಧರ್ಮಂ ಚರ- ಸತ್ಯವನ್ನೇ ನುಡಿಯೋಣ; ಧರ್ಮಮಾರ್ಗದಲ್ಲಿ ನಡೆಯೋಣ. ಏಕಂ ಸತ್ ವಿಪ್ರಾಃ ಬಹುಧಾ ವದಂತಿ- ಒಂದೇ ಒಂದಾದ ವಿಶ್ವನಿಯಾಮಕ ಶಕ್ತಿಯನ್ನು, ಅವರವರ ಭಾವಕ್ಕೆ ಅವರವರ ಭಕುತಿಗೆ ಅನುಗುಣವಾಗಿ, ಹಲವು ಹೆಸರಿನಿಂದ ಕರೆಯಲಾಗಿದೆ.
ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ – ಹರಿಹರರಲ್ಲಿ ಭೇದವಿಲ್ಲ. ಶಿವನ ಹೃದಯವೇ ವಿಷ್ಣು, ವಿಷ್ಣುವಿನ ಹೃದಯವೇ ಶಿವ. ಅನೇಕತೆಯಲ್ಲಿ ಹಿಂದೂಧರ್ಮದ ವಿಶೇಷತೆಯಿದೆ. ಧರ್ಮಸ್ಥಳದ ದೇವರು ಶಿವ, ಅರ್ಚಕ ವೈಷ್ಣವ,
ಧರ್ಮಾಧಿಕಾರಿ ಜೈನರು. ವೇದಗಳೇ ಹಿಂದೂಧರ್ಮದ ಆಧಾರಸ್ತಂಭ. ಪ್ರಾಚೀನ ಭಾರತದ ಜ್ಞಾನದ ನಿಧಿಗಳಿವು.
ಅಹಿಂಸೆ, ಸತ್ಯ, ಆಸ್ತೇಯ, ನೈರ್ಮಲ್ಯ, ಇಂದ್ರಿಯ ನಿಗ್ರಹ- ಇವು ಹಿಂದೂಗಳ ಸಾಮಾನ್ಯಧರ್ಮ. ಊರ್ಧ್ವಬಾಹುಃ ವಿರೋಮ್ಯೇಷಃ, ನ ಚ ಕಶ್ಚಿತ್ ಶ್ರುಣೋತಿ ಮಾಂ |
ಧರ್ಮಾತ್ ಅರ್ಥಶ್ಚ ಕಾಮಶ್ಚ ಸ ಕಿಮಥಂ ನ ಸೇವ್ಯತೆ ||
–
ಹಣವನ್ನು ಗಳಿಸಿ, ಕಾಮಸುಖ ಅನುಭವಿಸಿ, ಧರ್ಮಮಾರ್ಗದಲ್ಲಿಯೇ ಅದನ್ನು ಪಡೆಯಲು ಸಾಧ್ಯವಿರುವಾಗ, ಧರ್ಮವನ್ನು ಮೀರಿ ಯಾಕೆ ಹೋಗುತ್ತೀರಿ? ಈ ಮಾತನ್ನು ನಾನು ಕೈಯೆತ್ತಿ ಸಾರಿದರೂ ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ವ್ಯಾಸರು. ಪರಧರ್ಮ
ಸಹಿಷ್ಣುತೆ ಹಿಂದೂಧರ್ಮದ ಹೆಗ್ಗಳಿಕೆ. ಈ ಧರ್ಮದ ತತ್ವಕ್ಕೆ, ಮೌಲ್ಯಗಳಿಗೆ ಪಾಶ್ಚಾತ್ಯರು ಮಾರು ಹೋದವರಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಅದರಲ್ಲಿ ಮುಸ್ಲಿಮರೂ, ಕ್ರೈಸ್ತರೂ ಇದ್ದಾರೆ. ಈ ಧರ್ಮದ ಸಾರವನ್ನು ಜಗತ್ತಿನಾದ್ಯಂತ ಪಸರಿಸಿದವರು ಇದ್ದಾರೆ. ಪ್ರಚಾರ ಮಾಡಿದವರಿದ್ದಾರೆ. ಮಾನವ ಮನಸ್ಸಿನ ಅಧ್ಯಯನದಲ್ಲಿ ಭಾರತವು ಜಗತ್ತಿನ ಯಾವ ದೇಶಕ್ಕೂ ಹಿಂದುಳಿದಿಲ್ಲ. ಭಾಷೆ, ಧರ್ಮ, ಪುರಾಣ ಕಥೆಗಳು, ತತ್ತ್ವಶಾಸ, ಕಾನೂನು, ರೂಢಿ-ರಿವಾಜು, ಕಲೆ, ವಿಜ್ಞಾನ ಇವೇ ಮುಂತಾದ ಯಾವ ವಿಶೇಷ ರಂಗದಲ್ಲಾದರೂ ನೀವು ಅಧ್ಯಯನ ಮಾಡಬಯಸಿದಲ್ಲಿ ಭಾರತಕ್ಕೆ ಹೋಗಿ.
ಏಕೆಂದರೆ ಭಾರತದಲ್ಲಿ ಮಾನವೇತಿಹಾಸದ ಅಧ್ಯಯನಕ್ಕೆ ಬೇಕಾದದ್ದೆಲ್ಲಾ ಸಮಗ್ರವಾಗಿ ಸಂಗ್ರಹಿಸಲ್ಪಟ್ಟಿದೆ- ಇದು ಹಿಂದೂ ಸಂಸ್ಕೃತಿಯನ್ನು ಗಾಢವಾಗಿ ಅಧ್ಯಯನ ಮಾಡಿ, ಮೋಕ್ಷಮುಲ್ಲರ್ ಭಟ್ಟನೆಂದೇ ಕರೆದುಕೊಂಡ ಮ್ಯಾಕ್ಸ್ ಮುಲ್ಲರ್ ಹೇಳಿದ ಮಾತು. ಕ್ರಾಂತದೃಷ್ಟಿ, ಪೂರ್ಣಸತ್ತ್ವ, ವಿಶ್ವಮೈತ್ರಿ- ಇವು ಹಿಂದೂಧರ್ಮದಲ್ಲಿವೆ.
ಯತೋ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧಮಃ ಯಾವುದನ್ನು ನಂಬಿದರೆ ದಿನ-ದಿನಕ್ಕೂ ನಮ್ಮ ಅಭ್ಯುದಯ ಹಾಗೂ ಅಂತ್ಯದಲ್ಲಿ ಮೋಕ್ಷ ಅಂದರೆ ಸಂಸಾರ ಬಂಧನದಿಂದ ಬಿಡುಗಡೆ ಒದಗುವುದೋ ಅದೇ ನಿಜವಾದ ಧರ್ಮ. ವಿಶ್ವವೇ ನನ್ನ ಮನೆ, ಮಾನವಕುಲವೇ ನನ್ನ ಕುಟುಂಬ ಎಂಬ ವಿಶ್ವಭ್ರಾತೃತ್ವ ಸಾರುವ ಧರ್ಮವೇ ಹಿಂದೂಧರ್ಮ. ಅನ್ಯಧರ್ಮದ ದೇವರನ್ನು ಸೈತಾನನೆಂದು ಹಿಂದೂಧರ್ಮ ಎಂದೂ ಹೇಳಿಲ್ಲ. ಹೇಳುವುದೂ ಇಲ್ಲ. ಷಹಜಹಾನ್ ಮಗ ದಾರಾ-ಶಿಕೊ ಉಪನಿಷತ್ತುಗಳನ್ನು ಫಾರ್ಸಿ ಭಾಷೆಗೆ ಅನುವಾದಿಸಿದ್ದಾನೆ.
ರಾತ್, ಕೀತ್, ಮೆಕ್ಡೋನಲ್, ಮ್ಯಾಕ್ಸ್ ಮುಲ್ಲರ್ ಹಿಂದೂ ಸಂಸ್ಕೃತಿ, ವೇದ ವ್ಮಾಯಕ್ಕೆ ಮಾರುಹೋಗಿ ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ದೇವಯಜ್ಞ, ಬ್ರಹ್ಮಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯಯಜ್ಞ- ಐದು ಬಗೆಯ ಯಜ್ಞಗಳು ಹಿಂದೂ
ಧರ್ಮದಲ್ಲಿ ಮಹತ್ತ್ವವನ್ನು ಪಡೆದಿವೆ. ಪ್ರತಿಯೊಂದೂ ಕರ್ಮವನ್ನೂ ಯಜ್ಞವಾಗಿಸು ಎನ್ನುತ್ತಾನೆ ಶ್ರೀಕೃಷ್ಣ. ಒಂದೊಂದು ಕರ್ಮವೂ ಆಧ್ಯಾತ್ಮಿಕ ಮುಖದಿಂದ ಕೂಡಿ ಭಗವಂತನ ಪೂಜೆಯಾದಾಗ ಅದು ಯಜ್ಞ.
ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯ ಯಜ್ಞ, ಜ್ಞಾನಯಜ್ಞಗಳು ಹಿಂದೂಧರ್ಮ ಉಲ್ಲೇಖಿಸಿದೆ. ಇವುಗಳನ್ನಾ ಚರಿಸಿದರೆ ಬದುಕು ಸುಖ ಶಾಂತಿ ನೆಮ್ಮದಿಯಿಂದಿರುತ್ತದೆ. ಯಜ್ಞ ಯಾಗಾದಿಗಳಿಂದ ಸಮೃದ್ಧಿಯನ್ನು ಪಡೆಯಬಹುದೆಂದು ಗೀತೆ ಹೇಳುತ್ತದೆ. ತೀರ್ಥೀಕುರ್ವಂತಿ ತೀರ್ಥಾನಿ- ತೀರ್ಥಪುರುಷರು ತೀರ್ಥಸ್ಥಳವನ್ನೂ ಪವಿತ್ರಗೊಳಿಸುತ್ತಾರೆ.
ಸಾಧುಸಂತರ ಸಂಗದಿಂದ ಭಗವದನುಗ್ರಹ ಸಾಧ್ಯವೆನ್ನುವುದಕ್ಕೆ ವಿವೇಕಾನಂದರ ಜೀವನವೇ ಜ್ವಲಂತ ನಿದರ್ಶನ. ಸರ್ವವ್ಯಾಪೀ ನಿರಾಕಾರ, ಅಮೂರ್ತ, ಆದರೆ ಜೀವಂತ, ಪ್ರತಿ ಚೈತನ್ಯದಲ್ಲೂ ದೇವರ ಅಸ್ತಿತ್ವವನ್ನೂ ಅಪರಿಮಿತ ಬಲಾಢ್ಯ ಶ್ರದ್ಧೆ, ಭಕ್ತಿ, ಧ್ಯಾನ- ಇವು ಎಂಥಾ ಪೊಳ್ಳು ನಂಬಿಕೆಗಳನ್ನು ತಿಂದು ಬಿಡುತ್ತದೆ. ಹಿಂದೂ ಶ್ರದ್ಧೆ ಎಂಬುದು ಎಲ್ಲವನ್ನೂ ನುಂಗುವ ಕೆಸರು- ಕ್ವಾಗ್ ಮ್ಯೆಲ್, ಈ ದೇಶದಲ್ಲಿ ಬಂದ ಯಾವ ಹೊರಗಿನದೂ ಜೀರ್ಣವಾಗಿ ಬಿಡುತ್ತದೆ ಎಂದೂ ಒಬ್ಬ ಪಾದ್ರಿ ಬರೆದುಬಿಟ್ಟಿದ್ದಾನೆ.
ಈ ಧರ್ಮಕ್ಕೆ ಸ್ವಂತಿಕೆಯ ಭಯ, ಸದಾ ಪ್ರಶ್ನೆಯಾಗಿ ಉಳಿಯುವ ಭಯ, ನಿರಂತರ ಗಂಡಾಂತರ ಭಯ, ಸರ್ವನಾಶ ಭಯ- ಇವು ಈ ಧರ್ಮಕ್ಕಿಲ್ಲ. ಕೆಟ್ಟರೂಢಿಗಳನ್ನು, ಅಸಂಸ್ಕೃತ ಅಭ್ಯಾಸಗಳನ್ನು, ಸಂಸ್ಕಾರಹೀನ ನಿತ್ಯಬದುಕನ್ನು ಈ ಧರ್ಮ ಎಂದೂ
ಬೋಧಿಸಲ್ಲ. ಬಳೆ ತೊಡಬೇಡ; ಕುಂಕುಮ ಇಡಬೇಡ; ತುಂಡು ಲಂಗ ಹಾಕಿಕೋ; ತಲೆಗೂದಲು ಕತ್ತರಿಸು; ಹೂ ಮುಡಿಯಬೇಡ; ಸದಾ ಮೈಗೆ ಅಂಟಿಕೊಳ್ಳುವ ಪ್ಯಾಂಟು ಧರಿಸು; ಸಂಸ್ಕೃತ ದ್ವೇಷಿಸು: ಕನ್ನಡ ಮತಾಂತರ ಬೇಡ; ಇಂಗ್ಲಿಷೇ ಮಾತಾಡು; ಮನೆ ಯಲ್ಲೂ ಚಪ್ಪಲಿ ಧರಿಸು; ಕಲ್ಲು, ಲೋಹ ವಿಗ್ರಹ ಪೂಜೆ ಬೇಡ, ಪೋಟೋ ಮನೆಯಲ್ಲಿ ಹಾಕಬೇಡ- ಎಂದೆಲ್ಲಾ ದುಷ್ಪ್ರ ಯತ್ನಗಳಿಂದ ತಾತ್ಕಾಲಿಕವಾಗಿ ಹಿಂದೂಧರ್ಮಕ್ಕೆ ಹಾನಿಯಾದೀತು, ಆಗುತ್ತಿದೆ. ಆದರೆ ಈ ಬಾಹ್ಯಚಿಹ್ನೆಗಳಲ್ಲಿ ಹಿಂದುತ್ವದ ಚಿಹ್ನೆಯಿಲ್ಲ.
ಇದೆಯೆಂದು ಭಾವಿಸಿ ನಾಶಮಾಡಲೆತ್ನಿಸಿದರೆ ಅದು ಹೃದಯಾಂತರಾಳದ ಶ್ರದ್ಧೆಯನ್ನು ಇನ್ನಷ್ಟು ಬಲಗೊಳಿಸುತ್ತಲೇ ಹೋಗುತ್ತದೆ. ಯಾರನ್ನೂ ದ್ವೇಷಿಸದೆ, ಎಲ್ಲವನ್ನೂ ಪ್ರೀತಿಸುತ್ತಾ, ಮೋಕ್ಷಮಾರ್ಗವನ್ನು ತಾನೇ ಹುಡುಕಿಕೊಂಡು ತಾನಾಗಿ ವಿಕಸನ ಹೊಂದುವುದರಲ್ಲಿಯೇ ಹಿಂದೂ ಸ್ವಂತಿಕೆಯಿದೆ. ಹಿಂದೂ ಧರ್ಮ, ಜೀವನ ಶೈಲಿ, ಅದರ ಆತ್ಮ, ಸ್ವಂತಿಕೆಯೆಂಬುದು ಕಲ್ಲುಕಟ್ಟಡಗಳ ಮೇಲೂ ಮೊಂಡುಗ್ರಹಿಕೆಗಳ ಶಾಸನಗಳ ಮೇಲೂ, ಪ್ರಶ್ನಾರ್ಹ ಪ್ರವಾದಿಗಳ ಮೇಲೂ, ನಿರಂತರ ವಿಶ್ವಾಕ್ರ ಮಣಗಳ ಮೇಲೂ, ಅವೈಜ್ಞಾನಿಕ ನಂಬುಗೆ, ಅಪ್ಪಣೆಗಳ ಮೇಲೂ ನಿಂತಿಲ್ಲ.
ಸಹನೆ ಸೌಹಾರ್ದತೆ ಸಾಮರಸ್ಯವೆಂಬುದು ಹಿಂದೂಗಳ ರಕ್ತದಲ್ಲೇ ಸಮ್ಮಿಳಿತಗೊಂಡ ಶ್ರೇಷ್ಠ ಅಂಶಗಳು. ಯಾರೇ ಬಂದರೂ ಇದನ್ನು ನಾಶಪಡಿಸಲಾರ. ದೇವಾಲಯವಿಲ್ಲದೆಯೂ ಸ್ವಂತಿಕೆ ಉಳಿಸಿಕೊಳ್ಳಬಲ್ಲ, ಹೋಮಹವನ ಬಿಟ್ಟು ಅಂತರ್ಯೋಗದ ಸಾಂಕೇತಿಕಾ ಚರಣೆಯ ಬಹಿರಂಗ ಅವಲಂಬನವಿಲ್ಲ ದೆಯೂ, ನಾಮ, ವಿಭೂತಿ, ಜನಿವಾರ, ಶಿವದಾರವಿಲ್ಲದೆಯೂ ಹಿಂದೂಗ
ಳಾಗಿ ಬಾಳಬಲ್ಲರು.
ದಂಡಿ, ಕ್ರಾಸು, ಭಾನುವಾರ, ಶುಕ್ರವಾರ ಸಾಮೂಹಿಕ ಪ್ರಾರ್ಥನೆಯಿಲ್ಲದೆಯೂ, ಹಿಂದೂ ತನ್ನ ದಾರಿಯನ್ನು ತಾನೇ ಅರಸಿ ಬಾಳಬಲ್ಲ, ಅವನ ಗುರು ಅವನ ಹೃದಯದಲ್ಲೇ ಇದ್ದಾನೆ. ವಿಶ್ವವೇ ದೇವಾಲಯ, ಆಕಾಶವೇ ಗೋಪುರ, ಸಮುದ್ರವೇ ಕಾಲು ತೊಳೆಯುವ ನೀರು, ಸೂರ್ಯಚಂದ್ರಗ್ರಹತಾರೆಗಳೇ ಅವನ ಆಭರಣ, ಚೆಲುವೆಲ್ಲ ಅವನದೇ ಎಂದೂ ಆಳ್ವಾರರೂ ಗುರುಕವಿ ರವೀಂದ್ರರು ವರ್ಣಿಸಿದ್ದಾರೆ.
ಸಾಲಗ್ರಾಮ, ಲಿಂಗ, ತ್ರಿಶೂಲ, ಬೆಳ್ಳಿ ಚಿನ್ನದ ಗಿಂಡಿ, ಬಟ್ಟಲುಗಳಿಲ್ಲದೆಯೂ ಮಾಡುವ ಸೂರ್ಯ ನಮಸ್ಕಾರ, ಯೋಗ, ಪ್ರಾರ್ಥನೆ, ಧ್ಯಾನ, ಅಶ್ವತ್ಥ ಪ್ರದಕ್ಷಿಣೆ, ತೀರ್ಥಸ್ನಾನ, ಕುಂಭಮೇಳ, ಜಾತ್ರೆಗಳಲ್ಲಿ ಬರುವ ಸೋದರ್ಯ, ರಥಸ್ಥಾಪನೆ, ಉತ್ಸವ,
ಪರ್ಜನ್ಯ, ದೀಪಾವಳಿ, ಲಕ್ಷ್ಮೀಪೂಜೆ, ಆಯುಧಪೂಜೆ, ಭೂಮಿಪೂಜೆ, ಸಂಕ್ರಾಂತಿ ಸಂಕ್ರಮಣ, ಮಹಿಮೆಗಳಲ್ಲಿ ಕಾಲಕ್ಕೆ ಒಗ್ಗುವ ಜಾಣ್ಮೆ, ಪಿತೃಪೂಜೆ, ಸೂರ್ಯ ಅಕ್ಷ ಬದಲಿಸುವ ಅಕ್ಷ ತೃತೀಯೆ, ಮಹಾನವಮಿ, ವಿಜಯ ದಶಮಿ, ನದೀಪೂಜೆ, ಪರ್ವತಗಳಿಗೆ ದೈವ ಸ್ಥಾನ, ಪುಸ್ತಕ ವಂದನೆ, ಯುಗಾದಿ ಸಿಹಿ ಕಹಿ ಹಂಚಿಕೆ- ಇಂಥ ಸಾವಿರಾರು ಆಚರಣೆಗಳೇ ಹಿಂದೂ ಧರ್ಮದ ಒಳಾರ್ಥಗಳ ಗಾಢ ಹಿಂದೂಶ್ರದ್ಧೆ, ಭಕ್ತಿ, ನಂಬುಗೆ. ನಾನು ಸತ್ತರೂ ನೀನು ಬದುಕಬೇಕು- ತ್ಯಾಗಾತ್ಮಕ ಭಾರತೀಯ ಶ್ರದ್ಧೆ.
ಶ್ರೀರಾಮನ ಶ್ರದ್ಧೆ, ಬುದ್ಧ ಮಹಾವೀರರ ಆದರ್ಶದ ಅರ್ಪಣೆಯ, ಆತ್ಮಾರ್ಪಣೆಯ ಶ್ರದ್ಧೆ, ಗಾಂಧಿಯವರ ಶ್ರದ್ಧೆ. ಹಿಂದೂ ಧರ್ಮವೆಂದರೇನು? ಹಿಂದುತ್ವವೆಂದರೇನು? ಎಂದು ಅಪ್ರಬುದ್ಧ, ಅಪ್ರಾಕೃತಿಕ, ಅಪದ್ಧದ ಪ್ರಶ್ನೆಗಳನ್ನು ಕೇಳುವವರಿಗೆ ನನ್ನದೊಂದು ಪ್ರಶ್ನೆಯಿದು: ನಾವು ಹಿಂದೂಗಳಲ್ಲವೆಂದರೆ ನಾವ್ಯಾರು?