Saturday, 14th December 2024

ಹಿಂದೂ ಸಂಸ್ಕೃತಿ ಬಿಜೆಪಿಯದ್ದಲ್ಲ

ಅಭಿಮತ

ಕೆ.ಎಸ್.ನಾಗರಾಜ್

ಬಿಜೆಪಿಯ ಸಿದ್ಧಾಂತವನ್ನು ಒಪ್ಪುವವರು ಮಾತ್ರವೇ ಹಿಂದೂ ಗಳು. ಅದನ್ನು ವಿರೋಧಿಸುವವರೆಲ್ಲ ಹಿಂದೂ ವಿರೋಧಿಗಳು ಎಂಬ ಅಭಿಪ್ರಾಯವನ್ನು ಬಹತೇಕ ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಲೇ ಇದ್ದಾರೆ.

ಈ ದೇಶದಲ್ಲಿ ಸಾಮರಸ್ಯದ ಸಾರದೊಂದಿಗೆ ಹಿಂದೂ ಸಂಸ್ಕೃತಿ ಜನರಲ್ಲಿ ಶತ ಶತಮಾನಗಳ ಹಿಂದೆಯೇ ರಕ್ತಗತವಾಗಿದೆ. ಬಿಜೆಪಿ ಅಥವಾ ಜನಸಂಘ ಹುಟ್ಟುವ ಮೊದಲೇ ಈ ದೇಶದಲ್ಲಿ ಹಿಂದೂ ಸಂಸ್ಕೃತಿ ಎಲ್ಲರ ಮನದಲ್ಲಿ ವಿಜೃಂಭಿಸುತ್ತಲೇ ಇದೆ. ಹಲವಾರು ಶತಮಾನಗಳ ಹಿಂದೆಯೇ ಈ ದೇಶದ ಪ್ರತಿಯೊಂದು ಹಳ್ಳಿ ಮತ್ತು ಬಡಾವಣೆಗಳಲ್ಲಿ ರಾಮ ಮಂದಿರಗಳಿತ್ತು. ಅಲ್ಲಿ ಆಂಜನೇಯ ಮತ್ತು ಸೀತಾ ರಾಮರ ಭಾವಚಿತ್ರಗಳು ಮತ್ತು ವಿಗ್ರಹ
ಗಳು ಶ್ರದ್ಧೆಯಿಂದ ಪೂಜಿಸಲ್ಪಡುತ್ತಿದ್ದವು. ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗದ ಜನರೂ ಸೇರಿ ಭಜನೆ ಮಂದಿರದಲ್ಲಿ ಭಜನೆ, ಪೂಜೆ ಸಾಮಾನ್ಯ ವಾಗಿತ್ತು. ಇವು ಸಾಂಸ್ಕೃತಿಕ ಮತ್ತು ಸಂಸ್ಕೃತಿಯ ತರಬೇತಿ ಕೇಂದ್ರಗಳಾಗಿದ್ದವು.

ರಾಮನವಮಿ ದಿನ ಎಲ್ಲೆಡೆ ಪಾನಕ, ಕೊಸಂಬರಿ ಹಂಚುವ ಸಂಪ್ರದಾಯ ಮೊದಲಿನಿಂದಲ್ಲೂ ಇತ್ತು. ಇವೆಲ್ಲವೂ ಬಿಜೆಪಿಯವರು ಹೇಳಿಕೊಟ್ಟಿದ್ದಲ್ಲ.
ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ರಾಜ-ಮಹಾರಾಜರ ಕಾಲದಿಂದ ಇಲ್ಲಿಯ ತನಕ ಯಾವುದೇ ಸರಕಾರ ಬಂದರೂ ಕಟ್ಟಡಗಳ ಶಂಕುಸ್ಥಾಪನೆ ಅಥವಾ ಉದ್ಘಾಟನೆ ಹಿಂದೂ ಸಂಪ್ರದಾಯದ ಅಡಿಯಲ್ಲಿಯೇ ನಡೆಯುತ್ತದೆಯೇ ಹೊರತು ಅನ್ಯಧರ್ಮದ ಪದ್ಧತಿ ಅನುಸರಿಸುವುದೇ ಇಲ್ಲ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಾರಿಗೆ ಸಚಿವರು, ವಿಮಾನ ಯಾನ ಸಚಿವರು, ರಕ್ಷಣಾ ಸಚಿವರು ಹೀಗೆ ಎಲ್ಲ ವಿಭಾಗಗಳಲ್ಲಿ ಮಂತ್ರಿಗಳು ಅನ್ಯಧರ್ಮದವರಾದರೂ ಬಸ್‌ಗಳಿಗೆ, ವಿಮಾನಗಳಿಗೆ, ಹಡುಗುಗಳಿಗೆ, ನೌಕೆಗಳಿಗೆ ಪೂಜೆ ಮಾಡುವುದು ಹಿಂದೂ ಸಂಪ್ರದಾಯದಲ್ಲಿಯೇ.

ಯಾವುದೇ ಸರಕಾರಿ ಕಾರ್ಯಕ್ರಮದಲ್ಲಿ ಹಿಂದೂ ಸಂಸ್ಕೃತಿಯನ್ವಯವೇ ದೀಪ ಜ್ವಾಲನ, ಪ್ರಾರ್ಥನೆ ಇದ್ದೇ ಇರುತ್ತದೆ. ಇವುಗಳು ಎಂದೂ ಬದಲಾಗಿಲ್ಲ. ಇದೇ ರೀತಿ ಸರಕಾರಿ ಕಚೇರಿಗಳಲ್ಲಿ ಹಿಂದೂ ದೇವತೆಗಳ ಭಾವಚಿತ್ರಗಳು ಪ್ರತಿದಿನವೂ ವಿಶೇಷವಾಗಿ ಶುಕ್ರವಾರಗಳಂದು ಪೂಜಿಸಲ್ಪಡುತ್ತವೆ. ಆಯುಧ ಪೂಜೆಯ ದಿನ ದೇಶದ ಎಲ್ಲ ಸರಕಾರಿ ಕಚೇರಿಗಳಲ್ಲಿ ಇದರ ಆಚರಣೆ ಇದ್ದೇ ಇರುತ್ತದೆ. ವಾಹನಗಳ ಪೂಜೆ ನಡೆದೇ ನಡೆಯುತ್ತದೆ. ಈ ದೇಶವನ್ನು ಹಲವಾರು ಶತಮಾನಗಳ ಕಾಲ ಮುಸ್ಲಿಂ ದೊರೆ ಗಳು ಆಳಿದರೂ ಇಡೀ ದೇಶದ ಜನತೆ ಮುಸ್ಲಿಂರಾಗಿ ಪರಿವರ್ತನೆ ಯಾಗಿಲ್ಲ. ಇಂದಿಗೂ ಅವರ ಜನ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆ ಶೇ.೧೫ರಷ್ಟನ್ನು ಮೀರಿರುವುದಿಲ್ಲ.

ಇನ್ನು ಇನ್ನೂರಾಐವತ್ತು ವರ್ಷಗಳ ಕಾಲ ಈ ದೇಶವನ್ನಾಳಿದ ಬ್ರಿಟಿಷರಿಂದಲೂ ಈ ದೇಶದ ಎಲ್ಲರನ್ನೂ ಕ್ರಿಶ್ಚಿಯನ್‌ರನ್ನಾಗಿ ಪರಿವರ್ತಿಸಲಾಗಲಿಲ್ಲ ಅಥವಾ ದೇಶದ ತುಂಬೆಲ್ಲ ಚರ್ಚುಗಳನ್ನು ಕಟ್ಟಲಿಲ್ಲ. ಹೀಗಿದ್ದ ಮೇಲೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಅಬ್ಬರಿಸುವವರ ಮಾತಿ ನಲ್ಲಿ ಯಾವುದೇ ಅರ್ಥವಿಲ್ಲ. ಸಹಸ್ರಾರು ವರ್ಷಗಳಿಂದ ಈ ದೇಶದ ಮಣ್ಣಿನ ಗುಣ ಹಿಂದೂ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ತಲೆ ತಲಾಂತರ ದಿಂದ ರಕ್ತಗತವಾಗಿ ಆಚರಿಸಿಕೊಂಡು ಬಂದಿರುವುದ ರಿಂದ ಈ ರಾಷ್ಟ್ರ ಎಂದು ಬೇರೆ ಧರ್ಮದವರ ರಾಷ್ಟ್ರವಾಗಿತ್ತು.

ಈ ರಾಷ್ಟ್ರದ ಹೆಗ್ಗುರುತೇ ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಪ್ರೀತಿಸುವ ಸಾಮರಸ್ಯದ ಸಾರವುಳ್ಳ ಹಿಂದೂ ಸಂಸ್ಕೃತಿಯೇ ಆಗಿರುವುದರಿಂದ ಇಂದು ಬಂದು ಈ ದೇಶವನ್ನು ನಮ್ಮಿಂದ ಪರಿವರ್ತನೆ ಮಾಡುತ್ತೇವೆ ಎನ್ನುವ ಮಾತಿನಲ್ಲಿ ಅರ್ಥವಿಲ್ಲ. ಈ ಮಾತುಗಳನ್ನಾಡುವವರು ಕೇವಲ ತಮ್ಮ ವ್ಯಕ್ತಿತ್ವ ವನ್ನು ಹೆಚ್ಚಿಸಿಕೊಳ್ಳಲು, ತಮ್ಮ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಆಡುವ ರಾಜಕಾರಣದ ಮಾತಾಗಿರುತ್ತದೆ. ಈ ದೇಶದಲ್ಲಿ ಜಾತ್ರೆಗಳು, ಊರ
ಹಬ್ಬಗಳು ಇವೆಲ್ಲವೂ ನಮ್ಮ ಸಂಸ್ಕೃತಿಯ ಹೆಮ್ಮೆಯಾಗಿದ್ದು, ಇವು ಗಳು ನಡೆಯುತ್ತಲೇ ಇದೆ. ರಾಮ, ಕೃಷ್ಣ ಯಾರೊಬ್ಬರ ಆಸ್ತಿಯೂ ಅಲ್ಲ, ಯಾರೊ ಬ್ಬರ ಗುತ್ತಿಗೆಗೂ ಒಳಗಾಗಿಲ್ಲ. ಹಿಂದುತ್ವ ಮತ್ತು ದೇಶಭಕ್ತಿ ದೇಶದ ನಾಗರಿಕರ ಮನ ಮನದಲ್ಲಿದೆ. ರಾಜಕೀಯ ಸಿದ್ಧಾಂತಕ್ಕೂ ಇದಕ್ಕೂ ತಾಳೆ ಹಾಕಬಾ ರದು.