ದಾಸ್ ಕ್ಯಾಪಿಟಲ್
dascapital1205@gmail.com
ನೆಹರೂ ಪ್ರಣೀತ ಸೆಕ್ಯುಲರಿಸಂಗೆ ರಿಲಿಜನ್ ಮತ್ತು ಇತರ ಸಂಪ್ರದಾಯಗಳ ಕುರಿತಾದ ತೌಲನಿಕ ಅರಿವು ಇಲ್ಲ ಎನ್ನುವ ಭಟ್ಟರು ನೆಹರೂವಿಯನ್ ಸೆಕ್ಯುಲರಿಸಂ ಸೃಷ್ಟಿಸಿದ ದೂರಗಾಮಿ ದುಷ್ಪರಿಣಾಮ ಹಾಗೂ ಅದು ವಿಫಲವಾದುದನ್ನು ಮುಚ್ಚಿಹಾಕುವ ಎಡಪಂಥೀಯ ಸೆಕ್ಯುಲರ್ ವಾದಿಗಳ ಯತ್ನವನ್ನು ಇಲ್ಲಿ ಹೇಳುತ್ತಾರೆ. ನೆಹರೂ ಸೆಕ್ಯುಲರಿಸಂ ಮತ್ತು ಎಡಪಂಥೀಯ ಸೆಕ್ಯುಲ ರಿಸಂ ಅನ್ನು ಒಂದೇ ಎಂದು ಭಟ್ಟರು ಪರಿಗಣಿಸುತ್ತಾರೆ.
ಈ ಹಿಂದುತ್ವದ ಅಧ್ಯಾಯ ಬಹುಮುಖ್ಯವಾದುದು ಎಂದು ಭಾವಿಸುತ್ತೇನೆ. ಮೊದಲಿಗೆ ಹಿಂದೂ ಮತ್ತು ಹಿಂದುತ್ವದ ೧೯ ಸಾಮಾನ್ಯ ಗುಣಲಕ್ಷಣಗಳನ್ನು ವಿವರಿಸುತ್ತ ಹಿಂದೂ ಎಂಬುದು ಒಂದು ಇಸಂ ಅಲ್ಲ; ಜೀವನ ವಿಧಾನ ಎಂದು ಹೇಳುವ ಭಟ್ಟರು, ಹಿಂದುತ್ವ ಎಂದರೆ ಜೀವನ ವಿಧಾನ ಎಂದು ೧೯೯೫ ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ವ್ಯಾಖ್ಯಾನಕ್ಕೆ ಗಾಗಲೇ ತಾನು ಹೇಳಿದ ಹಿಂದುತ್ವದ ಗುಣಲಕ್ಷಣಗಳ ಕುರಿತಾದ ವಿವರಣೆ ಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ ಎನ್ನುತ್ತಾ, ೧೯೭೬ ರಲ್ಲೂ ಹಿಂದುಯಿಸಂ ಎನ್ನುವುದು ರಿಲಿಜನ್ ಅಲ್ಲ, ಅದು ಸಂಸ್ಕೃತಿಯನ್ನು ಸಂಕೇತಿಸುತ್ತದೆ ಎಂದು ಅದೇ ನ್ಯಾಯಾಲಯ ಹೇಳಿದ್ದನ್ನು ಸಮರ್ಥಿಸುತ್ತಾರೆ. ಮತ್ತು ೧೯೬೬ ರತೀರ್ಪಿನಲ್ಲೂ ಇದೇ ಬಗೆಯ ಅಭಿಪ್ರಾಯವೇ ವ್ಯಕ್ತವಾಗಿದ್ದನ್ನು ನೆನಪಿಸುತ್ತಾರೆ.
ಹಿಂದೂ ಧರ್ಮಎಂದರೆ ವೈದಿಕ ಧರ್ಮವೂ ಅಲ್ಲ, ಬ್ರಾಹ್ಮಣ ಧರ್ಮವೂ ಅಲ್ಲ, ಮನು ಧರ್ಮವೂ ಅಲ್ಲ ಎಂದು ವಿಶ್ಲೇಷಿಸುವಾಗ ಭಟ್ಟರು ಒಡ್ಡುವ ತರ್ಕ ಸರಣಿಗಳು ಸೋ ಕಾಲ್ಡ್ ಎಡಪಂಥೀಯ ವಿಚಾರಧಾರೆಗಳನ್ನು ಹುಸಿ ಮಾಡುತ್ತದೆ.
ಎಡಪಂಥೀಯರ ಈ ಅಜೆಂಡಾದ ಹಿಂದಿನ ಮಸಲತ್ತುಗಳನ್ನು ಹೇಳುತ್ತಲೇ ಭಟ್ಟರು ಹಿಂದುತ್ವದ ಭಾರತದ ಕಲ್ಪನೆಯನ್ನು
ಮಾರ್ಮಿಕವಾಗಿ ಬರೆಯುತ್ತಾರೆ. ಯಾಕೆ ಹಿಂದೂ ಹಿಂದುತ್ವ ಎಂಬುದು ಉಳಿದೆಲ್ಲ ಸೆಮೆಟಿಕ್ ರಿಲಿಜನ್‌ಗಳಿಗಿಂತ ಭಿನ್ನ ಮತ್ತು ವಿಶಿಷ್ಟ ಎಂಬುದನ್ನು ನಿರೂಪಿಸುತ್ತಾರೆ. ಹಿಂದೂ ಎಂಬುದು ಸನಾತನ ಎಂಬುದಕ್ಕೆ ಪರ್ಯಾಯವಾಗುವ ಸಮರ್ಥನೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಏಕತ್ವ ಅನೇಕತ್ವಗಳು ಭಾರತೀಯ ಸಮಾಜದ ನಿತ್ಯ ಬದುಕಿನಲ್ಲಿ ಹೇಗೆ ನೆಲೆಯೂರಿ ಹೊಂದಿ ಕೊಂಡಿವೆ ಎಂಬುದನ್ನು ಭಟ್ಟರು ಸೆಮೆಟಿಕ್ ರಿಲಿಜನ್‌ಗಳು ಹಿಂದೂ ಧರ್ಮದೊಂದಿಗೆ ಹೊಂದಿರುವ ಸೈದ್ಧಾಂತಿಕವಾಗಿ, ವೈಚಾರಿಕವಾಗಿ ಅಲ್ಲದಿದ್ದರೂ, ಸಾಂಸ್ಕೃತಿಕವಾಗಿ ಭಾರತೀಯ ಪರಂಪರೆಯಲ್ಲಿ ಬದುಕುತ್ತಿರುವುದನ್ನು ನಿದರ್ಶನಗಳ ಮುಖೇನ ಪ್ರಸ್ತುತ ಪಡಿಸುತ್ತಾರೆ.
ಒಂದು ಮಾತು ಹೀಗಿದೆ: ತನ್ನ ಸಂಸ್ಕೃತಿಯನ್ನು ಕ ದುಕೊಳ್ಳುವ ಈ ಸಂಕಟ ನಮ್ಮ ತಲೆಮಾರಿನವರಿಗೆ ಆಗಬಾರದು ಎಂಬ ಕಾರಣದಿಂದಲೇ ತಾನೆ ಬಹುಸಂಸ್ಕೃತಿಗಳು ಉಳಿಯಬೇಕು ಎಂದು ನಾವೆಲ್ಲ ಹೇಳುವುದು? ಇದು ಗಂಭೀರವಾದ ಚಿಂತನೆಯಿಂದ ಹುಟ್ಟಿದ ಮಾತು. ಭವಿಷ್ಯದ ನಮ್ಮ ತಲೆಮಾರಿಗೆ ನಮಗೆ ಸಂದಿದ್ದಾದರೂ ಸಂದಬೇಕು ಎಂಬ ಚಿಂತೆ ಚಿಂತನೆ ಯಾವ ಮತ ಧರ್ಮದಲ್ಲಿಲ್ಲ ಹೇಳಿ? ಇದೇ ಸಮತ್ವ- ಏಕತ್ವ-ಅನೇಕತ್ವ. ಈ ಒಳ ಮನಸ್ಸಿನಲ್ಲಿ ಹುಟ್ಟುವ ಸಮಷ್ಟಿಯ ಚಿಂತನೆಯ ಆಳದಲ್ಲಿ ಇಡಿ ಮನುಷ್ಯ ಸಂಕುಲದ ಅಸ್ಮಿತೆಯಿದೆ.
ಇದು ಹಿಂದೂಯೇತರರೂ ಒಪ್ಪಬೇಕಾದ ಅಂತೆಯೇ ಅನುಸರಣ ಯೋಗ್ಯ ಪರಿಕಲ್ಪನೆ ಎಂಬ ಭಟ್ಟರ ಮಾತು ಅಪರೋಕ್ಷ
ವಾಗಿ ಸೆಮೆಟಿಕ್ ರಿಲಿಜನ್‌ಗಳ ಸಿದ್ಧಾಂತ, ತತ್ವಗಳನ್ನು ಸೈದ್ಧಾಂತಿಕವಾಗಿ ಪ್ರಶ್ನಿಸುತ್ತಾರೆ. ನ್ಯೂನತೆಗಳನ್ನು ಸ್ಥಿತಪ್ರಜ್ಞ ಭಾವದಲ್ಲಿ
ಇದು ಸರಿಯಲ್ಲ ಎಂದು ಹೇಳುತ್ತಾರೆ. ಹಿಂದೂಗಳಲ್ಲಿ ಇರುವ ಜಾತಿ ಸಂಘಟನೆ, ಜಾತಿ ರಾಜಕೀಯದ ಬಗ್ಗೆಯೂ ಹೇಳುವ ಭಟ್ಟರು ಹಿಂದೂಗಳೇ ಬಹುಸಂಖ್ಯಾತ ಇರುವ ಕ್ಷೇತ್ರಗಳಲ್ಲೂ ಮುಸ್ಲಿಮರು ಚುನಾವಣೆಗಳಲ್ಲಿ ಗೆದ್ದಿರುವುದನ್ನು ಉಲ್ಲೇಖಿಸುತ್ತಾ ರಾಜಕೀಯವಾಗಿ ವಿವಿಧತೆಯನ್ನು ಹಿಂದೂ ಲಕ್ಷಣವನ್ನಾಗಿ ಹೊಂದಿದ್ದಾನೆ. ಈ ಹಿಂದುತ್ವದ ಒಂದುತನವನ್ನು ಸಾವರ್ಕರ್ ಮಾತಿನಲ್ಲಿ ನಿರೂಪಿಸುವ ಭಟ್ಟರು ಹಿಂದುತ್ವದ ವಿಕಸನವನ್ನು ಗುರುತಿಸುತ್ತಾರೆ.
ನಿರ್ದಿಷ್ಟ ಗ್ರಂಥಗಳನ್ನು ಎಲ್ಲ ಕಾಲದಲ್ಲೂ ಅನುಸರಿಸಬೇಕೆಂಬ ನಿಯಮ ಇಲ್ಲದಿರುವುದರಿಂದ ಹಿಂದುತ್ವದಲ್ಲಿ ಚಲನಶೀಲತೆಗೆ
ಅವಕಾಶ ಇದೆ. ಹಾಗೆ ಮುಂದುವರಿದು ಆಚರಣೆ, ಆಹಾರ ಪದ್ಧತಿಯಲ್ಲೂ ಪಲ್ಲಟಗಳಾಗಿವೆ. ಸೆಮೆಟಿಕ್ ರಿಲಿಜನ್‌ಗಳ ಉಳಿಸಿ ಕೊಂಡ ಅನೂಚಾನತೆಯನ್ನು ಹಿಂದೂ ಧರ್ಮ ಉಳಿಸಿಕೊಂಡಿಲ್ಲ ಎಂದು ಈ ಬದಲಾದ ಕಾಲಕ್ಕೆ ಹೊಂದುವ ಜಾಯಮಾನದ ಒಟ್ಟೂ ಸ್ವರೂಪದಲ್ಲಿ ಆಗುವ ಪಲ್ಲಟಗಳನ್ನೇ ನೆಗೆಟಿವ್ ಆದ ಮೂಡಲ್ಲಿ ಚಿತ್ರಿಸುವ ಪಾಷಂಡೀಗಳ ವೈಚಾರಿಕ ಕಾಯಿಲೆಯ ಬಗ್ಗೆಯೂ ಭಟ್ಟರು ಬರೆಯುತ್ತಾರೆ.
ಓಂಕಾರ ಪದದ ಇತಿಹಾಸದ ಬಗ್ಗೆ ಎದ್ದ ಅಪದ್ಧಗಳನ್ನು ಇಲ್ಲಿ ಲೇಖಕರು ಸ್ಮರಿಸುತ್ತಾರೆ. ಯಾವುದು ವಿಕಸಲಶೀಲ ಅಥವಾ
ಚಲನಶೀಲ ಎಂದು ಕರೆಸಿಕೊಳ್ಳುವುದಕ್ಕೆ ಯೋಗ್ಯ ಅಥವಾ ಅರ್ಹವೆಂಬುದನ್ನು ಭಟ್ಟರು ಹಿಂದೂ ಧರ್ಮದ ಆಚರಣೆಗಳ ಮುಖೇನ ಗ್ರಹಿಸುತ್ತಾರೆ. ಹಿಂದೂ ಹಿಂದುತ್ವ ಬೇರೆಯಲ್ಲ ಎಂಬುದು ಕೂಡ ಇಲ್ಲೇ ಪ್ರೂವ್ ಆಗಿಬಿಡುತ್ತದೆ. ಸಂಸ್ಕೃತಿಗಳು ಕಾಲಕಾಲಕ್ಕೆ ಹೊಸತನ್ನು ಸೇರಿಸಿಕೊಳ್ಳಬೇಕು.
ಭಾಷಿಕ ಸ್ವೀಕರಣ ಎಂಬುದು ಒಂದು ಭಾಷೆಯ ಜೀವಂತಿಕೆಯನ್ನು ಹೇಗೆ ಹೇಳುತ್ತದೋ ಹಾಗೆ ಸಂಸ್ಕೃತಿಗಳು ಸ್ವೀಕರಿಸುತ್ತಲೇ ಹೊಸತನಕ್ಕೆ ಬದಲಾಗಬೇಕು. ಅದೊಂದು ಥರ ನವ ನವೊನ್ಮೇಷ ಶಾಲಿನೀ! ಸಂಸ್ಕೃತಿಯೇ ಹಾಗೆ, ಅದು ಕಾಲ ಗತಿಯಲ್ಲಿ ಪುಡಿ ಪುಡಿ! ಅಂದರೆ ಅದು ಪರಿಷ್ಕರಣೆ ಆಗಲೇಬೇಕು ಮತ್ತು ಆಗುತ್ತಲೇ ಇರುತ್ತದೆ. ಬದಲಾದ ಕಾಲಕ್ಕೆ ಹೊಂದಿಕೊಳ್ಳುವುದೇ ಸಂಸ್ಕೃತಿಯ ಒಳಸತ್ವ. ಈ ಅರ್ಥದಲ್ಲಿ ಹಿಂದೂ, ಹಿಂದುತ್ವ ಎಂಬುದು ಪಲ್ಲಟಗಳಿಗೆ ಅವಕಾಶವನ್ನು ನೀಡುವ ತೀವ್ರ ವೈಶಾಲ್ಯವನ್ನು ಹೊಂದಿದೆ. ಮತ್ತು ಅಪ್ಪಟ ಸೆಕ್ಯುಲರ್ ಮತ್ತು ಸೆಕ್ಯುಲರಿಸಂ ಆಗಿದೆ ಎಂಬುದನ್ನು ಭಟ್ಟರು ಈ ಅಧ್ಯಾಯದಲ್ಲಿ ಬರೆಯುತ್ತಾರೆ. ಇದಕ್ಕೆ ನಿತ್ಯ ಬದುಕಿನ ನಿದರ್ಶನಗಳನ್ನೇ ಅವರು ಕೊಡುವುದು ಗಮನೀಯ, ಗಮನಾರ್ಹವಾದುದು.
ವೇದೋಪನಿಷತ್ತುಗಳ ಪರಿಕಲ್ಪನೆಗಳ ಬಗ್ಗೆಯೂ ಚರ್ಚೆಯನ್ನು ನಿಸ್ಸಂಕೋಚವಾದ ದೃಷ್ಟಿಯಿಂದ ಮಾಡುವ ಭಟ್ಟರು ಅರಿವನ್ನು ವಿಸ್ತಾರಗೊಳಿಸಲು ವೇದೋಪನಿಷತ್ತುಗಳಲ್ಲಿ ಹೇಗೆ ಅವಕಾಶವಿದೆ ಅಥವಾ ವಿಸ್ತಾರವನ್ನು ಪಡೆದು ಹೇಗೆ ಅನುಭವ ವನ್ನೂ ಜ್ಞಾನವನ್ನೂ ತನ್ನರಿವಿನೊಳಗೆ ತಂದುಕೊಳ್ಳುವುದಕ್ಕೆ ತೆರೆದುಕೊಂಡಿದೆ ಎಂಬುದನ್ನು ಲೇಖಕರು ದರ್ಶನ ಪರಂಪರೆ, ಆಚಾರ್ಯತ್ರಯರುಗಳ ಸಿದ್ಧಾಂತ, ಆಧ್ಯಾತ್ಮಿಕ ಜಿಜ್ಞಾಸೆ, ಭಕ್ತಿ ಚಳವಳಿಯ ಜಾಡು- ಇವೆಲ್ಲವುಗಳನ್ನು ಸ್ಮೃತಿಗಳನ್ನಾಗಿ ಒದಗಿಸಿ ಕೊಳ್ಳುತ್ತಾರೆ. ಈ ಒದಗಿಸಿಕೊಳ್ಳುವ ಆಕರಗಳಿಗೆ ಲಿಖಿತ ಪರಂಪರೆಯಿಲ್ಲ. ಅಂದಮಾತ್ರಕ್ಕೆ ಇವು ವೈದಿಕವೆಂದೇನೂ ಅಲ್ಲ, ಲಿಖಿತ ಪರಂಪರೆ ಎಂದೇನೂ ಅಲ್ಲ.
ಇದೊಂದು ಚಲನಶೀಲ ಪರಂಪರೆಯ ಕಾಲಗತಿಯಲ್ಲಿ ಆಗುವ ಏರುಗತಿಯ ವಿಕಾಸ. ಈ ವಿಕಾಸದ ಏರುಗತಿಯಲ್ಲಿ ನಾರಾಯಣ ಗುರು, ವಿವೇಕಾನಂದರಂಥೇ ಗಾಂಧಿ, ಅಂಬೇಡ್ಕರ್ ಅವರುಗಳ ಚಿಂತನೆಗೂ ಸ್ಥಾನವಿದೆ ಎಂದು ಹೇಳುತ್ತಾ ಹಿಂದೂ ಹಿಂದುತ್ವದ ಸ್ವೀಕರಣ ಗುಣೌದಾರ್ಯವನ್ನೂ, ವೈಶಾಲ್ಯವನ್ನೂ ಕಟ್ಟುತ್ತಾ ಹೋಗಿ ಆಕಾಶಕ್ಕೆ ಮುಖ ಮಾಡಿ ನಿಂತ ಅವುಗಳ ಬೇರುಗಳನ್ನು ಗಟ್ಟಿಗೊಳಿಸುತ್ತಾರೆ. ಅಥವಾ ಗಟ್ಟಿ ಯಾದ ಬೇರುಗಳ ಎಳೆಗಳನ್ನು ಗ್ರಹಿಸಿ ನಮಗೆ ತೋರುತ್ತಾರೆ.
ಹಿಂದುತ್ತ್ವದಲ್ಲಿ ಸತ್ಯ ಒಂದು ಮೌಲ್ಯವಾಗಿ ವೇದೋಪನಿಷತ್ತುಗಳಲ್ಲಿ ಇದೆಯೆಂದೂ, ರಾಷ್ಟ್ರೀಯ ಧ್ಯೇಯವಾಕ್ಯವೂ ಆಗಿದೆ ಯೆಂದೂ, ಮುಕ್ತತೆ ಅಥವಾ ಬೌದ್ಧಿಕ ಸ್ವಾತಂತ್ರ್ಯದಿಂದ ಹಿಂದುತ್ತ್ವದಲ್ಲಿ ಸತ್ಯಾನ್ವೇಷಣೆಗೆ ಸದಾ ತೆರೆದ ಅವಕಾಶವಾಗಿ ಸತ್ಯ ಒಂದು ಮೌಲ್ಯವಾಗಿ ಹೇಗೆ ಒದಗಿದೆ ಎಂಬುದನ್ನು ಹೇಳುತ್ತಾರೆ. ಹಿಂದುತ್ವದ ಗುಣಲಕ್ಷಣಗಳನ್ನು ಹೊಂದದೇ ಇರುವವರೊಡನೆ ಸಹಬಾಳ್ವೆಯ ಮಾತು ಬಹುದೂರವೇ ಸರಿ! ಮಾಡಲೇಬೇಕಾದುದು ಮತ್ತು ಮಾಡಲೇಬಾರದುದು ಎಂಬ ಪಟ್ಟಿಗಳನ್ನು ಹೊಂದಿ ರುವ ಸೆಮೆಟಿಕ್ ರಿಲಿಜನ್ನುಗಳಲ್ಲಿ ಇಂದಿನ ಆಧುನಿಕ ಜಗತ್ತಲ್ಲೂ ಸತ್ಯಾನ್ವೇಷಣೆ ಸಾಧ್ಯವಿಲ್ಲ.
ವೈಚಾರಿಕ ಕಾಠಿಣ್ಯತೆ ಹಿಂದೂ ಹಿಂದುತ್ತ್ವದಲ್ಲಿ ಇಲ್ಲ. ಆದ್ದರಿಂದ ಅದು ವಿಕಾಸಗೊಳ್ಳುತ್ತಲೇ ಹೊಸ ಚಿಂತನೆಗಳನ್ನು ತನ್ನೊಳಗೆ ಬಿಟ್ಟುಕೊಳ್ಳುತ್ತದೆ. ತನ್ನ ಸಿದ್ಧಾಂತಗಳನ್ನು ಕಾಲಕಾಲಕ್ಕೆ ಒರೆಗೆ ಹಚ್ಚುಕೊಳ್ಳುತ್ತಲೇ ಬಂದ ಈ ಹಿಂದೂ ಧರ್ಮ ಬಹು ಸಂಸ್ಕೃತಿ ಗಳ ಉಳಿವಿನ ಚಿಂತನೆಯಲ್ಲಿ ಏಕೈಕ ಬಹುದೊಡ್ಡ ಎಲಿಮೆಂಟ್ ಆಗಿ ಉಳಿದುಕೊಂಡಿದೆ. ಸೆಮೆಟಿಕ್ ರಿಲಿಜನ್ನುಗಳು ಉಳಿದು ಬೆಳೆಯುತ್ತಿರುವುದು ಈ ಎಲಿಮೆಂಟಿನ ಔದಾರ್ಯಗುಣದಿಂದಾಗಿ!
ಒಟ್ಟಾರೆಯಾಗಿ ಹಿಂದುತ್ವ ಎಂದರೇನು? ಎಂಬೀ ಅಧ್ಯಾಯದಲ್ಲಿ ಗಿರೀಶರು ಹಿಂದುತ್ವದ ಪ್ರತಿಪಾದನೆಯನ್ನು ಹೀಗೆ ಸರಳೀ ಗೊಳಿಸುತ್ತಾರೆ: ಹಿಂದುತ್ವದ ಗುಣಸ್ವಭಾವಗಳನ್ನು ಉಳಿಸಿಕೊಳ್ಳಬೇಕು. ಆಧ್ಯಾತ್ಮದ ಸತ್ವವನ್ನೂ ಸ್ವಾತಂತ್ರ್ಯವನ್ನೂ ಉಳಿಸಿ ಕೊಳ್ಳಬೇಕು. ಏಕತ್ವ ಮತ್ತು ಅನೇಕತ್ವಗಳನ್ನು ಜೊತೆಜೊತೆಗೇ ಹೊಂದಿರಬೇಕು. ಇದನ್ನೇ ಹಿಂದುತ್ವವಾದ ಎಂದು ಎಡಚರರು ಆರೋಪಿಸುವುದಾದರೆ ಅದು ಖಂಡಿತವಾಗಿಯೂ ಋಣಾತ್ಮಕ ಅಲ್ಲ ಎನ್ನುತ್ತಾರೆ.
ನಮ್ಮ ನಮ್ಮ ದಿನನಿತ್ಯದ ವಾಸ್ತವದ ಬದುಕಿನ ಅನುಭವಗಳನ್ನೇ ಒಮ್ಮೆ ಆಲೋಚಿಸಿಕೊಳ್ಳೋಣ, ನೆನಪಿಸಿಕೊಳ್ಳೋಣ, ಗ್ರಹಿಸಿ ಕೊಳ್ಳೋಣ. ಯಾವುದನ್ನೂ ದೈವತ್ವದ ಸ್ಥಾನಕ್ಕೆ ಏರಿಸುವ ಸ್ವಾತಂತ್ರ್ಯ ಹಿಂದೂಧರ್ಮದಲ್ಲಿದೆ. ಕೈಯಲ್ಲಿದ್ದ ಮೊಬೈಲಿಗೇ ಅರಿಶಿಣ, ಕುಂಕುಮ, ಗಂಧ, ಹೂವು ಹಾಕಿ ಪೂಜಿಸುವ ಸ್ವಾತಂತ್ರ್ಯವನ್ನು ಹಿಂದೂ ಧರ್ಮ ಕೊಟ್ಟಿದೆ. ಅಂತೆಯೇ, ಒಬ್ಬ ಹಿಂದೂ ಹುಟ್ಟಿನಿಂದ ಸಾಯುವವರೆಗೆ ದೇವಸ್ಥಾನವನ್ನು ನೋಡದೇ ಇರಬಹುದು.
ದೇವಪೂಜೆ ಮಾಡದೇ ಇರಬಹುದು. ಆರಾಧನೆಯನ್ನೇ ವಿರೋಧಿಸಬಹುದು. ಅಂಥ ಸ್ವಾತಂತ್ರ್ಯವನ್ನು ಈ ಧರ್ಮ ಅವನಿಗೆ ಕೊಟ್ಟಿದೆ-ಇಂಥ ಸ್ವಾತಂತ್ರ್ಯ ಕೇವಲ ಹಿಂದೂವಿಗಲ್ಲ. ಹಿಂದುಯೇತರರೂ ಇಂಥ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿ ಕೊಂಡಿದ್ದಿದೆ! ಎಂ.ಎಫ್.ಹುಸೇನ್ ಅಂಥವರು ಹಿಂದೂ ದೇವತೆಗಳನ್ನು ವಿಕೃತವಾಗಿ ಚಿತ್ರಿಸಿ ವಿವಾದ ಆಗಿದ್ದನ್ನು ನೆನಪಿಸಿ ಕೊಳ್ಳಿ. ಆದರೆ ಸೆಮೆಟಿಕ್ ರಿಲಿಜನ್‌ಗಳ ಗಾಡ್‌ಗಳ ಬಗ್ಗೆ, ಆರಾಧನೆ, ನಂಬಿಕೆಗಳ ಬಗ್ಗೆ ಒಂದೇ ಒಂದು ಮಾತು ಆಡಿದರೂ ಅದು ಅಲ್ಪಸಂಖ್ಯಾತರ ನಂಬಿಕೆಗಳ ಮೇಲಿನ ದೌರ್ಜನ್ಯ ಎಂದು ದೊಂಬಿಯೆಬ್ಬಿಸುವವರೂ ಮುಸ್ಲಿಂ ಬಾಂಧವರೆನಿಸಿದ ಹಿಂದೂಗಳೇ ಆಗಿರುವುದು ವಿಚಿತ್ರವಾದರೂ ಸತ್ಯ!