Wednesday, 11th December 2024

ಇದು ಚರಿತ್ರೆಯ ವೈಭವ, ವರ್ತಮಾನದ ಉತ್ತುಂಗ

ಸ್ಮರಣೆ

ಜಗ್ಗೇಶ್

ಇವತ್ತು ನಾವೆಲ್ಲರೂ ನಮ್ಮ ‘ಬ್ರಾಂಡ್ ಬೆಂಗಳೂರು’ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕನ್ನಡನಾಡಿನ ರಾಜಧಾನಿಯು ಜಾಗತಿಕ ಸಮುದಾಯದ ಗಮನ ಸೆಳೆ ದಿರುವುದಕ್ಕೆ ರೋಮಾಂಚಿತರಾಗುತ್ತಿದ್ದೇವೆ.

ನಮ್ಮ ಈ ನಗರವೀಗ ದೇಶದ ಆರ್ಥಿಕ ಬೆಳವಣಿಗೆಯ, ವಿಜ್ಞಾನ-ತಂತ್ರಜ್ಞಾನ ಗಳ ಸಾಧನೆಯ, ನವೋದ್ಯಮಗಳ ಸಂಸ್ಕೃತಿಯ ಒಂದು ಉಜ್ಜ್ವಲ ಸಂಕೇತ ವಾಗಿದೆ; ಸಾಂಪ್ರದಾಯಿಕ ಉದ್ಯಾನ ನಗರಿಯು ಈಗ ಐಟಿ-ಬಿಟಿ, ಸಂಶೋ ಧನೆ ಮತ್ತು ಅಭಿವೃದ್ಧಿ, ವೈಮಾಂತರಿಕ್ಷ, ಇಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಡಿಸೈನ್, ವಿದೇಶಿ ನೇರ ಹೂಡಿಕೆಯಂಥ ವಿವಿಧ ಬಾಬತ್ತುಗಳ ರಾಜಧಾನಿಯೂ ಆಗಿರುವುದು ಅಭಿಮಾನದ ಸಂಗತಿ. ಇವೆಲ್ಲಕ್ಕೂ ನಾವು, ಈ ನಗರಕ್ಕೆ ವೈಜ್ಞಾನಿಕ ಮತ್ತು ದೂರದೃಷ್ಟಿಯ ಬುನಾದಿ ಹಾಕಿದ ಪುಣ್ಯಪುರುಷರಾದ ನಾಡಪ್ರಭು ಹಿರಿಯ ಕೆಂಪೇಗೌಡರಿಗೆ ಕೃತಜ್ಞರಾಗಿರಬೇಕು.

ಜತೆಯ ಬೆಂಗಳೂರನ್ನು ಸಮಕಾಲೀನ ಜಾಗತಿಕ ಭೂಪಟದಲ್ಲಿ ಬೆಳಗುವಂತೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯವರ ನವಭಾರತ ನಿರ್ಮಾಣದ ನಿಟ್ಟಿನ ಉಪಕ್ರಮಗಳ ಬಗ್ಗೆಯೂ ಒಂದು ಸಾತ್ತ್ವಿಕ ಅಭಿಮಾನವನ್ನು ಪ್ರದರ್ಶಿಸ ಬೇಕು. ಇತಿಹಾಸದ ದಾಖಲೆಗಳನ್ನು ನೋಡಿದರೆ, ಪೇಗೌಡರು 1527ರಲ್ಲಿ ಅಸ್ತಿಭಾರ ಹಾಕಿದ ಆಧುನಿಕ ಬೆಂಗಳೂರಿಗೆ 485 ವರ್ಷಗಳ ಚರಿತ್ರೆ ಇದೆ.

ಅಂದರೆ, ಇನ್ನು ಹದಿನೈದು ವರ್ಷಗಳಲ್ಲಿ ನಾವು ಕೆಂಪೇಗೌಡರ ನವ ಬೆಂಗಳೂರಿನ 500ನೇ ವರ್ಷಾಚರಣೆಗೆ ಸಾಕ್ಷಿಯಾ ಗಲಿದ್ದೇವೆ. ಇದಕ್ಕಿಂತಲೂ ಹಿಂದಕ್ಕೆ ಹೋದರೆ, ಹೊಯ್ಸಳರ ಕಾಲಕ್ಕಾಗಲೇ ಅಂದರೆ 1120ರ ಹೊತ್ತಿಗೆ ಈ ನಗರ (ಊರು)
ವ್ಯವಸ್ಥಿತ ರೂಪದಲ್ಲಿ ಅಸ್ತಿತ್ವದಲ್ಲಿದ್ದುದಕ್ಕೆ ಪುರಾವೆಗಳಿವೆ. ಇದಕ್ಕೂ ಮೊದಲು ಕ್ರಿ.ಶ. 850ರ ಬೇಗೂರಿನ ಚೋಳರ ಕಾಲದ
ನಾಗೇಶ್ವರ ದೇವಸ್ಥಾನದ ಶಾಸನದಲ್ಲಿ ‘ಬೆಂಗಳೂರು’ ಎನ್ನುವ ಉಲ್ಲೇಖವಿದೆ.

ಈ ದೀರ್ಘಾವಧಿಯಲ್ಲಿ ಬೆಂಗಳೂರು ಅನೇಕ ಏರಿಳಿತಗಳನ್ನು, ಅನಿರೀಕ್ಷಿತ ಪಲ್ಲಟಗಳನ್ನು ಕಂಡಿದೆ. ಮಧ್ಯೆ ಮರಾಠರ ಶಹಾಜಿ
ಭೋಂಸಲೆ, ಆದಿಲ್ ಷಾ, ಮೊಘಲರ ಕಟ್ಟಕಡೆಯ ದೊರೆ ಔರಂಗಜೇಬ್, ಮೈಸೂರಿನ ಒಡೆಯರ್‌ಗಳು, ಹೈದರಾಲಿ, ಟಿಪ್ಪು, ಬ್ರಿಟಿಷರು ಹೀಗೆ ಹಲವರ ಗುರುತುಗಳು ಇಲ್ಲಿವೆ. ಈಗ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಬೆಂಗಳೂರು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕೇಂದ್ರವಾಗಿ, ಸುಸ್ಥಿರ ಬೆಳವಣಿಗೆಯನ್ನು ಸಾಧಿಸುತ್ತಿದೆ.

ಬೆಂಗಳೂರಿನ ಸೌಂದರ್ಯ, ಅಚ್ಚುಕಟ್ಟುತನ, ವೈಜ್ಞಾನಿಕತೆ, ಇದರ ಸಂರಚನೆಯಲ್ಲಿ ಅಡಗಿರುವ ವಾಣಿಜ್ಯ ಸಂಸ್ಕೃತಿ, ಸುಂಕ ವಸೂಲಾತಿ ಪದ್ಧತಿ, ಕೌಶಲಗಳನ್ನು ಆಧರಿಸಿ ಅದಕ್ಕೆ ತಕ್ಕಂತೆ ಕಟ್ಟಿರುವ ಬಗೆಬಗೆಯ ಪೇಟೆಗಳ ಶ್ರೇಯಸ್ಸು ಕೆಂಪೇಗೌಡರಿಗೆ
ಸಲ್ಲುತ್ತದೆ. ಏಕೆಂದರೆ, ಐದು ಶತಮಾನಗಳ ಹಿಂದೆ ನಗರೀಕರಣವಿನ್ನೂ ಶೈಶವಾವಸ್ಥೆಯಲ್ಲಿದ್ದಾಗಲೇ ಅವರು ಇದಕ್ಕೊಂದು ಸ್ಪಷ್ಟರೂಪ ಕೊಟ್ಟಿದ್ದಾರೆ.

ಇಂದು ಬೆಂಗಳೂರು ಅವರು ಗಡಿಗಳಂತೆ ಕಟ್ಟಿದ ನಾಲ್ಕು ಗೋಪುರಗಳಾಚೆಗೂ ಬೆಳೆದಿದೆ. ಇಷ್ಟೇ ಅಲ್ಲ, ನಾಲ್ದೆಸೆಗಳಲ್ಲೂ ಇನ್ನೂ ಬೆಳೆಯುತ್ತಲೇ ಇದೆ. ಇದು ಎಷ್ಟರ ಮಟ್ಟಿಗಿದೆ ಎಂದರೆ, ಮೋದಿಯವರು ದೇಶದ ಚುಕ್ಕಾಣಿ ಹಿಡಿದಮೇಲೆ ಔದ್ಯಮಿಕ ಕಾರ್ಯಪರಿಸರ (ಇಕೋ-ಸಿಸ್ಟಂ) ಮಾನದಂಡದ ದೃಷ್ಟಿಯಿಂದ ಜಗತ್ತಿನ ಅಗ್ರಮಾನ್ಯ 30 ನಗರಗಳ ಪಟ್ಟಿಯಲ್ಲಿ ಬೆಂಗಳೂರು 24ನೇ ಸ್ಥಾನದಲ್ಲಿ ರಾರಾಜಿಸುತ್ತಿದೆ.

ಆಶ್ಚರ್ಯವೆಂದರೆ, ಈ ಪಟ್ಟಿಯಲ್ಲಿ ಭಾರತದ ಬೇರಾವ ನಗರಗಳೂ ಇಲ್ಲ. ಇದಕ್ಕೆ, ಆತ್ಮನಿರ್ಭರ ತತ್ತ್ವದ ಮೇಲೆ ಬೆಂಗಳೂರು ಸೇರಿದಂತೆ ಇಡೀ ದೇಶವನ್ನು ಹೊಸ ಬಗೆಯಲ್ಲಿ ಕಟ್ಟುತ್ತಿರುವ ದೂರದೃಷ್ಟಿಯೇ ಕಾರಣ. ಇತ್ತೀಚಿನ ದಶಕಗಳಲ್ಲಿ ಬೆಂಗಳೂರು ಐಟಿ ಸೇವಾವಲಯವಾಗಿ, ಭಾರತದ ಸಿಲಿಕಾನ್ ವ್ಯಾಲಿಯಾಗಿದೆ ನಿಜ. ಇದು, ಧುತ್ತನೆ ಪ್ರಾಪ್ತವಾದ ಕೀರ್ತಿಯಲ್ಲ. ಇದರ ಹಿಂದೆ ಕೆಂಪೇಗೌಡರು ರೂಪಿಸಿದ ವ್ಯಾಪಾರ-ವಹಿವಾಟಿನ ಸುಸಂಸ್ಕೃತಿ ಇದೆ.

ಇದನ್ನೇ ಮೋದಿಯವರು ‘ಈಸ್ ಆಫ್ ಡೂಯಿಂಗ್ ಬಿಜಿನೆಸ್’ ಎನ್ನುವ ‘ಸುಲಲಿತ ವಹಿವಾಟಿನ ಸಂಸ್ಕೃತಿ’ಯಾಗಿ ಬೆಳೆಸಿ ದ್ದಾರೆ. ದ್ರಷ್ಟಾರನಂಥ ಒಬ್ಬ ನಾಯಕ, ಪರಂಪರೆಯಿಂದ ಪಡೆದುಕೊಳ್ಳುವಂತಹ ಸ್ಫೂರ್ತಿ-ಪ್ರೇರಣೆಗಳಿಗೆ ಇದೊಂದು ಒಳ್ಳೆಯ ನಿದರ್ಶನವಾಗಿದೆ. ಹೀಗಾಗಿ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿರಾರು ಕೋಟಿ ರುಪಾಯಿ ವೆಚ್ಚದ ಎರಡನೇ ಟರ್ಮಿನಲ್ ಮೈದಳೆದಿದ್ದು, ಈ ನಗರದ ವಾಣಿಜ್ಯ ವಹಿವಾಟಿಗೆ ಮತ್ತಷ್ಟು ರೆಕ್ಕೆಗಳನ್ನು ಒದಗಿಸಲಿದೆ.

ಹಾಗೆಯೇ, ಕೆಲ ತಿಂಗಳ ಹಿಂದೆ ಅವರು ಅಡಿಗಲ್ಲು ಹಾಕಿರುವ ಬೆಂಗಳೂರು ಸಬರ್ಬನ್ ರೈಲು ಯೋಜನೆಯು ಇನ್ನು ಕೆಲವೇ ವರ್ಷಗಳಲ್ಲಿ ಇಲ್ಲಿನ ಸಮೂಹ ಸಾರಿಗೆ ವ್ಯವಸ್ಥೆಗೆ ಸುಸ್ಥಿರತೆ ಮತ್ತು ಪರಿಸರಸ್ನೇಹಿ ಗುಣಗಳನ್ನು ತಂದುಕೊಡಲಿದೆ.
ಕೆಂಪೇಗೌಡರ ನಿಜವಾದ ಸ್ಮರಣೆ ಎಂದರೆ, ನಿಂತಲ್ಲಿಯೇ ನಿಲ್ಲುವುದಲ್ಲ. ಬದಲಿಗೆ, ಅವರಿಗಿದ್ದ ಕನಸುಗಳನ್ನು ಗ್ರಹಿಸಿ, ಅವರು ಕಟ್ಟಿದ ಒಂದು ನಗರವನ್ನು ೨೧ನೇ ಶತಮಾನದ ಅಗತ್ಯಗಳಿಗೆ ಸರಿಗಟ್ಟುವಂತೆ ಅಭಿವೃದ್ಧಿ ಪಡಿಸುವುದೇ ಆ ಭಾಗ್ಯ ವಿಧಾತರಿಗೆ ಸಲ್ಲಿಸುವ ಅರ್ಥಪೂರ್ಣ ಗೌರವವಾಗಿದೆ.

ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಗೆ ‘ಪ್ರಗತಿಯ ಪ್ರತಿಮೆ’ (Statue of Prosperity) ಎಂದು ನಾಮಕರಣ ಮಾಡಿರುವುದು, ಮೋದಿಯವರ ನಾಯಕತ್ವದಡಿ ಮುಂದಡಿ ಇಡುತ್ತಿರುವ ನವ ಭಾರತದ ಹಂಬಲವನ್ನು ಸಂಕೇತಿಸುತ್ತಿದೆ!

ಕೆಂಪೇಗೌಡರು ಕೃಷಿ, ನೀರಾವರಿ, ಪರಿಸರ ಸಂರಕ್ಷಣೆ ಹೀಗೆ ಎಲ್ಲವನ್ನೂ ತಮ್ಮ ಆದ್ಯತೆಗಳಾಗಿ ಪರಿಗಣಿಸಿ, ಅದಕ್ಕೆ ತಕ್ಕಂತೆ ಬೆಂಗಳೂರನ್ನು ಕಟ್ಟುತ್ತ ಬಂದರು. ಮೋದಿಯವರು ಕೂಡ ಮೂಲಸೌಲಭ್ಯ, ಜಲಮೂಲಗಳ ಶುದ್ಧೀಕರಣ, ಉದ್ಯಮಶೀಲತೆ,
ಸ್ಮಾರ್ಟ್ ಸಿಟಿಗಳ ಪರಿಕಲ್ಪನೆ, ತಂತ್ರಜ್ಞಾನಾಧಾರಿತ ಸೇವೆಗಳು, ದುರ್ಬಲರ ಸಬಲೀಕರಣ, ಜನಧನ್ ಯೋಜನೆಯ ಮೂಲಕ ಆರ್ಥಿಕ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸಕ್ರಿಯ ಪಾಲ್ಗೊಳ್ಳುವಿಕೆ, ಭ್ರಷ್ಟಾಚಾರವನ್ನು ಮಟ್ಟಹಾಕಲು ಫಲಾನುಭವಿ ಗಳ ಖಾತೆಗಳಿಗೆ ಹಣದ ನೇರ ವರ್ಗಾವಣೆ, ಪಾರದರ್ಶಕತೆ, ಬೊಕ್ಕಸ ಸದಾ ಸಮೃದ್ಧವಾಗಿರುವಂತೆ ಮಾಡಿರುವ ಜಿಎಸ್‌ಟಿ ವ್ಯವಸ್ಥೆ, ಸರಕು ಸಾಗಣೆಗೆ ಕಾರಿಡಾರ್‌ಗಳ ಅಭಿವೃದ್ಧಿ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸುಲಭ ಸಾಲ ಸೌಲಭ್ಯ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರ ಶ್ರೇಯೋಭಿವೃದ್ಧಿ ಇನ್ನೂ ಮುಂತಾದ ಕ್ರಮಗಳ ಮೂಲಕ ಹೊಸ ಚರಿತ್ರೆಯನ್ನು ಸೃಷ್ಟಿಸುತ್ತಿದ್ದಾರೆ.

ಸ್ವತಂತ್ರ ಭಾರತದ ಚರಿತ್ರೆಯನ್ನು ಬರೆಯುವವರು ಇದನ್ನು ಮರೆತು ಮುಂದಕ್ಕೆ ಹೋಗುವುದು ಸಾಧ್ಯವಿಲ್ಲ. ಇದು ನಮ್ಮ ನೆಲದ ಚರಿತ್ರೆಯನ್ನು ಸರಿಯಾಗಿ ಅರಿತವರಿಂದ ಮಾತ್ರ ಸಾಧ್ಯವಾಗುವಂಥದ್ದು. ಇಂತಹ ವಿರಳ ಪಂಕ್ತಿಯ ರಾಜನೀತಿಜ್ಞರಲ್ಲಿ
ಮೋದಿಯವರು ನಿಸ್ಸಂಶ ಯವಾಗಿಯೂ ಒಬ್ಬರಾಗಿದ್ದಾರೆ. ಏಕೆಂದರೆ, ಇವರದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಎನ್ನುವ ತತ್ತ್ವದಲ್ಲಿ ನಂಬಿಕೆ ಇಟ್ಟಿರುವ ಅಭಿವೃದ್ದಿ ಕೇಂದ್ರಿತ ರಾಜಕಾರಣವಾಗಿದೆ.

ಹೀಗಾಗಿ, ಬೆಂಗಳೂರು ಇಂದು ಜಾಗತಿಕ ಸ್ತರದಲ್ಲಿ ಕೂಡ ಭರವಸೆಯ ತಾಣವಾಗಿ ಕಾಣುತ್ತಿದೆ. ‘ಬೆಂಗಳೂರಿನ ಜನಕ’ ಕೆಂಪೇಗೌಡರ ಬೃಹತ್ ಪ್ರತಿಮೆ ಲೋಕಾರ್ಪಣೆಗೊಳ್ಳುತ್ತಿದೆ. ಇದನ್ನು ‘ನವಭಾರತದ ಅಧ್ವರ್ಯು’ ಮೋದಿಯವರು ಸಮಾಜಕ್ಕೆ ಸಮರ್ಪಿಸುತ್ತಿರುವುದು ಕೇವಲ ಕಾಕತಾಳೀಯವಲ್ಲ, ಬದಲಿಗೆ ಒಂದು ಯೋಗಾಯೋಗ! ಇಲ್ಲಿ ಕೆಂಪೇಗೌಡರು ಚರಿತ್ರೆಯ ವೈಭವದ ಸಾಕ್ಷಿಯಾದರೆ, ಮೋದಿಯವರು ವರ್ತಮಾನದ ಉತ್ತುಂಗದ ಕಾರಣಪುರುಷ. ಎರಡೂ ತರಹದ ಈ ವಿಭೂತಿಶಕ್ತಿ ಗಳು ಒಂದಕ್ಕೊಂದು ಹೆಗಲೆಣೆಯಾಗಿ, ಬೆಂಗಳೂರನ್ನು ಪ್ರಗತಿಯ ಸೋಪಾನವನ್ನಾಗಿ ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ.