Wednesday, 11th December 2024

ಹೋಮ್ ಮತ್ತು ಹೊಂದಾಣಿಕೆ

ಪ್ರತಿಸ್ಪಂದನ

ಶಂಕರನಾರಾಯಣ ಭಟ್

‘ಸಂಪಾದಕರ ಸದ್ಯಶೋಧನೆ’ ಕಿರುಬರಹ ಹಾಗೂ ‘ಶ್ವೇತಪತ್ರ’ ಅಂಕಣ ಬರಹ (ವಿಶ್ವವಾಣಿ ಮಾ.೧೩) ಖುಷಿ ಕೊಟ್ಟವು. ಸದ್ಯಶೋಧನೆಯಲ್ಲಿ ಇಂಗ್ಲಿಷ್‌ನ ‘ಹೋಮ್’ ಪದದ ವಿವರಣೆ ಮತ್ತು ಅದರ ಸುತ್ತಮುತ್ತಲ ವ್ಯಾಖ್ಯೆಗಳು ಸೊಗಸಾಗಿ ಮೂಡಿಬಂದಿವೆ. ‘ಹೋಮ್’ ವಿಷಯದಲ್ಲಂತೂ ರಾಜಿಯೇ ಇಲ್ಲ. ಸ್ವಂತ ಮಗನ ಅಥವಾ ಮಗಳ ಮನೆಯಲ್ಲಿದ್ದ ತಂದೆ-ತಾಯಿ, ಅಲ್ಲಿ ಹೆಚ್ಚು ದಿನ ಉಳಿಯಲು ಇಷ್ಟಪಡುವುದಿಲ್ಲ. ಅವರಿಗೆ ತಮ್ಮ ಮನೆಯನ್ನು ಸೇರುವ ಉತ್ಸುಕತೆ ಇದ್ದೇ ಇರುತ್ತದೆ. ಇನ್ನು, ಬಾಡಿಗೆಯ ಮನೆ ಯನ್ನು ‘ಹೌಸ್’ ಅಂತಲೂ, ಸ್ವಂತವಾದುದನ್ನು ‘ಹೋಮ್’ ಅಂತಲೂ ಕರೆಯುವುದರ ಕಾರಣವೂ ಇದೇನೇ. ಪಂಚತಾರಾ ಸೌಲಭ್ಯಗಳಿರುವ ಯಾವುದೇ ಪ್ರದೇಶಕ್ಕೆ ಹೋದರೂ ಮನೆಯ ಸುಖ ಅಲ್ಲಿ ಸಿಗದು.

‘ಮನೆ’ ಎಂಬ ಪರಿಕಲ್ಪನೆಯೇ ಅಷ್ಟೊಂದು ಪವಿತ್ರವಾದದ್ದು, ಹಿತವನ್ನು ನೀಡುವಂಥದ್ದು. ‘ಹೋಮ್ ಸಿಕ್‌ನೆಸ್’ ಕುರಿತೂ ಈ ಬರಹದಲ್ಲಿ ಉಲ್ಲೇಖ
ವಿದೆ. ಅಂತೆಯೇ, ಮನೆ ಬಿಟ್ಟು ಹೋಗದೇ ಇದ್ದವರಿಗೆ ಅವರು ಹೋದ ಸ್ಥಳದಲ್ಲಿ ಎಷ್ಟೇ ಅನುಕೂಲತೆ ಗಳಿದ್ದರೂ ತಮ್ಮ ಮನೆಗೆ ಮರಳುವುದೆಂದರೆ ಅದೆಷ್ಟು ಉತ್ಸಾಹ, ಲವಲವಿಕೆ! ಇನ್ನು, ಉದ್ಯೋಗ ನಿಮಿತ್ತ ವಾಗಿ ಹೊರಗಡೆ ಹೋದ ಅನೇಕರು ಅಲ್ಲೇ ಮನೆ ಮಾಡಿಕೊಂಡಿ ದ್ದರೂ, ಅವಕಾಶ ಸಿಕ್ಕಾಗಲೆಲ್ಲ ಹುಟ್ಟಿದೂರಿನ ಸ್ವಂತ ಮನೆಗೆ ಬರುವು ದನ್ನು ತಪ್ಪಿಸಿಕೊಳ್ಳುವುದಿಲ್ಲ.

ಇದೊಂದು ಭಾವನಾತ್ಮಕ ಸಂಬಂಧ; ಇದನ್ನು ಏಕೆ, ಹೇಗೆ ಅಂತ ಪ್ರಶ್ನಿಸಲಾಗದು; ಹಾಗೆ ಪ್ರಶ್ನಿಸಿದರೆ ವಿವರಿಸಲೂ ಆಗದು. ನನ್ನ ಮನೆ, ಬಂಗಾರದ ಮನೆ. ಅಷ್ಟೇ! ಇನ್ನು, ಡಾ. ಶ್ವೇತಾ ಅವರ, ‘ಅಂದುಕೊಳ್ಳುವುದಲ್ಲ, ಹೊಂದಿ ಕೊಳ್ಳುವುದು ಜೀವನ’ ಎಂಬ ಗ್ರಹಿಕೆಯೂ ಸರಿಯಾಗಿಯೇ ಇದೆ. ಜೀವನ ಎಂದರೇನೇ ಹೊಂದಾಣಿಕೆಯ ಒಂದು ಮೂಟೆ. ಕಾರಣ, ಎಲ್ಲವೂ ಎಲ್ಲ ಸಮಯದಲ್ಲೂ ನಾವಂದುಕೊಂಡಂತೆ ನಡೆಯಲು ಸಾಧ್ಯವೇ ಇಲ್ಲ. ಇದು ಪ್ರಕೃತಿ ನಿಯಮ ಅಂದರೂ ತಪ್ಪಲ್ಲ. ಹೀಗಾಗಿ ಶಾಂತಿಯುತ ಮತ್ತು ನೆಮ್ಮದಿಯ ಜೀವನ ಸಾಗಿಸಬೇಕೆಂದಿದ್ದರೆ ಹೊಂದಾಣಿಕೆ ಇರಲೇಬೇಕು. ಇದು ಒಂದು ಕುಟುಂಬಕ್ಕೂ ಅಷ್ಟೇ ಅನ್ವಯ. ಕುಟುಂಬದ ಸದಸ್ಯರೆಲ್ಲರ ನಡೆ, ನುಡಿ, ವ್ಯವಹಾರ ಒಂದೇ ರೀತಿಯಲ್ಲಿರುತ್ತದೆ ಎನ್ನಲಾಗದು; ಇಷ್ಟಾಗಿಯೂ ಒಂದು ಕುಟುಂಬ ಅಂದಮೇಲೆ ಅದರ ಸದಸ್ಯರೆಲ್ಲರೂ ಒಟ್ಟಾಗಿ ಇರಬೇಕು.

ಹೀಗಿರಬೇಕೆಂದರೆ ಒಂದು ಮಟ್ಟಿಗಿನ ತ್ಯಾಗವೂ ಅಗತ್ಯವಾಗುತ್ತದೆ, ಇನ್ನು ಕೆಲವನ್ನು ಮನಸ್ಸಿಲ್ಲದಿದ್ದರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಅದಿಲ್ಲ ಅಂದರೆ ಮನೆಯೂ ಒಡೆಯುತ್ತದೆ, ಮನವೂ ಮುರಿಯುತ್ತದೆ. ಹೊಂದಾಣಿಕೆ ಇಲ್ಲವಾದಾಗ ಮನೆಯೆಂಬ ಗೂಡು ಅಸಂತೋಷ, ಅಸಮಾಧಾನದ ಬೀಡಾಗುತ್ತದೆ. ಅದರಲ್ಲೂ, ಮನೆಯ ಯಜಮಾನ ಎನಿಸಿಕೊಂಡವನು ಹೊಂದಿಕೊಳ್ಳಲು ಅದೆಷ್ಟು ಶಕ್ಯನೋ, ಕುಟುಂಬ ಮತ್ತು ಜೀವನವೂ ಅಷ್ಟೇ ಸುಗಮವಾಗಿ ಸಾಗೀತು. ಈ ಹೊಂದಾಣಿಕೆ ಎಂಬುದು ಮನೆಗಷ್ಟೇ ಸೀಮಿತವಲ್ಲ, ಮನೆ ಯಾಚೆಗಿನ ಯಾವ ಕಾರ್ಯಕ್ಷೇತ್ರವೂ ಇದಕ್ಕೆ ಹೊರತಲ್ಲ.

ಕಾರ್ಯ ನಿರ್ವಹಣೆಯ ಪ್ರತಿ ಹಂತದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಹೊಂದಾಣಿಕೆಯ ಅಗತ್ಯ ಇದ್ದೇ ಇರುತ್ತದೆ. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಕಚೇರಿಯಲ್ಲಿ ಬಾಸ್ ಮತ್ತು ಸಹೋದ್ಯೋಗಿಗಳು, ರಾಜಕೀಯದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಹೊಂದಿಕೊಂಡು ಹೋಗ ದಿದ್ದರೆ ನಿರೀಕ್ಷಿತ ಫಲಿತಾಂಶ ದುರ್ಲಭ. ಇಂಥ ಸಂಬಂಧಗಳಲ್ಲಿ ಹೊಂದಾಣಿಕೆಯು ಒಂದಲ್ಲಾ ಒಂದು ರೂಪದಲ್ಲಿ ಇದ್ದೇ ಇರುತ್ತದೆ. ಇದು ಯಾವ ದೃಷ್ಟಿಯಿಂದಲೂ ಕೀಳರಿಮೆಯ ಲಕ್ಷಣವಲ್ಲ, ಬದಲಿಗೆ ಉತ್ತಮ ಜೀವನಕ್ಕಿರುವ ಮೆಟ್ಟಿಲುಗಳಲ್ಲೊಂದು. ಇದನ್ನು ಅರ್ಥಮಾಡಿಕೊಂಡು ವ್ಯವಹರಿಸಿ ದರೆ ಎಲ್ಲವೂ ಸುಗಮ!

(ಲೇಖಕರು ಹವ್ಯಾಸಿ ಬರಹಗಾರರು)