Saturday, 23rd November 2024

ವೈದ್ಯಕೀಯದ ತಪ್ಪು-ಒಪ್ಪುಗಳ ಸರದಾರ ಗ್ಯಾಲನ್

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಮನುಷ್ಯನು ತನ್ನನ್ನು ತಾನು ಬುದ್ಧಿವಂತ ಮನುಷ್ಯ -ಹೋಮೋ ಸೆಪಿಯನ್ಸ್-ಎಂದು ಕರೆದುಕೊಂಡಿದ್ದಾನೆ. ಹಾಗಾಗಿ ತನ್ನ
ಬುದ್ಧಿಶಕ್ತಿಯನ್ನು ಬಳಸಿ, ತನ್ನ ಅಂತರಂಗ ಜಗತ್ತನ್ನು- ಬಹಿರಂಗ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಪ್ರಯತ್ನದಲ್ಲಿ ಅವನಿಂದ ಹಲವು ತಪ್ಪುಗಳಾಗಿವೆ.

ಆಗುತ್ತಲಿವೆ. ತನ್ನ ತಪ್ಪು-ಒಪ್ಪುಗಳ ಮೂಲಕವೇ ಜ್ಞಾನ ಎನ್ನುವುದು ನಿಂತ ನೀರಲ್ಲ, ಅದು ಸದಾ ಹರಿಯುತ್ತಿರುತ್ತದೆ ಎನ್ನುವು ದನ್ನು ಮನಗಂಡ. ವಿಜ್ಞಾನದಲ್ಲಿ ಇಂದು ನಾವು ಸತ್ಯವೆಂದು ಭಾವಿಸಿರುವುದು ನಾಳೆ ಸುಳ್ಳಾಗುತ್ತದೆ ಎಂಬ ವಾಸ್ತವವನ್ನು ತನ್ನ ಅನುಭವದಿಂದ ತಿಳಿದುಕೊಂಡ. ಹಾಗಾಗಿ ಪ್ರಕೃತಿಯ ಮುಂದೆ ನಮ್ರತೆಯನ್ನು ಬೆಳೆಸಿ ಕೊಂಡ. ಇದಕ್ಕೆ ಅತ್ಯುತ್ತಮ ಉದಾಹರಣೆ ರೋಮನ್ ವೈದ್ಯ ಗ್ಯಾಲನ್ನನ ಬದುಕು-ಬರಹ ಮತ್ತು ಸಾಧನೆ.

ರೋಮನ್ ಸಾಮ್ರಾಜ್ಯದಲ್ಲಿ ಐಲಿಯಸ್ ಗ್ಯಾಲನಸ್ ಅಥವ ಕ್ಲಾಡಿಯಸ್ ಗ್ಯಾಲನಸ್ (ಕ್ರಿ.ಶ.129-ಕ್ರಿ.ಶ.216) ಎಂದು ಹೆಸರಾಗಿದ್ದ ವೈದ್ಯನನ್ನು ಇಂಗ್ಲಿಷ್ ಭಾಷೆಯಲ್ಲಿ ಗ್ಯಾಲನ್ ಎಂದು ಕರೆಯುವುದು ವಾಡಿಕೆ. ಈತ ಸಮಕಾಲೀನ ಜಗತ್ತಿನ ಪ್ರಖ್ಯಾತ ವೈದ್ಯನು ಹಾಗೂ ದಾರ್ಶನಿಕನೂ ಆಗಿದ್ದ. ಅಂಗರಚನೆ, ಅಂಗಕ್ರಿಯೆ, ರೋಗವಿಜ್ಞಾನ, ಔಷಧ ವಿಜ್ಞಾನ, ನರ ವೈದ್ಯಕೀಯ, ತತ್ತ್ವಶಾಸ ಹಾಗೂ ತರ್ಕಶಾಸದಲ್ಲಿ ಅಸಾಧಾರಣ ಅಧ್ಯಯನ-ಸಂಶೋಧನೆಯನ್ನು ನಡೆಸಿದ್ದ.

ಈತನು ಎಷ್ಟು ಪ್ರಬುದ್ಧನಾಗಿದ್ದ ಎಂದರೆ ಒಮ್ಮೆಲೆ 20 ಲಿಪಿಕಾರರನ್ನು ಕೂರಿಸಿಕೊಂಡು ಅವರಿಗೆ ವಿವಿಧ ವಿಷಯಗಳನ್ನು ಕುರಿತು ಉಕ್ತಲೇಖನವನ್ನು ನೀಡುತ್ತಿದ್ದನಂತೆ. ತನ್ನ ಜೀವಮಾನದಲ್ಲಿ 500 ವಿಷಯಗಳ ಮೇಲೆ 21 ಸಂಪುಟಗಳನ್ನು ಬರೆದ.
ಒಂದೊಂದು ಸಂಪುಟದಲ್ಲಿಯೂ ಸರಾಸರಿ 1000 ಪುಟಗಳಿದ್ದವು. ಈತನು ತನ್ನ ಬರಹಗಳ ಮೂಲಕ ಯೂರೋಪ್, ಅರಬ್ ಮತ್ತು ಬೈಝಂಟೈನ್ ರಾಷ್ಟ್ರಗಳ ವೈದ್ಯಕೀಯದ ಮೇಲೆ ಸುಮಾರು 1400 ವರ್ಷಗಳವರೆಗೆ (17ನೆಯ ಶತಮಾನ) ಪ್ರಭಾವ ವನ್ನು ಬೀರಿದ.

ಗ್ಯಾಲನ್, ಪೆರ್ಗಮಾನ್ ಎಂಬ ನಗರದಲ್ಲಿ ಹುಟ್ಟಿದ. ಇದು ಇಂದಿನ ಟರ್ಕಿ ದೇಶದಲ್ಲಿರುವ ಬೆರ್ಗಮ ಎಂಬ ನಗರ. ಈತನು
ಐಲಿಯಸ್ ನಿಕಾನ್ ಎಂಬ ಗ್ರೀಕ್ ವಾಸ್ತುತಜ್ಞ ಹಾಗೂ ವಿದ್ವಾಂಸನ ಮಗ. ಶ್ರೀಮಂತಿಕೆಯಲ್ಲಿ ಬೆಳೆದ ಗ್ಯಾಲನ್ ಕ್ರಮಬದ್ಧವಾದ
ಶಿಕ್ಷಣವನ್ನು ಪಡೆದ. ಐಲಿಯಸ್ ನಿಕಾನನಿಗೆ, ತನ್ನ ಮಗನು ದಾರ್ಶನಿಕನು ಹಾಗೂ ರಾಜನೀತಿಜ್ಞನು ಆಗಲಿ ಎಂದು ಆಸೆ. ಆದರೆ ಒಂದು ರಾತ್ರಿ ಆಸ್ಕ್ಲೆಪಿಯಸ್ (ಗ್ರೀಕ್ ಸಂಸ್ಕೃತಿಯ ವೈದ್ಯಕೀಯ ಅಧಿದೈವ) ಐಲಿಯಾಸ್ ನಿಕಾನಿನ ಕನಸಿನಲ್ಲಿ ಬಂದು ನೀನು ಗ್ಯಾಲನ್‌ನನ್ನು ವೈದ್ಯನನ್ನಾಗಿ ಮಾಡು ಎಂದ ನಂತೆ. ಅದರಂತೆ ಗ್ಯಾಲನ್ ತನ್ನ 16ನೆಯ ವಯಸ್ಸಿನಲ್ಲಿ ವೈದ್ಯಕೀಯ ವನ್ನು ಸ್ಥಳೀಯ ಆಸ್ಕ್ಲೆಪಿಯಾನ್ ಆಲಯದಲ್ಲಿ ಕಲಿಯಲಾರಂಭಿಸಿದ. ಗ್ಯಾಲನ್‌ನಿಗೆ 19 ವರ್ಷಗಳಾದಾಗ ಆತನ ತಂದೆ ತೀರಿಕೊಂಡ.

ಹಿಪ್ರೋಕ್ರೇಟ್ಸ್ ತನ್ನ ಬರಹದಲ್ಲಿ ಹೇಳಿರುವ ಹಾಗೆ, ಲೋಕಸಂಚಾರವನ್ನು ಮಾಡಿ, ತನ್ನ ವೈದ್ಯಕೀಯ ಜ್ಞಾನವನ್ನು ಹೆಚ್ಚಿಸಿ ಕೊಳ್ಳಲು ನಿರ್ಧರಿಸಿದ. ಸ್ಮೆ ನರ್, ಕಾರಿಂಥ್, ಕ್ರೀಟ್, ಸಿಲೀಸಿಯ, ಸೈಪ್ರಸ್ ದೇಶಗಳನ್ನು ಸುತ್ತಿ ಕೊನೆಗೆ ಅಂದಿನ ಜಗತ್ತಿನ ಬೌದ್ಧಿಕ ಕೆಂದ್ರವಾಗಿದ್ದ ಅಲೆಗ್ಸಾಂಡ್ರಿಯಕ್ಕೆ ಬಂದ. ಅಲ್ಲಿ ತನ್ನ ವೈದ್ಯಕೀಯ ಜ್ಞಾನವನ್ನು ಪರಿಪಕ್ವಗೊಳಿಸಿಕೊಂಡ. ಹೀಗೆ ದೇಶ ಸುತ್ತಿ, ಕೋಶ ಓದಿ ಅರಿವನ್ನು ಹೆಚ್ಚಿಸಿಕೊಂಡು, ತನ್ನ 28ನೆಯ ವರ್ಷದಲ್ಲಿ ಪೆರ್ಗಮಾನಿಗೆ (ಕ್ರಿ.ಶ.157) ಹಿಂದಿರುಗಿದ. ರೋಮನ್ ಗ್ಲೇಡಿಯೇಟರ್‌ಗಳ (ರೋಮನ್ ಸಂಸ್ಕೃತಿಯಲ್ಲಿ ಶ್ರೀಮಂತರ ಮನರಂಜನೆಗಾಗಿ ರಂಗದ ನಡುವೆ ಪ್ರಾಣಿ ಅಥವ ಮನುಷ್ಯರ ಜತೆ ಹೋರಾಡಿ ಜೀವ ತೆರಲು ಸಿದ್ಧನಾಗಿರುವ ಯೋಧ) ವೈದ್ಯನಾದ.

ಅವರಿಗಾಗುವ ಗಾಯಗಳ ಮೂಲಕ ಮನುಷ್ಯನ ಶರೀರ ರಚನೆಯನ್ನು ತಿಳಿಯಲು ಪ್ರಯತ್ನಿಸಿದ. ಕ್ರಿ.ಶ.167ರಲ್ಲಿ ಗ್ಯಾಲನ್ ರೋಮ್ ನಗರಕ್ಕೆ ಬಂದು ನೆಲೆಸಿದ. ಗ್ಯಾಲನ್ನನಿಗೆ ಅಂಗರಚನ ವಿಜ್ಞಾನದ ಬಗ್ಗೆ ಆಳವಾದ ಅರಿವಿತ್ತು. ರೋಮನ್ನರ ಎದುರಿನಲ್ಲಿ ಸಾರ್ವಜನಿಕರೆದು ಪ್ರಾಣಿಗಳ ಅಂಗವಿಚ್ಚೇದನ ಪ್ರಾತ್ಯಕ್ಷಿಕೆಯ ಜೊತೆಯಲ್ಲಿ ಭಾಷಣಗಳನ್ನು ನೀಡಲಾರಂಭಿಸಿದ. ಅವನ ನಾಟಕೀಯ ಭಾಷಣವು ಜನರನ್ನು ಸೆಳೆಯಿತು. ಗ್ಯಾಲನ್ ಶ್ರೀಮಂತ. ಪ್ರತಿಭಾವಂತ. ಪ್ರಭಾವಿ. ಸಮಾಜದ ಗಣ್ಯರ  ಪರಿಚಯ ವಿತ್ತು.

ವಾಸಿ ಮಾಡಲಾಗದ ರೋಗಗಳನ್ನು ಗುಣಪಡಿಸಿದ. ಹಾಗಾಗಿ ಅತ್ಯಲ್ಪ ಕಾಲದಲ್ಲಿ ಅವನು ರೋಮ್ ನಗರದ ಮಹಾನ್ ಗಣ್ಯರಲ್ಲಿ ಒಬ್ಬನೆ ನಿಸಿದ. 168-169ರಲ್ಲಿ ಚಕ್ರವರ್ತಿ ಮಾರ್ಕಸ್ ಅರಿಲಿ ಯಸ್, ಲೂಸಿಯಸ್ ವೆರಸ್, ಕೊಮೋಡಸ್, ಸೆಪ್ಟೀಮಿಯಸ್ ಸೆವಿರಸ್ ಮುಂತಾದ ರೋಮ್ ಅರಸರ ಸೇವೆಯಲ್ಲಿ ಮಗ್ನನಾದ. ಗ್ಯಾಲನ್ ಇದ್ದ ರೋಮನ್ ಕಾಲದಲ್ಲಿ ಮಾನವ ಶರೀರ
ವಿಚ್ಛೇದನಕ್ಕೆ ಅನುಮತಿಯಿರಲಿಲ್ಲ. ಇದು ಗ್ಯಾಲನ್ನನ ಅರಿವಿಗೆ ದೊಡ್ಡ ಮಿತಿಯನ್ನು ಹೇರಿತು. ಆತನು ಆಫ್ರಿಕದ ಬಾರ್ಬರಿ
ಮಂಗ, ಹಂದಿ, ಮೇಕೆ, ಕುರಿಗಳ ದೇಹವನ್ನು ವಿಚ್ಛೇದಿಸಿದ.

ಅವುಗಳ ಅಂಗರಚನೆಯನ್ನು ಅಧ್ಯಯನ ಮಾಡಿದ. ಅವುಗಳ ಹಾಗೆಯೇ ಮನುಷ್ಯರ ಅಂಗರಚನೆಯೂ ಇರಬೇಕೆಂಬ ತೀರ್ಮಾನಕ್ಕೆ ಬಂದ. ಇದು ಅವನು ಮಾಡಿದ ಏಕೈಕ ತಪ್ಪು. ಗ್ಯಾಲನ್ ಬಹಳ ಸೂಕ್ಷ್ಮವಾಗಿ ಅಧ್ಯಯನವನ್ನು ಮಾಡುತ್ತಿದ್ದ. ಮಿದುಳಿನಿಂದ ಹೊರಬರುವ 12 ಜತೆ ನರಗಳಲ್ಲಿ 7 ಜತೆ ನರಗಳನ್ನು ಕಂಡುಹಿಡಿದ. ಹೃದಯದ ಒಳಗೆ  ಕವಾಟಗಳಿರುವುದನ್ನು ಗಮನಿಸಿದ. ಗ್ಯಾಲನ್ನಿನಿಗಿಂತ ಮೊದಲಿದ್ದ ಅಂಗರಚನಕಾರರು ಮನುಷ್ಯನ ದೇಹವನ್ನು ಛೇದಿಸಿದ್ದರು. ಮೃತ ದೇಹದ
ರಕ್ತನಾಳಗಳಲ್ಲಿ ರಕ್ತದ ಬದಲು ಗಾಳಿಯಿರುವುದನ್ನು ಗಮನಿಸಿದ್ದರು.

ಹಾಗಾಗಿ ಗಾಳಿಯನ್ನು ಸಾಗಿಸುವ ಕೊಳವೆ ಎನ್ನುವ ಅರ್ಥದಲ್ಲಿ ಆರ್ಟರಿ ಎನ್ನುವ ಶಬ್ದವನ್ನು ಬಳಸಿದರು. ಈ ನಂಬಿಕೆಯು 400 ವರ್ಷಗಳವರೆಗೆ ಮುಂದುವರೆಯಿತು. ಗ್ಯಾಲನ್, ಜೀವಂತವಾಗಿ ಇರುವವರ ಆರ್ಟರಿಗಳಲ್ಲಿ ಗಾಳಿಯಲ್ಲ, ರಕ್ತ ಸಂಚರಿಸುತ್ತದೆ ಎನ್ನುವುದನ್ನು ತೋರಿಸಿದ. ಜೀವಂತ ಹಂದಿಯ ಶರೀರವನ್ನು ಛೇದಿಸಿ, ಅದರ ಗಂಟಲಿನ ಬಳಿಯಲ್ಲಿದ್ದ ರಿಕರೆಂಟ್ ಲರೆಂಜಿ ಯಲ್ ನರ್ವ್ ಎಂಬ ನರವನ್ನು ಬಿಗಿಯಾಗಿ ಕಟ್ಟಿದ. ಹಂದಿಯು ನೋವಿನಿಂದ ಚೀರುತ್ತಿದ್ದರೂ ಸಹ, ಚೀರುವಿಕೆ ಯಾರಿಗೂ ಕೇಳಿಸುತ್ತಿರಲಿಲ್ಲ. ಈ ಪ್ರಯೋಗದ ಮೂಲಕ ಮಿದುಳು ಜೀವಿಗಳ ಧ್ವನಿ, ಶಬ್ದ, ಮಾತನ್ನು ನಿಯಂತ್ರಿಸುತ್ತದೆಯೆಂದ.

ಮೂತ್ರವಾಹಕ ನಾಳಗಳನ್ನು ಕಟ್ಟಿಹಾಕಿದ. ನೋಡುತ್ತಿರುವಂತೆಯೇ ಮೂತ್ರಪಿಂಡಗಳು ದಪ್ಪಗಾಗಲಾರಂಭಿಸಿದವು. ಮೂತ್ರ ಪಿಂಡಗಳು ಮೂತ್ರವನ್ನು ಉತ್ಪಾದಿಸುತ್ತವೆ, ಅದು ಮೂತ್ರವಾಹಕ ನಾಳಗಳಿಂದ ಮೂತ್ರಾಶಯವನ್ನು ತಲುಪುತ್ತದೆ, ಅಲ್ಲಿಂದ ಮೂತ್ರವು ಹೊರಬರುತ್ತದೆ ಎನ್ನುವುದನ್ನು ತೋರಿಸಿಕೊಟ್ಟ. ಮಿದುಳಿ ಬಳ್ಳಿಯನ್ನು ವಿವಿಧ ಮಟ್ಟದಲ್ಲಿ ಛೇದಿಸಿ, ಮಿದುಳು ಬಳ್ಳಿಯಿಂದ ಬರುವ ನರಗಳು ಶರೀರದ ಸ್ನಾಯುಗಳನ್ನು ನಿಯಂತ್ರಿಸುವ ಬಗ್ಗೆ ಪುರಾವೆಯನ್ನು ಒದಗಿಸಿದ. ಹೀಗೆಯೇ ಹೆಣ್ಣು ನಾಯಿಯ ಗರ್ಭಾಶಯವನ್ನು ಅಧ್ಯಯನವನ್ನು ಮಾಡಿ, ಮಹಿಳೆಯರ ಗರ್ಭಾಶಯವೂ ಹಾಗೆಯೇ ಇರುತ್ತದೆ ಎಂದದ್ದು ಮಾತ್ರ ಖೇದವೆನಿಸುತ್ತದೆ.

ಅಂಗಕ್ರಿಯಾ ವಿಜ್ಞಾನದ ಬಗ್ಗೆ ಗ್ಯಾಲನ್, ತನಗಿಂತ ಮೊದಲಿದ್ದ ಹಿಪ್ರೋಕ್ರೇಟ್ಸ್, ಪ್ಲೇಟೊ, ಅರಿಸ್ಟಾಟಲ್ ಹೇಳಿದ್ದನ್ನು ಹೆಚ್ಚೂ ಕಡಿಮೆ ಹಾಗೆಯೇ ಒಪ್ಪಿದ್ದ. ಮನುಷ್ಯನ ಶರೀರದಲ್ಲಿ ಮೂರು ವ್ಯವಸ್ಥೆಗಳಿವೆ. ಮೊದಲನೆಯದು ಮಿದುಳು ಮತ್ತು ನರಗಳ ವ್ಯವಸ್ಥೆ. ಈ ವ್ಯವಸ್ಥೆಯು ಮನುಷ್ಯನ ಎಲ್ಲ ಸಂವೇದನೆಗಳನ್ನು ಹಾಗೂ ವಿಚಾರಗಳನ್ನು ನಿಯಂತ್ರಿಸುತ್ತವೆ ಎಂದ.

ಎರಡನೆಯ ಹೃದಯ ಮತ್ತು ಧಮನಿ ವ್ಯವಸ್ಥೆಯು ಚೈತನ್ಯದಾಯಕ ಶಕ್ತಿಯನ್ನು ಶರೀರದಾದ್ಯಂತ ವಿತರಿಸುತ್ತವೆ ಎಂದ.
ರಕ್ತವು ಯಕೃತ್ತಿನಲ್ಲಿ ಉತ್ಪತ್ತಿಯಾಗುತ್ತದೆ, ಸಿರೆಗಳು ಪೋಷಕಾಂಶ ಭರಿತ ರಕ್ತವನ್ನು ಎಲ್ಲ ಅಂಗಗಳಿಗೆ ಪೂರೈಸಿ, ಬೆಳವಣಿಗೆಗೆ
ಕಾರಣವಾಗುತ್ತವೆ ಎಂದ. ಅಲ್ಪಪ್ರಮಾಣದ ರಕ್ತವು ಶ್ವಾಸಕೋಶಗಳಲ್ಲಿರುವ ಗಾಳಿಯಲ್ಲಿ ಬೆರೆತು, ಅಲ್ಲಿಂದ ಹೃದಯದ ಬಲ
ಭಾಗಕ್ಕೆ ಬಂದು, ನಡುತಡಿಕೆಯಲ್ಲಿರುವ ಅದೃಶ್ಯ ರಂಧ್ರಗಳ ಮೂಲಕ, ಹೃದಯದ ಎಡ ಭಾಗಕ್ಕೆ ಸಾಗುತ್ತದೆ ಎಂದು ನಂಬಿದ್ದ. ಇಲ್ಲಿಂದ ಅಲ್ಪಪ್ರಮಾಣದ ರಕ್ತವು ಮಿದುಳಿಗೆ ಹೊಗಿ, ಅಲ್ಲಿರುವ ನ್ಯೂಮ ಎನ್ನುವ ನಮ್ಮ ಚೈತನ್ಯವನ್ನು ಹೀರಿಕೊಳ್ಳುತ್ತದೆ ಎಂದ. ಈ ಚೈತನ್ಯವೇ ನಮ್ಮ ಎಲ್ಲ ಸಂವೇದನೆಗಳಿಗೆ ಕಾರಣವೆಂದ.

ಗ್ಯಾಲನ್ ಎಷ್ಟು ನಾಟಕೀಯವಾಗಿ, ಎಲ್ಲರೂ ನಂಬುವಂತೆ ವಿವರಿಸುತ್ತಿದ್ದ ಎಂದರೆ, ಅವನನ್ನು ವಿರೋಧಿಸುವ ತಿಳಿವಳಿಕೆ ಯಾಗಲಿ, ಧೈರ್ಯವಾಗಲಿ ಯಾರಿಗೂ ಇರಲಿಲ್ಲ. ಹಾಗಾಗಿ ಗ್ಯಾಲನ್ ಭಾವಿಸಿದ್ದ ಹಲವು ತಪ್ಪುಗಳನ್ನು, ಪರಮಸತ್ಯವೆಂದು 1400 ವರ್ಷಗಳವರೆಗೆ ಒಪ್ಪಿದರು. ಹಿಪ್ರೋಕ್ರೇಟ್ಸ್ ಮನುಷ್ಯರ ಶರೀರದಲ್ಲಿ ರಕ್ತ, ಕಫ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತಗಳು ಹರಿಯುತ್ತವೆ; ಇವುಗಳ ನಡುವೆ ಸಮತೋಲನೆ ಇದ್ದಾಗ ಆರೋಗ್ಯವು ಲಭಿಸುತ್ತದೆ; ಅಸಮತೋಲನವಾದಾಗ ರೋಗಗಳು ಬರುತ್ತವೆ ಎಂದು ಹೇಳಿದ್ದ.

ಗ್ಯಾಲನ್ ಈ ಸಿದ್ಧಾಂತವನ್ನು ಒಪ್ಪಿ ಪರಿಷ್ಕರಿಸಿದ. ಇವು ವ್ಯಕ್ತಿಯ ಆರೋಗ್ಯದ ಜೊತೆಯಲ್ಲಿ ಅವನ ವ್ಯಕ್ತಿತ್ವವನ್ನು ರೂಪಿಸುತ್ತದೆ ಯೆಂದ. ಆ ವ್ಯಕ್ತಿತ್ವಕ್ಕೆ ಆಶಾವಾದಿ (ಸಾಂಗ್ವೈನ್) ಸಂಯಮಿ (-ಗ್ಮಾಟಿಕ್) ಸಿಡುಕ (ಕಾಲರಿಕ್) ಮತ್ತು ವಿಷಣ್ಣ (ಮಲಾಂಕೊಲಿಕ್) ಎಂಬ ಹೆಸರನ್ನು ನೀಡಿದ. ಧಾತುಗಳ ಅಸಮತೋಲನವು ನಿರ್ದಿಷ್ಟ ಅಂಗದಲ್ಲಿ ಹಾಗೂ ಶರೀದಾದ್ಯಂತ ಕಂಡುಬರುತ್ತದೆ. ಸೂಕ್ತ ಚಿಕಿತ್ಸೆಯಿಂದ ಇದನ್ನು ಸರಿಪಡಿಸಬಹುದೆಂದ. ಬುಡವೇ ಇಲ್ಲದ ಈ ಕಲ್ಪನೆಯನ್ನೇ ನಿಜವೆಂದು ನಂಬಿದರು. ಚಿಕಿತ್ಸೆ ಯನ್ನು ನೀಡುತ್ತಿದ್ದರು.

ಗ್ಯಾಲನ್ನನ ಜೀವಮಾನದಲ್ಲಿಯೇ ಅವನ ಗ್ರಂಥಗಳು ಪ್ರಖ್ಯಾತವಾದವು. ಅವನು ವೈದ್ಯಕೀಯವನ್ನು ಕಲಿತ ಅಲೆಗ್ಸಾಂಡ್ರಿಯದಲ್ಲಿ ಪಠ್ಯಪುಸ್ತಕಗಳಾದವು. ಹುನಾಯಿನ್ ಇಬ್ನ್ ಇಶಾಕ್ (809-873) ಎನ್ನುವ ಅರಬ್ ವೈದ್ಯನು, ಕ್ರಿ. ಶ.850ರಲ್ಲಿ ಗ್ಯಾಲನ್ನನ 129 ಬರಹಗಳು ಅರಬ್ ಅಥವ ಸಿರಿಯಾಕ್ ಭಾಷೆಗಳಿಗೆ ಅನುವಾದವಾಗಿರುವುದನ್ನು ದಾಖಲಿಸಿದ. ಗ್ಯಾಲನ್ ಬರಹಗಳನ್ನು ಆಧರಿಸಿ ಅರಾಬಿಕ್ ವೈದ್ಯಕೀಯವು ಪ್ರವರ್ಧಮಾನಕ್ಕೆ ಬಂದಿತು. ಮುಂದೇ ಯೂರೋಪಿಯನ್ನರು ಅರಬ್ ಮೂಲದ ಕೃತಿಗಳನ್ನು ಅಥವ
ಗ್ರೀಕಿನಲ್ಲಿದ್ದ ಗ್ಯಾಲನ್ ಬರಹಗಳನ್ನೂ ಲ್ಯಾಟಿನ್ನಿಗೆ ಅನುವಾದಿಸಿದರು.

ಮಧ್ಯಯುಗದ ಯೂರೋಪಿಯನ್ ವೈದ್ಯಕೀಯ ವಿದ್ಯಾಲಯಗಳಲ್ಲಿ ಲ್ಯಾಟಿನ್ ಭಾಷೆಯಲ್ಲಿದ್ದ ಗ್ಯಾಲನ್ ಕೃತಿಗಳು ಪಠ್ಯಪುಸ್ತಕ ಗಳಾದವು. ಗ್ಯಾಲನ್ ಕ್ರಮಬದ್ಧ ಅಧ್ಯಯನಕ್ಕೆ ಅತ್ಯಧಿಕ ಒತ್ತನ್ನು ಕೊಟ್ಟಿದ್ದ. ಇದನ್ನು ಪರಿಪಾಲಿಸಿದ ಮಧ್ಯಯುಗದ ವೈದ್ಯರು, ಗ್ಯಾಲನ್ನನ ಬರಹದಲ್ಲಿದ್ದ ತಪ್ಪುಗಳನ್ನು ಒಂದೊಂದಾಗಿ ಪತ್ತೆ ಹಚ್ಚಲಾರಂಭಿ ಸಿದರು. 1543ರಲ್ಲಿ ಆಂಡ್ರಿಯಸ್ ವೆಸಾಲಿಯಸ್ (1514- 1564) ಅದ್ಭುತ ಅಧ್ಯಯನಗಳನ್ನು ನಡೆಸಿದ. ಗ್ಯಾಲನ್ ತಪ್ಪುಗ ಳನ್ನು ಒಂದೊಂದಾಗಿ ಎತ್ತಿ ತೋರಿಸಿದ. ಅಂಗರಚನ ವಿಜ್ಞಾನದ ಗ್ಯಾಲನ್ನನ ಸಾರ್ವಭೌಮತ್ವಕ್ಕೆ ತೆರೆಯ ನ್ನೆಳದ. ಹಾಗೆಯೇ ವಿಲಿಯಂ ಹಾರ್ವೇ ರಕ್ತಪರಿಚಲನೆ ಯನ್ನು ವಿಷಧವಾಗಿ ವಿವರಿಸಿದ ಮೇಲೆ ಗ್ಯಾಲನ್ ಮತ್ತಷ್ಟು ತೆರೆಮರೆಗೆ ಸರಿದ. ಪುನರುತ್ಥಾನದ (ರಿನೇಸಾನ್ಸ್) ಅವಧಿಯಲ್ಲಿ ನಡೆದ ಕ್ರಾಂತೀ ಕಾರಕ ವಿಚಾರಗಳು ಗ್ಯಾಲನ್ನನ ಹೆಸರನ್ನು ಸಂಪೂರ್ಣವಾಗಿ ಮರೆಮಾಡಿತು.