Saturday, 14th December 2024

ಜೇನ್ ಗೂಡಾಲ್ ಆಗುವುದು ಕಷ್ಟ, ಅವಳ ತಾಯಿಯಾಗುವುದು ಇನ್ನೂ ಕಷ್ಟ !

ಇದೇ ಅಂತರಂಗ ಸುದ್ದಿ

vbhat@me.com

ಆ ಮಹಾತಾಯಿ ಕೈಯಾರೆ ಮಗಳನ್ನು ಗುರುತು- ಪರಿಚಯವಿಲ್ಲದ ಆ ದೇಶಕ್ಕೆ, ಅದೂ ಆ ಗೊಂಡಾರಣ್ಯಕ್ಕೆ ಕಳಿಸಿ ಬಂದರು. ಒಂದು ಸಲವೂ ಅವಳ ನಿರ್ಧಾರವನ್ನು ಪ್ರಶ್ನಿಸಲೇ ಇಲ್ಲ. ಸಾಕು, ಬಂದುಬಿಡು ಎನ್ನಲಿಲ್ಲ. ಅವಳನ್ನು ಆ ಕಾಡಿನಲ್ಲಿ, ಆ ಕಾಡುಪ್ರಾಣಿ ಜತೆ ನಿಶ್ಚಿಂತೆಯಿಂದ ಕಳೆಯಲು ಬಿಟ್ಟಳು. ಹೀಗಾಗಿ ಜೇನ್ ಗೂಡಾಲ್ ಅಸಾಮಾನ್ಯವಾದದ್ದನ್ನು ಸಾಧಿಸಲು ಸಾಧ್ಯವಾಯಿತು. ಮನುಕುಲಕ್ಕೆ ಅವಳ ಸಂಶೋಧನೆಯ ಫಲ ಸಿಗಲು ಸಾಧ್ಯವಾಯಿತು.

ನೀವು ಜೇನ್ ಗೂಡಾಲ್ ಹೆಸರನ್ನು ಕೇಳಿರುತ್ತೀರಿ. 89 ವರ್ಷದ ಗೂಡಾಲ, ಸುಮಾರು ಅರವತ್ತ್ಮೂರು ವರ್ಷಗಳನ್ನು ಆಫ್ರಿಕಾದ ಕಾಡುಗಳಲ್ಲಿ ಚಿಂಪಾಂಜಿ ಗಳ ಅಧ್ಯಯನಕ್ಕಾಗಿ ಅವುಗಳ ಜತೆ ಕಳೆದಿದ್ದಾಳೆ. 1960ರಲ್ಲಿ ಆಕೆ ಮೊದಲ ಬಾರಿಗೆ ತಾಂಜಾನಿಯಾದ ಗೊಂಬೆ ರಾಷ್ಟ್ರೀಯ ಅರಣ್ಯಧಾಮದಲ್ಲಿ ಚಿಂಪಾಂಜಿಗಳ ಕುರಿತು ಅಧ್ಯಯನವನ್ನು ಆರಂಭಿಸಿದಳು. ಆಗ ಗೂಡಾಲ್‌ಗೆ ಕೇವಲ ಇಪ್ಪತಾರು ವರ್ಷ.

ಅಂದಿನಿಂದ ಆರಂಭವಾದ ಚಿಂಪಾಂಜಿಗಳ ಜತೆಗಿನ ಸಖ್ಯ ಇಂದಿಗೂ ಮುಂದು ವರಿದುಕೊಂಡು ಬಂದಿದೆ. ಚಿಂಪಾಂಜಿಗಳ ಬಗ್ಗೆ ಆಕೆ ಬರೆದ ಟಿಪ್ಪಣಿಗಳನ್ನು ಓದಲು ಒಂದು ಜನ್ಮ ಸಾಲದು. 1995 ರ ‘ನ್ಯೂಸ್ ವೀಕ್ ಇಂಟರನ್ಯಾಷನಲ್’ ಮ್ಯಾಗಜಿನ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಗೂಡಾಲ್‌ತನ್ನ ಜೀವನದ ಒಂದು ಪ್ರಸಂಗವನ್ನು ಹಂಚಿಕೊಂಡಿದ್ದರು – ನಾನು ನನ್ನ ಮುಂದಿನ ಜೀವನವನ್ನು ಆಫ್ರಿಕಾದಲ್ಲಿ ಕಾಡುಗಳಲ್ಲಿ ಕಳೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದಾಗ ಅನೇಕರಿಗೆ ಆಶ್ಚರ್ಯವಾಯಿತು. ಇನ್ನು ಕೆಲವರು ಭಯಪಟ್ಟರು. ನನಗೆ ಹುಚ್ಚು ಹಿಡಿದಿದೆಯೆಂದು ಗೇಲಿ ಮಾಡಿದರು. ಇನ್ನು ಕೆಲವರು ನನ್ನ ತಾಯಿ ಬಳಿ ಬಂದು, ’ನೀನಾದರೂ ನಿನ್ನ ಮಗಳಿಗೆ ಬುದ್ಧಿ ಹೇಳಬೇಕಾಗಿತ್ತು.

ಎಲ್ಲಾ ಬಿಟ್ಟು ಆಫ್ರಿಕಾದ ಕಾಡಿಗೆ ಹೋಗುತ್ತೇನೆಂದು ಹೇಳುತ್ತಿದ್ದಾಳೆ. ಆಕೆಗೆ ಆ ಚಿಂಪಾಂಜಿಗಳ ಹುಚ್ಚು ಹಿಡಿದಿದೆ. ನೀನಾದರೂ ಅವಳನ್ನು ಕುಳ್ಳಿರಿಸಿಕೊಂಡು, ಸಮಾಧಾನದಿಂದ ಬುದ್ಧಿಮಾತನ್ನು ಹೇಳಬಾರದಾ? ಇದೇನು ತಮಾಷೆಯಾ? ಎಂದು ಕೇಳಿದರು. ಇಲ್ಲಿ ನಾನು ನನ್ನ ತಾಯಿಯ ನಿಲುವನ್ನು ಮೆಚ್ಚಲೇಬೇಕು. ಆಕೆ ನನ್ನ ಪರವಾಗಿ ನಿಂತಳು. ನನಗಿಂತ ಅವಳೇ ಎಲ್ಲರಿಗೂ ಉತ್ತರ ನೀಡಿದಳು.

‘ಜೇನ್ ಎಂಥವಳು ಎಂಬುದು ನನಗೆ ಗೊತ್ತು. ಯಾರೂ ಮಾಡದ ಕೆಲಸವನ್ನು ತಾನು ಮಾಡುತ್ತೇನೆ ಎಂದು ಹಠ ಹಿಡಿದ್ದಾಳೆ. ಹೀಗಾಗಿ ಇಂಥ ಸಾಹಸಕ್ಕೆ ಮುಂದಾದಾಗ, ತಾಯಿಯಾಗಿ ನಾನು ಬೆಂಬಲಕ್ಕೆ ನಿಲ್ಲಲೇಬೇಕು. ನನಗೆ ಅವಳ ಆಸಕ್ತಿ, ಸಾಮರ್ಥ್ಯ, ತಾಕತ್ತು ಏನೆಂಬುದು ಗೊತ್ತು. ನಾನು ಹೋಗಬೇಡ ಎಂದು ಹೇಳಿದರೂ ಅವಳು ಕೇಳುವವವಳಲ್ಲ ಎಂಬುದು ಗೊತ್ತು. ಅದಕ್ಕಿಂತ ಮುಖ್ಯವಾಗಿ ಅವಳು ಯಾವ ನಿರ್ಧಾರ ತೆಗೆದುಕೊಂಡರೂ, ಸರಿಯಾಗಿ ಯೋಚಿಸಿಯೇ ತೀರ್ಮಾನ ತೆಗೆದುಕೊಂಡಿರುತ್ತಾಳೆ. ಅವಳಿಂದ ಒಂದು ಉತ್ತಮ ಕಾರ್ಯ ಸಾಧ್ಯವಾಗುವುದಾದರೆ ನಾನೇಕೆ ಬೇಡ ಎನ್ನಲಿ?’ ಎಂದು ನನ್ನ ತಾಯಿ ಹೇಳಿ, ಎಲ್ಲರ ಬಾಯಿ ಮುಚ್ಚಿಸಿದಳು.

ನನಗೆ ಎರಡು ವರ್ಷಗಳಾದಾಗ, ಕೆಲವು ಎರೆಹುಳುಗಳನ್ನು ತೆಗೆದುಕೊಂಡು, ಅವುಗಳನ್ನು ನನ್ನ ಹಾಸಿಗೆ ಮೇಲಿಟ್ಟು, ಅವು
ಹೇಗೆ ಮುದುಡಿಕೊಳ್ಳುತ್ತವೆ ಎಂದು ಕುತೂಹಲದಿಂದ ದಿಟ್ಟಿಸುತ್ತಿದ್ದಾನಂತೆ. ಸಾಮಾನ್ಯವಾಗಿ ಎಲ್ಲಾ ತಾಯಂದಿರೂ,
‘ಅವುಗಳನ್ನೇಕೆ ಹಿಡಿದು ತಂದಿದ್ದೀಯಾ? ಹಾಸಿಗೆಯಲ್ಲ ಕೊಳೆಯಾಗುತ್ತದೆ, ಮೊದಲು ಅವುಗಳನ್ನು ಹೊರಗೆ ಬಿಸಾಡು’
ಎಂದು ಹೇಳುತ್ತಿದ್ದರು.

ಆದರೆ ನನ್ನ ತಾಯಿ ನನ್ನ ಆಸಕ್ತಿಯನ್ನು ಪ್ರೋತ್ಸಾಹಿಸಿದಳು. ‘ಜೇನ್, ಎರೆಹುಳುಗಳನ್ನು ಹಾಸಿಗೆ ಮೇಲೆ ಇಟ್ಟುಕೊಂಡರೆ,
ಅವು ಸತ್ತು ಹೋಗಬಹುದು. ಅವು ಇರಬೇಕಾದ ಜಾಗ ಇದಲ್ಲ. ಅವು ಮಣ್ಣಿನ ಇರಬೇಕು’ ಎಂದು ನನಗೆ ತಿಳಿಸಿ ಹೇಳಿದರು.
ನಾನು ಅವುಗಳನ್ನು ನಮ್ಮ ಗಾರ್ಡನ್‌ಗೆ ತೆಗೆದುಕೊಂಡು ಹೋಗಿ ಬಿಟ್ಟು ಬಂದೆ. ನನ್ನ ತಾಯಿ ನನ್ನ ದೃಷ್ಟಿಕೋನದಲ್ಲಿ ನೋಡುತ್ತಿದ್ದ ಬಗೆ ನನಗೆ ಯಾವತ್ತೂ ವಿಶೇಷವಾಗಿ ಕಾಣುತ್ತದೆ.’ ಈ ಸಂದರ್ಶನವನ್ನು ಓದಿದ ಬಳಿಕ ನನಗೆ ಅನಿಸಿದ್ದು – ಜೇನ್ ಗೂಡಾಲ್ ಆಗುವುದು ಕಷ್ಟ. ಅವಳ ತಾಯಿಯಾಗುವುದು ಇನ್ನೂ ಕಷ್ಟ.

ಯಾವ ತಾಯಿ ತನ್ನ ಹರೆಯದ ಮಗಳನ್ನು ಏಕಾಂಗಿಯಾಗಿ ಕಾಡು (wild) ಚಿಂಪಾಂಜಿಗಳ ಜತೆ ಕಳೆಯಲು ಕಳಿಸಿ ಕೊಡುತ್ತಾಳೆ? ಅವುಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಏನು ಸಾಧನೆ ಮಾಡುತ್ತೀಯಾ? ಮನುಷ್ಯರ ಬಗ್ಗೆ ಯೋಚಿಸುವು ದನ್ನು ಬಿಟ್ಟು ಆ ಹಾಳು ಚಿಂಪಾಂಜಿಗಳ ಬಗ್ಗೆ ಯೋಚಿಸುತ್ತೀಯಲ್ಲ, ನಿನಗೆ ಬುದ್ಧಿ ಇದೆಯಾ ಎಂದು ಯಾವ ತಾಯಿಯಾದರೂ ಹೇಳುತ್ತಿದ್ದರು. ಆದರೆ ಆ ಮಹಾತಾಯಿ ಕೈಯಾರೆ ಮಗಳನ್ನು ಗುರುತು- ಪರಿಚಯವಿಲ್ಲದ ಆ ದೇಶಕ್ಕೆ, ಅದೂ ಆ ಗೊಂಡಾರಣ್ಯಕ್ಕೆ ಕಳಿಸಿ ಬಂದರು.

ಒಂದು ಸಲವೂ ಅವಳ ನಿರ್ಧಾರವನ್ನು ಪ್ರಶ್ನಿಸಲೇ ಇಲ್ಲ. ಸಾಕು, ಬಂದುಬಿಡು ಎನ್ನಲಿಲ್ಲ. ಅವಳನ್ನು ಆ ಕಾಡಿನಲ್ಲಿ, ಆ ಕಾಡುಪ್ರಾಣಿ ಜತೆ ನಿಶ್ಚಿಂತೆಯಿಂದ ಕಳೆಯಲು ಬಿಟ್ಟಳು. ಹೀಗಾಗಿ ಜೇನ್ ಗೂಡಾಲ್ ಅಸಾಮಾನ್ಯವಾದದ್ದನ್ನು ಸಾಧಿಸಲು ಸಾಧ್ಯವಾಯಿತು. ಮನುಕುಲಕ್ಕೆ ಅವಳ ಸಂಶೋಧನೆಯ ಫಲ ಸಿಗಲು ಸಾಧ್ಯವಾಯಿತು. ತಮ್ಮ ಮಕ್ಕಳ ಬಗ್ಗೆ ತಾಯಂದಿರು ಹೀಗೂ ಯೋಚಿಸಬಹುದು ಎಂಬ ಕಾರಣಕ್ಕೆ ಈ ಪ್ರಸಂಗವನ್ನು ಹೇಳಿದೆ.

ತೀರ್ಪು ಮತ್ತು ಕನ್ನಡ
ಇತ್ತೀಚಿನ ದಿನಗಳಲ್ಲಿ ನಮ್ಮ ಕೋರ್ಟುಗಳು ನೀಡುವ ತೀರ್ಪುಗಳನ್ನು ಗಮನವಿಟ್ಟು ಓದುತ್ತೇನೆ. ನೂರಾರು ಪುಟಗಳ
ತೀರ್ಪಿನಲ್ಲಿ ನ್ಯಾಯಮೂರ್ತಿಗಳ ಯೋಚನೆ, ಅಂತಃಕರಣ, ವಿದ್ವತ್ತು, ಬುದ್ಧಿಮತ್ತೆ, ಭಾಷೆ, ತಿಳಿವಳಿಕೆಯನ್ನು ಅರಿಯಲು
ಸಾಧ್ಯವಾಗುತ್ತದೆ. ಬಹುತೇಕ ಮಂದಿ ತೀರ್ಪಿನ ಸಾರಾಂಶ (ಒಂದೆರಡು ಪ್ಯಾರಾ) ವನ್ನಷ್ಟೇ ಓದಿ ಸುಮ್ಮನಾಗುತ್ತಾರೆ. ಆದರೆ
ಯಾರೂ ಇಡೀ ತೀರ್ಪನ್ನು ಓದುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಇಡೀ ತೀರ್ಪನ್ನು ಓದಿದರೆ, ನ್ಯಾಯಮೂರ್ತಿಗಳು ಅದನ್ನು
ಬರೆಯಲು ವ್ಯಯಿಸುವ ಸಮಯ, ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಬಹುದು.

ಈ ಕಾರಣದಿಂದಾದರೂ ಇಡೀ ತೀರ್ಪನ್ನು ಓದಬೇಕು. ಒಮ್ಮೊಮ್ಮೆ ಭಾಷೆ ಗಡುಚು ಎಂದು ಅನಿಸಬಹುದು. ವಾಕ್ಯ ಉದ್ದುದ್ದ ವಾಗಿರುತ್ತವೆ ಎಂದು ಅಂದುಕೊಂಡರೂ, ವಿಷಯ ಪ್ರಾಮುಖ್ಯ ದೃಷ್ಟಿಯಿಂದ ಅವು ಗಮನ ಸೆಳೆಯುತ್ತವೆ. ಕೆಲವು ನ್ಯಾಯ ಮೂರ್ತಿಗಳು ಕಾನೂನನ್ನು ವ್ಯಾಖ್ಯಾನಿಸುವ (interpret) ರೀತಿ, ತರ್ಕ, ಮಂಡಿಸುವ ವಾದ ನಿಜಕ್ಕೂ ಅಚ್ಚರಿ ಮೂಡಿಸು ತ್ತದೆ.

ಕೆಲವು ಮಹತ್ವದ ತೀರ್ಪುಗಳನ್ನಾದರೂ, ಸಾಮಾನ್ಯ ಓದುಗರಿಗಾಗಿ, ಅರ್ಥವಾಗುವ ಭಾಷೆಯಲ್ಲಿ ಕನ್ನಡದಲ್ಲಿ ನೀಡುವುದು ಒಳ್ಳೆಯದು. ಅವುಗಳನ್ನು ಪುಸ್ತಕ ರೂಪದಲ್ಲಿ ಕೊಟ್ಟರೆ ನಮ್ಮ ನ್ಯಾಯದಾನ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ನಮ್ಮಲ್ಲಿ ಕೆಲವು ನ್ಯಾಯಾಧೀಶರು ಕನ್ನಡಲ್ಲಿ ತೀರ್ಪು ನೀಡಿದ್ದಾರೆ. ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ್ ಕನ್ನಡದಲ್ಲಿ ಅನೇಕ ತೀರ್ಪುಗಳನ್ನು ಬರೆದಿದ್ದಾರೆ.

ಕೆಲ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪುಗಳುಗಳನ್ನು ಬರೆಯಲಾಗುತ್ತಿದೆ. ಆದರೆ ಹೈಕೋರ್ಟುಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತಾಗಬೇಕು. ಇದಕ್ಕೆ ಕಾನೂನಿನಲ್ಲಿ ತಿದ್ದುಪಡಿ ಆಗುವ ಅಗತ್ಯವಿದೆ. ಅದಿರಲಿ. ಆದರೆ ಈಗಾಗಲೇ ನೀಡಿರುವ ತೀರ್ಪುಗಳನ್ನಾದರೂ, ಕನ್ನಡದಲ್ಲಿ ಅನುವಾದಿಸುವ ಅಗತ್ಯವಿದೆ. ಕೆಲವು ತೀರ್ಪುಗಳಂತೂ ಯಾವ ತರ್ಕ-ಮೀಮಾಂಸೆಗಳಿಗೆ ಕಮ್ಮಿಯಿಲ್ಲ. ಈ ತೀರ್ಪುಗಳನ್ನು ಓದಿದರೆ, ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಎಂಥೆಂಥ ಮಹಾಮಹಿಮ ನ್ಯಾಯವೇತ್ತರು ಬಂದು ಹೋಗಿದ್ದಾರೆ ಎಂಬುದಾದರೂ ಗೊತ್ತಾಗುತ್ತದೆ. ನ್ಯಾಯಾಂಗದ ಬಗ್ಗೆ ಜನಸಾಮಾನ್ಯರಲ್ಲಿ ಮತ್ತಷ್ಟು ಗೌರವ ಮೂಡುತ್ತದೆ. ಈ ಕೆಲಸ ತುರ್ತಾಗಿ ಆಗಬೇಕಿದೆ.

ಆರ್ಥಿಕ ತಜ್ಞನ ಎರಡು ಪ್ರಸಂಗಗಳು

ಮೊನ್ನೆ ಫೋನ್ ಮಾಡಿದಾಗ ಮಾತಿನ ಮಧ್ಯೆ ಯೋಗಿ ದುರ್ಲಭಜೀ ಎರಡು ಪ್ರಸಂಗಗಳನ್ನು ಹೇಳಿದರು. ನಿಮಗೆ ಅವನ್ನು ಹೇಳಬೇಕು. ಒಮ್ಮೆ ಊರಿನಲ್ಲಿರುವ ಯುವಕ ಸಂಘದವರು ಪ್ರಸಿದ್ಧ ಅರ್ಥಶಾಸ್ತ್ರಜ್ಞನೊಬ್ಬನನ್ನು ಕರೆಯಿಸಿದ್ದರು. ಆತ ಹತ್ತಾರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದಿ ಹಲವು ಪದವಿಗಳನ್ನು ಪಡೆದಿದ್ದ. ವಿಶ್ವಬ್ಯಾಂಕ್ ಸೇರಿದಂತೆ ಜಗತ್ತಿನ ಹತ್ತಾರು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಿದ್ದ. ಜಗತ್ತಿನ ಶ್ರೀಮಂತ-ಬಡ ದೇಶಗಳು ತಮ್ಮ ದೇಶದ ಆರ್ಥಿಕ ಸಮಸ್ಯೆಗಳಿಗೆ ಆತನ ಸಲಹೆ-ಮಾರ್ಗದರ್ಶನ ಪಡೆಯುತ್ತಿದ್ದವು. ಅಂಥ ಆರ್ಥಿಕ ತಜ್ಞ ಆ ಊರಿಗೆ ಬಂದಿದ್ದು ಸಹಜವಾಗಿ ಮಾಧ್ಯಮಗಳಲ್ಲಿ ಪ್ರಾಮುಖ್ಯ ಪಡೆದಿತ್ತು.

ಅಂದಿನ ಕಾರ್ಯಕ್ರಮದಲ್ಲಿ ಆತನನ್ನು ಸ್ವಾಗತಿಸಿದ ಯುವಕ ಸಂಘದ ಅಧ್ಯಕ್ಷ ಸುಮಾರು ಅರ್ಧ ಗಂಟೆ ಆರ್ಥಿಕ ತಜ್ಞನ
ಪರಿಚಯ ಮಾಡಿದ. ನಂತರ ಆರ್ಥಿಕ ತಜ್ಞನ ಉಪನ್ಯಾಸ. ಆತ ಸುಮಾರು ಒಂದು ಗಂಟೆ ಉಪನ್ಯಾಸ ನೀಡಿದ. ಆತ ಏನು
ಹೇಳುತ್ತಿzನೆ ಎಂಬುದೇ ಒಬ್ಬರಿಗೂ ಅರ್ಥವಾಗಲಿಲ್ಲ. ಎಲ್ಲರೂ ತಲೆ ಕೆಳ ಹಾಕಿ ಕುಳಿತಿದ್ದರು. ಕಾರ್ಯಕ್ರಮ ಮುಗಿದ ಬಳಿಕ
ಮಧ್ಯ ವಯಸ್ಸಿನವರೊಬ್ಬರು, ‘ಸಾರ್, ನಿಮ್ಮ ಉಪನ್ಯಾಸ ಅದ್ಭುತವಾಗಿತ್ತು. ಆದರೆ ನನ್ನ ಸಮಸ್ಯೆ ಅಂದ್ರೆ ನೀವು
ಮಾತಾಡಿದ್ದು ನನಗೆ ಅರ್ಥವೇ ಆಗಲಿಲ್ಲ’ ಎಂದು ಹೇಳಿದರು. ಆಗ ಆರ್ಥಿಕ ತಜ್ಞ ಹೇಳಿದ – ‘ನೀವು ಬಡವರು ಅಂತೆನಿಸುತ್ತದೆ. ಶ್ರೀಮಂತರಾಗಿದ್ದರೆ ಎಲ್ಲವೂ ಅರ್ಥವಾಗುತ್ತಿತ್ತು.’

ಎರಡನೇ ಪ್ರಸಂಗ. ಮರುದಿನ ಪಕ್ಕದ ಊರಿನ ಮಠವೊಂದರಲ್ಲಿ ಅದೇ ಆರ್ಥಿಕ ತಜ್ಞನ ಮತ್ತೊಂದು ಉಪನ್ಯಾಸ ಏರ್ಪಡಿಸ ಲಾಗಿತ್ತು. ಆದರೆ ಪ್ರೇಕ್ಷಕರು ಬೇರೆ. ಎಲ್ಲರೂ ಹಿರಿ-ಕಿರಿಯ ಸ್ವಾಮೀಜಿಗಳು, ಮಠಾಽಪತಿಗಳು ಸೇರಿದ್ದರು. ಆರ್ಥಿಕ ತಜ್ಞ ಸುಮಾರು ಒಂದು ಗಂಟೆ ಮಾತಾಡಿದ. ಉಪನ್ಯಾಸ ಮುಗಿದ ಬಳಿಕ ಒಬ್ಬ ಸ್ವಾಮೀಜಿ ಬಂದು, ‘ಸಾರ್, ನಿಮ್ಮ ಉಪನ್ಯಾಸ ಅದ್ಭುತವಾಗಿತ್ತು. ಆದರೆ ನೀವು ಹೇಳಿದ್ದು ನನಗೆ ಒಂದಕ್ಷರ ಅರ್ಥವಾಗಲಿಲ್ಲ’ ಎಂದರು.

ಅದಕೆ ಆರ್ಥಿಕತಜ್ಞ ನುಡಿದ – ‘ಸಮಾಧಾನವಾಯ್ತು ಸ್ವಾಮೀಜಿ, ಒಂದು ವೇಳೆ ನನಗೆ ಅರ್ಥವಾಯ್ತು ಅಂತ ಹೇಳಿದ್ದರೆ, ನನ್ನ ವೃತ್ತಿಗೆ ಅಪಚಾರವಾಗುತ್ತಿತ್ತು. ಅರ್ಥಶಾಸ್ತ್ರ ಇರುವುದೇ ಹಾಗೆ. ದೇವರ ಬಗ್ಗೆ ನೀವು ಹೇಳಿದ್ದೆಲ್ಲ ನಮಗೆ ಅರ್ಥವಾಗುತ್ತದಾ? ಆದರೂ ನಾವು ಕೇಳುವುದಿಲ್ಲವಾ? ದೇವರನ್ನು ನೀವು ತೋರಿಸದಿದ್ದರೂ, ನಾವು ನೋಡದಿದ್ದರೂ, ದೇವರ ಅನುಭವ ಆಗಿದೆ ಎಂದು ಹೇಳುವುದಿಲ್ಲವಾ? ಅರ್ಥವಾದಂತೆ ಗೋಣು ಹಾಕುವುದಿಲ್ಲವಾ? ಅರ್ಥಶಾಸ್ತ್ರವೂ ಒಂಥರ ಹಾಗೇ. ನಿಮಗೆ ವಿಷಯ ದಲ್ಲಿ ನಂಬಿಕೆ ಇದ್ದರೆ ಸಾಕು.’

ಅತ್ಯುತ್ತಮ ಸಲಹೆ
ಪ್ರಾಯಶಃ ಇದನ್ನು ನಾನು ಓದಿದ್ದು ‘ರೀಡರ್ಸ್ ಡೈಜೆ’ ಮ್ಯಾಗಜಿನ್‌ನಲ್ಲಿ. ‘ನ್ಯೂಯಾರ್ಕ್ ಟೈಮ್ಸ್’ ಮ್ಯಾಗಜಿನ್‌ನ
ಪತ್ರಕರ್ತೆಯೊಬ್ಬಳು, ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಸಂದರ್ಶಿಸಿದ್ದಳು. ‘ನಿಮ್ಮ ಜೀವನದಲ್ಲಿ
ನೀವು ಬೇರೆ ದೇಶದ ಗಣ್ಯರಿಂದ ಪಡೆದ ಉತ್ತಮವಾದ ಸಲಹೆ ಯಾವುದು?’ ಎಂಬ ಪ್ರಶ್ನೆಗೆ, ಭುಟ್ಟೋ ಒಂದು ಪ್ರಸಂಗವನ್ನು
ನೆನಪಿಸಿಕೊಂಡಿದ್ದರು.

ಆಗ ಬೆನಜೀರ್ ಭುಟ್ಟೋ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಕಳೆದುಕೊಂಡಿದ್ದರು. ಆಗ ಅವರು ಹೆಚ್ಚಿನ ಸಮಯವನ್ನು ಲಂಡನ್‌ನಲ್ಲಿ ಕಳೆಯುತ್ತಿದ್ದರು. ಒಮ್ಮೆ ಅಂದಿನ ಬ್ರಿಟನ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್, ಬೆನಜೀರ್ ಭುಟ್ಟೋ ಅವರನ್ನು ಭೋಜನಕ್ಕೆ ಆಹ್ವಾನಿಸಿದ್ದರು. ಮಾತಿನ ಮಧ್ಯೆ ಭುಟ್ಟೋ ತಮ್ಮ ಒಂದು ಸಮಸ್ಯೆಗೆ ಬ್ರಿಟಿಷ್ ಪ್ರಧಾನಿಯಿಂದ ಪರಿಹಾರ ಬಯಸಿದರು. ‘ಲೇಡಿ ಥ್ಯಾಚರ್ ಅವರೇ, ನಾನು ಬಹಳ ಗೊಂದಲದಲ್ಲಿದ್ದೇನೆ. ನಮ್ಮ ದೇಶದ ಅಧ್ಯಕ್ಷರು ನನ್ನನ್ನು ಪ್ರಧಾನಿಯವರ ವಿರುದ್ಧ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದೇ ರೀತಿ ಪ್ರಧಾನಿಯವರು ನನ್ನನ್ನು ಅಧ್ಯಕ್ಷರ ವಿರುದ್ಧ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂಥ ಸಂದರ್ಭದಲ್ಲಿ ನಾನು ಯಾರ ಪರ ವಹಿಸಬೇಕು ಎಂಬುದು ಗೊತ್ತಾಗುವುದಿಲ್ಲ’ ಎಂದು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.

ಬ್ರಿಟಿಷ್ ಮತ್ತು ಅಂತಾರಾಷ್ಟ್ರೀಯ ರಾಜಕಾರಣದ ಒಳಸುಳಿಗಳನ್ನು ಕರಗತ ಮಾಡಿಕೊಂಡಿದ್ದ ಥ್ಯಾಚರ್ ಆಗ ಹೇಳಿದರು –
‘ಶ್ರೀಮತಿ ಭುಟ್ಟೋ ಅವರೇ, ಇಂಥ ಸಂದರ್ಭದಲ್ಲಿ, ನೀವು ಯಾರ ಪರ ಅಥವಾ ವಿರುದ್ಧದ ನಿಲುವನ್ನು ತಾಳಬಾರದು. ನಮ್ಮ
ರಾಜಕೀಯ ವಿರೋಧಿಗಳು ಹೊಡೆದಾಡಿಕೊಳ್ಳುವಾಗ, ನಾವು ಮಾಡಬಹುದಾದದ್ದೇನೆಂದರೆ ಸುಮ್ಮನಿರುವುದು. ಅವರಿಬ್ಬರಿಗೂ ಹೊಡೆದಾಡಿಕೊಳ್ಳಲು ಅವಕಾಶ ನೀಡಬೇಕು. ಆಗ ಇಬ್ಬರೂ ತಮ್ಮನ್ನೇ ಫಿನಿಷ್ ಮಾಡಿಕೊಳ್ಳುತ್ತಾರೆ.’
ಈ ಪ್ರಸಂಗವನ್ನು ಹೇಳಿದ ಭುಟ್ಟೋ, ‘ನಾನು ನನ್ನ ಜೀವನದಲ್ಲಿ ಪಡೆದ ಅತ್ಯುತ್ತಮ ಸಲಹೆ ಇದು. ನಮ್ಮ ದೇಶದ ಪ್ರಧಾನಿ ಮತ್ತು ಅಧ್ಯಕ್ಷರು ಪರಸ್ಪರ ಹೊಡೆದಾಡುವಾಗ, ನಾನು ಲೇಡಿ ಥ್ಯಾಚರ್ ಹೇಳಿದಂತೆ, ಸುಮ್ಮನಿದ್ದೆ. ಅವರಿಬ್ಬರೂ ತಮ್ಮನ್ನು ಫಿನಿಶ್ ಮಾಡಿಕೊಂಡರು’ ಎಂದರು.

ಇಂಗ್ಲಿಷ್ ಎಂಬ ಮಹಾನದಿ

ಪ್ರತಿ ಎರಡು ಗಂಟೆಗೊಂದು ಪದ ಇಂಗ್ಲಿಷ್ ಭಾಷೆಯನ್ನು ಸೇರುತ್ತದೆ. ಅದು ಯಾವ ಭಾಷೆಯಿಂದ ಬೇಕಾದರೂ ಬಂದಿರಬಹುದು. ಯಾವುದೇ ಪದವನ್ನಾದರೂ ತನ್ನದನ್ನಾಗಿಸಿಕೊಳ್ಳುವ ಕಲೆಗಾರಿಕೆಯೇ ಇಂಗ್ಲಿಷಿನ ವೈಶಿಷ್ಟ್ಯ. ಬೆಂಗಳೂರಿ
ನಲ್ಲಿರುವ ಐಟಿ ಕ್ಷೇತ್ರದಲ್ಲಿರುವ ಸಿಬ್ಬಂದಿ ಏಕಾಏಕಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಾರಂಭಿಸಿದಾಗ, Bangaloreb
ಎಂಬ ಪದ ಇಂಗ್ಲಿಷ್ ಭಾಷೆಯನ್ನು ಸೇರಿಕೊಂಡಿತು. ಈ ಪದವನ್ನು ಹುಟ್ಟುಹಾಕಿದವರು ಅಮೆರಿಕದವರು.

When an American says that he has been Bangalored, what he means is that he has lost his job. ಒಂದು ನಗರದ ಹೆಸರೇ ಕ್ರಿಯಾಪದವಾಗಿ ರೂಪು ಪಡೆಯಿತು. ಈಗಲೂ ಈ ಪದ ಪತ್ರಿಕೆಯ ಹೆಡ್ ಲೈನ್‌ಗಳಲ್ಲಿ ಬರೆಯುವಷ್ಟು ಜನಪ್ರಿಯವಾಗಿದೆ. ಇಂಗ್ಲಿಷಿಗೆ ಯಾವುದೂ ವರ್ಜ್ಯವಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಭಾಷಾ ಪಂಡಿತರೇ ಹೊಸ ಪದವನ್ನು ಟಂಕಿಸಬೇಕೆಂದಿಲ್ಲ ಅಥವಾ ಅವರೇ ಠಸ್ಸೆ ಹೊಡೆಯಬೇಕು ಎಂದಿಲ್ಲ. ಹೊಸ ಪದ ಯಾವುದೇ ಮೂಲದಿಂದ ಬಂದರೂ ಇಂಗ್ಲಿಷ್ ಅದನ್ನು ತನ್ನತ್ತ ಸೆಳೆದುಕೊಂಡು ತನ್ನದನ್ನಾಗಿಸಿಕೊಳ್ಳುತ್ತದೆ. ಅಷ್ಟಕ್ಕೂ ಇಂಗ್ಲಿಷ್ ಭಾಷೆಯ ಅಕ್ಷರಗಳು ಮೂಲದಲ್ಲಿ ಲ್ಯಾಟಿನ್ (ಇದನ್ನು ರೋಮನ್ ಸ್ಕ್ರಿ ಅಂತಲೂ ಕರೆಯುತ್ತಾರೆ) ಭಾಷೆಯದ್ದು. ಯಾವುದು ಚೆಂದ ಕಾಣುತ್ತೋ, ಅದನ್ನು ಹಿಡಿದು ತಂದು, ತನ್ನದು ಮಾಡಿಕೊಳ್ಳುವ ಕಸುಬುದಾರಿಕೆಯನ್ನೇ ಇಂಗ್ಲಿಷ್ ಕರಗತ ಮಾಡಿಕೊಂಡಿದೆ.

ಇಂಗ್ಲಿಷ್ ಭಾಷೆಯೆಂದರೆ ಒಂದು ರೀತಿಯಲ್ಲಿ ಗಂಗಾ ನದಿಯಿದ್ದಂತೆ. ಅದು ಹರಿಯುತ್ತಲೇ ಹೋಗುತ್ತದೆ. ಅದರಲ್ಲೂ
ಈ ನದಿಗೆ ಡೊಣ್ಣೆ ನಾಯಕನ ಅಪ್ಪಣೆಯಿಲ್ಲ. ಅದಕ್ಕೆ ಹರಿಯುವುದೊಂದೇ ಗೊತ್ತು. ತನ್ನ ಜತೆ ಸಿಗುವ ಎಲ್ಲಾ ಕಸ, ಕಡ್ಡಿ,
ಹುಲ್ಲು, ದಿಮ್ಮಿ, ಜಲಚರ … ಹೀಗೆ ಎಲ್ಲವನ್ನೂ ಒಟ್ಟಿಗೆ ಕರೆದುಕೊಂಡು ಹರಿಯುತ್ತದೆ. ಯಾರು ಬೇಕಾದರೂ ಸೇರಿಕೊಳ್ಳ ಬಹುದು. ಉಪನದಿಗಳೆ ಜತೆಯಾಗಬಹುದು, ಪಾತಳಿ ಮಾಡಿಕೊಳ್ಳಬಹುದು. ಬದುವಿನೊಂದಿಗೆ ಬದಲಾವಣೆಯ ಮುಖಜ ಭೂಮಿಯಲ್ಲಿ ಮುಖ ಮಾಡಬಹುದು.

ಒರತೆಯಾಗಿ, ಕಿರು ತೊರೆಯಾಗಿ, ಝರಿಯಾಗಿ, ಜಲಪಾತವಾಗಿ, ನದಿಯಾಗಿ, ಮಹಾನದಿಯಾಗಿ ಹೀಗೆ ಎಲ್ಲರನ್ನೂ ಸೇರಿಸಿಕೊಂಡು ಹರಿಯುವುದೆಂದೇ ಗೊತ್ತು. ಅದು ಬಂದವರನ್ನೆಲ್ಲ ಬರಸೆಳೆದು ಹಿಡಿದೆಳೆದು ಜತೆಗಾರನಾಗುವ ಲೋಕಲ್ ಟ್ರೇನೂ ಹೌದು. ಪದಕೋಶವೆಂಬ ಮಹಾಸಾಗರ ಸೇರುವ ತನಕ, ಇಂಗ್ಲಿಷ್‌ಗೆ ಅಡೆತಡೆ ಇಲ್ಲ, ಅಣೆಕಟ್ಟೂ ಇಲ್ಲ. ಅದೇ ಅದರ
ವೈಶಿಷ್ಟ್ಯ.

ವಿನೂತನ ಅಲಾರ್ಮ್
ಎಲ್ಲರೂ ಬೆಳಗ್ಗೆ ಬೇಗ ಏಳಲು ಅಲಾರ್ಮ್ ಇಟ್ಟುಕೊಳ್ಳುತ್ತಾರೆ. ಆದರೆ ಅಲಾರ್ಮ್ ಸದ್ದು ಮಾಡಿದರೆ, ಕರ್ಕಶ ಎಂದು ಅದನ್ನು
ಕುಕ್ಕಿ ಕೆಟ್ಟ ಮೂಡಿನಲ್ಲಿ ಏಳುತ್ತಾರೆ. ಇದು ಎಲ್ಲರ ಅನುಭವ. (ತನ್ನ ಡ್ಯೂಟಿಯನ್ನು ಸರಿಯಾಗಿ ಮಾಡಿ ಬೈಸಿಕೊಳ್ಳುವ ಒಂದು
ವಸ್ತುವಿದ್ದರೆ ಅದು ಬಡಪಾಯಿ ಅಲಾರ್ಮ್ ಎಂದು ಹಿಂದೊಮ್ಮೆ ವಕ್ರತುಂಡೋಕ್ತಿ ಬರೆದ ನೆನಪು) ‘ಜಗತ್ತಿನಲ್ಲಿ ಏನೆ ಹೊಸ ಹೊಸ ಗ್ಯಾಜೆಟ್ಟುಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಎಲ್ಲರೂ ಇಷ್ಟಪಡುವ ಅಲಾಮ್ ನ್ನು ಇಲ್ಲಿ ತನಕ ಯಾರೂ ಕಂಡು ಹಿಡಿದಿಲ್ಲ ಏಕೆ?’ ಎಂದು ಓದುಗರೊಬ್ಬರು ಪತ್ರಿಕೆಯೊಂದರ ‘ಸಂಪಾದಕರ ಪತ್ರ’ ವಿಭಾಗದಲ್ಲಿ ಕೇಳಿದ್ದರು.

ಇದನ್ನು ಓದಿದ ಮತ್ತೊಬ್ಬ ಓದುಗರೊಬ್ಬರು ಬರೆದಿದ್ದರು – ‘ತಲತಲಾಂತರಗಳಿಂದ ವಿಶಿಷ್ಟ ಬಗೆಯ ಒಂದು ಅಲಾರ್ಮ್
ಅಸ್ತಿತ್ವದಲ್ಲಿದೆ. ಅದು ಯಾವ ಶಬ್ದವನ್ನೂ ಮಾಡುವುದಿಲ್ಲ. ಅದು ಜನರನ್ನು ಎಬ್ಬಿಸಲು ಬೆಳಕನ್ನಷ್ಟೇ ಉಪಯೋಗಿಸುತ್ತದೆ. ಅದು ಕ್ಷಣ ಕ್ಷಣಕ್ಕೂ ತನ್ನ ಬೆಳಕನ್ನು ಹೆಚ್ಚಿಸುತ್ತಾ ಹೋಗುತ್ತದೆ, ನೀವು ಏಳುವ ತನಕ. ಈ ಅಲಾರ್ಮ್‌ನ್ನು ನಾನು ಅನೇಕ ವರ್ಷಗಳಿಂದ ಯಶಸ್ವಿಯಾಗಿ ಬಳಸುತ್ತಿದ್ದೇನೆ. ಅದಕ್ಕೆ ಕಿಟಕಿ ಅಂತ ಕರೆಯುತ್ತಾರೆ.