ಇದೇ ಅಂತರಂಗ ಸುದ್ದಿ
vbhat@me.com
ಕೆಲವೊಮ್ಮೆ ಜೇನು ತುಪ್ಪ ಕಪ್ಪಾಗಬಹುದು ಅಥವಾ ಗಟ್ಟಿಯಾಗಬಹುದು. ಆದರೆ ಅಷ್ಟಾದರೂ ಅದು ಸೇವಿಸಲು ಸುರಕ್ಷಿತ. 2015 ರಲ್ಲಿ ಈಜಿಪ್ಟಿನಲ್ಲಿ ಪುರಾತತ್ವ ಪರಿಣತರಿಗೆ ಉತ್ಖನನ ಮಾಡುವಾಗ ಜೇನು ತುಪ್ಪವಿರುವ ಪಾತ್ರೆಗಳು ಸಿಕ್ಕವು.
ಅವು ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನವು ಎಂದು ಅಂದಾಜು ಮಾಡಲಾಗಿದೆ. ಅವು ಸೇವಿಸಲು ಯೋಗ್ಯ ವಾಗಿದ್ದವು ಎಂಬುದು ಅತ್ಯಂತ ಕುತೂಹಲಕರ ಸಂಗತಿ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾಗಳು ಜೀವಿಸಲಾರವು.
ನಾನು ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಲಂಡನ್‌ನಿಂದ ಪ್ರಕಟವಾಗುವ ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಅಲಿಸನ್ ಬೆಂಜಮಿನ್‌ಳನ್ನು ಓದುತ್ತಾ ಬಂದಿದ್ದೇನೆ. ಆಕೆ ಆ ಪತ್ರಿಕೆಯ ಪರಿಸರ ಸಂಪಾದಕಿಯಾಗಿದ್ದಳು. ಸಂಪಾದಕೀಯ ಪುಟಗಳ ನಿರ್ವಾಹಕಿಯಾಗಿದ್ದಳು. ಸರಕಾರದ ಪರಿಸರ ನೀತಿಗಳ ಬಗ್ಗೆ ವರದಿ ಮಾಡುತ್ತಿದ್ದಳು. ಜಗತ್ತಿನಲ್ಲಿ ಪರಿಸರ ಸಂಬಂಽ ಸಮಾವೇಶಗಳು ನಡೆಯಲಿ ಆಕೆ ವರದಿಗೆಂದು ಹೋಗುತ್ತಿದ್ದಳು.
ಇವೆಲ್ಲವುಗಳ ಜತೆಗೆ ನನಗೆ ಆಕೆ ಬಗ್ಗೆ ಅಭಿಮಾನವೆನಿಸಲು ಮತ್ತೊಂದು ಪ್ರಮುಖ ಕಾರಣ ಆಕೆಗೆ ಜೇನು ಹುಳುಗಳ ಬಗ್ಗೆ ಇರುವ ಅಪಾರ ಪ್ರೀತಿ ಮತ್ತು ಕಾಳಜಿ. ಆಕೆ ಎರಡು ದಶಕಗಳಿಂದ ನಿರಂತರವಾಗಿ ಜೇನ್ನೊಣಗಳ ಬಗ್ಗೆ ಆ ಪತ್ರಿಕೆಯಲ್ಲಿ ಬರೆಯುತ್ತಾ ಬಂದಿದ್ದಾಳೆ. ಪ್ರಾಯಶಃ ಲಂಡನ್‌ನ್ನಿನ ಮುಖ್ಯ ವಾಹಿನಿ ಪತ್ರಿಕೆಯೊಂದರಲ್ಲಿ ಜೇನು ಹುಳುಗಳ ಬಗ್ಗೆ ಇಷ್ಟೊಂದು ವ್ಯಾಪಕವಾಗಿ, ಸತತವಾಗಿ ಬರೆಯುತ್ತಿರುವ ಇನ್ನೊಬ್ಬರು ಸಿಗಲಿಕ್ಕಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ, ಯಾವುದೇ ವಿಶ್ವವಿದ್ಯಾಲಯದಲ್ಲಿ ಜೇನ್ನೊಣಗಳ ಬಗ್ಗೆ ಸಂಶೋಧನೆ ನಡೆಯು ತ್ತಿದ್ದರೆ ಸಂಶೋಧಕರನ್ನು ಸಂಪರ್ಕಿಸಿ, ಅವರಿಂದ ಪೂರಕ ಮಾಹಿತಿ ಪಡೆದು ಅಲಿಸನ್ ಬೆಂಜಮಿನ್ ಪ್ರಕಟಿಸುತ್ತಾಳೆ. ಈ ರೀತಿ ಜೇನುಹುಳುಗಳನ್ನು ಹಿಂಬಾಲಿಸಿ ಹೋಗುವ ಅವರ ಅಪರಿಮಿತ ಕುತೂಹಲಕ್ಕಾಗಿಯಾದರೂ ಅವರ ಬರಹಗಳನ್ನು ಓದಬೇಕು.
ಜಗತ್ತಿನಾದ್ಯಂತ ಇಪ್ಪತ್ತು ಸಾವಿರಕ್ಕೂ ಅಧಿಕ ವಿವಿಧ ಜಾತಿಗಳ ಜೇನ್ನೊಣಗಳಿವೆ. ಆ ಪೈಕಿ ಕೈಬೆರಳಿಣಿಕೆಯಷ್ಟು ಜಾತಿಯ ಹುಳುಗಳು ತುಪ್ಪವನ್ನು ತಯಾರಿಸುತ್ತವೆ ಅಥವಾ ಅಷ್ಟು ಬಗೆಯವು ತಯಾರಿಸಿದ ತುಪ್ಪವನ್ನು ಮನುಷ್ಯರು ಸೇವಿಸಲು
ಯೋಗ್ಯವಾಗಿವೆ. ಆ ಪೈಕಿ ಹಲವು ಕಾಲನಿಗಳಲ್ಲಿ ಒಟ್ಟಾಗಿ ಜೀವಿಸುತ್ತವೆ.
ನೂರಿನ್ನೂರು ಹುಳುಗಳು ಒಟ್ಟಾಗಿ ಜೀವಿಸುವುದೂ ಉಂಟು. ಜೇನ್ನೊಣಗಳ ಬಗ್ಗೆ ಯಾರಿಗೂ ಸರಿಯಾದ ಮತ್ತು ಸಂಪೂರ್ಣ ಮಾಹಿತಿ ಇಲ್ಲದಿರುವುದೇ, ಅವಜ್ಞೆಗೆ ಕಾರಣವಾಗಿದೆ.
ಎಲ್ಲರಿಗೂ ಜೇನು ತುಪ್ಪ ಅಂದ್ರೆ ಇಷ್ಟ. ಆದರೆ ಯಾರೂ ಜೇನುಹುಳುಗಳನ್ನು ಸಾಕಲು ಇಷ್ಟಪಡುವುದಿಲ್ಲ. ಒಂದು ಲಕ್ಷ ಜನರಲ್ಲಿ ಒಬ್ಬರು ಮಾತ್ರ ಜೇನುಹುಳುಗಳನ್ನು ಸಾಕಲು ಮುಂದೆ ಬರುತ್ತಿದ್ದಾರೆ. ಆದರೆ ಆ ಎಲ್ಲ ಒಂದು ಲಕ್ಷ ಜನರಿಗೂ ಜೇನು ತುಪ್ಪ ಅಂದ್ರೆ ಪಂಚಪ್ರಾಣ. ಹೀಗಿರುವಾಗ ಜೇನು ತುಪ್ಪಕ್ಕೆ ಅದೆಷ್ಟು ಬೇಡಿಕೆ ಇದ್ದಿರಬಹುದು ಊಹಿಸಬಹುದು. ಜಗತ್ತಿನಲ್ಲಿ ಜೇನು ತುಪ್ಪದಂಥ ಪರಿಶುದ್ಧವಾದುದು ಮತ್ತೊಂದಿರಲಾರದು. ಸಾವಿರ ವರ್ಷವಿಟ್ಟರೂ ಪರಿಶುದ್ಧ ತುಪ್ಪ ಹಾಳಾಗುವುದಿಲ್ಲವಂತೆ.
ಅಂದಕ್ಕೆ expiry date ಇಲ್ಲವೇ ಇಲ್ಲ.
ಕೆಲವೊಮ್ಮೆ ಜೇನು ತುಪ್ಪ ಕಪ್ಪಾಗಬಹುದು ಅಥವಾ ಗಟ್ಟಿ ಯಾಗಬಹುದು. ಆದರೆ ಅಷ್ಟಾದರೂ ಅದು ಸೇವಿಸಲು ಸುರಕ್ಷಿತ.
೨೦೧೫ ರಲ್ಲಿ ಈಜಿಪ್ಟಿನಲ್ಲಿ ಪುರಾತತ್ವ ಪರಿಣತರಿಗೆ ಉತ್ಖನನ ಮಾಡುವಾಗ ಜೇನು ತುಪ್ಪವಿರುವ ಪಾತ್ರೆಗಳು ಸಿಕ್ಕವು. ಅವು
ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನವು ಎಂದು ಅಂದಾಜು ಮಾಡಲಾಗಿದೆ. ಅವು ಸೇವಿಸಲು ಯೋಗ್ಯ ವಾಗಿದ್ದವು ಎಂಬುದು ಅತ್ಯಂತ ಕುತೂಹಲಕರ ಸಂಗತಿ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾಗಳು ಜೀವಿಸಲಾರವು. ‘ನನ್ನ ಬಳಿ ನಲವತ್ತು ವರ್ಷಗಳ ಹಿಂದಿನ ಜೇನುತುಪ್ಪವಿದೆ.
ಅದನ್ನು ನಾನು ಸೇವಿಸಬಹುದೇ?’ ಎಂದು ಓದುಗರೊಬ್ಬರು ಕೇಳಿದ ಪ್ರಶ್ನೆಗೆ ಅಲಿಸನ್ ಬೆಂಜಮಿನ್, ‘ಅದು ಹಾಳಾದರೆ ತಾನೇ? ನೀವು ಕಣ್ಣುಮುಚ್ಚಿ ಜೇನುತುಪ್ಪವನ್ನು ಸೇವಿಸಬಹುದು’ ಎಂದು ಬರೆದಿದ್ದರು. ಓದುಗರೊಬ್ಬರು ಅಲಿಸನ್‌ಗೆ, ‘ಐದು ಸಾವಿರ ವರ್ಷಗಳ ಜೇನುತುಪ್ಪವನ್ನು ಸೇವಿಸಬಹುದಾ?’ ಎಂಬ ತರಲೆ ಪ್ರಶ್ನೆಗೆ, ‘ಎ ಆಹಾರ ಪದಾರ್ಥಗಳಿಗೆ ಇಂತಿಷ್ಟು ಆಯುಷ್ಯ ಎಂಬುದಿರುತ್ತದೆ.
ಆದರೆ ಎಷ್ಟೇ ವರ್ಷಗಳಾದರೂ ಕೆಡದ ಒಂದು ಪದಾರ್ಥವಿದ್ದರೆ ಅದು ಜೇನುತುಪ್ಪ. ಅದು ಸಾವಿರ ವರ್ಷದ ಜೇನುತುಪ್ಪವನ್ನು
ಹಿಂದೆ-ಮುಂದೆ ನೋಡದೇ, ಯಾರನ್ನೂ ಕೇಳದೇ ಸೇವಿಸಬಹುದು’ ಎಂದು ಪ್ರತಿಕ್ರಿಯಿಸಿದ್ದರು.
ಜೇನ್ನೊಣಗಳ ಬಗ್ಗೆ ಅಲಿಸನ್ ಬೆಂಜಮಿನ್ ಅದೆಂಥ ಅದ್ಭುತವೆನಿಸುವ ಕೆಲಸವನ್ನು ಮಾಡಿದ್ದಾಳೆ ಎಂಬುದನ್ನು ಅರಿಯಲು ಅವಳು ಬರೆದಿರುವ The Good Bee: A Celebration of Bees and How to Save Them ಮತ್ತು A world Without Bees ಎಂಬ ಎರಡು ಕೃತಿಗಳನ್ನು ಓದಬೇಕು. ಇವು ವರದಿಗಾರ್ತಿಯೊಬ್ಬಳ ಕಾಲು ಶತಮಾನದ ನಿರಂತರ ಹುಡುಕಾಟ ಮತ್ತು ಅಗಾಧ ಪರಿಶ್ರಮದ ಕಥನವೂ ಹೌದು.
ಕೆಲವು ಕಟುಸತ್ಯಗಳು
‘ನನಗೆ ಇಪ್ಪತ್ತೆರಡನೆ ವಯಸ್ಸಿನದ್ದಾಗಲೇ ಗೊತ್ತಿರಬೇಕಾದ ಆದರೆ ನನ್ನ ಅರವತ್ತೆರಡನೇ ವರ್ಷಕ್ಕೆ ಅರಿವಿಗೆ ಬಂದ ಕೆಲವು
ಕಟುಸತ್ಯಗಳು ಯಾವವು’ ಎಂದು ಯೋಗಿ ದುರ್ಲಭಜೀ ಯೋಚಿಸಲಾರಂಭಿಸಿ, ಅಂಥ ಕಟುಸತ್ಯಗಳು ಯಾವುವು ಎಂದು ಟಿಪ್ಪಣಿ ಮಾಡಲಾರಂಭಿಸಿದರಂತೆ. ಆ ಪೈಕಿ ಕೆಲವು..
೧. ನಿಮ್ಮ ಬಹುತೇಕ ಆಪ್ತ ಸ್ನೇಹಿತರು ವಾಸ್ತವದಲ್ಲಿ ಆಪ್ತರಲ್ಲ, ಸ್ನೇಹಿತರೂ ಅಲ್ಲ.
೨. ನಿಮ್ಮವರು ಯಾರು ಎಂಬುದು ನಿಮಗೆ ತೀರಾ ತಡವಾಗಿ ಗೊತ್ತಾಗುತ್ತದೆ. ಅಂಥವರನ್ನು ಪದೇ ಪದೆ ಭೇಟಿ ಮಾಡಲು
ಆಗುವುದಿಲ್ಲ.
೩. ನೀವು ದೊಡ್ಡವರಾದ ಬಳಿಕ ಏನಾಗಬೇಕು ಎಂಬುದು ಯಾವತ್ತೂ ಗೊತ್ತಾಗುವುದೇ ಇಲ್ಲ. ಅಸಲಿಗೆ ನೀವು ಯಾವಾಗ
ದೊಡ್ಡವರಾಗಿದ್ದೀರಿ ಎಂಬುದೂ ಗೊತ್ತಾಗುವುದಿಲ್ಲ.
೪. ಬಹಳಷ್ಟು ಜನ ನಿಮಗೆ ಕ್ಯಾರೇ ಅನ್ನುವುದಿಲ್ಲ.
೫. ಪ್ರತಿ ವಿಷಯವನ್ನೂ ತಿಳಿದುಕೊಳ್ಳಲೇಬೇಕು ಎಂಬ ಅಗತ್ಯವಿಲ್ಲ. ಹೀಗಾಗಿ ಎ ವಿಷಯಗಳ ಬಗ್ಗೆ ಅಭಿಪ್ರಾಯ
ಹೊಂದಿರಬೇಕಿಲ್ಲ.
೬. ನೀವು ಬದುಕಿದ್ದಾಗಲೇ ಜನ ನಿಮ್ಮನ್ನು ಮರೆತಿರುತ್ತಾರೆ. ಸತ್ತ ನಂತರ ನೆನಪಿಟ್ಟುಕೊಳ್ಳುವುದು ವಿರಳ.
೭. ಒಬ್ಬನನ್ನು ಅಳೆಯಲು ಬಹಳ ಕಷ್ಟಪಡಬೇಕಿಲ್ಲ. ಶಾಪಿಂಗ್ ಮಾಡಿದ ಬಳಿಕ ಶಾಪಿಂಗ್ ಕಾರ್ಟ್ ಹೇಗಿಡುತ್ತಾರೆ ಮತ್ತು
ಹೊಟೇಲಿನಲ್ಲಿ ವೇಟರ್ ಜತೆ ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಒಬ್ಬ ವ್ಯಕ್ತಿ ಹೀಗೇ ಎಂದು ಅಳೆಯಬಹುದು.
೮. ಜೀವನದಲ್ಲಿ ಎಷ್ಟೇ ಉತ್ತಮ ಹೆಂಡತಿ/ಗಂಡ ಸಿಗಲಿ, ಅವರು ಪರಿಪೂರ್ಣ ಆಗಿರುವುದಿಲ್ಲ. ಗಂಡ-ಹೆಂಡತಿ ಮಧ್ಯೆ
ಭಿನ್ನಾಭಿಪ್ರಾಯ ಅನಿವಾರ್ಯ.
೯. ಹಿಂದಿನ ವರ್ಷ ಎಷ್ಟು ಪುಸ್ತಕಗಳನ್ನು ಓದಿದ್ದೀರಿ ಎಂದು ಕೇಳಿದಾಗ ಯಾರೂ ಎರಡಕ್ಕಿಂತ ಹೆಚ್ಚು ಪುಸ್ತಕಗಳ ಹೆಸರನ್ನು
ಹೇಳುವುದಿಲ್ಲ.
೧೦. ಒಳ್ಳೆಯವರಿಗೆ ಕಾಲವಲ್ಲ. ಯಾವತ್ತೂ ಕೆಟ್ಟವರೇ ಮೆರೆಯುತ್ತಾರೆ.
೧೧. ಈಕೆ ನನಗೆ ಒಳ್ಳೆಯ ಪಾರ್ಟನರ್ ಆಗುತ್ತಿದ್ದಳೇನೋ ಎಂದು ಕೆಲವರನ್ನು ನೋಡಿದಾಗ ಅಂದುಕೊಳ್ಳುತ್ತೇವೆ. ಆದರೆ
ಅದು ಎಂದೂ ಈಡೇರುವುದಿಲ್ಲ.
೧೨. ತಂದೆ-ತಾಯಿಗಳೂ ನಮ್ಮ ಬಗ್ಗೆ ನೂರಕ್ಕೆ ನೂರು ಸಹಮತ ಹೊಂದಿರುವುದಿಲ್ಲ.
ಹೆಚ್ಚುವರಿ ಆದಾಯ
ಇತ್ತೀಚೆಗೆ ಇದನ್ನು ನಾನು ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ಓದಿದ್ದು. ನೀವು ಗಳಿಸಿದ್ದೆ ಖಾಲಿಯಾಗಬಹುದಂತೆ. ಆದರೆ
ಕೊನೆ ತನಕ ಉಳಿಯುವುದು ನೀವು ಉಳಿತಾಯ ಮಾಡಿದ್ದಂತೆ. ಉಳಿತಾಯವನ್ನು ಒಂದು ಕಠೋರ ನಿರ್ಣಯದಂತೆ ಪಾಲಿಸಿಕೊಂಡು ಬಂದರೆ ಅದೇ ಶ್ರೀರಕ್ಷೆಯಾಗಿ ಒಳಿತಾಗುತ್ತದೆಯಂತೆ. ಅವರ ಹೆಸರು ಮನೋಜ ಪರಮಾರ್. ಅವರು ಇಂದೋರಿನ ಸಿಯಾಗಂಜಿನಲ್ಲಿ ‘ಸ್ಲೀಪ್ ವೆಲ್’ ಎಂಬ ಹೆಸರಿನ ಮ್ಯಾಟ್ರೆಸ್ (ಹಾಸಿಗೆ) ಮಾರಾಟದ ಅಂಗಡಿಯಲ್ಲಿ ಸೇಲ್ಸ ಮನ್.
ಹಳೆಯ ಹಾಸಿಗೆಗಳ ದುರಸ್ತಿಯಲ್ಲಿ ಅವರಿಗೆ ವಿಶೇಷ ಪರಿಣತಿ. ಅವರು ಖರೀದಿದಾರರ ಮನೆಗೆ ಹೊಸ ಹಾಸಿಗೆ ಡೆಲಿವರಿ ಕೊಡುತ್ತಾರೆ ಮತ್ತು ಅವರಲ್ಲಿನ ಹಳೆ ಹಾಸಿಗೆಯನ್ನು ತಂದು ರಿಪೇರಿ ಮಾಡಿಕೊಡುತ್ತಾರೆ. ಈ ಕೆಲಸವನ್ನವರು ಭಾನುವಾರ ಗಳಂದು ಮಾತ್ರ ಮಾಡುತ್ತಾರೆ. ಸೋಮವಾರದಿಂದ ಶನಿವಾರದ ತನಕ ಅವರು ಅಂಗಡಿಯಲ್ಲಿದ್ದು ಕೆಲಸ ಮಾಡಬೇಕಾಗು ತ್ತದೆ, ಅದರಿಂದ ಸಿಗುವ ವೇತನದಲ್ಲಿ ಮನೆ ನಡೆಸುವುದು ಸಾಧ್ಯವಾಗುತ್ತದೆ. ಅವರು ತಮ್ಮ ಇಬ್ಬರು ಸಹೋದರರ ಜತೆ ರಜಾ ದಿನವಾದ ಭಾನುವಾರದಂದು ಮನೆಮನೆಗೆ ಹೋಗಿ ಹಳೆ ಹಾಸಿಗೆ ದುರಸ್ತಿಪಡಿಸುವ ಕೆಲಸವನ್ನು ಮಾಡುತ್ತಾರೆ ಮತ್ತು ತಿಂಗಳಿಗೆ ಒಬ್ಬೊಬ್ಬರೂ ಎಂಟು ಸಾವಿರ ರುಪಾಯಿಗಳಷ್ಟು ಹೆಚ್ಚುವರಿ ಆದಾಯ ಸಿಗುತ್ತದೆ. ಇದು ಅವರ ಉಳಿತಾಯದ ಖಾತೆಗೆ ಹೋಗುತ್ತದೆ. ಭಾನುವಾರದ ಗಳಿಕೆ ಅವರ ಉಳಿತಾಯದ ಪಿಗ್ಮಿ ಖಾತೆ ಸೇರುತ್ತದೆ.
ಈ ಪದ್ಧತಿಯನ್ನು ಅಂಗಡಿಯ ಸಂಸ್ಥಾಪಕ ದಿವಂಗತ ಇಸ್ಮಾಯಿಲ್ ಆಲಿ ಬಾದಶಾಹ ಆರಂಭಿಸಿದ್ದರಂತೆ. ಅವರೂ ಇದೇ
ರೀತಿ ಸಣ್ಣಪುಟ್ಟ ಕೆಲಸಗಳನ್ನು ರಜಾ ದಿನಗಳಂದು ಮಾಡಿ ಹೆಚ್ಚುವರಿ ಗಳಿಕೆ ಮಾಡುತ್ತಿದ್ದರಂತೆ. ಅರವತ್ತರ ದಶಕದಲ್ಲಿ ಸೈಫೀ
ಹೈಸ್ಕೂಲಿನಲ್ಲಿ ಲೈಬ್ರೇರಿಯನ್ ಆಗಿ ನೌಕರಿ ಶುರು ಮಾಡಿದರು. ಅವರು ಅಲ್ಲಿ ಮೂರು ದಶಕಗಳ ಕಾಲ ಕೆಲಸ ಮಾಡಿದರು. ನಂತರ ಉರ್ದು, ಅರಬ್ಬೀ ಭಾಷೆಗಳನ್ನು ಕಲಿಸಲಾರಂಭಿಸಿದರು. ಆಗ ಅವರಿಗೆ ಹೆಚ್ಚುವರಿ ಆದಾಯ ಸಿಗಲಾರಂಭಿಸಿತು. ಆ ಮೂಲಕ ಗಳಿಸಿದ ಹಣದಿಂದ ಅವರು ಉದ್ಯಮಕ್ಷೇತ್ರಕ್ಕೆ ಕಾಲಿಟ್ಟರು.
ಒಂದು ಕೆಲಸ ಮಾಡುತ್ತಿದ್ದಾಗ ಇನ್ನೊಂದನ್ನು ಜೋಡಿಸಿಕೊಂಡು ಹೆಚ್ಚುವರಿ ಆದಾಯವನ್ನು ಪಡೆಯುವುದು ಹೇಗೆ ಎಂಬುದನ್ನು ಅವರು ತಮ್ಮ ಕೆಲಸಗಾರರಿಗೂ ಕಲಿಸಿಕೊಟ್ಟರು. ನಿವೃತ್ತರಾದ ನಂತರವೂ ಅವರು ಇದನ್ನು ಮುಂದುವರೆಸಿ ದರು. ಎರಡು ವಿಧಗಳಲ್ಲಿ ಆದಾಯ ಗಳಿಸುವ ಅವರ ಕೆಲಸ ಮತ್ತೆ ಮುಂದುವರಿಯಿತು. ಆದರೆ ಆಗ ಅವರ ವಿಧಾನ ಬದಲಾಗಿತ್ತು. ಅವರು ಹಣ ಸಂಪಾದನೆ ಮಾಡುತ್ತಿದ್ದರು ಜತೆಗೆ ದಾನಧರ್ಮಗಳನ್ನೂ ಮಾಡುತ್ತಿದ್ದರು. ಅವರು ಮನೆಪಾಠ ಹೇಳುವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ ಹುಡುಗರಲ್ಲಿ ಅನೇಕರು ತಮ್ಮ ಶಾಲಾ ಫೀಜು ಕಟ್ಟಲೂ ಹಣವಿಲ್ಲದ ಬಡವರಿರುತ್ತಿದ್ದರು. ಈ ಸಂಸ್ಕೃತಿಯನ್ನು ಅವರು ತಮ್ಮ ಕೆಲಸಗಾರರಿಗೂ ಹೇಳಿಕೊಟ್ಟರು ಮತ್ತು ಭಾನುವಾರದ ದಿನವೂ ಕೆಲಸ ಮಾಡಿ ಉಳಿತಾಯ ಮಾಡುವುದನ್ನು, ಉಳಿಸಿದ್ದನ್ನು ದಾನಧರ್ಮಗಳಿಗೆ ವಿನಿಯೋಗಿಸುವು ದನ್ನು ಕಲಿಸಿದರು. ನೀವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಭಾನುವಾರದ ದಿನವನ್ನು ಹೀಗೆ ಬಳಸಿಕೊಳ್ಳಬೇಕು ಮತ್ತು ನಿಮ್ಮ ಆದಾಯ ವರ್ಧನೆ ಮಾಡಿಕೊಳ್ಳಬೇಕು. ಆ ಮೂಲಕ ಉಳಿತಾಯವನ್ನು ಸಾಧಿಸಬಹುದು.
ಓದು ಮತ್ತು ಗೇಟ್ಸ್
ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ‘ಓದಿನ ಮಹತ್ವ’ದ ಬಗ್ಗೆ ತಮ್ಮ
ಪತ್ರಕರ್ತನೊಬ್ಬನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು – ‘ಯಾರಾದರೂ ಓದದೇ ತಾನು ಬುದ್ಧಿವಂತನಾಗಿದ್ದೇನೆ ಎಂದು
ಹೇಳಿದರೆ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ದೃಶ್ಯ ಮತ್ತು ಮಾತಿನ ಸಹಾಯದಿಂದ ಮಲ್ಟಿಮೀಡಿಯಾ
ಮೂಲಕ ಯಾವ ಮಾಹಿತಿಯನ್ನಾದರೂ ಇಂದು ಪಡೆಯಬಹುದು. ಆದರೂ ಅಕ್ಷರಗಳ ಮೂಲಕ ಪಡೆಯುವ ಜ್ಞಾನದ ಮುಂದೆ ಯಾವ ಜ್ಞಾನವೂ ಸಮಾನವಲ್ಲ. ನಾನು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಓದುವುದನ್ನು ರೂಢಿಸಿ ಕೊಂಡಿದ್ದೇನೆ.
ಟಿವಿ ನಮಗೆ ದೃಶ್ಯವನ್ನೇ ತಂದುಕೊಡುತ್ತವೆ. ಅಲ್ಲಿ ನಮ್ಮ ಪ್ರಯತ್ನವಿಲ್ಲ. ಆದರೆ ಅಕ್ಷರಗಳು ಹಾಗಲ್ಲ. ಓದುತ್ತಾ ಹೋದಂತೆ ನಾವೇ ದೃಶ್ಯಗಳನ್ನು ನಮ್ಮ ಮನಸ್ಸಿನಲ್ಲಿ ಅರಳಿಸಿಕೊಳ್ಳಬೇಕು. ಕ್ರಮೇಣ ಅಕ್ಷರಗಳೇ ದೃಶ್ಯಗಳಾಗುತ್ತವೆ. ಆದರೆ ಅಕ್ಷರಗಳ ಮೂಲಕ ದೃಶ್ಯಗಳನ್ನು ಅರಳಿಸಿಕೊಳ್ಳುವ ಪ್ರಯತ್ನ ಮಾತ್ರ ನಮ್ಮದೇ. ಹೀಗಾಗಿ ಓದು ಬಹಳ ಮುಖ್ಯ.’ ಇತ್ತೀಚೆಗೆ ಅದೇ ಪತ್ರಕರ್ತ ಬಿಲ್ ಗೇಟ್ಸ್ ಅವರಿಗೆ ಈ ಮಾತುಗಳನ್ನು ನೆನಪಿಸಿದ.
ಅದಕ್ಕೆ ಬಿಲ್ ಗೇಟ್ಸ್, ‘ಇಂದಿಗೂ ಅಂದು ನಾನು ಹೇಳಿದ ಮಾತುಗಳಿಗೆ ಬದ್ಧನಾಗಿದ್ದೇನೆ. ಜ್ಞಾನ ಯಾವುದೇ ಮಾಧ್ಯಮದ
ಮೂಲಕ ಬರಲಿ, ಪುಸ್ತಕಗಳ ಮೂಲಕ ಬರುವ ಜ್ಞಾನವೇ ವಿಶೇಷವಾದುದು. ಇಂದಿಗೂ ನಾನು ಓದುವುದನ್ನು ಬಿಟ್ಟಿಲ್ಲ.
ಓದಿನಲ್ಲಿ ಸಿಗುವ ಸುಖ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ನಾನು ವೈಯಕ್ತಿಕವಾಗಿ ಅತಿ ಹೆಚ್ಚು ಶ್ರೀಮಂತನೆನಿಸುವುದು
ಓದುವಾಗ’ಎಂದು ಹೇಳಿದ್ದರು.
ಬಿಲ್ ಗೇಟ್ಸ್ ಏನು ಓದುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಇಡೀ ಜಗತ್ತು ಕುತೂಹಲದಿಂದ ಎದುರು ನೋಡುತ್ತದೆ. ತಾವು ಓದಿದ ಪುಸ್ತಕ ಮತ್ತು ಆ ಪುಸ್ತಕದಲ್ಲಿನ ವಿಷಯಗಳ ಬಗ್ಗೆ ಅವರು ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ. ಅವರು ಶಿಫಾರಸು ಮಾಡುವ ಪುಸ್ತಕಗಳ ಲಕ್ಷಗಟ್ಟಲೆ ಪ್ರತಿಗಳು ತಿಂಗಳೊಳಗೆ ಮಾರಾಟವಾಗುತ್ತವೆ. ಮೂಲತಃ ಅವರು ಉತ್ತಮ ಓದುಗರೂ ಆಗಿರುವುದರಿಂದ ಅವರ ಶಿಫಾರಸಿಗೆ ಅಷ್ಟೊಂದು ಬೆಲೆ.
ಪುಸ್ತಕಗಳ ಬಗ್ಗೆ ಬಿಲ್ ಗೇಟ್ಸ್ ಮಾತುಗಳನ್ನು ಕೇಳುವಾಗ, ಅಮೆರಿಕದ ಕಾದಂಬರಿಕಾರ ಜಾರ್ಜ್ ಮಾರ್ಟಿನ್ ಹೇಳಿದ
ಮಾತು ನೆನಪಾಗುತ್ತದೆ – & A reader lives a thousand lives before he dies . . . The man who never reads lives only one.
ಆಪಲ್ ಮತ್ತು ಕುಕ್
ಯಾವುದಾದರೂ ಒಂದು ಕಂಪನಿ ನನ್ನ ಮೇಲೆ ಗಾಢ ಪರಿಣಾಮ ಬೀರಿದ್ದರೆ ನಿಸ್ಸಂದೇಹವಾಗಿ ಅದು ಆಪಲ. ನನ್ನನ್ನು
ನಾನೇ ‘ಆಪಲ್ ಅಘೋಷಿತ ರಾಯಭಾರಿ’ ಎಂದು ಘೋಷಿಸಿಕೊಂಡಿದ್ದುಂಟು. ಕಳೆದ ಹದಿನೇಳು ವರ್ಷಗಳಿಂದ ಈ ಕಂಪನಿ ತಯಾರಿಸಿದ ಬಹುತೇಕ ಎಲ್ಲಾ ಉತ್ಪನ್ನಗಳನ್ನು ನಾನು ಬಳಸುತ್ತಾ ಬಂದಿದ್ದೇನೆ.
ಆಪಲ್ ಪ್ರಾಡಕ್ಟ್‌ಗಳು ಪರಿಪೂರ್ಣ ಮತ್ತು ಉತ್ಕೃಷ್ಟತೆಯ ಪ್ರತೀಕ. ಒಂದು ವಸ್ತುವಿನ ಬಳಕೆಯಿಂದ ಸಿಗುವ ಗರಿಷ್ಠ ತೃಪ್ತಿ
ಆಪಲ್ ಪ್ರಾಡಕ್ಟ್‌ಗಳಿಂದ ಪಡೆಯಬಹುದು. ಇದು ನನ್ನೊಬ್ಬನ ಅನಿಸಿಕೆಯಲ್ಲ. ಜಗತ್ತಿನಾದ್ಯಂತ ಆಪಲ್ ಪ್ರಾಡಕ್ಟ್‌ಗಳನ್ನು
ಬಳಸುವವರೆಲ್ಲರ ಅನಿಸಿಕೆಯೂ ಹೌದು. ಒಮ್ಮೆ ನೀವು ಆಪಲ್ ಪ್ರಾಡಕ್ಟ್‌ಗಳನ್ನು ಬಳಸಲು ಆರಂಭಿಸಿದರೆ, ಮತ್ತೊಮ್ಮೆ ಬೇರೆ
ಉತ್ಪನ್ನಗಳ ಕಡೆಗೆ ಕಣ್ಣೆತ್ತಿಯೂ ನೋಡಲಾರಿರಿ. ಕೆಲವರು ಬೇರೆ ಕಂಪನಿಗಳ ಪ್ರಾಡಕ್ಟ್‌ಗಳನ್ನು ಬಳಸಿ, ಸಂತೃಪ್ತರಾಗದೇ ಪುನಃ ಆಪಲ್ ಉತ್ಪನ್ನಗಳಿಗೆ ಮರಳುವುದು ಸ್ವಾಭಾವಿಕ.
ಇಂಥ ಕಂಪನಿಯನ್ನು ಮುನ್ನಡೆಸುವ ಮುಖ್ಯಸ್ಥ ಹೇಗಿರಬಹುದು? ಅವರ ಕಾಯಕ ಸಿದ್ಧಾಂತ ಹೇಗಿದ್ದಿರಬಹುದು? ಈ ಪ್ರಶ್ನೆ ಉದ್ಭವಿಸಲು ಕಾರಣ, ಆಪಲ್ ಕಂಪನಿಯ ಸಿಇಒ ಟಿಮ್ ಕುಕ್, ಕಳೆದ ಒಂದು ವಾರದಿಂದ ಭಾರತ ಪ್ರವಾಸದಲ್ಲಿದ್ದಾರೆ.
ದಿಲ್ಲಿ ಮತ್ತು ಮುಂಬೈಯಲ್ಲಿ ಆಪಲ್ ಅಽಕೃತ ಬಹುದೊಡ್ದ ಮಳಿಗೆ ತೆರೆದಿದೆ. ಅದರ ಉದ್ಘಾಟನೆ ನಿಮಿತ್ತ ಅವರು ಭಾರತ ದಲ್ಲಿದ್ದರು.
ಟಿಮ್ ಕುಕ್ ವಿಶ್ವದ ಯಾವ ದೇಶದ ಇರಲಿ, ಪ್ರತಿ ದಿನ ಬೆಳಗಿನ ಜಾವ ಮೂರು ಮುಕ್ಕಾಲು ಗಂಟೆಗೆ ಏಳುತ್ತಾರಂತೆ.
ತಮ್ಮೊಂದಿಗಿರುವ ಸಹೋದ್ಯೋಗಿಗಳಿಗೆ ಅವರು ಬೆಳಗ್ಗೆ ನಾಲ್ಕೂವರೆಗೆ ಇಮೇಲ್ ಕಳಿಸುತ್ತಾರೆ. ಆ ದಿನ ಮಾಡಬೇಕಾದ
ಕಾರ್ಯಕ್ರಮಗಳ ಬಗ್ಗೆ ಸಿದ್ಧರಾಗುವಂತೆ ಪ್ರಚೋದಿಸುತ್ತಾರೆ. ಆರು ಗಂಟೆ ಹೊತ್ತಿಗೆ ಅವರೆಲ್ಲರಿಂದ ಪ್ರತಿಕ್ರಿಯೆ ಪಡೆದು,
ವ್ಯಾಯಾಮ, ಉಪಾಹಾರ ಮುಗಿಸಿ ಬೆಳಗ್ಗೆ ಎಂಟಕ್ಕೆ ಆಫೀಸು ಸೇರಿರುತ್ತಾರೆ.
ಆಪಲ್ ಕಂಪನಿಯ ಸ್ಥಾಪಕ ಸ್ಟೀವ್ ಜಾಬ್ಸ್ ಕ್ಯಾನ್ಸರ್‌ಗೆ ತುತ್ತಾದಾಗ ಅವರ ರಕ್ಷಣೆಗೆ ಮುಂದಾಗಿದ್ದ ಟಿಮ್ ಒಂದು ಹಂತ ದಲ್ಲಿ ತಮ್ಮ ಲಿವರ್ ದಾನ ಮಾಡಲು ಮುಂದೆ ಬಂದಿದ್ದರು! ಐದಾರು ವರ್ಷಗಳ ಹಿಂದೆ ಕುಕ್ ಒಂದು ಮಾತು ಹೇಳಿದ್ದರು-Some people see innovation as change, but we have never really seen it like that. It’s making things better. ಆವಿಷ್ಕಾರದ ಉದ್ದೇಶವನ್ನು ಅತ್ಯಂತ ಸರಳವಾಗಿ ವಿವರಿಸಿದ ಮಾತಿದು.
ವಿಶ್ವದ ಅತ್ಯಂತ ಶ್ರೀಮಂತ ಸಿಇಒಗಳ ಪೈಕಿ ಟಿಮ್ ಕುಕ್ ಕೂಡ ಒಬ್ಬರು. 2023ರಲ್ಲಿ ಅವರ ವೇತನ ವಾರ್ಷಿಕ ಸುಮಾರು 401 ಕೋಟಿ ರುಪಾಯಿ! ಅಂದರೆ ದಿನಕ್ಕೆ ಒಂದು ಕೋಟಿ ರುಪಾಯಿಗಿಂತಲೂ ಹೆಚ್ಚು. ಅವರ ಗಳಿಕೆಯ ಬಹುಪಾಲು
ದಾನಧರ್ಮಗಳಿಗೆ ಮೀಸಲು. ಅವರ ವೈಯಕ್ತಿಕ ಸಂಪತ್ತು 15600 ಕೋಟಿ ರುಪಾಯಿ. ಮೂಲತಃ ಅವಿವಾಹಿತರಾಗಿರುವ
ಕುಕ್, ಸ್ಟೀವ್ ಜಾಬ್ಸ ನಂತರ, 2011 ರಿಂದ ಆಪಲ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯ ತನಕ ಸುಮಾರು ೨೩೫ ಲಕ್ಷ ಕೋಟಿ ರುಪಾಯಿಗಳ ಮಾರ್ಕೆಟ್ ಕ್ಯಾಪ್ ಉಳ್ಳ ವಿಶ್ವದ ಅತಿ
ದೊಡ್ಡ ಟೆಕ್ ಕಂಪನಿಯಾಗಿ ಆಪಲ್ ಹೊರಹೊಮ್ಮುವುದು ಸಾಧ್ಯವಾಗಿದೆ. ಸ್ಟೀವ್ ಜಾಬ್ಸ್ ಬಳಿಕ ಆಪಲ್ ಸಮರ್ಥ
ಉತ್ತರಾಧಿಕಾರಿ ಕೈಯಲ್ಲಿ ಸುರಕ್ಷಿತವಾಗಿದೆ.