ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಬೇಸಗೆಯ ತಾಪ ಕಳೆದು ರಾಜ್ಯದಲ್ಲಿ ಮಳೆಯ ಸಿಂಚನ ಸ್ವಲ್ಪ ಜೋರಾಗಿಯೇ ಇದೆ ಎನ್ನಬಹುದು. ರಾಜಧಾನಿ ಸೇರಿದಂತೆ ಇನ್ನು ಕೆಲವೆಡೆ ಮಳೆ ವಿಕೋಪ ಸೃಷ್ಟಿಯಾಗಿರುವುದನ್ನು ನೋಡಿದರೆ, ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಮುಂಜಾಗ್ರತೆ ವಹಿಸಿದೆ ಎನ್ನುವುದರ ಪ್ರಾತ್ಯಕ್ಷಿಕೆಯೂ ಹೌದು, ಇರಲಿ. ಬೇಸಿಗೆಯ ರಜೆಯಲ್ಲಿದ್ದ ಮತ್ತು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ನಮ್ಮ ಮುದ್ದುಮಕ್ಕಳು ಮುಂದಿನ ಶಿಕ್ಷಣಕ್ಕೆ ಸೇರುವ ಹುಮ್ಮಸ್ಸಿನಲ್ಲಿ ದ್ದಾರೆ.
ಇದರಲ್ಲಿ ಕೆಲವರು ಪ್ರೌಢಶಾಲೆಗೆ ಇನ್ನು ಕೆಲವರು ಕಾಲೇಜು, ಉನ್ನತ ಶಿಕ್ಷಣಕ್ಕೆ ಸೇರುವ ತಯಾರಿಯಲ್ಲಿದ್ದಾರೆ. ಇದರಲ್ಲಿ, ಹಿಂದುಳಿದ ಮತ್ತು ಆಧುನಿಕ ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗದ ಮುಗ್ಧ ಬಡ ತಂದೆ-ತಾಯಿಗಳ ಶ್ರಮವೂ ಸಾಕಷ್ಟಿದೆ. ಎಷ್ಟೋ ಪೋಷಕರು ಆರ್ಥಿಕ ಅಶಕ್ತರಾದ ಕಾರಣ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ನಿಂತೇ ಹೋಗಿರುವ ನೂರಾರು ಉದಾಹರಣೆಗಳಿವೆ. ಇದು ಕೇವಲ ವೈಯಕ್ತಿಕ ವಿಚಾರವಾಗಿರದೇ, ಒಬ್ಬ ಪ್ರತಿಭಾವಂತ ವಿಫಲನಾದರೆ, ಆ ಪ್ರತಿಭೆಯುಳ್ಳ ಕ್ಷೇತ್ರದಲ್ಲಿ ದೇಶಕ್ಕೆ, ನಮ್ಮ ಸಮಾಜಕ್ಕೆ ನಷ್ಟ ಎಂಬುದನ್ನು ನಮ್ಮ ಇಂದಿನ ಸಮಾಜ ಮತ್ತು
ಸಮುದಾಯ ಅರಿತಿರಬೇಕು.
ಇಂತಹ ಒಂದು ವಿಷಮ ಪರಿಸ್ಥಿತಿಯಲ್ಲೂ ಮೊನ್ನೆ ನಮ್ಮ ಮೆಟ್ರಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದರು. ಇಡೀ ರಾಜ್ಯ ‘ಈ ಮಕ್ಕಳಿಗೆ ಒಳ್ಳೆಯದಾಗಲಿ, ಮುಂದಿನ ಶಿಕ್ಷಣವನ್ನು ಸರಿಯಾಗಿ ಆರಿಸಿಕೊಳ್ಳಿ ಮತ್ತು ಉತ್ತಮ ಸಾಧನೆ ಮಾಡಿರಿ’ ಎಂದು ಹರಸಿದರು. ಎಸ್ಎಸ್ಎಲ್ಸಿ ಪರೀಕ್ಷೆಗೆ ಕುಳಿತಿದ್ದ ಎಂಟು ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ೬ ಲಕ್ಷ ಮಕ್ಕಳು ಮೇ ೨೦೨೪ರ ಸಾಲಿನಲ್ಲಿ ತೇರ್ಗಡೆಯಾಗಿದ್ದಾರೆ.
ಶಿಕ್ಷಣದ ಕಲಿಕೆಯ ಗುಣಮಟ್ಟ ಮತ್ತು ತೇರ್ಗಡೆಯ ವಿಚಾರ ದಲ್ಲಿ ದೊಡ್ಡಮಟ್ಟದಲ್ಲಿ ಕುಸಿತವುಂಟಾಗುತ್ತಿದೆ ಎಂಬುದನ್ನು ಇಲಾಖೆ ಮತ್ತು ಸಂಬಂದಿತ ಸಚಿವರು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ೨೦೨೨ಕ್ಕೆ ಹೋಲಿಸಿದಲ್ಲಿ ಪಾಸಾಗುವಿಕೆಯಲ್ಲಿ ಶೇ.೧೫ಕ್ಕಿಂತ ಹೆಚ್ಚು ಕುಸಿತ ಕಂಡುಬಂದಿದೆ. ಹಾಗೆಯೇ, ಸುಮಾರು ೪ ಲಕ್ಷದಷ್ಟು ವಿದ್ಯಾರ್ಥಿಗಳು ೬೬೦ ಸರಕಾರಿ ಕಾಲೇಜುಗಳಲ್ಲಿ, ೨೮೮೦ ಖಾಸಗಿ ಕಾಲೇಜುಗಳಲ್ಲಿ ೧೦ ಲಕ್ಷದಷ್ಟು ವಿದ್ಯಾರ್ಥಿಗಳು
ಅಧ್ಯಯನಕ್ಕೆ ಸೇರುತ್ತಿದ್ದಾರೆ. ಸುಮಾರು ೨ ಲಕ್ಷದಷ್ಟು ವಿದ್ಯಾರ್ಥಿನಿಯರು ಮತ್ತು ೧ ಲಕ್ಷದಷ್ಟು ವಿದ್ಯಾರ್ಥಿಗಳು ಪ್ರತಿವರ್ಷ ತೇರ್ಗಡೆಯಾಗುತ್ತಿರುವುದು ಕಂಡುಬರುತ್ತಿದೆ.
ಕಳೆದ ವಿಧಾನಸಭಾ ಅಧಿವೇಶನದಲ್ಲಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಅಸಮರ್ಪಕ ಪಠ್ಯ ಪುಸ್ತಕ ವಿತರಣೆ, ಸಾರಿಗೆ ವ್ಯವಸ್ಥೆ ಮತ್ತು ಯೋಗ್ಯ ವಸತಿ ನಿಲಯಗಳ ಕುರಿತು ಮೂರು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಇದಕ್ಕೆ ಪರಿಹಾರಗಳನ್ನೂ ಕಲಾಪದಲ್ಲಿ ಸೂಚಿಸ ಲಾಯಿತು. ಹಿಂದಿನ ಮಳೆಗಾಲದ ಅಧಿವೇಶನ ಕಳೆದು, ಮತ್ತೆ ಅಧಿವೇಶನ ಬಂದಿದೆ. ನಾಡಿನ ಮಕ್ಕಳ ಭವಿಷ್ಯತ್ತನ್ನು ರೂಪಿಸಬೇಕಿದ್ದ ಈ ವಿಚಾರಗಳು ಮಾತ್ರ ಸಮಸ್ಯೆಗಳಾಗಿ ಇನ್ನೂ ಜೀವಂತವಾಗಿವೆ.
ಅಸಮರ್ಪಕ ಪಠ್ಯ ಪುಸ್ತಕ ವಿತರಣೆ
ಮುಂದಿನ ಹಂತದ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಬೇಕಿರುವುದು ಪಠ್ಯಪುಸ್ತಕಗಳು. ಜೊತೆಗೆ, ಶಿಕ್ಷಕರ ಅಗತ್ಯ ನೇಮಕಾತಿ, ಶಿಕ್ಷಣದ ಗುಣಮಟ್ಟದಲ್ಲಿ, ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ವಿಚಾರಗಳನ್ನು ಹೆಚ್ಚಿಸುವಲ್ಲಿ ನಾವು ಇತರರಿಗೆ ಮಾದರಿಯಾಗಬೇಕಿದ್ದ ಸಂದರ್ಭದಲ್ಲಿ ಬೇಡದ ವಿಚಾರದಲ್ಲಿ ತುಸು ಹೆಚ್ಚೇ ಸದ್ದು ಮಾಡಿತೆನ್ನಬಹುದು. ಸಮಿತಿಯ ಪಾಠಗಳನ್ನು ಸಕಾಲದಲ್ಲಿ ಅಂತಿಮಗೊಳಿಸಿ ನಮ್ಮ ವಿದ್ಯಾರ್ಥಿಗಳಿಗೆ ತಲುಪಿಸು ವುದು ಪಠ್ಯ ರಚನಾ ಸಮಿತಿ ಮತ್ತು ಶಿಕ್ಷಣ ಇಲಾಖೆಯ ಕರ್ತವ್ಯ. ಕೋಟ್ಯಂತರ ಸಾರ್ವಜನಿಕ ಹಣ ಖರ್ಚುಮಾಡಿ ಹಿಂದಿನ ಸಮಿತಿಯ ಕಾರ್ಯವನ್ನು ಕಿತ್ತೆಸೆದು, ಹೊಸದಾಗಿ ಸೇರಿಸಲು ಮತ್ತೊಂದು ಸಮಿತಿ. ಅದಕ್ಕೂ ಕೋಟ್ಯಂತರ ಹಣ ವ್ಯಯ.
ಕೇವಲ ೧ ರಿಂದ ೧೦ನೇ ತರಗತಿವರೆಗಿನ ಪುಸ್ತಕಗಳ ಮುದ್ರಣಕ್ಕೆ ಕನಿಷ್ಠವೆಂದರೂ ೧೫೦ ರಿಂದ ೨೦೦ ಕೋಟಿ ರು.ಗಳು ಬೇಕು. ಇನ್ನು, ಹೊಸ ಸಮಿತಿಯ ಹೊಸ ಪುಸ್ತಕಗಳಿಗೆ ಮತ್ತದೇ ‘ಕಾಂಟ್ರಾಕ್ಟು’. ಹೀಗೆ ದುಂದುವೆಚ್ಚ ಮಾಡಿ ಮುದ್ರಣಕ್ಕೆ ಕೊಟ್ಟ ಪುಸ್ತಕಗಳು ಸಕಾಲಕ್ಕೆ ಮಕ್ಕಳ ಕೈಗೆ ಸೇರದೇ ಇರುವುದು ಒಂದು ಬಗೆಯ ‘ಸರಕಾರಿ ಪದ್ಧತಿ’ಯಾಗಿದೆ. ಈ ವಿಳಂಬ ನೀತಿಯು ಇಂದು ಮೊನ್ನೆಯದಲ್ಲ. ಇದಕ್ಕೆ ಇಲಾಖೆಯು ಮತ್ತು ಪುಸ್ತಕ ಸರಬರಾಜು ದೊರೆಗಳು
ಒಗ್ಗಿಕೊಂಡುಬಿಟ್ಟಿzರೆನ್ನಬಹುದು. ಈ ಕುರಿತಂತೆ ಪ್ರತೀ ವರ್ಷವೂ ಸುದ್ದಿಮಾದ್ಯಮಗಳಲ್ಲಿ ‘ಪುಸ್ತಕಗಳ ಲಭ್ಯತೆಯಲ್ಲಿ ವಿಳಂಬ’ ಎಂದು ಬಂದೇ ಬರುತ್ತದೆ.
ಹೀಗಾಗಿ, ಖಾಸಗಿ ಪ್ರಕಾಶಕರ ಪುಸ್ತಕಗಳಿಗೆ, ಪೂರ್ವ ತಯಾರಿಗೊಂಡ ‘ಅಧ್ಯಯನ ಸಾಮಗ್ರಿ’ ಗಳ ಮೊರೆಹೋಗುವ ವಿದ್ಯಾರ್ಥಿಗಳು ತಮ್ಮ ವಿದ್ಯೆ
ಮತ್ತು ವ್ಯಕ್ತಿತ್ವ ವಿಕಸನಕ್ಕೆ ಒಂದು ಸೀಮಿತ ಚೌಕಟ್ಟನ್ನು ಈ ಮೂಲಕ ತಾವೇ ಹಾಕಿಕೊಂಡಂತಾಗುತ್ತದೆ. ಇನ್ನು ಕೆಲವು ಸ್ಟಾರ್ಟ್- ಅಪ್ ಕಂಪನಿಗಳು
ಖಠ್ಠಿbqs ಞZಠಿಛ್ಟಿಜಿಛ್ಝಿ ಗಳನ್ನು ಹಾಗೂ uಜ್ಞಿಛಿ ಮೂಲಕ ಶಿಕ್ಷಣ ಕೊಡುವ ಹಂತಕ್ಕೆ ಬಂದಿವೆ. ಇನ್ನಾದರೂ, ನಮ್ಮ ಶಿಕ್ಷಣ ಇಲಾಖೆಯು ಪಠ್ಯಪುಸ್ತಕದ ವಿಚಾರದಲ್ಲಿ ಆಧುನಿಕ ತಾಂತ್ರಿಕತೆಯನ್ನು ಬಳಸಿ, ಸಕಾಲದಲ್ಲಿ ಮತ್ತು ಭ್ರಷ್ಟಾಚಾರರಹಿತ ಶಿಕ್ಷಣ ವ್ಯವಸ್ಥೆ ರೂಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.
ಸಾರಿಗೆ ವ್ಯವಸ್ಥೆ
ಈ ಪುಸ್ತಕಗಳದ್ದು ಒಂದು ಕತೆಯಾದರೆ, ರಾಜ್ಯ ಸಾರಿಗೆಯದ್ದೇ ಒಂದು ಕತೆ. ಹಾಗೆ ನೋಡಿದರೆ, ಪಕ್ಕದ ಆಂದ್ರ, ಕೇರಳ ರಾಜ್ಯಗಳ ಸಾರಿಗೆ ಬಸ್
ಗಳನ್ನು ನೋಡಿದಾಗ, ಅವರಿಗಿಂತ ನಮ್ಮ ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ಬಸ್ಗಳು ಅಂತರಾಷ್ಟ್ರೀಯ ಮಟ್ಟದಲ್ಲಿವೆ. ಇದೊಂದು ಖುಷಿಯ ವಿಚಾರವೇ!
ಆದರೆ, ಕೇವಲ ಬೆಂಗಳೂರು ಮಾತ್ರವೇ ಕರ್ನಾಟಕ ಅಲ್ಲವೆಂಬುದನ್ನು ಇಲಾಖೆ ಮತ್ತು ಅಧಿಕಾರಿಗಳು ಮೊದಲು ಮನಗಾಣಬೇಕಿದೆ. ಎಲ್ಲಿ ತೆರಿಗೆ ಜಾಸ್ತಿ ಸಂಗ್ರಹವಾಗುತ್ತದೆಯೋ ಅಲ್ಲಿ ಮಾತ್ರವೇ ಅಭಿವೃದ್ಧಿ ಎಂಬಂತೆ ರಾಜ್ಯದ ಇತರೆ ಜಿ-ತಾಲ್ಲೂಕುಗಳಿಗೆ ಸೂಕ್ತ ಬಸ್ ವ್ಯವಸ್ಥೆ ಮಾಡದೇ ಅಸಮರ್ಪಕ ಭಿಬಸ್ಭಿಗಳನ್ನು ಬಳಕೆಗೆ ಬಿಟ್ಟಿರುವುದು ನ್ಯಾಯವೇ!? ಇದೇ ಕಾರಣಕ್ಕೆ ಸರಕಾರಿ ಬಸ್ಸುಗಳಲ್ಲಿ ಛತ್ರಿ ಹಿಡಿದುಕೊಂಡು ಪ್ರಯಾಣ ಮಾಡಿದ ಸುದ್ದಿ ಕೂಡ ವಾಸ್ತವಿಕತೆ ಯನ್ನು ತೆರದಿಟ್ಟಿತು.
ಯಾವ ಉದ್ದೇಶದಿಂದ ‘ಉಚಿತ ಸಾರಿಗೆ ಭಾಗ್ಯ’ ಕೊಡಲು ಇಂದಿನ ಸರಕಾರ ನಿರ್ಧರಿಸಿತೋ, ಆ ಉದ್ದೇಶವೇ ಸಫಲವಾಗಲಿಲ್ಲ. ಉಚಿತ ವ್ಯವಸ್ಥೆ
ಇರುವುದರಿಂದ ಮಹಿಳೆಯರು ಬಳಸುತ್ತಿದ್ದಾರೆಂಬ ಒಂದು ಅಂಶವನ್ನು ಬಿಟ್ಟರೆ, ಮಾದ್ಯಮಗಳ ಮುಂದೆ ಹಲವು ಬಾರಿ ಯುವತಿಯರು,
ದುಡಿಯುವ ಗೃಹಿಣಿಯರೆಲ್ಲ ‘ಇದರಿಂದ ನಮಗೆ ಅಂಥಾದ್ದೇನೂ ಉಪಯೋಗವಿಲ್ಲ, ಬಸ್ಸುಗಳನ್ನು ಹೆಚ್ಚು ಮಾಡಿ ಜನರು ಕಾಯದಂತೆ ಮಾಡಿದ್ದರೆ,
ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುವಂತೆ ಮಾಡಿದ್ದರೆ ಅದೇ ದೊಡ್ಡ ಭಾಗ್ಯವಾಗುತ್ತಿತ್ತು.
ಕೆಲವೊಮ್ಮೆ ಅರ್ಧ ದಿನ ಕಾದರೂ ಬಸ್ಸು ಬರುವುದಿಲ್ಲ. ಪ್ರಯಾಣಿಸುವ ಮಾರ್ಗಕ್ಕೆ ಇರುವ ಒಂದೆರಡು ಬಸ್ಸುಗಳಲ್ಲಿ, ಒಂದೋ ಕ್ಯಾನ್ಸಲ್ ಮಾಡಿರುತ್ತಾರೆ. ಇಲ್ಲವೆ, ಬೆಳಿಗ್ಗೆ ೮ ಕ್ಕೆ ಬರಬೇಕಾದ ಬಸ್ಸು ಮದ್ಯಾಹ್ನ ೨ಕ್ಕೆ ಬರುತ್ತದೆ’ ಎಂದು ಅಲವತ್ತುಕೊಂಡಿದ್ದೂ ಇದೆ. ದುಡಿಯಲು ಹೋಗುವ ಮಹಿಳೆಯರ, ಶಾಲೆಗೆ ಹೋಗುವ ವಿದ್ಯಾರ್ಥಿಗಳ ಕತೆಯೇನು, ಇದರಿಂದ ಅವರ ಕಲಿಕೆಯ ಮೇಲೆ ನಾವು ಯಾವ ಪರಿಣಾಮ ಬೀರುತ್ತಿದ್ದೇವೆ ಎಂಬುದನ್ನು ಆಳುವವರು ಕೇವಲ ಅಧಿಕಾರಕ್ಕಾಗಿಯಲ್ಲದೇ, ಜನಹಿತಕ್ಕಾಗಿಯೂ ಯೋಚಿಸುವ ಆತ್ಮಸೂಕ್ಷ್ಮತೆ ಹೊಂದಿರಬೇಕು.
ಹತ್ತಾರು ಪ್ರಯಾಣಿಕರಿದ್ದರೂ, ಸಾಕಷ್ಟು ಸೀಟುಗಳಿಲ್ಲ. ಈ ಬಸ್ಸು ಮುಂದಕ್ಕೆ ಹೋಗುವುದಿಲ್ಲ. ಡಿಪೋಗೆ ಲೆಕ್ಕ ಕೊಡಬೇಕಾಗ್ತದೆ. ನೀವು ಹಿಂದಿನ ಬಸ್ಗೆ ಹತ್ತಿಕೊಳ್ಳಿ, ನಾವು ಟಿಕೇಟ್ ಮೇಲೆ ಬರೆದು ಕೊಡ್ತೇವೆ ಎಂಬ ಉತ್ತರವು, ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದ ಎಲ್ಲ ಸಾರಿಗೆ ವಾಹನಗಳಿಂದ ಬರುತ್ತದೆ. ಹಾಗಿದ್ದರೆ, ಕೇವಲ ಲಾಭಕ್ಕಾಗಿ ಮಾತ್ರವೇ ಸರಕಾರಿ ಸಾರಿಗೆ ಸಂಸ್ಥೆ ಇರುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಹಾಗಿದ್ದರೆ, ಸಾರಿಗೆ ಸೇವೆ ಎಂಬುದು ಯಾವ ಕರ್ಮಕ್ಕೆ ಮಾರ್ರೆ ಎಂದು ನೊಂದ ಜನ ಕೇಳುತ್ತಿದ್ದಾರೆ.
ಯೋಗ್ಯ ವಸತಿ ನಿಲಯಗಳು: ರಾಜ್ಯದ ವಸತಿನಿಲಯಗಳ ಬಗ್ಗೆ ಬೇರೆಯದೆ ಒಂದು ಇತಿಹಾಸ ಬರೆಯಬಹುದು. ನಮ್ಮ ರಾಜ್ಯದಲ್ಲಿರುವ ಮೂಲಭೂತ ಸೌಕರ್ಯಗಳು, ಸಾಮಾನ್ಯ ಜನರು ಅಧ್ಯಯನಶೀಲರಿಗೆ ಕೊಡುವ ಸಹಕಾರ ಉಳಿದ ರಾಜ್ಯಗಳಿಗೆ ಹೋಲಿಸಿದಲ್ಲಿ ಬಹು ಮುಂದಿದೆ.
೬ ಸಾವಿರದಷ್ಟು ವಸತಿನಿಲಯಗಳಿವೆ. ಇವುಗಳಲ್ಲಿ ಅಲ್ಪಸಂಖ್ಯಾತ ಹುಡುಗರಿಗೆ ೧೫ ಮೆಟ್ರಿಕ್ ಪೂರ್ವ, ವಿದ್ಯಾರ್ಥಿನಿಯರಿಗೆ ೨೩ ವಸತಿನಿಲಯಗಳಿವೆ.
ಮೆಟ್ರಿಕ್ ನಂತರದಲ್ಲಿ ೧೬೦ ಹುಡುಗರ ಮತ್ತು ೧೧೦ ಹುಡುಗಿಯರಿಗಾಗಿ ವಸತಿನಿಲಯಗಳಿವೆ. ಇನ್ನು ಹಿಂದುಳಿದವರಿಗೆ ಸಹ ಮೆಟ್ರಿಕ್ ನಂತರದ
ವಸತಿನಿಲಯಗಳು ೧೦೭೦ರಷ್ಟಿವೆ. ಒಟ್ಟಾರೆ, ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿನಿಲಯದಲ್ಲಿ ಉಳಿದುಕೊಂಡಿರುವ ಮಾಹಿತಿಯಿದೆ. ಇಷ್ಟೆಲ್ಲ
ಯಾಕೆ ಹೇಳಬೇಕಾಯಿತೆಂದರೆ, ನಮ್ಮ ಸರಕಾರಿ ವಸತಿ ನಿಲುಗಳ ಕತೆ ವ್ಯಥೆ ಜನಸಾಮಾನ್ಯರಿಗೂ ಗೊತ್ತು.
ಇದಕ್ಕಾಗಿ ಕೋಟ್ಯಂತರ ಹಣವನ್ನು ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ. ಖರ್ಚೂ ಆಗುತ್ತಿದೆ. ವಸತಿನಿಲಯದಲ್ಲಿ ನಿತ್ಯ ಎರಡು ಪೇಪರ್, ಕ್ಷೌರಕ್ಕೆ ಹಣ, ಉಚಿತ ಆರೋಗ್ಯ ಚಿಕಿತ್ಸೆ, ಪ್ರತಿ ವಿದ್ಯಾರ್ಥಿಗೆ ಹಾಸಿಗೆ ದಿಂಬು, ಪೆನ್ನು ಪುಸ್ತಕ, ಇತರೆ ಸ್ಟೇಷನರಿ ವೆಚ್ಚ, ವರ್ಷಪೂರ್ತಿ ಓದಲು ಮಾಸಪತ್ರಿಕೆ, ಕ್ರೀಡಾ ಸಾಮಗ್ರಿಗೆ ಹಣ, ಅಧ್ಯಯನ ಪುಸ್ತಕಗಳಿಗೆ ಹಣ ಸೇರಿದಂತೆ ಲಕ್ಷಕ್ಕೂ ಅಧಿಕ ಹಣವನ್ನು ಪ್ರತಿ ವಿದ್ಯಾರ್ಥಿಗೆ ನೀಡುವ ಬಗ್ಗೆ ತಿಳಿಸಲಾಗಿದೆ. ಈ ಎಲ್ಲ ಸೌಲಭ್ಯಗಳನ್ನು ಯಾವ ವಿಧ್ಯಾರ್ಥಿ ಯಾವಾಗ ಪಡೆದುಕೊಂಡಿದ್ದಾನೆಂದು ‘ಸರ್ವೇ’ ಮಾಡಿ ತಿಳಿದುಕೊಳ್ಳಬೇಕಷ್ಟೇ!
ವಾಸ್ತವದಲ್ಲಿ ಎಷ್ಟೋ ವಸತಿನಿಲಯಗಳಲ್ಲಿ ಬಿಸಿನೀರಿಗೆ ಖಾರದಪುಡಿ ಬೆರೆಸಿ ಅನ್ನಕ್ಕೆ ಕಲಿಸಿ ತಿನ್ನಬೇಕಾದ ಪರಿಸ್ಥಿತಿಯಿದೆ. ಇನ್ನು ಶಿಕ್ಷಣ ಕಾಶಿಯಂತಿರುವ ನಮ್ಮ ಕರಾವಳಿ (ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಸೇರಿದಂತೆ) ಭಾಗದಲ್ಲಿನ ಕತೆಯೇನೂ ಭಿನ್ನವಾಗಿಲ್ಲ. ಪದವಿ ಪೂರ್ವ ಮತ್ತು ಪದವಿಗಳ ಪ್ರವೇಶಾತಿ ಆರಂಭವಾದರೂ, ವಸತಿನಿಲಯಗಳ ಬಾಗಿಲು ತೆರೆಯುವುದಿಲ್ಲ. ತಿಂಗಳುಗಟ್ಟಲೆ ಚಾಪೆ ಹಾಸಿಕೊಂಡು ವಸತಿನಿಲಯದ ಬಾಗಿಲ ಮುಂದೆ ಮಲಗುತ್ತ ಕಾಲ ಕಳೆಯುವ ಸೌಭಾಗ್ಯಗಳನ್ನೂ ಈ ವ್ಯವಸ್ಥೆ ನಮ್ಮ ಮಕ್ಕಳಿಗೆ ಕಲ್ಪಿಸಿಕೊಟ್ಟಿದೆ. ಜೊತೆಗೆ, ಅರ್ಜಿ ಹಾಕಿದ ಎಲ್ಲ ಮಕ್ಕಳಿಗೂ ವಸತಿನಿಲಯದಲ್ಲಿ ಸೀಟು ಸಿಗುತ್ತದೆಂಬ ಖಾತ್ರಿಯಿಲ್ಲ. ಬಂದ ಅರ್ಜಿಗಳಲ್ಲಿ ಶೇ.೫೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಅವಕಾಶ. ಹಾಸ್ಟೆಲ್ ಸಿಗುತ್ತದೆಂಬ ಕನಸಿನೊಂದಿಗೆ ಅರ್ಜಿ ಹಾಕಿ ತಿರಸ್ಕಾರಗೊಂಡ ಮಕ್ಕಳ ಕತೆಯೇನು? ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ.
ಇನ್ನಾದರೂ, ಇದಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಗಮನಹರಸಿ, ಈ ವ್ಯವಸ್ಥೆಯಿರುವುದು ನಮ್ಮದೇ ನಾಡಿನ ಮಕ್ಕಳಿಗೆ, ಅವರ ಭವ್ಯ ಭವಿಷ್ಯತ್ತಿಗೆ ಎಂಬುದನ್ನು ಅರಿತುಕೊಂಡು ಸುಧಾರಿಸಿದಲ್ಲಿ ಸಮಸ್ತ ವಿದ್ಯಾರ್ಥಿ ಬಳಗಕ್ಕೆ, ಕಲಿಕಾ ಬದುಕಿಗೆ ಮಹದುಪಕಾರವಾದೀತು. ಅಧಿವೇಶನದ ಮೇಲೆ ಅಧಿವೇಶನ ಬರುತ್ತಲೇ ಇದೆ. ಚರ್ಚಿಸಿ, ಪರಿಹಾರ ಸೂಚಿಸಿದ ಸಮಸ್ಯೆಗಳು ಮಾತ್ರ ಹೆಚ್ಚುತ್ತಲೇ ಇವೆ. ಜನರ ತೆರಿಗೆಯನ್ನು ಜನತೆಯ ಮಕ್ಕಳಿಗೆ
ವಿನಿಯೋಗಿಸಲು ಯಾವ ದೊಣ್ಣೆನಾಯಕನ ಅಪ್ಪಣೆ ಬೇಕು ಸ್ವಾಮೀ!?