Friday, 13th December 2024

ಗಣ್ಯರು ಭೇಟಿಯಾದಾಗ ಹೇಗೆ ಮಾತುಕತೆ ಆರಂಭಿಸುತ್ತಾರೆ ?

ನೂರೆಂಟು ವಿಶ್ವ

ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದರಷ್ಟೇ. ಅವರು ಮಾತುಕತೆಯನ್ನು ಹೇಗೆ ಆರಂಭಿಸಿರಬಹುದು? ಯಾವ ಭಾಷೆಯಲ್ಲಿ ಮಾತಾಡಿರಬಹುದು? ‘ಸಿದ್ದರಾಮಯ್ಯ ನವರೇ, ನೀವು ಸಿಗದೇ ಬಹಳ ದಿನಗಳಾದವು. ಆರೋಗ್ಯ ಹೇಗಿದೆ? ನಿಮ್ಮ ಮನೆಯವರು, ಮಗ ಕ್ಷೇಮವೇ?’ ಎಂದಂತೂ ಮಾತುಕತೆ ಆರಂಭಿಸಿರಲಿಕ್ಕಿಲ್ಲ.

ಹಾಗೆಯೇ ಸಿದ್ದರಾಮಯ್ಯನವರು, ‘ಮೋದಿಯವರೇ, ಹೇಗಿದ್ದೀರಿ? ತುಸು ಸೊರಗಿದಂತೆ ಕಾಣುತ್ತೀರಲ್ಲ? ಡಾಕ್ಟರಿಗೆ ತೋರಿಸಬೇಕಿತ್ತು. ಅಂದ ಹಾಗೆ ಮತ್ತೆಲ್ಲ ಕುಶಲವೇ?’ ಎಂದೂ ಹೇಳಿರಲಿಕ್ಕಿಲ್ಲ. ಹಾಗಾದರೆ ಹೇಗೆ ಅವರು ಪರಸ್ಪರ ಮಾತುಕತೆ ಆರಂಭಿಸಿರಬಹುದು? ಇಬ್ಬರು ಗಣ್ಯವ್ಯಕ್ತಿಗಳು ಭೇಟಿಯಾದ ಫೋಟೋ
ನೋಡಿದಾಗ, ಅವರು ಮಾತುಕತೆಯನ್ನು ಹೇಗೆ ಆರಂಭಿಸುತ್ತಾರೆ, ಯಾವ ವಿಷಯದಿಂದ ಶುರು ಹಚ್ಚಿಕೊಳ್ಳುತ್ತಾರೆ ಎಂಬುದು ನನಗೆ ಯಾವತ್ತೂ ಕುತೂಹಲದ
ಪ್ರಶ್ನೆಯೇ. ಇದು ನಿಮ್ಮ ಕುತೂಹಲವೂ ಆಗಿರಬಹುದು.

ಒಮ್ಮೆ ಈ ಕುರಿತು ಹಿರಿಯ ಪತ್ರಕರ್ತರೂ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವರೂ ಆಗಿದ್ದ ಎಂ.ಜೆ.ಅಕ್ಬರ್ ಅವರನ್ನು ಕೇಳಿದ್ದೆ. ಅದಕ್ಕೆ ಅವರು, ‘ಮಾತುಕತೆ ಯನ್ನು ಹೀಗೆ ಆರಂಭಿಸಬೇಕು ಎಂಬ ಸಂಪ್ರದಾಯ, ಶಿಷ್ಟಾಚಾರಗಳಾಗಲಿ, ನಿಯಮವಾಗಲಿ ಇಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆದರೆ ಇಬ್ಬರು ಗಣ್ಯರು ಭೇಟಿಯಾದಾಗ, ಆಸಕ್ತಿದಾಯಕ ವಿಷಯದಿಂದ ಮಾತುಕತೆಯನ್ನು ಆರಂಭಿಸುವುದು, ತಕ್ಷಣದ ಪ್ರಸಂಗದಿಂದ ಸಮಯಪ್ರಜ್ಞೆ ಮೆರೆಯುವ ಮೂಲಕ ಮಾತನ್ನು ಶುರು ಮಾಡುವುದು, ಪರಸ್ಪರ ಹೊಗಳಿಕೆಯಿಂದ ಮಾತನ್ನು ಆರಂಭಿಸುವುದು ಒಳ್ಳೆಯ ನಡೆ. ಸಾಂದರ್ಭಿಕ ಹಾಸ್ಯ, ಹಾಸ್ಯ ಪ್ರಸಂಗ, ಚಾಟೂಕ್ತಿ, ದೃಷ್ಟಾಂತಗಳ ಮೂಲಕ ಆರಂಭಿಸುವುದು ಇನ್ನೂ ಒಳ್ಳೆಯದು.

ಇಬ್ಬರು ನಾಯಕರು ಭೇಟಿಯಾದಾಗ ಆರಂಭದ ಐದು ನಿಮಿಷ ಬಿಗು ವಾತಾವರಣವಿರುತ್ತದೆ. ಆ ಅವಧಿಯಲ್ಲಿ ಯಾರು ಹೆಚ್ಚು ಮೌನವನ್ನು ಮುರಿಯುತ್ತಾರೋ, ಮಾತನ್ನು ತುಂಬುತ್ತಾರೋ, ಅವರು ಬಹುಬೇಗ settle ಆಗುತ್ತಾರೆ ಮತ್ತು ಮೇಲುಗೈ ಸಾಧಿಸುತ್ತಾರೆ. ಆದರೆ ಪರಸ್ಪರ ಭೇಟಿಯಾದಾಗ ಮಾತುಕತೆಯನ್ನು ಹೇಗೆ ಆರಂಭಿಸಬೇಕು ಎಂಬುದು ಒಂದು ಮಹಾಕಲೆ. ಇದರಲ್ಲಿ ಎಲ್ಲರೂ ಮೇಲುಗೈ ಸಾಧಿಸಲಾರರು’ ಎಂದು ಹೇಳಿದ್ದರು.

ಅದೆಂಥ ಮಹಾನ್ ನಾಯಕರೇ ಆಗಿರಲಿ, ಮತ್ತೊಬ್ಬ ಗಣ್ಯವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಯಾವತ್ತೂ ಉದ್ವೇಗ (ನರ್ವಸ್)ಕ್ಕೆ ಒಳಗಾಗುತ್ತಾರೆ.
ಮಾತುಕತೆಯನ್ನು ಹೇಗೆ ಆರಂಭಿಸುವುದು ಎಂಬ ಪ್ರಶ್ನೆ ಅವರ ಮನಸ್ಸಿನ ಮೇಲ್ಪದರಲ್ಲಿ ಸುಳಿದಾಡುತ್ತಿರುತ್ತದೆ. ಭೇಟಿಯಾಗಲಿರುವ ವ್ಯಕ್ತಿಯ ಮನಸ್ಸಿನಲ್ಲೂ ಇದೇ ಪ್ರಶ್ನೆ ಗಿರಕಿ ಹೊಡೆಯುತ್ತಿರುತ್ತದೆ. ಈ ಬಗ್ಗೆ ಹೇಗೆ ರಿಹರ್ಸಲ್ ಮಾಡಿಕೊಂಡರೂ, ಮುಂದಿನ ವ್ಯಕ್ತಿಯ ಪ್ರತಿಕ್ರಿಯೆಯ ಆಧಾರದ ಮೇಲೆ ಡೈಲಾಗ್ ಬದಲಾಗುತ್ತದೆ. ಗಾಂಧೀಜಿ ಅವರು ಮಹತ್ವದ ಮಾತುಕತೆಗಾಗಿ ಬ್ರಿಟಿಷ್ ವೈಸರಾಯ್ ಲಾರ್ಡ್ ಇರ್ವಿನ್ ಭೇಟಿಯಾಗಲು ನಿರ್ಧರಿಸಿದಾಗಲೂ, ಮಾತುಕತೆ ಯನ್ನು ಹೇಗೆ ಆರಂಭಿಸುವುದು ಎಂಬ ಬಗ್ಗೆ ತುಸು ಯೋಚಿಸಿದ್ದರಂತೆ.

ಈ ಕುರಿತು ಅವರು ತಮ್ಮ ಡೈರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ-‘ಲಾರ್ಡ್ ಇರ್ವಿನ್ ಭೇಟಿಯಾಗುತ್ತಿದ್ದಂತೆ ಗಹನವಾದ ವಿಚಾರ ಮಾತಾಡಲು ಮನಸ್ಸಿರಲಿಲ್ಲ. ಲಘು ತಮಾಷೆಯಿಂದ ಮಾತನ್ನು ಆರಂಭಿಸಲು ನನಗೆ ಮನಸ್ಸಿರಲಿಲ್ಲ. ಬಿಗುಮೋರೆ ಹಾಕಿಕೊಳ್ಳುವುದು ಶಿಷ್ಟಾಚಾರವಲ್ಲ. ನಾನು ನನ್ನ ದಿನಚರಿ ಮತ್ತು ಆಹಾರ ವಿಧಾನದ ಮೂಲಕ ಮಾತುಕತೆಯನ್ನು ಆರಂಭಿಸಿದೆ. ಅವರೂ ಹಾಗೆಯೇ ಮಾಡಿದರು’.

ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ವಿದೇಶಿ ಗಣ್ಯರ ಗೌರವಾರ್ಥ ಏರ್ಪಡಿಸುವ ಔತಣಕೂಟದಲ್ಲಿ ಅತಿಥಿ ನಾಯಕರನ್ನು ಭೇಟಿಯಾಗುತ್ತಿದ್ದಂತೆ, ಅವರ ಡ್ರೆಸ್ ಕುರಿತು ಮಾತುಕತೆ ಆರಂಭಿಸುವುದು ವಾಡಿಕೆ ಆಗಿತ್ತಂತೆ. ಹಾಗೆ ನೋಡಿದರೆ, ಅದು ಉತ್ತಮ ವಿಷಯವೂ ಹೌದು. ಸಾಮಾನ್ಯವಾಗಿ ಒಬ್ಬ ಗಣ್ಯ, ಮತ್ತೊಬ್ಬರನ್ನು ಭೇಟಿಯಾಗುವ ಸಂದರ್ಭದಲ್ಲಿ ಸಾಕಷ್ಟು ಗಮನಹರಿಸಿ, ವಿಚಾರ ಮಾಡಿ, ಉತ್ತಮವಾದ ಡ್ರೆಸ್ ಧರಿಸಿ ಬಂದಿರುತ್ತಾನೆ. ಯಾರೂ ಬೇಕಾಬಿಟ್ಟಿ ಡ್ರೆಸ್ ತೊಟ್ಟಿರುವುದಿಲ್ಲ. ಅಷ್ಟೇ ಅಲ್ಲ, ಭೇಟಿಯಾದಾಗ ಅವರ ಡ್ರೆಸ್ ಎದ್ದು ಕಾಣುವಂತಿರುತ್ತದೆ. ಹೀಗಾಗಿ ಡ್ರೆಸ್ಸಿಗಿಂತ ಉತ್ತಮವಾದ ವಿಷಯ ಮತ್ತೊಂದಿಲ್ಲ
ಎಂದು ಅವರು ಅಂದುಕೊಂಡಿದ್ದರು.

‘ನಿಮ್ಮ ಡ್ರೆಸ್ ಚೆನ್ನಾಗಿದೆ. ಈ ಡ್ರೆಸ್ ನಿಮಗೆ ಒಪ್ಪುತ್ತದೆ. ಈ ಡ್ರೆಸ್ಸಿನಲ್ಲಿ ನೀವು ಬಹಳ ಚೆಂದವಾಗಿ ಕಾಣುತ್ತೀರಿ’ ಎಂದು ಭೇಟಿಯಾದಾಗ ಹೇಳಿದರೆ, ಸ್ವಾಭಾವಿಕ ವಾಗಿ ಅದನ್ನು ಕೇಳಿಸಿಕೊಂಡ ಅತಿಥಿ ಉಬ್ಬಿ ಹೋಗುವುದರಲ್ಲಿ ಸಂದೇಹವೇ ಇಲ್ಲ. ತಾನು ಭೇಟಿ ಆಗಲಿರುವ ಅತಿಥಿಯ self esteem ಹೆಚ್ಚಿಸಲು ಅದು ಸಹಾಯಕವೂ ಹೌದು. ಮಾತುಕತೆ ಸಹಜವಾಗಿ ತೆರೆದುಕೊಳ್ಳಲು ಅದು ಅನುವಾಗುತ್ತದೆ ಎಂದು ರೇಗನ್ ಕಂಡುಕೊಂಡಿದ್ದರು. ಈ ತಂತ್ರವನ್ನು ಅನೇಕ ಗಣ್ಯ
ನಾಯಕರು ಮಾಡುವುದುಂಟು. ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮೋದಿಯವರನ್ನು ಭೇಟಿಯಾದಾಗ, ಮೊದಲ ಮೂರು ನಿಮಿಷಗಳ ಕಾಲ ಅವರಿಬ್ಬರ ನಡುವೆ (ಮೋದಿ ಧರಿಸಿದ್ದ) ‘ಶಾಲು’ ಚರ್ಚೆಯ ವಿಷಯವಾಗಿತ್ತು.

ಮೋದಿ ತಾವು ಧರಿಸಿದ್ದ ಶಾಲಿನ ಬಗ್ಗೆಯೇ ಅಧ್ಯಕ್ಷರಿಗೆ ವಿವರಿಸಿದ್ದರು. ಆ ಅವಧಿಯಲ್ಲಿ ಅವರಿಬ್ಬರೂ, ಉದ್ವೇಗವನ್ನು ದೂರ ಮಾಡಿಕೊಂಡು ನಿರಾಯಾಸವಾಗಿ settle ಆಗಿದ್ದರು. ಮೋದಿಯವರ ಜತೆ ಬೇರೆ ಬೇರೆ ದೇಶಗಳ ನಾಯಕರು ಈ ರೀತಿ ಮಾತುಕತೆಯನ್ನು ಆರಂಭಿಸಿದ್ದಿದೆ. ಮೋದಿಯವರು ಕೆಲವು ಸಲ ತಾವು ಭೇಟಿಯಾಗಲಿರುವ ನಾಯಕರ ದಿರಿಸಿನಿಂದಲೇ ಮಾತನ್ನಾರಂಭಿಸುತ್ತಾರೆ. ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ, ಮೋದಿಯವರು ‘ನೀವೇಕೆ ಸದಾ ಕೆಂಪು ಟೈಯನ್ನೇ ಧರಿಸುತ್ತೀರಿ?’ ಎಂದು ಕೇಳಿದ್ದರೆಂದು ವರದಿಯಾಗಿತ್ತು.

ಮಾತುಕತೆಯನ್ನು ಆರಂಭಿಸಲು ಅದೂ ಒಳ್ಳೆಯ ವಿಷಯವೇ. ಟ್ರಂಪ್ ಅವರಿಗೆ ಆ ಪ್ರಶ್ನೆಯನ್ನು ಬೇರೆ ಯಾರಾದರೂ ಕೇಳಿದ್ದರೋ, ಇಲ್ಲವೋ. ಯಾಕೆಂದರೆ
ಅವರು ಟೈ ಧರಿಸಿದರೆ ಕೆಂಪು ಟೈ ಮಾತ್ರ. ಒಂದು ಸಂದರ್ಭದಲ್ಲಿ ಟ್ರಂಪ್ ಅವರು, ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾದಾಗ, ಅವರೂ (ಪುಟಿನ್) ಕೆಂಪು ಟೈ ಧರಿಸಿದ್ದರು. ಆಗ ಟ್ರಂಪ್, ’Mr. Putin, you are free to follow me, but not expected to imitate me’ ಎಂದು ಹಾಸ್ಯಚಟಾಕಿ ಹಾರಿಸಿದ್ದು ಸುದ್ದಿಯಾಗಿತ್ತು. ಅದಾಗಿ ಕೆಲವು ತಿಂಗಳುಗಳ ಬಳಿಕ, ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಉಭಯ ನಾಯಕರು ಭೇಟಿಯಾದಾಗ, ಪುಟಿನ್ ಬೇರೆ ಬಣ್ಣದ ಟೈ ಧರಿಸಿದ್ದರು.

‘ಮಿಸ್ಟರ್ ಟ್ರಂಪ್, ನಾನು ನಿಮ್ಮಿಂದಾಗಿ ಇಂದು ಬೇರೆ ಬಣ್ಣದ ಟೈ ಧರಿಸಬೇಕಾಯಿತು. ಇಲ್ಲದಿದ್ದರೆ ಕೆಂಪು ಟೈಯನ್ನೇ ಧರಿಸುತ್ತಿದ್ದೆ’ ಎಂದು ಹೇಳಿದರು. ಅದಕ್ಕೆ ಟ್ರಂಪ್, ‘ಮಿಸ್ಟರ್ ಪುಟಿನ್, ನನಗೆ ಆ ಆಯ್ಕೆ ಇಲ್ಲ ನೋಡಿ. ನಾನು ಯಾವತ್ತೂ ಕೆಂಪು ಟೈಯನ್ನೇ ಧರಿಸೋದು’ ಎಂದು ಹೇಳಿ, ತಮ್ಮ ಮಾತುಕತೆ ಮುಂದು ವರಿಸಿದ್ದರು. ತಾವು ಭೇಟಿ ಮಾಡಲಿರುವ ದೇಶಗಳ ಮುಖ್ಯಸ್ಥರಿಗೆ, ಪರಸ್ಪರರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಮೊದಲೇ ನೀಡಿರಲಾಗುತ್ತದೆ. ವಿದೇಶಿ ನೆಲದಲ್ಲಿ ವಿಮಾನ ಭೂಸ್ಪರ್ಶ ಮಾಡುವ ಮೊದಲೇ, ತಾವು ಭೇಟಿ ಮಾಡುವ ನಾಯಕರ ಹೆಸರಿನ ಸರಿಯಾದ ಉಚ್ಚಾರ, ಅವರ ಕುಟುಂಬ, ಕುಟುಂಬ ಸದಸ್ಯರ ವಿವರ, ಅವರ ಹವ್ಯಾಸ, ಇಷ್ಟ-ಅನಿಷ್ಟಗಳ ವಿವರಗಳನ್ನೆಲ್ಲ ಪಡೆದಿರುತ್ತಾರೆ.

ಭೇಟಿಯಾಗಿ ಹಸ್ತಲಾಘವ ಮಾಡುತ್ತಿದ್ದಂತೆ, ಮಾತುಕತೆಯನ್ನು ಯಾವತ್ತೂ ಸಕಾರಾತ್ಮಕ ಮಾತಿನಿಂದ ಆರಂಭಿಸುವುದು ಅಲಿಖಿತ ನಿಯಮ. ಇಬ್ಬರೂ
ಯಾವ ಭಾಷೆಯಲ್ಲಿ ಮಾತಾಡಬೇಕು, ದುಭಾಷಿ ನೆರವು ಅಗತ್ಯವಿದೆಯಾ ಎಂಬುದೆಲ್ಲ ಮೊದಲೇ ನಿರ್ಧಾರವಾಗಿರುತ್ತದೆ. ಸಾಮಾನ್ಯವಾಗಿ ಇಬ್ಬರಿಗೂ ಒಪ್ಪಿತ ವಾಗುವ ಭಾಷೆಯಲ್ಲೇ ಮಾತುಕತೆ ಸಾಗುತ್ತದೆ. ಚೀನಾದ ಅಧ್ಯಕ್ಷರಾಗಿದ್ದ ಜಿಯಾಂಗ್ ಝೆಮಿನ್‌ಗೆ ಹಲವು ವಿದೇಶಿ ಭಾಷೆಗಳು ಗೊತ್ತಿದ್ದವು. ರಷ್ಯನ್, ಸ್ಪ್ಯಾನಿಷ್, ಇಂಗ್ಲಿಷ್, ರೊಮೇನಿಯನ್, ಜರ್ಮನ್, ಜಪಾನೀಸ್, ಫ್ರೆಂಚ್ ಭಾಷೆಗಳು ಸೇರಿದಂತೆ ಹತ್ತು ಭಾಷೆಗಳು ಗೊತ್ತಿದ್ದವು. ಒಮ್ಮೆ ಅವರು ಚಿಲಿ ದೇಶಕ್ಕೆ ಹೋದಾಗ, ನಲವತ್ತು ನಿಮಿಷಗಳ ಕಾಲ ಸ್ಪ್ಯಾನಿಷ್ ಭಾಷೆಯಲ್ಲಿ ಭಾಷಣ ಮಾಡಿದ್ದರು.

ತಾವು ಕೇಳಿದ್ದ ಚಿಲಿ ದೇಶದ ಗ್ರಾಮ್ಯ ಕತೆಯಿಂದ ಭಾಷಣ ಆರಂಭಿಸಿದ್ದು ಬಹಳ ಪ್ರಭಾವ ಬೀರಿತ್ತು. ಆ ಮೂಲಕ ಅವರು ಅಲ್ಲಿನ ಜನರಿಗೆ ಹತ್ತಿರವಾಗಿದ್ದರು.
ಅದೊಂದು ಕಾರಣದಿಂದ ಅವರ ಹೆಸರನ್ನು ಸ್ಯಾಂಟಿಯಾಗೋದ ಒಂದು ರಸ್ತೆಗೆ ಇಡಲಾಗಿದೆ. ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತಾಡುವ ಚೀನಾದ ಏಕೈಕ
ಅಧ್ಯಕ್ಷ ಎಂಬ ಅಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಅವರು ಯಾವುದೇ ವಿದೇಶಿ ಗಣ್ಯರನ್ನು ಭೇಟಿಯಾದಾಗ, ಅವರ ಭಾಷೆಯಲ್ಲೇ ಕಿರು ಸಂಭಾಷಣೆ ನಡೆಸುತ್ತಿದ್ದರು. ೧೯೮೭ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಮೇಯರ್ ಅವರನ್ನು ಭೇಟಿಯಾದಾಗ, When We Were Young ಎಂಬ ಪ್ರಸಿದ್ಧ ಹಾಡನ್ನು ಹಾಡಿದ ಝೆಮಿನ್, ಮೇಯರ್ ಜತೆಗೆ ಡ್ಯಾನ್ಸ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

೧೯೯೭ರಲ್ಲಿ ಹವಾಯಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಉಕುಲೆಲೆ ಎಂಬ ವಾದ್ಯವನ್ನು ನುಡಿಸಿದ್ದರು. ಝೆಮಿನ್ ಯಾವ ದೇಶಕ್ಕೆ ಹೋದರೂ, ಅಲ್ಲಿನ ನಾಯಕರ ಜತೆ ಮುಕ್ತವಾಗಿ ಬೆರೆಯುತ್ತಿದ್ದರು. ಇಬ್ಬರು ನಾಯಕರು ಭೇಟಿಯಾದಾಗ, ಭಾಷೆ ಪ್ರಧಾನ ಪಾತ್ರವಹಿಸುತ್ತದೆ. ಭೇಟಿ ಮಾಡಲಿರುವ ಅಥವಾ ಭೇಟಿ
ನೀಡಿದ ದೇಶದ ನಾಯಕರ ಭಾಷೆಯಲ್ಲಿ ಮಾತಾಡುವುದು ಸಾಧ್ಯವಾಗುವುದಾದರೆ ಅದೊಂದು ವರದಾನ. ಆರಂಭದಲ್ಲಿ ಪ್ರಧಾನಿ ಮೋದಿಯವರ ಇಂಗ್ಲಿಷ್ ಉಚ್ಚಾರದ ಬಗ್ಗೆ ಸಂದೇಹಗಳಿದ್ದವು. ಅವರು ಇಂಗ್ಲಿಷಿನಲ್ಲೇ ಹೇಗೆ ಪರಿಣಾಮಕಾರಿಯಾಗಿ ವ್ಯವಹರಿಸಬಹುದು ಎಂಬ ಬಗ್ಗೆ ಅನೇಕರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ ಅವರು ಬಹುಬೇಗ ಪಟ್ಟನ್ನು ಕರಗತ ಮಾಡಿಕೊಂಡರು. ಭಾಷೆ ಅವರಿಗೆ ತೊಡಕಾಗಲೇ ಇಲ್ಲ. ಜಾಗತಿಕ ನಾಯಕರ ಜತೆ ಭಾಷೆಯಷ್ಟೇ ಪರಿಣಾಮಕಾರಿ ಯಾಗಿ ಅವರು ಆಂಗಿಕ ಭಾಷೆಯನ್ನೂ ಒಲಿಸಿಕೊಂಡಿದ್ದು ಅವರ ನಾಯಕತ್ವಕ್ಕೆ ಸಾಕ್ಷಿ. ಅದಕ್ಕೆ ಅವರ ಆತ್ಮವಿಶ್ವಾಸ ಮತ್ತು ದೃಢ ನಿಲುವೇ ಕಾರಣ.

ಹೀಗಾಗಿ ಅವರು ಇಂದು ಜಗತ್ತಿನ ಯಾವುದೇ ಪ್ರಬಲ ರಾಷ್ಟ್ರದ ನಾಯಕರ ಜತೆ ಸಮಸಮವಾಗಿ ವ್ಯವಹರಿಸಬಲ್ಲರು. ಅಮೆರಿಕದ ಅಧ್ಯಕ್ಷರೂ ಜಾಗತಿಕ ವೇದಿಕೆಗಳಲ್ಲಿ ಅವರ ಸಾಮೀಪ್ಯ ಬಯಸುವುದನ್ನು ನೋಡಿದ್ದೇವೆ. ಯಾರನ್ನೇ ಭೇಟಿಯಾದಾಗಲೂ ಮೋದಿ ಅವರು ಆರಂಭಿಕ ಮಾತುಕತೆಯಲ್ಲಿ ಮೇಲುಗೈ ಸಾಧಿಸುವುದನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾರೆ. ಆರಂಭಿಕ ಮಾತು ಸದಾ ಆಸಕ್ತಿದಾಯಕವಾಗಿರುವಂತೆ ಅವರು ಗಮನಹರಿಸುತ್ತಾರೆ. ಭಾರತದ ಪ್ರಧಾನಿ ಯಾದವರು ಹಿಂದಿ ಅಥವಾ ಇಂಗ್ಲಿಷಿನಲ್ಲಿ ವ್ಯವಹರಿಸುವುದು ಸಾಮಾನ್ಯ. ಈ ಪೈಕಿ ಕನಿಷ್ಠ ಒಂದು ಭಾಷೆಯಾದರೂ ಚೆನ್ನಾಗಿ ಬಂದಿರಬೇಕು. ಎರಡರಲ್ಲೂ ನಿರರ್ಗಳವಾಗಿದ್ದರೆ, ಅವರಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವ್ಯವಹರಿಸುವುದು ಕಷ್ಟವಾಗುವುದಿಲ್ಲ.

ಆದರೂ ದೇವೇಗೌಡರು ಪ್ರಧಾನಿಯಾಗಿದ್ದಾಗ ಅದು ಹೇಗೆ ನಿರ್ವಹಿಸಿದರೋ? ಈ ವಿಷಯದಲ್ಲಿ ಪಿ.ವಿ.ನರಸಿಂಹರಾವ್ ಅವರನ್ನು ಮೆಚ್ಚಲೇಬೇಕು. ಅವರ ವ್ಯಕ್ತಿತ್ವ
ಆಕರ್ಷಕವಾಗಿರಲಿಲ್ಲ. ಆದರೆ ಅವರು ತಮ್ಮ ಬಹುಭಾಷೆಗಳಿಂದ ಬಹುಬೇಗ ಕನೆಕ್ಟ್ ಆಗುತ್ತಿದ್ದರು. ಅವರಿಗೆ ತೆಲುಗು, ಮರಾಠಿ, ಕನ್ನಡ, ತಮಿಳು, ಉರ್ದು,
ಒಡಿಯಾ, ಸಂಸ್ಕೃತದ ಜತೆಗೆ ಇಂಗ್ಲಿಷ್, ಫ್ರೆಂಚ್, ಅರೆಬಿಕ್, ಸ್ಪ್ಯಾನಿಷ್ ಮತ್ತು ಪರ್ಷಿಯನ್ ಭಾಷೆಗಳೂ ಗೊತ್ತಿದ್ದವು. ರಾಜೀವ್ ಗಾಂಧಿಯವರು ಪ್ರಧಾನಿ ಯಾಗಿದ್ದಾಗ, ಎರಡು ವರ್ಷಗಳ ಕಾಲ ಅವರು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿದ್ದರು. ಪ್ರಧಾನಿಯವರ ಜತೆಗೆ ವಿದೇಶಿ ಗಣ್ಯರೊಂದಿಗೆ ಒಂದೇ ಟೇಬಲ್‌ನಲ್ಲಿ ಭೋಜನಕ್ಕೆ ಕುಳಿತಾಗ, ತಮ್ಮ ಪಕ್ಕದಲ್ಲಿರುವಂತೆ ನರಸಿಂಹರಾವ್ ಅವರಿಗೆ ರಾಜೀವ್ ಗಾಂಧಿಯವರು ಹೇಳುತ್ತಿದ್ದರು. ಸಾಹಿತ್ಯ, ಕಲೆ, ಭಾಷೆ,
ಸಂಸ್ಕೃತಿ ಬಗ್ಗೆ ನರಸಿಂಹರಾವ್ ಅವರು ವಿದೇಶಿ ಗಣ್ಯರನ್ನು ಎಂಗೇಜ್ ಮಾಡುತ್ತಿದ್ದರು. ಈ ಕೆಲಸವನ್ನು ರಾಜೀವ್ ನಿಯೋಗದಲ್ಲಿರುತ್ತಿದ್ದ ಕೆ.ನಟವರ್ ಸಿಂಗ್ ಕೂಡ ಬಹು ಸಮರ್ಥವಾಗಿ ಮಾಡುತ್ತಿದ್ದರು. ಆ ಒಂದು ಗಂಟೆ ಸಮಯವನ್ನು ಸ್ವಾರಸ್ಯವಾಗಿ ಕಳೆಯುವುದು, ಮಾತುಕತೆ ಎಲ್ಲೂ ಪೇಲವವಾಗದಂತೆ ನೋಡಿ ಕೊಳ್ಳುವುದು ಸಹ ನಾಯಕನಿಗಿರಬೇಕಾದ ದೊಡ್ಡ ಗುಣ, ಲಕ್ಷಣ.

ವಿದೇಶಿ ಗಣ್ಯರ ಗಮನವನ್ನು ಸದಾ ತಮ್ಮ ಮೇಲೆಯೇ ನೆಟ್ಟಿರುವಂತೆ ಮಾಡುವುದರಲ್ಲಿ ಇಂದಿರಾ ಗಾಂಧಿ ಎತ್ತಿದ ಕೈ. ಅವರು ಯಾವುದೇ ವಿದೇಶಿ ಗಣ್ಯರನ್ನು ಭೇಟಿ ಮಾಡಿದರೂ, ಆ ದೇಶದ ಜನಜೀವನ, ಸಂಸ್ಕೃತಿ, ಇತಿಹಾಸ, ಪರಂಪರೆ ಕುರಿತು ಸಾಕಷ್ಟು ತಿಳಿದುಕೊಂಡು ಹೋಗುತ್ತಿದ್ದರು. ಈ ಕಲೆ ಅವರಿಗೆ ತಂದೆ ನೆಹರು ಅವರಿಂದ ಬಳುವಳಿಯಾಗಿ ಬಂದಿತ್ತು. ವಿದೇಶಿ ಗಣ್ಯರ ಜತೆ ಮಾತಾಡುವಾಗ, ತಮಗೆ ಗೊತ್ತಿರುವ ಆ ದೇಶಗಳ ಅನೇಕ ಸಂಗತಿಗಳನ್ನು ಹೇಳುತ್ತಿದ್ದರು. ಎರಡೂ ದೇಶಗಳ ನಡುವಿನ ಸಾಮ್ಯವನ್ನು ಹೇಳುವ ಮೂಲಕ ಸಂಬಂಧ ಬೆಸೆಯುತ್ತಿದ್ದರು. ಅವರು ಭಾಷೆ ಹಾಗೂ ವಿಷಯದ ಜತೆಗೆ ಹಾವ-ಭಾವ, ಅಭಿವ್ಯಕ್ತಿ
(Expression)ಗೂ ಹೆಚ್ಚಿನ ಒತ್ತು ನೀಡುತಿದ್ದರು. ಮಾತಿನ ಕೊನೆಯಲ್ಲಿ pause (ಪ್ರಜ್ಞಾಪೂರ್ವಕ ವಿರಾಮ) ಇರುವಂತೆ ನೋಡಿಕೊಳ್ಳುತ್ತಿದ್ದರು.

ರಾಷ್ಟ್ರಾಧ್ಯಕ್ಷರನ್ನು ಭೇಟಿಯಾದಾಗ, ಅವರಿಗಿಂತ ಹಿಂದಿನವರ ಜೀವನದ ಪ್ರಮುಖ ಘಟನೆ, ಸಂಗತಿಗಳನ್ನು ಹೇಳಿ ಆಪ್ತತೆ ಮೆರೆಯುತ್ತಿದ್ದರು. ಅವರು
ಮಾತುಕತೆಯಲ್ಲಿ ಸ್ವಲ್ಪವೂ ಮೌನ ಇಣುಕಲು ಬಿಡುತ್ತಿರಲಿಲ್ಲ. ಅವರ ಬತ್ತಳಿಕೆಯಲ್ಲಿ ಒಂದು ಗಂಟೆ ಕಳೆಯುವಷ್ಟು ಸಾಕಷ್ಟು ಸರಕು, ದೃಷ್ಟಾಂತಗಳು ಇರುತ್ತಿದ್ದವು. ಹೀಗಾಗಿ ಅವರು ಜಾಗತಿಕ ನಾಯಕರ ಜತೆ ಸಮನಾಗಿ, ಆತ್ಮವಿಶ್ವಾಸದಿಂದ ಬೆರೆಯಲು ಸಾಧ್ಯವಾಗುತ್ತಿತ್ತು.

ಇದು ಗಣ್ಯವ್ಯಕ್ತಿ ಅಥವಾ ರಾಷ್ಟ್ರಾಧ್ಯಕ್ಷರಿಗಷ್ಟೇ ಸೀಮಿತ ವಲ್ಲ. ನಾವು-ನೀವು ಭೇಟಿಯಾದಾಗಲೂ, ಮೊದಲ ಹತ್ತು ನಿಮಿಷ ಹೇಗೆ ಮಾತಾಡುತ್ತೇವೆ ಎಂಬುದು ಬಹಳ ಮುಖ್ಯ. ‘ಈತ ಯಾವಾಗ ತೊಲಗುತ್ತಾನೋ’ ಎಂದು ಅನಿಸುವುದು, ನೀವು ತೀರಾ ನೀರಸವಾಗಿ, ಪೇಲವವಾಗಿ ಮಾತುಕತೆಯನ್ನು ಆರಂಭಿಸಿದಾಗ. ಕೆಲವು ಸಲ ಐದು ನಿಮಿಷದ ನಂತರ ಮಾತಾಡಲು ಏನೂ ವಿಷಯಗಳಿರುವುದಿಲ್ಲ. ಅಂಥ ವ್ಯಕ್ತಿ ಜತೆ ಒಂದು ಗಂಟೆ ಕಳೆಯುವುದಕ್ಕಿಂತ ಜೈಲುವಾಸವೇ ವಾಸಿ!