Monday, 30th December 2024

ಮನುಷ್ಯ, ಮನಸ್ಸು ಮತ್ತು ಮಾಯೆ

ಅಭಿಪ್ರಾಯ

ಹೃತಿಕ್ ಕುಲಕರ್ಣಿ

hritikkulkarni@gmail.com

ಮನುಷ್ಯ ತಾನು ಬಯಸಿದ್ದೆಲ್ಲವನ್ನೂ ಪಡೆದುಕೊಳ್ಳಬಲ್ಲ ಶಕ್ತಿಯುಳ್ಳ ಜೀವಿ. ಹಾಗಿದ್ದಾಗ್ಯೂ ಅದೆಷ್ಟೋ ಮಂದಿ ತಮ್ಮ ಬಯಕೆ ಈಡೇರುವುದರಿಂದ ವಂಚಿತ ರಾಗುತ್ತಾರಲ್ಲ. ಏಕೆ? ಯಾವುದರಲ್ಲಿ ಮನುಷ್ಯನಿಗೆ ಕೊರತೆ? ಜೀವನದಲ್ಲಿ ಮನುಷ್ಯ ತನ್ನ ಮನಸ್ಸು ಮಧುರ ಕ್ಷಣಗಳಿಂದ ಕೂಡಿರಬೇಕೆಂದು ಬಯಸುತ್ತಾನೆ, ಅದನ್ನೇ ಬಡಬಡಿ ಸುತ್ತಾನೆ, ಪ್ರಯತ್ನವನ್ನೂ ಕಿಂಚಿತ್ ಮಾಡು ತ್ತಾನೆನೋ– ಆದರೂ ನಿರಾಶೆ ಅವನನ್ನು ಬಿಡಲೊಲ್ಲದು.

ಮನದ ಸುಖವ ಬಯಸಿದವನಿಗೆ ಮಸಣದ ನೋವು ಸಿಗದೆ ಇರಲಾರದು. ಎಲ್ಲಕ್ಕೂ ಮನಸ್ಸೇ ಮೂಲ ವೆಂದರಿತಿರುವ ಮಾತನಾಡುವ ಪ್ರಾಣಿ ಮೂಕ ಪ್ರಾಣಿ ಗಳಿಗಿಂತ ಸ್ವಲ್ಪ ವಾಸಿಯೇ? ಗೊತ್ತಿಲ್ಲ. ಮೂಕ ಪ್ರಾಣಿಗಳಿಗೆ ಇಂದ್ರಿಯಗಳ ಇಚ್ಛೆ ಪೂರೈಕೆಯೇ ಸರ್ವಸ್ವ. ಇದೇ ಸರ್ವಸ್ವವಾಗಿರುವ ಮನುಷ್ಯರಿದ್ದರೆ ಅವರನ್ನು ಮಾತನಾಡುವ ಪ್ರಾಣಿಗಳೆನ್ನೆಬಹುದೆ? ಬಯಸಿದ್ದೆಲ್ಲವನ್ನೂ ಬಾಚಿಕೊಳ್ಳುವ ಸಾಮರ್ಥ್ಯ ವಿರುವ ಮಾನವ ಮನಸ್ಸು ನಿಜಕ್ಕೂ ಬಯಸುವುಸು ಏನನ್ನು? ‘ಇಂದ್ರಿಯ ಸುಖವನ್ನೇ’. (ಮನಸ್ಸೂ ಇಂದ್ರಿಯವೇ) ನಮ್ಮ ಮನಸ್ಸು ಸ್ವಭಾವತಃ ಚಂಚಲ.

ಆದ್ದರಿಂದ ಅದು ಪ್ರಪಂಚ ಎಂಬ ಕಂಬದ ಸುತ್ತ ಸುತ್ತುತ್ತಿರುವುದು. ಸುತ್ತಿ ಸುತ್ತಿ ಸಂಭ್ರಮಿಸುತ್ತಿರುವುದು. ಬಿದ್ದರೂ ಸಂಭ್ರಮ, ಎದ್ದರೂ ಸಂಭ್ರಮ. ಆ ಭ್ರಮಾ ಸಂಭ್ರಮ ಮುಂದೊಮ್ಮೆ ತನ್ನನ್ನು ಬಿಕ್ಕಳಿಸಿ ಅಳುವಂತೆ ಮಾಡುತ್ತದೆ ಎಂಬ ಅರಿವು ನಮ್ಮಲ್ಲಿ ಅನೇಕರಿಗೆ ಇಲ್ಲ ಮತ್ತು ಅದನ್ನು ಅರಿತಿರುವವರು ಸ್ವಲ್ಪವೇ ಕಂಬ ಸುತ್ತಿ ಭಗವಂತನನ್ನು ಭಜಿಸುತ್ತೇನೆ ಎಂದು ಹೇಳುವುದನ್ನು ಮರೆಯುವುದಿಲ್ಲ. ಅವರ ಆ ಸ್ವಲ್ಪಕ್ಕೆ ಸಮಯದ ಮಿತಿಯಿಲ್ಲ. ಸಂಯಮ ವಂತೂ ಮರೆತ ಮಾತು.

ಹಾಗಾದರೆ, ಸಾಮಾನ್ಯವಾಗಿ ಮನುಷ್ಯನ ಕಲ್ಪನೆಯಲ್ಲಿ ಸುಖ ಎಂದರೆ ಏನು? ಯಾವ ಚಟುವಟಿಕೆಯಿಂದ ಅವನ ಮನಸ್ಸು ಮುದಭರಿತವಾದಂತೆ ಭಾಸವಾಗು ತ್ತದೋ, ಯಾವುದನ್ನು ಪದೇಪದೆ ಆಲೋಚಿಸುವುದರಿಂದ ಮತ್ತು ಅದನ್ನೇ ಬಯಸುವುದರಿಂದ ಅವನಿಗೆ ಇದೇ ಪರಮಾನಂದ ಎನಿಸುತ್ತದೊ ಅದೇ ಸುಖ ಮಾನವನಿಗೆ. ಮಾನವ ಅದೆಷ್ಟು ಬುದ್ಧಿಗೇಡಿ ಎಂದರೆ ಅವನು ಭ್ರಮಿಸುವ ಆ ಸುಖ ಬಂದ ಮರು ಘಳಿಗೆ ಇರದು ಎಂದು ಅರಿತೂ ಅದನ್ನೇ ಮತ್ತೆ ಮತ್ತೆ ಅರಸು ತ್ತಾನೆ ಅದನ್ನು ಪಡೆಯಲು ಒzಡುತ್ತಾನೆ!

ಪ್ರಕೃತಿ ದ್ವಂದ್ವಗಳನ್ನು ಮೀರಿದವರು ಎಲ್ಲಾ ಬೆರಳೆಣಿಕೆಯಷ್ಟು ಮಹಾತ್ಮರು. ಅವರೇ ಜಗತ್ತಿಗೆ ಮಾರ್ಗದರ್ಶನ ಮಾಡಬಲ್ಲವರು. ಅವರು ಸಂತರೇ ಆಗಿರ ಬೇಕೆಂಬ ನಿಯಮವಿಲ್ಲ ಅವರು ಸದ್ ಗೃಹಸ್ಥರಾಗಿರಬಹುದು, ಅವರು ಜಗತ್ತಿನ ಅತೀ ಶ್ರೀಮಂತರಲ್ಲೂ ಒಬ್ಬರಾಗಿರಬಹುದು, ಅಕ್ಷರ ಬಾರದ ವ್ಯಕ್ತಿ ಇರಬಹುದು, ಶಾಲಾ ಶಿಕ್ಷಕರಾಗಿರಬಹುದು, ಗುಮಾಸ್ತರಾಗಿರಬಹುದು, ಕವಿ ಸಾಹಿತಿಯಾಗಿರಬಹುದು ಇತ್ಯಾದಿ. ಅವರ ಹತ್ತಿರ ಸುಖದ ಮಾತನಾಡಿದರೆ ಒಂದೋ ಅವರು ಮರು ಮಾತನಾಡದಿರಬಹುದು, ನಗಬಹುದು, ಇಲ್ಲವೇ ವಾಸ್ತವವನ್ನು ತಿಳಿಸಿ ಹೇಳಬಹುದು. ಹಾಗಾದರೆ ವಾಸ್ತವ ಸತ್ಯ ಯಾವುದು? ಮನುಷ್ಯ ಸುಖದಿಂದ ದುಃಖವೇ ಎಂದು ಅರಿತಿದ್ದರೂ ಅದನ್ನೇ ಬಯಸುವುದೇಕೆ? ಉತ್ತರ ಇಷ್ಟೇ, ಅದೇ ‘ಮಾಯಾದೇವಿಯ’ ಲೀಲೆ ಅಥವಾ ಆಟ.

ಮಾಯೆ ಮಾನವನ ಮನಸ್ಸನ್ನು ಭ್ರಮಿಸಲು ಒಂದು ಕ್ಷಣ ಸಾಕು. ಭಗವಂತನೊಬ್ಬನೇ ಸತ್ಯ, ಉಳಿದzಲ್ಲ ಅನಿತ್ಯ ಆದ್ದರಿಂದ ಅವೆಅಸತ್ಯ ಎಂಬ ಅರಿವಿರುವ ಮನುಷ್ಯರು ಅಲ್ಪ. ‘ಮಾಯೆ’ ಏನಿದು? ಸುಲಭ ಮತ್ತು ಸರಳವಾಗಿ ಹೇಳುವುದಾದರೆ ಅಸತ್ಯವನ್ನೇ ಸತ್ಯವೆಂದು, ಅನಿತ್ಯವನ್ನೇ ನಿತ್ಯವೆಂದು ಯಾವುದು ಮನಸ್ಸನ್ನು ಪ್ರಚೋದಿಸುತ್ತದೊ ಅದೇ ಮಾಯೆ. ಯಾವ ಮನುಷ್ಯ ಮಾಯಾದೇವಿಯ ಮಾಯೆಯನ್ನು ಸತತ ಸಾಧನೆಯಿಂದ ಮೀರಿ ಮೇಲೇಳುತ್ತಾನೊ ಅವನು ಮಾಯಾದೇವಿಯ ಕೃಪೆಗೆ ಪಾತ್ರನಾಗುತ್ತಾನೆ.

ಮಾಯೆಯನ್ನು ಮೀರಲು, ಪರಮಾನಂದದ ಭಾಗೀದಾರರಾಗಲು ಏಕಮಾತ್ರ ಉಪಾಯ ಭಗವನ್ನಾಮ ಸ್ಮರಣೆ ಅಥವಾ ಭಗವಂತನ ನಾಮಗುಣಕೀರ್ತನೆ ಮಾಡುವುದು. ಕಲಿಯುಗಕ್ಕೆ ಇದು ಹೇಳಿ ಮಾಡಿಸಿ ರುವ ಅಭ್ಯಾಸ. ಅದರ ಜೊತೆಗೆ ಸದ್ ಗ್ರಂಥಗಳ ಅಭ್ಯಾಸ, ಮಾನವ ಸೇವೆ ತನ್ಮೂಲಕ ದೈವ ಸೇವೆ, ವಿಚಾರದಿಂದ ವಿವೇಕಿಯಾಗುವುದು, ಪ್ರಾರ್ಥನೆ. ಆಚಾರ್ಯ ಶಂಕರರು ಹೇಳುತ್ತಾರೆ: ಜೀತಂ ಜಗತ್ ಕೇನ? ಮನೋಹೀ ಏನ! ಎಂದು.