Friday, 13th December 2024

ಮಾನವೀಯ ಸಂಬಂಧಗಳಿಗೂ ಸೋಂಕು

ನಾಡಿಮಿಡಿತ
ವಸಂತ ನಾಡಿಗೇರ

vasanth.nadiger@gmail.com

ಕರೋನಾ ಸೋಂಕಿನಿಂದ ಆಗಿರುವ, ಆಗುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ಸಾವು – ನೋವು, ಖರ್ಚು – ವೆಚ್ಚ, ಕಷ್ಟ – ನಷ್ಟವಂತೂ ಸರಿಯೇ. ಆದರೆ ಇದು ಮಾನವೀಯತೆಯ ಮೇಲೆ, ಮಾನವ ಸಂಬಂಧಗಳ ಮೇಲೆ ಬೀರುತ್ತಿರುವ ಪ್ರಭಾವ,
ಪರಿಣಾಮವೂ ಬೇಕಾದಷ್ಟಿದೆ. ಅದನ್ನು ನೋಡಿದರೆ ಒಮ್ಮೆ ಭಯವಾಗುತ್ತದೆ.

ಆಸ್ಪತ್ರೆಯಲ್ಲಿ ಬೆಡ್ ಸಿಗುವುದಿಲ್ಲ. ಆಕ್ಸಿಜನ್ ಇಲ್ಲ, ಸರಿಯಾದ ಚಿಕಿತ್ಸೆ ಇಲ್ಲ, ಖಾಸಗಿ ಆಸ್ಪತ್ರೆಗಳ ಸುಲಿಗೆ, ಔಷಧಗಳ ಕೊರತೆ, ಲಸಿಕೆ ಇಲ್ಲ – ಒಂದೇ ಎರಡೇ. ಒಮ್ಮೆ ಆಸ್ಪತ್ರೆ ಸೇರಿದ ಮೇಲೆ ಅವರಿಗೆ ಏನಾಗುತ್ತಿದೆ, ಚಿಕಿತ್ಸೆ ಸಿಗುತ್ತಿದೆಯೇ, ಇಲ್ಲವೆ ಎಂಬುದು ಕೂಡ ಸರಿಯಾಗಿ ಗೊತ್ತಾಗುವುದಿಲ್ಲ. ಆದರೆ ಇದೆಲ್ಲಕ್ಕಿಂತ ಘೋರವಾದುದು ಎಂದರೆ ಕುಟುಂಬ ಸದಸ್ಯರು, ಆತ್ಮೀಯರ ಸಾವು. ಹಾಗೊಮ್ಮೆ ಇಂಥ ಕೆಟ್ಟ ಘಟನೆ ಸಂಭವಿಸಿದರೆ ಅದು ಬೇರೆ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ನಮ್ಮವರು ತಮ್ಮವರನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಅವರ ಅಂತ್ಯಸಂಸ್ಕಾರದ್ದು ಇನ್ನೊಂದು ರೀತಿಯ ಫಜೀತಿ. ಹೀಗೆ ಮೃತರಾದವರ ಶವಗಳನ್ನು ಮನೆಗೆ ಕೊಡುವುದಿಲ್ಲ. ಒಬ್ಬಿಬ್ಬರು ಸ್ಮಶಾನಕ್ಕೆ ಹೊಗಿ ದೂರದಿಂದ ನೊಡಬಹುದಷ್ಟೆ. ಸತ್ತವರು ಯಾವುದೇ ಅಂತಿಮ ಸಂಸ್ಕಾರಗಳಿಲ್ಲದೆ ತಮ್ಮ ಇಹಲೋಕದ ಪಯಣ ಮುಗಿಸಬೇಕು. ಸತ್ತವರಂತೂ ಸತ್ತವರು. ಆದರೆ
ಅವರಿಗೆ ಗೌರವಯುತ ಮತ್ತು ವಿಧಿಪೂರ್ವಕವಾಗಿ ವಿದಾಯ ಹೇಳಲು ಸಾಧ್ಯವಾಗದೆ, ಅವರ ಮನೆಯವರು ಹಾಗೂ ಬಂಧುಗಳ ಮನಸ್ಸು ತುಂಬ ವ್ಯಾಕುಲಗೊಳ್ಳುತ್ತದೆ.

ಇದು ಪರಿಸ್ಥಿತಿಯ ಒಂದು ಮುಖವಾದರೆ ಇದಕ್ಕೆ ಇತರ ಮಗ್ಗಲುಗಳೂ ಇವೆ. ಕರೋನಾ ಸೋಂಕು ಮಾನವೀಯತೆಯ ಮೇಲೆ, ಮಾನವ ಸಂಬಂಧಗಳ ಮೇಲೆ ಬೀರುತ್ತಿರುವ ಪ್ರಭಾವ, ಪರಿಣಾಮವೂ ಬೇಕಾದಷ್ಟಿದೆ. ಅದು ಮೇಲೆ ತಿಳಿಸಿದ ಆರ್ಥಿಕ,
ಸಾಮಾಜಿಕ ಸಮಸ್ಯೆ ಮಾತ್ರವಲ್ಲದೆ ನಮ್ಮ ಮನಸ್ಸುಗಳನ್ನು, ಮಾನವೀಯ ಮೌಲ್ಯ ಮತ್ತು ಸಂಬಂಧಗಳನ್ನು ಕೂಡ ಹೇಗೆ ಕಲಕಿಬಿಟ್ಟಿದೆ ಎಂಬುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ.

ಸತ್ತವರನ್ನು ಗೌರವದಿಂದ ಬೀಳ್ಕೊಡಲು ಸಾಧ್ಯವಾಗದೆ ಪರಿತಪಿಸುತ್ತಿರುವವರು ಒಂದು ಕಡೆಯಾದರೆ ಕರೋನಾದಿಂದ
ಮೃತಪಟ್ಟವರನ್ನು ಕೇಳುವವವರೇ ಇಲ್ಲದಿರುವ ಉದಾಹರಣೆಗಳೂ ಸಾಕಷ್ಟಿವೆ. ಈ ರೀತಿ ಅನಾಥ ಶವವಾದವರೆಷ್ಟೋ. ಇದಕ್ಕೆ ಲೆಕ್ಕವೇ ಇಲ್ಲ. ಎಷ್ಟೋ ಕುಟುಂಬದವರು ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಿ ಅಥವಾ ಸೇರಿಸುವಂತೆ ಆರೋಗ್ಯ ಸಿಬ್ಬಂದಿಗೆ ತಿಳಿಸಿ
ಕೈತೊಳೆದುಕೊಂಡು ಬಿಡುತ್ತಾರೆ. ಅಕಸ್ಮಾತ್ ಅವರ ಬಗ್ಗೆ ಅನಂತರ ಗಮನವನ್ನೇ ಕೊಡುವುದಿಲ್ಲ. ಒಮ್ಮೆ ನಿಧನರಾದರೂ ಅವರು ತಮ್ಮವರೆಂದು ಹೇಳಿಕೊಳ್ಳಲೂ ಸಿದ್ಧರಿರುವುದಿಲ್ಲ. ಶವವನ್ನು ಪಡೆಯಲು ಮುಂದೆ ಬರುವುದಿಲ್ಲ.

‘ನೀವೇ ಅಂತ್ಯಸಂಸ್ಕಾರ ಮಾಡಿ ಮುಗಿಸಿಬಿಡಿ ಎಂದವರೆಷ್ಟೋ. ಪಾಪ. ಸ್ಮಶಾನದ ಸಿಬ್ಬಂದಿ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಅವರ ಅಂತ್ಯಕ್ರಿಯೆ ನಡೆಸಿದ ಪ್ರಕರಣಗಳೆಷ್ಟೋ. ಇಷ್ಟೆಲ್ಲ ಆದ ಮೇಲೆ ಕೊನೆಗೆ ಅವರ ಅಸ್ಥಿ ಪಡೆಯಲು ಸಹ ಬರದಂಥವ ರಿದ್ದಾರೆ. ಇದನ್ನು ಮನಗಂಡೋ ಏನೊ ಮೊನ್ನೆ ಮೊನ್ನೆ ಸರಕಾರದ ವತಿಯಿಂದಲೇ 500ಕ್ಕೂ ಹೆಚ್ಚು ಅಸ್ಥಿಗಳನ್ನು ವಿಸರ್ಜಿಸ ಲಾಯಿತು.

ಕರೋನಾ ಸೋಂಕಿನಿಂದ ಮೃತಪಟ್ಟಿದ್ದೇ ಅವರ ತಪ್ಪಾ? ಇಲ್ಲವೇ ತಮ್ಮವರ ಉತ್ತರಕ್ರಿಯೆಗಳನ್ನು ಮಾಡದಿರುವಷ್ಟು ಕಟುಮನಸ್ಸಿನವರಾದರೆ? ಒಂದೂ ಗೊತ್ತಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕರೋನಾ ಕಾಲದಲ್ಲಿ ಮಾನವರ ಜತೆ
ಮಾನವೀಯತೆಯೂ ಸತ್ತುಹೋದ ಹಲವಾರು ನಿದರ್ಶನಗಳು ನಮ್ಮ ಕಣ್ಣೆದುರಿಗೆ ಇವೆ. ಆ ಪೈಕಿ ತೀರ ಮನಕಲಕಿದ ಘಟನೆ ಮೈಸೂರಿನದು. ಅದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ ಆಗಿ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದೂ ಹೌದು. ಅದರ ವಿವರವನ್ನು ಮತ್ತೆ ಸಾಂದರ್ಭಿಕವಾಗಿ ನೀಡುತ್ತಿದ್ದೇನೆ.

ಮೈಸೂರಿನ ಹೆಬ್ಬಾಳದಲ್ಲಿ ವಯಸ್ಸಾದವರೊಬ್ಬರು ಮೃತಪಡುತ್ತಾರೆ. ಮನೆಯಲ್ಲಿ ಅವರೊಬ್ಬರೇ ಇದ್ದಿದ್ದು. ಹೀಗಾಗಿ ಪಾಲಿಕೆ ಸದಸ್ಯ ಶ್ರೀಧರ್ ಎಂಬುವವರು ತಮ್ಮ ತಂಡದೊಂದಿಗೆ ಅಲ್ಲಿಗೆ ಬರುತ್ತಾರೆ. ಅನಾಥ ಶವವೆಂದು ಅದರ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ಮನೆಯ ಒಳಕ್ಕೆ ಹೋದಾಗ ಮೊಬೈಲ್‌ನಲ್ಲಿ ಸಿಕ್ಕ ಕಾಂಟ್ಯಾಕ್ಟ್ ನಂಬರ್‌ಗೆ ಫೋನ್ ಮಾಡಿದರೆ ಅತ್ತಕಡೆಯಿಂದ ಬಂದ ಉತ್ತರದಿಂದ ಇವರಿಗೆಲ್ಲ ಶಾಕ್. ಆಗ ಗೊತ್ತಾಗಿದ್ದೇನೆಂದರೆ ಆಕಡೆಯಿಂದ ಮಾತನಾಡುವವನು ಮೃತವ್ಯಕ್ತಿಯ ಮಗ. ‘ಬರುತ್ತೀರಾ’, ಎಂದು ಕೇಳಿದರೆ, ‘ಇಲ್ಲ, ಬರಲ್ಲ’ ಎಂದು ಖಡಾಖಂಡಿತವಾಗಿ ಹೇಳುತ್ತಾನೆ.

ಮತ್ತೇನು ಮಾಡುವುದು ಎಂದರೆ, ‘ನೀವೇ ಎಲ್ಲ ಕಾರ್ಯಗಳನ್ನು ಮುಗಿಸಿಬಿಡಿ’ ಎಂದು ಯಾವುದೇ ಸಂಕೋಚವಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟವರಂತೆ ಹೇಳುತ್ತಾನೆ. ‘ಆಯಿತು, ಆದರೆ ಮನೆಯಲ್ಲಿ 6 ಲಕ್ಷ ರು ಕ್ಯಾಶ್ ಇದೆ, ಮೂರು ಮೊಬೈಲ್ ಇವೆ. ಅದನ್ನೇನು ಮಾಡುವುದು’ ಎಂದು ಕೇಳಿದಾಗ ಅವನ ಕಿವಿ ನೆಟ್ಟಗಾಗುತ್ತದೆ. ‘ಹಾಗಾದರೆ ಹೆಣವನ್ನು ನೀವು ಅಂತ್ಯಸಂಸ್ಕಾರ ಮಾಡಿಬಿಡಿ. ಹಣ ಮಾತ್ರ ನನಗೆ ಕಳಿಸಿಕೊಡಿ’ ಎಂದು ತನ್ನ ವಿಳಾಸವನ್ನೂ ನೀಡುತ್ತಾನೆ. ಹಾಗೆಂದು ಅವನು ಸ್ವಲ್ಪ ದೂರದಲ್ಲೇ
ವಾಸವಿದ್ದ. ಆದರೆ ಬರಲೊಲ್ಲ.

ಆಗಿದ್ದೇನೆಂದರೆ ಯಾವುದೋ ಮನಸ್ತಾಪದಿಂದಾಗಿ, ಮೃತ ವ್ಯಕ್ತಿಯ ಪತ್ನಿ ಮತ್ತು ಮಗ ಬೇರೆ ಹೋಗಿರುತ್ತಾರೆ. ಹೀಗಾಗಿ
ಆವರೊಬ್ಬರೇ ವಾಸಿಸುತ್ತಿದ್ದರು. ಏನು ಜಗಳವೋ ಏನೊ. ಆದರೆ ಸಾವು ಸಂಭವಿಸಿದರೂ ಬರುವುದಿಲ್ಲ ಎಂದರೆ, ಸಂಬಂಧಗಳು ಇಷ್ಟು ಅಗ್ಗವಾದವೆ ಎಂಬ ಸಂಶಯ ಮೂಡದೆ ಇರದು. ಆ ಕಾರ್ಪೊರೇಟರ್ ಕೂಡ ಇದೇ ಪ್ರಶ್ನೆಯನ್ನು ಕೇಳುತ್ತಾರೆ. ‘ಏನ್ರಿ,
ಮನುಷ್ಯರೇನ್ರಿ ನೀವು. ಅನಾಥ ಹೆಣ ಎಂದು ಸುಟ್ಟುಬಿಡಿ ಎನ್ನುತ್ತೀರಿ. ಆದರೆ ಹಣವನ್ನು ಏನು ಮಾಡಬೇಕು ಎಂದ ಕೂಡಲೇ ಅದನ್ನು ಮಾತ್ರ ಕಳಿಸಿಕೊಡಿ ಎನ್ನುತ್ತೀರಿ’? ಎಂದು ಕೇಳಿದರೆ ಅವನದು ಮೌನವೇ ಉತ್ತರ.

ಬೆಂಗಳೂರಿನಲ್ಲಿರುವ, ಆ ವ್ಯಕ್ತಿಯ ಮಗಳಿಗೂ ಹಿಂದಿನ ದಿನ ಫೋನ್ ಮಾಡಿದ್ದರಂತೆ. ಬರುತ್ತೇವೆ ಎಂದು ಹೇಳಿ ಅವರೂ ಕೈಕೊಟ್ಟರಂತೆ. ‘ನಿಮಗೆ ಸಂಸ್ಕಾರ ಇಲ್ಲವೇನ್ರೀ?’ ಎಂಬ ಅವರ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ. ಕೊನೆಗೆ ಗೊಣಗುತ್ತ, ಅವರಿಗೆ
ಬೈಯುತ್ತ ಅವರೇ ಮುಂದಿನ ಕಾರ್ಯವನ್ನು ಮುಗಿಸುತ್ತಾರೆ.

ಸಂಸಾರದಲ್ಲಿ ಜಗಳ, ಕದನ, ಮನಸ್ತಾಪ ಇದ್ದೇ ಇರುತ್ತವೆ. ಅವು ವಿಕೋಪಕ್ಕೆ ಹೋದಾಗ ಪರಸ್ಪರ ದೂರವಾಗುವ ಸನ್ನಿವೇಶಗಳು ಕೆಲವೊಮ್ಮೆ ಬರಬಹುದು. ಆದರೆ ಇಷ್ಟು ಸಮಯ ತಮ್ಮೊಡನೆ ಇದ್ದ ತಮ್ಮ ವ್ಯಕ್ತಿಯೊಬ್ಬರು ಇಲ್ಲವಾದಾಗ ಕೊನೆ ಬಾರಿಗೆ
ನೋಡುವ, ಅವರ ಅಂತ್ಯಕ್ರಿಯೆ ನೆರವೇರಿಸುವ ಸೌಜನ್ಯವಾದರೂ ಬೇಡವೆ? ಕೊನೆಗೆ ಇದು ತಮ್ಮ ಕರ್ತವ್ಯವೆಂದಾದರೂ ಭಾವಿಸಬಹುದಲ್ಲ? ಎರಡೂ ಇಲ್ಲ. ಇತ್ತಕಡೆ ಏನೇನೂ ಸಂಬಂಧ ಇಲ್ಲದ ಮೂರನೆಯವರೊಬ್ಬರು ಆ ಕಾರ್ಯವನ್ನು
ನೆರವೇರಿಸಿದ್ದಾರೆ. ಇದೆಲ್ಲ ವಿಚಿತ್ರ ಎನಿಸುತ್ತದೆ.

ಕೋವಿಡ್ ಕಾಲದಲ್ಲಿ ಈ ರೀತಿಯ ಅಮಾನವೀಯ ವರ್ತನೆಯ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ತಮಿಳುನಾಡಿನ ಸೇಲಂ ಬಳಿ 95 ವರ್ಷದ ವೃದ್ಧೆಗೆ ಸ್ವತಃ ಮಗನೇ ಅನ್ನಾಹಾರ ನೀಡದೆ ಸತಾಯಿಸಿದ ಘಟನೆ ನಡೆದಿದೆ. ಅಷ್ಟು ಮಾತ್ರವಲ್ಲದೆ ಆಕೆಯನ್ನು ಶೌಚಗೃಹದಲ್ಲಿ ಬಂಧಿಸಿಟ್ಟು ಗೋಳು ಹೊಯ್ದುಕೊಂಡಿದ್ದಾನೆ. ಆ ತಾಯಿಯ ಗೋಳಾಟ, ಚೀರಾಟ, ನರಳಾಟ ಕೇಳಿಸಿಕೊಂಡ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ಪೊಲೀಸರು ಆಕೆಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಇಷ್ಟಕ್ಕೂ ಈಕೆಗೆ ನಾಲ್ವರು ಮಕ್ಕಳು. ಆದರೂ ಈ ದುಸ್ಥಿತಿ. ಏನು ಮಾಡುವುದು? ಈ ಕರೋನಾ ಕಾಲದಲ್ಲಿ ತುತ್ತು ಅನ್ನಕ್ಕೂ ಎಷ್ಟು ಪರದಾಡಬೇಕಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ: ಇದು ನಮ್ಮ ರಾಜ್ಯದಲ್ಲೆ ನಡೆದ ಘಟನೆ. ಕಾರ್ಕಳ ಬಳಿ ನಡೆದಿದ್ದು. 83 ವರ್ಷದ ವೃದ್ಧೆ ಊಟ ಕೊಡು ಎಂದು ಕೇಳಿದ ಕಾರಣಕ್ಕೆ ಆಕೆಯ ಮೇಲೆ ಮಗನೇ ಹಲ್ಲೆ ಮಾಡಿದ ಘಟನೆ ಇದು. ಆದರೆ ಆತ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲವಂತೆ. ಈ ಬಾರಿ ಹಲ್ಲೆ ಮಾಡಿದ ಬಳಿಕ ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆದರೆ ಅಲ್ಲಿ ಅವಳಿಗೆ ಕರೋನಾ ಬೇರೆ ತಗುಲಿದೆ. ಇದು ಮೊದಲ ಅಲೆಯ ಸಂದರ್ಭದಲ್ಲಿ ನಡೆದ ಘಟನೆ. 50ರ ಆಸುಪಾಸಿನ ವ್ಯಕ್ತಿಯೊಬ್ಬರು ಕರೋನಾ ಪೀಡಿತರಾಗಿ ಅಸ್ವಸ್ಥರಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿದ್ದರು. ಇದನ್ನು
ನೋಡಲಾಗದೆ ಮನೆಯವರು ಒಂದು ಆಂಬ್ಯುಲೆನ್ಸ್ ಮಾಡಿಕೊಂಡು ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋದರು. ಆದರೆ ಬೆಡ್ ಖಾಲಿ ಇಲ್ಲ ಎಂದು ಆಸ್ಪತ್ರೆಯವರು ಹೇಳಿದರು. ಹೀಗೆ 18 ಆಸ್ಪತ್ರೆಗಳನ್ನು ಎಡತಾಕಿದರೂ ಪ್ರಯೋಜನವಾಗದೆ ಮತ್ತೆ ಮನೆಗೆ ಕರೆದುಕೊಂಡು ಬಂದರು. ಹೇಗೊ ಕಷ್ಟಪಟ್ಟು ಒಂದು ಆಕ್ಸಿಜನ್ ಸಿಲಿಂಡರ್ ಪಡೆದು ಚಿಕಿತ್ಸೆ ಮುಂದುವರಿಸಿದರು.

ಆದರೆ ಮರುದಿನ ಅವರ ಆರೋಗ್ಯಸ್ಥಿತಿ ಬಿಗಡಾಯಿಸಿತು. ಮತ್ತೆ ಆಸ್ಪತ್ರೆಗಳ ತಿರುಗಾಟ ಆರಂಭವಾಯಿತು. ಯಾವ ಆಸ್ಪತ್ರೆ
ಯವರೂ ಆಂಬ್ಯುಲೆನ್ಸ್ ಬಾಗಿಲನ್ನು ಕೂಡ ತೆಗೆದು ನೋಡಲಿಲ್ಲ. ಕೊನೆಗೆ ಒಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಕೊಂಡರು. ಆದರೆ ಅದಾದ ೧೦ ನಿಮಿಷದಲ್ಲೇ ಅವರು ತೀರಿಹೋದರು. ಈ ಘಟನೆ ಕುರಿತು ಮೃತವ್ಯಕ್ತಿಯ ಸೋದರನ ಮಗ, ‘ಸತ್ತವರು ನಮ್ಮ ಚಿಕ್ಕಪ್ಪ ಅಲ್ಲ, ಬದಲಾಗಿ ಮಾನವೀಯತೆ’ ಎಂದು ಹೇಳಿದಾಗ ಆತನಿಗೆ ಎಷ್ಟು ದುಃಖ, ಹತಾಶೆ ಮತ್ತು ರೋಷ ಉಂಟಾಗಿರಬಹುದು. ಹಾಗೆ ನೋಡಿದರೆ ಈ ರೀತಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ, ಪ್ರವೇಶ ಸಿಗದ ಕಾರಣದಿಂದ ಮೃತಪಟ್ಟವ ರೆಷ್ಟೋ.

ಸೂಕ್ತಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತಿದ್ದರೆ ಎಷ್ಟೋ ಜನರ ಜೀವ ಉಳಿಯುತ್ತಿತ್ತೆನೊ. ಆದರೆ ನಮ್ಮ ಅವ್ಯವಸ್ಥೆ ಹಾಗೂ ಮಾನವೀಯತೆಯ ಕೊರತೆಯಿಂದ ಹಾಗೆ ಆಗಲಿಲ್ಲ. ಇನ್ನೂ ಎಷ್ಟೋ ಮಂದಿ ಆಂಬ್ಯುಲೆನ್ಸ್ ನಲ್ಲೇ ನರಳಿ ನರಳಿ ಕೊನೆಯು ಸಿರೆಳೆದ ಉದಾಹರಣೆಗಳೂ ಉಂಟು. ಬೆಡ್ ಬ್ಲಾಕಿಂಗ್ ದಂಧೆಯೂ ಈ ಅಮಾನವಿಯ ವರ್ತನೆಯ ಒಂದು ಭಾಗ ಮತ್ತು ಮುಖವೇ. ಈ ದಂಧೆಯಿಂದಾಗಿ ಎಷ್ಟೋ ರೋಗಿಗಳು ಬೆಡ್ ವಂಚಿತರಾಗಿ ಪ್ರಾಣ ಕಳೆದುಕೊಂಡಿದ್ದುಂಟು. ಇನ್ನು ಆಸ್ಪತ್ರೆಗಳ ಅವಾಂತರವಂತೂ ಹೇಳುವಂತಿಲ್ಲ. ಎಲ್ಲವೂ ಹೀಗೇ ಅಂತಲ್ಲ.

ಆದರೆ ಬಹುಪಾಲು ಜನರ ಅನುಭವ ಹೆಚ್ಚೂ ಕಡಿಮೆ ಹೀಗೆಯೇ. ಸರಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ, ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ. ಬಡವರ ಪಾಡಂತೂ ಹೇಳತೀರದು. ಅವರ ಬಳಿ ದುಡ್ಡಿಲ್ಲ. ದುಡ್ಡಿಲ್ಲದೆ ಪ್ರವೇಶವಿಲ್ಲ. ನರಳಿ ನರಳಿ ಮೃತಪಟ್ಟವ ರೆಷ್ಟೋ. ಹಾಗೂ ಹೀಗೂ ಖಾಸಗಿ ಆಸ್ಪತ್ರೆ ಸೇರಿಸಿದರೆ ಅಲ್ಲಿನ ಬಿಲ್ ನೋಡಿ ಬೆಚ್ಚಿಬೀಳುವುದು ಗ್ಯಾರಂಟಿ.

ಒಂದು ಪ್ರತಿಷ್ಠಿತ ಆಸ್ಪತ್ರೆಯವರು 22 ಲಕ್ಷ ರು. ಬಿಲ್ ಮಾಡಿದ್ದನ್ನು ಯಾರೋ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದರು. ವಿಷಾದ ಮತ್ತು ಬೇಜಾರಿನ ಸಂಗತಿ ಎಂದರೆ, ಲಕ್ಷ ಲಕ್ಷ ಹಣ ಖರ್ಚು ಮಾಡಿದರೂ ರೋಗಿಗಳು ಬದುಕುಳಿಯದಿರುವ ನಿದರ್ಶನಗಳೆಷ್ಟೋ. ಹಣ ಹೋಯಿತು. ಬಂದದ್ದು ಹೆಣ ಅಷ್ಟೇ ಅಂದ ಹಾಗಾಯಿತು.

ಆಂಬ್ಯುಲೆನ್ಸ್ ಚಾಲಕರಲ್ಲಿ ಕೆಲವರು ಕೂಡ ಮಾನವೀಯತೆ ಮರೆತು ತೀರ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ದುಬಾರಿ ಶುಲ್ಕ ಪಡೆದು ಜನರಿಗೆ ತೊಂದರೆ ಕೊಟ್ಟಿದ್ದಾರೆ. ಅದೇ ರೀತಿ ಅಂತ್ಯಸಂಸ್ಕಾರಕ್ಕೆ ಹಣ ಸುಲಿಗೆ ಮಾಡಿದ್ದಾರೆ. ಇದೇ ಮಾನವೀ ಯತೆಯ ಕೊರತೆ ಅಥವಾ ಗಾಳಿಬಂದಾಗ ತೂರಿಕೊ ಎಂಬ ಪ್ರವೃತ್ತಿ. ಲಸಿಕೆ ನೀಡುವ ವಿಚಾರದಲ್ಲೂ ಇಂಥ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಉಚಿತವಾಗಿ ಕೊಡಬೇಕಾದ ಲಸಿಕೆಯನ್ನು ಮಾರಾಟ ಮಾಡಿಕೊಳ್ಳುವುದು, ವ್ಯರ್ಥ ಮಾಡುವುದು, ಹೆಚ್ಚು ಹಣ ಪಡೆಯುವುದು, ಕೊಡದಿದ್ದರೂ ಕೊಟ್ಟಿರುವುದಾಗಿ ಹೇಳುವುದು – ಇವೆಲ್ಲ ಅಪ್ರಾಮಾಣಿಕತೆ ಮಾತ್ರವಲ್ಲದೆ ಅಮಾನವೀಯತೆಯೂ ಹೌದು.

ಕರೋನಾ ಕಾಲದಲ್ಲಿ ಅತಿ ಪ್ರಮುಖ ಪಾತ್ರ ವಹಿಸಿದ ಡಾಕ್ಟರ್‌ಗಳು, ನರ್ಸ್‌ಗಳು ಮೊದಲಾದ ಆರೋಗ್ಯ ಸಿಬ್ಬಂದಿಯ ವಿಚಾರದಲ್ಲೂ ಎರಡೂ ಬಗೆಯ ಗುಣಸ್ವಭಾವ ವ್ಯಕ್ತವಾಗಿದೆ. ಹಗಲು ರಾತ್ರಿ ಎನ್ನದೆ, ದಿನಗಟ್ಟಲೆ, ವಾರಗಟ್ಟಲೆ ಮನೆಗೂ ಹೋಗದೆ, ತಮ್ಮ ಆರೋಗ್ಯವನ್ನು ಲೆಕ್ಕಿಸಿದೆ ರೋಗಿಗಳ ಚಿಕಿತ್ಸೆಯಲ್ಲಿ ತೊಡಗುವುದು ಸಣ್ಣ ಕೆಲಸವಲ್ಲ. ಆದರೆ ರೋಗಿಗಳ
ನಿರ್ಲಕ್ಷ್ಯ, ನಿರ್ದಯವಾಗಿ ವರ್ತಿಸುವುದು, ಹಣ ಸುಲಿಗೆಯಂಥ ಕೆಲಸಗಳಿಂದ ಕೆಲವು ಆಸ್ಪತ್ರೆ ಮತ್ತು ವೈದ್ಯರು ಸ್ವಾರ್ಥವನ್ನೂ ಪ್ರದರ್ಶಿಸಿದ್ದಾರೆ.

ಹಾಗೆಯೇ ಜನಸಾಮಾನ್ಯರನೇಕರು, ಸ್ವಯಂಸೇವಾ ಸಂಸ್ಥೆಗಳು ಅಗತ್ಯ ಇರುವಂಥವರಿಗೆ ಆಹಾರ ಕಿಟ್, ಔಷಧ ಮತ್ತಿತರ ಅಗತ್ಯ ವಸ್ತು, ಧನಸಹಾಯವನ್ನು ಕೂಡ ಮಾಡುತ್ತಿದ್ದಾರೆ. ಇದಲ್ಲದೆ ಉದ್ಯೋಗನಷ್ಟ, ಆರ್ಥಿಕ ಸಂಕಷ್ಟ, ಖಿನ್ನತೆ ಮೊದಲಾದ ಕಾರಣ ಗಳಿಂದಲೂ ಮನುಷ್ಯರ ಗುಣ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದೆ. ಇವು, ಸ್ವಾರ್ಥ, ಕೋಪ, ಅಸಹನೆ ಮೊದಲಾದ ರೂಪದಲ್ಲಿ ವ್ಯಕ್ತವಾಗಬಹುದು. ಈ ಅರಿಷಡ್ವರ್ಗಗಳು, ಇಲ್ಲವೆ ಉತ್ತಮ ಗುಣಗಳು ನಮ್ಮಲ್ಲಿ ಸದಾ ಕಾಲ ಇರು ವಂಥದ್ದೇ. ಆದರೆ ಈ ಕರೋನಾ ಕಾಲದಲ್ಲಿ ಅವು ಹೆಚ್ಚು ಹೆಚ್ಚು ಅಭಿವ್ಯಕ್ತವಾಗುತ್ತಿರುವುದು ಇಂದಿನ ವಾಸ್ತವ.

ಹೀಗೆ ಅವು ಪ್ರಕಟವಾಗುತ್ತಿರುವ ಕಾರಣದಿಂದಲೋ ಏನೊ ಜಗತ್ತು ಕ್ರೂರವಾಗುತ್ತಿದೆ, ಮಾನವೀಯತೆ ಮರೆಯಾಗುತ್ತಿದೆ ಎಂಬ ಅಭಿಪ್ರಾಯ ಮೂಡುತ್ತಿರಲೂಬಹುದು. ಆದರೆ ಮೇಲೆ ಉದಾಹರಿಸಿದ ಕೆಲವು ಘಟನೆಗಳು ಇದಕ್ಕೆ ಪುಷ್ಟಿ ನೀಡುವುದಂತೂ ಹೌದು. ಹೀಗಾಗಿ ಕರೋನಾ ಕಾಲದಲ್ಲಿ ಒಂದೆಡೆ ಮಾನವೀಯತೆ ಮೆರೆಯುತ್ತಿದೆ. ಇನ್ನೊಂದೆಡೆ, ಅದು ಸೊರಗುತ್ತಿದೆ ಎಂಬುದೂ ನಿಜ.

ನಾಡಿಶಾಸ್ತ್ರ
ಕರೋನಾ ಕಾಲದಲ್ಲಿ ಎಲ್ಲೆಲ್ಲೂ ಪರದಾಟ
ಇತ್ತ ಸಹಾಯ ಸಹಕಾರಗಳ ಮೆರೆದಾಟ
ಅತ್ತ ಹೆಣಬೇಡ, ಹಣಬೇಕೆಂಬ ಭಂಡಾಟ
ಆಂತೂ ಮಾನವೀಯತೆಗೆ ಬಂದಿದೆ ಸಂಕಟ