Thursday, 3rd October 2024

Prof R G Hedge Column: ಮನುಷ್ಯನ ಮೆದುಳಿಗೆ ಅಮಿತ ಸಾಧ್ಯತೆಗಳಿವೆ

ನಿಜಕೌಶಲ

ಪ್ರೊ.ಆರ್‌.ಜಿ.ಹೆಗಡೆ

ವ್ಯಕ್ತಿತ್ವದ ಸಂದರ್ಭದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ. ಅದೆಂದರೆ, ಮನುಷ್ಯನನ್ನು ಹೊರತುಪಡಿಸಿ ಎಲ್ಲ ಪ್ರಾಣಿಗಳೂ ‘ಪ್ರಿ-ಪ್ರೋಗ್ರಾಮ್ಡ್’ ಮನಸ್ಸನ್ನು ಹೊಂದಿವೆ. ಅಂದರೆ, ಹುಟ್ಟುವ ಮೊದಲೇ, ಜೆನೆಟಿಕ್ ಆಗಿಯೇ ಅವುಗಳ ಗುಣಗಳು ಹೀಗೆಯೇ ಎಂದು ಪ್ರಾಕೃತಿಕವಾಗಿಯೇ ನಿರ್ಧರಿಸಲ್ಪಟ್ಟಿರುತ್ತದೆ. ಅವುಗಳಿಗೆ ಬೇರೆ ರೀತಿ ವರ್ತಿಸಲು ಬರುವುದೇ ಇಲ್ಲ. ಅವುಗಳ ಮಾನಸಿಕ ಸಾಮರ್ಥ್ಯವು ಸಂಪೂರ್ಣವಾಗಿ ಆ ಜಾತಿಯ ಪ್ರಾಣಿಗಳ ಚೌಕಟ್ಟಿನಲ್ಲಿ ಮಾತ್ರ ವ್ಯವಹರಿಸುವಂತೆ ಕಟ್ಟಿಹಾಕಲ್ಪಟ್ಟಿರುತ್ತದೆ.

ಚೌಕಟ್ಟಿನ ಹೊರಗಿರುವುದನ್ನು ಕಲಿಯಲು ಅವುಗಳಿಗೆ ಬರುವುದೇ ಇಲ್ಲ. ಉದಾಹರಣೆಗೆ ಒಂದು ಹುಲಿಯ ಗುಣಗಳು ಅದಕ್ಕೆ ಹುಟ್ಟಿದ ಮರಿಗೆ ಜೈವಿಕವಾಗಿ ಆಗಿ ಬಂದಿರುತ್ತವೆ; ಅವನ್ನು ತಪ್ಪಿಸಿಕೊಳ್ಳಲು ಅದಕ್ಕೆ ಬರುವುದೇ ಇಲ್ಲ. ಹುಟ್ಟಿನಿಂದ ಬಂದಿರುವ ಗುಣಗಳನ್ನೇ ಆ ಹುಲಿ ಸಾಯುವವರೆಗೂ ಹೊಂದಿರುತ್ತದೆ, ಅದು ಬದಲಾಗುವು ದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಒಂದು ಹುಲಿಗೆ ಸಂತನಾಗಲಾಗದು, ದೈವೀಶಕ್ತಿಯನ್ನು ಪಡೆದುಕೊಳ್ಳ ಲಾಗದು, ‘ಶ್ರೇಷ್ಠಹುಲಿ’ ಎನಿಸಿಕೊಳ್ಳಲಾಗದು, ಹುಲಿಗಳ ಮಹಾನಾಯಕನಾಗಿ ಬೆಳೆದು ನಿಂತು ಎಲ್ಲ ಹುಲಿಗಳ ಬದುಕನ್ನು ಸುಧಾರಿಸಲಾಗದು. ಅದಕ್ಕೆ ತನ್ನ ವ್ಯಕ್ತಿತ್ವದ ಭಾಗವೇ ಆಗಿಹೋಗಿರುವ ಮಿತಿಗಳನ್ನು ದಾಟಲಾಗುವುದೇ ಇಲ್ಲ. ಹುಲಿ ಹುಲಿಯೇ!

ಅದು ಒಂದು ಪೂರ್ವನಿರ್ಧಾರಿತವಾದ, ಬದಲಾಯಿಸಲಾಗದ ಮನಸ್ಸನ್ನು ಹೊಂದಿಬಿಟ್ಟಿರುತ್ತದೆ. ಹುಲಿಯೊಂದೇ ಅಲ್ಲ, ಎಲ್ಲ ಪ್ರಾಣಿಗಳೂ ಹೀಗೆಯೇ- ಜೈವಿಕವಾಗಿ ಪ್ರಿ-ಪ್ರೋಗ್ರಾಮ್ಡ್ ಆಗಿ ಹುಟ್ಟಿರುವಂಥವು. ತಮ್ಮ ಶಾರೀರಿಕ, ಮಾನಸಿಕ ಮಿತಿಗಳನ್ನು ದಾಟಲು ಅವಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಮನುಷ್ಯನ ವ್ಯಕ್ತಿತ್ವ ಹಾಗಲ್ಲ. ಸಿಗ್ಮಂಡ್ ಫ್ರಾಯ್ಡ್ ಎಂಬ ಮನಶ್ಶಾಸ್ತ್ರಜ್ಞನ ಪ್ರಕಾರ, ಮನುಷ್ಯನ ಮಿದುಳಿನಲ್ಲಿ ನಮಗೆ ಇನ್ನೂ ಅರ್ಥವಾಗಿರದ ಕತ್ತಲ ಭೂಖಂಡಗಳಿವೆ.

ಅಂದರೆ, ಇಲ್ಲಿಯವರೆಗೆ ನಮಗೆ ಗೊತ್ತೇ ಇಲ್ಲದ ಚಟುವಟಿಕೆಗಳನ್ನು ಉತ್ತೇಜಿಸಬಲ್ಲ, ಹುಟ್ಟುಹಾಕಿಬಿಡಬಲ್ಲ
ಭಾಗಗಳು ನಮ್ಮೊಳಗಿವೆ, ಅಪರಿಮಿತ ಸಾಧ್ಯತೆಗಳಿವೆ. ಮನುಷ್ಯನ ಮನಸ್ಸಿನ ಅದ್ಭುತವೆಂದರೆ ಆತ ಹೇಗೆ ಬೇಕಾ ದರೂ ಆಗಬಹುದು- ಸಂತ, ವಿರಕ್ತ, ಕೊಲೆಗಾರ, ರಾಜಕಾರಣಿ, ಕಲಾವಿದ ಹೀಗೆ. ಆತ ಯಾವುದೇ ವೃತ್ತಿ ಆಯ್ದು ಕೊಂಡು ತನ್ನ ದಿಗಂತವನ್ನೇ ವಿಸ್ತರಿಸಿಕೊಳ್ಳಬಹುದು. ಷೇಕ್ಸ್‌ಪಿಯರ್ ನಂತೆ ಮಹಾನ್ ಬರಹಗಾರನಾಗಿ, ಐನ್‌ಸ್ಟೀನ್‌ನಂತೆ ವಿಜ್ಞಾನಿಯಾಗಿ ಅರಿವಿನ ಪರಿಧಿಯನ್ನು ವಿಸ್ತರಿಸಬಹುದು. ಆತ ಹೀಗೆ ಏನು ಬೇಕಾದರೂ ಆಗಬಲ್ಲ ಸಾಧ್ಯತೆಗಳನ್ನು, ‘ಕಾಗ್ನಿಟಿವ್’ ಸಾಮರ್ಥ್ಯವನ್ನು ಮನುಷ್ಯನ ಮಿದುಳು ಹೊಂದಿರುತ್ತದೆ.

ಇದು ಮಾನವ ವ್ಯಕ್ತಿತ್ವ ವಿಕಸನದ ಸಾಧ್ಯತೆಯ ಮೂಲ. ಮನಸ್ಸು ಹೀಗೆ ಒದಗಿಸುವ ಸಾಧ್ಯತೆಗಳು ವ್ಯಕ್ತಿತ್ವ
ವಿಕಸನದ ಪರಿಕಲ್ಪನೆಯ ಆಧಾರಸ್ತಂಭ.

ಹೀಗಾಗಿಯೇ ಷೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್’ ನಾಟಕದಲ್ಲಿ ‘ಮನುಷ್ಯ ಪ್ರಾಣಿ ಎಂಥಾ ಅದ್ಭುತ!’ ಎಂಬ ಮಾತು ಬರುತ್ತದೆ- ಇದು ಮನುಷ್ಯ ಜಗತ್ತಿನ ಕುರಿತ ಆಳವಾದ ಒಳನೋಟದ ಮಾತು. ಸಾಧ್ಯತೆಗಳು ಇಷ್ಟಕ್ಕೇ ಸೀಮಿತ ಗೊಂಡಿಲ್ಲ. ಈಗಾಗಲೇ ಹೇಳಿದಂತೆ ಮನುಷ್ಯನ ಆಯ್ಕೆಯಲ್ಲಿ ವಿಪುಲ ಅವಕಾಶ ಗಳಿವೆ. ಹೀಗೆ ಮಾಡಿಕೊಂಡ ಆಯ್ಕೆಯಲ್ಲಿಯೂ ಆತ ತನ್ನನ್ನು ಸತತವಾಗಿ ಅಭಿವೃದ್ಧಿಗೊಳಿಸಿಕೊಳ್ಳುತ್ತಲೇ ಸಾಗಿ ಬದುಕಿನ ಶ್ರೇಷ್ಠತೆಯತ್ತ ಪಯಣಿಸಲು ಸಾಧ್ಯವಾಗುತ್ತದೆ. ಕಾಡುಮನುಷ್ಯ ಆಧುನಿಕ ಮಾನವನಾಗಿ ಬದಲಾಗಿದ್ದು ಹೀಗೆ, ಗುಡಿಸಲುಗಳಿಂದ ಆಧುನಿಕ ಮಹಲುಗಳಿಗೆ ಅವನ ಜೀವನ ಪ್ರಗತಿಹೊಂದಿದ್ದು ಹೀಗೆ.

ತನ್ನ ಬದುಕಿನ ವಿಧಾನವನ್ನು ಪ್ರತಿದಿನವೂ ಉತ್ತಮಗೊಳಿಸಿಕೊಳ್ಳುವ ಸಾಧ್ಯತೆ ಮನುಷ್ಯನಿಗಿದೆ. ಜೀವನವನ್ನು
ಸಾರ್ಥಕವಾಗಿ ಕಳೆಯುವ ಸಲುವಾಗಿ ಅಷ್ಟಾಂಗ ಮಾರ್ಗಗಳ ದಾರಿಯನ್ನು ಬುದ್ಧ ತೋರಿಸಿದ. ಧರ್ಮಗಳು ಹುಟ್ಟಿ ಕೊಂಡಿದ್ದೂ ಜೀವನ ವಿಧಾನವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲೆಂದೇ. ವಿಜ್ಞಾನ ಕೂಡ ಮಾನವನ ಮನಸ್ಸಿನ ಪರಿಧಿಗಳನ್ನು ವಿಕಸಿಸುವ ಸಲುವಾಗಿ ಹುಟ್ಟಿದ್ದು. ಹಾಗೆಯೇ, ದೈಹಿಕ ಸಾಮರ್ಥ್ಯದಲ್ಲೂ ವಿಕಸನಗೊಳ್ಳುವ ಸಾಧ್ಯತೆ ಮನುಷ್ಯನಿಗಿದೆ. ಉದಾಹರಣೆಗೆ ಒಲಿಂಪಿಕ್ಸ್ ಇತಿಹಾಸದಲ್ಲಿ, ‘ಮನುಷ್ಯನು ನೂರು ಮೀಟರ್ ಓಟವನ್ನು 10 ಸೆಕೆಂಡ್‌ಗಳಿಗಿಂತ ಮುಂಚೆ ಮುಗಿಸಲು ಸಾಧ್ಯವೇ ಇಲ್ಲ, ದೈಹಿಕವಾಗಿ ಅದು ಅಸಾಧ್ಯ’ ಎಂದೇ ಹಲವಾರು ವರ್ಷಗಳ ವರೆಗೆ ಭಾವಿಸಲಾಗಿತ್ತು.

ಆದರೆ ಜಿಮ್ ಹೈನ್ಸ್ ಎಂಬ ಓಟಗಾರ 10 ಸೆಕೆಂಡುಗಳ ಒಳಗೇ 100 ಮೀ. ಓಟವನ್ನು ಪೂರ್ಣಗೊಳಿಸಿದಾಗ ಜಗತ್ತೇ ನಿಬ್ಬೆರಗಾಯಿತು; ಗಡಿಯಾರಗಳು ಸರಿಯಿವೆಯೇ ಇಲ್ಲವೇ ಎಂದು ಕೂಡ ಪರಿಶೀಲಿಸಲಾಗಿತ್ತು. ಒಂದು ವಿಷಯ ವಂತೂ ಸ್ಪಷ್ಟ- ಮನುಷ್ಯನಿಗೆ ಮಿತಿಗಳನ್ನು ಹೀಗೆ ಎಂದು ನಿರ್ಧರಿಸುವುದು ಕಷ್ಟ. ಈಜಿಪ್ಟ್ ನ ಪಿರಮಿಡ್‌ಗಳಿಗಾಗಿ ಬಳಸಲಾದ ದೊಡ್ಡ ಗಾತ್ರದ ಕಲ್ಲುಗಳನ್ನು ಅಂದಿನ ಜನರು ಮೇಲೆ ಸಾಗಿಸಿದ್ದು ಹೇಗೆಂಬುದು ಇಂದಿಗೂ ಅರ್ಥ ವಾಗುತ್ತಿಲ್ಲ. ಮನುಷ್ಯರೇ ಕೈಯಿಂದ ಎತ್ತಿ ಸಾಗಿಸಿದ್ದಿರಬಹುದು, ಏಕೆಂದರೆ ಮಾನವ ಜಗತ್ತಿನಲ್ಲಿ ಎಲ್ಲವೂ ಸಾಧ್ಯ ವಿದೆ. ಆದರೆ, ಹಲವೊಮ್ಮೆ ನಮ್ಮ ಸಾಮರ್ಥ್ಯವೇ ನಮಗೆ ತಿಳಿದಿರುವುದಿಲ್ಲ. ವ್ಯಕ್ತಿತ್ವ ವಿಕಸನದ ಹಾದಿಗಳ ಮೂಲಕ ಇಂಥ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಿದೆ.

ಮಾತ್ರವಲ್ಲ, ಸಾಮರ್ಥ್ಯದ ವರ್ಧನೆಯೂ ಸಾಧ್ಯವಿದೆ. ಪಾಕಿಸ್ತಾನದ ಜಹಾಂಗೀರ್ ಖಾನ್‌ಗೆ ಸ್ಕ್ಯಾಷ್ ಆಟಗಾರ ನಾಗುವ ಬಯಕೆಯಿತ್ತು; ಆದರೆ ಆತನ ಕಾಲುಗಳು ಬಲಿತಿರಲಿಲ್ಲ. ದೈಹಿಕ ಸಿದ್ಧತೆಗಿಂತಲೂ ಮೊದಲು ಆತನ ಆಲೋಚನಾಕ್ರಮವನ್ನು ತಿರುಗಿಸುವ ಅಗತ್ಯವಿತ್ತು. ಅಂಥ ತರಬೇತಿಯನ್ನು ಆತನಿಗೆ ನೀಡಿದಾಗ ಅದು ಸಾಧ್ಯ ವಾಯಿತು. ನಂತರ ಆತ ಜಾಗತಿಕ ಚಾಂಪಿಯನ್ ಆಗಿಹೋದ. ಹೀಗೆ ಆಲೋಚನಾ ಕ್ರಮವನ್ನು ದಾರಿಯಲ್ಲಿಟ್ಟು ಕೊಂಡು ಮಾನಸಿಕ ಶಕ್ತಿಯನ್ನು ಹೊರಹರಿಯಬಿಟ್ಟರೆ, ವ್ಯಕ್ತಿತ್ವದೊಳಗೆ ಅಪಾರಶಕ್ತಿ ಹುಟ್ಟಿಕೊಳ್ಳುತ್ತದೆ. ಯೋಜನೆ ಗಳನ್ನು ಹರಿಬಿಟ್ಟು ಮನಸ್ಸನ್ನು ಒಳಗಡೆಗೆ ತಿರುಗಿಸಿದರೆ ಬೆಳಕು ಹುಟ್ಟಿಕೊಳ್ಳುತ್ತದೆ. ಅದೇ ಬೆಳಕು ಜೀವನವನ್ನು ಬೆಳಗುತ್ತದೆ. ಅದುವೇ ವ್ಯಕ್ತಿತ್ವ ವಿಕಸನ.

ಹಾಗೆಂದ ಮಾತ್ರಕ್ಕೆ ವ್ಯಕ್ತಿತ್ವ ವಿಕಸನ ಎಂದರೆ ಒಂದೇ ರೀತಿಯ (ವಿದೇಶಿ) ಮಾದರಿಯಲ್ಲಿ ಸಿದ್ಧಗೊಳಿಸುವುದು
ಅಲ್ಲವೇ ಅಲ್ಲ; ಅದು ಆತ್ಮಶಕ್ತಿಯ ಚೇತನ, ಧಿಃಶಕ್ತಿಯ ಜಾಗೃತಗೊಳಿಸುವಿಕೆ. ಇದು ವ್ಯಕ್ತಿಯೊಬ್ಬ ತನ್ನ ವ್ಯಕ್ತಿತ್ವ ವನ್ನು ಪೂರ್ತಿಯಾಗಿ ಅರಳಿಸಿಕೊಳ್ಳಲು ಕಲಿಯುವ ಪ್ರಕ್ರಿಯೆ, ತಾನು ತಾನಾಗಿ ಉಳಿದೇ ಅರಳಿಕೊಳ್ಳಲು ಕಲಿಯುವ ಪ್ರಕ್ರಿಯೆ. ಇದು ಇಂದು ಎಲ್ಲ ಯಶಸ್ವಿ ವ್ಯಕ್ತಿಗಳಿಗೆ ಗೊತ್ತಾಗಿದೆ; ಹಾಗಾಗಿಯೇ ಸದಾ ವಿಪರೀತ ಒತ್ತಡದಲ್ಲಿರುವ ಆಟಗಾರರು, ಅಧಿಕಾರಿಗಳು ಹಲವು ರೀತಿಯ ವ್ಯಕ್ತಿತ್ವ ವಿಕಸನ ತರಬೇತಿಗಳಲ್ಲಿ ಭಾಗವಹಿಸುತ್ತಿರುವುದು.

ಇಲ್ಲಿ ಇನ್ನೊಂದು ಮಾತು ಹೇಳಬೇಕು. ವ್ಯಕ್ತಿತ್ವ ವಿಕಸನದ ತರಬೇತಿಯ ಪಠ್ಯಕ್ರಮಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಅಳವಡಿಸುವ ಅಗತ್ಯವಿದೆ. ಏಕೆಂದರೆ ನಮ್ಮ ವ್ಯವಸ್ಥೆಯು ಬಹುತೇಕವಾಗಿ ಮನಸ್ಸುಗಳನ್ನು ಅರಳಿಸುವ ಬದಲು ಕುಗ್ಗಿಸುವ ವ್ಯವಸ್ಥೆಯಾಗಿ ಬದಲಾಗಿಹೋಗಿದೆ. ‘ಸುಮ್ಮನೆ ಕುಳಿತುಕೊಳ್ಳು ವುದು’ ಶಾಲೆಯಲ್ಲಿ ಮಕ್ಕಳಿಗೆ ಕಲಿಸಲಾಗುವ ಮೊದಲ ಪಾಠ. ಸುಮಾರು 15 ವರ್ಷಗಳ ಕಾಲ ಅವರು ತರಗತಿ ಯೊಳಗೆ ಮೌನವಾಗಿ ಕುಳಿತಿರಬೇಕು. ಕೇವಲ ಹೇಳಿದ್ದನ್ನು ಕೇಳಿ ಅದರಂತೆ ಬರೆಯುವ ಕಲೆಯನ್ನು ಅವರಿಗೆ ಕಲಿಸಲಾಗುತ್ತಿದೆ. ಇಲ್ಲಿ ನೆನಪಿನ ಶಕ್ತಿ ಮತ್ತು ಅನುಕರಣೆಯ ಮೇಲೆ ಒತ್ತುನೀಡಲಾಗುತ್ತಿದೆ. ಕುತೂಹಲ, ಹುಡುಗಾಟ, ಪ್ರಶ್ನಿಸುವುದು, ವಿರೋಧಿಸುವುದು, ವಿಭಿನ್ನ ವಾಗಿ ಆಲೋಚಿಸುವುದು, ವಿರುದ್ಧವಾಗಿ ಯೋಚಿಸುವುದು ಇವಕ್ಕೆಲ್ಲ ಇಲ್ಲಿ ಅವಕಾಶವೇ ಇಲ್ಲ.

ಹಾಗೆಯೇ ನಮ್ಮ ಕಲಿಕಾ ವ್ಯವಸ್ಥೆ ಅಕಡೆಮಿಕ್ ಕೇಂದ್ರಿತವಾದುದು. ಶಾರೀರಿಕ, ಮಾನಸಿಕ ಆರೋಗ್ಯದ ಬೆಳವಣಿಗೆ ಮತ್ತು ಸಾಮರ್ಥ್ಯ ವೃದ್ಧಿಯತ್ತ ಅಲ್ಲಿ ಲಕ್ಷ್ಯ ಇರುವುದೇ ಇಲ್ಲ. ಲಕ್ಷಾಂತರ ಶಾಲೆಗಳಿಗೆ ಆಟದ ಮೈದಾನಗಳೇ ಇಲ್ಲ. ಲೈಬ್ರರಿಗಳು ಅಥವಾ ಇಂಟರ್‌ನೆಟ್ ವ್ಯವಸ್ಥೆಗಳೂ ದುಸ್ತರ. ಹೆಣ್ಣು ಮಕ್ಕಳ ಅವಸ್ಥೆಯನ್ನಂತೂ ಕೇಳುವುದೇ ಬೇಡ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸ್ವಸಹಾಯ ಸಂಘಗಳು, ಉದ್ಯೋಗದ ಸ್ಥಳಗಳಲ್ಲಿ ವ್ಯಕ್ತಿತ್ವ ವಿಕಸನದ ಪರಿಕಲ್ಪನೆಗಳನ್ನು ತೆರೆದಿಡುವ ಅಗತ್ಯವಿದೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ‘ಸಾಫ್ಟ್‌ ಸ್ಕಿಲ್
’ಗಳನ್ನು ಬೋಧಿಸುವ ಅಗತ್ಯವಿದೆ.

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನಾ ಸಮಾಲೋಚಕರು)

ಇದನ್ನೂ ಓದಿ: Prof R G Hegde Column: ಪಕ್ವವಾದ ವ್ಯಕ್ತಿತ್ವವೇ ಸಂವಹನ ಕಲೆಯ ಮೂಲ