Wednesday, 11th December 2024

ಮನುಷ್ಯನಿಗಿಂತ ಮನುಷ್ಯತ್ಯವೇ ಮಿಗಿಲು

ಅಭಿಮತ

ರವಿ ಚಿಕ್ಕನಾಯಕನಹಳ್ಳಿ

ನಾವು ಅದ್ಯಾವ ಕಾಲಘಟ್ಟದಲ್ಲಿ ಜೀವನಮಾಡುತ್ತಿದ್ದೇವೆಂದರೆ ಫೇಸ್‌ಬುಕ್ ನಲ್ಲಿ ಒಂದು ಫೋಟೋ ಬಂದರೆ ಆ ಫೋಟೋ ದಲ್ಲಿಯ ವ್ಯಕ್ತಿ ಮೃತನಾದ ಎಂತಲೇ RIP ಎಂದು ಟೈಪ್ ಮಾಡಿ ಬಿಸುಡುತ್ತೇವೆ. ಯಾವುದಾದರೂ ಒಂದು ಫೋನ್ ಕಾಲ್ ಬಂದರೆ ಏನೋ ಎಂತೋ ಎಂದು ಹೆದರುವ ಕಾಲಘಟ್ಟಕ್ಕೆ ನಾವು ನಿಂತಿದ್ದೇವೆ.

ಅಯ್ಯೋ ಮನುಷ್ಯ ಜೀವನಕ್ಕೊಂದು ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ಮನುಷ್ಯತ್ವವಲ್ಲದೆ ಮತ್ತೇನೂ ನಿಲ್ಲುತ್ತಿಲ್ಲ. ಮನುಷ್ಯ ತ್ವವೇ ಇಲ್ಲಿ ಧರ್ಮವಾಗಿದೆ. ನೈಜ ಧರ್ಮ ಎಂಬುದೇ ಮಾನವೀಯತೆಯಾಗಿದೆ. ಇಷ್ಠೆ ನಾನು ಏಕೆ ಹೇಳಬೇಕು ? ಇದಕ್ಕೊಂದು ಕಾರಣವೂ ಇದೆ. ಇದನ್ನು ಮುಂದೆ ಓದಿ !

ಮೊನ್ನೆ ಮೊನ್ನೆ ಬೆಂಗಳೂರುವಿನಲ್ಲಿರುವ ನನ್ನ ತಂಗಿ ಅಚಾನಕ್ ಆಗಿ ಪೋನ್ ಕಾಲ್ ಮಾಡಿದ್ದಳು. ಅವಳ ಧ್ವನಿಯಲ್ಲಿ ಆರ್ದ್ಯತೆ, ಆತಂಕ, ನಡುಕಗಳು ಕಂಡು ಬರುತ್ತಿದ್ದವು. ಆಗ ಸಂಜೆ ಸುಮಾರು 07:00 ಗಂಟೆ ಆಗಿದ್ದಿರಬಹುದು. ಅವಳ ಎದೆಯ
ಗೂಡಿನಲ್ಲಿ ಏನೋ ಆತಂಕದ ಕರಿನೆರಳು ಕಾಣುತ್ತಿದ್ದು, ಮಾತನಾಡುವಾಗ ಗಂಟಲಲ್ಲಿ ಪಸೆ ಇತ್ತೆಂದೆನಿಸುತ್ತಿತ್ತು. ನಾನು ಏಕಮ್ಮ ಆತಂಕ ? ಏನಾಗಿದೆ ? ಎಂದು ಕುಶಲೋಪರಿ ಕೇಳಿದೆ. ಅದಕ್ಕವಳು ರವೀಶಣ್ಣ ಮಂಜೇಶ್ ಗೆ ಒಂದೆರಡು ದಿನದಿಂದ ಎದೆ ನೋವು ಬರುತ್ತಾ ಇತ್ತು.

ಇವತ್ತು ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕಪ್ ಮಾಡಿಸಿದೆ, ಆಗ ಚೆಕಪ್ ಮಾಡಿದ ಡಾಕ್ಟರ್ ಅವರು ಇದು ಹೃದಯ ಸಂಬಂಧಿ ಕಾಯಿಲೆ ಇದೆ. ಈ ಕೂಡಲೇ ನೀವು ಜಯದೇವ ಹೃದ್ರೋಗ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಎಂದರು. ಹಾಗಾಗಿ ನಾನು ಮಂಜೇಶ್ ಅವರನ್ನು ಕರೆದುಕೊಂಡು ಜಯದೇವ ಆಸ್ಪತ್ರೆಗೆ ಬಂದಿದ್ದೇನೆ ರವೀಶಣ್ಣ, ಇಲ್ಲಿ ಕೋವಿಡ್
ಇರುವುದರಿಂದ ಆಸ್ಪತ್ರೆ ರಶ್ ಇದೆ, ಇವರಿಗೆ ಎದೆ ನೋವು ಇದೆ, ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ರವೀಶಣ್ಣ, ನೀವೇನಾದರೂ ಸಹಾಯ ಮಾಡಬಹುದೇ ? ಎಂದು ನೋವು ಮಡಿಗಟ್ಟಿದಾ ಧ್ವನಿಯಲ್ಲಿ ಕೇಳಿದ್ದಳು.

ನಾನು ಕೂಡಲೇ ನನಗೆ ಜಯದೇವ ಆಸ್ಪತ್ರೆಯಲ್ಲಿ ಯಾರೂ ಪರಿಚಯ ಇಲ್ಲ, ಆದರೆ ಪರಿಚಯದವರ ಮುಖಾಂತರ ಜಯದೇವ ಆಸ್ಪತ್ರೆಯವರನ್ನು ಸಂಪರ್ಕಿಸಿ ಏನಾದರೂ ಒಂದು ವ್ಯವಸ್ಥೆ ಮಾಡುವೆ ಹೆದರಬೇಡಮ್ಮ ಎಂದು ಅವಳಿಗೆ ಧೈರ್ಯ ತುಂಬಿದ್ದೆ.
ಸರಿಯಾದ ವ್ಯವಸ್ಥೆ ಆಗುವವರೆಗೂ ಮಂಜೇಶ್ ಅವರನ್ನು ಸರಿಯಾಗಿ ನೋಡಿಕೋ ಎಂದು ಹೇಳಿ ನಾನು ಕೂಡಲೇ ಕಾರ್ಯ ಪ್ರವೃತ್ತನಾದೆ.

ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜು ನಾಥ್ ಅವರಿಗೆ ಅವರಿಗೆ ನನ್ನ ಪರಿಚಯವಿಲ್ಲ. ಅವರ ಪರಿಚಯದವರಿಂದ ನಮ್ಮ ಆತ್ಮೀಯ ಸ್ನೇಹಿತರಾದ ಒಬ್ಬ ಶಾಸಕರಿಗೆ ಕಾಲ್ ಮಾಡಿದೆ. ಪಾಪ ಅವರ ಮೊಬೈಲ್ ನನ್ನ ಕರೆಗೆ ಸಿಗದೆ ವ್ಯಾಪ್ತಿ ಪ್ರದೇಶದ ಹೊರಗಿತ್ತು. ನಂತರದಲ್ಲಿ ನನ್ನೊಬ್ಬ ಗೆಳೆಯನಿಗೆ ಕರೆ ಮಾಡಿದೆ. ಪೋನ್ ರಿಂಗ ಣಿಸಿತು, ಆದರೆ ಪುಣ್ಯಾತ್ಮ ಕಾಲ್ ರಿಸೀವ್ ಮಾಡ ಲಿಲ್ಲ.

ಆಗ ನನಗೆ ಥಟ್ ಅಂತ ನೆನಪಿಗೆ ಬಂದಿದ್ದು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೂ ಹಾಗೂ ಈಗ ಪ್ರಸ್ತುತ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತರೂ ಆದ ಡಾ. ಪಿ. ಎಸ್, ಹರ್ಷ ಅರವರು. ಕಾರಣ ಅವರೊಮ್ಮೆ ಮಾತನಾಡುವಾಗ ರಾಜ್ಯದ
ಕೋವಿಡ್ ಸಮರದಲ್ಲಿ ಮುಂಚೂಣಿಯಲ್ಲಿ ಮೂಲ ಸೌಕರ್ಯ ಒದಗಿಸುವ ಟಾನ ಮುಖ್ಯಸ್ಥರಾಗಿದ್ದಾರೆ ಎಂದು ತಿಳಿಯಿತು, ಜೊತೆಗೆ ಕೋವಿಡ್ ರೋಗಿಗಳಿಗೆ ವೆಂಟಿಲೇಟರ್ ಹಾಗೂ ಐಸಿಯು ಒದಗಿಸುವ ಬಗೆಗಿನ ನೋಡಲ್ ಆಫೀಸರ್ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಅನ್ಯ ಮಾರ್ಗವಿಲ್ಲದೆ ಡಾ. ಪಿಎಸ್. ಹರ್ಷ ಅವರಿಗೆ ಕಾಲ್ ಮಾಡಿದ್ದೆ.

ಕಾಲ್ ಮಾಡಿದಾಗ ಆರಂಭದಲ್ಲಿ ಸಿಗಲಿಲ್ಲ. ಪ್ರಯತ್ನ ವಿಫಲವಾದರೂ ಪರವಾಗಿಲ್ಲ, ಪ್ರಯೋಗ ವಿಫಲವಾಗಬಾರದು ಎಂಬ ತತ್ವದಡಿಯಲ್ಲಿ ಮಾನ್ಯ ಹರ್ಷ ಅವರಿಗೆ ನನ್ನ ವಾಟ್ಸ್ ಆಪ್‌ನಿಂದ ಒಂದು ಮೆಸೇಜ್ ಮಾಡಿ ನಡೆದಿರುವ ಘಟನೆಯ ಬಗ್ಗೆ ವಿಷಯ ತಿಳಿಸಿ ಸಹಾಯ ಮಾಡಿರೆಂದು ನಾನು ಕೋರಿ ಒಂದು ಮೆಸೇಜ್ ಹಾಕಿದೆ. ಮೆಸೇಜ್ ಮಾಡಿದ 2 ನಿಮಿಷದಲ್ಲಿಯೇ ಹರ್ಷ ಅವರಿಂದ ನನ್ನ ಮೊಬೈಲ್‌ಗೆ ಕಾಲ್ ಬಂತು. ಎಲ್ಲವನ್ನೂ ಕೇಳಿದರು.

ನಡೆದ ವಿಚಾರ, ಬೇಕಾಗಿರುವ ಸಹಯವನ್ನೆ ಅವರಲ್ಲಿ ಹೇಳಿದೆ. ಆಗ ಅವರು ನನ್ನ ತಂಗಿಯ ಗಂಡನ ಡೀಟೆಲ್ಸ್ ಕಳಿಸಲು ಹೇಳಿ
ದರು. ಅದೇ ರೀತಿ ನಾನು ಮಂಜೇಶ್ ಅವರ ಸಂಪೂರ್ಣ ಡೀಟೇಲ್ಸ್ ಕಳಿಸಿದೆ. ಆಗ ಹರ್ಷ ಅವರು ರವಿ ನಾನು ನಿನಗೆ ಕಾಲ್ ಮಾಡ್ತೇನೆ, 10 ನಿಮಿಷ ಇರು ಎಂದು ಹೇಳಿ ಪೋನ್ ಕಾಲ್ ಕಟ್ ಮಾಡಿಟ್ಟರು. ಅಷ್ಠರೊಳಗೆ ನನ್ನ ತಂಗಿಯ ಗಂಡ ಮಂಜೇಶ್ ಅವರ ಸಂಪೂರ್ಣವಾದ ಡೀಟೆಲ್ಸ ಅನ್ನು ಕಳಿಸಿಕೊಟ್ಟಿದ್ದೆ.

ಹೇಳಿದಂತೆ ಸರಿಯಾಗಿ 10 ನಿಮಿಷದೊಳಗೆ ಮತ್ತೆ ನನಗೆ ಅವರೇ ಕಾಲ್ ಮಾಡಿದ್ದರು. ಅವರು ಅದ್ಯಾವ ವೈದ್ಯರುಗಳಿಗೋ, ಪುಣ್ಯಾತ್ಮರುಗಳಿಗೆ ಮಾತಮಾಡಿದರೋ ನಾನರಿಯೆ ! ಅವರು ಮಾತನಾಡುತ್ತಾ ರವೀಶ್ ಎಲ್ಲಾ ವ್ಯವಸ್ಥೆ ಮಾಡಿದ್ದೀನಪ್ಪ ! Dont worry, ನಿಮ್ಮ ಭಾವನ ಬಗ್ಗೆ ಜಯದೇವ ಹಾಸ್ಪಿಟಲ್‌ನಲ್ಲಿ ಕೇರ್ ತಗೊಂಡಿದ್ದಾರೆ, ನಿಮ್ಮ ತಂಗಿಯ ಜೀವನ ಒಳ್ಳೆಯದಾಗಲಿ ಎಂದು ಹಾರೈಸಿ, ನಂತರ ಕುಶಲೋಪರಿ ಮಾತನಾಡಿದರು.

ಅವರಿಗೊಂದು ಮನದಾಳದ ನಮಸ್ಕಾರಗಳನ್ನು ಕೃತಜ್ಞತಾ ಮನೋಭಾವದಲ್ಲಿ ಸಮರ್ಪಿಸಿ ಪೋನ್ ಇಟ್ಟೆನು. ಕೂಡಲೇ ನನ್ನ ತಂಗಿಯ ಪೋನ್ ಕಾಲ್ ಬಂದು, ಜಯ ದೇವದಲ್ಲಿ ಬೆಡ್ ಇರುವ ವಾರ್ಡ್ ಹಾಗೂ ಎಲ್ಲಾ ಸೌಲಭ್ಯಗಳೂ ಸಿಕ್ಕಿವೆ ರವೀಶಣ್ಣ, ಎಂದು ಅವಳು ಬಹಳವೇ ಧನ್ಯತಾ ಮನೋಭಾವದಿಂದ ನನಗೆ ತಿಳಿಸಿದಳು. ಇಂದು ಮಂಜೇಶ್ ಆರೋಗ್ಯದಿಂದ ಇದ್ದಾರೆ.
ಡಾ. ಹರ್ಷ ಮೂಲತಃ ವೈದ್ಯರೂ ಕೂಡ. ವೈದ್ಯ ವೃತ್ತಿಯಿಂದ ಐಪಿಎಸ್ ಮಾಡಿರುವವರಾಗಿದ್ದು, ಪ್ರಸ್ತುತ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಆಯುಕ್ತರಾಗಿದ್ದಾರೆ.

ಇವರ ಕರ್ತವ್ಯದ ಬದ್ದತೆ ಗಮನಿಸಿ ಸರಕಾರ ಅವರನ್ನು ಈ ಕೋವಿಡ್ ವಿರುದ್ದದ ವಾರ್ ಸಮಯದಲ್ಲಿ ನೋಡಲ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವದರಿಂದ ಈ ಕೆಲಸ ಬಹಳ ಸಲೀಸಾಗಿ ನಡೆಯುತ್ತಲಿದೆ ಎಂಬುದೊಂದು ನಮ್ಮ ಆಶಾವಾದ. ಡಾ.ಹರ್ಷ ಅವರು ನೋಡಲ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅವರು ಮಾಡುತ್ತಿರುವ
ಕೆಲಸಗಳ ಬಗ್ಗೆ ಒಂದೆರಡು ಮಾತು ಹೇಳಲೇಬೇಕು.

ಏಕೆಂದರೆ, ಕುತೂಹಲದಿಂದ ಇದರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ನನಗೆ ಆಶ್ಚರ್ಯವಾಗಿದ್ದು ಮಾತ್ರವಲ್ಲ, ಅವರ ಬಗ್ಗೆ ಇದ್ದ ಗೌರವ ಇಮ್ಮಡಿಯಾಯಿತು. ಏಪ್ರಿಲ್ ಕೊನೆಯಲ್ಲಿ ಸರಕಾರ ಬೆಂಗಳೂರಿನಲ್ಲಿ ಕೋವಿಡ್ ತುರ್ತು ಚಿಕಿತ್ಸೆಗೆ ಸರ್ವ ಸೌಕರ್ಯವುಳ್ಳ ಹಾಸಿಗೆಗಳನ್ನು ಸಿದ್ದಪಡಿಸುವ ಜವಾಬ್ದಾರಿ ನೀಡಿತು. ಇದನ್ನು ಪ್ರತಿeಯಂತೆ ಸ್ವೀಕರಿಸಿದ ಹರ್ಷ ಈ ಅವಧಿಯಲ್ಲಿ ನಿರಂತರ ಮಾಡುತ್ತಿರುವ ಕಾರ್ಯಗಳು, ಅದರ ಪರಿಣಾಮಗಳು, ಇದರ ಹಿಂದಿರುವ ಅವರ ಪ್ರಯತ್ನಗಳು ಸಾಕ್ಷಿ ಹೇಳುತ್ತವೆ.

ಮೊದಲು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಟೆಕ್ಸಾಸ್ ನವರನ್ನು ಸಂಪರ್ಕಿಸಿ, ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 86 ತುರ್ತು ಚಿಕಿತ್ಸಾ ಮಾಡ್ಯುಲರ್ ಐಸಿಯು ಹಾಸಿಗೆಗಳ ಕೊಡುಗೆ ನೀಡುವಂತೆ ಮಾಡಿದರು. ಇದರ ಒಟ್ಟು ವೆಚ್ಚ ಸುಮಾರು 3 ಕೋಟಿ ರು. ಇದರಲ್ಲಿ ಮಹತ್ವದ ವಿಚಾರವೆಂದರೆ ಕೋವಿಡ್ ನಂತಹ ಗಂಭೀರ ಬಿಕ್ಕಟ್ಟಿನ ಸಮಯದಲ್ಲಿ ಇಂತಹ ಕಾರ್ಯಕ್ಕೆ ಅನುವು ಮಾಡಿಕೊಡುವುದು, ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಚಾನಲೈಸ್ ಮಾಡುವುದು ಅತ್ಯಂತ ಪ್ರಮುಖವಾದ ಅಂಶವಾಗುತ್ತದೆ.

ನಂತರ ಮೇ 2ನೇ ವಾರದಲ್ಲಿ ಎಂಬೆಸಿ ಗ್ರೂಪ್‌ನ ಕಾರ್ಪೊರೇಟ್ ಕನೆಕ್ಟ್ ಕಾರ್ಯಕ್ರಮದಡಿ ಹಲವು ಖಾಸಗಿ ಕಂಪನಿಗಳ ಸಹಯೋಗದಿಂದ ಒಟ್ಟು 69 ಐಸಿಯು ಹಾಸಿಗೆಗಳು ಮತ್ತು ಜೀವರಕ್ಷಕ ವೈದ್ಯಕೀಯ ಉಪಕರಣಗಳನ್ನು ನೀಡಲಾಯಿತು. ಇವುಗಳಲ್ಲಿ ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 24, ಮಾಗಡಿ ರಸ್ತೆ ಯಲ್ಲಿರುವ ಕುಷ್ಠರೋಗ ಆಸ್ಪತ್ರೆಯಲ್ಲಿ 25 ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಐಸಿಯು ಹಾಸಿಗೆಗಳನ್ನು ಅಳವಡಿಸಲಾಗುತ್ತಿದ್ದು, ಈ 3 ಆಸ್ಪತ್ರೆಗಳನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಗೈನ್, ಈ ಸರಕಾರಿ ಆಸ್ಪತ್ರೆಗಳಿಗೆ ಬರುವವರು ಬಡವರು, ಆರ್ಥಿಕವಾಗಿ ದುರ್ಬಲರು.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯ ಒಂದೊಂದು ರುಪಾಯಿ ಸದ್ವಿನಿಯೋಗವಾಗಬೇಕು, ಅರ್ಹರಿಗೆ ತಲುಪಬೇಕು ಎನ್ನುವ ಕಾಳಜಿ, ಕಳಕಳಿ ಈ ಪ್ರಯತ್ನಗಳ ಹಿಂದೆ ಎದ್ದು ಕಾಣುತ್ತದೆ. ಇದೇ ಮೇ 26ರಂದು ಜಾಗತಿಕ ಕಂಪನಿ ಗೋಲ್ಡ್‌ಮನ್ ಸ್ಯಾಕ್ಸ್ ಕಂಪನಿಯಿಂದ ಸುಮಾರು ಬೆಂಗಳೂರಿನ 4 ಆಸ್ಪತ್ರೆಗಳಲ್ಲಿ 250 ಹಾಸಿಗೆ ಅಳವಡಿಕೆಗೆ ಮುಂದಾಗಿದ್ದು, ಸೈಂಟ್ ಜಾ ಆಸ್ಪತ್ರೆಯಲ್ಲಿ 30 ಐಸಿಯು ಹಾಸಿಗೆಗಳು, ಪ್ರಕ್ರಿಯಾ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್ ಸೇರಿದಂತೆ ಕೋವಿಡ್ ಆರೈಕೆ ಕೇಂದ್ರದಲ್ಲಿ 50 ಹಾಸಿಗೆಗಳು, ಎಚ್ ಎಎಲ್ ಆಸ್ಪತ್ರೆಯಲ್ಲಿ 50 ಹಾಗೂ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ 120 ಎಚ್‌ಡಿಯು ಹಾಸಿಗೆಗಳನ್ನು ಅಳವಡಿಸಲಾಗುವುದು.

ಜತೆಗೆ, ರಾಜ್ಯಾದ್ಯಂತ ಏಳು ಕೋಟಿ ಮೊತ್ತದ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ವಿತರಣೆಯನ್ನೂ ಕೂಡ ಇದೇ ಕಂಪನಿ ಮಾಡಲಿದೆ.
ಮೇಲ್ಕಂಡ ಯಾವುದೇ ಕಾರ್ಯದಲ್ಲಿ ಸರಕಾರದ ಒಂದು ರುಪಾಯಿ ಖರ್ಚಿಲ್ಲದೆ, ಸಾವಿರಾರು ಜನರ ಜೀವ ಉಳಿಸುವ ಕಾರ್ಯದ ನೊಗ ಹೊತ್ತು ದುಡಿಯುತ್ತಿರುವ ಹರ್ಷ ಅವರ ಜವಾಬ್ದಾರಿಗೆ ಹ್ಯಾಟ್ಸ್‌ಆಫ್ ಅನ್ನು ನಾವು ಹೇಳಲೇಬೇಕು.

ಇಷ್ಟು ಮಾತ್ರವಲ್ಲ, ಬೇರೆ ಬೇರೆ ಕಾರ್ಪೊರೇಟ್ ದಾನಿಗಳಿಂದ ರಾಜ್ಯಾದ್ಯಂತ ವಿತರಿಸಲು 180 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳು ಅದೆಷ್ಟೋ ಜನರ ಜೀವ ಉಳಿಸಲಿದೆ. ಯಲಹಂಕ, ಕೆ.ಆರ್.ಪುರಂ ಮತ್ತು ಆನೇಕಲ್ ಸರಕಾರಿ ಆಸ್ಪತ್ರೆಗಳನ್ನು ತಲಾ 100 ಹಾಸಿಗೆಗಳ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸುವ ಕಾರ್ಯ ನಡೆಸಲಾಗುತ್ತಿದೆ. ಜತೆಗೆ ಐಐಟಿ ಕಾನ್ಪುರದ ಸಹಯೋಗದಲ್ಲಿ ಒಂದು ಕೋಟಿ ವೆಚ್ಚದ 500 lpm ಆಕ್ಸಿಜನ್ ಜೆನರೇಟರ್ ಅನ್ನು ಕೆ.ಆರ್.ಪುರ ಆಸ್ಪತ್ರೆಯಲ್ಲಿ ಅಳವಡಿಸಲಾಗುತ್ತಿದೆ.

ಇಷ್ಟು ವಿವರವಾಗಿ ಇದನ್ನೆ ಹೇಳುವ ಉದ್ದೇಶ – ಈ ಕರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಂದು ಹಾಸಿಗೆ ಸಿಗುವುದಕ್ಕೆ ನಾನು ಪಟ್ಟ ಶ್ರಮ, ಹಾಗೆ ಅಗತ್ಯವಿರುವವರಿಗೆ ಅಗತ್ಯ ಚಿಕಿತ್ಸಾ ಸೌಕರ್ಯವುಳ್ಳ ಹಾಸಿಗೆ ದೊರೆಯುವುದು – ಒಂದೊಂದು ಜೀವ ಉಳಿಸುವುದೂ ಕೂಡ ದೊಡ್ಡ ಜವಾಬ್ದಾರಿ, ನಮ್ಮ ಅರೋಗ್ಯ ಕ್ಷೇತ್ರದ ಮೇಲೆ ಇಷ್ಟು ಒತ್ತಡ ಇರುವಾಗ, ಹೀಗೆ ಖಾಸಗಿ ಸಹಯೋಗವನ್ನು ಪಡೆದು, ಇಷ್ಟು ಕಡಿಮೆ ಅವಧಿಯಲ್ಲಿ, ಸರ್ಕಾರಕ್ಕೆ ಆರ್ಥಿಕ ಹೊರೆ ಹೊರಿಸದೆ, ಇಷ್ಟೆ ಸೌಕರ್ಯಗಳನ್ನು
ಒದಗಿಸುವುದು, ತುರ್ತು ಜಿಕಿತ್ಸೆ ಅಗತ್ಯವಿರುವ ಅದೆಷ್ಟು ಜನರಿಗೆ ನೆರವಾಗಲಿದೆ ಎಂದು ಒಮ್ಮೆ ಯೋಚಿಸಿ ನೋಡಿ!

ನೋಡಲ್ ಅಧಿಕಾರಿಯಾಗಿ ಡಾ. ಹರ್ಷ ಅವರ ಜವಾಬ್ದಾರಿ, ಅತ್ಯಲ್ಪ ಸಮಯದಲ್ಲಿ, ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಹೆಚ್ಚಿನ ಸೌಕರ್ಯ ಕಲ್ಪಿಸುವುದಾಗಿದ್ದರೂ, ಸರ್ಕಾರದಿಂದ ಹಣಕಾಸು ನೆರವಿಲ್ಲದೆ, ಈ ಅವಧಿಯಲ್ಲಿ ಅವರು ಮಾಡುತ್ತಿರುವ ಕಾರ್ಯಗಳು, ಅದರ ಪರಿಣಾಮದ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಲ್ಲಿ ನೆರವಾಗುತ್ತಾ, ಆಮೂಲಕ ಅಮೂಲ್ಯ ಜೀವ ಉಳಿಸುವ ಈ ಕಾರ್ಯದಲ್ಲಿ ಅವರು ಸಂಪೂರ್ಣ
ಯಶಸ್ವಿಯಾಗಲಿ ಎನ್ನುವುದೇ ನಮ್ಮ ಹಾರೈಕೆ.

ಸುದ್ದಿಗಾಗಿ ಕೆಲಸ ಮಾಡದೇ, ಮಾಡಿದ ಕೆಲಸಗಳೇ ಸುದ್ದಿಯಾಗುವಂತಿರುವುದು ಅಪರೂಪ. ಅಂತಹವರ ಸಾಲಿಗೆ ಡಾ. ಪಿ ಎಸ್ ಹರ್ಷ ಸೇರುತ್ತಾರೆ.