Friday, 20th September 2024

ಮಾನವೀಯತೆಯೇ ಬದುಕಿನ ಉಸಿರಾಗಲಿ

ಹಿತಚಿಂತನೆ

ಮಹಾದೇವ ಬಸರಕೋಡ

ಮೂಲತಃ ಸುಖಾನ್ವೇಷಿಯಾದ ಮಾನವ ಸಾಧ್ಯವಾದಷ್ಟು ಸುರಕ್ಷತೆಯ ಬದುಕನ್ನು ಬಯಸುತ್ತಾನೆ. ತನ್ನ ಬದುಕು ಯಾವಾಗಲೂ ಇನ್ನಷ್ಟು ಸುಂದರವಾಗಿ,
ಸುಖಮಯವಾಗಿ ರೂಪುಗೊಳ್ಳಬೇಕೆಂದು ಕನಸು ಕಾಣುವ ಆತ, ಅದನ್ನು ನನಸಾಗಿಸುವ ದಿಸೆಯಲ್ಲಿ ಹೊಸದಾರಿಗಳನ್ನು ಅನ್ವೇಷಿಸುತ್ತಲೇ ಇರುತ್ತಾನೆ. ವೈಚಾರಿಕತೆಯ, ವೈಜ್ಞಾನಿಕತೆಯ ಮೂಸೆಯಲ್ಲಿ ಬದುಕನ್ನು ಮತ್ತೆ ಮತ್ತೆ ಪುಟಕ್ಕಿಟ್ಟು ಅದಕ್ಕೆ ಇನ್ನಷ್ಟು ಹೊಳಪು ನೀಡುವ ಯತ್ನಿಸುವುದು ಮನುಷ್ಯನಿಗೆ ಸಹಜ ಮಾತ್ರವಲ್ಲದೆ ಅನಿವಾರ್ಯ ಕೂಡ.

ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಬದುಕು ಇದಕ್ಕೆ ವಿರುದ್ಧವಾದ ದಿಸೆಯಲ್ಲಿ ಜಡಗೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಕೆಲವು ಪಾರಂಪರಿಕ ನಂಬಿಕೆಗಳನ್ನೇ ನಿತ್ಯಸತ್ಯಗಳೆಂದು ಪರಿಗಣಿಸಿ ವೈಭವೀಕರಿಸಿ, ತಮ್ಮ ಸ್ವಾರ್ಥಕ್ಕಾಗಿ ಅವನ್ನು ಇನ್ನಷ್ಟು ವಿರೂಪಗೊಳಿಸುವ ಹುನ್ನಾರದಲ್ಲಿ ಕೆಲವರು
ವ್ಯಸ್ತರಾಗಿರುವುದು ಬೇಸರದ ಸಂಗತಿ. ಝೆನ್ ಗುರುಗಳೊಬ್ಬರು ತಮ್ಮ ಆಶ್ರಮದಲ್ಲಿ ಬೆಕ್ಕೊಂದನ್ನು ತುಂಬಾ ಮುದ್ದಿನಿಂದಲೇ ಸಾಕಿದ್ದರು. ಅದು ಕೂಡ
ಯಾವಾಗಲೂ ಅವರ ಕಾಲಬಳಿಯಲ್ಲೇ ಇರುತ್ತಿತ್ತು.

ಗುರುಗಳು ಪ್ರವಚನ ನೀಡುವಾಗಲೂ ಅದು ‘ಮಿಯಾಂವ್’ ಎಂದು ಸದ್ದುಮಾಡುತ್ತ ಅವರ ಸುತ್ತಮುತ್ತಲೇ ಸುಳಿದಾಡುತ್ತಿದ್ದುದರಿಂದ ಪ್ರವಚನ ಕಾರ್ಯಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಪ್ರವಚನ ಪ್ರಾರಂಭವಾಗುವ ಸಮಯದಲ್ಲಿ ಅವರ ಶಿಷ್ಯರು ಆ ಬೆಕ್ಕನ್ನು ಪಕ್ಕದ ಕೋಣೆಯಲ್ಲಿ ಕಟ್ಟಿಹಾಕುತ್ತಿದ್ದರು. ಪ್ರತಿ ಪ್ರವಚನದ ವೇಳೆಯೂ ಈ ಪರಿಪಾಠ ಬೆಳೆದುಕೊಂಡು ಬಂದಿತ್ತು. ಒಂದು ದಿನ ಗುರುಗಳು ದೇಹತ್ಯಾಗ ಮಾಡಿದಾಗ, ಅವರ ಹಿರಿಯ ಶಿಷ್ಯ ಪ್ರವಚನ ಕಾರ್ಯವನ್ನು ಮುಂದುವರಿಸಿದರು. ಅವರ ಪ್ರವಚನದ ವೇಳೆಯಲ್ಲೂ ಅವರ ಶಿಷ್ಯರು ಬೆಕ್ಕನ್ನು ಪಕ್ಕದ ಕೋಣೆಯಲ್ಲಿ ಕಟ್ಟಿಹಾಕುತ್ತಿದ್ದರು.

ಅದೊಂದು ದಿನ ಬೆಕ್ಕು ಸಹಜವಾಗಿ ಪ್ರಾಣಬಿಟ್ಟಿತು. ಮರುದಿನ ಪ್ರವಚನ ಪ್ರಾರಂಭಿಸುವ ಸಮಯವಾದಾಗ ಅಲ್ಲಿದ್ದ ಶಿಷ್ಯರಿಗೆ ಆತಂಕ ಶುರುವಾಯಿತು. ಆಶ್ರಮದಲ್ಲಿ ಮತ್ತೊಂದು ಬೆಕ್ಕು ಇರಲಿಲ್ಲ. ‘ಬೆಕ್ಕನ್ನು ಕಟ್ಟಿಹಾಕಿದ ನಂತರವಷ್ಟೇ ಪ್ರವಚನ ಪ್ರಾರಂಭಿಸುವ ಪದ್ಧತಿಯನ್ನು ಮುರಿಯಲಾದೀತೇ?’ ಎಂಬುದು ಅವರೆಲ್ಲರ ಆತಂಕಕ್ಕೆ ಕಾರಣವಾಗಿತ್ತು. ಆಗ ಶಿಷ್ಯರು ಆಶ್ರಮದಿಂದ ಹೊರಗೆ ತೆರಳಿ, ಪ್ರಯಾಸಪಟ್ಟು ಎಲ್ಲಿಂದಲೋ ಬೆಕ್ಕೊಂದನ್ನು ಹುಡುಕಿ ತಂದು ಪಕ್ಕದ
ಕೋಣೆಯಲ್ಲಿ ಕಟ್ಟಿದ ನಂತರವಷ್ಟೇ ಗುರುವಿನ ಪ್ರವಚನ ಶುರುವಾಯಿತಂತೆ!

ಯಾವುದೇ ಧರ್ಮದ ಎಲ್ಲ ನಂಬಿಕೆ/ಆಚರಣೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ; ಕಾಲಕಾಲಕ್ಕೆ ಜಡಗೊಳ್ಳುವುದು ಅವುಗಳ ಸಹಜಗುಣ. ಸಂದರ್ಭಾನುಸಾರ ವಾಗಿ ಅವನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಬೇಕಾಗುತ್ತದೆ. ಹರಿವ ನೀರು ಪಾವಿತ್ರ್ಯ ಪಡೆದುಕೊಳ್ಳುವುದು ತನ್ನ ಚಲನಶೀಲತೆಯಿಂದಲೇ ಎಂಬುದು ಅನುಭವವೇದ್ಯ ಸಂಗತಿ. ಅಂತೆಯೇ, ನಮ್ಮ ಧರ್ಮ, ದೇವರು, ಜಾತಿ, ಮತ, ಪಂಥ, ಗಡಿಗಳೆಲ್ಲ ಸಮಾಜಮುಖಿಯಾಗುವ, ಮಾನವೀಯತೆಯನ್ನು ಪೋಷಿಸುವ ದಿಸೆಯಲ್ಲಿ ಚಲನಶೀಲಗೊಳ್ಳಬೇಕು. ಅತ್ಯಂತ ಮುಂದುವರಿದ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ವಿಜ್ಞಾನದ ಅನೂಹ್ಯ ಪ್ರಗತಿಯಿಂದಾಗಿ ಬಯಸಿದ ಸವಲತ್ತು-ಸೌಕರ್ಯಗಳನ್ನು ಪಡೆವಲ್ಲಿ ಸಮರ್ಥರಾಗಿದ್ದೇವೆ, ಗ್ರಹ-ತಾರೆಗಳ ಮೂಲವನ್ನು ಜಾಲಾಡಿದ್ದೇವೆ.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವೆಂದು ತಿಳಿದು ಬಹುದಿನಗಳಾಗಿವೆ. ಜಾತಿ-ಮತ-ಪಂಥಗಳು, ಧಾರ್ಮಿಕ ಆಚರಣೆಗಳು ಆಯಾ ಭೌಗೋಳಿಕ ಪರಿಸರದ ಹಿನ್ನೆಲೆಯಲ್ಲಿ ಅಂದಂದಿನ ಕಾಲ ಘಟ್ಟಕ್ಕೆ ಜನ ಅನುಭವಿಸಿದ ಬವಣೆಗಳು, ಸಂತಸ- ಸಂಭ್ರಮಗಳ ಅನುಭವಗಳ ಹಿನ್ನೆಲೆಯಲ್ಲಿ ರೂಪುಗೊಂಡಿವೆ
ಎಂಬ ಅರಿವಿನ ಮಧ್ಯೆಯೂ ಅವುಗಳ ಬೇಲಿಯೊಳಗೆ ಬದುಕನ್ನು ಬಂಽಸಿಡುತ್ತಿದ್ದೇವೆ. ಇದರೊಳಗಿಂದ ನಮ್ಮನ್ನೆಲ್ಲ ಹೊರತರಲು ಕಾಲಕಾಲಕ್ಕೆ ಅನೇಕ ಮಹನೀಯರು ಅವತರಿಸಿದ್ದಾರೆ. ಇಂಥವರು ಬದುಕಲ್ಲಿ ಹೊಸಬಣ್ಣ ತುಂಬಲು ಹರಸಾಹಸ ಪಟ್ಟಿದ್ದರೂ ಎದೆತಟ್ಟಿಕೊಳ್ಳುವಂಥ ಪ್ರಗತಿಯೇನೂ ಇದುವರೆಗೆ ಆಗಿಲ್ಲ.

‘ಮನುಷ್ಯರೆಲ್ಲ ಸಮಾನರು’ ಎಂದು ಜಗತ್ತಿನ ಧರ್ಮ ಗಳೆಲ್ಲ ಸಾರುತ್ತವೆ. ಶಾಂತಿ, ಕರುಣೆ, ಪ್ರೀತಿ, ಸಂಯಮ, ಮಾನವೀಯತೆ, ಸಾಮಾಜಿಕ ಸ್ವಾಸ್ಥ್ಯ ಅವುಗಳ ಮೂಲದ್ರವ್ಯವಾಗಿದೆ. ಆದರೆ ವಿಶ್ವಮಾನವತೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾಪುರುಷರನ್ನೇ ಮುಂದಿಟ್ಟುಕೊಂಡು, ಅವರ ಹೆಸರಿನಲ್ಲಿಯೇ ಮನುಷ್ಯರನ್ನೆಲ್ಲ ಸಾಧ್ಯವಾದಷ್ಟು ರೀತಿಗಳಲ್ಲಿ ವಿಭಜಿಸುವ ದುಸ್ಸಾಹಸಕ್ಕೆ ಕೈಹಾಕಿದ್ದೇವೆ. ನಮ್ಮೆಲ್ಲರನ್ನೂ ಒಗ್ಗೂಡಿಸಲು ಸಮರ್ಥವಾಗಿರುವ ಸಂಸ್ಕೃತಿಯ ಸಂಯೋಜಕ ಶಕ್ತಿಯನ್ನು ಬಲಹೀನಗೊಳಿಸಿ, ಮನುಷ್ಯ-ಮನುಷ್ಯರ ನಡುವಿನ ಅಂತರವನ್ನು ಹಿರಿದು ಗೊಳಿಸುತ್ತಿದ್ದೇವೆ.

‘ನನ್ನ ಧರ್ಮವೇ ಶ್ರೇಷ್ಠ’ ಎಂಬ ಭ್ರಾಮಕತೆಯು ನಮ್ಮನ್ನು ಬಲವಾಗಿ ಬಂಧಿಸಿದೆ. ನಾವು ಹುಟ್ಟಿ ಬೆಳೆದ ಮತ-ಧರ್ಮಗಳ ಕಟ್ಟುಪಾಡುಗಳ ಬೇಲಿಯೊಳಗೆ ನಮ್ಮ ಬದುಕು ಸಿಲುಕಿ ಅಲ್ಲಿಯೇ ಗಿರಕಿ ಹೊಡೆಯುತ್ತಿದೆ. ತನ್ನ ದವಡೆಯಲ್ಲಿ ಬೇವಿನುಂಡೆಯನ್ನು ಇರಿಸಿಕೊಂಡ ಇರುವೆಯು ಸಕ್ಕರೆಯ ಬೆಟ್ಟವನ್ನು ಬಗೆದರೂ ಅದರ
ಸಿಹಿಯನ್ನು ಸವಿಯಲಾಗದೇ ‘ಸಕ್ಕರೆಯೆಲ್ಲವೂ ಕಹಿ’ ಎಂದು ಪರಿಭಾವಿಸುವ ಸ್ಥಿತಿಯಲ್ಲಿ ನಾವು ಪೂರ್ವಗ್ರಹಪೀಡಿತರಾಗಿ ಬದುಕುತ್ತಿರುವುದು ವರ್ತಮಾನದ ವಿಪರ್ಯಾಸವಾಗಿದೆ.

ಮತ್ತೊಂದೆಡೆ, ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಧಾರ್ಮಿಕ ನಂಬಿಕೆಗಳನ್ನೇ ಕೈಯಲ್ಲಿ ಸೋಟಕಗಳಾಗಿ ಹಿಡಿದು ಸಮಾಜದ ಮೇಲೆಯೇ ಅವನ್ನು ಪ್ರಯೋಗಿಸು ತ್ತಿರುವುದು ಇನ್ನೂ ಆತಂಕಕಾರಿಯಾಗಿದೆ. ಮತ್ತೊಬ್ಬರ ಅಭಿಪ್ರಾಯಗಳನ್ನು ಗೌರವಿಸದೆ, ತಮ್ಮದೇ ಸರಿ ಎಂದು ವಾದಿಸುವ ಹಠ ಹೆಚ್ಚು ತ್ತಿದೆ, ಅಸಹನೆ ತೀವ್ರವಾಗುತ್ತಿದೆ. ಹೀಗಾಗಿ ಮನುಷ್ಯನ ಸ್ವಾರ್ಥಮೂಲದ ಹಾವಸೆಯಲ್ಲಿ ಬಹುಮುಖಿ ಸಂಸ್ಕೃತಿ ಸಿಲುಕಿ ನರಳುವಂತಾಗಿದೆ. ಮತಾಂತರಗಳ ಗೊಂದಲಗಳು
ಅನಗತ್ಯವಾಗಿ ದಿನಕ್ಕೊಂದು ಆಯಾಮ ಪಡೆಯುತ್ತಿವೆ.

ಅಮಾನವೀಯ ಶ್ರೇಣೀಕರಣದ ಸೆಳೆತಕ್ಕೆ ಸಿಲುಕಿದವರು ಛಿದ್ರವಾಗಿದ್ದಾರೆ. ಮೂಲಭೂತವಾದಿಗಳ ಅಬ್ಬರದಿಂದಾಗಿ ಸಹಬಾಳ್ವೆಗೆ ಸೋಲಾಗುತ್ತಿದೆ, ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಇದಕ್ಕೆ ಪರಿಹಾರವಿಲ್ಲವೇ? ಖಂಡಿತಾ ಇದೆ. ಮನುಷ್ಯನು ವ್ಯಕ್ತಿಗತ ನೆಲೆಯಲ್ಲಿ ಔನ್ನತ್ಯದೆಡೆಗೆ ಹೆಜ್ಜೆಹಾಕುವುದರ ಜತೆಗೆ
ಮಿಕ್ಕವರಿಗೂ ಶ್ರೇಯಸ್ಸನ್ನು ಬಯಸಬೇಕಿದೆ. ಒಂದೊಂದು ಮತವೂ ಭಗವಂತನೆಡೆಗೆ ಸಾಗುವ ಹಾದಿಯೇ ಎಂಬ ಸಾರ್ವತ್ರಿಕ ಸತ್ಯವನ್ನು ಅರಿಯಬೇಕಿದೆ. ಅವೈಚಾರಿಕತೆ, ಅತಾರ್ಕಿಕ ನಡೆ, ಸ್ವಾರ್ಥಪರ ಧೋರಣೆಗಳ ಕಾರಣದಿಂದ ಮತ್ತು ಧರ್ಮದ ಹೆಸರಿನಲ್ಲಿ ಸಂಭವಿಸುವ ಸಂಘರ್ಷ- ರಕ್ತಪಾತಗಳಿಗೆ, ಅಮಾನವೀಯ ನಡೆಗಳಿಗೆ ತಡೆಹಾಕಬೇಕಿದೆ.

ನಿಶ್ಚಿತ ಮೂಢಪ್ರಜ್ಞೆಯಲ್ಲೇ ಬೇರೂರದೆ, ಅದರಿಂದ ಬಿಡುಗಡೆಗೊಂಡು ಹೊರಬರಬೇಕಿದೆ. ಮಾನವರ ಹೃದಯಗಳ ನಡುವೆ ಹಬ್ಬಿಕೊಳ್ಳುತ್ತಿರುವ ಮುಳ್ಳಿನ ಭ್ರಮಾತ್ಮಕ ಬೇಲಿಯನ್ನು ಕಿತ್ತೊಗೆಯಬೇಕಾಗಿದೆ. ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅನಗತ್ಯವಾಗಿರುವ ಅಂಶಗಳನ್ನು ನಿರಾಕರಿಸಿ ನಿಲ್ಲಬಲ್ಲ,
ಬಹುಮುಖಿ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಸಶಕ್ತ ಮನಸ್ಥಿತಿ ಎಲ್ಲರಲ್ಲೂ ನಿರ್ಮಾಣಗೊಳ್ಳಬೇಕಿದೆ. ಎಲ್ಲರನ್ನೂ ತನ್ನವ ರೆಂದು, ಸಮಾನರೆಂದು ಪರಿಗಣಿಸುವ ಉದಾರತೆ ಮೂಡಬೇಕಿದೆ. ಎಲ್ಲ ಧರ್ಮಗಳಲ್ಲಿ ಇದ್ದಿರಬಹುದಾದ ಅವಾಸ್ತವಿಕ ವಾದ ಮತ್ತು ವರ್ತಮಾನಕ್ಕೆ ಒಗ್ಗದ ಕೆಲವೊಂದು ಪರಿಕಲ್ಪನೆಗಳನ್ನು ಸಾಂದರ್ಭಿಕ ವಾಗಿ ಪರಿಷ್ಕರಣೆಗೆ ಒಳಪಡಿಸಬೇಕಿದೆ.

ಧಾರ್ಮಿಕ ನಂಬಿಕೆಗಳು ಗೊಡ್ಡು ಆಚರಣೆಗಳ ಮೂಟೆಯಾಗದೆ ಸಾಮಾಜಿಕ ಸ್ಥಿತಿಗತಿಗಳನ್ನು ಮತ್ತು ಸಮಾಜ ವಾಸಿಗಳ ಬದುಕನ್ನು ಸುಧಾರಿಸುವ ಸಾಧನ ಗಳಾಗಬೇಕಿವೆ. ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿ ಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’ ಎಂಬ ಕವಿ ಜಿ.ಎಸ್.ಶಿವರುದ್ರಪ್ಪನವರ ಸಾಲಿ ನಂತೆ, ದೇವರನ್ನು ಎಲ್ಲೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನ ಮಾಡದೆ, ಮನುಷ್ಯರಲ್ಲೇ ಅವನನ್ನು ಕಂಡುಕೊಳ್ಳುವ ಸಹೃದ ಯತೆಯನ್ನು ತೋರಬೇಕಿದೆ. ಸುತ್ತಲ ಸಹಜೀವಿಗಳೊಂದಿಗೆ ಮಾನವಪ್ರೇಮವನ್ನು ತೋರುವಷ್ಟರ ಮಟ್ಟಿಗೆ ನಮ್ಮ ನಿಲುವುಗಳು ಶಕ್ತವಾಗಬೇಕಿದೆ. ಹೊಸ ಎಚ್ಚರದಲ್ಲಿ ನಮ್ಮನ್ನು ನಾವು ವರ್ತಮಾನದ ಬದುಕಿಗೆ ತೆರೆದುಕೊಳ್ಳಬೇಕಿದೆ, ಮಾನವಪ್ರೇಮವೇ ನಮ್ಮ ಎದೆಯ ದನಿಯಾಗಬೇಕಿದೆ. ಎಲ್ಲ ಧರ್ಮಗಳ ಎಲ್ಲೆ ಮೀರಿ ಮಾನವೀಯತೆಯನ್ನು ಪೂಜಿಸುವ ಹೃದಯವಂತರು ನಾವಾಗಬೇಕಿದೆ.

(ಲೇಖಕರು ಶಿಕ್ಷಕರು)