Wednesday, 9th October 2024

ಕಾಣದ ಮೆಡಲಿಗೆ ಹಂಬಲಿಸಿದೆ ಮನ…

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್‌

ಇದು ಐದು ಬಣ್ಣದ ಬಳೆಗಳ ಆಟ. ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ, ನಿರಾಶರಾಗಿ ಮರಮರ ಮರುಗದಿರಿ. ಇದು ಜಪಾನ್ ದೇಶದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟ. ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗುದೊಮ್ಮೆ, ಮಗುದೊಮ್ಮೆ ನೋಡಿದರೆ ಇನ್ನೂ ಹತ್ತಾರು ಬಾರಿ ನೋಡಬೇಕೆಂದೆನಿಸುವ ಆಟ. ಆದರೆ ಅದಕ್ಕೆ ನಾಲ್ಕು ವರ್ಷ ಕಾಯಬೇಕು ಅಷ್ಟೇ!

ಈ ಬಾರಿ ಕರೋನಾ ಇರುವುದರಿಂದ ಇಲ್ಲಿಗೇ ಬಂದು ಬಂದು ನೋಡಿ ಎನ್ನುವಂತಿಲ್ಲ. ನಿಮ್ಮ ನಿಮ್ಮ ಮನೆಯಲ್ಲಿ ಕುಳಿತೋ, ಮೊಬೈಲ್‌ನಲ್ಲಿಯೋ ನೋಡಿ ಎಂದಷ್ಟೇ ಹೇಳಬಹುದು. ನಾಡಿದ್ದು ಜುಲೈ 23 ರಿಂದ ಅಗ 8 ರವರೆಗೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೊಟ ಕಳೆದ ವರ್ಷ ಜುಲೈ 24 ರಿಂದ ಅಗ 9 ರವರೆಗೆ ನಡೆಯ ಬೇಕಿತ್ತು. ಒಂದು ವರ್ಷ ತಡವಾಗಿಯಾದರೂ ಈ ಕ್ರೀಡಾಕೂಟ ನಡೆಯುತ್ತಿದೆಯಲ್ಲ, ಅಷ್ಟೇ ಸಾಕು. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಅತಿ ಹೆಚ್ಚು, 119 ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿ ದರೆ ಸಂಖ್ಯೆಯಲ್ಲಿ ಅಂತಹ ಗಣನೀಯ ಏರಿಕೆಯೇನೂ ಆಗಿಲ್ಲ. ಕಳೆದ ಒಲಿಂಪಿಕ್‌ನಲ್ಲಿ ಭಾರತದ 117 ಆಟಗಾ ರರು ಭಾಗವಹಿಸಿದ್ದರು, ಈ ಸಲ ಎರಡು ಹೆಚ್ಚು. ಅವರೊಂದಿಗೆ ಸುಮಾರು ನೂರು ಜನ ಅಧಿಕಾರಿಗಳು, ಸಹಾಯಕರ ತಂಡ. ಅಷ್ಟೊಂದು ಜನ ಯಾಕೆ ಹೋಗುತ್ತಾರೋ ಇದುವರೆಗೂ ಅರ್ಥ ವಾಗದ ಪ್ರಶ್ನೆ.

ಇದನ್ನು ನೋಡಿದರೆ ನಮ್ಮ ಕ್ರೀಡಾ ಪಟುಗಳು ಅಷ್ಟು ದಡ್ದರಾ ಎಂದೆನಿಸದಿರದು. ಇರಲಿ, ಇದು ಪ್ರತಿ ಕ್ರೀಡಾ ಕೂಟದ ಕಥೆ. ಆದಾಗ್ಯೂ, ಭಾರತ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಡೆದ ಮೆಡಲ್ ಗಳ ಸಂಖ್ಯೆ ನೋಡಿದರೆ ನಮಗೆ ಸಿಗುವುದು ನಿರಾಸೆ, ನಿರಾಸೆ ಮತ್ತು ತೀವ್ರ ನಿರಾಸೆ. 1900ರಲ್ಲಿ ನಡೆದ ಮೊದಲ ಒಲಿಂಪಿಕ್‌ನಿಂದ ಇದುವರೆಗೆ ಒಟ್ಟೂ ಇಪ್ಪತ್ನಾಲ್ಕು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಭಾಗವಹಿಸಿದೆ. 1900 ರಿಂದ 1920 ರವರೆಗೆ ಈ ಕ್ರೀಡಾಕೂಟದಲ್ಲಿ ಭಾರತ ಭಾಗವಹಿಸಿರಲಿಲ್ಲ. ನಂತರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಭಾರತ ನಿರಂತರವಾಗಿ ಭಾಗವಹಿಸುತ್ತಿದೆ.

ಮೊಟ್ಟ ಮೊದಲ ಒಲಿಂಪಿಕ್ಸ್‌ನಲ್ಲಿ ಭಾರತ ಎರಡು ಪದಕ ಗಳಿಸಿತ್ತು ಎಂಬ ಸಂತೋಷ ನಮ್ಮದಾದರೆ, ಸುಮಾರು ನೂರ ಇಪ್ಪತ್ತು ವರ್ಷದ ನಂತರವೂ ನಮ್ಮ ದೇಶ ಗಳಿಸಿದ್ದು ಎರಡೇ ಪದಕ ಎಂಬ ಬೇಸರವೂ ನಮ್ಮದೇ. ಈ ನಡುವೆ 1952ರಲ್ಲಿ ಎರಡು, 2008ರಲ್ಲಿ ಮೂರು, 2012ರಲ್ಲಿ ಅತಿ ಹೆಚ್ಚು, ಆರು ಪದಕ ಗಳಿಸಿದ್ದು ಬಿಟ್ಟರೆ ಹದಿಮೂರು ಬಾರಿ ಒಂದು ಪದಕ ಗಳಿಸಿದೆ. ಉಳಿದ ಆರು ಒಲಿಂಪಿಕ್ಸ್‌ನಲ್ಲಿ ಭಾರತದ್ದು ಶೂನ್ಯ ಸಂಪಾದನೆ. ಭಾರತಕ್ಕೆ ಮೊದಲ ಪದಕ ತಂದುಕೊಟ್ಟವರು ನೊರ್ಮನ್ ಪಿಚಾರ್ಡ್. 200ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಅವರು ಬೆಳ್ಳಿ ಬೆಳ್ಳಿ ಪದಕ ಪಡೆದಿದ್ದರು. ಆ ಒಲಿಂಪಿಕ್ಸ್‌ ನಲ್ಲಿ ಭಾರತದ ಪರವಾಗಿ ಭಾಗವಹಿಸಿದ್ದು ಅವರೊಬ್ಬರೇ! ಅವರನ್ನು ಬಿಟ್ಟರೆ ವೈಯಕ್ತಿಕ ಕ್ರೀಡೆಯಲ್ಲಿ ಎರಡು ಪದಕ ಪಡೆದವರು ಕುಸ್ತಿ ಪಟು ಸುಶಿಲ್ ಕುಮಾರ್. ನಮ್ಮ ಅವಸ್ಥೆ ನೋಡಿ, ಒಬ್ಬರು ಭಾಗವಹಿಸಿದರೂ ಎರಡು ಪದಕ, ನೂರ ಹದಿನೇಳು ಜನ ಭಾಗವಹಿಸಿದರೂ ಎರಡೇ ಪದಕ.

1920ರ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಇಬ್ಬರು ಭಾಗವಹಿಸಿದ್ದರು ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಆ ವರ್ಷ ಭಾರತ ಅಥ್ಲೆಟಿಕ್ಸ್ ಮತ್ತು
ಕುಸ್ತಿಯಲ್ಲಿ ಭಾಗವಹಿಸಿತ್ತು. ಅಥ್ಲೆಟಿಕ್ಸ್‌ನಲ್ಲಿ ನಾಲ್ಕು, ಕುಸ್ತಿಯಲ್ಲಿ ಇಬ್ಬರು ಭಾಗವಹಿಸಿದ್ದರು. ಅವರಲ್ಲಿ ಕರ್ನಾಟಕದ ಬೆಳಗಾವಿಯ ಫಡೆಪ್ಪ ಡಿ. ಚೌಗುಲೆ ಹತ್ತು ಸಾವಿರ ಮೀಟರ್ ಮತ್ತು ಮ್ಯಾರಾಥಾನ್ ನಲ್ಲೂ, ಹುಬ್ಬಳ್ಳಿಯ ಕೆ. ಕೈಕಾಡಿ ಐದು ಸಾವಿರ ಮತ್ತು ಹತ್ತು ಸಾವಿರ ಮೀಟರ್ ಓಟದಲ್ಲೂ ಪಾಲ್ಗೊಂಡಿದ್ದರು. ದೇಶ ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ ಅದು. ಕ್ರೀಡಾಕೂಟದಲ್ಲಿ ಭಾಗವಹಿಸಲು ಒಟ್ಟೂ ಇಪ್ಪತ್ತೊಂದು ಸಾವಿರ ರುಪಾಯಿ ಬೇಕಾಗಿತ್ತು. ಅದರಲ್ಲಿ ಸರಕಾರದ ಕಡೆಯಿಂದ ದೊರೆತದ್ದು ಆರು ಸಾವಿರ ರುಪಾಯಿಗಳು ಮಾತ್ರ.

ಆ ಸಂದರ್ಭದಲ್ಲಿ ದೊರಾಬ್ಜಿ ಟಾಟಾ (ಜಮ್ಶೆಟ್ಜಿ ಟಾಟಾ ಅವರ ತಂದೆ) ಎಂಟು ಸಾವಿರ ರುಪಾಯಿ ನೀಡಿದರು, ಉಳಿದ ಏಳು ಸಾವಿರ ರುಪಾಯಿಯನ್ನು
ಬಾಂಬೆಯ ಕ್ರೀಡಾಭಿಮಾನಿ ದಾನಿಗಳು ಒಟ್ಟುಗೂಡಿಸಿ ನೀಡಿದ್ದರು. ಆದರೆ ಭಾರತಕ್ಕೆ ಯಾವುದೇ ಮೆಡಲ್ ದೊರಕಲಿಲ್ಲ ಎಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ?
ಒಲಿಂಪಿಕ್ ಕ್ರೀಡಾಕೂಟ ಆರಂಭವಾದಾಗಿನಿಂದ ಇದುವರೆಗೆ ಭಾರತ ಒಂಬತ್ತು ಸ್ವರ್ಣ, ಏಳು ರಜತ, ಹನ್ನೆರಡು ಕಂಚು ಸೇರಿದಂತೆ ಒಟ್ಟೂ ಇಪ್ಪತ್ತೆಂಟು
ಪದಕಗಳಿಸಿದೆ. ನಿಮಗೆ ತಿಳಿದಿರಬಹುದು, ಅಮೆರಿಕದ ಈಜುಗಾರ ಮೈಕಲ್ ಫಿಲ್ಪ್ಸ್ ಒಬ್ಬನೇ ಇಪ್ಪತ್ತೆಂಟು ಪದಕ ಪಡೆದುಕೊಂಡಿದ್ದಾನೆ, ಅದರಲ್ಲಿ ಇಪ್ಪತ್ತಮೂರು ಚಿನ್ನದ ಪದಕ.

ಭಾರತಗಳಿಸಿದ ಒಂಬತ್ತು ಚಿನ್ನದ ಪದಕಗಳಲ್ಲಿ ಒಬ್ಬ ಅಭಿನವ ಬಿಂದ್ರಾ ಅವರನ್ನು ಬಿಟ್ಟರೆ ಉಳಿದ ಎಂಟು ಹಾಕಿಯಲ್ಲಿ ಗಳಿಸಿದ್ದು. 1980ರ ನಂತರ ಹಾಕಿಯಲ್ಲಿ
ಚಿನ್ನ ಬಿಡಿ, ಯಾವ ಪದಕವೂ ಇಲ್ಲ. ಮತ್ತೆ ಗೊತ್ತಲ್ಲ, ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ! ಒಲಿಂಪಿಕ್ ಎಂದಾಕ್ಷಣ ಪದಕದೊಂದಿಗೆ ನೆನಪಾಗುವುದು ಒಂದಷ್ಟು ಸ್ಪೂರ್ತಿದಾಯಕ ಕಥೆಗಳು. 35 ಬೇರೆಬೇರೆ ಆಟಗಳ ನಾಲ್ಕು ನೂರು ವಿಭಾಗದಲ್ಲಿ ವಿಶ್ವದ ಐದು ಖಂಡದ (ಒಲಿಂಪಿಕ್ ಲಾಂಛನದಲ್ಲಿರುವ ಐದು ವೃತ್ತಗಳು ಐದು ಖಂಡಗಳ ಸಂಕೇತ) ಇನ್ನೂರಕ್ಕೂ ಹೆಚ್ಚು ದೇಶದ, ಹದಿನಾಲ್ಕು ಸಾವಿರಕ್ಕೂ ಹೆಚ್ಚು ಆಟಗಾರರು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ. ಅವರಲ್ಲಿ
ಎಲ್ಲರೂ ಬಂಗಾರದ ತೊಟ್ಟಿಲಲ್ಲಿ ಮಲಗಿ, ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಬೆಳೆದವರಲ್ಲ.

ಇದುವರೆಗಿನ ಒಲಿಂಪಿಕ್ಸ್ ಇತಿಹಾಸದಲ್ಲಿ ನೂರಾರು ಆಟಗಾರರ ಸ್ಪೂರ್ತಿಯ ಕಥೆಗಳು ಸಿಗುತ್ತವೆ. ಬೇಕಾದರೆ ಗೂಗಲ್ ದೇವತೆಯನ್ನು ಕೇಳಿ ನೋಡಿ, ಒಂದು ಸೆಕೆಂಡಿನಲ್ಲಿ ಒಂದು ನೂರಕ್ಕೂ ಹೆಚ್ಚು ಇಂತಹ ಆಟಗಾರರ ಪಟ್ಟಿ ಸಿಗುತ್ತದೆ. ಅದರಲ್ಲಿ ಕೆಲವರ ಸಾಧನೆಯ ಕಥೆಗಳಿದ್ದರೆ ಇನ್ನು ಕೆಲವು ವೈಫಲ್ಯದ ಕಥೆಗಳು. ಆ ಹಂತಕ್ಕೆ ಬಂದು ನಿಲ್ಲಬೇಕಾದರೆ ಸಾಧನೆ ಎಂಬುದು ಬೇಕೇಬೇಕು ಬಿಡಿ. ಕೆಲವು ವೈಫಲ್ಯದ ನಂತರದ ಸಾಧನೆಯ ಕಥೆಗಳು. ಆದರೆ ಕೆಲವೊಮ್ಮೆ ವರ್ಷಾನುಗಟ್ಟಲೆ ಪಟ್ಟ ಶ್ರಮ ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲಾಗುವುದಿದೆ.

ಅಂತಹ ಸಂದರ್ಭದಲ್ಲೂ ಚೇತರಿಸಿಕೊಂಡು ಪುನಃ ಸಾಧನೆಯ ಬೆನ್ನು ಹತ್ತಿ ಹೋಗುವುದಿದೆಯಲ್ಲ, ಅದು ನಿಜಕ್ಕೂ ಗ್ರೇಟ್. ಅಂಥವರು ಲೋಕಕ್ಕೆ ಮಾದರಿ ಯಾಗುತ್ತಾರೆ, ಜನರ ಮನದಲ್ಲಿ ಮನೆ ಮಾಡುತ್ತಾರೆ. ಹಾಗೆ ಪದಕ ಪಡೆದ,ಪಡೆಯದ ಒಂದೊಂದು ಕಥೆ ಹೇಳಿ ಮುಂದುವರಿಯುತ್ತೇನೆ. ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಪಡೆದ ಅಮೆರಿಕದ ಮೊದಲ ಕ್ರೀಡಾಪಟು ವಿಲ್ಮಾ ರಡಾಲ. ಇಪ್ಪತ್ತೊಂದು ಜನ ಮಕ್ಕಳ ಪೈಕಿ ಇಪ್ಪತ್ತನೆಯವಳಾಗಿ ಹುಟ್ಟಿದ ವಿಲ್ಮಾ ಪೋಲಿಯೋ ಪೀಡಿತೆ. ಆಕೆ ಎಂದೂ ಸರಿಯಾಗಿ ನಡೆಯಲು ಸಾಧ್ಯವಿಲ್ಲ ಎಂದ ವೈದ್ಯರಿಗೂ ಅಚ್ಚರಿಯಾಗುವಂತೆ, ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ನಡೆಯ ಲಾರಂಭಿಸಿದಳು. ಅದಾಗಿ ನಾಲ್ಕೇ ವರ್ಷದಲ್ಲಿ 1956ರ ಒಲಿಂಪಿಕ್ಸ್‌ನಲ್ಲಿ ರಿಲೇಯಲ್ಲಿ ಕಂಚಿನ ಪದಕ ಪಡೆದಳು.

ನಂತರದ ಒಲಿಂಪಿಕ್ಸ್‌ನಲ್ಲಿ ಆಕೆ ಓಡಿ ಮೂರು ಗೋಲ್ಡ ಮೆಡಲ್ ಪಡೆದಿದ್ದಳು. ನಂತರವೂ ಆಕೆ ಕ್ರೀಡಾಕೂಟದಲ್ಲಿ ಪದಕ ಪಡೆಯುತ್ತಿದ್ದಳೋ ಏನೋ, ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಕ್ರೀಡೆಯಿಂದ ನಿವೃತ್ತಳಾಗಿ ಉದ್ಯೋಗಕ್ಕೆ ಸೇರಿಕೊಂಡಳು. ತನ್ನ ಐವತ್ನಾಲ್ಕನೆಯ ವರ್ಷಕ್ಕೇ ಮೆದುಳು ಮತ್ತು ಗಂಟಲಿನ ಕ್ಯಾನ್ಸರ್ ನಿಂದಾಗಿ ತೀರಿಕೊಂಡಳು. ಇದು ಪದಕ ಪಡೆದವಳ ಕಥೆಯಾದರೆ, ಮೆಡಲ್ ಗಳಿಸಲಾಗದ ಕಥೆಯೊಂದಿದೆ.

ಆತನ ಹೆಸರು ಡೆರೆಕ್ ರೆಡ್ಮಂಡ್. 1992 ರ ಬಾರ್ಸಿಲೋನಾ ಒಲಂಪಿಕ್ಸ್‌ನಲ್ಲಿ 400 ಮೀಟರ್ ಓಟದ ಸ್ಪರ್ಧೆ ನಡೆಯುತ್ತಿತ್ತು. ಅಂದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಇಂಗ್ಲೆಂಡ್‌ನ ರೆಡ್ಮಂಡ್ ಓಟಕ್ಕೆ ಸಿದ್ಧನಾಗಿ ನಿಂತಿದ್ದ. 1986 ರಲ್ಲಿ ಆತ ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ್ದ. ಇಂಗ್ಲೆಂಡಿನ ಹಳೆಯ ದಾಖಲೆಗಳನ್ನೂ ಮುರಿದಿದ್ದ. ಆದರೆ ಗಾಯಾಳುವಾಗಿದ್ದರಿಂದ 1988 ರ ಒಲಿಂಪಿಕ್ಸ್‌ನಲ್ಲಿ
ಭಾಗವಹಿಸಲು ಆಗಿರಲಿಲ್ಲ.

1992 ರ ಕ್ರೀಡಾಕೂಟದಲ್ಲಿ ಭಾಗವಹಿಸುವ ಹೊತ್ತಿಗೆ ಆತನಿಗೆ ಎಂಟು ಶಸ್ತ್ರಚಿಕಿತ್ಸೆಗಳಾಗಿದ್ದವು. ಆದರೂ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಬಂದಿದ್ದ ರೆಡ್ಮಂಡ್.
ದುರ್ದೈವವಶಾತ್ ಅಂದು ಓಟದ ಮಧ್ಯದಲ್ಲಿ ಆತನ ಮಂಡಿರಜ್ಜಿನ ಸ್ನಾಯುಗಳು ಹರಿದ ಪರಿಣಾಮ ಆತನ ಪದಕದ ಕನಸು ಭಗ್ನಗೊಂಡಿತು. ನೋವಿನಲ್ಲಿದ್ದ ಆತ ಕೊನೆಯವನಾಗಿಯಾದರೂ ಪರವಾಗಿಲ್ಲ, ರೇಸ್ ಮುಗಿಸಬೇಕೆಂದು ಕುಂಟಲಾರಂಭಿಸಿದ. ಗ್ಯಾಲರಿಯಲ್ಲಿ ಕುಳಿತು ಮಗನನ್ನು ನೋಡುತ್ತಿದ್ದ ಅಪ್ಪ ಓಡಿ ಬಂದು
ಮಗನಿಗೆ ಆಸರೆಯಾದ. ಅಪ್ಪನ ಹೆಗಲಿನ ಮೇಲೆ ಭಾರ ಹಾಕಿ, ಕುಂಟುತ್ತ ರೇಸ್ ಮುಗಿಸಿದ್ದ ರೆಡ್ಮಂಡ್.

ಕೊನೆಗೂ ತಂದೆಯ ಸಹಾಯ ಪಡೆದದ್ದರಿಂದ ಆತ ಗುರಿ ತಲುಪಲಿಲ್ಲವೆಂದೇ ಪರಿಗಣಿಸಲಾಯಿತು. ಆಮೇಲಿನ ಎರಡು ವರ್ಷಗಳಲ್ಲಿ ಆರೇಳು ಚಿಕಿತ್ಸೆಯ ನಂತರ, ಇನ್ನು ವೇಗವಾಗಿ ಓಡಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದಾಗ ಅಥ್ಲೆಟಿಕ್ಸ್‌ನಿಂದ ನಿವೃತ್ತನಾದ. ಆದರೆ ಕೆಲ ಕಾಲ ಇಂಗ್ಲೆಂಡಿನ ಪ್ರತಿಷ್ಠಿತ ಬಾಸ್ಕೆಟ್
ಬಾಲ್ ತಂಡದಲ್ಲಿ ಆಡುತ್ತಿದ್ದ. ಈಗಲೂ ಆತ ಯುವ ಕ್ರೀಡಾಳುಗಳಿಗೆ ತರಬೇತಿ ನೀಡುತ್ತಿದ್ದಾನೆ. ರೆಡ್ಮಂಡ್ ನಂತಹ ನೂರಾರು ಆಟಗಾರರು, ಓಟಗಾರರು
ಮೆಡಲ್ ಪಡೆಯಲಿಲ್ಲ ಎಂಬುದು ನಿಜವಾದರೂ ಸಾಕಷ್ಟು ಜರಿಗೆ ಪ್ರೇರಣೆಯಾಗಿ ನಿಂತದ್ದಂತೂ ಸುಳ್ಳಲ್ಲ.

ಪ್ರತಿ ಕ್ರೀಡಾಕೂಟದಲ್ಲೂ ಸಾವಿರಾರು ಮೆಡಲ್ ನೀಡುವ, ನೂರಾರು ಸ್ಫೂರ್ತಿಯ ಕಥೆ ನೀಡುವ ಒಲಿಂಪಿಕ್ಸ್ ಇತಿಹಾಸ ಅದ್ಭುತವೇ. ಕ್ರಿ. ಪೂ. ಎಂಟನೆಯ ಶತಮಾನದಿಂದ ಕ್ರಿ. ಶ. ನಾಲ್ಕನೆಯ ಶತಮಾನದವರೆಗೆ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ನಡೆಯುತ್ತಿದ್ದ ಪ್ರಾಚೀನ ಕ್ರೀಡಾಕೂಟಗಳು ಇಂದಿನ ಒಲಿಂಪಿಕ್ಸ್‌ಗೆ ಮೂಲ ಪ್ರೇರಣೆ. ಒಲಿಂಪಿಕ್ಸ್ ಎಂದಾಕ್ಷಣ ನಾವು ಸ್ಮರಿಸಬೇಕಾದದ್ದು ಬ್ಯಾರನ್ ಡಿ ಕೂಬರ್ಟಿನ್ ಅವರನ್ನು. ಕೂಬರ್ಟಿನ್ 1894 ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯನ್ನು (ಐಓಸಿ) ಸ್ಥಾಪಿಸಿದರು. ಮೊದಲ ಕ್ರೀಡಾಕೂಟ ನಡೆದದ್ದು 1896 ರಲ್ಲಿ. ಆದರೆ ಮೊದಲ ಆಧುನಿಕ ಒಲಿಂಪಿಕ್ಸ್ ನಡೆದದ್ದು 1900 ರಲ್ಲಿ, ಗ್ರೀಸ್‌ನ ಅಥೆ ನಗರದಲ್ಲಿ. ಅಂದಿನಿಂದ ಇಲ್ಲಿಯವರೆಗೆ ಒಲಿಂಪಿಕ್ಸ್ ದೈತ್ಯಾಕಾರವಾಗಿ ಬೆಳೆದು ನಿಂತಿದೆ.

ಪ್ರತಿಯೊಬ್ಬ ಕ್ರೀಡಾಪಟುವಿಗೆ ಸರಾಸರಿ ಆರು ಲಕ್ಷ ಡಾಲರ್ ಖರ್ಚು ಮಾಡುತ್ತದೆ. ಹೀಗೆ ಒಂದು ಒಲಿಂಪಿಕ್ಸ್‌ಗೆ ಒಟ್ಟೂ ಖರ್ಚು ಮಾಡುವ ಮೊತ್ತ ಐದು
ಬಿಲಿಯನ್ ಡಾಲರ್. ಅಂದರೆ ಸುಮಾರು ಏಳೂವರೆ ಸಾವಿರ ಕೋಟಿ ರುಪಾಯಿ. ಇದರಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ವಿಮಾನ ನಿಲ್ದಾಣ ಇತ್ಯಾದಿಗಳ ನಿರ್ಮಾಣ, ನವೀಕರಣದ ವೆಚ್ಚ ಸೇರಿಲ್ಲ. ಈ ವರ್ಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ತರಬೇತಿಗೆಂದು ಭಾರತ ಸರಕಾರ
ಸುಮಾರು ನೂರು ಕೋಟಿ ಮೀಸಲಿಟ್ಟಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಸ್ಪರ್ಧಾಳುಗಳಿಗೆ ಶುಭ ಹಾರೈಸುತ್ತಾ, ಈ ಸಲ ಎಷ್ಟು ಪದಕಗಳು ಬರುತ್ತವೆ,
ಎಷ್ಟು ಸೂರ್ತಿದಾಯಕ ಕಥೆಗಳು ಬರುತ್ತವೆ ಎಂದು ಕಾದು ನೋಡೋಣ.