Thursday, 12th September 2024

ಹಸಿವು ಎಂಬ ಕಾಯಿಲೆಗೆ ಮದ್ದಿಲ್ಲವೇ?

ಸ್ವಾಸ್ಥ್ಯಪ್ರಜ್ಞೆ
ಶಿವಪ್ರಸಾದ್ ಎ.

ಹಸಿವಿನಿಂದಾಗಿ ಮಾನವನು ಮತ್ತೊಬ್ಬನನ್ನು ಕೊಂದಿರುವುದು ಅಪರೂಪ. ಆದರೆ ಕ್ರೋಧ, ಈರ್ಷ್ಯೆ, ಮೋಹ, ಮದ, ಮತ್ಸರಗಳಿಂದ ಒಬ್ಬ ಮಾನವ
ಮತ್ತೊಬ್ಬನನ್ನು ಕೊಂದು, ಪ್ರಾಣಿಗಿಂತಲೂ ತಾನು ನಿಕೃಷ್ಟನೆಂಬುದನ್ನು ಸಾಬೀತುಪಡಿಸುತ್ತಿದ್ದಾನೆ. ಹೀಗಿದ್ದಾಗ ಮಾನವನ ಬುದ್ಧಿಮತ್ತೆ, ಸಂಸ್ಕಾರಕ್ಕೆ ಅರ್ಥವೇನು?

ವಿಶ್ವದಲ್ಲಿ ಸುಮಾರು ಶೇ.೧೦ರಷ್ಟು ಜನರು ಒಂದು ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಈ ಕಾಯಿಲೆಯಿದೆ ಎನ್ನುವುದು ಸುತ್ತಮುತ್ತಲ ಪ್ರಪಂಚಕ್ಕೆ ಬಹಳ ಸುಲಭವಾಗಿ ತಿಳಿಯುತ್ತದೆ. ಆದರೆ ಇದರ ಪರಿಹಾರಕ್ಕಾಗಿ ಯಾರೊಬ್ಬರೂ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವಂತೆ ಕಾಣುತ್ತಿಲ್ಲ. ಇದರ
ಪರಿಹಾರ ಕ್ಕಾಗಿ ವಿಶ್ವದೆಲ್ಲೆಡೆ ಎಷ್ಟೋ ಸರಕಾರಗಳು ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿವೆ. ಅದೆಷ್ಟೋ ರಾಜ್ಯಗಳಲ್ಲಿ/ರಾಷ್ಟ್ರಗಳಲ್ಲಿ ರಾಜಕೀಯ ಪಕ್ಷಗಳು ಈ ಯೋಜನೆಗಳ ಭರವಸೆ ನೀಡಿ ಚುನಾವಣೆಗಳಲ್ಲಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಆದರೆ ಈ ಕಾಯಿಲೆಯಿಂದ ಬಳಲುತ್ತಿ ರುವವರ ಸಂಖ್ಯೆ ಬಹಳ ನಿಧಾನವಾಗಿ ಇಳಿಕೆಯಾಗುತ್ತಿದೆ.

ಭಾರತ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಸಂಖ್ಯೆಯ ಜನರು ವಿಶ್ವದೆಲ್ಲೆಡೆ ಈ ಕಾಯಿಲೆಯಿಂದ ದಿನನಿತ್ಯ ಬಳಲುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಪಾಲು ಜನ ಭಾರತೀಯರೇ ಆಗಿದ್ದಾರೆ ಎಂಬುದೇ ವಿಧಿಯ ವಿಪರ್ಯಾಸ. ಆದರೆ ನಮ್ಮ ಸರಕಾರಗಳು ಇವರ ಆರ್ತನಾದಕ್ಕೆ ಹೆಚ್ಚು ಕಿವಿಗೊಡುವುದಿಲ್ಲ. ಈ ಕಾಯಿಲೆ ಯಾವುದೆಂಬ ಪ್ರಶ್ನೆ ಈಗ ನಿಮ್ಮೆಲ್ಲರ ಮನದಲ್ಲಿ ಸುಳಿಯುತ್ತಿರಬಹುದು. ಅದೇ- ಹಸಿವು, ಹಸಿವು, ಹಸಿವು. ಹೌದು, ತಿನ್ನಲು ಆಹಾರ ವಿಲ್ಲದಂಥ ನಿರ್ಗತಿಕರು ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.೧೦ಕ್ಕೂ ಅಧಿಕ ಪ್ರಮಾಣ ದಲ್ಲಿದ್ದಾರೆ. ಎಫ್ ಎಒ ಎಂದರೆ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ‘ಫುಡ್ ಆಂಡ್ ಅಗ್ರಿಕಲ್ಚರಲ್ ಆರ್ಗನೈಜೇಷನ್’ ನ ವರದಿಯ ಪ್ರಕಾರ ವಿಶ್ವದಲ್ಲಿ ಅರುವತ್ತೊಂಬತ್ತರಿಂದ ಎಪ್ಪತ್ತೆಂಟು ಕೋಟಿಯಷ್ಟು ಜನರು ದಿನನಿತ್ಯವೂ ಈ ಪರಿಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ.

ಈ ಜಗತ್ತಿನ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ತಿನ್ನಲು ಆಹಾರವಿಲ್ಲದಂಥ ಪರಿಸ್ಥಿತಿ ಇನ್ನೂ ಇದೆ ಎಂಬ ವಿಷಯವು ನಮ್ಮಲ್ಲಿ ಕೆಲವರಿಗೆ ನಂಬಲಸಾಧ್ಯವಾದ
ಸಂಗತಿಯಾಗಿರಬಹುದು, ಆದರೆ ಇದು ಸತ್ಯ. ವಿಶ್ವದಲ್ಲಿ ಕ್ಯಾನ್ಸರ್ ಪೀಡಿತರು, ಏಡ್ಸ್ ಪೀಡಿತರು, ಕ್ಷಯರೋಗ ಪೀಡಿತರು ಹೀಗೆ ಹತ್ತು ಹಲವು ಮಾರಣಾಂತಿಕ
ರೋಗಗಳಿಂದ ಬಳಲುತ್ತಿರುವ ಎಷ್ಟೋ ಜನರಿದ್ದಾರೆ. ಆದರೆ ಇವುಗಳಲ್ಲಿ ಯಾವೊಂದು ಕಾಯಿಲೆಯೂ ಹಸಿವಿನಷ್ಟು ವ್ಯಾಪಕವಾಗಿ ಮತ್ತು ತೀವ್ರವಾಗಿ ಜನರನ್ನು ಕಾಡುತ್ತಿಲ್ಲ. ವಿಪರ್ಯಾಸವೆಂದರೆ ಈ ಎಲ್ಲ ಕಾಯಿಲೆಗಳ ಮುಷ್ಟಿಗೆ ಸಿಲುಕಿ ಬಳಲುತ್ತಿರುವ ರೋಗಿಗಳಿಗೆ ಸರಕಾರಗಳು ಶುಶ್ರೂಷೆ ಮತ್ತು ಆರೈಕೆ ನೀಡುವ ಉಚಿತ ಅಥವಾ ಕಡಿಮೆ ವೆಚ್ಚದ ಆಸ್ಪತ್ರೆಗಳನ್ನು ನಡೆಸುತ್ತವೆ. ಆದರೆ ಹಸಿವಿನಿಂದ ಬಳಲಿ ಕೃಶರಾಗಿ ಹೋಗುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ಪ್ರಯತ್ನವನ್ನು ಸರಕಾರ ಗಳು ಸಮರ್ಪಕವಾಗಿ ಮಾಡುತ್ತಿಲ್ಲ.

ಇವರ ಸಮಸ್ಯೆಯ ನಿವಾರಣೆಗಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ಉದ್ದೇಶಿತ ಫಲಾನುಭವಿಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆಯೇ
ಎಂದು ತಿಳಿದುಕೊಳ್ಳಲು ಹೆಚ್ಚಿನ ಶ್ರಮಪಡುವುದಿಲ್ಲ. ಇದೇಕೆ ಹೀಗೆ ಎಂದು ಒಮ್ಮೆ ಅವಲೋಕನ ಮಾಡಿದಾಗ ನಮಗೆ ತಿಳಿಯುವ ವಿಷಯವೇನೆಂದರೆ, ಈ ನಿರ್ಗತಿಕರಿಗೆ ಒಂದು ನಿರ್ದಿಷ್ಟವಾದ ವಿಳಾಸವಾಗಲೀ ದಾಖಲೆಗಳಾಗಲೀ ಇರುವುದಿಲ್ಲ. ಹಾಗಾಗಿ ಪ್ರಜಾಪ್ರಭುತ್ವದ ಸರಕಾರಗಳಿರುವ ದೇಶಗಳಲ್ಲಿ ಇವರು
ಮತಗಟ್ಟೆಗೆ ತೆರಳಿ ಮತದಾನ ಮಾಡುವ ಸಂಭವವಿರುವುದಿಲ್ಲ. ಸರಕಾರಗಳಿಗೆ ಇವರೆಂದರೆ ಅಸಡ್ಡೆ.

ಅಧಿಕಾರಶಾಹಿ ಸರಕಾರಗಳಿರುವ ದೇಶಗಳಲ್ಲೋ, ಬಲಿಷ್ಠರನ್ನು ಹೊರತುಪಡಿಸಿದರೆ ಉಳಿದ ಯಾವೊಬ್ಬ ಪ್ರಜೆಯ ಬಗ್ಗೆಯೂ ಸರಕಾರ ಹೆಚ್ಚಾಗಿ ತಲೆಕೆಡಿಸಿ ಕೊಳ್ಳುವುದಿಲ್ಲ. ಹೀಗೆ ನಿರ್ಗತಿಕರು, ಹಸಿದವರು ಯಾರಿಗೂ ಬೇಡದವರಾಗಿ ನಿರ್ಲಕ್ಷ್ಯಕ್ಕೊಳಗಾಗಿ ತಮ್ಮ ಜೀವನಕ್ಕೆ ತಾವೊಬ್ಬರೇ ಜವಾಬ್ದಾರರಾಗಿ ಉಳಿದು ಬಿಡುತ್ತಾ ರೆ. ಹೀಗೆ ಹಸಿದವರೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ವಿಶ್ವದೆಲ್ಲೆಡೆ ಸುಮಾರು ಎಂಬತ್ತಾರು ಕೋಟಿ ಪರವಾನಗಿ ಪಡೆದ ಬಂದೂಕುಗಳು ಖಾಸಗಿ ಜನರ ಕೈಗಳಲ್ಲಿವೆ. ಈ ಸಂಖ್ಯೆಯು ಪೊಲೀಸ್ ಮತ್ತು ಅರೆಸೈನಿಕ ದಳಗಳು, ಸೇನೆಗಳ ಸಿಪಾಯಿಗಳು ಹೊಂದಿರುವ ಬಂ ದೂಕುಗಳಿಗಿಂತ ಬಹಳ ಹೆಚ್ಚಿನ ಸಂಖ್ಯೆಯಲ್ಲಿವೆ.

ಸೇನೆ, ಪೊಲೀಸ್ ದಳಗಳು ಸುಮಾರು ಹದಿನೆಂಟು ಕೋಟಿ ಬಂದೂಕುಗಳನ್ನು ಹೊಂದಿವೆ. ಸುಮಾರು ಇಪ್ಪತ್ತು ಪ್ರತಿಶತ ಬಂದೂಕುಗಳನ್ನು ಪೊಲೀಸ್ ಮತ್ತು ಸೇನೆಯೇ ಮುಂತಾದ ಇತರ ಸುರಕ್ಷಾ ಸಿಬ್ಬಂದಿ ಹೊಂದಿದ್ದರೆ, ಎಂಬತ್ತು ಪ್ರತಿಶತ ಬಂದೂಕುಗಳು ಖಾಸಗಿ ಜನರ ಕೈಗಳಲ್ಲಿವೆ. ಜಗತ್ತು ಇಂದು ಎಷ್ಟು
ಅಪಾಯಕಾರಿಯಾದ ಪರಿಸ್ಥಿತಿಯಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ. ಈ ಖಾಸಗಿ ಬಂದೂಕುಗಳಿಂದ ಹಾರುತ್ತಿರುವ ಗುಂಡುಗಳು ವಿಶ್ವದೆಲ್ಲೆಡೆ ಸುಮಾರು ಎಂಟು ಲಕ್ಷ ಜನರನ್ನು ಪ್ರತಿ ವರ್ಷ ಬಲಿತೆಗೆದುಕೊಳ್ಳುತ್ತಿವೆ. ಇದರರ್ಥ, ಪ್ರತಿ ನಿಮಿಷಕ್ಕೊಬ್ಬ ವ್ಯಕ್ತಿ ಗುಂಡೇಟಿಗೆ ಬಲಿಯಾಗುತ್ತಿದ್ದಾನೆ.

ಒಂದು ಕಡೆ ಹಸಿವು ಎಷ್ಟೋ ಲಕ್ಷ ಜನರನ್ನು ಬಲಿತೆಗೆದುಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಕ್ರೋಧ ಮತ್ಸರಗಳಿಂದ ಕೂಡಿದ ಜನರ ಬಂದೂಕುಗಳು ಇದೇ
ಕೆಲಸವನ್ನು ಅಷ್ಟೇ ಸಮರ್ಪಕವಾಗಿ ಮಾಡುತ್ತಿವೆ. ಪ್ರಾಣಿಗಳು ಅರಣ್ಯದಲ್ಲಿ ಬೇರೊಂದು ಜೀವಿಯನ್ನು ಕೊಲ್ಲುವುದು ಹಸಿವಾದಾಗ ಮಾತ್ರ. ಇಲ್ಲದೆ ಹೋದರೆ
ಹುಲಿ, ಸಿಂಹ ಇವೇ ಮುಂತಾದ ಕ್ರೂರ ಮೃಗಗಳು ಕೂಡ ಬೇರೊಂದು ಜೀವಿಯನ್ನು ಕೊಲ್ಲುವುದಿಲ್ಲ. ಆದರೆ ಮನುಷ್ಯನ ಸಂಗತಿಯೇ ಬೇರೆ. ಹಸಿವಿನಿಂದಾಗಿ ಮಾನವನು ಮತ್ತೊಬ್ಬ ಮಾನವನನ್ನು ಕೊಂದಿರುವ ಪ್ರಕರಣ ಎಲ್ಲಿಯೂ ನೋಡಸಿಗುವುದಿಲ್ಲ. ಆದರೆ ಕ್ರೋಧ, ಈರ್ಷ್ಯೆ, ಮೋಹ, ಮದ, ಮತ್ಸರಗಳ ಕಾರಣ ಗಳಿಂದ ಮಾನವನು ಮತ್ತೊಬ್ಬನನ್ನು ಕೊಂದು, ಪ್ರಾಣಿಗಳಿಗಿಂತಲೂ ತಾನು ನಿಕೃಷ್ಟನೆಂಬುದನ್ನು ಸಾಬೀತುಪಡಿಸುತ್ತಿದ್ದಾನೆ.

ಹೀಗಿರುವಾಗ ಮಾನವನ ಬುದ್ಧಿಮತ್ತೆ ಮತ್ತು ಸಂಸ್ಕಾರದ ಅರ್ಥವೇನು? ಮನುಷ್ಯನು ಶಾಲೆ ಕಾಲೇಜುಗಳಿಗೆ ಹೋಗಿ ಕಲಿಯುವ ವಿದ್ಯೆಯ ಮಹತ್ವವೇನು? ಇಂಥ ವಿದ್ಯೆಯು ನಮ್ಮ ಮೇಲೆ ಬೀರಿದ ಪರಿಣಾಮವೇನು? ಮಾನವೀಯತೆ ಮತ್ತು ಮನುಷ್ಯ ಸಹಜ ಗುಣಗಳನ್ನು ಈ ವಿದ್ಯೆ ಮತ್ತು ಸಂಸ್ಕಾರ ನಮ್ಮಲ್ಲಿ ಸುರಿಸೀತೇ?
ಈ ಎರಡೂ ಕಾರಣಗಳಿಂದ ಸಂಭವಿಸುತ್ತಿರುವ ಸಾವುಗಳನ್ನು ತಡೆದರೆ ಮಾತ್ರ ನಾವೆಲ್ಲರೂ ಮಾನವರಾಗಿ ಹುಟ್ಟಿದ್ದಕ್ಕೆ ಒಂದು ಅರ್ಥವಿರುತ್ತದೆ. ಹೀಗಾಗಿ,
ಖಾಸಗಿಯವರಿಗೆ ಬಂದೂಕು ಪರವಾನಗಿಗಳನ್ನು ನೀಡುವ ಪರಿಪಾಠವನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ತನ್ನ ಸರಕಾರದ ಮೇಲೆ ವಿಶ್ವದ ಪ್ರತಿಯೊಬ್ಬ ನಾಗರಿಕ ಒತ್ತಡ ಹೇರಬೇಕು. ಹೀಗೆ ಪರವಾನಗಿಗಳು ರದ್ದಾದ ಬಂದೂಕುಗಳ ಖರೀದಿಗಾಗಿ ವಿಶ್ವದೆಲ್ಲೆಡೆ ಬಳಕೆಯಾಗುತ್ತಿರುವ ಹಣವನ್ನು ಸಂಗ್ರಹಿಸುವ ಒಂದು ಕ್ರಮವನ್ನು ರೂಪಿಸಿ ಆ ಹಣದಿಂದ ವಿಶ್ವದ ನಿರ್ಗತಿಕರಿಗೆ ಆಹಾರ ಒದಗಿಸುವ ದೀಕ್ಷೆಯನ್ನು ಕೈಗೊಂಡರೆ ನಮ್ಮ ಮಾನವ ಜನ್ಮ ಮತ್ತು ಮನುಷ್ಯನ ಜೀವನ
ಸಾರ್ಥಕವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *