ಕೃಷಿ ರಂಗ
ಬಸವರಾಜ ಎಸ್.ಗಿರಗಾಂವಿ
ಇಂದಿನ ಮಕ್ಕಳು ಬೆಳೆಯುತ್ತಲೇ ಸ್ಥೂಲದೇಹಿಗಳಾಗುತ್ತಿರುವುದೇಕೆ? ಹೃದಯರೋಗ, ಮಧುಮೇಹದಂಥ ರೋಗಗಳಿಗೆ ಅವರು ತುತ್ತಾಗುತ್ತಿರುವುದೇಕೆ? ನಾವು ಚಿಕ್ಕವರಿದ್ದಾಗ ಎಂಥಾ ಭಾರದ ವಸ್ತುಗಳನ್ನೂ ಎಷ್ಟೊಂದು ಧೈರ್ಯದಿಂದ ಎತ್ತುತ್ತಿದ್ದೆವು, ಆ ಗಟ್ಟಿತನ ಇಂದಿನ ನಮ್ಮ ಮಕ್ಕಳಲ್ಲಿ ಏಕಿಲ್ಲ? ಎಂಬೆಲ್ಲ ಪ್ರಶ್ನೆಗಳು
ಇಂದಿನ ಹೆತ್ತವರನ್ನು ಕಾಡುತ್ತಿವೆ. ನಮ್ಮ ಹಿಂದಿನ ಜವಾರಿ ಅಥವಾ ದೇಶೀಯ ಆಹಾರ ಪದ್ಧತಿಯ ಅನುಸರಣೆ ಮತ್ತು ಗುಣಮಟ್ಟದ ಹಾಲಿನ ಬಳಕೆಯೇ ಇದಕ್ಕೆಲ್ಲ ಮುಖ್ಯ ಕಾರಣ ವಾಗಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ನಾವು ಚಿಕ್ಕವರಿದ್ದಾಗ ಗ್ರಾಮದ ಪ್ರತಿ ಮನೆಯಲ್ಲೂ ಆಕಳು, ಆಡು, ಎಮ್ಮೆ ಮತ್ತು ಎತ್ತುಗಳ ಸಾಕಣೆಯನ್ನು ಕಾಣುತ್ತಿದ್ದೆವು. ದನಕರುಗಳೊಂದಿಗಿನ ಅಂದಿನ ಆಟಗಳು ನಮ್ಮಂಥ ಹುಡುಗರಿಗೆ ಚೆಲ್ಲಾಟವಾಗಿದ್ದರೂ ಮೂಲತಃ ಆರೋಗ್ಯದ ಗುಟ್ಟಾಗಿದ್ದವು. ಜತೆಗೆ ಅಂದು ವ್ಯವಸಾಯವೇ ಪ್ರಮುಖ ಉದ್ಯೋಗವಾಗಿತ್ತು. ಕೃಷಿಯ ಸುಗಮ ಸಾಧನೆಗೆ ಹಾಗೂ ಮಾನವರ ಆರೋಗ್ಯವಂತ ಬದುಕಿಗೆ ದನಕರುಗಳು ಪೂರಕವಾಗಿದ್ದವು. ಹೆಚ್ಚಿನ ಸಂಖ್ಯೆಯ ದನಕರುಗಳನ್ನು ಮನೆಯಲ್ಲಿ ಸಾಕುವುದು, ಆ ಮನೆತನವು ಎಲ್ಲ ಕ್ಷೇತ್ರಗಳಲ್ಲಿ ಆರೋಗ್ಯಯುತ ಬದುಕನ್ನು ಕಂಡುಕೊಂಡಿದ್ದರ ದ್ಯೋತಕವಾಗಿತ್ತು.
ದನಕರುಗಳಿಲ್ಲದ ಮನೆ ಅನಾರೋಗ್ಯದ ಬೀಡಾಗಿತ್ತು. ಮನೆಯವರೊಬ್ಬರು ನಸುಕಿನಲ್ಲೇ ಎದ್ದು ಆ ದನ- ಕರುಗಳ ಸಗಣಿ, ಗಂಜಲ ಮತ್ತು ಕಸ-ಕಡ್ಡಿಗಳನ್ನು ಕೈಯಿಂದಲೇ ಬಳಿದು ಕೊಟ್ಟಿಗೆಯನ್ನು ಸ್ವಚ್ಛ ಮಾಡುತ್ತಿದ್ದರು. ನಂತರ ಸಮೀಪದ ಹಳ್ಳ-ಕೊಳ್ಳಗಳಿಗೆ ದನ-ಕರುಗಳನ್ನು ಒಯ್ದು ಮೈತೊಳೆಸಿಕೊಂಡು ಓಣಿಯಲ್ಲಿ ಕರೆತರು ತ್ತಿದ್ದರೆ ಆ ನೋಟ ಚಿತ್ತಾಕರ್ಷಕವಾಗಿರುತ್ತಿತ್ತು. ಈ ಜಾನುವಾರು ಗಳೊಂದಿಗೆ ತೋಟಕ್ಕೆ ಹೋಗಿ ನಿರ್ದಿಷ್ಟ ಸ್ಥಳದಲ್ಲಿ ಅವನ್ನು ಕಟ್ಟಿಹಾಕಿ ಮೇವು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು.
ದನ ಮೇಯಿಸುವುದರಲ್ಲಿ ನಿಸ್ಸೀಮರಾಗಿದ್ದ ನಮ್ಮ ಪೂರ್ವಜರಿಗೆ ಯಾವ ಕಾಲಕ್ಕೆ ಯಾವ ಮೇವನ್ನು ಕೊಬೇಕೆಂಬ ಪರಿಪೂರ್ಣ ಅರಿವಿತ್ತು; ಅನಕ್ಷರಸ್ಥರಿದ್ದರೂ ಅವರಿಗೆ ಅನುಭವದ ಜ್ಞಾನವಿತ್ತು. ದನಕರುಗಳ ಆರೈಕೆಯಲ್ಲಿ ತೊಡಗುವುದು ಅಂದಿನವರ ಆರೋಗ್ಯದ ಗುಟ್ಟಾಗಿತ್ತು. ದನ-ಕರುಗಳಿಲ್ಲದ ಮನೆಗಳಿರದ ಆ ದಿನಗಳಲ್ಲಿ ಸ್ಥೂಲದೇಹಿಗಳನ್ನು ಕಾಣುವುದೇ ಅಪರೂಪವಾಗಿತ್ತು. ಹಾಲೆಂಬುದು ಪ್ರತಿಯೊಬ್ಬರ, ಪ್ರತಿ ಸಮಯದಲ್ಲಿನ ಆಹಾರದ ಭಾಗವಾಗಿತ್ತು. ಮುಂಜಾನೆ ಹಾಲು ಕರೆದ ನಂತರ ಹಸುಗಳನ್ನು ಹೊಲ ಗದ್ದೆಗಳ ಸುತ್ತಲಿನ ಬದು, ಒಡ್ಡು ಮತ್ತು ಗುಡ್ಡಗಳಲ್ಲಿ ಸಾಯಂಕಾಲದವರೆಗೆ ಚೆನ್ನಾಗಿ ಮೇಯಿಸಲಾಗುತ್ತಿತ್ತು.
ಸಾಯಂಕಾಲ ಅವಕ್ಕೆ ಬೇಕಾಗುವ ಸಾಕಷ್ಟು ಮೇವನ್ನು ತೆಗೆದುಕೊಂಡು ಮನೆಗೆ ಮರಳುವುದು ಕಡ್ಡಾಯವಾಗಿತ್ತು.
ಸಾಯಂಕಾಲ ಮತ್ತೊಂದಾವರ್ತಿ ಹಾಲು ಕರೆದು ಅವಕ್ಕೆ ಮೇವು ಹಾಕಿ ವಿಶ್ರಾಂತಿ ನೀಡಲಾಗುತ್ತಿತ್ತು. ಒಂದೊಮ್ಮೆ ತೋಟದಿಂದ ಮನೆಗೆ ಮರಳುವಾಗ ತಡವಾದರೆ, ವಿದ್ಯುತ್ ಬೆಳಕಿಲ್ಲದ ಆ ದಿನಗಳಲ್ಲಿ ಭಯಂಕರ ಕತ್ತಲಿದ್ದರೂ ದಾರಿ ತಪ್ಪದೆ ಮುಂದೆ ಸಾಗುತ್ತಿದ್ದ ಹಸುಗಳ ಹಿಂದಿನಿಂದ ಮನುಷ್ಯರು ಹೆಜ್ಜೆ ಹಾಕುತ್ತಿದ್ದರು. ಅಂದಿನ ದನ-ಕರುಗಳು ಒಂದೇ ಸ್ಥಳದಲ್ಲಿ ಮೇಯದೆ, ಗುಡ್ಡಗಾಡುಗಳಲ್ಲಿ ತಿರುಗಾಡುತ್ತ ನಿಸರ್ಗದ ತರಹೇವಾರಿ, ರಾಸಾಯನಿಕರಹಿತ ಹುಲ್ಲುಗಳನ್ನು ತಿನ್ನುತ್ತಿದ್ದುದರಿಂದ ಗಟ್ಟಿ ಮುಟ್ಟಾಗಿರುತ್ತಿದ್ದವು. ದನ-ಕರುಗಳ ಸಾಕಣೆಯು ಅಂದು ಕೇವಲ ಭೂಮಿಯ ಫಲವತ್ತತೆಗಾಗಿ ಮತ್ತು ಮಾನವರ
ಅಭಿವೃದ್ಧಿಗಾಗಿ ಇತ್ತು. ಅಂದಿನ ಹೈನುಗಾರಿಕೆಯು ಉದ್ಯಮ ವಾಗಿರದೆ ಮಾನವೀಯತೆಯ ನೆಲೆಗಟ್ಟನ್ನು ಹೊಂದಿತ್ತು.
ಅಂದಿನ ಬಹುತೇಕ ಹೈನುಗಾರರು ಹೆಚ್ಚುವರಿ ಹಾಲನ್ನು ಮಾರದೆ, ಭೂರಹಿತ ಕೃಷಿಕಾರ್ಮಿಕರಿಗೆ ಮತ್ತು ನೆರೆಹೊರೆಯವರಿಗೆ ಉಚಿತವಾಗಿ ನೀಡುತ್ತಿದ್ದರು ಎಂದರೆ ಇಂದಿನ ಬಹುತೇಕರಿಗೆ ಅಚ್ಚರಿಯಾಗಬಹುದು. ಬಹುತೇಕವಾಗಿ ಬಡವರೇ ಆಗಿದ್ದ ಅಂದಿನ ಜನರಿಗೆ ಇಂದಿನವರಂತೆ ತರಹೇವಾರಿ ಆಹಾರಗಳನ್ನು ಸೇವಿಸುವಷ್ಟು ಆರ್ಥಿಕ ಸಾಮರ್ಥ್ಯ ವಿರಲಿಲ್ಲ; ವರ್ಷಪೂರ್ತಿ ಸಾಕಾಗುವಷ್ಟು ಜೋಳ-ಕಾಳು ಗಳನ್ನು ಮಾತ್ರವೇ ಅವರಲ್ಲಿ ಕಾಣಬಹುದಾಗಿತ್ತು. ಅವು ಗಳಿಂದ
ಮಾಡಿದ ರೊಟ್ಟಿ, ಮುದ್ದೆ ಮತ್ತು ನುಚ್ಚುಗಳೊಂದಿಗೆ ಈ ಹೈನು ಉತ್ಪನ್ನಗಳು ಸರ್ವೇಸಾಮಾನ್ಯವಾಗಿರುತ್ತಿದ್ದವು.
ಹೀಗಾಗಿ ಅಂದಿನ ಕಾಲಘಟ್ಟದವರಿಗೆ ಎಷ್ಟೇ ಬಡತನವಿದ್ದರೂ ನೆರೆಹೊರೆಯವರಲ್ಲಿನ ಮಾನವೀಯತೆಯಿಂದಾಗಿ ಆಹಾರ/ ಹೈನು ಉತ್ಪನ್ನಗಳಿಗೆ ಕೊರತೆ ಇರುತ್ತಿರಲಿಲ್ಲ, ಅವರು ಇಂದಿನವರಂತೆ ಆರೋಗ್ಯದ ಕೊರತೆಯಿರದೆ ಗಟ್ಟಿಮುಟ್ಟಾಗಿದ್ದರು. ಮುಖ್ಯವಾಗಿ ಅಂದಿನ ಹೈನು ಉತ್ಪನ್ನಗಳಲ್ಲಿ ಕಲಬೆರಕೆಗೆ ಆಸ್ಪದವಿರಲಿಲ್ಲ. ದೇಶೀಯ ಮೇವಿನ ಸೇವನೆಯಿಂದ ಹಸುಗಳ ಆರೋಗ್ಯ ಉತ್ತಮವಾಗಿರುತ್ತಿತ್ತು, ಅವುಗಳ ಹಾಲನ್ನು ಸೇವಿಸುತ್ತಿದ್ದವರೂ ಕಟ್ಟುಮಸ್ತಾಗಿ
ರುತ್ತಿದ್ದರು. ಅಂದು ದೇಶೀಯವಾಗಿ ಬೆಳೆಯುತ್ತಿದ್ದ ದಿನ ಬಳಕೆಯ ಧಾನ್ಯಗಳಿಂದಾಗಿ, ಯಾವುದೇ ರುಚಿಯ ಖಾದ್ಯ ಗಳಲ್ಲಿ ಅಥವಾ ಅವುಗಳ ಜತೆ ಹಾಲಿನ ಉತ್ಪನ್ನಗಳು ಕಡ್ಡಾಯ ವಾಗಿರುತ್ತಿದ್ದವು. ಹೀಗಾಗಿ ಅಂದಿನ ಮಕ್ಕಳು ಆರೋಗ್ಯ ವಂತರಾಗಿ ಬದುಕುತ್ತಿದ್ದರು.
ಸಂಪೂರ್ಣವಾಗಿ ಉದ್ಯಮವಾಗಿ ಬದಲಾಗಿರುವ ಇಂದಿನ ಹೈನುಗಾರಿಕೆಯಲ್ಲಿ ಹಾಲಿನ ವಿಷಯದಲ್ಲಿ ಮಾನವೀಯತೆ ಮರೆಯಾಗಿದೆ. ಇಂದಿನ ಹೈಬ್ರಿಡ್‌ಮಯ ಕಾಲಘಟ್ಟದಲ್ಲಿ ಬಹುತೇಕ ಹಾಲಿನ ಉತ್ಪನ್ನಗಳು ಗತಕಾಲದ ಸ್ವಾದವನ್ನು ಕಳೆದುಕೊಂಡಿವೆ. ಮಾತ್ರವಲ್ಲ, ಹೈಬ್ರಿಡ್ ಆಹಾರಗಳ ಉಪಟಳದಿಂದಾಗಿ ದೇಶೀಯ ಆಹಾರಗಳು ಕಣ್ಮರೆಯಾಗುತ್ತಿರುವುದಲ್ಲದೆ, ಹೈಬ್ರಿಡ್ ಮೇವನ್ನೇ ತಿನ್ನುತ್ತಿರುವ ಹಸುಗಳ ಹಾಲಿನ ಉತ್ಪನ್ನಗಳೂ ಅಷ್ಟೊಂದು ಸತ್ವಭರಿತವಾಗಿಲ್ಲ. ಹೀಗಾಗಿ ಸದ್ಯ ಜಾರಿಯಲ್ಲಿರುವ ಪ್ಯಾಕೆಟ್ ಹಾಲಿನ ಉತ್ಪನ್ನಗಳು ಎಷ್ಟರಮಟ್ಟಿಗೆ ಶುದ್ಧವಾಗಿವೆ ಎಂಬುದು ತಿಳಿಯುತ್ತಿಲ್ಲ.
ಹೈಬ್ರಿಡ್ ಮೇವು ತಿನ್ನುತ್ತಿರುವ ಜಾನುವಾರುಗಳಿಂದಾಗಿ ಮನುಕುಲದ ಆರೋಗ್ಯವೂ ಹೈಬ್ರಿಡ್‌ಮಯವಾಗುತ್ತಿದೆಯೇನೋ? ಇಂಥ ‘ಹೈಬ್ರಿಡ್ ಹೊಡೆತ’ಕ್ಕೆ ಸಿಲುಕಿರುವ ದನಕರುಗಳಿಗೂ ಹಲವು ರೋಗಗಳು ಅಮರಿಕೊಳ್ಳುತ್ತಿವೆ. ಪಟ್ಟಣವಾಸಿಗಳಾಗಿರುವ ಇಂದಿನ ಹೈಟೆಕ್ ರೈತರಿಗೆ ಗತಕಾಲದಲ್ಲಿದ್ದಂತೆ ಶಿಸ್ತುಬದ್ಧ ರೀತಿಯಲ್ಲಿ ದನ-ಕರುಗಳ ಸಾಕಣೆ ಸಾಧ್ಯವಾಗುತ್ತಿಲ್ಲ. ಒಂದೇ ಸ್ಥಳದಲ್ಲಿ ಅವುಗಳ ಸಾಕಣೆ ಯಾಗುತ್ತಿರುವುದು ಹಲವು ರೋಗಗಳಿಗೆ ಕಾರಣವಾಗುತ್ತಿದೆ. ಜತೆಗೆ, ಆಳುಗಳ ಮೇಲೆ ಅವಲಂಬಿತರಾಗಿರುವುದರಿಂದ ಜಾನುವಾರು ಸಾಕಣೆ ಸುಲಭ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಹೈನುಗಾರಿಕೆಯು ಗುಣಮಟ್ಟದಿಂದ ಕೂಡಿರದೆ ಅನಾರೋಗ್ಯದ ಆಗರವಾಗಿ ಹಾನಿಗೀಡಾಗುತ್ತಿದೆ. ರೈತ ಪರಿವಾರವು ದನಕರುಗಳ ಸಾಕಣೆ ಬಿಟ್ಟು ರಾಸಾಯನಿಕಗಳನ್ನು ಅತಿಯಾಗಿ ಅವಲಂಬಿಸಿರುವ ಪರಿಣಾಮ ಕೃಷಿಭೂಮಿಯು ತನ್ನ ಫಲವತ್ತತೆಯನ್ನು ದಿನೇದಿನೆ ಕಳೆದುಕೊಳ್ಳುತ್ತಿದೆ ಮತ್ತು ನಿರೀಕ್ಷಿತ ಕೃಷಿ ಉತ್ಪಾದನೆಯೂ ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾರಣ ದನಗಳ ಸಗಣಿ ಮತ್ತು ಗಂಜಲದಲ್ಲಿರುವ ಪೋಷಕಾಂಶಗಳು ಕೃಷಿ
ಭೂಮಿಯ ಆರೋಗ್ಯಕ್ಕೆ ಮತ್ತು ಇಳುವರಿಗೆ ಅತ್ಯಂತ ಪೂರಕವಾಗಿದ್ದವು. ಗುಣಮಟ್ಟದ ಹಾಲಿನ ಕೊರತೆಯಿಂದಾಗಿ ಮನುಕುಲದ ಆರೋಗ್ಯವೂ ಬಿಗಡಾಯಿಸು ತ್ತದೆ.
ಹಾಲು ಎಂದರೆ ಮಕ್ಕಳಿಗೆ ಪಂಚಪ್ರಾಣವಾಗಿದ್ದ ಕಾಲವೊಂದಿತ್ತು ಮತ್ತು ಅಂಥ ಮಕ್ಕಳು ಆರೋಗ್ಯವಂತರಾಗಿ ದಷ್ಟ-ಪುಷ್ಟರಾಗಿದ್ದರು. ಆದರೆ ನವಪೀಳಿಗೆಯ ಮಕ್ಕಳಲ್ಲಿ ಹಾಲಿನ ಬಳಕೆಯತ್ತ ಮನಸ್ಸು ಹರಿಯುತ್ತಿಲ್ಲ; ಇವರು ಕುರುಕಲು ತಿಂಡಿ, ಫಾಸ್ಟ್ ಫುಡ್‌ನತ್ತ ಚಿತ್ತವನ್ನು ನೆಟ್ಟಿರುವುದರಿಂದ ಬಹುಬೇಗ ಸ್ಥೂಲದೇಹಿಗಳಾಗಿ, ಚಿಕ್ಕಂದಿನಿಂದಲೇ ಹಲವು ರೋಗಗಳನ್ನು ಅಂಟಿಸಿಕೊಂಡು ಬೆಳೆಯುತ್ತಿದ್ದಾರೆ. ಇದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಇಂದಿನ ‘ಬಾಯಿರುಚಿಯ ಆಹಾರ ಪದ್ಧತಿ’ಗಳ ಪರಿಣಾಮದಿಂದ ಮತ್ತು ಗುಣಮಟ್ಟದ ಹಾಲಿನ ಕೊರತೆಯಿಂದಾಗಿ ಮಕ್ಕಳು ದೊಡ್ಡ ವರಾದಂತೆ ಸೋಮಾರಿತನ ಹಾಗೂ ಚಟ ಗಳನ್ನು ಮೈಗೂಡಿಸಿಕೊಳ್ಳುತ್ತಿರುವುದು ಸುಳ್ಳೇ ನಲ್ಲ.
ಇಂದಿನ ಜನತೆಗೆ ಹಳ್ಳಿಯ ಬದುಕೇ ದುಸ್ತರವಾಗಿದ್ದು, ಎಲ್ಲೋ ಕುಳಿತು ಒಕ್ಕಲು ತನ ಕೈಗೊಳ್ಳುವ ಕಾರಣದಿಂದ ಮಣ್ಣಿನ ಫಲವತ್ತತೆಯು ಹಾಳಾಗುತ್ತಿದೆ. ಒಟ್ಟಾರೆ
ಯಾಗಿ, ಹೈನುಗಾರಿಕೆಯ ಕೊರತೆಯಿಂದಾಗಿ ಮನುಕುಲದಲ್ಲಿ ಕೆಲಸ ಮಾಡುವ ಹುಮ್ಮಸ್ಸು ಹಾಗೂ ನೈತಿಕತೆ ಕುಸಿಯುತ್ತಿದೆ, ಆರೋಗ್ಯವಂತ ಜೀವನಶೈಲಿಯು ಹದಗೆಡುತ್ತಿದೆ. ಕೃಷಿಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ಕಾಯಕಕ್ಕೆ ತನ್ನದೇ ಆದ ಗೌರವವಿದೆ. ಸಾಧು-ಸಂತರು, ಋಷಿ-ಮುನಿಗಳೂ ಕೈಯಾಡಿಸಿದ್ದ ಈ ಕ್ಷೇತ್ರಕ್ಕೆ ಪೂರಕವಾಗಿರುವ ಮತ್ತೊಂದು ಅಂಗವೆಂದರೆ ಹೈನುಗಾರಿಕೆ.
ಭೂಮಿಯ ಫಲವತ್ತತೆ ಹೆಚ್ಚಿಸುವ ಪ್ರಕ್ರಿಯೆಯಿಂದ ಹಿಡಿದು ಮಾನವನ ಆರೋಗ್ಯ ಸುಧಾರಣೆಯವರೆಗೆ ಹೈನುಗಾರಿಕೆಗೆ ಅದರದ್ದೇ ಆದ ಪ್ರಮುಖ ಪಾತ್ರವಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲೂ ಹೈನುಗಾರಿಕೆಯ ಕೊಡುಗೆ ಮಹತ್ವದ್ದು. ಹೈನುಗಾರಿಕೆಯ ಉತ್ತೇಜನಕ್ಕಾಗಿ ಸರಕಾರಗಳು ಹಲವು ಸವಲತ್ತುಗಳನ್ನು ನೀಡಿದ್ದರೂ ಅದು ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯನ್ನು ಕಂಡಿಲ್ಲ. ಇದಕ್ಕೆ ಕಾರಣವಾಗಿರುವ ತಡೆಗೋಡೆಗಳು ಅಥವಾ ನ್ಯೂನತೆಗಳನ್ನು ನಿವಾರಿಸುವುದರ
ಕಡೆಗೆ ಸರಕಾರ ಮತ್ತು ಕೃಷಿಕರು/ಹೈನುಗಾರರು ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ.