Wednesday, 11th December 2024

ಬೊಮ್ಮಾಯಿ ಎಡವಿದರೆ ಸೃಷ್ಟಿಯಾಗಲಿದೆ ತಲ್ಲಣದ ಇತಿಹಾಸ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಸಚಿವ ಸಂಪುಟ ರಚನೆಯ ನಂತರ ಎದ್ದ ಭಿನ್ನಮತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಸುಭದ್ರವಲ್ಲ ಎಂಬ ಭಾವನೆಗೆ ಕಾರಣ ವಾಗಿದ್ದರೆ ಅದರಲ್ಲಿ ಅಸಹಜವೇನೂ ಇಲ್ಲ.

ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯಂತಹ ಕೆಲಸಗಳಲ್ಲಿ ಎಲ್ಲರನ್ನೂ ಸಮಾಧಾನಿಸುವುದು ಕಷ್ಟ. ಹೀಗಾಗಿ ಕೆಲವರ ಅಪಸ್ವರಗಳು ದೊಡ್ಡ ಮಟ್ಟದಲ್ಲಿ
ಕಂಡಿರಬಹುದಾದರೂ ಇದರಿಂದ ಬೊಮ್ಮಾಯಿ ಸರಕಾರದ ಪತನದ ಘಳಿಗೆ ಅರಂಭವಾಯಿತು ಎಂದರ್ಥವಲ್ಲ. ಯಾಕೆಂದರೆ ಬೊಮ್ಮಾಯಿ ಅವರ ಸಂಪುಟ ರಚನೆ ಕಾರ್ಯ ಪಕ್ಷದ ಹೈಕಮಾಂಡ್ ನಿರ್ದೇಶನದಿಂದಲೇ ನಡೆದಿರುವುದರಿಂದ ಮತ್ತು ಖಾತೆ ಹಂಚಿಕೆ ಯಂತಹ ಕಾರ್ಯದಲ್ಲೂ ವರಿಷ್ಠರ ಕಣ್ಣೋಟ ಇದ್ದುದರಿಂದ ಸಮಾಧಾನಗೊಂಡವರು ದಿಲ್ಲಿ ಮಟ್ಟದಲ್ಲಿ ಕೂಗೆಬ್ಬಿಸುವುದು ಕಷ್ಟ.

ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟ ಬಿಜೆಪಿಯ ರಾಷ್ಟ್ರೀಯ ವರಿಷ್ಟ ರಿಗೆ ಈ ಸರಕಾರ ದುರ್ಬಲಗೊಳ್ಳುವುದು ಬೇಕಿಲ್ಲ. ಹಾಗೊಂದು ವೇಳೆ ಈ ಸರಕಾರ ದುರ್ಬಲಗೊಂಡರೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಟ ಇಪ್ಪತ್ತೈದು ಸ್ಥಾನಗಳನ್ನು ಗೆಲ್ಲಬೇಕೆಂಬ ಅದರ ಕನಸು ಕನಸಾಗಿಯೇ ಉಳಿಯುತ್ತದೆ. ಹೀಗಾಗಿ ಬೊಮ್ಮಾಯಿ ನೇತೃತ್ವದ ಸರಕಾರ ಸುಗಮವಾಗಿ ಸಾಗಲು ಏನು ಮಾಡಬೇಕೋ? ಮತ್ತು ಆ ಸರಕಾರದ ಸುತ್ತ ಯಾವ ರಕ್ಷಾ ಕವಚ ಹಾಕಬೇಕಿತ್ತೋ? ಆ ಕಾರ್ಯವನ್ನು ವರಿಷ್ಠರು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಭಿನ್ನಮತದಂತಹ ಸಮಸ್ಯೆಗಳು ಈ ಸರಕಾರವನ್ನು ಅಲುಗಾಡಿ ಸುವ ಮಟ್ಟಕ್ಕೆ ಹೋಗುವುದು ಕಷ್ಟ.

ಆದರೆ ಸರಕಾರ ಸುಭದ್ರವಾಗಿರುವುದು ಬೇರೆ. ಬೊಮ್ಮಾಯಿ ಸುಭದ್ರವಾಗಿರುವುದು ಬೇರೆ. ಸರಕಾರ ಸುಭದ್ರವಾಗಿದೆಯಾದರೂ ಪಕ್ಷದ ಬಹುತೇಕ ಶಾಸಕರು ನಾಯಕತ್ವ ಬದಲಾವಣೆಯ ಕೂಗು ಎಬ್ಬಿಸಿದರೆ ಬಸವರಾಜ ಬೊಮ್ಮಾಯಿ ಉಳಿಯುವುದು ಕಷ್ಟ. ಆದರೆ ಇದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಃಸ್ಥಿತಿಯನ್ನು ಅವಲಂಬಿಸಿದೆ. ಬೊಮ್ಮಾಯಿ ಅವರು ಈಗ ಹೇಗಿದ್ದಾರೋ? ಅದೇ ರೀತಿ ಇದ್ದರೆ ಯಡಿಯೂರಪ್ಪ ಅವರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ಆದರೆ ಹಲವು ಒತ್ತಡಗಳ ನಡುವೆ ಬೊಮ್ಮಾಯಿ ಅವರು ತಮ್ಮಿಂದ ದೂರವಿರಲು ಯತ್ನಿಸುತ್ತಿದ್ದಾರೆ ಅಂತ ಯಡಿಯೂರಪ್ಪ ಅವರಿಗನ್ನಿಸಿದರೆ ನಿಶ್ಚಿತ ವಾಗಿ ಅವರು 2012ರಲ್ಲಿ ಆಡಿದ ಆಟಕ್ಕೆ ಕೈ ಹಾಕುತ್ತಾರೆ.

ಆ ಸಂದರ್ಭದಲ್ಲಿ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ಯಡಿಯೂರಪ್ಪ ತದ ನಂತರ ಆಕ್ರಮ
ಗಣಿಗಾರಿಕೆ ವರದಿಗೆ ಬಲಿಯಾದಾಗ ಸದಾನಂದಗೌಡರು ತಮ್ಮ ಉತ್ತರಾಧಿಕಾರಿಯಾಗಿರಲಿ ಎಂದು ಬಯಸಿದ ಫಲ ಅದು. ಆದರೆ ಸದಾನಂದಗೌಡರು ಕ್ರಮೇಣ ಬದಲಾದರು. ಈ ಬದಲಾವಣೆಯನ್ನು ಗುರುತಿಸಿದ ಯಡಿಯೂರಪ್ಪ ಬೆಂಬಲಿಗರು ಅಪಸ್ವರ ಎತ್ತ ತೊಡಗಿದರು. ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಆಟಕ್ಕೇ ಕೈ ಹಾಕಿದರು. ಮತ್ತು ಅದರಲ್ಲಿ ಯಶಸ್ವಿಯೂ ಆದರು.

ಅಂತಹ ಸನ್ನಿವೇಶ ಮರುಕಳಿಸುವ ಲಕ್ಷಣ ಕಡಿಮೆ ಎಂದು ಸಧ್ಯಕ್ಕೆ ಅನ್ನಿಸಿದರೂ ಸರಕಾರದ ಅವಧಿ ಇನ್ನೂ ಇಪ್ಪತ್ತೊಂದು ತಿಂಗಳು ಇರುವುದರಿಂದ ಇಲ್ಲಿನ ಮತ್ತು ದಿಲ್ಲಿಯ ಒತ್ತಡಗಳ ನಡುವೆ ಬೊಮ್ಮಾಯಿ ಯಾವ ಸ್ಥಿತಿಗೆ ತಲುಪುತ್ತಾರೆ ಎಂಬುದು ಮುಖ್ಯ. ಹಾಗೊಂದು ವೇಳೆ ಅವರು ಎಡವಿದರೆ ಕರ್ನಾಟಕದಲ್ಲಿ
ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಆಟ ಶುರುವಾಗಬಹುದು. ಹಾಗೊಂದು ವೇಳೆ ಅದು ಶುರುವಾದರೆ ರಾಜ್ಯದ ಇತಿಹಾಸದ ಒಂದು ಅತ್ಯಪರೂಪದ ಘಳಿಗೆ ಎದುರಾಗುತ್ತದೆ.

ಅದೆಂದರೆ, ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ಕಂಡಂತಾಗುತ್ತದೆ. 1952ರಿಂದ ಇದುವರೆಗೆ ಅಸ್ತಿತ್ವಕ್ಕೆ ಬಂದ ವಿಧಾನಸಭೆಗಳೇನಿವೆ, ಈ ವಿಧಾನಸಭೆ ಒಂದು ಅವಧಿಯಲ್ಲಿ ಗರಿಷ್ಠ ಮೂರು ಮುಖ್ಯಮಂತ್ರಿಗಳನ್ನು ಕಂಡ ಉದಾಹರಣೆ ಇದೆ. ಆದರೆ ಒಂದು ಅವಧಿಯಲ್ಲಿ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿಲ್ಲ. 1952ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯ ನಂತರ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾದರೂ, ಪಕ್ಷದಲ್ಲಿ ಎದ್ದ ಬಂಡಾಯದ ಕಾರಣಕ್ಕಾಗಿ ಅವರು 1956 ರಲ್ಲಿ ಕೆಳಗಿಳಿಯಬೇಕಾಯಿತು.

ಅವರ ನಂತರ ಬಂದ ಕಡಿದಾಳ್ ಮಂಜಪ್ಪ ಅವರು ಕೆಲವೇ ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿದರು. ತದ ನಂತರ ಆ ಜಾಗಕ್ಕೆ ಬಂದವರು ನಿಜಲಿಂಗಪ್ಪ. ಹೀಗೆ 1952 ರಿಂದ 57 ರವರೆಗಿನ ಅವಧಿಯಲ್ಲಿ ಮೂರು ಮಂದಿ ರಾಜ್ಯದ ಮುಖ್ಯಮಂತ್ರಿಗಳಾದರು. ಇದಾದ ನಂತರ 1989 ರ ವಿಧಾನಸಭೆ ಚುನಾವಣೆ ನಡೆಯು ವವರೆಗೆ ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ಮರುಕಳಿಸಲಿಲ್ಲ. ಆದರೆ 1989ರಲ್ಲಿ ಕಾಂಗ್ರೆಸ್ ಅದ್ಧೂರಿ ಬಹುಮತ ಪಡೆದು ಸರಕಾರ ರಚಿಸಿತು. ಇಂತಹ ಬಹುಮತವೇ ಆ ಸರಕಾರದ ಪಾಲಿಗೆ ಹೊರೆಯಾಗಿ ಪರಿಣಮಿಸಿತು.

ಶುರುವಿನಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ವೀರೇಂದ್ರ ಪಾಟೀಲರು ಮರು ವರ್ಷವೇ ಅಧಿಕಾರದಿಂದ ಕೆಳಗಿಳಿದರು. ಅವರ ನಂತರ ಸಿಎಂ ಖುರ್ಚಿಯ ಮೇಲೆ
ಕುಳಿತ ಬಂಗಾರಪ್ಪ ಅವರು ಸ್ವಪಕ್ಷೀಯರ ಬಂಡಾಯದ ನಡುವೆ ಪ್ರಧಾನಿ ನರಸಿಂಹರಾಯರ ಕೋಪಕ್ಕೆ ಗುರಿಯಾಗಿ 1992 ರಲ್ಲಿ ಅಧಿಕಾರ ಕಳೆದುಕೊಂಡರು.
ಅವರ ನಂತರ ಬಂದವರು ಎಂ.ವೀರಪ್ಪ ಮೊಯ್ಲಿ. ಹೀಗೆ ಅಧಿಕಾರಕ್ಕೆ ಬಂದ ಮೊಯ್ಲಿ ಅವರ ವಿರುದ್ದ ಯಾವ ಮಟ್ಟದ ಬಂಡಾಯಗಳು ನಡೆದುವೆಂದರೆ ಒಂದು ಹಂತದಲ್ಲಿ ಪ್ರಧಾನಿ ನರಸಿಂಹರಾಯರೂ ಬೇಸತ್ತು ಹೋದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭಿನ್ನಮತೀಯರ ಸಭೆಯಲ್ಲಿ ತೊಂಭತ್ತಕ್ಕೂ ಹೆಚ್ಚು ಮಂದಿ ಶಾಸಕರು ಭಾಗವಹಿಸಿದಾಗ ವೀರಪ್ಪ ಮೊಯ್ಲಿ ಅವರ ವಿಷಯದಲ್ಲಿ ನರಸಿಂಹರಾಯರಿಗ ಅಪನಂಬಿಕೆ ಶುರುವಾಯಿತು. ಹಾಗಂತಲೇ ತಮ್ಮ ಆಪ್ತರಾದ ಜಗನ್ನಾಥ ಮಿಶ್ರಾ ಅವರನ್ನು ಕರ್ನಾಟಕಕ್ಕೆ ಕಳಿಸಿ, ಪರಿಸ್ಥಿತಿಯನ್ನು ಗಮನಿಸಿ. ಮೊಯ್ಲಿ ಅವರು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆಯೇ?ಎಂಬ ಬಗ್ಗೆ ವರದಿ ಕೊಡಿ ಎಂದರು.

ಆದರೆ ಜಗನ್ನಾಥ ಮಿಶ್ರಾ ಅವರು ಕರ್ನಾಟಕಕ್ಕೆ ಬಂದಾಗ ವೀರಪ್ಪ ಮೊಯ್ಲಿ ತುಂಬ ಚಾಕಚಕತ್ಯೆಯ ಹೆಜ್ಜೆ ಇಟ್ಟರು. ಇದರ ಭಾಗವಾಗಿ ಮೊಯ್ಲಿ ಸರಕಾರದ ಬಗ್ಗೆ ತಜ್ಞರ ವರದಿಯೊಂದು ಸಿದ್ಧವಾಯಿತು. ಈ ವರದಿ ಮೊಯ್ಲಿ ಸರಕಾರ ರಾಜ್ಯದ ಜನರ ವಿಶ್ವಾಸ ಗೆಲ್ಲುವಲ್ಲಿ ಸಫಲವಾಗಿದೆ ಎಂಬ ಅಂಶವನ್ನು ಒಳಗೊಂಡಿತ್ತು.
ಜಗನ್ನಾಥ ಮಿಶ್ರಾ ಅವರು ಇದನ್ನೇ ಆಧಾರವಾಗಿಟ್ಟುಕೊಂಡು ಪಕ್ಷದ ವರಿಷ್ಠರಿಗೆ ವರದಿ ನೀಡಿದರು. ಭಿನ್ನಮತದ ನಡುವೆ ಈಗಲೂ ವೀರಪ್ಪ ಮೊಯ್ಲಿ ಅವರೇ ಜನಪ್ರಿಯ ನಾಯಕ ಎಂಬ ಅಂಶವನ್ನುಳ್ಳ ಈವರದಿ ತನ್ನ ಗುರಿ ಸಾಧಿಸಿತು. ಒಂದು ವೇಳೆ ಮೊಯ್ಲಿ ಅವರು ಅವತ್ತು ಕೆಳಗಿಳಿದಿದ್ದರೆ ನಾಲ್ಕನೇ ಮುಖ್ಯಮಂತ್ರಿ ಬಂದು ಕೂರುವ ಮೂಲಕ ಅತ್ಯಪರೂಪದ ದಾಖಲೆ ಸೃಷ್ಟಿಯಾಗುತ್ತಿತ್ತು.

ಇದಾದ ನಂತರ ಕರ್ನಾಟಕದಲ್ಲಿ ಮೂರು ಮುಖ್ಯಮಂತ್ರಿಗಳ ಅವಧಿ ಕಂಡಿದ್ದು 2004 ಮತ್ತು 2008 ರ ನಡುವೆ.ಅವತ್ತು ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೈಗೂಡಿಸಿ ಸರಕಾರ ರಚಿಸಿದವು. ಈ ಸಮ್ಮಿಶ್ರ ಸರಕಾರದ ಚುಕ್ಕಾಣಿಯನ್ನು ಕಾಂಗ್ರೆಸ್
ನಾಯಕ ಧರ್ಮಸಿಂಗ್ ಹಿಡಿದರು. ಆದರೆ ಇದಾದ ನಂತರ ನಡೆದ ರಾಜಕೀಯ ವಿದ್ಯಮಾನಗಳು ಜೆಡಿಎಸ್ ಪಕ್ಷವನ್ನು ನಾಶಪಡಿಸುವ ಗುರಿ ಹೊಂದಿವೆ ಎಂದು
ಆರೋಪಿಸಿ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಒಳಗಿಂದೊಳಗೇ ಬಿಜೆಪಿಯ ಯಡಿಯೂರಪ್ಪ ಅವರ ಜತೆ ಕೈಗೂಡಿಸಿದರು.

ಇದರ ಫಲವಾಗಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಉರುಳಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂತು. ಶುರುವಿನಿಂದಲೇ ಕಿತ್ತಾಟ ಗಳಿಗೆ ಸಿಲುಕಿಕೊಂಡ ಮೈತ್ರಿಕೂಟ ಸರಕಾರದಲ್ಲಿ ಯಾರಿಗೆ ಯಾರ ಮೇಲೂ ನಂಬಿಕೆ ಇಲ್ಲದ ಪರಿಸ್ಥಿತಿ ಸೃಷ್ಟಿಯಾಯಿತು. ಇದರ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲು ಹಿಂದೇಟು ಹಾಕಿದಾಗ ಸಮ್ಮಿಶ್ರ ಸರಕಾರ ಅಲುಗಾಡಿತು. ಇದರ ನಡುವೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ಒಪ್ಪಿದರಾದರೂ, ಸರಕಾರ ಹೇಗಿರಬೇಕು?ಎಂಬ ಸೂತ್ರ ರಚನೆಯ ವಿಷಯದಲ್ಲಿ
ಒಮ್ಮತ ಮೂಡಲೇ ಇಲ್ಲ.

ಹೀಗಾಗಿ ಯಡಿಯೂರಪ್ಪ ಕೆಲ ದಿನಗಳ ಮಟ್ಟಿಗೆ ಮುಖ್ಯಮಂತ್ರಿಯಾದರೂ, ಜೆಡಿಎಸ್ ಜತೆ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಹೋದರು. ಹೀಗೆ ಚುನಾವಣೆಗೆ ಹೋದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಗೆದ್ದು ಅಧಿಕಾರ ಹಿಡಿಯಿತು.ಆದರೆ 2008 ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಐದು ವರ್ಷಗಳ ಅವಧಿಯಲ್ಲಿ ಮೂರು ಮಂದಿ ಮುಖ್ಯಮಂತ್ರಿಗಳನ್ನು ನೋಡಬೇಕಾಯಿತು. 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸುಭದ್ರ ಮುಖ್ಯಮಂತ್ರಿ ಎಂದು ಗುರುತಿಸಲ್ಪಟ್ಟಿದ್ದರೂ ಗಣಿರೆಡ್ಡಿಗಳ ಜತೆಗಿನ ನಿರಂತರ ಸಂಘರ್ಷದ ಪರಿಣಾಮವಾಗಿ
ಅಸ್ಥಿರತೆಯ ಕಾಲ ಕಳೆದರು.

ಯಾವಾಗ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ನೀಡಿದರೋ? ಆ ವರದಿ ಯಡಿಯೂರಪ್ಪ ಅವರ ಮುಖ್ಯ ಮಂತ್ರಿ ಹುದ್ದೆಯನ್ನು ಬಲಿ ಪಡೆಯಿತು. ಆದರ ತಾವು ಕೆಳಗಿಳಿಯುವುದು ಅನಿವಾರ್ಯವಾದರೂ ಪಟ್ಟು ಬಿಡದ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ
ಯಾರಿರಬೇಕು?ಎಂದು ನಿರ್ಧರಿಸಿ ಕಣಕ್ಕಿಳಿದರು.ಇದರ ಪರಿಣಾಮವಾಗಿ ಮುಖ್ಯಮಂತ್ರಿಯಾದವರು ಡಿ.ವಿ.ಸದಾನಂದಗೌಡ. ಆದರೆ ಅವರು ತಮ್ಮ ವಿರುದ್ದ
ತಿರುಗಿ ಬಿದ್ದಿzರೆ ಎಂಬ ಮಾತುಗಳಿಂದ ಆಕ್ರೋಶಗೊಂಡ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಆಟಕ್ಕೆ ಕೈ ಹಾಕಿದರು.

ಹೀಗೆ ಕೈ ಹಾಕಿದವರು ಸದಾನಂದಗೌಡರ ಜಾಗಕ್ಕೆ ಹಿಂದೆ ತಾವೇ ವಿರೋಧಿಸಿದ್ದ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸಿದರು.
ಮುಂದೆ 2018 ರ ವಿಧಾನಸಭಾ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಚುಕ್ಕಾಣಿಯನ್ನು ಕುಮಾರಸ್ವಾಮಿ ಹಿಡಿದಿದ್ದರು. 2019ರಲ್ಲಿ ಈ ಮೈತ್ರಿಕೂಟದಲ್ಲಿ ಕಂಡ ಒಡಕು ಮತ್ತು ಅದರ ಫಲವಾಗಿ ಎರಡು ಪಕ್ಷಗಳ ಹಲ ಶಾಸಕರು ಬಿಜೆಪಿಗೆ ವಲಸೆ ಹೋದರು. ಪರಿಣಾಮ ವಾಗಿ ಸರಕಾರ ಉರುಳಿ ಬಿತ್ತು. ಇದರ ನಡುವೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು.

ಹೀಗೆ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಎರಡೇ ವರ್ಷಗಳಲ್ಲಿ ಅವರು ಕೆಳಗಿಳಿದು ಬಸವರಾಜ ಬೊಮ್ಮಾಯಿ ಅಧಿಕಾರ ಕ್ಕೇರಿದ್ದಾರೆ. ಒಂದು ವೇಳೆ ಬಿಜೆಪಿಯಲ್ಲಿ ಅತೃಪ್ತಿ ಶುರುವಾಗಿ ಬೊಮ್ಮಾಯಿ ಅವರು ಕೆಳಗಿಳಿಯುವ ಸನ್ನಿವೇಶ ಎದುರಾದರೆ ಅನುಮಾನವೇ ಬೇಡ. ರಾಜ್ಯದ ಇತಿಹಾಸದಲ್ಲಿ ಒಂದು ಅತ್ಯಪರೂಪದ ದಾಖಲೆ ನಿರ್ಮಾಣವಾಗುತ್ತದೆ. ಅರ್ಥಾತ್,ಒಂದು ಅವಽಯಲ್ಲಿ ರಾಜ್ಯ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ಕಂಡಂತಾ ಗುತ್ತದೆ. ಅಂದ ಹಾಗೆ ತಾಂತ್ರಿಕವಾಗಿ ಈ ದಾಖಲೆ ಸಾಽತವಾಗಿರುವುದೇನೋ ನಿಜ.

ಅಂದರೆ, 2018ರ ವಿಧಾನಸಭೆ ಚುನಾವಣೆಯ ಫಲಿತಾಂಶ ಅತಂತ್ರವಾದಾಗ, ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದಾಗ ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತು ಪಡಿಸಲಾಗದೆ ಕೆಳಗಿಳಿದು ಕುಮಾರಸ್ವಾಮಿ ಅವರಿಗೆ ಖುರ್ಚಿ ಬಿಟ್ಟು ಕೊಟ್ಟಿದ್ದರು. ಆದರೆ ಬಹುಮತ ಸಾಬೀತು ಪಡಿಸಿದ ಉಳಿದ ಮೂವರ ನಂತರ ನಾಲ್ಕನೆಯವರು ಬಂದು ಕೂರುವ ಸ್ಥಿತಿ ಸೃಷ್ಟಿಯಾಗುತ್ತದೆಯೇ ಎಂಬುದು ಸದ್ಯದ ಕುತೂಹಲ.