Wednesday, 11th December 2024

ಮನಸು ಮಾಡಿದರೆ ಮುಗಿಲು ಮುಟ್ಟಬಹುದು

ಸಲಹೆ

ಪರಿಣಿತ ರವಿ

‘ಮನುಷ್ಯನಲ್ಲಿ ಕೊರತೆಗಳಿರುವುದು ಜೀವನದ ಅಸಫಲತೆಯಲ್ಲ. ಬದಲಾಗಿ ಅವುಗಳನ್ನು ನಿವಾರಿಸಲು ಪ್ರಯತ್ನ ಪಡೆದಿರು ವುದೇ ಜೀವನದ ಬಲು ದೊಡ್ಡ ಅಸಫಲತೆ’ ಎಂದು ಹೇಳುತ್ತಾರೆ ಗೌತಮ ಬುದ್ಧ.

ದೌರ್ಬಲ್ಯಗಳಿಲ್ಲದ, ಕೊರತೆಗಳಿಲ್ಲದ ಮನುಷ್ಯ ಇರಲು ಸಾಧ್ಯವೇ? ಖಂಡಿತಾ ಇಲ್ಲ. ಒಂದಲ್ಲ ಒಂದು ನ್ಯೂನತೆ, ದೋಷ ಪ್ರತಿ
ಯೊಬ್ಬ ವ್ಯಕ್ತಿಯಲ್ಲೂ ಇದ್ದೇ ಇರುತ್ತದೆ. ಯಾವ ವ್ಯಕ್ತಿಯೂ ಕೂಡಾ ಪರಿಪೂರ್ಣನಾಗಿರಲು ಸಾಧ್ಯವೇ ಇಲ್ಲ. ಮನುಷ್ಯ
ಜೀವಿಯಲ್ಲಿ ಒಳಿತು-ಕೆಡುಕುಗಳ, ದೌರ್ಬಲ್ಯ- ಸಾಮರ್ಥ್ಯಗಳ ಸಮ್ಮಿಲನವನ್ನು ಕಾಣುತ್ತೇವೆ. ಜೀವನದಲ್ಲಿ ಅದ್ಭುತ ಸಾಧನೆ ಗೈದ ಮಹಾನುಭಾವರೇನು ಕೊರತೆಗಳೇ ಇಲ್ಲದವರು ಎಂದರ್ಥವಲ್ಲ. ಆದರೆ ಅವರು ಅವರಲ್ಲಿರುವ ದೌರ್ಬಲ್ಯಗಳನ್ನು ನಿವಾರಿಸಿ ಸಾಮರ್ಥ್ಯದ ಕಡೆಗೆ ಹೆಚ್ಚು ಗಮನವನ್ನು ಕೊಟ್ಟು ಸಾಧನೆಯ ಉತ್ತುಂಗಕ್ಕೇರಿದವರು.

ಇಂತಹ ಮಹಾನ್ ಸಾಧಕರ ಜೀವನಚರಿತ್ರೆಯನ್ನೊಮ್ಮೆ ಓದಿದಾಗ ಅವರು ಅದೆಷ್ಟು ಕಠಿಣ ಪರಿಶ್ರಮದಿಂದ ತಮ್ಮ ದೌರ್ಬಲ್ಯ ವನ್ನೇ ಸಾಮರ್ಥ್ಯ ವನ್ನಾಗಿ ಮಾರ್ಪಡಿಸಿದರು ಎಂದು ಅರಿವಾಗುತ್ತದೆ. ಪ್ರಪಂಚದ ಸಕಲ ಚರಾಚರಗಳಲ್ಲಿ ಮನುಷ್ಯನಿಗೆ ಮಾತ್ರ
ಇರುವ ಒಂದು ವಿಶೇಷವಾದ ವರದಾನವಿದೆ. ಅದೇನೆಂದರೆ ನಿರಂತರವಾಗಿ ಹೊಸತನ್ನು ಕಲಿಯುವ, ತನ್ನ ಜ್ಞಾನವನ್ನು ಸದಾ
ವೃದ್ಧಿಸಿಕೊಳ್ಳುವ ಸಾಮರ್ಥ್ಯ ಹಾಗೂ ಅವಕಾಶ.

ಆದರೆ ಪ್ರಾಣಿಗಳಲ್ಲಿ ಅವುಗಳು ಹುಟ್ಟಿದಾಗಿನ ಸ್ವಭಾವ ಹೇಗಿರುತ್ತದೆಯೋ ಅದು ಕೊನೆಯವರೆಗೂ ಹಾಗೇ ಇರುತ್ತದೆ. ಈಗ
ಒಂದು ಹುಲಿಗೆ eನೋದಯವಾಗಿ ಪ್ರಾಣಿಗಳನ್ನು ಹಿಡಿದು ತಿನ್ನುವುದು ತಪ್ಪೆಂದು ತಿಳಿದು ನಾಳೆಯಿಂದ ಮಾಂಸಾಹಾರ
ಬಿಟ್ಟು ಸಸ್ಯಾಹಾರಿಯಾಗಲು ಬಯಸಿದರೆ ಅದು ಸಾಧ್ಯವೇ? ಒಂದು ಆನೆ ಈ ಸಸ್ಯಾಹಾರದಿಂದ ಹೊಟ್ಟೆ ತುಂಬುವುದಿಲ್ಲ
ವೆಂದು ಮಾಂಸಾಹಾರಿಯಾಗುವೆನೆಂದು ತೀರ್ಮಾನಿಸಲು ಆದೀತೆ? ಖಂಡಿತಾ ಇಲ್ಲ ತಾನೇ? ಏಕೆಂದರೆ ಅವುಗಳಿಗೆ ಅವು
ಗಳದ್ದೇ ಆದ ನೈಸರ್ಗಿಕವಾದ ಗುಣಗಳಿವೆ.

ಆದರೆ ಮನುಷ್ಯನಿಗೆ? ಹುಟ್ಟಿನಿಂದ ಸಾವಿನ ತನಕ ಹೊಸತನ್ನು ಕಲಿಯುತ್ತಲೇ ಇರುವ ಅವಕಾಶ ಹಾಗೂ ಅಂತಹ ಅದ್ಭುತ ಗುಣವಿದೆ. ಮನುಷ್ಯ ಮನಸು ಮಾಡಿದರೆ ಅಸಾಧ್ಯವಾದುದ್ದು ಯಾವುದೂ ಇಲ್ಲವೆಂದು ಸಾಧಿಸಿ ತೋರಿಸಬಲ್ಲ. ಮನುಷ್ಯನಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಹೀಗೆ ನಾಲ್ಕು ರೀತಿಯ ದೌರ್ಬಲ್ಯಗಳಿರುತ್ತವೆ. ಎ.ಆರ್. ಮಣಿಕಾಂತ್ ಅವರ ’ಅಮ್ಮ ಹೇಳಿದ ಎಂಟು ಸುಳ್ಳುಗಳು’ ಹಾಗೂ ’ಅಪ್ಪ ಅಂದರೆ ಆಕಾಶ’ ಈ ಎರಡು ಪುಸ್ತಕಗಳಲ್ಲಿ ದೈಹಿಕವಾಗಿ ಕೊರತೆಗಳಿರು ವವರು ಮಹತ್ತರವಾದ ಸಾಧನೆ ಮಾಡಿದ ಹಲವಾರು ನೈಜ ವ್ಯಕ್ತಿಗಳ ಜೀವನ ಕಥೆಗಳಿವೆ.

’ದಿ ಸ್ಟೋರಿ ಆಫ್ ಮೈ ಲೈಫ್’ ಅನ್ನುವ ಹೆಲೆನ್ ಕೆಲರ್‌ನ ಪುಸ್ತಕದಲ್ಲಿ ದೃಷ್ಟಿ ಹಾಗೂ ಶ್ರವಣ ಶಕ್ತಿಗಳೆರಡನ್ನು ಕಳೆದುಕೊಂಡ
ಅವಳ ಬದುಕಿನ ಕರುಣಾಜನಕ ಕಥೆಯನ್ನು ಓದುವಾಗ ಖಂಡಿತವಾಗಿಯೂ ಮನಸ್ಸು ಆರ್ದ್ರವಾಗದಿರದು. ಕನ್ನಡ ನಾಡಿನಿಂದ ದೂರವಿರುವ ನನಗೆ ಇಲ್ಲಿ ಎದರೂ ಹೊರಗೆ ಹೋದಾಗ ಯಾರಾದರೂ ಕನ್ನಡ ಮಾತನಾಡುವವರನ್ನು ಕಂಡರೆ ಒಂದು ವಿಶೇಷವಾದ ಅಕ್ಕರೆ ಮೂಡುತ್ತದೆ. ಇಂತಹುದೇ ಒಂದು ರೀತಿಯ ತನ್ನವರೆಂಬ ಮೋಹ ಹೆಲೆನಿಗೂ ಅವಳ ಹಾಗೇ ಕಣ್ಣು ಕಾಣದ, ಕಿವಿ ಕೇಳದವರ ಮೇಲೆ ಇತ್ತಂತೆ.

ಹೀಗಾಯಿತಲ್ಲ ಎಂದು ಎದೆಗುಂದದೆ, ಅವಳಂತೆ ಇರುವವರಿಗೆ ಬೇಕಾಗಿ ಏನಾದರೂ ಮಾಡಲೇಬೇಕೆಂದು ತೀರ್ಮಾನಿಸಿದಳು.
ತನ್ನ ಹಾಗೇ ಇರುವವರನ್ನು ತನಗಿಂತ ಚೆನ್ನಾಗಿ ಬೇರಾರೂ ಅರ್ಥಮಾಡಲು ಸಾಧ್ಯವಿಲ್ಲ ಎಂದು ಮನಗಂಡು ಅಂತ ಹವರಿಗಾಗಿ ಬ್ರೈನ್ ಲಿಪಿಯನ್ನು ಕಂಡು ಹಿಡಿದು ಇತಿಹಾಸ ಸೃಷ್ಟಿಸಿದಳು. ಇಲ್ಲಿ ಅವಳ ಆನ್ನಿ ಅನ್ನುವ ಟ್ಯೂಟರ್‌ನ ತಾಳ್ಮೆ, ತ್ಯಾಗ ಹಾಗೂ ಸಹಾಯವನ್ನು ಸ್ಮರಿಸಲೇಬೇಕು.

ಇನ್ನು ನನ್ನ ಒಂದು ಅನುಭವವನ್ನು ಹೇಳಬೇಕು ಅನಿಸುತ್ತದೆ. ಇದು ಸುಮಾರು ಐದು ವರುಷಗಳ ಹಿಂದೆ ನಡೆದ ಘಟನೆ. ನಮ್ಮಲ್ಲಿ ಸ್ಪೋರ್ಸ್ ಡೇಯಂದು ಪ್ಯಾರಾಲಿಂಪಿಕ್ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೈದ ಜೋಬಿ ಮ್ಯಾಥ್ಯೂ ಅನ್ನು
ವ ಮಲಯಾಳಿ ಸಾಧಕರನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು. ನಾನಾಗ ಸ್ಟಾಫ್ ಸೆಕ್ರೆಟರಿ ಆಗಿದ್ದ ಕಾರಣ ಗೆ ಎಸ್ಕಾರ್ಟಿಂಗ್ ಹಾಗೂ ಬಂದ ಕೂಡಲೇ ಸ್ಕೂಲ್ ಲೀಡರ್ಸ್ ಹೂಗುಚ್ಚ ಕೊಟ್ಟು ಸ್ವಾಗತ ಮಾಡಬೇಕಿತ್ತು.

ಜತೆಗೆ ಏನೇ ಕಾರ್ಯಕ್ರಮ ಆದರೂ ನಿರೂಪಣೆ, ಸ್ವಾಗತ ಭಾಷಣ, ಧನ್ಯವಾದ ಸಮರ್ಪಣೆ ಇವೆಲ್ಲದಕ್ಕೂ ಮಕ್ಕಳನ್ನು ಸಿದ್ಧಪಡಿಸುವುದು ಇಂಗ್ಲೀಷ್ ಅಧ್ಯಾಪಕರ ಡ್ಯೂಟಿ ಅನ್ನುವುದು ನಮ್ಮಲ್ಲಿ ಅಲಿಖಿತ ನಿಯಮವಾದ ಕಾರಣ ಬರುವ ಈ ಅತಿಥಿಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡ ನನಗೆ ಕರುಳು ಚುರುಕ್ ಎಂದಿತ್ತು. ಮೊಣಕಾಲಿನ ಮೇಲಿನ ಭಾಗ ಕೇವಲ 3.5 ಫೀಟ್ ಮಾತ್ರ. ಮೊಣಕಾಲಿನ ಕೆಳಗೆ ಏನಿಲ್ಲ. ಹಾಗಾಗಿ ಆ ದಿನ ನಾನೇ ಒಂದು ತೀರ್ಮಾನಕ್ಕೆ ಬಂದು, ಇವರು ಕಾರಿನ ಹಿಂಬದಿಯ ಸೀಟಿನಲ್ಲಿಯೋ ಅಥವಾ ಡ್ರೈವರ್‌ನ ಹತ್ತಿರ ಇರುವ ಸೀಟ ಇರಬಹುದು ಅಂದುಕೊಂಡು ಬಂದ ಕೂಡಲೇ
ಹೂಗುಚ್ಛ ಕೊಡುವ ವಿದ್ಯಾರ್ಥಿಗಳೊಂದಿಗೆ ಅಲ್ಲಿ ನಿಂತಿದ್ದೆ.

ರಾಕೆಟ್ ವೇಗದಲ್ಲಿ ಕಾರು ಬಂದು ನಿಂತಿತು. ಕೂಡಲೇ ಡೈರೆಕ್ಟರ್, ಪ್ರಿನ್ಸಿಪಾಲ, ಎಚ್.ಎಂ, ಪಿಟಿಎ ಪ್ರೆಸಿಡೆಂಟ್ ಹೀಗೆ ಎಲ್ಲ
ರೂ ಡ್ರೈವರ್ ಸೀಟಿನತ್ತ ಓಡತೊಡಗಿದರು. ಈ ಕಡೆ ನಿಂತಿದ್ದ ನಮಗೆ ಏನೆಂದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ಡ್ರೈವರ್ ಸೀಟಿ
ನಿಂದ ಕೋಟು, ಕೂಲಿಂಗ್ ಗ್ಲಾಸ್ ಹಾಕಿದ್ದ ಒಂದು ಪುಟ್ಟ ಮನುಷ್ಯ ನೆಲಕ್ಕೆ ಜಿಗಿದು, ಎಲ್ಲರಿಗೂ ನಮಸ್ಕರಿಸಿ, ಎರಡೂ
ಕೈಗಳಲ್ಲಿರುವ ಚೌಕಾಕಾರದ ಸಣ್ಣ ಮಣೆಗಳನ್ನು ನೆಲಕ್ಕೆ ಊರುತ್ತಾ ವೇಗವಾಗಿ ನಡೆಯುತ್ತಾ ಮೆಟ್ಟಿಲು ಹತ್ತಿಗೆ ರೂಮಿಗೆ ಹೋದರು. (ಅದು ಅವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಕಾರು ಹಾಗೂ ಅವರು ಎಲ್ಲಾ ಕಡೆ ಸ್ವತಃ ಕಾರು ಚಲಾಯಿಸಿಕೊಂಡೇ ಹೋಗುತ್ತಾರೆ ಎಂದು ಆಮೇಲೆ ತಿಳಿಯಿತು).

ಸತ್ಯ ಹೇಳಬೇಕೆಂದರೆ ಆ ವೇಗದಲ್ಲಿ ಹೋಗಲು ಯಾರಿಗೂ ಸಾದ್ಯವಾಗದೆ ಎಲ್ಲರೂ ಅವರ ಹಿಂದಿನಿಂದ ಓಡುತ್ತಿದ್ದರು. ಗೆಸ್ಟ್ ಎಸ್ಕಾರ್ಟಿಂಗ್ ಮಾಡಬೇಕಾಗಿದ್ದ ನಾನು ಹಾಗೂ ಬಂದ ಕೂಡಲೇ ಹೂಗುಚ್ಛ ಕೊಟ್ಟು ಸ್ವಾಗತಿಸಬೇಕಾಗಿದ್ದ ವಿದ್ಯಾರ್ಥಿಗಳು ಎಲ್ಲರಿಗಿಂತ ಹಿಂದಿದ್ದು ಚಡಪಡಿಸುತ್ತಿದ್ದೆವು. ಮೈದಾ ನದಲ್ಲಿ ನೆರೆದಿದ್ದ ಮಕ್ಕಳು ಹಾಗೂ ಸಹೋದ್ಯೋಗಿಗಳು ನಮ್ಮನ್ನು ನೋಡಿ ಜೋರಾಗಿ ನಗುವಾಗ ಅವರೊಂದಿಗೆ ಸೇರಿ ನಮಗೂ ನಗದೆ ಬೇರೆ ಮಾರ್ಗವಿರಲಿಲ್ಲ.

ಗೆಸ್ಟ್‌ ರೂಮಿನಲ್ಲಿ ಚಹಾ ಸತ್ಕಾರದ ಬಳಿಕ ಉದ್ಘಾಟನಾ ಕಾರ್ಯಕ್ರಮ ಆರಂಭಗೊಂಡಿತು. ಈಗ ಅಂದಿನ ವಿಶೇಷ ಆಕರ್ಷಣೆ ಯಾಗಿದ್ದ ಜೋಬಿ ಮ್ಯಾಥ್ಯೂ ಅವರ ಮಾತುಗಳಿಗೆ ಕಿವಿಯಾಗುವ ಸಮಯ. ಕೇಳುತ್ತಿದ್ದ ಅಷ್ಟೂ ಜನರ ಕೆನ್ನೆಗಳಿಂದ ನೀರಿಳಿಯ ತೊಡಗಿತು. ಅವರು ಹುಟ್ಟುವಾಗ ಈ ಮಗು ಶಾರೀರಿಕವಾಗಿ ಶೇ.60 ಸರಿ ಇಲ್ಲವೆಂದೂ ಕೇವಲ ಶೇ.40ರಷ್ಟು ಮಾತ್ರ ಸರಿ ಇರುವ ಈ ಮಗುವನ್ನು ಸಾಕಿ ಏನೂ ಪ್ರಯೋಜನವಿಲ್ಲ ಎಂದು ಡಾಕ್ಟರ್ ಅವರ ಹೆತ್ತವರಲ್ಲಿ ಈ ಮಗುವನ್ನು ಉಪೇಕ್ಷಿಸಲು ಹೇಳಿದ್ದರಂ
ತೆ. ಆದರೆ ಅವರ ತಾಯಿ ’ಇದು ನನ್ನ ಮಗು, ಆಯುಷ್ಯ ಇರುವ ತನಕ ನಾನು ಸಾಕುತ್ತೇನೆ’ ಎಂದು ನಿರ್ಧರಿಸಿದರಂತೆ.

ಅದೇ ಮಗು(ಆಗ 39 ವರ್ಷ) ಈಗ ಇಂಟರ್‌ನ್ಯಾಷನಲ್ ಆರ್ಮ್ ರೆಸ್ಲರ್. ಗೆದ್ದಿರುವ ಚಿನ್ನದ ಪದಕಗಳಿಗೆ ಲೆಕ್ಕವಿಲ್ಲ. ಸ್ವಿಮ್ಮಿಂಗ್, ಫೆನ್ಸಿಂಗ್, ಕರಾಟೆ ಮೊದಲಾದವುಗಳಲ್ಲೂ ಸ್ವರ್ಣ ಪದಕ ಪಡೆದವರು. ಭಾರತದ ಹೆಸರನ್ನು ಜಗದಗಲ ಪಸರಿಸಿದ ಹೆಮ್ಮೆಯ ಪುತ್ರ. ಅವರು ಹೇಳುವುದೇನೆಂದರೆ ದೈಹಿಕವಾಗಿ ಕೇವಲ ಶೇ.40ರಷ್ಟು ಮಾತ್ರ ಸರಿಯಿರುವ ನನಗೆ ಈ ರೀತಿ ಸಾಧನೆ ಮಾಡಲು ಸಾಧ್ಯವಾದರೆ ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿರುವ ನಿಮಗೆ ಮನಸು ಮಾಡಿದರೆ ಮುಗಿಲು ಮುಟ್ಟಬಹುದು ಎಂದು.

ಮುಂದಿನ ಗುರಿ ಹಿಮಾಲಯ ಪರ್ವತವನ್ನು ಏರುವುದು ಅಂದಿದ್ದರು. ಈಗ ಹೇಳಿ ಇವರ ಮಾತು ಎಷ್ಟು ಸರಿಯಾಗಿದೆ ಅಲ್ಲವೇ? ಎಲ್ಲವೂ ಸರಿಯಾಗಿರುವ ನಾವು ಅದಿಲ್ಲ ಇದಿಲ್ಲ ಎಂದು ಸದಾ ಇರದರ ಡೆಗೆ ಗಮನ ಕೊಡುತ್ತಾ, ಕಂಪ್ಲೇಟ್ ಬಾಕ್ಸ್ಗಳಾಗಿ ಬದುಕು ಸಾಗಿಸುತ್ತಿರುತ್ತೇವೆ. ಮನುಷ್ಯನಿಗೆ ಇರಬಹುದಾದ ನಾಲ್ಕು ರೀತಿಯ ದೌರ್ಬಲ್ಯ ಗಳಲ್ಲಿ ದೈಹಿಕ ಅಂಗವಿಕಲತೆಯನ್ನು ಮೆಟ್ಟಿ ನಿಲ್ಲುವುದು ಬಲುತ್ರಾಸದಾಯಕ. ಅದನ್ನೇ ವರವನ್ನಾಗಿಸಿದ ಅದೆಷ್ಟೋ ನೈಜ ನಿದರ್ಶನಗಳನ್ನು ನಮ್ಮ ಸುತ್ತಮುತ್ತಲೂ ಕಾಣುತ್ತೇವೆ. ಇನ್ನು ನಮ್ಮಲ್ಲಿರುವ ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಸಮಸ್ಯೆಗಳನ್ನು ಬೇರು ಸಹಿತ ಕಿತ್ತೊಗೆಯುವುದು ಯಾವ ಲೆಕ್ಕವೇ ಅಲ್ಲ.

ಖಿನ್ನತೆ, ಆತ್ಮವಿಶ್ವಾಸದ ಕೊರತೆ, ವಿಳಂಬ ಪ್ರವೃತ್ತಿ, ಆತಂಕ, ಋಣಾತ್ಮಕ ಮನೋಭಾವ, ಅತಿಯಾದ ಉದ್ವೇಗ, ಸುಲಭವಾಗಿ ಸೋತು ಬಿಡುವುದು, ಮಿತಿಮೀರಿ ಸುಳ್ಳು ಹೇಳುವುದು, ಬೇಜವಾಬ್ದಾರಿತನ, ಅತಿಯಾದ ಚಿಂತೆ, ಸೋ ಮಾರಿತನ, ಕೆಟ್ಟ ಚಟಗಳು, ಮತ್ಸರ ಮೊದಲಾದ ಮಾನಸಿಕ ದೌರ್ಬಲ್ಯಗಳನ್ನು ಖಂಡಿತವಾಗಿಯೂ ಜಯಿಸಬಹುದು. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳು ವುದು, ಬದುಕನ್ನು ಇದ್ದಂತೆ ಒಪ್ಪಿಕೊಳ್ಳುವುದು, ಸ್ವಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ಯೋಗ-ಧ್ಯಾನ ಮಾಡುವುದು ಇತ್ಯಾದಿ ಚಟುವಟಿಕೆಗಳಿಂದ ಮನಸ್ಸನ್ನು ಸದಾ ಪ್ರಪುಲ್ಲವಾಗಿ ಇಡಬಹುದು.

ನಮ್ಮ ಮಾನಸಿಕ ಆರೋಗ್ಯ ನಮ್ಮ ಕೈಯ ಇದೆ ಅನ್ನುವುದನ್ನು ಮರೆಯಬಾರದು. ಪರರ ಅಭಿಪ್ರಾಯಗಳಿಗೆ ವಿಪರೀತವಾಗಿ
ತಲೆ ಕೆಡಿಸಿಕೊಳ್ಳುವುದು, ಅನುಕಂಪ ಗಿಟ್ಟಿಸಲು ಹಾತೊರೆಯುವುದು, ಬಹಳವಾಗಿ ದ್ವೇಷಿಸುವುದು, ಯಾರನ್ನೂ ಕ್ಷಮಿಸದೇ ಇರುವುದು, ಭಾವನೆಗಳಿಗನುಸಾರ ನಿರ್ಧಾರ ಬದಲಾಗುವುದು, ಹಣಕಾಸಿನ ಸಮಸ್ಯೆ, ಕೆಲಸದೊತ್ತಡ, ಎಲ್ಲರಲ್ಲೂ ತಪ್ಪೇ ಕಾಣುವುದು, ಕುತಂತ್ರ ಮಾಡುವುದು ಮೊದಲಾದ ಭಾವನಾತ್ಮಕ ಸಮಸ್ಯೆಗಳು ಕೂಡಾ ನಮ್ಮನ್ನು ತೀರಾ ಕುಗ್ಗಿಸಿ ಬಿಡುತ್ತವೆ.

ಬದಲಾವಣೆಯನ್ನು ಒಪ್ಪಿಕೊಂಡು ಸವಾಲುಗಳನ್ನು ಸ್ವೀಕರಿಸಿ ಪರಾಜಯವನ್ನು ವಿಜಯದ ಮೆಟ್ಟಿಲಾಗಿಸವ ಸದೃಡತೆಯಿಂದ ಇದರಿಂದ ಹೊರಬರಲು ಸಾಧ್ಯ. ಇನ್ನು ಸಾವಿನ ಕುರಿತು ಭಯ, ಭವಿಷ್ಯದ ಚಿಂತೆ, ಅತಿಯಾದ ಮರೆವು, ಸ್ವನಿಂದನೆ ಮೊದಲಾದ ಬೌದ್ಧಿಕ ಸಮಸ್ಯೆಗಳನ್ನು ಸಂಗೀತ ಕೇಳುವುದು, ಪುಸ್ತಕ ಓದುವುದು, ಪ್ರಾರ್ಥಿಸುವುದರ ಮೂಲಕ ಸುಲಭವಾಗಿ ನಿವಾರಿಸ ಬಹುದು.

ಈಗ ಹೇಳಿ ಇದರಲ್ಲಿ ಕೆಲವಾದರೂ ದೋಷಗಳು ನಮ್ಮಲ್ಲೂ ಇಲ್ಲವೇ? ಖಂಡಿತವಾಗಿಯೂ ಇದ್ದೇ ಇದೆ. ಏಕೆಂದರೆ ಪರಿಪೂರ್ಣ ನಾದ ಮನುಷ್ಯ ಖಂಡಿತಾ ಇರಲಾರ. ಅದು ಕೇವಲ ಕಾಲ್ಪನಿಕವಾಗಿ ಸೃಷ್ಟಿಸಿದ ಕಥಾ ಪಾತ್ರಗಳ, ಸಿನಿಮಾಗಳ ಇರಲು ಸಾಧ್ಯ ವಷ್ಟೇ. ಆದರೆ ನಮ್ಮಲ್ಲಿ ಅಂತಹ ದೋಷಗಳು ಕಡಿಮೆಯಿದ್ದು, ಒಳ್ಳೆಯ ಗುಣಗಳು ಅಧಿಕವಾಗಿದೆ.

ಹಾಗಾಗಿ ಕೊರತೆಗಳಿವೆ ಎಂದು ಕೊರಗದೇ ಅದನ್ನು ನಿವಾರಿಸುವ ಕಡೆಗೆ ಗಮನಹರಿಸಿ ಕಾರ್ಯಪ್ರವೃತ್ತರಾದರೆ ಬದುಕು ಅಕ್ಷರಶಃ ಬಂಗಾರವಾಗುವುದರಲ್ಲಿ ಸಂಶಯವಿಲ್ಲ. ಜೋಬಿ ಮ್ಯಾಥ್ಯೂ ಹೇಳಿದಂತೆ ನಮಗೆ ಮುಗಿಲನ್ನೇ ಮುಟ್ಟಬಹುದು.