Friday, 13th December 2024

ಪರಿಹಾರ ಕ್ರಮಗಳೇ ಸಮಸ್ಯೆಯಾದಾಗ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಏನೋ ಒಂದು ಕ್ರಮ ಕೈಗೊಂಡಿರುತ್ತೇವೆ. ಅದರಿಂದ ಸಮಸ್ಯೆ ಇತ್ಯರ್ಥವಾಯಿತು
ಎಂದು ಭಾವಿಸಿರುತ್ತೇವೆ. ಆದರೆ ಅದು ಇನ್ನೊಂದು ರೀತಿಯಲ್ಲಿ ಬೆಳೆಯುತ್ತಿರುತ್ತದೆ, ಮತ್ತಷ್ಟು ತೀವ್ರ ಸ್ವರೂಪದಲ್ಲಿ.

ಕೆಲವೊಮ್ಮೆ ನಾವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ. ಆ ಕ್ಷಣದಲ್ಲಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಅದರಿಂದ ಸಮಸ್ಯೆ ನಿವಾರಣೆಯಾಯಿತು ಎಂದೂ ಭಾವಿಸುತ್ತೇವೆ. ತಾಪಡೆ ತೋಪುಡು ಕ್ರಮ ಜರುಗಿಸಿದ್ದೇ ಸಮಸ್ಯೆ ಬಗೆಹರಿಯಲು ಕಾರಣ ಎಂದೂ ಅಂದುಕೊಳ್ಳುತ್ತೇವೆ. ಇದು ನಿಜವೂ ಹೌದು.

ಆದರೆ ಎಲ್ಲ ಸಂದರ್ಭಗಳಲ್ಲೂ ಇದು ಸರಿ ಆಗಲಿಕ್ಕಿಲ್ಲ. ಮನೆಯಲ್ಲಿ ನಲ್ಲಿ, ಟ್ಯಾಂಕ್ ಸೋರಲಾರಂಭಿಸಿದರೆ, ತಕ್ಷಣ ಕ್ರಮ ಕೈಗೊಳ್ಳುವು ದೊಂದೇ ಸಮಸ್ಯೆ ನಿವಾರಣೆಗೆ ಕಾರಣವಾದೀತು. ಎಷ್ಟೋ ಸಂದರ್ಭಗಳಲ್ಲಿ ಎಷ್ಟು ಬೇಗ ಸಮಸ್ಯೆ ಬಗೆಹರಿಸಲು ಮುಂದಾ ಗುತ್ತೇವೆ ಎಂಬುದೇ ಮುಖ್ಯವಾಗುತ್ತದೆ.

ಬೆಂಕಿ ಆಕಸ್ಮಿಕ ಸಂಭವಿಸಿದಾಗ, ಪರಿಹಾರದ ಇತರ ಅಂಶಗಳಿಗಿಂತ, ಎಷ್ಟು ಬೇಗ ಕಾರ್ಯೋನ್ಮುಖರಾಗಿದ್ದೀರಿ ಎಂಬ ಒಂದು ಅಂಶವೇ ಮುಖ್ಯವಾಗುತ್ತದೆ. ಬಹುತೇಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯೋನ್ಮುಖವಾಗುವ ವೇಗವೊಂದೇ ಮುಖ್ಯವೆಂದು ಭಾವಿಸುತ್ತೇವೆ. ಆದರೆ ಅದು ಪರಿಹಾರ ರೂಪಿಸುವ ನಿಟ್ಟಿನಲ್ಲಿ ಒಂದು ಅಂಶವಷ್ಟೇ ಎಂಬುದು ಎಷ್ಟೋ ಸಲ ಅನಿಸುವುದಿಲ್ಲ. ಅನೇಕ ಸಲ ನಾವು ಸರಿಯಾದ ಕಾಲದಲ್ಲಿ ತೆಗೆದುಕೊಂಡ ನಿರ್ಧಾರದಿಂದ, ಸಮಸ್ಯೆ ಉಲ್ಭಣ ಗೊಳ್ಳಬಹುದು. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ನಾವು ಎಷ್ಟು ಬೇಗ ಕಾರ್ಯೋನ್ಮುಖರಾಗಿದ್ದೇವೆ ಎಂಬುದೊಂದೇ ಮಾನ ದಂಡವಲ್ಲ. ಸಮಸ್ಯೆ ಪರಿಹಾರಕ್ಕೆ ಮುಂದಾಗುವಾಗ, ಆ ಸಮಸ್ಯೆ ಪಡೆಯಬಹು ದಾದ ಬಹು ಆಯಾಮದ ಕಲ್ಪನೆಯಿಲ್ಲದಿದ್ದರೆ ಪರಾಮಶಿ ಆಗುತ್ತದೆ.

ಇಲ್ಲಿ ನಿಮಗೊಂದು ಸ್ವಾರಸ್ಯಕರವಾದ ಪ್ರಸಂಗವನ್ನು ಹೇಳುತ್ತೇನೆ. ಇದನ್ನು ಹೇಳಿದ್ದು ನನ್ನ ಇಷ್ಟದ ಲೇಖಕ ಪ್ರಕಾಶ ಅಯ್ಯರ್. ಸುಮಾರು ನೂರು ವರ್ಷಗಳ ಹಿಂದೆ, ದಿಲ್ಲಿಯಲ್ಲಿ ನಡೆದ ಘಟನೆಯಿದು. ಇಂದಿಗೂ ಇದು ನಮಗೆ ಪ್ರಸ್ತುತವಾಗಿದೆ. ಈ ಪ್ರಸಂಗದಿಂದ ನಾವು ಜೀವನದಲ್ಲಿ ಪಾಠ ಕಲಿಯಬಹುದು.

ದಿಲ್ಲಿಯ ಹಲವು ಬಡಾವಣೆಗಳಲ್ಲಿ ಏಕಾಏಕಿ ಹಾವುಗಳ ಕಾಟ ವಿಪರೀತವಾಯಿತು. ಜನ ಗಾಬರಿಗೆ ಬಿದ್ದರು. ಕೆಲವು ಬಡಾವಣೆಗಳಲ್ಲಿ ಹಾವು ಕಡಿದು ಜನ ಸತ್ತರು. ಆಗ ಬ್ರಿಟಿಷರ ಆಳ್ವಿಕೆಯಿತ್ತು. ಇದರಿಂದ ಕ್ರುದ್ಧರಾದ ಜನ ಬ್ರಿಟಿಷ್ ಆಡಳಿತಕ್ಕೆ ಹಿಡಿಶಾಪ ಹಾಕಲಾ ರಂಭಿಸಿದರು. ಆಗ ಬ್ರಿಟಿಷ್ ಆಡಳಿತ ಹಠಾತ್ ಕಾರ್ಯಪ್ರವೃತ್ತವಾಯಿತು. ಅವರು ಹಾವು ಹಿಡಿಯುವವರನ್ನು ಕರೆಯಿಸಿದರು. ಅವರು ತಕ್ಷಣ ಹಾವುಗಳನ್ನು ಹಿಡಿಯಲಾರಂಭಿಸಿದರು. ಆದರೆ ಅದರಿಂದ ಹೆಚ್ಚು ಪ್ರಯೋಜನವಾಗಲಿಲ್ಲ.

ಕಾರಣ ಹಿಡಿದ ಹಾವುಗಳನ್ನು ಅವರು ಅಕ್ಕಪಕ್ಕದ ಊರುಗಳಿಗೆ ಹೋಗಿ ಬಿಟ್ಟು ಬರುತ್ತಿದ್ದರು. ಒಂದು ವಾರದ ಬಳಿಕ, ಆ ಹಾವುಗಳು ಪುನಃ ದಿಲ್ಲಿಗೆ ಬರಲಾರಂಭಿಸಿದವು. ಊರ ಹೊರಗೆ ಬಿಟ್ಟು ಬಂದ ಹಾವುಗಳು ಪುನಃ ನಗರದೊಳಕ್ಕೆ ಆಗಮಿಸಿ, ಜನರಿಗೆ ಕಚ್ಚಲಾ ರಂಭಿಸಿದವು. ಹಾವು ಹಿಡಿಯಲೆಂದು ನಿಯೋಜಿತರಾದ ಮೂವರು ಹಾವು ಕಡಿದು ಸತ್ತ ಘಟನೆಯೂ ವರದಿಯಾಯಿತು. ಇದರಿಂದ ಸಮಸ್ಯೆ ಪರಿಹಾರವಾಗುವ ಬದಲು ಮತ್ತಷ್ಟು ತೀವ್ರ ಸ್ವರೂಪ ಪಡೆಯಲಾರಂಭಿಸಿತು.

ಆಗ ಜನ ಸ್ಥಳೀಯ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ದಂಗೆ ಏಳುವ ಸ್ಥಿತಿ ನಿರ್ಮಾಣವಾಯಿತು. ಆಗ ಬ್ರಿಟಿಷ್ ಆಡಳಿತ ವಿಚಲಿತವಾಯಿತು. ತಜ್ಞರನ್ನು ಕರೆಯಿಸಿ ಸಭೆ ಮಾಡಿತು. ಬೇರೆ ಊರುಗಳಿಂದ ಹಾವು ಹಿಡಿಯುವವರನ್ನು ಕರೆಯಿಸುವ ಸಲಹೆಯೂ ಬಂತು. ಆದರೆ ಆಗಲೇ ಹಾವು ಕಡಿದು ಕೆಲವರು ಸತ್ತಿದ್ದರಿಂದ, ಹಾವಾಡಿಗರ ಆತ್ಮಸ್ಥೈರ್ಯ ಉಡುಗಿಹೋಗುವಂತಾಗಿತ್ತು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ಸುಮ್ಮನೆ ಕುಳಿತುಕೊಳ್ಳುವಂತಿರಲಿಲ್ಲ. ದಿನದಿಂದ ದಿನಕ್ಕೆ ಹಾವುಗಳ ಕಾಟ ಬೇರೆ ಬೇರೆ ಬಡಾವಣೆಗಳಿಗೂ ವಿಸ್ತರಿಸಲಾ ರಂಭಿಸಿತ್ತು.

ಅದರಿಂದ ಗಾಬರಿಗೊಂಡ ಬ್ರಿಟಿಷ್ ಆಡಳಿತ, ಹಾವುಗಳನ್ನು ಸಾಯಿಸಲು ಆದೇಶಿಸಿತು. ಆದರೆ ಹಾವುಗಳನ್ನು ಸಾಯಿಸುವುದು ಅಷ್ಟು ಸುಲಭ ಅಲ್ಲ. ಇದರಿಂದ ಸಮಸ್ಯೆಗೆ ತಕ್ಷಣ ಪರಿಹಾರ ಸಿಗಲಿಕ್ಕಿಲ್ಲ ಎಂದು ಆಡಳಿತಕ್ಕೆ ಅನಿಸಿತು. ಆಗ ಯಾರೋ ಒಂದು ಕ್ರೇಜಿ ಐಡಿಯಾ ಕೊಟ್ಟರು. ಬ್ರಿಟಿಷ್ ಅಧಿಕಾರಿಗಳಿಗೆ ಅದೇ ಸರಿ ಎಂದೆನಿಸಿತು. ಅದೇನೆಂದರೆ, ಯಾರೇ ಆಗಲಿ, ಹಾವನ್ನು ಸಾಯಿಸಿ ತಂದರೆ ಅವರಿಗೆ
ನೂರು ರುಪಾಯಿ (ಆ ದಿನಗಳಲ್ಲಿ ನೂರು ರುಪಾಯಿ ಅಂದ್ರೆ ದೊಡ್ಡ ಮೊತ್ತ) ಬಹುಮಾನ ನೀಡಲಾಗುವುದು ಎಂದು ಘೋಷಿಸಿತು.
ಪರಿಣಾಮ, ಜನ ಹಾವುಗಳನ್ನು ಕಂಡ ಕಂಡಲ್ಲಿ ಸಾಯಿಸಲಾರಂಭಿಸಿದರು.

ಸಾಯಿಸಿದ ಹಾವನ್ನು ತೆಗೆದುಕೊಂಡು ಹೋಗಿ, ಬಹುಮಾನದ ಹಣವನ್ನು ಪಡೆಯಲಾರಂಭಿಸಿದರು. ಒಬ್ಬೊಬ್ಬರು ದಿನಕ್ಕೆ ಐದಾರು ಹಾವುಗಳನ್ನು ಹೊಡೆದು ಸಾಯಿಸಿ ಕೈತುಂಬಾ ಹಣ ಗಳಿಸಲಾರಂಭಿಸಿದರು. ಹಣದ ಆಸೆಗೆ ಜನ ಹಾವುಗಳನ್ನು ಸಾಯಿಸಲು ಸ್ವಯಂ
ಪ್ರೇರಿತರಾಗಿ ಮುಂದಾದರು. ಹಾವುಗಳನ್ನು ಸಾಯಿಸಲು ಪೈಪೋಟಿ ಏರ್ಪಟ್ಟಿತು. ಐದು ಹಾವುಗಳನ್ನು ಸಾಯಿಸಿದವನಿಗೆ ಹದಿನೈದು ಹಾವನ್ನು ಸಾಯಿಸಿದವ ಆದರ್ಶವಾದ. ತಾನೂ ಇನ್ನೂ ಅಽಕ ಹಾವುಗಳನ್ನು ಸಾಯಿಸಬೇಕೆಂದು ಆತ ಊಟ-ನಿದ್ದೆ ಬಿಟ್ಟು, ಹಗಲು-ರಾತ್ರಿಯೆನ್ನದೇ ಪ್ರಯತ್ನಿಸಲಾರಂಭಿಸಿದ.

ಇದರಿಂದ ಒಂದು ವಾರದಲ್ಲಿ ಹಾವಿನ ಕಾಟ ನಿಯಂತ್ರಣಕ್ಕೆ ಬಂದಿತು. ಇದು ಜನರ ಅನುಭವಕ್ಕೂ ಬಂದಿತು. ಅವರೆಲ್ಲ ಸಮಾಧಾನದ ನಿಟ್ಟುಸಿರು ಬಿಡಲಾರಂಭಿಸಿದರು. ಹಾವನ್ನು ಸಾಯಿಸಿದಕ್ಕೆ ಹಣವೂ ಸಿಗಲಾರಂಭಿಸಿದ್ದರಿಂದ, ಜನರಿಗೆ ಮತ್ತಷ್ಟು ಖುಷಿಯಾಯಿತು. ಬ್ರಿಟಿಷ್ ಅಧಿಕಾರಿಗಳಿಗೂ ಸಮಾಧಾನವಾಯಿತು. ಅಂತೂ ಹಾವುಗಳ ಕಾಟ ಏಕಾಏಕಿ ನಿಂತಿತು. ಆದರೆ, ಹಾವು ಸಾಯಿಸಿ ಹಣ ಮಾಡಿ ದವರು ಮಾತ್ರ ಬೇಸರಗೊಂಡರು. ಅವರ ಕಮಾಯಿ ನಿಂತು ಹೋಯಿತು.

ಅವರಿಗೆ ಹಾವಿನ ಕಾಟದ ಸಮಸ್ಯೆ ತಕ್ಷಣ ಬಗೆಹರಿಯುವುದು ಬೇಕಿರಲಿಲ್ಲ. ಅವರು ಒಂದು ಉಪಾಯ ಮಾಡಿದರು. ತಮ್ಮ ಮನೆಗಳ ಹಿತ್ತಲಿನಲ್ಲಿ, ಹೊಲ-ಗದ್ದೆಗಳಲ್ಲಿ ಹಾವುಗಳನ್ನು ಸಾಕಲಾರಂಭಿಸಿದರು. ಬೇರೆ ಬೇರೆ ಊರುಗಳಿಂದಲೂ ಗೋಣಿ ಚೀಲದಲ್ಲಿ ಹಾವುಗಳನ್ನು ಹಿಡಿದು ದಿಲ್ಲಿಗೆ ತರಲಾರಂಭಿಸಿದರು. ಹೀಗೆ ಹಿಡಿದು ತಂದ ಹಾವುಗಳನ್ನು ದಿಲ್ಲಿಯಲ್ಲಿ ಸಾಯಿಸಿ ಬಹುಮಾನದ ಹಣವನ್ನು ಪಡೆಯುವು ದನ್ನು ಮುಂದುವರಿಸಿದರು.

ಬೇರೆ ಬೇರೆ ಊರುಗಳಿಂದ ದಿಲ್ಲಿಗೆ ಹಾವುಗಳನ್ನು ಕಳಿಸುವ ತಂಡಗಳು ಹುಟ್ಟಿಕೊಂಡವು. ‘ಹಾವು ಹಿಡಿದು ನಮಗೆ ಕೊಟ್ಟರೆ ಹತ್ತು ರುಪಾಯಿ ಕೊಡುತ್ತೇವೆ’ ಎಂದು ಕೆಲವರು ದಿಲ್ಲಿಯ ಸುತ್ತ-ಮುತ್ತಲ ಊರುಗಳಲ್ಲಿ ಪ್ರಚಾರ ಮಾಡಲಾರಂಭಿಸಿದರು. ಆ ಊರುಗಳಲ್ಲಿ ಹಣದ ಆಸೆಗೆ ಹಾವುಗಳನ್ನು ಹಿಡಿಯುವವರ ಸಂಖ್ಯೆ ಹಠಾತ್ ಜಾಸ್ತಿಯಾಯಿತು. ಹತ್ತು ರುಪಾಯಿಗೆ ಹಾವುಗಳನ್ನು ಖರೀದಿಸಿ, ಅವು ಗಳನ್ನು ದಿಲ್ಲಿಗೆ ತಂದು ಸಾಯಿಸಿ ತಲಾ ಹಾವಿಗೆ ನೂರು ರುಪಾಯಿ ಪಡೆಯುವ ದಂಧೆ ಜೋರಾಯಿತು.

ಹಾವಿನ ಕಾಟ ನಿಯಂತ್ರಣಕ್ಕೆ ಬಂದಿದೆ ಎಂದು ಅನಿಸಿದರೂ, ಕೆಲಕಾಲದ ನಂತರ ಅದು ನಿಧಾನವಾಗಿ ಉಲ್ಭಣವಾಗಲಾರಂಭಿಸಿತು. ಹಣದಾಸೆಗಾಗಿ ಜನ ಹಾವನ್ನು ಬೇರೆ ಊರುಗಳಿಂದ ತಂದು ಇಲ್ಲಿ ಸಾಯಿಸಿ, ಬಹುಮಾನ ಗಿಟ್ಟಿಸುತ್ತಿರುವ ಸಂಗತಿ ಬ್ರಿಟಿಷ್ ಅಧಿಕಾರಿಗಳ ಗಮನಕ್ಕೆ ಬಂದಿತು. ಎಲ್ಲಿ ತನಕ ಹಾವನ್ನು ಸಾಯಿಸಿದರೆ ಬಹುಮಾನ ಕೊಡಲಾಗುವುದೋ, ಅಲ್ಲಿ ತನಕ ಈ ಸಮಸ್ಯೆ ಒಂದಿಂದು ರೀತಿಯಲ್ಲಿ ಮುಂದುವರಿಯುತ್ತದೆ ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದು ಬ್ರಿಟಿಷ್ ಅಧಿಕಾರಿಗಳಿಗೆ ಮನದಟ್ಟಾ ಯಿತು.

ಬಹುಮಾನದ ಹಣವೇ ಹಾವಿನ ಕಾಟ ಜೀವಂತವಾಗಿರಲು ಕಾರಣ ಎಂಬುದು ಅವರಿಗೆ ಸ್ಪಷ್ಟವಾಯಿತು. ಬ್ರಿಟಿಷ್ ಅಧಿಕಾರಿಗಳು ತುರ್ತು
ಸಭೆ ಸೇರಿದರು. ಸಮಸ್ಯೆಯನ್ನು ಗಂಭೀರವಾಗಿ ಅವಲೋಕಿಸಿದರು. ಬಹುಮಾನದ ಆಸೆಗೆ ಬಿದ್ದು ಜನ ಬೇರೆ ಊರುಗಳಿಂದ ಹಾವನ್ನು ದಿಲ್ಲಿಗೆ ತರುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಾಳಬಹುದು ಎಂಬ ಅಂಶವೂ ಚರ್ಚೆಗೆ ಬಂದಿತು. ಬಹುಮಾನದ ಹಣವನ್ನು ನಿಲ್ಲಿಸಿದರೆ ಹೇಗೆ? ಅದೇ ಸರಿಯಾದ ಉಪಾಯ ಎನಿಸಿತು. ‘ಇನ್ನು ಮುಂದೆ, ಹಾವನ್ನು ಸಾಯಿಸಿದವರಿಗೆ ಬಹುಮಾನದ
ಹಣವನ್ನು ನೀಡಲಾಗುವುದಿಲ್ಲ’ ಎಂದು ಬ್ರಿಟಿಷ್ ಆಡಳಿತ ಘೋಷಿಸಿತು!

ಇದರಿಂದ ಪರಿಣಾಮ ಏನಾಯ್ತು ಗೊತ್ತಾ? ಬಹುಮಾನದ ಹಣದ ಆಸೆಗಾಗಿ, ಜನ ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿ, ಹಿತ್ತಲಲ್ಲಿ ಹಾವುಗಳ ಸಾಕಣೆಯನ್ನು ಆರಂಭಿಸಿದ್ದರಲ್ಲ, ಅವರಿಗೆ ತೀವ್ರ ನಿರಾಸೆಯಾಯಿತು. ಇನ್ನು ಮುಂದೆ ಹಾವುಗಳನ್ನು ಸಾಯಿಸಿದರೂ ಪ್ರಯೋಜನ ಇಲ್ಲ
ಮತ್ತು ಅವುಗಳನ್ನು ಸಾಕಿದರೂ ಪ್ರಯೋಜನ ಇಲ್ಲ ಎಂದು ಅನಿಸಿತು. ಹಾವುಗಳ ಸಾಕಣೆಯಲ್ಲಿ ತೊಡಗಿದ್ದವರೆಲ್ಲ, ತಾವು ಸಾಕುತ್ತಿದ್ದ ಹಾವುಗಳನ್ನು ಒಂದೇ ಬಾರಿಗೆ ಹೊರಗೆ ಬಿಟ್ಟುಬಿಟ್ಟರು! ಆಗ ದಿಲ್ಲಿಯಲ್ಲಿ ಒಂದೇ ಸಮನೆ ಹಾವುಗಳ ಕಾಟ ಹಿಂದೆಂದಿಗಿಂತಲೂ ವಿಪರೀತ ಜಾಸ್ತಿಯಾಗಿಬಿಟ್ಟಿತು.

ಜನ ಒಂದೇ ಸಮನೆ ಬೆಚ್ಚಿಬಿದ್ದರು. ಬ್ರಿಟಿಷ್ ಆಡಳಿತಕ್ಕೆ ಶಾಪ ಹಾಕಲಾರಂಭಿಸಿದರು. ಹಾವುಗಳ ಕಾಟದ ಸಮಸ್ಯೆಯನ್ನು ಪರಿಹರಿಸಲು ಕೈಗೊಂಡ ಕ್ರಮಗಳಿಂದಾಗಿ, ಆ ಸಮಸ್ಯೆ ಮತ್ತಷ್ಟು ಅಧಿಕವಾಗಲು, ಬೃಹದಾಕಾರವಾಗಿ ಬೆಳೆಯಲು ಕಾರಣವಾಯಿತು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಏನೋ ಒಂದು ಕ್ರಮ ಕೈಗೊಂಡಿರುತ್ತೇವೆ. ಅದರಿಂದ ಸಮಸ್ಯೆ ಇತ್ಯರ್ಥವಾಯಿತು ಎಂದು ಭಾವಿಸಿರುತ್ತೇವೆ. ಆದರೆ ಅದು ಇನ್ನೊಂದು ರೀತಿಯಲ್ಲಿ ಬೆಳೆಯುತ್ತಿರುತ್ತದೆ, ಮತ್ತಷ್ಟು ತೀವ್ರ ಸ್ವರೂಪದಲ್ಲಿ. ಹೀಗಾಗಿ ನಾವು ತೆಗೆದು ಕೊಂಡ ಕ್ರಮ ಎಷ್ಟರಮಟ್ಟಿಗೆ ಫಲಕಾರಿ ಎಂಬುದು ನಮಗೆ ಗೊತ್ತಿರಬೇಕು.

ಸಮಸ್ಯೆ ಪರಿಹಾರಕ್ಕೆ ತೆಗೆದುಕೊಳ್ಳುವ ಕ್ರಮಗಳೇ ಸಮಸ್ಯೆಯನ್ನು ತಂದೊಡ್ಡಬಾರದು. ಮೂಲ ಸಮಸ್ಯೆಗಿಂತ ಪರಿಹಾರವೇ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಬಹುದು ಎಂಬ ಅಕಲು ಸಮಸ್ಯೆಯನ್ನು ನಿಭಾಯಿಸುವವರಿಗೆ ಇರಬೇಕು. ಇಲ್ಲದಿದ್ದರೆ ದಿಲ್ಲಿಯಲ್ಲಿ ಹಾವು ಹಿಡಿದಂತಾಗುತ್ತದೆ.