Wednesday, 11th December 2024

ಚಹಾ ಕೊಟ್ಟರೆ ಒಲ್ಲೆ ಅನ್ನಬಾರದಂತೆ, ನಮ್ಮ ಕಡೆ ಕಾನೂನಿದೆ !

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್

ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬ ನಮ್ಮದು, ಮಧ್ಯಮಕ್ಕಿಂತಲೂ ಸ್ವಲ್ಪ ಕೆಳಗೇ ಇತ್ತೆನ್ನಬಹುದು. ಬರೀ ಎಸ್.ಎಸ್.ಎಲ್.ಸಿ., ಟಿಸಿ ಎಚ್, ಶಿಕ್ಷಕರಾಗಿದ್ದ ನಮ್ಮ ತಂದೆ ಬರುತ್ತಿದ್ದುದು 250 ರುಪಾಯಿ ಸಂಬಳ.

ನಾವು ನಾಲ್ಕು ಜನ ಮಕ್ಕಳು. ಎರಡು ಹೊತ್ತಿನ ಊಟ, ಬೆಳಗಿನ ತಿಂಡಿ, ಆಗಾಗ ಚಹಾ, ಬಾಲ್ಯಕ್ಕೆ ಆ ನೀರು ನಿಕ್ಕಟ ಚಹಾವೇ ದಿವ್ಯ
ಪಾನೀಯ, ಅದಕ್ಕಾಗಿ ಸ್ಟೌವಿನ ಮುಂದೆ ನಮ್ಮ ನಮ್ಮ ಗ್ಲಾಸು ಹಿಡಿದು ಕುದಿಯುತ್ತಿದ್ದ ನೀರಿಗೆ ಹಾಕಿದ್ದ ಚಹಾ ಪುಡಿಯನ್ನೆ
ವೀಕ್ಷಿಸುತ್ತಾ ಕಾಯುತ್ತಿದ್ದೆವು, ಸೀಮೆ ಎಣ್ಣೆಯ ಬತ್ತಿ ಸ್ಟೌವ್, ಆಗಾಗ ತನಗೆ ಕೆಳಗಿನ ಬತ್ತಿಗಳಿಗೆ ಸೀಮೆ ಎಣ್ಣೆ ತಾಕದ್ದಕ್ಕೆ ಭಗ್ ಭಗ್ ಎನ್ನುತ್ತಿತ್ತು, ಅದರ ಮುಂದೇ ಕೂತಿರುತ್ತಿದ್ದ ಕೃಶಕಾಯದ ಬಾಯಿ ತುಂಬಾ ಸದಾ ಹುಗುಳಿನ (ಮೌತ್ ಅಲ್ಸರ್) ನಮ್ಮ ತಾಯಿ ಒಂದು ಸಣ್ಣ ಚಮಚವನ್ನು ಚಹಾದ ಡಿಕಾಕ್ಷನ್‌ನಲ್ಲಿ ತಿರುವುತ್ತಾ ಕೂತಿರುತ್ತಿದ್ದಳು.

ಹೊರಗೆ ಸೌ ನಂಬರ್ ಬೀಡಿಯನ್ನೋ, ಹಂಚರಾಜ್ ಬೀಡಿಯನ್ನೋ ಸೇದುತ್ತಾ ಪಟ್ಟಿ ಪಟ್ಟಿ ಡ್ರಾಯರ್ ಮೇಲೆ ಕೂತಿರುತ್ತಿದ್ದ ನಮ್ಮಪ್ಪನ ಮುಂದೆ ಅಂಗಾಂಗಗಳನ್ನು ಕಳಚಿಕೊಂಡು ಮಲಗಿದ್ದ ವಾಲ್‌ಕ್ಲಾಕ್, ಅಲಾರಂ ಕ್ಲಾಕ್ ಗಳಿರುತ್ತಿದ್ದವು, ಭಾನುವಾರ ಬಂತೆಂದರೆ ಶಿಕ್ಷಕ ವೃತ್ತಿಯ ನಮ್ಮಪ್ಪನ ಬಹುದೊಡ್ಡ ಹಾಬಿ ಈ ವಾಚ್‌ರಿಪೇರಿ, ಮತ್ತು ಭಾನುವಾರದ ವಿಶೇಷ ಉಡಿಗೆ ಈ ದೊಗಲೆ ಪಟ್ಟಿ ಪಟ್ಟಿ ಡ್ರಾಯರ್, ಎದೆ ತುಂಬಾ ಕೂದಲಿದ್ದ ಅಪ್ಪನ ಆ ಅರೆಬತ್ತಲೆ ಉಡುಪು , ಭುಜದ ಮೇಲಿನ ಒಂಬತ್ತು ಎಳೆ ಜನಿವಾರ, ದೂರದಿಂದ ನೊಡಿದರೆ ಆ ಎದೆಯ ತುಂಬಾ ಕೂದಲಿನ ಮಧ್ಯದ ಬೆಳ್ಳನೆಯ ಜನಿವಾರ ಕಪ್ಪುವನ ರಾಶಿಯ ಮಧ್ಯೆ
ಬೆಟ್ಟದ ಮೇಲಿಂದ ಕೆಳಗೆ ಹರಿಯುತ್ತಿದ್ದ ಬಿಳಿಜಲರಾಶಿಯನ್ನು ನೆನಪಿಗೆ ತರುತ್ತಿತ್ತು.

ಸಹ್ಯಾದ್ರಿಯ ಕಡೆ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿನ ಪರ್ವತ, ಬೆಟ್ಟಗುಡ್ಡಗಳಲ್ಲಿ ಇಂಥ ದೃಶ್ಯ ಕಂಡಾಗ ಅಷ್ಟು ದೊಡ್ಡ ಪರ್ವತ ರಾಶಿಗಳ ಮಧ್ಯದ ಜಲಧಾರೆ ಅಪ್ಪನ ಎದೆಯ ರೋಮದ ಮಧ್ಯದ ಜನಿವಾರವೇ ಎಂದು ಈಗಲೂ ನನ್ನ ಅರವತ್ತರ ಈ ವಯಸ್ಸಿನಲ್ಲೂ ಅಪ್ಪನಿದ್ದ ಅಪ್ಪನದ್ದೇ ನೆನಪು.

ನಮ್ಮಪ್ಪ ಬೇವಿನ್ಹಾಳ್ ವೆಂಕೋಬಾಚಾರ್ ಬಹಳ ಸಾಧು ಸ್ವಭಾವದ, ತನ್ನ ಪಾಡಿಗೆ ತಾನಿರುವ , ಇದ್ದುದರಲ್ಲಿಯೇ ಇತರರಿಗೆ ಒಂದು, ಎರಡು, ಐದು ರುಪಾಯಿಗಳ ಸಹಾಯ ಮಾಡುತ್ತಿದ್ದ ಸರಳ ಜೀವಿ. ಆತನೂ ಬಡ ತಂದೆಯ ಮಗನೇ, ನಮ್ಮನ್ನು ತನ್ನ ಬಡತನದಿಂದಾಗಿ ಬಡತನದಲ್ಲೇ ಬೆಳೆಸಿದ, ಮಾವಂದಿರ, ಕಕ್ಕಂದಿರ , ಎದುರು ಮನೆಯ ಶೆಟ್ಟರ ದೊಗಳೆ ಬಟ್ಟೆಗಳನ್ನೇ ಅಲ್ಪ ಸ್ವಲ್ಪ ಅಲ್ಟರ್ ಮಾಡಿಸಿಕೊಂಡು ಹಾಕಿಕೊಳ್ಳುವದನ್ನೆ ರೂಢಿಯಾಯಿತಾಗಲಿ, ಹೊಸ ಬಟ್ಟೆಕೊಂಡು, ಟೇಲರ್ ಬಳಿ ಅಳತೆ ಕೊಟ್ಟು, ನಮಗೆ ಬೇಕಾದಂತೆ, ಎಲ್ಲೆಲ್ಲೋ ಜೇಬುಗಳನ್ನಿಡಿಸಿಕೊಂಡು ಶೋಕಿ ಮಾಡಿದ್ದು ನಮಗೆ ಅರಿಯದೇ ಇರುವ ವಿಷಯ.

ಹೀಗಾಗಿ ಇಂದಿಗೂ ನನಗೆ ಡ್ರೆಸ್ ಕೋಡ್ ಇಲ್ಲ, ಕಲರ್ ಸೆಲೆಕ್ಷನ್ ಆಗಲಿ, ಗುಣಮಟ್ಟದ ಬಟ್ಟೆಗಳ ಬಗ್ಗೆ ಏನೂ ಗೊತ್ತಿಲ್ಲ ಕೈ ತೂರಿ ದರೆ ಸಾಕು ಅದು ಅಂಗಿ, ಕಾಲು ತೂರಿದರೆ ಅದು ಪ್ಯಾಂಟು ಅಷ್ಟೆ. ಹೀಗಾಗಿ ನನ್ನ ಟಿ.ವಿ.ಶೂಟಿಂಗಿಗಾಗಲಿ, ಕಾರ್ಯಕ್ರಮಗಳ ಡ್ರೆಸ್ ಆಗಲಿ, ಉಟ್ಟ ಬಟ್ಟೆಯಲ್ಲೇ ಮಾಡಿ ಬಿಡುತ್ತೇನೆ. ಟಿ.ವಿ.ಯವರೂ ಅಷ್ಟೆ, ನನ್ನ ಕಾಸ್ಟ್ಯೂಮ್ಸ್‌ಗಳನ್ನು ಇಂದಿಗೂ ಅವರು ಕೊಡುವು ದಿಲ್ಲ.

“ನಿಮ್ಮದೇ ಯಾವುದಾದರೂ ತಂದು ಬಿಡಿಸಾರ್, ಜನ ನಿಮ್ಮ ಮಾತು ಕೇಳ್ತಾರಾಗಲಿ, ಕಾಸ್ಟ್ಯೂಮ್ಸ್ ನೋಡಲ್ಲ” ಎಂದು ನನ್ನನ್ನು ಉಬ್ಬಿಸಿ ಬಿಡುತ್ತಾರೆ. ಹೀಗಾಗಿ ನಾನು ಒಂದೇ ದಿನದ ಶೂಟಿಂಗ್‌ಗೆ ಎರಡೆರೆಡು ಸೂಟಕೇಸ್ ಬಟ್ಟೆ ಕತ್ತೆಯಂತೇ ಬೆಂಗಳೂರಿಗೆ ಹೊತ್ತುಕೊಂಡು ಹೋಗುತ್ತೇನೆ. “ಬೆಗ್ಗರ‍್ಸ್ ಹ್ಯಾವ್ ನೋಚಾಯ್ಸ್ ಎನ್ನುವ ಹಾಗೆ ಪಾವರ್ಟಿ ಹ್ಯಾವ್ ನೋ ಚಾಯ್ಸ್ ಎಂಬುದು ಇದಕ್ಕೆ ಎನ್ನಬೇಕು, ಚಹಾದ ಸುದ್ದಿ ಹೇಳುತ್ತಾ ಬಟ್ಟೆಗೆ ಬಂದೆ ಕ್ಷಮಿಸಿ, ತಂದೆಯ ವೀಕೆಂಡ್ ಹವ್ಯಾಸ ಗಡಿಯಾರ, ವಾಚ್ ರಿಪೇರಿ , ತಾಸಿಗೊಮ್ಮೆ ಚಹಾ, ಆತಗೆ ಚಹಾ ಮಾಡುವಾಗೊಮ್ಮೆ ನಾವೂ ಗ್ಲಾಸು ಹಿಡಿದು ಸ್ಟೌ ಸುತ್ತ ಕೂರುತ್ತಿದ್ದೆವು, “ಅತೀ ಚಹಾ ಕುಡಿಬ್ಯಾಡ್ರೋ ಮೈ ಒಣಗ್ತದೆ ಎಂದು ನಮ್ಮಮ್ಮ ಬೈಯ್ಯುತ್ತಲೇ ನಮ್ಮ ಲೋಟಕ್ಕೂ ನೀರು ನಿಕ್ಕಟಿ ಚಹಾ ಹಾಕುತ್ತಿದ್ದಳು.

ನಮ್ಮ ಅಣ್ಣನಂತೂ ಪ್ರತಿ ಸಲ ಲೋಟದ ತುಂಬಾ ಹಾಕೆಂದು ಕೂಗಾಡುತ್ತಿದ್ದ, ಚಹಾ  ಇದ್ದರೆ ಆತನಿಗೆ ಊಟ, ತಿಂಡಿ ಏನೂ ಬೇಡ (ಇಂದಿಗೂ ಹಾಗೆ ಇದ್ದಾನೆ) ಸ್ವಲ್ಪವಲ್ಲ, ಗ್ಲಾಸಿನ ತುಂಬಾಬೇಕು, ಅರ್ಧ ಗ್ಲಾಸ್ ಹಾಕಿದರೆ ಅದಕ್ಕೆ ನೀರು ಬೆರೆಸಿಕೊಂಡು ಗ್ಲಾಸಿನ ತುಂಬಾ ಮಾಡಿಕೊಂಡೇ ಕುಡಿಯುತ್ತಿದ್ದ, ಮೊದಲೇ ನೀರು ನಿಕ್ಕಟಿ ಚಹಾ, ಮೇಲೆ ಮತ್ತೆ ನೀರು ಹಾಕಿಕೊಳ್ಳವದು, ನೀವೇ ಊಹಿಸಿಕೊಳ್ಳಿ ಆ ಚಹಾದ ರುಚಿಯೇನೆಂಬುದನ್ನು.

ಈಗಿನ ಅನೇಕ ಚಹಾ, ಕಾಫಿ ಕುಡಿಯೋ ಮಕ್ಕಳಿಗೆ ನೀರಿನಲ್ಲಿ ಚಹಾಪುಡಿ ಹಾಕಿ ಕುದಿಸಿ ಕುಡಿಯುವದು ಗೊತ್ತಿಲ್ಲ. ಸ್ಪೆಷಲ್ ಟೀ
ಖಡಕ್ ಟೀ ಮಸಾಲಾಟೀ, ಎಂಬವೆಲ್ಲಾ, ಹಾಲ್ಲನ್ನೇ ಕುದಿಸಿ ಚಹಾ ಪುಡಿ ಹಾಕುವದು ಆಗಲೂ ಶ್ರೀಮಂತರ, ಶೆಟ್ಟರ ಮನೆಗಳಲ್ಲಿ ಈ ಸ್ಪೆಷಲ್ ಟೀ ಕುಡಿದಾಗ, ಓಹ್ ಚಹಾದಲ್ಲಿ ಎರಡು ಬಗೆಗಳಿಗಿವೆ ಒಂದು ಹಾಲಿನಲ್ಲಿ ಮಾಡೋ ಚಹಾ, ಇನ್ನೊಂದು ನೀರಿನಲ್ಲಿ ಚಹಾಮಾಡೋದು ಎಂಬ ಸತ್ಯ ತಿಳಿಯಿತು, ಆದರೆ, ಹುಟ್ಟಾ ಬಾಲ್ಯದಿಂದಲೇ ಚಹಾಕ್ಕೆ ನೀರಿಡು ಎಂಬುದು ಆ ಕಾಲದ ಮನೆಗಳಲ್ಲಿ ಗಂಡಸರು, ಹೆಂಡತಿಯರಿಗೆ ಹೇಳುತ್ತಿದ್ದ ಕಾಮನ್ ಡೈಲಾಗ್.

ಯಾರದಾದರೂ ಮನೇಲಿ ಚಹಾ ಕೊಟ್ಟರೆ ಒಲ್ಲೆ ಅನ್ನಬಾರದಂತೆ ನಮ್ಮ ಕಡೆ ಅಘೋಷಿತ ಕಾನೂನಿದೆ. ಹೆಣ್ಣು ಮಕ್ಕಳು ಕುಂಕುಮ ಒಲ್ಲೆಯೆನ್ನಬಾರದು, ಗಂಡಸರು ಚಹಾ ಒಲ್ಲೆ ಎನ್ನ ಬಾರದು ಎನ್ನುವುದು ನಮ್ಮ ಕಡೆ ಪ್ರಸಿದ್ಧ ಡನ್‌ಲಪ್ ಗಾದೆ ಮಾತು. ಚಹಾ, ಕಡಕ್ ಚಹಾ, ಕೇಟಿ, ಛಾವು ಎಂಬಿತ್ಯಾದಿ ಹೆಸರುಗಳಿವೆ ಚಹಾಕ್ಕೆ. ಜಾಯಿಂಟ್ ಫ್ಯಾಮಿಲಿ ನಮ್ಮದು, ನನ್ನ
ಮಗ ಚಿಕ್ಕವನಿದ್ದಾಗ, ಎಲ್ಲರೂ ಕೂಡಿಯೇ ಇದ್ದೇವು, ನನ್ನ ಮಗ, ನನ್ನ ತಮ್ಮನ ಮಗ, ತಂಗಿ ಮಗ ಹೀಗೆ ಮೂವರು ಸಣ್ಣ
ಸಣ್ಣ ಮಕ್ಕಳು, ಎಲ್ಲರೂ ಅವರವರ ಕೆಲಸಕ್ಕೆ ಹೋದರೆಂದರೆ, ಖಾಲಿ ಇದ್ದ ನಾನು ಈ ಮೂರು ಮಕ್ಕಳನ್ನೂ ಒಂದೇ ಸೈಕಲ್
ಮೇಲೆ ಕೂರಿಸಿಕೊಂಡು ಊರೆಲ್ಲ ಸುತ್ತಿಸುತ್ತಿದ್ದೆ.

ಇವರನ್ನು ನಾನು ಕರೆದುಕೊಂಡು ಹೋದರೆ ಮನೆ ಹೆಣ್ಣು ಮಕ್ಕಳು ಹೀಗೆ ಅಡಿಗೆ, ಕಸ ಮುಸುರೆ, ಬಾವಿಯಿಂದ ನೀರು ಸೇದುವ ಕೆಲಸ ಮಾಡಿಕೊಳ್ಳುತ್ತಿದ್ದರು. ಮಧ್ಯಾನ್ಹ ಎರಡು ಗಂಟೆಯವರೆಗೆ ಮೂರು ಮಕ್ಕಳನ್ನು ಕೆ.ಇ.ಬಿ. ಗಣೇಶ ಗುಡಿ, ರಾಮಮಂದಿರ,
ಹಿರೇಜಂತಗಲ್ ಪಂಪಾಪತಿ ದೇವಸ್ಥಾನ, ಇಲ್ಲೆಲ್ಲ ಆಡಲು ಬಿಟ್ಟು, ಒಯ್ದಿರುತ್ತಿದ್ದ ಪುಸ್ತಕವನ್ನು ನಾನು ಓದುತ್ತಾ ಕೂರುತ್ತಿದ್ದೆ
1991-92ರ ದಿಗಳವು.

ಒಮ್ಮೊಮ್ಮೆ ಅನಿರೀಕ್ಷಿತವಾಗಿ ಯಾರದಾದರೂ ಮನೆಗಳಿಗೆ ಕರೆದೊಯ್ಯುತ್ತಿದ್ದೆ, ಅವರ ಮನೆಒಳಗೆ ಹೋದ ಕೂಡಲೆ ನನ್ನ ಮಗ ಆ ಮನೆಯವರಿಗೆ ಚಹಾಮಾಡ್ರಿ, ಚಹಾಕ್ಕಿಡ್ರಿ” ಎಂದೇ ಹೇಳಿಬಿಡುತ್ತಿದ್ದ ಆಗವನಿಗೆ ನಾಲ್ಕೊ, ಐದೋ ವರುಷ ಅಷ್ಟೆ, ಮನೆಯವ ರೆಲ್ಲ ನಗುತ್ತಲೇ ಭಾರಿ ಘಟಿವಾಣ ಬಿಡ್ರಿ ನಿಮ್ಮಗ, ಮಂದಿ ಮನ್ಯಾಗು ದರ್ಬಾರ್ ನಡೆಸ್ತಾನ, ಮುಂದ ಹೆಣ್ತಿದು ಬಹಳ ತ್ರಾಸ್ ಅದ ಎಂದು ನಗಾಡ್ತಿದ್ದರು. ನಮ್ಮ ಮಕ್ಕಳಿಗೆಲ್ಲ ಫಾರೆಕ್ಸ್, ಕಾಂಪ್ಲಾನ್, ಹಾರ್ಲಿಕ್ಸ್, ಬೋರ್ನವಿಟಾ ಗೊತ್ತೇ ಇಲ್ಲ.

ಹಸುಗೂಸುಗಳಿಗೂ ಚಹಾದಲಿ ಬೆರಳದ್ದಿ ಚೀಪಿಸೋದು ಕಾಮನ್ ಫ್ಯಾಕ್ಟ್, ಎಷ್ಟೋ ಮಕ್ಕಳು ತಾಯಿ ಮೊಲೆ ಹಾಲನ್ನು ಒಲ್ಲೆ ಯೆಂದು ಅತ್ತು, ಫೀಡಿಂಗ್ ಬಾಟಲಿನಲ್ಲಿ ಚಹಾ ಹಾಕಿ, ನಿಪ್ಪಲ್ ಇಟ್ಟು ಬಾಯಲ್ಲಿಟ್ಟರೆ ಕುಡಿದು ಹಾಗೇ ನಿದ್ದೆ ಹೋಗುತ್ತಿರುವ ಉದಾಹರಣೆಗೂ ಇದೆ. ನಮಗೆಲ್ಲ ನಿದ್ದೆ ಬರದ್ದಕ್ಕೆ ಚಹಾ ಕುಡಿಯುವ ಅಭ್ಯಾಸ ಬಂದಿದ್ದರೆ, ಕೆಲವು ಮನೆಗಳಲ್ಲಿ ಮಲಗೋ ಮುನ್ನ ಚಹಾ ಕುಡಿದು ಮಲಗೊ ಮನೆಗಳ ಜನರಿದ್ದಾರೆ.

ನಾನು ಈಗ ಗಂಗಾವತಿ ಪ್ರಾಣೇಶ್, ಆದರೆ, ಆಫೀಷಿಯಲಿ, ಶಾಲಾ ಕಾಲೇಜು ಕಡತಗಳಲ್ಲಿ ಬಿ. ಪ್ರಾಣೇಶ್ , ನನ್ನ ಇನಿಶಿಯಲ್ಲು ಬೇವಿನ ಹಾಳ್ ಪ್ರಾಣೇಶ್, ನಮ್ಮ ಬೇವಿನಹಾಳ್ ಫ್ಯಾಮಿಲಿಯಲ್ಲಿ ಮಲಗುವ ಮುನ್ನ ಒಂದು ವಿಚಿತ್ರ ಹವ್ಯಾಸವಿದೆ. ಅದೆಂದರೆ, ಮಲಗುವ ಮುನ್ನ ಕನ್ನಡಿ ನೋಡಿಕೊಂಡು ಚೆನ್ನಾಗಿ ಕೂದಲು ಬಾಚಿಕೊಂಡು ಮಲಗುವುದು. ನಾನು, ನನಗೊಂದೆ ಇದೆಯೇನೊ, ಅಂದು ಕೊಂಡಿದ್ದೆ ನಮ್ಮ ಚಿಕ್ಕಪ್ಪನ ಮಕ್ಕಳಿಗೂ, ಈಗ ನನ್ನ ಮಗನಿಗೂ ಬಂದಿದೆ, ನಾನು ಹಾಗೆ ರಾತ್ರಿ ಕನ್ನಡಿ ನೋಡಿಕೊಂಡು, ಬಾಚಿಕೊಂಡು ಮಲಗಲು ಹಾಸಿಗೆ ಸೇರುವುದಕ್ಕೆ ನಮ್ಮಜ್ಜಿ ಅಂಬಕ್ಕ “ ಹೋದ ಜನ್ಮದಾಗೆ ಪಾತರದವಳು (ಸಾನಿಯರು) ಆಗಿದ್ನೊ ಏನೋ, ಈ ಪ್ರಾಣಿ ಆ ಶಕ (ನೆನಪು) ಈಗ್ಲೂ ಉಳದದ” ಎಂದೇ ಎಲ್ಲರಿಗೂ ಹೇಳುತ್ತಿದ್ದಳು.

ಇದು ನಾ ಕೂಸಿದ್ದಾಗಿನಿಂದಲೂ ಇತ್ತಂತೆ, ರಾತ್ರಿ ಹಾಲು, ಕುಡಿದು, ತೊಟ್ಟಲಿಗೆ ಹಾಕಿ ಎಷ್ಟು ತೂಗಿದರೂ ಮಲಗದೆ ಮುಸು,
ಮುಸು ಮಾಡುತ್ತಿದ್ದರೆ, ಚಿಕ್ಕ ಬಾಚಣಿಗೆಯಿಂದ ಮೆಲ್ಲಗೆ ಬೈತಲೆ ತೆಗೆದಂತೆ ಮಾಡಿ, ಬಲಕ್ಕೆ ಬಾಚಿದರೆ, ಮುಂದೆ ನಿಮಿಷದಲ್ಲೇ
ಮಲಗುತ್ತಿದ್ದೆನಂತೆ. ಈಗಲೂ ಅಷ್ಟೆ, ಜೇಬಲ್ಲಿ ಪರ್ಸ್, ಕರ್ಚಿಫ್ ಸೆಕೆಂಡರಿ, ಬಾಚಣಿಗೆಗೆ ಫಾಸ್ಟ್ ಪ್ರಿಫರೆನ್ಸ್ . ಹೀಗೆ ಚಹಾ ಮತ್ತು
ಬಾಚಣಿಗೆ ನಮ್ಮ ಬೇವಿನ್ಹಾಳ್ ವಂಶದ ಹೆಗ್ಗುರುತಗಳು, ಇನ್ನೊಂದು ಹಿರಿಮೆ ಎಂದರೆ ನಮ್ಮ ಈ ಮನೆತನದಲ್ಲಿ ಬಕ್ಕತಲೆ, ಬೋಳು ತಲೆ ಇಲ್ಲ, ಎಲ್ಲರಿಗೂ, ಗಂಡಸರಿಗೆ ತಲೆ ತುಂಬಾ ಕೂದಲು, ಹದಿನೈದು ದಿನಕ್ಕೊಮ್ಮೆ ಕಟಿಂಗ್ ಮಾಡಿಸಲೇ ಬೇಕು ಕೇಶ ವಽನಿಗಳಾದ ರೀಟಾ, ಸೇಸಾ, ಅಶ್ವಿನಿ, ಡಾಬರ್ ಆಮ್ಲ ಮುಂತಾದ ಕೂದಲು ಪೋಷಣೆಗಳನ್ನು ನಾವು ಕಂಡೇ ಇಲ್ಲ.

ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಅಷ್ಟೆ, ಮೊಣಕಾಲಿನವರೆಗೂ ಇಳಿಬಿದ್ದ ನೀಳ ಕೇಶರಾಶಿ, ಬಕ್ಕತಲೆ, ಸ್ವಲ್ಪ ಕೂದಲಿನವರು ಕಂಡರೆ ನಮಗೆ ಪುಣ್ಯಾತ್ಮರು, ಎನಿಸುತ್ತಿತ್ತು. ಅಷ್ಟು ರೋಸಿ ಹೋಗಿದ್ದೇವೆ ನಮ್ಮ ಮನೆತನದವರು ಈ ಕೂದಲು ಬೆಳವಣಿಗೆಗೆ ಬಹುಶಃ ನೀರು ನಿಕ್ಕಟಿ ಚಹಾ ಕುಡಿಯುವರಿಂದೇನಾದರೂ ಕೂದಲು ಬೆಳವಣಿಗೆ ಅಷ್ಟ ಓವರ್ ಆಗಿದೆಯೇನೋ ಎನಿಸುತ್ತದೆ. ಯಾರಾದರೂ ಸಂಶೋಧನೆ ಅಥವಾ ಪಿಎಚ್.ಡಿ ಮಾಡಬಹುದು.

ಇಲ್ಲವಾದರೆ, ಕೂದಲಿಲ್ಲದವರು, ಏನು ಮಾಡಿದರೂ (ಕೂದಲು ಕಿತ್ತುಕೊಳ್ಳುವದೊಂದನ್ನು ಬಿಟ್ಟು,) ಕೂದಲು ಬಂದಿರದಿದ್ದಲ್ಲಿ. ಹಾಲಿನಲ್ಲೇ ಮಾಡಿದ ಚಹಾಬಿಟ್ಟು, ನೀರು ಕುದಿಸಿ, ಚಹಾಪುಡಿ, ಹಾಲು, ಸಕ್ರಿ ಕಡಿಮೆ ಹಾಕಿ ಸೇವಿಸಿ ನೋಡಿ ಕೂದಲು ಬಂದರೂ ಬರಬಹುದು!