ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ಅಲ್ಲಿ ವೀರೋಚಿತ ಸಾಹಸ ನೋಡುತ್ತಿದ್ದ ಮಾಧ್ಯಮದವರು, ‘ಕ್ಯಾಪ್ಟನ್ ಸಲ್ಲಿ, ನೀವು ನಿಜವಾದ ಹೀರೋ ’ ಎಂದು ಅತ್ಯಂತ ಹರ್ಷಚಿತ್ತರಾಗಿ ಕೊಂಡಾಡುತ್ತಿದ್ದರೆ, ಆತ ತನ್ನ ಸಹ ಪೈಲಟ್ ಮತ್ತು ಗಗನಸಖಿಗಳನ್ನು ತೋರಿಸಿ, ’’They did it’ ಎಂದು ಹೇಳಿದ. ನಿಜವಾದ ನಾಯಕ ಎಲ್ಲ ಕ್ರೆಡಿಟ್ಟುಗಳನ್ನು ತಾನೇ ತೆಗೆದು ಕೊಳ್ಳುವುದಿಲ್ಲ. ಅದನ್ನು ತನ್ನ ತಂಡದವರೊಂದಿಗೆ ಹಂಚಿಕೊಳ್ಳುತ್ತಾನೆ.
ಇದು ನಿಮಗೆ ಗೊತ್ತಿರುವ ಕತೆಯೇ. ನೀವು ಚೆಸ್ಲಿ ‘ಸಲ್ಲಿ’ ಸನ್ ಬೆರ್ಗೆರ್ ಮತ್ತು ಜೆಫ್ರಿ ಜೆಸ್ಲೊ ಬರೆದ ¨Highest Duty ಎಂಬ ಆತ್ಮಕಥೆಯನ್ನು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಕೃತಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಇಂಗ್ಲಿಷ್ ಸಿನಿಮಾ ’Sully :The Miracle On The Hudson’
ನೋಡಿರುತ್ತೀರಿ. ನಾನು ಈ ಸಿನಿಮಾವನ್ನು ಏನಿಲ್ಲವೆಂದರೋ ಏಳೆಂಟು ಸಲ ನೋಡಿರಬಹುದು. ಇನ್ನೊಮ್ಮೆ ನೋಡಬೇಕೆಂದರೂ ಮೊದಲಿನ ಕುತೂಹಲ ದಿಂದಲೇ ನೋಡುತ್ತೇನೆ. ಪ್ರತಿ ಸಲ ಈ ಸಿನಿಮಾ ನೋಡಿದಾ ಗಲೂ, ನನ್ನ ಮನಸ್ಸಿನಲ್ಲಿ ಕ್ಯಾಪ್ಟನ್ ಸಲ್ಲಿ ಬಗ್ಗೆ ಗೌರವ, ಹೆಮ್ಮೆ ಮೂಡುತ್ತದೆ. ಅವನ ಜಾಗದಲ್ಲಿ ನಾನಿದ್ದಿದ್ದರೆ ಏನು ಮಾಡುತ್ತಿದ್ದೆ ಎಂದು ಆಗಾಗ ಅನಿಸಿದ್ದುಂಟು.
ನಮ್ಮ ಜೀವನದಲ್ಲಿ ಅಂಥ ಪ್ರಸಂಗಗಳು ಎದುರಾದರೆ ಅದನ್ನು ಹೇಗೆ ನಿಭಾಯಿಸಬೇಕು ಎಂದು ಅನೇಕ ಸಲ ನಾನು ಯೋಚಿಸಿದ್ದುಂಟು. ಈ ಸಿನಿಮಾ ನನ್ನಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಆಗಾಗ ಎಬ್ಬಿಸುತ್ತದೆ. ಜತೆಗೆ ಅತ್ಯಂತ ಸಂಕಷ್ಟ ಮತ್ತು ಸಂದಿಗ್ಧ ಸನ್ನಿವೇಶದಲ್ಲಿ ಭರವಸೆ, ಆತ್ಮಸ್ಥೈರ್ಯವನ್ನೂ ಕೊಟ್ಟಿದೆ. ಜೀವನದಲ್ಲಿ ಎಲ್ಲ ಮುಗಿದೇ ಹೋಯಿತು, ಬಚಾವ್ ಆಗುವ ಮಾರ್ಗಗಳು ಇಲ್ಲವೇ ಇಲ್ಲ ಎಂದು ಅಸಹಾಯಕರಾದಾಗಲೂ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿದ್ದರೆ, ನಮಗಾಗಿ ಎಲ್ಲಾ ಒಂದು ಮಾರ್ಗ ತೆರೆದುಕೊಳ್ಳುತ್ತದೆ ಎಂಬ ಮಾತನ್ನು ಆ ಚಿತ್ರ ನನಗೆ ಆಗಾಗ ನೆನಪು ಮಾಡಿಕೊಡುತ್ತದೆ. ಅಷ್ಟರಮಟ್ಟಿಗೆ ನಾನು ಈ ಪುಸ್ತಕ ಮತ್ತು ಅದನ್ನಾಧರಿಸಿ ನಿರ್ಮಿಸಿದ ಚಿತ್ರದಿಂದ ಕೆಲವು (ಬಾಳ)ಪಾಠವನ್ನು ಕಟ್ಟಿಕೊಂಡಿದ್ದೇನೆ. ವಿಮಾನದ ಮುಖ್ಯ ಪೈಲಟ್ ಕ್ಯಾಪ್ಟನ್ ಸನ್ ಬೆರ್ಗೆರ್ ಪಾತ್ರದಲ್ಲಿ ನಟಿಸಿದ ಟಾಮ್ ಹ್ಯಾಂಕ್ಸ್ ಅದೊಂದು ನಟನೆಯಿಂದ ಇಂದಿಗೂ ನನ್ನ ಜೀವನದ ಹೀರೋಗಳಬ್ಬ!
ಆ ನೈಜ ಘಟನೆಯನ್ನಾಧರಿಸಿದ ಸನ್ನಿವೇಶ ಅತ್ಯಂತ ಚಕವಾಗಿದೆ. 2009 ಜನವರಿ 15ರ ಚಳಿಚಳಿ ಮಧ್ಯಾಹ್ನ. ಯುಎಸ್ ಏರ್ ವೇಸ್ 1549 ವಿಮಾನ ನ್ಯೂಯಾರ್ಕಿನ ಲಗ್ವಾರ್ಡಿಯ ವಿಮಾನ ನಿಲ್ದಾಣದಿಂದ ಶಾರ್ಲೆಟ್‌ಗೆ ಟೇಕಾಫ್ ಆಯಿತು. ವಿಮಾನದಲ್ಲಿ ಮುಖ್ಯ ಪೈಲಟ್, ಸಹ ಪೈಲಟ್, ಐವರು ಗಗನಸಖಿ ಯರು ಸೇರಿದಂತೆ, ೧೫೫ ಮಂದಿ ಪ್ರಯಾಣಿಕರಿದ್ದರು. ವಿಮಾನ ಆಕಾಶಕ್ಕೆ ನೆಗೆಯುವಾಗ ಸಹ ಪೈಲಟ್ ಜೆಫ್ ಸ್ಕಿಲ್ಸ್ ಕಮಾಂಡ್ ಪೊಸಿಷನ್‌ನಲ್ಲಿದ್ದ.
ಟೇಕಾಫ್ ಆದ ಎರಡು ನಿಮಿಷಗಳೊಳಗೆ ವಿಮಾನ ಸುಮಾರು ಮೂರು ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿತ್ತು.
ಆಗ ವಿಮಾನದೊಳಗಿದ್ದವರಿಗೆ ಅನಿರೀಕ್ಷಿತವಾಗಿ ’ಧಡ್’ ಎಂಬ ದೊಡ್ಡ ಸಪ್ಪಳ ಕೇಳಿಸಿತು. ಸಹಜ ಸನ್ನಿವೇಶದಲ್ಲಿ ವಿಮಾನದಲ್ಲಿ ಇಂಥ ಸಪ್ಪಳ ಕೇಳುವುದು ಸಾಧ್ಯವೇ ಇಲ್ಲ. ಆ ಸಪ್ಪಳ ಕೇಳಿ ಬಂದ ನಾಲ್ಕೈದು ಸೆಕೆಂಡುಗಳಲ್ಲಿ ವಿಮಾನ ಜೋರಾಗಿ ಅಲುಗಾಡಲಾರಂಭಿಸಿತು. ಅದಾಗಿ ಒಂದೆರಡು ಸೆಕೆಂಡುಗಳಲ್ಲಿ
ಎರಡನೆಯ ಬಾರಿಗೆ ಅಂಥದೇ ದೊಡ್ಡ ಸಪ್ಪಳ ಕೇಳಿ ಬಂತು. ವಿಮಾನ ಮತ್ತಷ್ಟು ಜೋರಾಗಿ ಅಲುಗಾಡಲಾರಂಭಿಸಿತು. ವಿಮಾನದ ರೆಕ್ಕೆಗಳು ಹೊಗೆ ಉಗು ಳುವುದನ್ನು ಪ್ರಯಾಣಿಕರು ಕಂಡರು. ಅದಾದ ಬಳಿಕ ವಿಮಾನದಲ್ಲಿ ಆತಂಕ ಮಿಶ್ರಿತ ಮೌನ, ಪ್ರಯಾಣಿಕರ ಮುಖದಲ್ಲಿ ಕಲ್ಲವಿಲ ಭಾವ.
ಏನಾಗಿತ್ತೆಂದರೆ, ಆಕಾಶದಲ್ಲಿ ಹಾರಾಡುತ್ತಿದ್ದ ಹೆಬ್ಬಾತುಗಳು ವಿಮಾನದ ಎಂಜಿನ್‌ಗೆ ಬಂದು ಅಪ್ಪಳಿಸಿದ್ದವು. ಆ ರಭಸಕ್ಕೆ ವಿಮಾನದ ಎರಡೂ ಎಂಜಿನ್‌ಗಳು ಘಾಸಿಯಾಗಿ ಸ್ತಬ್ಧವಾಗಿಬಿಟ್ಟಿದ್ದವು. ವಿಮಾನವನ್ನು ಹೇಗೆ ಸಿದ್ಧಗೊಳಿಸಿರುತ್ತಾರೆಂದರೆ, ಒಂದು ಎಂಜಿನ್ ಕೈಕೊಟ್ಟರೆ, ಇನ್ನೊಂದು ಎಂಜಿನ್ ಕಾರ್ಯನಿರ್ವಹಿ ಸುತ್ತದೆ. ಆದರೆ ಎರಡೂ ಎಂಜಿನ್ ಫುಲ್ ಆದರೆ ಭಗವಂತನೇ ಗತಿ! ಆ ದಿನ ಎರಡೂ ಎಂಜಿನ್ ಗಳು ಫುಲ್ ಆಗಿದ್ದವು.
ವಿಮಾನಕ್ಕೆ ಪವರ್ ಇಲ್ಲದೇ ಅದು ಗ್ಲೈಡರ್ ಥರ ಆಗಿ ಹೋಗಿತ್ತು. ತಕ್ಷಣ ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಜ್ಜಾದ. ತನ್ನ ಆeಯನ್ನು
ಪಾಲಿಸುವಂತೆ ಪೈಲಟ್, ಸಹ ಪೈಲಟ್‌ಗೆ ಸೂಚಿಸಿದ. ಪೈಲಟ್ ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸಂಪರ್ಕಿಸಿ, ಆತಂಕದ ದನಿಯಲ್ಲಿ ಪರಿಸ್ಥಿತಿಯನ್ನು ವಿವರಿಸಿದ. ಎರಡೂ ಎಂಜಿನ್‌ಗಳು ಫುಲ್ ಆಗಿದೆಯೆಂದ. ಈ ಮಧ್ಯೆ ವಿಮಾನದಲ್ಲಿ ಎಮರ್ಜನ್ಸಿ ಘೋಷಿಸುವಂತೆ ಮುಖ್ಯ ಪರಿಚಾರಕಿಗೆ ತಿಳಿಸಿದ. ಆಕೆ ಪರಿಸ್ಥಿ ತಿಯ ತೀವ್ರತೆ ವಿವರಿಸಿ, ಪ್ರಯಾಣಿಕರಿಗೆ ಸಹಕರಿಸುವಂತೆ ವಿನಂತಿಸಿಕೊಂಡಳು.
ಲಗ್ವಾರ್ಡಿಯ ವಿಮಾನ ನಿಲ್ದಾಣದ ಎಟಿಸಿ, ರನ್ ವೇಯನ್ನು ತೆರವುಗೊಳಿಸುವುದಾಗಿಯೂ, ತಕ್ಷಣ ವಾಪಸ್ ಬರಬೇಕೆಂದೂ ಸೂಚಿಸಿದ. ಅಷ್ಟೇ ಅಲ್ಲ, ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿ ಘೋಸಿದ. ಆ ವಿಮಾನ ನಿಲ್ದಾಣದಿಂದ ಹಾರುವ ವಿಮಾನಗಳನ್ನೆಲ್ಲ ನಿಂತ ಜಾಗದ ಇರುವಂತೆ ಸೂಚಿಸಿದ ಮತ್ತು ಆ ವಿಮಾನ ನಿಲ್ದಾಣ ದಲ್ಲಿ ಇಳಿಯುವ ವಿಮಾನಗಳನ್ನೆಲ್ಲ ಬೇರೆಡೆಗೆ ಡೈವರ್ಟ್ ಮಾಡಿದ. ಆದರೆ, ಆ ಸ್ಥಿತಿಯಲ್ಲಿ ವಾಪಸ್ ವಿಮಾನ ನಿಲ್ದಾಣ ತಲುಪುವುದು ಕಷ್ಟ ಎಂದು ಪೈಲಟ್‌ಗೆ ಅನಿಸಿತು. ನಿಲ್ದಾಣ ತಲುಪುವುದಕ್ಕಿಂತ ತುಸು ಹಿಂದೆ ಮಾರ್ಗ ಮಧ್ಯದಲ್ಲಿ ವಿಮಾನ ಪತನವಾದರೆ, ಅದರಲ್ಲೂ ಮುಖ್ಯವಾಗಿ ಜನನಿಬಿಡ ಮ್ಯಾನ್ ಹಟನ್ ಮತ್ತು ಸುತ್ತಮುತ್ತಲ ಬೀದಿಗಳಲ್ಲಿ ಪತನವಾದರೆ, ಸಾವು-ನೋವಿನ ಭೀಕರತೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪೈಲಟ್‌ಗೆ ಅನಿಸಿತು. ನಿಲ್ದಾಣ ತಲುಪಲು ಸಾಧ್ಯವಾಗದೇ, ಸ್ವಲ್ಪ ಹಿಂದೆ ಕ್ರ್ಯಾಶ್ ಆದರೂ, ವಿಮಾನದಲ್ಲಿರುವ 155 ಮಂದಿ ಪ್ರಯಾಣಿಕರು ಮತ್ತು ಆ ಗಿಜಿಗುಟ್ಟುವ ರಸ್ತೆಯಲ್ಲಿರುವ ಸಾವಿರಾರು ಮಂದಿಗೆ ಏನಾದರೂ ಆದರೆ? ಕ್ಯಾಪ್ಟನ್ ಸಲ್ಲಿ ಮೂವತ್ತು ವರ್ಷಗಳ ಕಾಲ ವಿಮಾನ ಹಾರಿಸಿದ ಅನುಭವಿ ಪೈಲಟ್.
ಈ ಮಧ್ಯೆ ಕಡಿಮೆ ವಿಮಾನ ಸಂಚಾರವಿರುವ ನ್ಯೂಜೆರ್ಸಿ ನಿಲ್ದಾಣದಲ್ಲಿ ಇಳಿಸಿದರೆ ಹೇಗೆ ಎಂಬ ಯೋಚನೆಯೂ ಕ್ಯಾಪ್ಟನ್ ಮನಸ್ಸಿನಲ್ಲಿ ಹಾದು ಹೋಯಿತು. ಆದರೆ ಇಂಥ ಸ್ಥಿತಿಯಲ್ಲಿ ಅಷ್ಟು ದೂರ ವಿಮಾನ ಹಾರಲಿಕ್ಕಿಲ್ಲ ಎಂದು ಪೈಲಟ್‌ಗೆ ಅನಿಸಿತು. ಸಮಯ ಮೀರುತ್ತಿತ್ತು. ಒಂದೊಂದು ನಿಮಿಷವೂ ನಿರ್ಣಾಯಕ ವಾಗಿತ್ತು. ಕ್ಷಣಕ್ಷಣಕ್ಕೂ ವಿಮಾನ ಕೆಳಗೆ ಇಳಿಯುತ್ತಿತ್ತು, ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ಪ್ರಯಾಣಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣಕ್ಕೆ ಯಾವುದಾದರೂ ಒಂದು ಖಚಿತ ನಿರ್ಧಾರಕ್ಕೆ ಬರಲೇಬೇಕಿತ್ತು. ಪೈಲಟ್‌ಗೆ ಎರಡು ನಿಮಿಷ ಸಹ ಸಮಯವಿರಲಿಲ್ಲ. ಅಷ್ಟರೊಳಗೆ ಆತ ತನ್ನ ಜೀವನದ ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ವಿಮಾನದೊಳಗಿದ್ದ 155 ಜನರ ಪ್ರಾಣವನ್ನು ರಕ್ಷಿಸುವುದು ಮತ್ತು ವಿಮಾನ ಪತನವಾಗಿ ಜನವಸತಿ ಪ್ರದೇಶದಲ್ಲಿ ಬಿದ್ದರೆ ಆಗುವ ಅನಾಹುತ ತಪ್ಪಿಸುವ ಅತ್ಯಂತ ಗುರುತರ ಹೊಣೆಗಾರಿಗೆ ಪೈಲಟ್ ಮೇಲಿತ್ತು.
ಇಂಥ ಸಂದರ್ಭದಲ್ಲಿ ಕ್ಯಾಪ್ಟನ್ ಸಲ್ಲಿ ಒಂದು ಧೀರೋದಾತ್ತ ನಿರ್ಧಾರ ತೆಗೆದುಕೊಳ್ಳಲು ಮುಂದಾದ. ವಿಮಾನವನ್ನು ಹಡ್ಸನ್ ನದಿಯ ನೀರಿನ ಮೇಲೆ ಇಳಿಸಲು ತೀರ್ಮಾನಿಸಿದ! ತನ್ನ ತೀರ್ಮಾನವನ್ನು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ತಿಳಿಸಿದ. ಅದು ಸರಿಯಾ, ತಪ್ಪಾ ಎಂದು ಚರ್ಚಿಸುವ ಸಂದರ್ಭವಲ್ಲ. ಅಲ್ಲದೇ ಚರ್ಚಿ ಸಲು ಸಮಯವೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ಪೈಲಟ್ ತೆಗೆದುಕೊಳ್ಳುವ ನಿರ್ಧಾರವನ್ನು ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳು ಸಮ್ಮತಿಸಿದರು ಮತ್ತು ಅವರಿಗೆ ಪೂರಕ ವ್ಯವಸ್ಥೆ ಮಾಡಲು ಮುಂದಾದರು. ಹಡ್ಸನ್ ನದಿ ಮೇಲೆ ವಿಮಾನ ಇಳಿಸುವ ಪೈಲಟ್ ತೀರ್ಮಾನವನ್ನು ಪುರಸ್ಕರಿಸಿದ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳು ತಕ್ಷಣ ನದಿಯಲ್ಲಿರುವ ದೋಣಿಗಳನ್ನು ತೆರವುಗೊಳಿಸುವಂತೆ ಸನಿಹದ ಪೊಲೀಸರಿಗೆ ತುರ್ತು ಸಂದೇಶ ಕಳಿಸಿದರು.
ವಿಮಾನ ನೀರಿನಲ್ಲಿ ಇಳಿದ ಬಳಿಕ, ಪ್ರಯಾಣಿಕರನ್ನು ರಕ್ಷಿಸಲು ಬೋಟುಗಳನ್ನು ಮತ್ತು ಹೆಲಿಕಾಪ್ಟರುಗಳನ್ನು ನಿಯೋಜಿಸುವಂತೆ ಆದೇಶಿಸಿದರು. ಇವೆಲ್ಲವೂ ಕೆಲವು ನಿಮಿಷಗಳಲ್ಲಿ ನಡೆದು ಹೋಯಿತು. ಪ್ರಯಾಣಿಕರ ವಿಮಾನವೊಂದು ನದಿಯ ಮೇಲೆ ಇಳಿಯುತ್ತಿರುವುದನ್ನು ಸುತ್ತಲಿನ ಸಹಸ್ರಾರು ಜನ ಭಯಮಿಶ್ರಿಯ
ಅಚ್ಚರಿಯಲ್ಲಿ ಆಗಸದತ್ತ ನೋಡುತ್ತಿದ್ದರೆ, ವಿಮಾನದೊಳಗಿದ್ದ ಪ್ರಯಾಣಿಕರು ಪ್ರಾಣವನ್ನು ಮುಷ್ಠಿಯಲ್ಲಿ ಬಿಗಿ ಹಿಡಿದು ಕುಳಿತಿದ್ದರು. ಪವಾಡ ಸದೃಶ ರೀತಿಯಲ್ಲಿ ಕ್ಯಾಪ್ಟನ್ ಸಲ್ಲಿ ವಿಮಾನವನ್ನು ಸುರಕ್ಷಿತವಾಗಿ ಹಡ್ಸನ್ ನದಿ ಮೇಲೆ ಇಳಿಸಿದ್ದ!
ತಕ್ಷಣ ಬೋಟುಗಳು, ರಕ್ಷಣಾ ಹೆಲಿಕಾಪ್ಟರುಗಳು ಧಾವಿಸಿದವು. ಕೆಲವು ನಿಮಿಷಗಳಲ್ಲಿ ಎಲ್ಲಾ 155 ಜನರನ್ನೂ ಬಚಾವ್ ಮಾಡಲಾಯಿತು. ಯಾವುದು ಅಸಾಧ್ಯ ವೆಂದು ಊಹಿಸಲಾಗಿತ್ತೋ, ಅದು ಸಾಧ್ಯವಾಗಿತ್ತು. ಕ್ಯಾಪ್ಟನ್ ಸಲ್ಲಿ ನಿರ್ಧಾರದಿಂದ ಲ್ಯಾಂಡ್ ಮಾಡುವಾಗಲೂ ಯಾವುದೇ ಅಪಾಯ, ಸಾವು- ನೋವು ಸಂಭವಿಸಲಿಲ್ಲ. ಇಂದಿಗೂ ಇದನ್ನು The Miracle On The Hudson ಎಂದು ಬಣ್ಣಿಸುವುದುಂಟು. ನಾನು ಆಗಾಗ ಈ ಘಟನೆಗಳನ್ನು ನೆನಪು ಮಾಡಿಕೊಳ್ಳು ತ್ತೇನೆ. ಕ್ಯಾಪ್ಟನ್ ಸಲ್ಲಿ ನನ್ನ ಆದರ್ಶ. ಅಂದು ಆತ ಅನುಭವಿದ ಮಾನಸಿಕ ತುಮುಲ, ತಲ್ಲಣಗಳು ನನ್ನ ಮನಸ್ಸಿನಲ್ಲಿ ಡಿಕ್ಕಿ ಹೊಡೆದು ಕೊಳ್ಳುವು ದುಂಟು.
ಸುಮ್ಮನೆ ಕುಳಿತು ನಾನು ಸಲ್ಲಿ ಬಗ್ಗೆ ಯೋಚಿಸುತ್ತೇನೆ. ಪ್ರತಿ ಸಲ ಅವನ ಬಗ್ಗೆ ಯೋಚಿಸಿದಾಗಲೆಲ್ಲ, ಬದುಕಿನ ಹೊಸ ಹೊಸ ಸಾಧ್ಯತೆಗಳು ಗೋಚರವಾಗುತ್ತ, ನನ್ನೊಳಗೆ ಹೊಸ ಬೆಳಕು ಮೂಡುತ್ತದೆ. ಕ್ಯಾಪ್ಟನ್ ಸಲ್ಲಿ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದಿರಿ? ಈ ಪ್ರಶ್ನೆಯನ್ನು ಸಾವಿರಾರು ಪೈಲಟ್ ಗಳಿಗೆ ಕೇಳ ಲಾಗಿದೆ. ಈ ಪ್ರಶ್ನೆಗೆ ಆ ಎಲ್ಲ ಪೈಲಟ್‌ಗಳ ಪ್ರಾಮಾಣಿಕ ಉತ್ತರ ಒಂದೇ ಆಗಿತ್ತು – ನಾನು ಆ ಸಂದರ್ಭದಲ್ಲಿ ವಿಮಾನವನ್ನು ನದಿ ಮೇಲೆ ಇಳಿಸುತ್ತಿರಲಿಲ್ಲ. ಅದು ಕನಸು- ಮನಸಿನಲ್ಲೂ ಊಹಿಸದ ನಿರ್ಧಾರ. ಲ್ಯಾಂಡ್ ಮಾಡುವುದು ಬೇರೆ, ಆದರೆ ವಿಮಾನವೊಂದನ್ನು ನದಿ ಮೇಲೆ ಲ್ಯಾಂಡ್ ಮಾಡಬಹುದು ಎಂಬ ಯೋಚನೆಯೇ ಅತ್ಯಂತ ಭಯಂಕರ ಮತ್ತು ಅದ್ಭುತ!
ಲಕ್ಷದಲ್ಲಿ ಒಬ್ಬರು ಮಾತ್ರ ಅಂಥ ನಿರ್ಧಾರ ತೆಗೆದುಕೊಳ್ಳಬಹುದು. ಸಾವು ಎದುರು ಬಂದು ನಿಂತಾಗ, ಇನ್ನು ಕೆಲ ಕ್ಷಣಗಳಲ್ಲಿ ತನ್ನೊಂದಿಗಿದ್ದವರೆಲ್ಲ ಸಾವಿಗೀ ಡಾಗುವುದು ಶತಃಸಿದ್ಧ ಎಂಬುದು ಮನವರಿಕೆಯಾದಾಗ, ಆ ಸಾವಿನ ದವಡೆಯಿಂದ ಪಾರಾಗಿ ಬರುವುದು ಮತ್ತು ತನ್ನ ಜತೆಗಿದ್ದವರನ್ನೆಲ್ಲ ರಕ್ಷಿಸುವುದನ್ನು ಯಾವ ಮ್ಯಾನೇಜಮೆಂಟ್ ಕ್ಲಾಸುಗಳಗಲಿ, -ಯಿಂಗ್ ಕ್ಲಾಸುಗಳಗಲಿ ಹೇಳಿಕೊಡುವುದಿಲ್ಲ. ಇಂದಿಗೂ ಕ್ಯಾಪ್ಟನ್ ಸಲ್ಲಿ ತೆಗೆದುಕೊಂಡ ನಿರ್ಧಾರವನ್ನು extraordinarily extraordinary ಎಂದು ಬಣ್ಣಿಸುತ್ತಾರೆ.
ನಾವು ಅವನ ಸ್ಥಾನದಲ್ಲಿದ್ದಿದ್ದರೆ, ಇಂಥದೇ ಸಂಕಷ್ಟದ ಸನ್ನಿವೇಶದಲ್ಲಿದ್ದಿದ್ದರೆ, ಏನು ಮಾಡುತ್ತಿದೆವು? ಅದಕ್ಕಾಗಿಯೇ, ಸಾವು-ಬದುಕಿನ ಸನ್ನಿವೇಶದಲ್ಲಿ ಸಿಲುಕಿ ದಾಗ, Think like Sully ಎಂದು ಹೇಳುವುದುಂಟು. ಸತ್ತೇ ಹೋದೆ ಎನ್ನುವ ಸಂದರ್ಭದಲ್ಲಿ ಪಾರಾಗುವುದು ಹೇಗೆ ಅನ್ನೋದನ್ನು ಯೋಚಿಸಬೇಕು. ಇದನ್ನು ಖ್ಯಾತ ವ್ಯಕ್ತಿತ್ವ ವಿಕಸನ ಗುರು ಪ್ರಕಾಶ ಅಯ್ಯರ್ … Learning agility (ಕಲಿಯುತ್ತ ಕಲಿಯುತ್ತ ಅನುಭವಿಯ ಚುರುಕುತನ ಪ್ರದರ್ಶಿಸುವುದು) ಎಂದು ಕರೆದಿದ್ದಾರೆ. ಇದನ್ನು ಅವರು Knowing what to do, when you don’t know what to do ಎಂದು ಸರಳವಾಗಿ ವಿವರಿಸಿದ್ದಾರೆ.
ಬಿಕ್ಕಟ್ಟು ಸಂಭವಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು?, ಸಮಸ್ಯೆ ತಲೆದೋರಿದಾಗ, ಪರಿಹಾರ ಇಲ್ಲದಾದಾಗ, ಯಾವ ರೀತಿ ಮುಂದೆ ಹೆಜ್ಜೆ ಇಡಬೇಕು?, ಬಿಕ್ಕಟ್ಟು ಸಂಭವಿಸಿದಾಗ ಪರಿಹಾರಕ್ಕಾಗಿ ಬೇರೆಯವರ ಸಲಹೆ ಯಾಚಿಸಬೇಕಾ, ನಾವೇ ಉತ್ತರವನ್ನು ಕಂಡುಕೊಳ್ಳಬೇಕಾ?, ಬೇರೆಯವರನ್ನು ದೂಷಿಸಬೇಕಾ ಅಥವಾ ನಮ್ಮನ್ನೇ ಪರಿಹಾರ ಕಂಡುಹಿಡಿಯುವ ಭಾಗವಾಗಿ ಪರಿಗಣಿಸಬೇಕಾ? ಅಸಾಮಾನ್ಯ ಸಂದರ್ಭದಲ್ಲಿ ಅಸಾಧಾರಣ ನಿರ್ಧಾರ ತೆಗೆದುಕೊಳ್ಳಲು ನಮ್ಮನ್ನು ಹೇಗೆ
ಅಣಿಗೊಳಿಸಿಕೊಳ್ಳಬೇಕು? ಹೀಗೆ ಈ ಘಟನೆಯಲ್ಲಿ ಹಲವಾರು ನೀತಿಗಳಿವೆ.
ನಾವು ಎಲ್ಲ ಮುಗಿದು ಹೋಯ್ತು ಎಂದು ಕೈಚೆಲ್ಲಿ ಕುಳಿತುಬಿಡುತ್ತೇವೆ. ಆದರೆ ಅಂಥ ಸಂದರ್ಭದಲ್ಲೂ ಬದುಕುವ ದಾರಿಯೊಂದನ್ನು ಹುಡುಕುವುದು ಹೇಗೆ ಎಂದು ಹಠಾತ್ತನೆ ಯೋಚಿಸಿ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯ. ಯಾರೂ ಊಹಿಸದ ಪರಿಹಾರವನ್ನು ಯೋಚಿಸುವುದು ಮತ್ತು ಅದಕ್ಕೆ ಮನಸ್ಸನ್ನು ಸಿದ್ಧ ಗೊಳಿಸುವುದು ಸಹ ಅಷ್ಟೇ ಮುಖ್ಯ. ಅಂದು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ರಕ್ಷಿಸಿದ ಬಳಿಕ, ವಿಮಾನದಿಂದ ಹೊರಕ್ಕೆ ಕ್ಯಾಪ್ಟನ್ ಸಲ್ಲಿ ಬರುತ್ತಾನೆ!
ಇದನ್ನೇ True leaders eat last ಅಂತಾರೆ. ಅಂದು ಕ್ಯಾಪ್ಟನ್ ಸಲ್ಲಿ ವಿಮಾನದಿಂದ ಹೊರಕ್ಕೆ ಬಂದು ತನ್ನನ್ನು ರಕ್ಷಿಸಿಕೊಳ್ಳಬಹುದಿತ್ತು. ಆತ ಅಂದು ನಿಜವಾದ ನಾಯಕನಂತೆ ವರ್ತಿಸಿದ. ಎಲ್ಲರನ್ನೂ ಬಚಾವ್ ಮಾಡಿದ ನಂತರವೇ ಕೊನೆಯಲ್ಲಿ ಬಂದ.
ಅಲ್ಲಿ ವೀರೋಚಿತ ಸಾಹಸವನ್ನು ನೋಡುತ್ತಿದ್ದ ಮಾಧ್ಯಮದವರು, ‘ಕ್ಯಾಪ್ಟನ್ ಸಲ್ಲಿ, ನೀವು ನಿಜವಾದ ಹೀರೋ’ ಎಂದು ಅತ್ಯಂತ ಹರ್ಷಚಿತ್ತರಾಗಿ ಕೊಂಡಾಡು ತ್ತಿದ್ದರೆ, ಕ್ಯಾಪ್ಟನ್ ಸಲ್ಲಿ ತನ್ನ ಸಹ ಪೈಲಟ್ ಮತ್ತು ಗಗನಸಖಿಗಳನ್ನು ತೋರಿಸಿ, ’’They did it’ ಎಂದು ಹೇಳಿದ. ನಿಜವಾದ ನಾಯಕರು ಎಲ್ಲ ಕ್ರೆಡಿಟ್ಟುಗಳನ್ನು ತಾವೇ ತೆಗೆದುಕೊಳ್ಳುವುದಿಲ್ಲ. ಅದನ್ನು ತಮ್ಮ ತಂಡದವರೊಂದಿಗೆ ಹಂಚಿಕೊಳ್ಳುತ್ತಾರೆ. ಎಷ್ಟೇ ಸಲ ಈ ಸಿನಿಮಾವನ್ನು ನೋಡಿದರೂ ನನಗೆ ಬೋರಾಗುವು ದಿಲ್ಲ. ಕಾರಣ ಪ್ರತಿ ಸಲ ನೋಡಿದಾಗಲೂ ನನ್ನ ಮುಂದೆ ಹೊಸ ಸಾಧ್ಯತೆಗಳ ಬಯಲು ಹರಡಿಕೊಳ್ಳುತ್ತದೆ.`