ವರ್ತಮಾನ
maapala@gmail.com
ವಿಧಾನಸಭೆ ಚುನಾವಣೆ ಮತದಾನ ಮುಗಿದು ಇನ್ನೇನು ಫಲಿತಾಂಶವೂ ಪ್ರಕಟವಾಗುತ್ತಿದೆ. ಅತಂತ್ರ ವಿಧಾನಸಭೆ ಸೃಷ್ಟಿ ಯಾಗುವುದೋ? ಆಡಳಿತ ವಿರೋಧಿ ಅಲೆ, ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ ಗೆಲುವಾ ಗುವುದೋ? ಪ್ರಧಾನಿ ನರೇಂದ್ರ ಮೋದಿ ಅಲೆ ಆಧರಿಸಿ ಬಿಜೆಪಿ ೧೯೮೫ರ ಬಳಿಕ ಯಾವುದೇ ಪಕ್ಷ ಸತತ ಎರಡನೇ ಬಾರಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿಲ್ಲ ಎಂಬ ಸಂಪ್ರದಾಯವನ್ನು ಬಿಜೆಪಿ ಮುರಿಯುವುದೋ ಎಂಬುದು ನಿರ್ಧಾರವಾಗಲಿದೆ.
ಆದರೆ, ಚುನಾವಣಾ ಪ್ರಚಾರದ ವಿಚಾರದಲ್ಲಿ ಆರಂಭದಿಂದಲೂ ಒಂದಲ್ಲಾ ಒಂದು ಯಡವಟ್ಟುಗಳನ್ನು ಮಾಡಿಕೊಂಡೇ ಬಂದಿದ್ದ ಕಾಂಗ್ರೆಸ್ ಇನ್ನೇನು ಮತದಾನಕ್ಕೆ ಮೂರ್ನಾಲ್ಕು ದಿನ ಬಾಕಿ ಇದೆ ನ್ನುವಾಗ ಎಚ್ಚೆತ್ತುಕೊಂಡು ಮಾಡಿದ ಪ್ರಚಾರ ತಂತ್ರಗಳು, ಪಕ್ಷದ ರಾಜ್ಯ ನಾಯಕರು ಪ್ರತಿಕ್ರಿಯಿಸಿದ ರೀತಿಯನ್ನು ಮೆಚ್ಚಲೇ ಬೇಕು. ಒಂದೊಮ್ಮೆ ಇದು ಕೈಹಿಡಿದು ಕಾಂಗ್ರೆಸ್ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬಂದರೆ ಅದು ರಾಜ್ಯ ನಾಯಕರಿಂದಲೇ ಹೊರತು ರಾಷ್ಟ್ರೀಯ ನಾಯಕರಿಂದ ಅಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.
ಚುನಾವಣಾ ಪ್ರಕ್ರಿಯೆ ಆರಂಭವಾಗುವಾಗ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇತ್ತು. ಕಳೆದ ಒಂದು ವರ್ಷದಿಂದ ರಾಜ್ಯ ನಾಯಕರು ಅಂತಹ ವಾತಾವರಣ ಸೃಷ್ಟಿಸಿದ್ದರು. ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಸಾಕಷ್ಟು ಗೊಂದಲಗಳಿದ್ದರೂ ಅದ್ಯಾವುದೂ ಹೊರ ಬರದಂತೆ ರಾಜ್ಯ ನಾಯಕತ್ವ ನೋಡಿಕೊಂಡಿತು. ಇವರಿಬ್ಬರ ಮಧ್ಯೆ ಸಮನ್ವಯತೆ ತರಲು ವರಿಷ್ಠರೂ ಅಷ್ಟೇ ಗಟ್ಟಿಯಾಗಿ ಕೆಲಸ ಮಾಡಿದ್ದರು. ಹೀಗಾಗಿ ಇಬ್ಬರೂ ಒಟ್ಟಾಗಿ ಸೇರಿ ೪೦ ಪರ್ಸೆಂಟ್ ಕಮಿಷನ್ ಆರೋಪ, ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದರು.
ಪ್ರತಿಯೊಂದು ಸಣ್ಣ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿ ಆಡಳಿತ ವಿರೋಧಿ ಅಲೆ ಹೆಚ್ಚುವಂತೆ ನೋಡಿಕೊಂಡರು. ಟಿಕೆಟ್ ಹಂಚಿಕೆ ವಿಚಾರದಲ್ಲೂ ಇದ್ದ ಭಿನ್ನಾಭಿಪ್ರಾಯಗಳು ಬೀದಿಗೆ ಬರದಂತೆ ಎಚ್ಚರಿಕೆ ವಹಿಸಿದರು. ಚುನಾವಣೆ ಪ್ರಚಾರ ಆರಂಭವಾಗುವ ಸಂದರ್ಭದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಯಾವಾಗ ಚುನಾವಣಾ ಅಖಾಡಾಕ್ಕೆ ರಾಷ್ಟ್ರೀಯ ನಾಯಕರ ಪ್ರವೇಶವಾಯಿತೋ ಸಮಸ್ಯೆ ಗಳೂ ಒಂದೊಂದಾಗಿ ಕಾಣಿಸಿಕೊಳ್ಳಲಾರಂಭಿಸಿದವು. ಅದರಲ್ಲಿ ಮೊದಲನೆಯದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ.
ಬೇರೆ ಯಾವುದೇ ನಾಯಕ ಈ ರೀತಿ ಹೇಳಿದ್ದರೆ ಅದು ದೊಡ್ಡ ವಿಷಯವಾಗುತ್ತಿರಲಿಲ್ಲ. ಆದರೆ, ರಾಜ್ಯದವರೇ ಆದ ಹಿರಿಯ ಮುತ್ಸದಿ ಖರ್ಗೆ ಅವರ ಬಾಯಿಯಿಂದ ಇಂತಹ ಹೇಳಿಕೆ ಬರುವುದೆಂದರೆ ಅದು ಪಕ್ಷಕ್ಕೆ ದೊಡ್ಡ ಅಪಾಯವನ್ನೇ ತಂದೊಡ್ಡಿ ದಂತೆ. ಈ ಹೇಳಿಕೆಯ ಎಲ್ಲಾ ಲಾಭ ಪಡೆಯಲು ಬಿಜೆಪಿಯೂ ಯತ್ನಿಸಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸಾಕಷ್ಟು ಬಾರಿ ಇದನ್ನು ಪ್ರಸ್ತಾಪಿಸಿದ್ದರು.
ಆದರೆ, ಖರ್ಗೆಯವರ ಹೇಳಿಕೆ ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡೆದುಕೊಂಡ ರೀತಿ ಅವರ ಚಾಣಾಕ್ಷತೆ ಯನ್ನು ತೋರಿಸಿತು. ಅವರಿಬ್ಬರೂ ಖರ್ಗೆಯವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲೂ ಇಲ್ಲ, ತಳ್ಳಿ ಹಾಕಲೂ ಇಲ್ಲ. ಆ ವಿಚಾರವನ್ನು ಪ್ರಸ್ತಾಪಿಸದೆ ನೇರವಾಗಿ ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆಯೇ ತಮ್ಮ ಗಮನ ಕೇಂದ್ರೀಕರಿಸಿ ದ್ದರು. ಹೀಗಾಗಿ ರಾಜ್ಯದಲ್ಲಿ ಖರ್ಗೆಯವರಿಗಿಂತ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿಕುಮಾರ್‌ಗೆ ಹೆಚ್ಚಿನ ಮಾನ್ಯತೆ ಇದ್ದುದರಿಂದ ವಿಷ ಸರ್ಪ ಹೇಳಿಕೆ ಕಾಂಗ್ರೆಸ್ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲೇ ಇಲ್ಲ.
ಇನ್ನು ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಕುರಿತು ಘೋಷಣೆ ಮಾಡಿದ್ದು ಕೂಡ ಕಾಂಗ್ರೆಸ್‌ಗೆ ಸಾಕಷ್ಟು ಹಾನಿ ಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬಿಜೆಪಿಯವರು ಬಜರಂಗದಳ ನಿಷೇಧವನ್ನು ಬಜರಂಗಿಯ ಜತೆ ಥಳಕು ಹಾಕಿ ಆ ಮೂಲಕ ತನ್ನ ಮತಬ್ಯಾಂಕ್ ಹೆಚ್ಚಿಸಿಕೊಳ್ಳಲು ಯತ್ನಿಸಿತು. ಆದರೆ, ಬಜಂರಗದಳ ನಿಷೇಧ ತಮ್ಮ ನಿರ್ಧಾರವೇ ಅಲ್ಲ, ಹೈಕಮಾಂಡ್ ಪಾತ್ರವಿದೆ ಎಂಬುದನ್ನು ಪರೋಕ್ಷವಾಗಿ ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ರಾಜ್ಯ ನಾಯಕರು ಮಾಡಿದರು. ಅಷ್ಟೇ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಜನಾದ್ರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ, ಆ ಭಾಗದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅದರಿಂದ ಆಗಬಹುದಾಗಿದ್ದ ಹೆಚ್ಚಿನ ಅಪಾಯವನ್ನು ತಪ್ಪಿಸಿದರು. ಮೇಲಾಗಿ ಚುನಾವಣೆ ಘೋಷಣೆಯಾದ ದಿನದಿಂದಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆ ಸ್‌ನ ತುಷ್ಠೀಕರಣ ರಾಜಕೀಯಕ್ಕೆ ಹೊರತಾಗಿಯೇ ಕಾರ್ಯನಿರ್ವಹಿಸಿದರು.
ಇದು ಸಹಜವಾಗಿಯೇ ಹಿಂದುತ್ವದ ಮತಗಳನ್ನು ಕ್ರೋಢೀಕರಿಸುವ ಬಿಜೆಪಿಯ ಪ್ರಯತ್ನಕ್ಕೆ ಮುಳುವಾಯಿತು. ಇನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರ ಪ್ರಚಾರದ ವಿಷಯದಲ್ಲೂ ರಾಜ್ಯ ನಾಯಕರು ಹೆಚ್ಚಾಗಿ ಮೂಗು ತೂರಿಸಲಿಲ್ಲ. ಹೈಕಮಾಂಡ್ ಸಂಸ್ಕೃತಿಯಂತೆ ಅವರು ಬಂದಾಗ ಆದ್ಯತೆ ನೀಡುವ ಮೂಲಕ ಅವರನ್ನು ಮೆಚ್ಚಿಸುವ ಕೆಲಸ ಮಾಡಿದರಷ್ಟೇ ಹೊರತು ಓಲೈಸಲು ಹೋಗಲಿಲ್ಲ. ಇದರ ಪರಿಣಾಮ ಸೋನಿಯಾ ಗಾಂಽ ಕೇವಲ ಒಂದು ಬಾರಿ ಮಾತ್ರ ಬಂದರು. ರಾಹುಲ್ ಗಾಂಽ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಹಲವು ಬಾರಿ ಬಂದರೂ ಅವರು ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಟೀಕೆಗಳಿಗಷ್ಟೇ ಸೀಮಿತರಾದರೇ ಹೊರತು ಪಕ್ಷಕ್ಕೆ ಅಪಾಯ ಉಂಟುಮಾಡುವ ಯಾವುದೇ ಹೇಳಿಕೆ ಹೊರಬರಲಿಲ್ಲ. ಅವರು ಆ ರೀತಿ ಮಾತನಾಡಲಿಲ್ಲ ಎಂಬುದಕ್ಕಿಂತಲೂ ಮಾತನಾಡದಂತೆ ನೋಡಿ ಕೊಳ್ಳುವಲ್ಲಿ ಯಶಸ್ವಿಯಾದರು.
ಪ್ರಧಾನಿ ವಿರುದ್ಧ ಖರ್ಗೆ ಬಳಸಿದ್ದ ವಿಷ ಸರ್ಪ ಹೇಳಿಕೆ ಬಳಿಕ ಮತ್ತೆ ಅಂತಹ ಯಾವುದೇ ಹೇಳಿಕೆಗಳು ಹೈಕಮಾಂಡ್ ನಾಯಕರಿಂದ ಬಾರದಂತೆ ರಾಜ್ಯ ನಾಯಕರು ನೋಡಿಕೊಂಡರು. ಅದಕ್ಕಾಗಿ ಹೈಕಮಾಂಡ್ ನಾಯಕರಿಗೆ ಭಾಷಣಕ್ಕೆ ಸರಕು ಒದಗಿಸುವವರಿಗೂ ಸ್ಪಷ್ಟ ನಿರ್ದೇಶನ ನೀಡಿದ್ದರು. ಅವರು ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ಅದರಂತೆ ತಂತ್ರಗಾರಿಕೆ ಹೆಣೆದಿದ್ದರು. ಏಕೆಂದರೆ, ಈವರಿಗೆ ಹೈಕಮಾಂಡ್ ನಾಯಕರು ಇತರೆ ರಾಜ್ಯಗಳಲ್ಲಿ ಚುನಾವಣೆ ವೇಳೆ ಮಾಡಿದ ಯಡವಟ್ಟುಗಳಿಂದ ಆದ ಆಪಾಯದ ಅರಿವಿತ್ತು. ಇನ್ನು ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಗಳ ವಿಚಾರದಲ್ಲೂ ಸಿದ್ದು-ಡಿಕೆಶಿ ಅವರ ಬಿಗಿ ಪಟ್ಟಿನಿಂದಾಗಿಯೇ ಕಾಂಗ್ರೆಸ್ ಅತ್ಯಂತ ಸುಲಭವಾಗಿ ಮತದಾರರನ್ನು ತಲುಪುವಂತಾಯಿತು.
ಗ್ಯಾರಂಟಿ ಘೋಷಣೆಗಳ ಕುರಿತು ರಾಜ್ಯ ನಾಯಕರು ಪ್ರಸ್ತಾಪಿಸಿದಾಗ ಚುನಾವಣಾ ಪ್ರಣಾಳಿಕೆಯಲ್ಲೇ ಅದನ್ನು ಘೋಷಿಸ ಬೇಕು ಎಂಬ ಸಲಹೆಯನ್ನು ಹೈಕಮಾಂಡ್ ನಾಯಕರು ನೀಡಿದ್ದರು. ಆದರೆ, ಇದಕ್ಕೆ ಒಪ್ಪದ ಇಬ್ಬರೂ, ರಾಹುಲ್ ಗಾಂಧಿ ಮೂಲಕ ಮೊದಲ ಘೋಷಣೆ ಮಾಡಿಸಿದರು. ಬಳಿಕ ಒಂದೊಂದಾಗಿ ಘೋಷಣೆಗಳು ಹೊರಬಿದ್ದು ಅದು ಮತದಾರರನ್ನು ಸುಲಭವಾಗಿ ತಲುಪುವಂತಾಯಿತು.
ಒಂದು ವೇಳೆ ಹೈಕಮಾಂಡ್ ಮಾತಿಗೆ ಮಣಿದಿದ್ದರೆ ಐದು ಗ್ಯಾರಂಟಿ ಘೋಷಣೆಗಳು ಹತ್ತರೊಟ್ಟಿಗೆ ಹನ್ನೊಂದು ಎಂಬಂತಾ ಗುತ್ತಿತ್ತಷ್ಟೇ ಹೊರತು ಹೆಚ್ಚು ಮತ ತಂದುಕೊಡುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕು ಮಾರ್ ನಡುವಿನ ಶೀಥಲ ಸಮರ ಎಲ್ಲೂ ಬಹಿರಂಗವಾಗದಂತೆ ನೋಡಿಕೊಂಡಿದ್ದು ಈ ಬಾರಿಯ ಚುನಾವಣೆಯ ಹೈಲೈಟ್ಸ್‌ಗಳಲ್ಲಿ ಒಂದು ಎನ್ನುವಂತಾಯಿತು. ಇವರಿಬ್ಬರ ಮಧ್ಯೆ ಗೊಂದಲ ಸೃಷ್ಟಿಸಲು ಬಿಜೆಪಿ ಸಾಕಷ್ಟು ಪ್ರಯತ್ನಿಸಿತ್ತು. ಬೆಂಬಲಿಗರೂ ಆಗಾಗ್ಗೆ ಕಡ್ಡಿ ಗೀರಿದ್ದರು. ಆದರೆ, ಇಬ್ಬರೂ ಅದಕ್ಕೆ ಸೊಪ್ಪು ಹಾಕಲೇ ಇಲ್ಲ. ಇಂತಹ ಪ್ರಯತ್ನ ತೀವ್ರಗೊಂಡಾಗ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಿ ಗಮನ ಬೇರೆ ಕಡೆ ಹೋಗುವಂತೆ ಮಾಡಿದರು. ಇವರಿಬ್ಬರ ಮಧ್ಯೆ ಅಂತರ ಹೆಚ್ಚಿಸಲು ಯಾರೆಷ್ಟೇ ಪ್ರಯತ್ನ ಪಟ್ಟರೂ ಅದು ಫಲ ಕೊಡದಂತೆ ನೋಡಿಕೊಂಡರು ಮಾತ್ರವಲ್ಲ, ತಮ್ಮಿಬ್ಬರ ಮಧ್ಯೆ ಅಂತಹ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಪದೇಪದೆ ತೋರಿಸಿಕೊಡುತ್ತಿದ್ದರು.
ಇದೆಲ್ಲದರ ಪರಿಣಾಮ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ಅಭಿಪ್ರಾಯ ಹುಟ್ಟುಹಾಕುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಒಂದೊಮ್ಮೆ ಈ ಇಬ್ಬರು ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಹೋಗಿ ಎಡವಿದ್ದರೆ ಇಂದು ಅತಂತ್ರ ಪರಿಸ್ಥಿತಿ ಮತ್ತು ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ಮತಗಟ್ಟೆ ಸಮೀಕ್ಷೆ ಬರಲು ಅವಕಾಶವೇ ಇರುತ್ತಿರಲಿಲ್ಲ. ಬಿಜೆಪಿ ಮತ್ತೊಮ್ಮೆ ಸುಲಭವಾಗಿ ಮತ್ತೊಮ್ಮೆ ಅಽಕಾರಕ್ಕೆ ಬರುವ ವಾತಾವರಣ ಸೃಷ್ಟಿಯಾಗುತ್ತಿತ್ತು.
ಒಟ್ಟಿನಲ್ಲಿ ಶನಿವಾರ ಫಲಿತಾಂಶ ಏನೇ ಬರಲಿ, ಕಾಂಗ್ರೆಸ್ ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳುವಲ್ಲಿ ರಾಜ್ಯ ನಾಯಕತ್ವ ಯಶಸ್ವಿಯಾಗಿದ್ದು ಮಾತ್ರ ಸುಳ್ಳಲ್ಲ.
ಲಾಸ್ಟ್ ಸಿಪ್: ನೂರು ಒಳ್ಳೆಯ ಕೆಲಸಗಳಿಗಿಂತಲೂ ಆಗಬಹುದಾದ ನಾಲ್ಕು ತಪ್ಪುಗಳನ್ನು ತಪ್ಪಿಸಿದರೆ ಅದಕ್ಕಿಂತ ದೊಡ್ಡ ಲಾಭ ಬೇರೊಂದಿಲ್ಲ.