Saturday, 14th December 2024

ವಿಮಾನ ಟಾಯ್ಲೆಟ್ ಸೋರಿ, ಹೊಲಸು ತಲೆಯ ಮೇಲೆ ಬೀಳಬಹುದಾ ?

ಇದೇ ಅಂತರಂಗ ಸುದ್ದಿ

vbhat@me.com

ನನಗೆ ವಿಮಾನ ಪ್ರಯಾಣ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳೆಂದರೆ ಇಷ್ಟ. ಐನೂರು ಜನರನ್ನು ಹೊತ್ತು ಕೊಂಡು, ಅವರಿಗೆ ಹದಿನೆಂಟು ಗಂಟೆಗಳಿಗೆ ಸಾಕಾಗುವಷ್ಟು ಆಹಾರ, ತಿಂಡಿ-ತೀರ್ಥಗಳನ್ನು ಹೇರಿಕೊಂಡು ಗಗನದಲ್ಲಿ ಹಾರುವ ಆ ದೈತ್ಯ ಉಕ್ಕಿನಹಕ್ಕಿ ಇಂದಿಗೂ ವಿಸ್ಮಯವೇ. ಸುದೀರ್ಘ ವಿಮಾನ ಪ್ರಯಾಣದಲ್ಲಿ ಗಗನಸಖಿಯರು ಮತ್ತು ಸ್ವತಃ ಪೈಲಟ್ ಗಳ ಜತೆ ಖುದ್ದು ಮಾತಾಡುವಾಗ, ವಿಮಾನದ ರೋಚಕ ಲೋಕದ
ಬಗ್ಗೆ ತಿಳಿದುಕೊಂಡರೂ, ಅದರ ಬಗೆಗಿನ ಕುತೂಹಲ ಮಾತ್ರ ಕಮ್ಮಿಯಾಗಿಲ್ಲ.

ಪ್ರತಿ ವಿಮಾನವೂ ನೂರಾರು ಕತೆಗಳನ್ನು ಹಡೆಯಬಲ್ಲವು. ಪ್ರತಿ ವಿಮಾನ ಪ್ರಯಾಣವೂ ಸ್ಮರಣೀಯ. ಹಾಗೆ ಯಾವ ವಿಮಾನ ಪ್ರಯಾಣವೂ ನೀರಸ ಎಂದು ನನಗನಿಸಿಲ್ಲ. ಅನೇಕರು ವಿಮಾನ ಪ್ರಯಾಣ ಅಂದ್ರೆ ಮೂಗು ಮುರಿಯುತ್ತಾರೆ. ‘ಬೇರೆ ದಾರಿಯಿಲ್ಲ, ಅನಿವಾರ್ಯ ಕರ್ಮ. ನಾನು ವಿಮಾನ ಪ್ರಯಾಣವನ್ನು ದ್ವೇಷಿಸುತ್ತೇನೆ. ನನಗೆ ಅದೊಂದು ಶಿಕ್ಷೆ’ ಎಂದೆಲ್ಲ ಹೇಳುವವರನ್ನು ಕೇಳಿದ್ದೇನೆ. ಈ ಮಾತಿನ ಹಿಂದಿನ ಉದ್ದೇಶ, ಮರ್ಮ ಏನೆಂಬುದು ನನಗಂತೂ ಅರ್ಥವಾಗಿಲ್ಲ.

ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ಒಂದು ಮಾತಿದೆ – To invent an airplane is nothing. To build one is something. But to fly is everything.. ವಿಮಾನ ಪ್ರಯಾಣದ ಸ್ವಾರಸ್ಯ ಮತ್ತು ಅನುಭವ ಅದೊಂದು ಮಾತಿನಲ್ಲಿ ಅಡಕವಾಗಿದೆ. ಅದೆಷ್ಟೇ ಸಲ ವಿಮಾನ ಪ್ರಯಾಣ ಮಾಡಿದರೂ ಸುಸ್ತು ಅಥವಾ ಬೇಸರ ಎಂಬುದಿಲ್ಲ. ಕಾರಣ ಪ್ರತಿ ಪ್ರಯಾಣವೂ ಭಿನ್ನ. ಸಹಪ್ರಯಾಣಿಕರೂ ಭಿನ್ನ. ತಲುಪುವ ಊರು ಅಥವಾ ದೇಶವೂ. ತೀರಾ ಕಡಿಮೆ ಅವಧಿ ಅಂದ್ರೆ ಕೇವಲ ಹದಿಮೂರು ನಿಮಿಷಗಳಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ – ಬೆಹರೈನ್ (ಮಾನಾಮ)ದಿಂದ ಕತಾರ್(ದೋಹಾ)ಗೆಹೋಗಿದ್ದೇನೆ.

ಹಾಗೆ ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ೧೭ ಗಂಟೆ, ೫೫ ನಿಮಿಷ ಅತಿದೀರ್ಘ ಪ್ರಯಾಣ ಮಾಡಿದ್ದೇನೆ. ಒಮ್ಮೆ ನ್ಯೂಯಾರ್ಕಿನಿಂದ ಸಿಂಗಾಪುರಕ್ಕೆ ಹತ್ತೊಂಬತ್ತು ಗಂಟೆ ಪ್ರಯಾಣ ಮಾಡಬೇಕಿತ್ತು. ಆ ಅವಕಾಶ ಸ್ವಲ್ಪದರಲ್ಲಿ ತಪ್ಪಿ ಹೋಯಿತು. ಮುಂದೆ ಎಂದಾದರೂ ಆ ಎರಡು ನಗರಗಳ ನಡುವೆ ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸಬೇಕು. ಆ ಪ್ರಯಾಣದಲ್ಲಿ ಕನಿಷ್ಠ ಐದು ಸಲ ಊಟ ಮತ್ತು ಮೂರು ಸಲ ಉಪಾಹಾರ ಸೇವಿಸಬಹುದು. ಆ ವಿಮಾನ ಐನೂರು ಜನರಿಗೆ ಸಾಕಾಗುವಷ್ಟು ಅವೆಷ್ಟು ಆಹಾರ, ನೀರು, ತಿಂಡಿ-ತೀರ್ಥಗಳನ್ನು ಹೊತ್ತೊಯ್ಯಬಹುದು ಎಂಬುದನ್ನು ಊಹಿಸಿಕೊಳ್ಳಿ.

ವಿಮಾನ ಪ್ರಯಾಣಕ್ಕೆ ಸಂಬಂಽಸಿದಂತೆ, ಸಾಮಾನ್ಯವಾಗಿ ಎಲ್ಲರಲ್ಲೂ ನೂರಾರು ಪ್ರಶ್ನೆಗಳು ಇದ್ದೇ ಇರುತ್ತವೆ. ವಿಮಾನದಲ್ಲಿ ಇಂಧನ ಎಲ್ಲಿ ಇರುತ್ತದೆ, ಹತ್ತು ಗಂಟೆ ವಿಮಾನ ಹಾರಾಟಕ್ಕೆ ಎಷ್ಟು ಇಂಧನ ಬೇಕಾಗುತ್ತದೆ, ವಿಮಾನಕ್ಕೆ ಎಷ್ಟು ಇಂಧನ ತುಂಬಿಸಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ, ವಿಮಾನ ಹಾರುವಾಗ ವಿಪರೀತ ಅಲುಗಾಡುವುದೇಕೆ, ಹಾಗೆ ಅಲುಗಾಡಿ ವಿಮಾನ ಬೀಳುವ ಅಪಾಯವಿದೆಯಾ, ವಿಮಾನ ಹಾರುವಾಗ ಹಠಾತ್ ತಾಂತ್ರಿಕ ದೋಷಗಳು ಸಂಭವಿಸಿದರೆ ಏನು ಮಾಡುತ್ತಾರೆ, ವಿಮಾನದ ಕಿಟಕಿಗಳೇಕೆ ಅಷ್ಟು ಸಣ್ಣದಾಗಿರುತ್ತದೆ ಮತ್ತು ದೊಡ್ಡ ಕಿಟಕಿಗಳನ್ನೇಕೆ ಇಡುವುದಿಲ್ಲ, ಭೂಮಿಯ ಮೇಲಿದ್ದಾಗ ವಿಮಾನ ದೊಳಗೆ ವಿಪರೀತ ಸೆಖೆಯಾಗುವುದೇಕೆ ಮತ್ತು ಹಾರಿದ ಕೆಲ ಸಮಯದ ನಂತರ ತಂಪಾಗುವುದೇಕೆ, ವಿಮಾನ ಲ್ಯಾಂಡ್ ಆಗುವಾಗ ಚಕ್ರಗಳು ಬಿಚ್ಚಿಕೊಳ್ಳದಿದ್ದರೆ ಏನು ಮಾಡುತ್ತಾರೆ, ಟೈಯರ್ ಒಡೆದರೆ ಏನಾಗುತ್ತದೆ, ಬ್ಲ್ಯಾಕ್ ಬಾಕ್ಸ್ ಎಲ್ಲಿರುತ್ತದೆ, ಮುಂದೆ ಏನೇನೂ ಕಾಣದಾದಾಗ ಪೈಲಟ್ ಏನು ಮಾಡುತ್ತಾನೆ, ವಿಮಾನ ದಲ್ಲಿ ಎಷ್ಟು ಲಗೇಜ್ (ಕಾರ್ಗೋ) ಹೇರಬಹುದು, ಒಬ್ಬ ಪೈಲಟ್ ಎಲ್ಲ ವಿಮಾನಗಳನ್ನೂ ಓಡಿಸಬಹುದಾ, ಪೈಲಟ್ ಊಹಿಸದ ಘಟನೆಗಳೇನಾದರೂ ಸಂಭವಿಸಿದರೆ ಆತನ ಪ್ರತಿಕ್ರಿಯೆ ಹೇಗಿರುತ್ತದೆ, ಪೈಲಟ್‌ಗೆ ಹೃದಯಾಘಾತವಾದರೆ ಏನಾಗು ತ್ತದೆ, ಏರ್ ಟ್ರಾಫಿಕ್ ಕಂಟ್ರೋಲ್ ನೀಡಿದ ಸೂಚನೆಯನ್ನು ಪೈಲಟ್ ಸರಿಯಾಗಿ ಗಮನಿಸದಿzಗ ಏನಾಗುತ್ತದೆ, ಕೆಲವೊಮ್ಮೆ ನಿಲ್ದಾಣದ ಮೇಲೆ ವಿಮಾನ ಗಿರಾಕಿ ಹೊಡೆಯುವುದೇಕೆ ಹೀಗೆ ವಿಮಾನ ಪ್ರಯಾಣಿಕರಲ್ಲಿ ನೂರಾರು ಪ್ರಶ್ನೆಗಳು ಕಾಲ
ಕಾಲಕ್ಕೆ, ವಿಮಾನ ಪ್ರಯಾಣದಲ್ಲಿ ಏಳುತ್ತವೆ.

ಇಂಥ ಸಂದರ್ಭದಲ್ಲಿ, ನಾವು ಯಾರಿಂದ ಸರಿಯಾದ ಉತ್ತರ ವನ್ನು ಪಡೆಯುವುದು? ಕೆಲವರು ತಮಗೇ ಗೊತ್ತು ಎಂದು ಭಾವಿಸುತ್ತಾರೆ. ಇಂಥವರು ಹೇಳುವುದನ್ನು ನೂರಕ್ಕೆ ನೂರು ಸತ್ಯವೆಂದು ಸ್ವೀಕರಿಸಲು ಸಾಧ್ಯವಿಲ್ಲ. ಒಬ್ಬ ಅನುಭವಿ ಪೈಲಟ್ ಅಥವಾ ವಿಮಾನ ತಂತ್ರಜ್ಞ ನೀಡುವ ಉತ್ತರ ಗಳನ್ನು ಮನ್ನಿಸಬಹುದು. ಆದರೆ ಅಂಥವರು ತಕ್ಷಣ ಕೈಗೆ ಸಿಗುವುದಿಲ್ಲ. ಇನ್ನು ವಿಷಯ ಗೊತ್ತಿರುವವರಿಗೆ ಜನಸಾಮಾನ್ಯರಿಗೆ ಹೇಳುವ ಭಾಷೆ ದಕ್ಕಿರುವುದಿಲ್ಲ. ಕೆಲವು ಸಲ ಅವರು ಹೇಳುವುದು ನಮಗೆ ಅರ್ಥವಾಗುವುದಿಲ್ಲ.

ಈ ವಿಷಯದಲ್ಲಿ ನಾನು ಕಳೆದ ಹತ್ತು ವರ್ಷಗಳಿಂದ ಪ್ಯಾಟ್ರಿಕ್ ಸ್ಮಿಥ್ ಹೇಳುವುದನ್ನು ಓದುತ್ತ, ಕೇಳುತ್ತ ಬಂದಿದ್ದೇನೆ. ವಿಮಾನ ಯಾನ ವಿಷಯಕ್ಕೆ ಸಂಬಂಽಸಿದಂತೆ ಆತನಷ್ಟು ಸರಳವಾಗಿ ಮತ್ತು ಸ್ವಾರಸ್ಯವಾಗಿ ಮತ್ತೊಬ್ಬರು ಹೇಳುವುದನ್ನು ನಾನು ಕೇಳಿಲ್ಲ. ಸ್ಮಿಥ್ ಮೂಲತಃ ಅಮೆರಿಕನ್ ಪೈಲಟ್. ಆತ ಬರೆಯುವ ಅಂಕಣಗಳನ್ನು ಓದಿದರೆ, ವಿಮಾನಯಾನದ ಬಗ್ಗೆ ನಮಗಿರುವ ಕುತೂಹಲ ತಣಿಯುತ್ತದೆ, ಗೊಂದಲ ನಿವಾರಣೆ ಯಾಗುತ್ತದೆ, ವಿಷಯದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಮೂಡುತ್ತದೆ.

ವಿಮಾನಯಾನದಂಥ ವಿಷಯದ ಬಗ್ಗೆ ಬರೆಯುವುದು ಸುಲಭವಲ್ಲ. ಅದರಲ್ಲೂ ಜಾಗತಿಕ ವಿಮಾನ ಯಾಬಾದ ಬಗ್ಗೆ ಬರೆಯುವುದು ಕಷ್ಟ. ಆದರೆ ಸ್ಮಿಥ್ ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ಬರೆಯುತ್ತಿರುವುದು ಸಂತಸದ ವಿಷಯ. ವಿಮಾನದಲ್ಲಿರುವ ಟಾಯ್ಲೆಟ್ಟುಗಳು ಸೋರಿ, ಮಲಮೂತ್ರ
ಗಳು ಜನರ ಮೇಲೆ ಬಿದ್ದ ನಿದರ್ಶನಗಳೇನಾದರೂ ಇದ್ದಿರಬಹುದಾ? ಹಾಗಂತ ಸ್ಮಿಥ್‌ಗೆ ಯಾವನೋ ಕೇಳಿದ್ದ. ಆ ವಿಷಯ ವನ್ನೇ ಇಟ್ಟುಕೊಂಡು ಆತ ಬರೆದ ಲೇಖನದಲ್ಲಿ ಯಾರಿಗೂ ಗೊತ್ತಿರದ, ಊಹಿಸಿರದ ಅನೇಕ ವಿಷಯಗಳಿದ್ದವು.

ಸುಮಾರು ಹದಿನೈದು ವರ್ಷಗಳ ಹಿಂದೆ, ಕ್ಯಾಲಿಫೋರ್ನಿಯಾದಲ್ಲಿ ಒಬ್ಬ ವ್ಯಕ್ತಿ ನಡೆದು ಹೋಗುತ್ತಿರುವಾಗ, ಮೇಲಿನಿಂದ ನೀಲಿ ಬಣ್ಣದ ಮಂಜುಗಡ್ಡೆ ತುಣುಕೊಂದು ತಲೆ ಮೇಲೆ ದೊಪ್ಪನೆ ಬಿದ್ದಿತು. ಅದು ಬಿದ್ದ ಹೊಡೆತಕ್ಕೆ ಆತನಿಗೆ ಪೆಟ್ಟಾಯಿತು. ಆ ಮಂಜುಗಡ್ಡೆ ತುಣುಕನ್ನು ಯಾರು ಎಸೆದಿರಬಹುದು ಎಂದು ಆತನಿಗೆ ಆಶ್ಚರ್ಯವಾಯಿತು. ಅದು ಬಯಲು ಪ್ರದೇಶವಾಗಿದ್ದರಿಂದ ಯಾರೂ ತಲೆ ಮೇಲೆ ಎಸೆಯುವಂತಿರಲಿಲ್ಲ. ಸುತ್ತಲೂ ಯಾರೂ
ಇರಲೂ ಇಲ್ಲ. ಆದರೆ ಅದು ಬಿದ್ದ ಇಪ್ಪತ್ತು ನಿಮಿಷಗಳ ಬಳಿಕ ಅದು ಕರಗಿ ಹೋಯಿತು. ಆದರೆ ತಲೆಯಿಂದ ದುರ್ನಾತ ಸೂಸಲಾರಂಭಿಸಿತು. ಆತನಿಗೆ ಎಲ್ಲವೂ ಗೋಜಲು ಗೋಜಲು. ಆತನ ತಲೆ ಮೇಲೆ ಆ ಮಂಜುಗಡ್ಡೆ ತುಣುಕು ಬೀಳುವ ಹತ್ತು ಸೆಕೆಂಡುಗಳ ಮೊದಲು, ಎತ್ತರದಲ್ಲಿ ವಿಮಾನವೊಂದು ಹಾರಿ ಹೋದುದನ್ನು ಆತ ಗಮನಿಸಿದ್ದ.

ತಕ್ಷಣ ಆತ ಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದ. ಆತನ ತಲೆಯನ್ನು ಪರೀಕ್ಷಿಸಿದ ವೈದ್ಯರು ಮೇಲಿಂದ ಮಂಜುಗಡ್ಡೆಯ ತುಣುಕು ಬಿದ್ದಿರುವುದನ್ನು ದೃಢಪಡಿಸಿದರು. ಆ ಮಂಜುಗಡ್ಡೆ ಯಿಂದ ಕೆಟ್ಟ ವಾಸನೆ ಹೊಮ್ಮುತ್ತಿರುವುದೇಕೆ ಎಂದು ತಲೆ ಕೆಡಿಸಿಕೊಂಡರು. ಕೊನೆಗೆ ಅವರ ಊಹೆ ನಿಜವಾಗಿತ್ತು. ವಿಮಾನದ ಟಾಯ್ಲೆಟ್ ಸೋರಿಕೆಯಿಂದ ಅಲ್ಲಿ ಶೇಖರವಾಗಿದ್ದ ಮಲ, ಮೂತ್ರ ಸುಮಾರು ನಲವತ್ತು ಸಾವಿರ ಅಡಿ ಎತ್ತರದಲ್ಲಿ ಮೈನಸ್ ಐವತ್ತು ಸೆಂಟಿಗ್ರೇಡ್ ವಾತಾವರಣದಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆ ಯಾಗಿ ಅದು ಕೆಳಗೆ ಘನವಾಗಿ, ಸಣ್ಣ ತುಣುಕೊಂದು ಆತನ
ತಲೆಯ ಮೇಲೆ ಬಿದ್ದಿದೆಯೆಂದು ಅವರು ನಿರ್ಣಯಕ್ಕೆ ಬಂದರು.

ಆತ ಆ ಸಂದರ್ಭದಲ್ಲಿ ತನ್ನ ತಲೆ ಮೇಲೆ ಹಾರುತ್ತಿದ್ದ ವಿಮಾನ ಯಾವ ಏರ್‌ಲೈನ್ಸ್‌ಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಿದ. ಅಷ್ಟಕ್ಕೇ ಸುಮ್ಮನಾಗದ ಆತ ಏರ್‌ಲೈನ್ಸ್ ವಿರುದ್ಧ ಕೇಸು ಹಾಕಿದ. ಈ ಪ್ರಸಂಗ ಪತ್ರಿಕೆಗಳಲ್ಲಿ ವರದಿಯಾದಾಗ ಸಾರ್ವಜನಿಕರು ಬೆಚ್ಚಿಬಿದ್ದರು. ಅಲ್ಲಿ ತನಕ ವಿಮಾನ ಟಾಯ್ಲೆಟ್ ಸೋರಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಅಂಥದ್ದೊಂದು ಪ್ರಸಂಗದ ಬಗ್ಗೆ ಯಾರಿಗೂ ಕಲ್ಪನೆಯೂ ಇರಲಿಲ್ಲ. ಆ ಸುದ್ದಿಯನ್ನು ಏರ್ ಲೈನ್ಸ್ ಅಧಿಕಾರಿಗಳು ತಳ್ಳಿ ಹಾಕಿದರು. ಆದರೆ ಆತ ಬಿಡಲಿಲ್ಲ.

ಕೋರ್ಟಿನ ಮೆಟ್ಟಿಲು ಹತ್ತಿದ. ಸುದೀರ್ಘ ವಿಚಾರಣೆಯ ನಂತರ, ವಿಮಾನ ನಲವತ್ತು ಸಾವಿರ ಅಡಿ ಎತ್ತರದಲ್ಲಿ ಹಾರುವಾಗ, ಟಾಯ್ಲೆಟ್ ಸೋರಿಕೆ ಯಾಗಿದ್ದು ನಿಜ ಎಂಬುದು ಸಾಬೀತಾಯಿತು. ಆ ವಿಮಾನ ಲ್ಯಾಂಡ್ ಆದ ಬಳಿಕ, ಟಾಯ್ಲೆಟ್ ಸೋರಿದ ಬಗ್ಗೆ ಪೈಲಟ್ ತಾಂತ್ರಿಕ ವಿಭಾಗಕ್ಕೆ ದೂರು ನೀಡಿದ್ದ. ಆ ವಿಮಾನದ ರಿಪೇರಿಗೆ ಎರಡು ದಿನ ತಗುಲಿದ್ದರಿಂದ ಅದು ಹಾರದೇ, ವರ್ಕ್ ಶಾಪಿನಲ್ಲಿತ್ತು. ಈ ಎಲ್ಲ ವಿವರಗಳನ್ನು ನೀಡುವಂತೆ ಕೋರ್ಟ್ ಆದೇಶಿಸಿದ್ದರಿಂದ ಟಾಯ್ಲೆಟ್ ಸೋರಿಕೆಯ ಅಸಲಿಯತ್ತು ಬಹಿರಂಗವಾಯಿತು.

ಟಾಯ್ಲೆಟ್‌ನಿಂದ ಸೋರಿಕೆಯಾಗಿ ಮಲ ಹೊರ ಬರುತ್ತಿದ್ದಂತೆ, ಅದು ಆ ಶೀತ ವಾತಾವರಣದಲ್ಲಿ ನೀಲಿ ಘನ ಪದಾರ್ಥವಾಗಿ ರೂಪಾಂತರವಾಗಿತ್ತು. ಆದರೆ ಅದು ನೇರವಾಗಿ ತಲೆಯ ಮೇಲೆ ಬಿದ್ದಿದ್ದರೆ ಆತ ಬದುಕುಳಿಯುತ್ತಿರಲಿಲ್ಲ. ಆದರೆ ಅದು ಬೆನ್ನು ಮತ್ತು ಕುತ್ತಿಗೆಯ ಮಧ್ಯದಲ್ಲಿ ಬಿದ್ದಿತ್ತು. ಅದು ದುರ್ನಾತ ಬೀರದೇ ಇದ್ದಿದ್ದರೆ ಆತ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಪಕ್ಷಿಗಳೇನಾದರೂ ಮೇಲಿಂದ ಎಸೆದಿರಬಹುದು ಎಂದು ಭಾವಿಸಿ
ಸುಮ್ಮನಾಗುತ್ತಿದ್ದ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಏರ್‌ಲೈನ್ಸ್‌ಗೆ ಭಾರಿ ಮೊತ್ತದ ದಂಡ ವಿಽಸಿತು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ, ಇತರ ವಿಮಾನಯಾನ ಸಂಸ್ಥೆ ಗಳಿಗೂ ಸೂಚಿಸಿತು. ವಿಮಾನದ ಟಾಯ್ಲೆಟ್‌ಗಳು ಯಾವ ಕಾರಣಕ್ಕೂ ಸೋರದ ರೀತಿಯಲ್ಲಿ ವಿನ್ಯಾಸ ಮತ್ತು ರಚನೆಯನ್ನು ಮಾಡುವಂತೆ ವಿಮಾನ ತಯಾರಿಕಾ ಸಂಸ್ಥೆಗಳಿಗೂ ಸಲಹೆ ನೀಡಿತು. ಅದೇ ಕೊನೆ, ಅಂಥ ಪ್ರಕರಣ ಇಲ್ಲಿ ತನಕ ಮತ್ತೆ ವರದಿಯಾಗಿಲ್ಲ. ಹತ್ತೊಂಬತ್ತು ಗಂಟೆ ವಿಮಾನಯಾನ ಸಂದರ್ಭದಲ್ಲಿ, ಐನೂರಕ್ಕೂ ಹೆಚ್ಚು ಪ್ರಯಾಣಿಕರು ಕನಿಷ್ಠ ಮೂರು ಸಲವಾದರೂ ವಿಮಾನದ
ಟಾಯ್ಲೆಟ್ ಬಳಸುತ್ತಾರೆ. ಟಾಯ್ಲೆಟ್ ಟ್ಯಾಂಕಿನ ಮೇಲೆ ಅನಗತ್ಯ ಒತ್ತಡ ಬೀಳುವುದು ಸಹಜ.

ಇದು ಯಾವ ಕಾರಣಕ್ಕೂ ಸೋರಿಕೆಗೆ ಆಸ್ಪದ ನೀಡಬಾರದು, ಈ ಸಂಗತಿಯನ್ನು ಪುನರ್ ಮನನ ಮಾಡುವಂತೆ ಕೋರ್ಟ್ ವಿಮಾನ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಿತು. ಈ ಒಂದು ಪ್ರಸಂಗ ಜಗತ್ತಿನಾದ್ಯಂತ ವಿಮಾನಯಾನ ರಂಗದಲ್ಲಿ ಇರುವವರ ಮಧ್ಯೆ ತೀವ್ರ ಚರ್ಚೆಗೆ ಗುರಿಯಾಗಿತ್ತು.
ಮುಯ್ಯಿಗೆ ಮುಯ್ಯಿ ಇದನ್ನು ನಾನು ಎಲ್ಲಿ ಓದಿದ್ದು ಎಂಬುದು ನೆನಪಿಲ್ಲ. ಹೀಗೊಂದು ತಮಾಷೆಯ ಪ್ರಸಂಗ. ಅದೊಂದು ಲೈಬ್ರರಿ. ಅಬ್ಬಳು ಸುಂದರ ಯುವತಿ ಕುಳಿತಿದ್ದಳು. ಅವಳ ಬಳಿಗೆ ಹೋದ ಹುಡುಗನೊಬ್ಬ, ‘ನಿಮ್ಮ ಅಭ್ಯಂತರ ಇಲ್ಲ ಅಂದ್ರೆ ನಾನು ನಿನ್ನ ಪಕ್ಕ ಕುಳಿತುಕೊಳ್ಳಬಹುದೇ?’ ಎಂದು ಕೇಳಿದ.

ಅಷ್ಟಕ್ಕೇ ಆ ಯುವತಿ ಜೋರಾದ ದನಿಯಲ್ಲಿ, ‘ನಿನ್ನ ಜತೆ ರಾತ್ರಿ ಕಳೆಯಲು ನನಗೆ ಇಷ್ಟವಿಲ್ಲ’ ಎಂದು ಕೂಗಿ ಹೇಳಿದಳು. ಅಲ್ಲಿದ್ದವರೆಲ್ಲ ಆ ಯುವಕನ ಕಡೆಗೆ ಕ್ಯಾಕರಿಸಿ ನೋಡಿದರು. ಆತನಿಗೆ ಬಹಳ ಮುಜುಗರವಾಯಿತು. ಅನಂತರ ಆ ಯುವತಿ, ಆ ಯುವಕನ ಹತ್ತಿರ ಬಂದು ಕಿವಿಯಲ್ಲಿ, ‘ನಾನು ಸೈಕಾಲಜಿ ವಿದ್ಯಾರ್ಥಿ. ಹುಡುಗರು ಏನು ಯೋಚಿಸುತ್ತಾರೆ ಎಂಬುದನ್ನು ಚೆನ್ನಾಗಿ ಹೇಳಬ. ನಿನಗೆ ಮುಜುಗರ ಆಯಿತಾ?’ ಎಂದು ಕೇಳಿದಳು.
ಅದಕ್ಕೆ ಆ ಯುವಕ, ‘ಒಂದು ರಾತ್ರಿಗೆ ಮುನ್ನೂರು ಡಾಲರಾ? ಅದು ಬಹಳ ಹೆಚ್ಚಾಯಿತು’ ಎಂದು ಜೋರಾಗಿ ಕೂಗಿದ.

ಲೈಬ್ರರಿಯಲ್ಲಿದ್ದವರೆಲ್ಲ ಆ ಯುವತಿಯಡೆಗೆ ಕ್ಯಾಕರಿಸಿ ನೋಡಿದರು. ಆಗ ಆ ಹುಡುಗ ಅವಳ ಹತ್ತಿರ ಹೋಗಿ ಕಿವಿಯಲ್ಲಿ, ‘ನಾನು ಕಾನೂನು ವಿದ್ಯಾರ್ಥಿ. ನನಗೆ ಬೇರೆಯವರನ್ನು ಅಪರಾಧಿ ಸ್ಥಾ ದಲ್ಲಿ ನಿಲ್ಲಿಸುವುದು ಗೊತ್ತು’ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ. ಆಕೆ ಪೆಚ್ಚಾಗಿ ನಿಂತಿದ್ದಳು.

ವಿಮಾನ ಮತ್ತು ಪೈಲಟ್
ಒಂದು ಕಾರನ್ನು ಓಡಿಸಿದವರು, ಬೇರೆ ಯಾವ ಕಾರನ್ನಾದರೂ ಓಡಿಸಬಲ್ಲರು ಅಥವಾ ಕಾರು ಚಾಲನೆ ಮಾಡಿದವರು ಟ್ರಕ್ಕನ್ನು ಓಡಿಸಬಲ್ಲರು. ಟ್ರಕ್ಕನ್ನು ಓಡಿಸಿದವರಿಗೆ ಬಸ್ಸನ್ನು ಓಡಿಸುವುದು ಕಷ್ಟವಲ್ಲ. ಆದರೆ ಈ ನಿಯಮ ವಿಮಾನಕ್ಕೆ ಅನ್ವಯಿಸುವುದಿಲ್ಲ. ಈ ವಿಷಯ ಅಷ್ಟೇನೂ ಮುಖ್ಯ ಅಲ್ಲ ಎಂದು ಅನಿಸಬಹುದು. ನಾವು ಇದರ ಬಗ್ಗೆ ಯೋಚಿಸಿಯೂ ಇಲ್ಲದಿರಬಹುದು. ಪ್ರಶ್ನೆ ಏನೆಂದರೆ, ಒಂದು ಪ್ಯಾಸೆಂಜರ್ ಅಥವಾ ಕಮರ್ಷಿಯಲ್
ವಿಮಾನವನ್ನು ಹಾರಿಸಿದ ಪೈಲಟ್, ತುಸು ಬೇರೆ ಮಾದರಿಯ ಇನ್ನೊಂದು ವಿಮಾನವನ್ನು ಹಾರಿಸಬಹುದಾ? ಈ ಪ್ರಶ್ನೆಯನ್ನು ಬೇರೊಂದು ರೀತಿಯಲ್ಲಿ ಕೇಳುವುದಾದರೆ, ಏರ್ ಬಸ್ ಕಂಪನಿಯ ಅ೩೩೦/ಅ೩೪೦ ವಿಮಾನವನ್ನು ಹಾಯಾರಿಸಿದ ಪೈಲಟ್, ಬೋಯಿಂಗ್ ೭೫೭/೭೬೭ ವಿಮಾನವನ್ನು ಹಾರಿಸಬಹುದಾ? ಇದಕ್ಕೆ ಉತ್ತರ – ಹಾರಿಸಬಹುದು ಮತ್ತು ಹಾರಿಸಬಾರದು.

ಇದಕ್ಕೆ ಕಾರಣವಿದೆ. ಒಂದೊಂದು ವಿಮಾನವೂ ಭಿನ್ನ. ಒಂದೊಂದು ವಿಮಾನವನ್ನು ಅರ್ಥ ಮಾಡಿಕೊಳ್ಳಲು ಪೈಲಟ್‌ಗೆ ತುಂಬಾ ಸಮಯ ಬೇಕು. ಅದಕ್ಕೆ ಸಾಕಷ್ಟು ತರಬೇತಿಯೂ ಅಗತ್ಯ. ವಿಮಾನದ ತಾಂತ್ರಿಕ ಸಂಗತಿಗಳ ಮ್ಯಾನುಯೆಲ್‌ನ್ನು ಪೈಲಟ್ ಅಭ್ಯಸಿಸಬೇಕಾಗುತ್ತದೆ. ಸಿಮ್ಯುಲೇಟರ್ ತರಬೇತಿ ಕೂಡ ಅತ್ಯಗತ್ಯ. ಬೋಯಿಂಗ್ ೭೫೭/೭೬೭ ವಿಮಾನ ಹಾರಿಸುವ ಪೈಲಟ್‌ಗೆ, ಅ೩೩೦/ಅ೩೪೦ ವಿಮಾನ ಹಾರಿಸಲು ಕೊಟ್ಟರೆ,
ಆತನಿಗೆ ಆ ವಿಮಾನವನ್ನು ಸ್ಟಾರ್ಟ್ ಮಾಡಲು ಸಾಧ್ಯವಾಗದೇ ಹೋಗಬಹುದು. ಯಾವ ಬಟನ್ ಒತ್ತಿದರೆ ಯಾವ ಭಾಗ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದನ್ನು ನೆನಪಿಟ್ಟುಕೊಳ್ಳಲು ಅನುಭವಿ ಪೈಲಟ್‌ಗೂ ಸಾಕಷ್ಟು ಸಮಯ ಬೇಕು.

ಒಂದೊಂದು ಮಾದರಿಯ ವಿಮಾನ ಒಂದೊಂದು ರೀತಿ. ಪ್ರತಿ ವಿಮಾನದ ಉದ್ದ, ಅಗಲವೂ ಭಿನ್ನ. ವಿಮಾನದ ರಚನೆ, ವಿನ್ಯಾಸ, ಮಾಟವೂ ಭಿನ್ನ. ಅಲ್ಲದೇ ವರ್ಷದಿಂದ ವರ್ಷಕ್ಕೆ, ಮಾಡೆಲ್‌ನಿಂದ ಮಾಡೆಲ್‌ಗೆ ತಂತ್ರeನವನ್ನು ಸುಧಾರಿಸಿರುತ್ತಾರೆ. ಅಪ್‌ಗ್ರೇಡ್ ಮಾಡಿರುತ್ತಾರೆ. ಈ ಬಗ್ಗೆ ಪೈಲಟ್‌ಗೆ ತಿಳಿವಳಿಕೆ, ತರಬೇತಿ, ಪರೀಕ್ಷಾ ಒಳನೋಟ ಅತ್ಯಗತ್ಯ. ಇಪ್ಪತ್ತು ವರ್ಷ ವಿಮಾನ ಹಾರಿಸಿದ ಅನುಭವವಿದೆಯೆಂದು ಏಕಾಏಕಿ ಹೊಸ ವಿಮಾನವನ್ನು
ಕೊಟ್ಟರೆ, ಅದನ್ನು ಚಾಲು ಮಾಡಲು ಪೈಲಟ್ ತಿಣುಕಾಡಬಹುದು.

ವಿಮಾನ ನಿಲ್ದಾಣವೆಂಬ ವಿಶ್ವ ಕರೋನಾದಿಂದ ನಾನು ಕಳೆದುಕೊಂಡ ಪ್ರಮುಖ ಸಂಗತಿಗಳಲ್ಲಿ ವಿದೇಶ ಪ್ರವಾಸವೂ ಒಂದು. ಕರೋನಾ ಇಲ್ಲದಿದ್ದರೆ ನಾನು ಕನಿಷ್ಠ ಹತ್ತು ದೇಶಗಳಿಗಾದರೂ ಹೋಗಿ ಬಂದಿರುತ್ತಿz. ಅಷ್ಟರಮಟ್ಟಿಗೆ ನಾನು ಅನುಭವ ವಂಚಿತನಾಗಿದ್ದೇನೆ. ಅಂತಾರಾಷ್ಟೀಯಯ ವಿಮಾನ ಪ್ರವಾಸದ ಅನುಭವ ಯಾವತ್ತೂ ಅನೂಹ್ಯವಾದುದೇ. ನೀರಸವಾದ ದೇಶ ಹೇಗೆ ಇಲ್ಲವೋ ನೀರಸವಾದ ವಿಮಾನಯಾನ ಎಂಬುದೂ ಇಲ್ಲ. ಪ್ರತಿ
ಅಂತಾರಾಷ್ಟ್ರೀಯ ವಿಮಾನಯಾನವೂ ಒಂದು ರೋಚಕ ಅನುಭವವೇ. ಅದಕ್ಕಿಂತ ಮುಖ್ಯವಾಗಿ ಪ್ರತಿ ವಿಮಾನ ನಿಲ್ದಾಣವೂ ಒಂದು ಪುಟ್ಟ ಪ್ರಪಂಚವೇ.

ದುಬೈ, ಸಿಂಗಾಪುರ, ಹಾಂಗ್‌ಕಾಂಗ್, ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ದೋಹಾ, ವಾಷಿಂಗ್ಟನ್, ಲಾಸ್ ಏಂಜಲೀಸ್, ಫ್ರಾಂಕ್ ಫರ್ಟ್, ಬೀಜಿಂಗ್ ಮುಂತಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೇ ಆಕರ್ಷಣೀಯ ತಾಣಗಳು. ನಾನು ಕೆಲವು ವರ್ಷಗಳ ಹಿಂದೆ ಇಥಿಯೋಪಿಯಾದ ಅಡಿಸ್ ಅಬಾಬ ವಿಮಾನ ನಿಲ್ದಾಣದಲ್ಲಿದ್ದೆ. ಅಲ್ಲಿ ಆರು ತಾಸು ಕಳೆಯುವುದು ಪರಮ ಶಿಕ್ಷೆ ಎಂದು ಆರಂಭದಲ್ಲಿ ಅನಿಸಿತು. ಆದರೆ ಆ ವಿಮಾನ ನಿಲ್ದಾಣದಲ್ಲಿ ಹೋಗಿ ಬರುವ ಪ್ರಯಾಣಿಕರನ್ನು ಸುಮ್ಮನೆ ನೋಡುತ್ತಾ ಕುಳಿತೆ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.

ವಿಮಾನ ಹಾರುವುದು ಇನ್ನೂ ಒಂದೆರಡು ತಾಸು ವಿಳಂಬ ವಾಗಿದ್ದರೂ, ನಾನು ಸ್ವಲ್ಪವೂ ಬೇಸರವಿಲ್ಲದೇ ಅಲ್ಲಿ ಕುಳಿತಿರುತ್ತಿದ್ದೆ. ವಿಮಾನ ನಿಲ್ದಾಣ ದಂಥ ಅದ್ಭುತ ತಾಣ ಮತ್ತೊಂದಿಲ್ಲ. ಉಗಾಂಡದ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಬೋರ್ಡ್ ನೋಡಿದ್ದೆ. ಈಗಲೂ ಅದು ನನ್ನ ಮನಸ್ಸಿನಲ್ಲಿ ಕುಳಿತುಬಿಟ್ಟಿದೆ – There is truly no other place bearing so much love as airports ಎಂಬ ಈ ಸಾಲನ್ನು ಯಾರೂ ಅಲ್ಲಗಳೆಯಲಾರರು. ಆಗ ನನಗೆ ನೆನಪಾದ ಮತ್ತೊಂದು ಸಾಲೆಂದರೆ ಅಮೆರಿಕನ್ ಕಾಮಿಡಿಯನ್ ಹೆನ್ರಿ ಯಂಗ್ ಮನ್ ಹೇಳಿದ ಈ ಮಾತು – Just got back from a pleasure trip: I took my mother-inlaw to the airport.

ನಿಜವಾದ ವಿದಾಯದ ಕಣ್ಣೀರು, ಪ್ರೀತಿಯ ಅಪ್ಪುಗೆ, ಆತ್ಮೀಯ ಸ್ವಾಗತದ ಅರ್ಥವನ್ನು ಕಣ್ಣಾರೆ ನೋಡಬೇಕೆಂದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹೋಗಬೇಕಂತೆ. ಅದು ಎಲ್ಲಾ ಭಾವಗಳ ಕೂಡಲ ಸಂಗಮ. ವಿಮಾನ ನಿಲ್ದಾಣದಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು, ಆದರೆ ಬಡವರನ್ನು ಕಾಣಲು ಸಾಧ್ಯವಿಲ್ಲ ಎಂಬ ಮಾತು ಸಹ ಚಿಂತನೆಗೆ ಹಚ್ಚುವಂಥದ್ದೇ. ಒಬ್ಬ ಇಂಗ್ಲಿಷ್ ಲೇಖಕ (ಪ್ರಾಯಶಃ ಡಗ್ಲಾಸ್ ಆಡಮ್ಸ ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಗ್ಗೆ ಒಂದು ಸುಂದರ ಮಾತನ್ನು ಹೇಳಿದ್ದಾನೆ – “It can hardly be a coincidence that no
language on earth has ever produced the expression, ‘As pretty as an airport..’

ನೀವು ಯಾವುದೇ ದೇಶಕ್ಕೆ ಹೋಗಿ, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಎರಡು ತಾಸು ಕಳೆಯಲಿಲ್ಲ ಅಂದರೆ ನನ್ನ ದೃಷ್ಟಿಯಲ್ಲಿ ಅದೊಂದು ಅಪೂರ್ಣವೇ. ವಿಮಾನ ನಿಲ್ದಾಣವೆಂದರೆ (ಬಸ್ ನಿಲ್ದಾಣದಂತೆ) ಬರೀ ವಿಮಾನಗಳು ಬರುವ, ಹೋಗುವ ಅಥವಾ ನಿಲ್ಲುವ ತಾಣವಲ್ಲ. ಅದೊಂದು ಪ್ರತ್ಯೇಕ ಪ್ರಪಂಚ. ಜೀವನವನ್ನು ವಿಮಾನ ನಿಲ್ದಾಣಕ್ಕೆ ಹೋಲಿಸುವುದುಂಟು -Life is like an airport. It’s where every hello
and goodbye take place.

‘ನಾನು ಕಳೆದ ಮೂವತ್ತಾರು ವರ್ಷಗಳನ್ನು ಒಂದೇ ವಿಮಾನ ನಿಲ್ದಾಣದಲ್ಲಿ ಕಳೆದಿದ್ದೇನೆ. ನನ್ನ ಜೀವನದಲ್ಲಿ ಒಂದೇ ಒಂದು ನೀರಸವಾದ ದಿನವೇ ಇರಲಿಲ್ಲ. ಒಮ್ಮೆಯೂ ನನಗೆ ನನ್ನ ಉದ್ಯೋಗ ಬೇಸರ ತರಿಸಲಿಲ್ಲ’ ಎಂಬ ವಿಮಾನ ನಿಲ್ದಾಣ ಡ್ಯೂಟಿ ಮ್ಯಾನೇಜರ್‌ನ ಆತ್ಮಕಥೆಯ ಪುಟಗಳೇ ಸಾಕ್ಷಿ.