Saturday, 14th December 2024

ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದ್ದೇ ಹೌದಾದರೆ…

ವರ್ತಮಾನ

maapala@gmail.com

ತೆರಿಗೆ ಹಂಚಿಕೆ, ಅನುದಾನ ನೀಡಿಕೆಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಸದ್ಯಕ್ಕೆ ನಿಲ್ಲುವಂತೆ ತೋರುತ್ತಿಲ್ಲ. ಚುನಾವಣಾ ರಾಜಕಾರಣಕ್ಕಾಗಿ ರಾಜಕೀಯ ಪಕ್ಷಗಳು ಮಾಡುತ್ತಿರುವ ಈ ಆರೋಪವನ್ನ ಜನರೂ ಗಂಭೀರವಾಗಿ ಪರಿಗಣಿಸಿ ತಿರುಗಿ ಬಿದ್ದರೆ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.

ತೆರಿಗೆ ಹಂಚಿಕೆ ಮತ್ತು ಅನುದಾನ ಬಿಡುಗಡೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದು ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಕೇಳಿ ಬರುತ್ತಿರುವ ಮಾತು. ಕರ್ನಾಟಕದಿಂದ ಆರಂಭವಾದ ಕೂಗು ಇದೀಗ ದೇಶಾದ್ಯಂತ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೀವ್ರಗೊಳ್ಳುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಅಭಿಯಾನದೊಂದಿಗೆ ರಾಜ್ಯದ ಕಾಂಗ್ರೆಸ್ ಸರಕಾರ ದೆಹಲಿಯಲ್ಲಿ ನಡೆಸಿದ ಹೋರಾಟದ ಬೆನ್ನಲ್ಲೇ ಇತರೆ ಕೆಲವು ರಾಜ್ಯಗಳು ಕೇಂದ್ರದ ವಿರುದ್ಧ ಹೋರಾಟ ಆರಂಭಿಸಿವೆ. ಅಷ್ಟರ ಮಟ್ಟಿಗೆ ಕರ್ನಾಟಕ ಕಾಂಗ್ರೆಸ್ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅದರಲ್ಲೂ ಮೂರು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಶಾಸಕರು ಸೇರಿಕೊಂಡು ದೆಹಲಿಯಲ್ಲಿ ಕೇಂದ್ರ
ಸರಕಾರದ ವಿರುದ್ಧ ತೊಡೆ ತಟ್ಟಿದ್ದು ದೇಶದ ಇತಿಹಾಸದಲ್ಲೇ ಒಂದು ರಾಜ್ಯ ಸರಕಾರವು ಹೀಗೊಂದು ಹೋರಾಟಕ್ಕಿಳಿದು ಹೊಸ ಸಂಪ್ರದಾಯ ಸೃಷ್ಟಿಸುವುದಕ್ಕೆ
ಕಾರಣವಾಗಿದೆ. ಅದರಲ್ಲೂ ಯಾವುದೇ ಗೊಂದಲ- ಗೋಜಲುಗಳಿಲ್ಲದೆ ಆ ಹೋರಾಟವನ್ನು ಸಂಘಟಿಸಿದ ರೀತಿಯು, ರಾಜ್ಯದ ಧ್ವನಿಯನ್ನು ದೇಶವ್ಯಾಪಿ
ಮುಟ್ಟಿಸಿ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೀಗೂ ಒಂದು ಮಾರ್ಗವಿದೆ ಎಂಬುದನ್ನು ತೋರಿಸಿ ಕೊಟ್ಟಿದೆ. ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್
ರಾಷ್ಟ್ರೀಯ ನಾಯಕರು, ವಿವಿಧ ರಾಜಕೀಯ ಪಕ್ಷಗಳು ಕಳೆದ ೯ ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದರೂ, ತೆರಿಗೆ ಹಂಚಿಕೆ ಮತ್ತು
ಅನುದಾನ ಬಿಡುಗಡೆಯಾಗದೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡಿದ ಪ್ರತಿಭಟನೆಯಷ್ಟು ಪರಿಣಾಮಕಾರಿಯಾಗಲೇ ಇಲ್ಲ.

ಆ ಮಟ್ಟಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ತಂಡ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ
ಎನ್‌ಡಿಎ ಸರಕಾರಕ್ಕೆ ಎಷ್ಟರ ಮಟ್ಟಿಗೆ ಕಾಟ ಕೊಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಬಹುಶಃ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಮಟ್ಟಕ್ಕೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಉದಾಹರಣೆಗಳಿಲ್ಲ. ರಾಜ್ಯದ ಈ ಹೋರಾಟದ ಹಿಂದೆ ರಾಜಕೀಯ ಕಾರಣಗಳೇನೇ ಇರಲಿ, ಕೇಂದ್ರ ಸರಕಾರದ ನೀತಿಗಳಿಂದ ರಾಜ್ಯಗಳಿಗೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂಬುದನ್ನು ಜನರಿಗೆ ಅದು ಮನದಟ್ಟು ಮಾಡಿಕೊಟ್ಟಿದೆ. ಹಾಗೆಂದು ಕೇಂದ್ರ ಸರಕಾರದ ಈ ರೀತಿಯ ನೀತಿಗಳ ವಿರುದ್ಧ ಧ್ವನಿ ಎತ್ತಿದ್ದು ಕರ್ನಾಟಕವೇ ಮೊದಲಲ್ಲ. ಈ ಹಿಂದೆ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ಕೇಂದ್ರದ ಯುಪಿಎ ಸರಕಾರದ ವಿರುದ್ಧ ಇದೇ ರೀತಿಯ ಧ್ವನಿ ಎತ್ತಿದ್ದರು. ಗುಜರಾತ್ ರಾಜ್ಯ ೪೦ ಸಾವಿರ ಕೋಟಿ ರು. ತೆರಿಗೆ ನೀಡಿದರೂ ಕೇಂದ್ರದಿಂದ ಕೇವಲ ಶೇ. ೨.೫ರಷ್ಟು ಅನುದಾನ ಬರುತ್ತಿದೆ.

ಇಂಥ ಕನಿಷ್ಠ ಪ್ರಮಾಣದ ಅನುದಾನ ನೀಡುವ ಬದಲು ಒಂದು ವರ್ಷ ಗುಜರಾತ್‌ನಿಂದ ತೆರಿಗೆ ಪಡೆಯುವುದನ್ನು ಬಿಟ್ಟುಕೊಡಲಿ ಎಂದು ಹೇಳಿದ್ದರು. ಇನ್ನೊಂದು
ಬಾರಿ, ೬೦ ಸಾವಿರ ಕೋಟಿ ರು. ತೆರಿಗೆ ನೀಡುವ ಗುಜರಾತ್ ರಾಜ್ಯಕ್ಕೆ ಅನುದಾನ ಮರಳಿ ಬರುತ್ತಿಲ್ಲ, ಗುಜರಾತ್ ಭಿಕ್ಷೆ ಬೇಡುವ ರಾಜ್ಯವೇ? ಅಥವಾ ನಾವು
ಭಿಕ್ಷುಕರೇ? ನಾವು ದೆಹಲಿಯಲ್ಲಿರುವವರ ಕರುಣೆಯ ಮೇಲೆ ಬದುಕಬೇಕೇ?ಎಂದು ಆಕ್ರೋಶ ಹೊರಹಾಕಿದ್ದರು. ಆದರೆ, ಆಗ ಸಾಮಾಜಿಕ ಜಾಲತಾಣಗಳು
ಇಷ್ಟೊಂದು ಪ್ರಭಾವಶಾಲಿಯಾಗಿರಲಿಲ್ಲ. ಮತ್ತೊಂದೆಡೆ ದೇಶಾದ್ಯಂತ ಆಗಿನ ಮಾಧ್ಯಮಗಳು ನರೇಂದ್ರ ಮೋದಿ ಅವರ ವಿರುದ್ಧ ಇದ್ದುದರಿಂದ ಅವರ ಧ್ವನಿಗೆ ಬೆಂಬಲ ಸಿಗಲಿಲ್ಲ. ಆದರೆ, ಆಗ ಮೋದಿ ಅವರು ಪ್ರಸ್ತಾಪಿಸಿದ್ದ ವಿಷಯ ಈಗ ಅವರದ್ದೇ ನೇತೃತ್ವದಲ್ಲಿರುವ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸುತ್ತಿದೆ.

ಇದೀಗ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ವಿರುದ್ಧ ಮಾಡಿದ್ದ ಆರೋಪಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರು ತೆರಿಗೆ ಹಂಚಿಕೆ, ಅನುದಾನ ನೀಡುವಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿರುವ ಬಿಜೆಪಿಯೇತರ ಪಕ್ಷಗಳ ಸರಕಾರಗಳಿರುವ ರಾಜ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳ ಈ ಸಮರ್ಥನೆಯು, ಕೇಂದ್ರ ಸರಕಾರದಿಂದ ರಾಜ್ಯಗಳಿಗೆ
ಅನ್ಯಾಯ ವಾಗುತ್ತಿರುವುದು ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಅಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೂ ಅನ್ಯಾಯವಾಗಿತ್ತು. ಅದು ಮುಂದುವರಿದಿದೆ ಅಷ್ಟೆ ಎಂಬುದು ಇದರಿಂದ ಸಾಬೀತಾಗಿದೆ. ರಾಜ್ಯ ಸರಕಾರದ ಆರೋಪಗಳಿಗೆ ಬಿಜೆಪಿ ನಾಯಕರು ನೀಡುತ್ತಿರುವ ಸ್ಪಷ್ಟೀಕರಣದ ಅಂಕಿ ಅಂಶಗಳು, ಕೇಂದ್ರ ಸರಕಾರದ ದಾಖಲೆಗಳು ಒದಗಿಸುತ್ತಿರುವ ಮಾಹಿತಿ ಈ
ಆರೋಪ ಹೌದು ಎನ್ನುತ್ತಿವೆ. ಕೇವಲ ರಾಜ್ಯದ ದೃಷಿಯಿಂದ ನೋಡಿದರೆ ಕರ್ನಾಟಕಕ್ಕೆ ಮಾತ್ರವಲ್ಲ, ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಮತ್ತು ಜನಸಂಖ್ಯೆ
ಕಡಿಮೆ ಇರುವ ರಾಜ್ಯಗಳಿಗೆ ಕೇಂದ್ರ ಸರಕಾರದಿಂದ ಅನ್ಯಾಯವಾಗಿರುವುದು ಮತ್ತು ಆಗುತ್ತಿರುವುದು ಸತ್ಯ.

ಹಾಗೆಂದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಪರಿಗಣಿಸಿ ಅದನ್ನು ಸರಿಪಡಿಸಲು ಹೋದರೆ, ಭಾರತದ ಒಕ್ಕೂಟ
ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಸಮಸಮಾಜ ನಿರ್ಮಾಣದ ಪರಿಕಲ್ಪನೆಯೊಂದಿಗೆ ಸಿದ್ಧಪಡಿಸಿರುವ ಭಾರತದ ಸಂವಿಧಾನಕ್ಕೆ ಚ್ಯುತಿ ತರುವಂತಾಗುತ್ತದೆ.
ರಾಜ್ಯಗಳು ಪರಸ್ಪರ ಕಚ್ಚಾಡುತ್ತಾ ಕಾಲ ಕಳೆಯ ಬೇಕಾಗುತ್ತದೆ. ಶ್ರೀಮಂತ ರಾಜ್ಯಗಳು ಇನ್ನಷ್ಟು ಶ್ರೀಮಂತವಾಗಿ, ಬಡ ರಾಜ್ಯಗಳು ಇನ್ನಷ್ಟು ಬಡವಾಗಿ
ಭಿಕ್ಷಾಪಾತ್ರೆ ಹಿಡಿದುಕೊಂಡು ಹೋಗಬೇಕಾಗುತ್ತದೆ. ನನ್ನದು ನಿಮಗೇಕೆ ಕೊಡಬೇಕು ಎಂಬ ಪ್ರಶ್ನೆ ಉದ್ಭವಿಸಿ ಅನ್ನ, ನೀರಿಗಾಗಿ ರಾಜ್ಯಗಳು ಪರಸ್ಪರ ಹೋರಾಟ
ಕ್ಕಿಳಿಯಬೇಕಾಗುತ್ತದೆ. ಭಾರತ ದೇಶ ಒಡೆದು ಛಿದ್ರ ಛಿದ್ರವಾಗುತ್ತದೆ.

ಅದಕ್ಕಾಗಿಯೇ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೂ ಸಮಪಾಲು ನೀಡಬೇಕು ಎಂಬ ಕಾರಣಕ್ಕೆ ಕೇಂದ್ರ ಸರಕಾರ ಇರುವುದು. ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಎಲ್ಲರೂ ಈ ಕೆಲಸವನ್ನು ಸಮರ್ಥವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿಯೇ ತೆರಿಗೆ ಹಂಚಿಕೆ, ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕರ್ನಾಟಕದ ಕೂಗು ಆತಂಕ ಮೂಡಿಸಿರುವುದು. ಕರ್ನಾಟಕದಂತೆ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಗಳೆಲ್ಲವೂ ಇದನ್ನೇ ಪ್ರತಿಪಾದಿಸಿದರೆ ಆಗ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸಂಘರ್ಷ ಸೃಷ್ಟಿಯಾಗಬಹುದು.

ರಾಜ್ಯಗಳ ಜನರು ಕೇಂದ್ರದ ವಿರುದ್ಧ ಸಿಡಿದೇಳಬಹುದು. ಸಮಸ್ಯೆ ತೀವ್ರ ಸ್ವರೂಪ ಪಡೆದರೆ ಕೇಂದ್ರ ಸರಕಾರ ರಾಜ್ಯಗಳನ್ನು ಹದ್ದುಬಸ್ತಿನಲ್ಲಿಡಲು ಸರ್ವಾಽಕಾರಿ ಧೋರಣೆ ತಳೆಯ ಬಹುದು. ಆಗ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕುಸಿಯಬಹುದು. ವಿಶ್ವ ನಾಯಕನಾಗಲು ಹೊರಟಿರುವ ಭಾರತದ ಆರ್ಥಿಕತೆ ಕುಸಿದು ಮತ್ತೆ ಭಿಕ್ಷೆ ಬೇಡುವ ಪರಿಸ್ಥಿತಿ ಬರಬಹುದು. ಅಧಿಕಾರ ವಿಕೇಂದ್ರೀಕರಣದಂತೆ ಈ ವಿವಾದವೂ ವಿಕೇಂದ್ರೀಕರಣವಾದರೆ… ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹ ಆಗುತ್ತಿರುವುದು ಬೆಂಗಳೂರಿನಲ್ಲಿ. ಕೇಂದ್ರದ ವಿರುದ್ಧ ರಾಜ್ಯ ಹೋರಾಟ ಮಾಡಿದಂತೆ ಬೆಂಗಳೂರು ಕೂಡ ರಾಜ್ಯ ಸರಕಾರದ ವಿರುದ್ಧ ನಾವು ಹೆಚ್ಚು ತೆರಿಗೆ ಕೊಡುತ್ತಿರುವುದರಿಂದ ನಮಗೆ ಹೆಚ್ಚಿನ ಪಾಲು ಕೊಡಬೇಕು ಎಂದು ಕೇಳಿದರೆ ಉಳಿದ ಜಿಲ್ಲೆಗಳ ಗತಿ ಏನಾಗಬಹುದು? ಅದೇ ರೀತಿ ತೆರಿಗೆ ಸಂಗ್ರಹವನ್ನೇ ಆಧರಿಸಿ ದಕ್ಷಿಣದ ರಾಜ್ಯಗಳು ನಮ್ಮ ತೆರಿಗೆ ಪಾಲನ್ನು ನಮಗಾಗಿ ಖರ್ಚು ಮಾಡಿ.

ಉತ್ತರ ಕರ್ನಾಟಕ ಭಾಗಕ್ಕೆ ಕೊಡಬೇಡಿ. ಇಲ್ಲವೇ ಪ್ರತ್ಯೇಕ ರಾಜ್ಯ ಮಾಡಿ ಎಂದು ಕೇಳಿದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು? ಪ್ರಾದೇಶಿಕ ಅಸಮತೋಲನ ನಿವಾರಿಸಲು ಮತ್ತು ಅತಿ ಹಿಂದುಳಿದ ಮತ್ತು ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ನಂಜುಂಡಪ್ಪ ವರದಿ ಆಧರಿಸಿ ೧೧೪ ತಾಲೂಕುಗಳಲ್ಲಿ ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಈ ತಾಲೂಕುಗಳ ಪೈಕಿ ಬಹುತೇಕವು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸೇರಿವೆ. ಇಡೀ ರಾಜ್ಯಕ್ಕೆ ಅನ್ವಯವಾಗುವ ಯೋಜನೆಗಳನ್ನು ಹೊರತುಪಡಿಸಿ ಈ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ.

ಕೇವಲ ೧೧೪ ತಾಲೂಕುಗಳಿಗೆ ಇಂಥ ಅನುದಾನ ನೀಡುತ್ತಿರುವುದೇಕೆ? ನಾವೂ ತೆರಿಗೆ ಪಾವತಿಸುತ್ತಿಲ್ಲವೇ? ಆ ತಾಲೂಕುಗಳಿಗಿಂತ ಹೆಚ್ಚು ತೆರಿಗೆ ನಾವು
ಪಾವತಿಸುತ್ತೇವೆ. ನಮ್ಮ ತೆರಿಗೆ ಹಣವನ್ನು ಅವರಿಗೇಕೆ ಹೆಚ್ಚುವರಿಯಾಗಿ ಕೊಡುತ್ತೀರಿ ಎಂದು ಉಳಿದ ತಾಲೂಕುಗಳು ತಕರಾರು ತೆಗೆದರೆ? ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣಕ್ಕೆ ಆಗಾಗ್ಗೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಲೇ ಇದೆ. ಹಾಗೆಂದು ಸ್ವಾತಂತ್ರ್ಯ ಬಂದ ಬಳಿಕ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯಗಳನ್ನು ಸರಕಾರಗಳು ಮಾಡಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಲ್ಲಿ ಆಳಿದ ರಾಜರುಗಳು ಮಾಡಿಟ್ಟುಹೋದ ಅವಾಂತರಗಳಿಂದಾಗಿ ಉತ್ತರ ಕರ್ನಾಟಕ ಭಾಗ ಈಗಲೂ ಹಿಂದಿಳಿದಿದೆ.

ಅದನ್ನು ಸರಿಪಡಿಸಲು ಇನ್ನೂ ದಶಕಗಳು ಬೇಕಾಗುತ್ತವೆ. ಆ ಕೆಲಸವನ್ನು ಸರಕಾರಗಳು ಮಾಡಲೂ ಬೇಕು. ಅದಕ್ಕಾಗಿ ದಕ್ಷಿಣದ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ನೀಡಲೇಬೇಕು. ಅದಕ್ಕೆ ತಕರಾರು ಮಾಡುವುದು ಸರಿಯಲ್ಲ ಮತ್ತು ಆ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯ ಕೇಳುವುದೂ ಸರಿಯಲ್ಲ ಎಂದು ಇದೇ ರಾಜಕೀಯ ಪಕ್ಷಗಳು ಹೇಳುತ್ತವೆ. ಆದರೆ, ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡುತ್ತಿರುವುದನ್ನು ದಕ್ಷಿಣ ಕರ್ನಾಟಕದ ಜನ ಪ್ರಶ್ನಿಸಿದರೆ ಅದು ಸರಿಯಾದ ಕ್ರಮವೇ? ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಹೇಳುವುದನ್ನು ಸಮರ್ಥಿಸಿಕೊಳ್ಳುವವರು ಇದನ್ನು ಯೋಚಿಸಬೇಕಾಗುತ್ತದೆ. ಏಕೆಂದರೆ, ಕೇಂದ್ರ ಸರಕಾರ ಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯಗಳಿಂದ ಬರುವ ಆದಾಯವನ್ನು ಕಡಿಮೆ ತೆರಿಗೆ ಸಂಗ್ರಹವಾಗುವ ರಾಜ್ಯಗಳಿಗೆ ಹಂಚಿಕೆ ಮಾಡಿ ಸಾಮಾಜಿಕ ತಾರತಮ್ಯ ವನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಅದೇನೂ ಈಗ ಆರಂಭಿಸಿರುವ ಕಾರ್ಯಕ್ರಮ ಅಲ್ಲ. ಅಷ್ಟೇಕೆ, ಭಾರತದಲ್ಲಿ ಮಾತ್ರ ಇರುವ ವ್ಯವಸ್ಥೆಯೂ ಅಲ್ಲ.

ವಿಶ್ವದ ಬಹುತೇಕ ರಾಷ್ಟ್ರಗಳು ಇದೇ ನೀತಿಯನ್ನು ಅನುಸರಿಸುತ್ತವೆ. ಆದರೆ, ಭಾರತ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದರಿಂದ ದೇಶ ಸುಸ್ಥಿರ ಬೆಳವಣಿಗೆ ಸಾಽಸುತ್ತಿದೆ. ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿದ್ದ ಈಶಾನ್ಯ ರಾಜ್ಯಗಳು ಅಭಿವೃದ್ಧ ಪಥದಲ್ಲಿ ಮುಂದುವರಿಯುತ್ತಿವೆ. ತೆರಿಗೆ ಹಂಚಿಕೆ, ಅನುದಾನ
ನೀಡುವಲ್ಲಿ ತಾರತಮ್ಯವಾಗುತ್ತಿದೆ ಎಂಬ ರಾಜಕೀಯ ಕೂಗು ಈ ವ್ಯವಸ್ಥೆಯನ್ನು ಹಾಳುಮಾಡದಿದ್ದರೆ ಸಾಕು.

ಲಾಸ್ಟ್ ಸಿಪ್: ಒಂದೇ ಕೆಲಸವನ್ನು ನಾನು ಮಾಡಿ ದಾಗ ಸರಿ, ನೀನು ಮಾಡಿದಾಗ ತಪ್ಪು ಎನ್ನುವುದು ರಾಜಕೀಯ ಪಕ್ಷಗಳಿಗೆ ಹೆಚ್ಚು ಅನ್ವಯವಾಗುವುದು
ಕಾಕತಾಳೀಯ ಅಷ್ಟೆ.