Friday, 13th December 2024

ಜೀವನ ಚೆನ್ನಾಗಿದ್ರೆ- ಜಂಬೂ ಸವಾರಿ ಮುಗಿದ ಮೇಲೆ – ಬಂಬೂ ಸವಾರಿ

ತುಂಟರಗಾಳಿ

ಸಿನಿಗನ್ನಡ

ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಯಾವಾಗ ಹೇಗೆ ಹೆಸರು ಮಾಡ್ತವೋ ಹೇಳೋಕೆ ಬರಲ್ಲ. ಈ ವಾರ ಬಿಡುಗಡೆ ಆಗಿರುವ ಹಾಸ್ಟೆಲ್ ಹುಡುಗರು ಬೇಕಾಗಿ ದ್ದಾರೆ ಮತ್ತು ಪರಂವಾಃ ಎನ್ನುವ ಎರಡು ಸಿನಿಮಾಗಳು ಈಗ ಸುದ್ದಿಯಲ್ಲಿವೆ. ಹಾಸ್ಟೆಲ್ ಹುಡುಗರ ಅಬ್ಬರದಲ್ಲಿ ಅಷ್ಟು ಸದ್ದು ಮಾಡದಿದ್ದರೂ ಯುವ ನಿರ್ದೇಶಕ ಸಂತೋಷ್ ಕೈದಾಳ ಅವರ ಪರಂವಾಃ ಚಿತ್ರಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಂದು ಸರಳ ಕಥೆಯನ್ನಿಟ್ಟುಕೊಂಡು ಅದಕ್ಕೆ ತಮ್ಮ ವಿಶಿಷ್ಟ ಟಚ್ ಕೊಟ್ಟಿರುವ ಸಂತೋಷ್ ಮಂದೆ ಭವಿಷ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಉತ್ತಮ ನಿರ್ದೇಶಕರಾಗುವ ಭರವಸೆ ಕೊಟ್ಟಿzರೆ. ನಮ್ಮ ಸಾಂಪ್ರದಾಯಕ ವೀರಗಾಸೆಯ ಕಥೆ ಇಟ್ಟುಕೊಂಡು ಅದರಲ್ಲಿ ಅಪ್ಪ ಮಗನ ಸೆಂಟಿಮೆಂಟ್ ಸೇರಿಸಿ, ಅಪ್ಪನ ಕನಸನ್ನು ಮಗ ನನಸು ಮಾಡಲು ಹೊರಡುವ ಕಥೆ ಇಟ್ಟುಕೊಂಡು ನಿರ್ದೇಶಕ ಸಂತೋಷ್ ಕೈದಾಳ ಹೊಸ ಹುಡುಗರಿಗೆ ಇಂಥ ಕಥೆ ಮಾಡುವ ಧೈರ್ಯ ಇದೆ ಎಂದು ಸಾಬೀತು ಮಾಡಿದ್ದಾರೆ.

ಜೊತೆಗೆ ತಮ್ಮ ಕನಸನ್ನೂ ನನಸು ಮಾಡಿಕೊಲ್ಳುವ ಮೊದಲ ಪ್ರಯತ್ನ ಮಾಡಿದ್ದಾರೆ. ಅವರಿಗೆ ಈ ಚಿತ್ರ ನಿರ್ಮಾಣದಲ್ಲಿ ಹಲವು ಸ್ನೇಹಿತರ ಕೈ ಜೋಡಿಸಿದ್ದಾರೆ. ಚಿತ್ರರಂಗದ ಘಟಾನುಘಟಿ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನುಭವ ಇರುವ ಸಂತೋಷ್ ನಿರ್ದೇಶಕರಾಗಿ ತಮ್ಮ ಮೊದಲ ಪ್ರಯತ್ನದ ತಮ್ಮ ಚಾಪು
ಮೂಡಿಸಿದ್ದಾರೆ ಎಂದರೆ ತಪ್ಪಿಲ್ಲ. ಒಬ್ಬ ನಿರ್ದೇಶಕನಿಗೆ ಇರಬೇಕಾದ ಮಾನಸಿಕ ಸೂಕ್ಷ್ಮ ಅವರ ಕುಸುರಿ ಕೆಲಸದಲ್ಲಿ ಎದ್ದು ಕಾಣುತ್ತದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನವ ನಟ ಪ್ರೇಮ್ ಕೂಡಾ ತಮ್ಮ ಸಹಜವಾದ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಅವರ ಮುಖಭಾವದಲ್ಲಿ ಚಿತ್ರದ ಬಗೆಗಿನ ಅವರ ಬದ್ಧತೆ ಎದ್ದು ಕಾಣಿಸುತ್ತದೆ. ಉತ್ತಮ ನಟ ಆಗಬಲ್ಲ ಎಲ್ಲ ಲಕ್ಷಣಗಳೂ ಪ್ರೇಮ್ ಅವರಲ್ಲಿ ಇವೆ. ತೆರೆಯ ಮೇಲೆ ಕಾಣಿಸುವ ಪ್ರತಿ ಫ್ರೇಮ್‌ನಲ್ಲೂ ಪ್ರೇಮ್ ಭರವಸೆ ಮೂಡಿಸು ತ್ತಾರೆ. ಒಟ್ಟಿನಲ್ಲಿ ಈ ವಾರ ಸಮಯ ಮಾಡಿಕೊಂಡು ಹಾಸ್ಟೆಲ್ ಹುಡುಗರ ಜೊತೆ ಹೊಸ ಹುಡುಗರ ಪರಂವಾಃ ಚಿತ್ರವನ್ನೂ ವೀಕ್ಷಿಸಿ.

ಲೂಸ್ ಟಾಕ್
ಯು. ಟಿ. ಖಾದರ್ (ಕಾಲ್ಪನಿಕ ಸಂದರ್ಶನ)

ಏನ್ ಸಾರ್, ವಿರೋಧ ಪಕ್ಷದ ನಾಯಕರನ್ನ ಹಂಗೇ ಎತ್ತಾಕ್ಕೊಂಡ್ ಹೋಗೋಕೆ ಹೇಳ್ತೀರಲ್ಲ ನೀವು. ಇದು ಸರಿನಾ?
-ನಾನು ಸ್ಪೀಕರ್. ಲಿಸನರ್ ಅಲ್ಲ. ನನ್ನ ಕೆಲಸ ಬರೀ ಮಾತಾಡೋದು. ಕೇಳೋದಲ್ಲ. ಸರಿಯಾಗಿ ಮಾತಾಡಿದ್ರೇ ಕೇಳೋದ್ ಕಷ್ಟ. ಹಂಗಿದ್ದಾಗ ಏನೇನೋ
ಮಾಡಿದ್ರೆ ಕೇಳ್ತೀನಾ?

ಆದರೂ ಪಾಪ, ಹಂಗೆ ಬೌನ್ಸರ್‌ಗಳ ಹೆಗಲ ಮೇಲೆ ಹೊತ್ಕೊಂಡ್ ಹೋಗೋದು ನೋಡೋಕೆ ಕಷ್ಟ ಆಗುತ್ತಪ್ಪ
-ಮತ್ತೆ, ವಿರೋಧ ಪಕ್ಷದಲ್ಲಿ ಇದ್ದುಕೊಂಡು, ಆಡಳಿತ ಪಕ್ಷನ ಪ್ರಶ್ನೆ ಮಾಡಿ ಆನ್ಸರ್ ಮಾಡೋಕೂ ಸಮಯ ಕೊಡದೆ ಬೌನ್ಸರ್ ಹಾಕಿದ್ರೆ ಸುಮ್ನೆ ಇರೋಕಾಗುತ್ತಾ?

ಆದ್ರೂ ನೀವೂ ಇಷ್ಟು ಖಡಕ್ ಅಂತ ಗೊತ್ತಿರಲಿಲ್ಲ ಬಿಡಿ
-ಖಡಕ್ ಅಲ್ಲ. ಇದು ಖಾದರ್ ಖದರ್

ಅಂದ್ರೆ ಸ್ಪೀಕರ್ ಆಗಿ ನಿಮ್ಮ ಕೆಲಸ ನೀವು ಮಾಡ್ತಾ ಇದ್ದೀರ ಅಂತ ಅರ್ಥನಾ?
-ಹೌದು ಮತ್ತೆ, ಸ್ಪೀಕರ್ ಆಗಿ ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡ್ತೀನಿ ಅಂತ ಕಮಿಟ್ ಆದಮೇಲೆ ಉಲ್ಟಾ ಹೊಡೆಯಂಗಿಲ್ಲ. ನಾನು ಯು. ಟಿ ಖಾದರ್ ನಿಜ.
ಆದ್ರೆ ಹಾಗಂದ್ರೆ ಯೂ ಟರ್ನ್ ಖಾದರ್ ಅಲ್ಲ.

ಆದ್ರೂ ನೀವು ಹಾಗೆ ಮಾಡಿದ್ದಕ್ಕೆ ಪಾಪ ಯತ್ನಾಳ್ ಅವರು ಆಸ್ಪತ್ರೆ ಸೇರೋ ಹಾಗಾಯ್ತಲ್ಲ
-ಅಯ್ಯೋ, ಅದು, ನಾವು ಅವರನ್ನು ಸುಮ್ಮನಿರಿಸಲು ಯತ್ನ ಮಾಡಿದ್ದು ಅಷ್ಟೇ. ಅಶ್ವಥ್ ನಾರಾಯಣ್ ಅವರನ್ನೂ ಎತ್ಕೊಂಡ್ ಹೋದ್ರು. ಅವ್ರೇನಾದ್ರೂ ಆಸ್ಪತ್ರೆ ಸೇರಿದ್ದಿದ್ರೆ, ಸ್ಪೀಕರ್ ಅವರಿಂದ ಅಶ್ವಥ್ ನಾರಾಯಣ್ ಅವರು ಅಸ್ವಸ್ಥ ನಾರಾಯಣ್ ಆದ್ರು ಅಂತ ಸುದ್ದಿ ಮಾಡ್ತಿದ್ರಿ ನೀವು ಅಲ್ವಾ?

ನೆಟ್ ಪಿಕ್ಸ್
ತನ್ನ ಆಡಳಿತದಲ್ಲಿ ಪ್ರಜೆಗಳನ್ನ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವ ಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ.

ಇದನ್ನೆ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿ ಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು. ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು.

ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಖೇಮುನನ್ನು ಕೇಳಿದ. ಅದಕ್ಕೆ ಖೇಮು ಹೇಳಿದ, ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ ನಮ್ಮನ್ನ ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ ಮುಖ್ಯ ಗೊತ್ತಾಯ್ತಾ?

ಲೈನ್ ಮ್ಯಾನ್

ಕತ್ತಲಲ್ಲಿ ಮಾಡೋ ಮೋಸ
-ಇರುಳು ಮರುಳು
ಕಾಂಗ್ರೆಸ್ ಮುಕ್ತ ಭಾರತ ಮಾಡೋ ಬಿಜೆಪಿ ನಾಯಕನ ಬಗ್ಗೆ ಆಡೋ ಮಾತು
-ಬೆರಳು ತೋರಿಸಿದ್ರೆ ಹಸ್ತನೇ ನುಂಗ್ತಾನೆ

ಆಶ್ಚರ್ಯ ಮತ್ತು ಅಸಹ್ಯಗಳ ನಡುವಿನ ವ್ಯತ್ಯಾಸ
-ಒಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು, -ಇನ್ನೊಂದು ಮೂಗಿನ ಒಳಗೆ ಬೆರಳಿಟ್ಟುಕೊಳ್ಳೋದು.

ಗಂಡ ಹೆಂಡ್ತಿ ಮ್ಯಾಟ್ರು
-ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್ ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ

ಕಿಸ್ಸಿಂಗ್ ಸೀನ್ ಜಾಸ್ತಿ ಇರೋ ಯುವ ಪ್ರೇಮಕಥೆ ಇರೋ ಸಿನಿಮಾ ಟೈಟಲ್
-ಜೈ ಜವಾನ್, ಜೈ ಕಿಸ್-ಆನ್

ಫೋಟೋಗ್ರಾಫರ್ ಒಬ್ಬ ಸತ್ತರೆ, ನ್ಯೂಸ್ ಹೆಡ್ ಲೈನ್
-ಫೋಟೋಗ್ರಾಫರ್ ಫಿನಿಷ್

ಸಂಸಾರಗಳ ಗುಟ್ಟು
ಒಂದ್ ಸಂಸಾರ ಇದ್ರೆ – family
೨-೩ ಸಂಸಾರ ಇದ್ರೆ – Joint family

ಅದಕ್ಕೂ ಜಾಸ್ತಿ ಇದ್ರೆ- Giant Family

ಯಾರೋ ಅವರ ಮನೆಗೆ ಆಶ್ಚರ್ಯ ನಿವಾಸ ಅಂತ ಹೆಸರಿಟ್ಟಿದ್ರು
-ಅದನ್ನ ನೋಡಿ ಡೌಟ್ ಆಯ್ತು, ಇವ್ರೇನ್ ಮನೆ ಕಟ್ಟಿದ್ದಾರೋ, ಇಲ್ಲಾ ವಂಡರ್ ಲಾ ಕಟ್ಟಿದ್ದಾರೋ

ಎಲ್ಲದಕ್ಕೂ ಲಾಜಿಕ್ ಅಪ್ಲೈ ಮಾಡಬಾರದು
-ಕಾಲು ಕುಂಟು ಅನ್ನೋ ಕಾರಣಕ್ಕೆ ಕುಂಟಾಬಿ ಆಡೋದು ಸುಲಭ ಅಂತಲ್ಲ.
ಮನುಷ್ಯನ ಜೀವನ
-ಎಲ್ಲಾ ಚೆನ್ನಾಗಿದ್ರೆ ಜಂಬೂ ಸವಾರಿ
-ಎಲ್ಲಾ ಮುಗಿದ ಮೇಲೆ ಬಂಬೂ ಸವಾರಿ
-ಜೀವನ ಚೆನ್ನಾಗಿದ್ರೆ ಜಂಬೂ ಸವಾರಿ
-ಮುಗಿದ ಮೇಲೆ ಬಂಬೂ ಸವಾರಿ