ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೆ ಎಲ್ಲಾ ಸುಳ್ಳು, ಹುಟ್ಟು ಸಾವು ಎರಡರ ನಡುವೆ ಮೂರು ದಿನದ ಬಾಳು’ ಎಂಬ ಚಿತ್ರದ ಹಾಡು ಕನ್ನಡಿಗರೆಲ್ಲರೂ ಕೇಳಿರುತ್ತಾರೆ. 1977ರಲ್ಲಿ ಬಂದ ನಾಗರಹೊಳೆ ಚಿತ್ರದಲ್ಲಿ ಚಿ.ಉದಯಶಂಕರ್ ಸಾಹಿತ್ಯಕ್ಕೆ ರವಿಯವರು ಹಾಡಿದ ಹಾಡು ಇದು ಕರ್ಣ ಮಧುರ ಅರ್ಥಗರ್ಭಿತ ಹಾಡು.
ಚೆಲ್ಲಾ ಪಿಳ್ಳ ಸತ್ಯಂ ಅವರ ಸಂಗೀತದ ಹಿನ್ನೆಲೆಯಲ್ಲಿ ನೀರವ ರಾತ್ರಿಯ ಕಾಡಿನಲ್ಲಿ ಚಿತ್ರೀಕರಣವಾದ ಹಾಡಿದು. ಅಂಬರೀಶ
ಅಭಿನಯದಲ್ಲಿದೆ. ಈ ಹಾಡಿನಲ್ಲಿ ಸ್ವರ್ಗ ಎನ್ನುವುದು ಇಲ್ಲ ಎಂಬ ಎಲ್ಲಾ ಸಾಮಾನ್ಯ ಮನುಷ್ಯರ ಕಲ್ಪನೆ ಇದೆ. ಹಾಗೆಯೇ
ಸತ್ತು ಬದುಕಿದವರಿಲ್ಲ, ವರದಿ ತಂದವರಿಲ್ಲ ಎಂಬ ಮಾತೂ ಎಲ್ಲರೂ ಕೇಳಿಯೇ ಇದ್ದೇವೆ, ‘ಸತ್ತ ಮೇಲೆ ಆತೋ ಎಲ್ಲಾ ಗಳಿಸಿದ್ದು ಇಲ್ಲಿ ಬಿಟ್ಟ ಹೋಗೋದೇ, ಏನೂ ಒಯ್ಯೋ ಹಾಗಿಲ್ಲ’ ಎಂಬ ಕಲ್ಪನೆಯೂ ನಮ್ಮಲ್ಲಿದೆ. ಭೌತಿಕ ವಸ್ತುಗಳನ್ನು ಒಯ್ಯೋ ಹಾಗಿಲ್ಲ.
ಆದರೆ ಆಧ್ಯಾತ್ಮ, ತತ್ತ್ವಜ್ಞಾದಲ್ಲಿ ಭೌತಿಕ ವಸ್ತುಗಳನ್ನು ಅಂದರೆ ಮನೆ, ಮಠ, ಮಡದಿ, ಮಕ್ಕಳು, ನಗ, ನಗದು, ಅಧಿಕಾರ, ಹೆಸರು, ಕೀರ್ತಿ ಒಯ್ಯುವುದಿಲ್ಲ. ಇದು ನಿಜವೇ, ಆದರೆ ಇವೆಲ್ಲ ಇದ್ದಾಗ್ಯೂ ನಾವು ಭೂಮಿ ಮೇಲೆ ಇದ್ದಷ್ಟು ದಿನ ಈ ವಸ್ತುಗಳ ಮೂಲಕ ಜನರ ಜತೆ ಹೇಗೆ ವರ್ತಿಸಿದೆವು? ಇವುಗಳನ್ನು ಹೇಗೆ ಗಳಿಸಿದೆವು? ನಮ್ಮದೇ ವಸ್ತು, ನಾವೇ ಗಳಿಸಿದ ವಸ್ತುವಾಗಿದ್ದರೂ ಇದನ್ನು ಬೇರೆಯವರ ಸಹಾಯಕ್ಕೆ ಹೇಗೆ ಉಪಯೋಗಿಸಿದೆವು ಎಂಬುದು ಬಹುಮುಖ್ಯ ವಾದದ್ದು, ಹೀಗೆ ಇತರರಿಗಾಗಿ ಬಳಸಿದ ನಮ್ಮ
ವಸ್ತುಗಳಲ್ಲದೇ, ಸವಿಯಾದ ಮಾತು, ನಯವಾದ ನಡವಳಿಕೆಗಳೆಂಬ ಈ ಆಸ್ತಿಗಳನ್ನು ಖಂಡಿತ ಜತೆಗೆ ಒಯ್ಯುತ್ತೇವೆ, ಇವನ್ನೇ ಆಸ್ತಿಕರು ಪುಣ್ಯವೆನ್ನುತ್ತಾರೆ.
“ರಕ್ಷಂತಿ ಪುಣ್ಯ ಪುರಾಕೃತಾನಿ’, ಹಿಂದೆ ಮಾಡಿದ ಪುಣ್ಯ ಇಂದಿನ ಇಷ್ಟೆಲ್ಲ ಗಳಿಕೆಗೆ ಕಾರಣವಾಗಿದೆ. ಇದನ್ನು ತಿಳಿದು ಈಗೇನು ಮಾಡಬೇಕು ಎಂದು ಯೋಚಿಸಲು ಹಚ್ಚುವುದೇ ಈ ಸ್ವರ್ಗ-ನರಕಗಳ ವಿಚಾರ. ಸ್ನೇಹಿತರೇ, ಸ್ವರ್ಗ ನರಕಗಳು ಖಂಡಿತ ಇವೆ. ಇದನ್ನು ವೈಜ್ಞಾನಿಕವಾಗಿ ಸಿದ್ದಪಡಿಸಿ ತೋರಿಸಿದವರು ನಮ್ಮ ಕರ್ನಾಟಕದ ಈ ಪುಣ್ಯ ನೆಲದಲ್ಲಿಯೇ ಅವತರಿಸಿ ಇಂದಿಗೂ
ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ.
ಅದುವೇ, ಅವರೇ ಶಿರಸಿ ಬಳಿಯ ಸೋಂದಾ (ಸ್ವಾದಿ)ದಲ್ಲಿ ವೃಂದಾವನಸ್ಥರಾಗಿರುವ ಶ್ರೀ ಶ್ರೀ ವಾದಿರಾಜ ಸಾರ್ವಭೌಮರು. ನೂರಾ ಇಪ್ಪತ್ತು ವರ್ಷ ಬಾಳಿ ಬದುಕಿದ ಇವರು ವೈಕುಂಠ ವರ್ಣನೆ ಎಂಬ ಪುಸ್ತಕದಲ್ಲಿ ಸ್ವರ್ಗವೆಂಬುದು ಅಂದರೆ ವೈಕುಂಠ ಎಂಬುದು ಎಷ್ಟು ದೂರವಿದೆ, ಹೇಗಿದೆ? ಅಲ್ಲಿಗೆ ಹೋಗಲು ಮಾಡಬೇಕಾದ ಕೆಲಸಗಳೇನು? ಏನು ಮಾಡಿದರೆ ಅಲ್ಲಿಗೆ ಹೋಗ ಬಹುದೆಂಬುದನ್ನು 258 ಪುಟಗಳ ಪುಸ್ತಕದಲ್ಲಿ ಅದ್ಭುತವಾಗಿ, ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ.
ಮೈ ನವಿರೇಳುವಂತೆ ಓದಿಸಿಕೊಂಡು ಹೋಗುವ ಈ ಪುಸ್ತಕದ ವಿವರಗಳು ಬೆಳಕನ್ನು ಚೆಲ್ಲುತ್ತವೆ. ವಿಜ್ಞಾನ ರೀತಿಯಲ್ಲಿ
ಹೋಗಲು ಅಸಾಧ್ಯವೇ ಆಗಿರುವ ಈ ಸ್ವರ್ಗವೆಂಬ ಸ್ಥಳಕ್ಕೆ (ಈ ಗ್ರಂಥದಲ್ಲಿ ಇದನ್ನು ವೈಕುಂಠವೆಂದು ಹೆಸರಿಸುತ್ತಾರೆ),
ಯೋಗ, ಧ್ಯಾನಗಳ ಮೂಲಕ ಕ್ಷಣಮಾತ್ರದಲ್ಲಿ ಹೋಗಲು ಸಾಧ್ಯವೆಂದು ತಿಳಿಸಿದ್ದಾರೆ.
ಈ ಪುಸ್ತಕದಲ್ಲಿ ಒಟ್ಟು ನಾಲ್ಕು ಸಂಧಿಗಳಿವೆ. 1) ಮೋಕ್ಷ ಸಂಧಿ, 2) ಲಯ ಸಂಧಿ, 3) ಸೃಷ್ಟಿ ಸಂಧಿ ಮತ್ತು 4) ಸ್ಥಿತಿ ಸಂಧಿ ಎಂದು ವಿಭಾಗಿಸಿದ್ದಾರೆ. ಅದರ ಮೋಕ್ಷ ಸಂಧಿ ಅಧ್ಯಾಯದಲ್ಲಿ ವೈಕುಂಠವೆಂಬ ಹರಿಯ ಲೋಕ ಬೊಮ್ಮನ ಲೋಕಕ್ಕಿಂತಲೂ ಮೇಲಿಹುದು | ಶೋಕರಹಿತರಾದ ಸಿದ್ಧಸಾಧ್ಯದರು ಬೇರೆಯದೇ ಸುಖವನುಣುತಿಹರು||
ಮಹಾಭಾರತ ತಾತ್ಪರ್ಯ ನಿರ್ಣಯ ಎಂಬ ಶ್ರೀಮಧ್ವಾಚಾರ್ಯರ ಗ್ರಂಥದಲ್ಲಿ ಯೋಜನಗಳ ಲೆಕ್ಕದಲ್ಲಿ ಸ್ಪಷ್ಟವಾಗಿ ದೂರ ವನ್ನು ತಿಳಿಸಿದ್ದಾರೆ. ಮಧ್ವಾಚಾರ್ಯ ರೆಂಬುವವರು ತ್ರೇತಾಯುಗ, ದ್ವಾಪರಯುಗಗಳಲ್ಲಿ ರಾಮನ ಜತೆ ಹನುಮಂತನಾಗಿ, ಕೃಷ್ಣನ ಜತೆ ಭೀಮನಾಗಿ, ಈ ಕಲಿಯುಗದಲ್ಲಿ ಶ್ರೀಮಧ್ವಾಚಾರ್ಯರಾಗಿ ಅವತರಿಸಿದವರು.
ಇವರು ಉಡುಪಿಯಲ್ಲಿ ಸಶರೀರವಾಗಿ ಅದೃಶ್ಯರಾಗಿ ಹೋದ ಮಹಾನುಭಾವರು, ಅವ ರು ಬರೆದಿರುವಂತೆ ಭೂಮಿಯಿಂದ ಸ್ವರ್ಗ – 50 ಲಕ್ಷ ಯೋಜನ, ಸ್ವರ್ಗದಿಂದ ಮಹಃ – 75 ಲಕ್ಷ ಯೋಜನ, ಮಹಸ್ಸಿಗಿಂತ ಜನ -1,12,50,000 ಯೋಜನ, ಜನದಿಂದ ತಪಃ – 1,68,75,000 ಯೋಜನ, ಒಟ್ಟು ಭೂಮಿಯಿಂದ ತಪಃ – 4,06,25,000 ಯೋಜನ, ತಪಸ್ಸಿನಿಂದ ಸತ್ಯಲೋಕ – 4,06,25,000 ಯೋಜನ, ಭೂಮಿಯಿಂದ ಸತ್ಯಲೋಕ – 8,12,50,0000 ಯೋಜನ, ಭೂಮಿಯಿಂದ ವೈಕುಂಠ – 16,25,00,000 ಯೋಜನ, ಮೋಕ್ಷಸಂಧಿ ಎನ್ನುವ ಅಧ್ಯಾಯದಲ್ಲಿ ವೈಕುಂಠ ವಾಸಿಗಳಾದ ಮುಕ್ತರು ಹೇಗಿರುತ್ತಾರೆ? ಅಲ್ಲಿನ ಪರಿಸರಗಳ ಬಗ್ಗೆ ವರ್ಣನೆ ಯಿದೆ.
ಅಲ್ಲಿ ಭಾಗವತದ ಕೆಲ ವರ್ಣನೆಗಳಿವೆ. ‘ಮಿಂಚಿನಿಂದ ಕೂಡಿದ ಮೋಡಗಳು ಆಕಾಶದಲ್ಲಿ ಶೋಭಿಸುವಂತೆ ಸುಂದರ ಸ್ತ್ರೀಯ ರಿಂದ ತುಂಬಿದ ಮುಕ್ತರ ವಿಮಾನಗಳು ವೈಕುಂಠದಲ್ಲಿ ಶೋಭಿಸುತ್ತವೆ ಎಂದಿದ್ದಾರೆ. ವಿಷ್ಣು ರಹಸ್ಯ ಎಂಬ ಗ್ರಂಥದಲ್ಲಿ
ಮುಕ್ತರ ಮನ್ಮಥ ಕ್ರೀಡೆ ಉತ್ತಮವಾದದ್ದು, ಪರಸ್ತ್ರೀ ಸಂಗದಿಂದ ಅವರಿಗೆ ಅನರ್ಥವೇನಿಲ್ಲ, ಆದರೂ ಅವರು ಬಯಸುವುದಿಲ್ಲ. ವಿಧಿ ನಿಷೇಧ ಬಹಿರ್ಭೂತರು, ಸ್ವಭಾವತಃ ಸಜ್ಜನರಾದುದರಿಂದ ಧರ್ಮ ಮಾರ್ಗ ತಪ್ಪಿ ನಡೆಯುವುದಿಲ್ಲ.
ಅಧರ್ಮ ಮಾರ್ಗಕ್ಕೊಳಗಾಗದಿರುವುದೇ ಅವರಿಗೆ ಸ್ವಭಾವ. ಅವರಿಗೆ ಆ ಕಡೆ ಮನಸ್ಸೇ ಬರುವುದಿಲ್ಲ. ಛಾಂದ್ಯೋಗ್ಯ ಉಪನಿಷತ ದಲ್ಲಿ ಮುಕ್ತರ ವಿಹಾರವನ್ನು ವರ್ಣಿಸಲಾಗಿದೆ. ಅವರ ಮನ್ಮಥ ಕ್ರೀಡೆ ಅಲೌಕಿಕ, ಅವರ ಮನಸ್ಸು ಒಂದಾದರೆ ಮುಗಿಯಿತು ದೇಹ ಒಂದಾದಷ್ಟೇ ಸುಖ ಪಡೆಯುತ್ತಾರೆ. ಇನ್ನು ಕೆಲವು ರೋಚಕ ವಿಷಯಗಳೂ ವಿಷ್ಣು ರಹಸ್ಯ ಗ್ರಂಥದಲ್ಲಿವೆ. ನಮ್ಮಲ್ಲಿ ಇನ್ನೂ ಸ್ವರ್ಗವೆಂದರೆ ಹೆಣ್ಣು, ಹೆಂಡ, ಊಟ, ನಿದ್ದೆ ಎಂದೇ ಭ್ರಮಿಸಿದ್ದಾರೆ. ಈ ಮುಕ್ತರ ಲೋಕಗಳಲ್ಲಿ ನವಿಲುಗಳು ಕೇವಲ ರೆಕ್ಕೆಗಳ ಶಾಖದಿಂದಲೂ, ಮೀನು ಕೇವಲ ದೃಷ್ಟಿಯಿಂದಲೂ, ಆಮೆಗಳು ಕೇವಲ ಸ್ಮರಣೆ ಮಾತ್ರದಿಂದಲೂ ರತಿಕ್ರೀಡಾ ಸುಖ ಪಡೆಯು ತ್ತವಂತೆ.
ಕೆಲವರು ಸ್ವರ್ಗಕ್ಕೆ ಹೋಗಬೇಕೆಂದು ಭೂಮಿಯಲ್ಲಿ ತುಂಬಾ ಕಟ್ಟುನಿಟ್ಟಾಗಿ ವ್ರತ ನಿಯಮಗಳಿಂದ ಜೀವನ ನಡೆಸುತ್ತಾರೆ.
ಆದರೆ ಮುಕ್ತರೆಂದರೆ ಅಲ್ಲಿಯ ಪರಿಭಾಷೆಯೇ ಬೇರೆಯಿದೆ. ‘ಅಯೋಗ್ಯ ವಿಷಯದಲ್ಲಿ ಮುಕ್ತರಿಗೆ ಇಚ್ಛೆ ಉಂಟಾಗದು, ಯೋಗ್ಯ ವಿಷಯದಲ್ಲಿ ಇಚ್ಛೆ ಕೈಗೂಡದಿರಲಾರದು’ ಎಂದಿದೆ ವಿಷ್ಣು ರಹಸ್ಯ. ಸ್ವರ್ಗ ಅಥವಾ ವಿಷ್ಣು ಲೋಕ ಅಥವಾ ಕೈಲಾಸ, ವೈಕುಂಠ
ಏನೇ ಅಂದುಕೊಳ್ಳಿ ಅಲ್ಲಿ ಹೇಗೆಂದರೆ, ‘ಮೈಗೆ ಶ್ರೀಗಂಧದ ರಸವನ್ನು ಬಳಿದುಕೊಂಡವನಿಗೆ ಮಂದ ಮಾರುತ ಬೀಸಿದಾಗ ಅವನ ಮೈಯಲ್ಲಿದ್ದ ತಂಪೇ, ಶೈತ್ಯವೇ, ಶೈತ್ಯವನ್ನೇ ಆ ಗಾಳಿ ಅಭಿವ್ಯಕ್ತ ಮಾಡಿಕೊಡುತ್ತದಾಗಲಿ, ಆ ಗಾಳಿಯಲ್ಲಿ ಶೈತ್ಯ ತಂದಿರುವುದಿಲ್ಲ. ಹಾಗೆಯೇ ಮುಕ್ತರಿಗೆ ಭೋಗ ಪದಾರ್ಥಗಳೂ ಅವರ ಸ್ವರೂಪದಲ್ಲಿರುವ ಆನಂದವನ್ನೇ ಅಭಿವ್ಯಕ್ತಿ ಮಾಡಿಕೊಡುತ್ತದೆ ಹೊರತು
ಸಂಸಾರಿಗಳಿಗೆ ಬಾಹ್ಯ ಅಂತಃಕರಣದಲ್ಲಿ ಸುಖವನ್ನು ಉತ್ಪತ್ತಿ ಮಾಡಿಕೊಡುವಂತೆ ಮುಕ್ತರಿಗೆ ಸ್ವರೂಪದಲ್ಲಿಲ್ಲದ ಬೇರೆ ಸುಖ ವನ್ನು ಉತ್ಪತ್ತಿ ಮಾಡಿಕೊಡುವುದಿಲ್ಲ.’
ಎಂಥ ವಿಚಾರಗಳು, ಮಾತುಗಳಿವು! ಇನ್ನು ಸ್ವರ್ಗವೆಂಬುದು ಇದೆ ಎನ್ನುವುದಕ್ಕೆ ಯೋಗ ದೃಷ್ಟಿಯಿಂದ ಹೋಗಿ ಬಂದ ಅನೇಕ ಮಹನೀಯರು ಅಲ್ಲಿನ ಪ್ರತಿಯೊಂದನ್ನೂ ವಿವರಿಸಿದ್ದಾರೆ, ವರ್ಣಿಸಿದ್ದಾರೆ. ಯುಕ್ತಿಮಲ್ಲಿಕಾ ಎಂಬ ಗ್ರಂಥಧಲ್ಲಿ ವೈಕುಂಠದಲ್ಲಿ ಬಾವಿ, ಕೊಳ, ಕೆರೆಗಳು, ನಾನಾ ಫಲ ನೀಡುವ ಮರಗಳು, ತೋಪುಗಳೂ ಇವೆ. ಇಲ್ಲಿ ಮುಕ್ತರು ಅನೇಕ ಕ್ರೀಡೆಗಳನ್ನು ಆಡಿ ಹರ್ಷಿಸುತ್ತಾರೆ. ನಿತ್ಯವು ಅಪ್ರಾಕೃತವೂ ಆದ ಭಕ್ಷ್ಯ, ಭೋಜ್ಯ, ಲೇಹ್ಯ, ಪೇಯಗಳೆಂಬ ಚತುರ್ವಿಧ ಅನ್ನದ ತುತ್ತುಗಳನ್ನು ಸವಿಯುತ್ತಾರೆ.
ಭೂಲೋಕದಲ್ಲಿರುವಂತೆ ಅಲ್ಲಿಯೂ ತಾರತಮ್ಯ ಅಥವಾ ಬೇಧಗಳಿವೆಯಂತೆ. ತೈತ್ತರೀಯ ಬೃಹದಾರಣ್ಯಕ ಉಪನಿಷತ್ತುಗಳಲ್ಲಿ ಮುಕ್ತಾನಂದ ತಾರತಮ್ಯದಲ್ಲಿ ಹೇಳಿದ್ದಾರೆ. ಯಾವದಧಿಕಾರಮವಸ್ಥಿತಿರಾಧಿಕಾರಿಕಾಣಾಂ ಅಂದರೆ ಅವರವರ ಯೋಗ್ಯತಾ ನುಸಾರ ತಾರತಮ್ಯದಿಂದ ಹರಿಯನ್ನು ಸಂಸಾರದಲ್ಲಿ ಸೇವಿಸುವ ಜೀವರಿಗೆ ಮುಕ್ತಿಯಲ್ಲಿ ಅಭಿವ್ಯಕ್ತವಾಗುವ ಸ್ವರೂಪಾನಂದವೂ ತಾರತಮ್ಯದಿಂದಲೇ ಇರುತ್ತದೆ.
ಏಕೆಂದರೆ ಸಾಧನ ತಾರತಮ್ಯಾನುಗುಣವಾಗಿ ಫಲದಲ್ಲಿಯೂ ತಾರತಮ್ಯವಿಲ್ಲದಿದ್ದರೆ ಹೆಚ್ಚು ಸಾಧನ ಮಾಡಿದ ಉತ್ತಮರಿಗೆ ನ್ಯಾಯವಾಗಿ ಸಿಗಬೇಕಾದುದು ಸಿಗದಂತಾಗುತ್ತದೆ. ಅಲ್ಪ ಸಾಧನ ಅಲ್ಪರಿಗೆ ಅವರು ಮಾಡದಿದ್ದ ಸಾಧನಕ್ಕೆ ಫಲ ಸಿಗುವಂತಾ ಗುತ್ತದೆ. ಇದು ಬ್ರಹ್ಮಸೂತ್ರಕ್ಕೆ ಸಮ್ಮತವಲ್ಲ. ನೋಡಿದಿರಾ? ಇಷ್ಟೆಲ್ಲವನ್ನೂ ಜ್ಞಾನಿಗಳಾಡುವುದು, ಸಶರೀರಿಯಾಗಿ ಮೇಲೆ ಹೋದವರು ಕಂಡಿದ್ದನ್ನು ವರ್ಣಿಸಿದರೂ ನಾವಿನ್ನೂ ಮೇಲೇನಿಲ್ಲಾ ಎಲ್ಲಾ ಇಲ್ಲೇ ಎನ್ನುತ್ತೇವೆ.
ಇವರದನ್ನು ಬಿಡಿ, ನಮ್ಮ ತತ್ತ್ವಪದಕಾರರು, ಜನಪದರು ‘ಎಷ್ಟು ದಿನ ಇಲ್ಲೇ ಇರುತಿ, ನಿನ್ನ ಮನಿ ಬ್ಯಾರೇನ ಐತಿ’ ಎಂದೂ ಹಾಡಿಲ್ಲವೇ? ಕಣ್ಣಿಗೆ ಕಾಣದ, ಕಂಡೂ ಕೇಳರಿಯದ ನೂರಾರು ವಿಸ್ಮಯಗಳು ಈ ಪ್ರಕೃತಿಯಲ್ಲಿವೆ. ಬರೀ ಇಂಟರ್‌ನೆಟ್, ಪತ್ರಿಕೆ ಗಳೂ, ಚಾನೆಲ್‌ಗಳನ್ನು ಮಾತ್ರ ನೋಡಿ ಲೈಫ್ ಇಷ್ಟೇನೆ! ಎಂದು ನಿರ್ಧಸಿರುತ್ತಿದ್ದ ನಮಗೆ, ಈ ಕರೋನಾ ಭೂಮಿಯಲ್ಲೇ, ನಮ್ಮ ಬಾಗಿಲಿಗೇ ಬಂದು ವ್ಯಾಧಿ ರೂಪದಲ್ಲಿ ಜರ್ಝರಿತ ಮಾಡಿ ಎಸೆಯುತ್ತಿದೆ.
ನಮ್ಮೆಲ್ಲ ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂಡಾ ಮೋಚಿಕೊಂಡು ಹೋಗುತ್ತಿಲ್ಲವೇ? ಇನ್ನಾದರೂ ಶಾಸ್ತ್ರ, ಪುರಾಣ, ವೇದ, ಉಪನಿಷತ್ತುಗಳನ್ನು ಅಭ್ಯಸಿಸೋಣ. ಇವುಗಳಲ್ಲಿ ಬರೀ ಜೀವನಕ್ಕೆ ಮಾತ್ರ ದಾರಿಗಳಿಲ್ಲ, ಜೀವನದ ನಂತರವೂ ಒಂದಲ್ಲಾ ಹಲವಾರು ದಾರಿಗಳನ್ನು ಕಾಣಬಹುದಾಗಿದೆ. ಬರೀ ದೇಹದ ಇಮ್ಯುನಿಟಿಗಾಗಿ ನಾವೀಗ ಹೋರಾಡುತ್ತಿದ್ದೇವೆ. ಬುದ್ಧಿ, ಮನಸ್ಸು ಗಳಿಗೆ ಕೂಡಾ ಇಮ್ಯುನಿಟಿ ಬೇಕು. ಅದನ್ನು ಈ ಗ್ರಂಥಗಳು, ನಮ್ಮ ಪೂರ್ವಿಕರಾದ ಋಷಿಮುನಿಗಳ ಜೀವನ ನಮಗೆ ಕೊಡುತ್ತವೆ.
ವಿಜ್ಞಾನ, ತಂತ್ರಜ್ಞಾನವೆನ್ನುತ್ತಾ ನಮ್ಮ ಬುದ್ಧಿ, ಮನಸ್ಸುಗಳನ್ನೇ ಯಂತ್ರಕ್ಕೊಪ್ಪಿಸಿ ಬಿಟ್ಟೆವು. ನೂರಾರು ವರ್ಷ ಬದುಕುತ್ತಿದ್ದ ನಮ್ಮ ಪೂರ್ವಿಕರ ಮುಂದೆಯೇ ಹರೆಯದಲ್ಲೇ ಭರ್ತಿ ಯೌವ್ವನದಲ್ಲೇ ಸಾಯುತ್ತಿದ್ದೇವೆ.