Wednesday, 11th December 2024

ವಿಪತ್ತಿಗೆ ಪಕ್ಷಾತೀತ ಮಾನವೀಯತೆ ಅಗತ್ಯ

ಅಭಿಪ್ರಾಯ 

ಸಿದ್ದು ಯಾಪಲರವಿ, ಕಾರಟಗಿ

ಮೊನ್ನೆ ಗೆಳೆಯರೊಬ್ಬರು ನಾಡಿನ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳಿಗೆ ಕರೋನಾ ನಿಯಂತ್ರಣ ಮತ್ತು ಜೀವನಶೈಲಿ ಕುರಿತು ವೆಬಿನಾರ್ ಆಯೋಜಿಸಿದ್ದರು. ಹೋದ ವಾರದ ಹತ್ತಾರು ಘಟನೆಗಳು ಮಾತನಾಡುವಾಗ ಕಣ್ಮುಂದೆ ಬಂದವು. ಕರೋನಾ ಕಾಲದ
ಆರೋಗ್ಯ ನಿರ್ವಹಣೆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೇಜವಾಬ್ದಾರಿ ವರ್ತನೆಯೊಂದಿಗೆ ತಾವು ಮಾಡಿದ್ದೇ ಸರಿ ಎಂದು ವಾದಿಸುವ ಧೋರಣೆ ನೆನಪಾಯಿತು.

ದೇಶ ಆಳುವ ಜನ ರಾಜಕೀಯ ಕಾರಣದಿಂದ ಜನರ ಪ್ರಾಣದ ಜತೆಗೆ ಚೆಟವಾಡುವ ದುರುಳತನ ನಿಜವಾಗಿಯೂ ನಾಚಿಕೆಗೇಡು. ಚುನಾವಣೆ ಸಂದರ್ಭದಲ್ಲಿ ಬೀದಿ ಗಿಳಿದು ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಮಹಾನ್ ನಾಯಕರು ಈಗ ಅದೇ ಜನ ರಸ್ತೆಯಲ್ಲಿ ಅನಾಥರಂತೆ ಸಾಯುವಾಗ ಧೈರ್ಯ ತುಂಬುವ ಮಾತಾಡಬೇಕು ಎಂದು ಎನಿಸದಷ್ಟು ನಿರ್ದಯಿಗಳಾದರಲ್ಲ.
ಏನಾದರೂ ಹೇಳಬೇಕು ಎಂಬ ಆತ್ಮವಿಶ್ವಾಸದ ಕೊರತೆ ಜತೆಗೆ ಆಡಳಿತ ವಿಫಲತೆಯೂ ಎದ್ದು ಕಾಣುತ್ತದೆ.

ನಮ್ಮ ದೇಶದ ಭ್ರಷ್ಟಾಚಾರ ನಮಗೆ ಹೊಸದಲ್ಲ ರಸ್ತೆ, ಗಟಾರು, ಕಟ್ಟಡಗಳ ನಿರ್ಮಾಣದಲ್ಲಿ ಹಣ ತಿಂದಾಗ ಅಯ್ಯೋ ಹಾಳಾಗಿ ಹೋಗಲಿ ಎನಿಸುತ್ತಿತ್ತು. ಆದರೆ, ಈಗ ಸಾವು ರಣ ಕೇಕೆ ಹಾಕುವ ಹೊತ್ತಿನಲ್ಲಿಯೂ ದುಡ್ಡು ಹೊಡೆಯುವ ದುರ್ಬುದ್ಧಿಗೆ ಮನಸು ರೋಸಿ ಹೋಗಿದೆ. ಉಳಿದ ಸಂದರ್ಭ ದಲ್ಲಿ ಚಿಕಿತ್ಸೆಯ ನೆಪದಲ್ಲಿನ ಶೋಷಣೆಯನ್ನು ಕೊಂಚ ಕ್ಷಮಿಸಬಹುದು. ಈಗ ಕರೋನಾ ಉಳ್ಳವರನ್ನು, ಇಲ್ಲದವರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಸ್ವತಃ ಭ್ರಷ್ಟಾಚಾರದಲ್ಲಿ ತೊಡಗಿರುವ ನೀಚರೂ ಸುರಕ್ಷಿತರಲ್ಲ ಎಂಬ ಪ್ರಜ್ಞೆ ಇದ್ದಾಗಲೂ ಹಣ ಲೂಟಿ ಹೊಡೆಯಬೇಕೆಂಬ ವಿಕಾರ ಮನಸ್ಥಿತಿ ಜಗತ್ತಿನ ಇತರ ದೇಶಗಳಲ್ಲಿ ಖಂಡಿತವಾಗಿ ಸಿಗುವುದಿಲ್ಲ.

ಭಾರತೀಯ ಮನಸ್ಥಿತಿಯ ವಿಕಾರ, ವಿಕ್ಷಿಪ್ತ ಯುದ್ಧ, ಪ್ಯಾಂಡಮಿಕ್ ಮತ್ತು ಸಾವಿನ ಮನೆಯಲ್ಲಿಯೂ ಕೆಲಸ ಮಾಡುತ್ತದೆ. ಯುರೋಪ್ ಮತ್ತು ಇತರ ಮುಂದುವರಿದ ರಾಷ್ಟ್ರಗಳ ಆರೋಗ್ಯ ನಿರ್ವಹಣೆ ನಮ್ಮನ್ನು ಆಳುವ ಮಹಾನುಭಾವರಿಗೆ ಇನ್ನೂ ಅರ್ಥವಾಗಿಲ್ಲ. ವಿದೇಶ ಪ್ರವಾಸ ಮಾಡಿ ಬರುವ ಅಽಕಾರಿಗಳು, ರಾಜಕೀಯ ನಾಯಕರು ಅಲ್ಲಿಯ ವ್ಯವಸ್ಥೆ ಕುರಿತು ಪುಂಖಾನು
ಪುಂಖವಾಗಿ ಭಾಷಣ ಬಿಗಿಯುತ್ತಾರೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ ಮಾತ್ರ ವಿದೇಶಿ ಅನುಕರಣೆ, ಇತರ ವಿಷಯಗಳಲ್ಲಿ ಬೇಡವೇ ಬೇಡ. ಅದರಲ್ಲೂ ವಿಶೇಷವಾಗಿ ಆರೋಗ್ಯ ನಿರ್ವಹಣೆ ವಿಷಯದಲ್ಲಿ ಇತರ ದೇಶಗಳು ನಮಗೆ ಆದರ್ಶವಾಗಬೇಕು. ಆದರೆ, ಹಾಗಾಗುವುದಿಲ್ಲ ಅದೇ ವಿಪರ್ಯಾಸ.

ಯುದ್ಧ ಮತ್ತು ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಡೆದುಕೊಳ್ಳುವ ಕನಿಷ್ಠ
ಮಾನವೀಯತೆ ಇಂದಿನ ಅಗತ್ಯವಾಗಿದೆ. ಆರೋಗ್ಯ ನಿರ್ವಹಣೆ ವಿಷಯ ಚರ್ಚಿಸುವಾಗಲೂ ಜಾತಿ, ಧರ್ಮ ಮತ್ತು ಪಕ್ಷ ರಾಜಕಾರಣದ ಮಾತುಗಳನ್ನಾಡುತ್ತ, ಅದರಲ್ಲೂ ದುಡ್ಡು ಕಬಳಿಸುವ, ಅಧಿಕಾರದಿಂದ ಇಳಿಸುವ, ಅಧಿಕಾರ ಹೊಡೆಯುವ ಅಮಾನವೀಯತೆಗೆ ನಮ್ಮನ್ನು ಹಿಂದೆ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ನಾವೇ ಸಾಟಿ.

ಕರೋನಾ ಮೊದಲ ಅಲೆಯ ನಿರ್ವಹಣೆಯ ಸಂದರ್ಭವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಇತರ ರಾಷ್ಟ್ರಗಳು 2ನೇ ಅಲೆ ಹೊಡೆದೋಡಿಸುವಲ್ಲಿ ಯಶಸ್ಸುಗಳಿಸಲು ಬಹು ದೊಡ್ಡ ಕಾರಣ ಮಾನವೀಯತೆ ಮತ್ತು ಪ್ರಾಮಾಣಿಕತೆ. ‘ವ್ಯಾಕ್ಸೀನ್ ತೆಗೆದುಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲ’ ಎಂಬ ಸಣ್ಣ ವಿಷಯವನ್ನು ತನ್ನ ದೇಶ ವಾಸಿಗಳಿಗೆ ತಿಳಿಸಲು ಸುದ್ದಿಗೋಷ್ಠಿ ನಡೆಸುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಮ್ಮ ನಾಯಕರ ಕಣ್ಣಿಗೆ ಕಾಣಿಸುವುದಿಲ್ಲ.

ಪದೇಪದೆ ಪತ್ರಿಕಾ ಗೋಷ್ಠಿ ಮೂಲಕ ಸಣ್ಣ ಪುಟ್ಟ ಸಂಗತಿ ಗಳನ್ನು ಜನರ ಜತೆಗೆ ಹಂಚಿಕೊಳ್ಳುವುದು ಒಬ್ಬ ಜನ ನಾಯಕನ ಕನಿಷ್ಠ ಜವಾಬ್ದಾರಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ನೀಡುವ ಗೌರವ ಕೂಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತರಾದ ನಮ್ಮ ಮಹಾನ್ ನಾಯಕರು ಗೆದ್ದು ಅಧಿಕಾರ ಗದ್ದುಗೆ ಏರಿದ ಕೂಡಲೇ ಮಹಾರಾಜರಾಗಿ ಬಿಡುತ್ತಾರೆ. ‘ಪ್ರಜೆ’ ಮಾಯವಾಗಿ ‘ಪ್ರಭುತ್ವ’ ಮಾತ್ರ ಉಳಿಯುತ್ತದೆ. ಆದರೆ, ಈ ಪ್ರಜಾಪ್ರಭುತ್ವ ವ್ಯವಸ್ಥೆ ಘಟಾನುಘಟಿಗಳನ್ನು ಅರಗಿಸಿಕೊಂಡು ಮಣ್ಣು ಮುಕ್ಕಿಸಿದೆ.

ನಮ್ಮ ಸಿದ್ಧಾಂತ ಮತ್ತು ರಾಜಕಾರಣ ಇಷ್ಟೊಂದು ಕ್ರೂರವಾಗಬಾರದು. ರಾಷ್ಟ್ರೀಯ ವಿಪತ್ತಾಗಿರುವ ಕರೋನಾ ಸಂದರ್ಭದಲ್ಲಿ ಯಾರಾದರು ಸತ್ತಾಗ ‘ಅಯ್ಯೋ ಪಾಪ ಹೀಗಾಗಬಾರದಿತ್ತು, ಇಂತಹ ಸ್ಥಿತಿ ನಮಗೆ ಬಂದರೆ ಹೇಗೆ?’ ಎಂದು ಆಲೋಚನೆ ಮಾಡಿ ಸಂತಾಪದ ಮಾತುಗಳನ್ನು ಆಡಲು ನಮಗೆ ನಮ್ಮ ಜಾತಿ, ಧರ್ಮ, ಸಿದ್ಧಾಂತ ಮತ್ತು ಅಸೂಯೆ ಕಾಡುತ್ತವೆ. ಸಾವಿನ ಮನೆಯಲ್ಲಿ ನಮ್ಮ ‘ಇಗೋ-ಅಹಂ’ ಮುಖ್ಯವಾದರೆ ಅದಕ್ಕೆ ಹೊಣೆ ಯಾರು? ಅನಾರೋಗ್ಯ, ಮುಪ್ಪು ಮತ್ತು ಸಾವು ನಮಗೆ ಪಾಠ ಕಲಿಸ ಬಹುದು ಎಂಬ ನಂಬಿಕೆ ಮಾಯವಾಗುವಂತಹ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ.

ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ನಂಬಿಸಿ, ಅದಕ್ಕೆ ಸಾತ್ ನೀಡಲು ಮಾಧ್ಯಮಗಳು ಕೈ ಜೋಡಿಸುತ್ತವೆ. ಸುಳ್ಳು ಸಮರ್ಥನೆ
ಮಾಡಲು ನಮಗಿರುವ ಕಾರಣಗಳು ಜಾತಿ, ಧರ್ಮ, ಪಕ್ಷ ಮತ್ತು ಒಂದೇ ಪಕ್ಷದಲ್ಲಿ ಇರುವ ವಿಭಿನ್ನ ವ್ಯಕ್ತಿಗಳು.