ಅಭಿವ್ಯಕ್ತಿ
ಮೌಲಾಲಿ ಕೆ.ಆಲಗೂರ
ಜಗತ್ತಿನ 212 ರಾಷ್ಟ್ರಗಳಲ್ಲಿ ಭಾರತ ಇತರ ದೇಶಗಳಿಗಿಂತ ವಿಭಿನ್ನ. ಏಕೆಂದರೆ ಇಲ್ಲಿ ಏಕತೆ ಇದೆ. ಭಾವೈಕ್ಯತೆ ಇದೆ. ಸಾಮರಸ್ಯ ಇದೆ. ಸೌಹಾರ್ದತೆ ಇದೆ. ಸಮ ಪಾಲು, ಸಮ ಬಾಳು ಎಂಬ ಸಮಾನತೆಯ ಸ್ಥಾನಮಾನವಿದೆ. ಕಷ್ಟ ಎಂದರೆ ಕನಿಕರ ತೋರುವ ಮಾನವೀಯತೆಯ ಮನವಿದೆ. ಸರ್ವ ಧರ್ಮಗಳನ್ನು ಗೌರವಿಸುವ ಗುಣ ವಿದೆ. ಹಿಂದು ಮುಸ್ಲಿಂ ಕ್ರೈಸ್ತ ಬೌದ್ಧ ಜೈನರ ನಡುವೆ ಸಿಹಿ ಬಾಂಧವ್ಯದ ಸೇತುವೆ ಇದೆ. ಎಲ್ಲರೂ ನನ್ನವರೇ ಎಂದು ಅಪ್ಪಿಕೊಳ್ಳುವ ಸಹೋದರತೆ ಸ್ವಭಾವ ಇದೆ. ಭಗತ್, ಬೋಸರ ಕ್ರಾಂತಿ ಇದೆ.
ಬುದ್ಧ ಬಸವ ಗಾಂಧಿಯ ಶಾಂತಿ ಇದೆ. ದಾರ್ಶನಿಕರ ನೀತಿ ಇದೆ. ಮಾತೃ ಹೃದಯದ ಪ್ರೀತಿ ಇದೆ. ಅಂಬೇಡ್ಕರರ ದಿವ್ಯ ಜ್ಞಾನ ಇದೆ. ಕಲೆ ಸಾಹಿತ್ಯ ಸಂಗೀತಕ್ಕೆ ನೆಲೆ ಇದೆ. ಒಟ್ಟಾರೆ ಸಕಲ ಸಂಪನ್ಮೂಲಗಳ ಭವ್ಯ ತಾಣ ನಮ್ಮ ಭಾರತವಾಗಿದೆ. ಭೀಮನ ಬಲ, ಏಕಲವ್ಯನ ಛಲ, ಕುಡಿಯಲು ಶುದ್ಧ ಜಲ, ಹಸಿರು, ಪ್ರಾಣಿ, ಪಕ್ಷಿಗಳ ಸಂಕುಲ ನಮ್ಮಲಿದೆ. ಶಕ್ತಿ, ಯುಕ್ತಿ, ಭಕ್ತಿಯಲ್ಲಿಯೂ ಮುನ್ನುಗ್ಗುವ ನಾವುಗಳು ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಯಲ್ಲಿ ನಾವೇ ಜಗಕೆ ಮಾದರಿ. ಸಹಿಷ್ಣುತೆಗೆ ನಾವುಗಳೇ ಹೆಸರುವಾಸಿ.
ಜಗತ್ತಿನ ಸರ್ವ ಜನರು ನಮ್ಮಮ್ಮ ತಾಯಿ ಭಾರತಾಂಭೆಯ ಮಡಿಲಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ಧಾರೆ. ಈ ನೆಲದಲ್ಲಿ ಇರುವಷ್ಟು ಸಹೃದಯತೆ, ದಯೆ, ಮಮತೆ, ಕರುಣೆ ಮಾನವೀಯತೆ ಇರುವ ಜನರು ಇತರ ರಾಷ್ಟ್ರಗಳಲ್ಲಿ ಕಾಣಲು ಅಸಾಧ್ಯ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಭವ್ಯ ಭಾರತ ಅಧ್ಯಾತ್ಮಿಕ ಮತ್ತು ಧಾರ್ಮಿಕ ದೈವ ಶಕ್ತಿ ನೆಲೆಯ ಮೇಲೆ ನಿಂತಿದೆ. ಭಾರತದಲ್ಲಿ ಮಹಾನ್ ತಪಸ್ವಿಗಳು, ಶರಣು, ಸೂಫಿ ಸಂತರು, ಚಿಂತಕರು, ದಾರ್ಶನಿಕರು, ಪಂಡಿತರು ವಿಜ್ಞಾನಿಗಳು, ಶಿಕ್ಷಣ ತಜ್ಞರು, ಶ್ರೇಷ್ಠ ಸಾಹಿತಿಗಳು, ಮಹಾನ್ ಮಾನತವಾದಿಗಳು ಹಾಗೂ ವಿಶ್ವ ಮಾನವರು ಉದಯಿಸಿ ಜಗಕ್ಕೆ ಬೆಳಕಾಗಿದ್ಧಾರೆ.
ನಮ್ಮ ಅದೆಷ್ಟೋ ಭಾರತೀಯ ಮಹಾನ್ ನಾಯಕರು ವಿಶ್ವಕ್ಕೆ ಕೀರ್ತಿ, ಸೂರ್ತಿ, ಪ್ರೇರಣೆಯಾಗಿದ್ಧಾರೆ. ಅಲ್ಲದೇ ಇಲ್ಲಿನ ವಿವಿಧತೆ, ವೈವಿಧ್ಯತೆ, ಸಂಸ್ಕಾರ ಅನೇಕ ರಾಷ್ಟ್ರಗಳಿಗೆ ಅನುಕರಣೀಯವಾಗಿದೆ. ಹೀಗೆ ಎಲ್ಲದರಲ್ಲಿಯೂ ಪ್ರಗತಿ ಸಾಧಿಸಿದ ಭಾರತ ಎಂದೋ ವಿಶ್ವ ಗುರು ಆಗಬೇಕಿತ್ತು. ಆದರೆ ಇಂದಿಗೂ ನಾವು ಇನ್ನೂ ವಿಶ್ವ ಗುರು ಆಗುವುದರ ಇದ್ದೇವೆ. ಹಾಗಾದರೆ ವಿಶ್ವ ಗುರು ಆಗದೆ ಇರಲು ಪ್ರಮುಖ ಏನು? ಭಾರತದಲ್ಲಿ ಜಾತೀಯತೆ ಪ್ರಬಲವಾಗಿ ಬೇರೂರಿದೆ.
ಹೀಗಾಗಿಯೇ ಭಾರತ ಜಾತಿ ಧರ್ಮಗಳ ತವರು ಎನಿಸಿಕೊಂಡಿದೆ. ಇಲ್ಲಿ ನೂರಾರು ಜಾತಿ ಉಪ ಜಾತಿಗಳಿವೆ. ದೇಶದ ಉನ್ನತಿಗೆ ಜೇನುಗೂಡಾಗ ಬೇಕಾದ ಜಾತಿಗಳು ಇಂದು ದೇವರ ಹೆಸರಿನಲ್ಲಿ, ಹಬ್ಬ ಹರಿದಿನಗಳ ಆಚರಣೆ ವಿಚಾರದಲ್ಲಿ ಕೋಮು ಗಲಭೆ ಮಾಡಿಕೊಂಡು ಅಪಾರ ಪ್ರಮಾಣ ಆಸ್ತಿ, ಪಾಸ್ತಿ ಹಾನಿ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಧಕ್ಕೆ ನೀಡುತ್ತಿವೆ. ಆದ್ದರಿಂದ ಭಾರತ ವಿಶ್ವ ಗುರು ಹೊಂದಲು ಜಾತೀಯತೆ ಒಂದು ಕಗ್ಗಂಟಾಗಿ ಪರಿಣಮಿಸುತ್ತಿದೆ.
ಕೋಮುವಾದ: ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮಗಳನ್ನು ಗೌರವಿಸಿ ನಾನೊಬ್ಬ ಭಾರತೀಯ ಎಂಬ ಸಾಮರಸ್ಯ ಮತ್ತು ಸೌಹಾರ್ದತೆಯ ಭಾವನೆ ಇಂದಿನ ಯುವ ಜನಾಂಗಕ್ಕೆ ಅಗತ್ಯವಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಕೋಮುವಾದದ ಆರ್ಭಟ ಅಲೆ ಹೆಚ್ಚುತ್ತಿದೆ. ಪ್ರಜ್ಞಾವಂತ ಯುವ ಜನರೇ ಕೋಮುವಾದಕ್ಕೆ ಕುಮ್ಮಕ್ಕು ನೀಡಿ, ಧರ್ಮ ಧರ್ಮಗಳ ನಡುವೆ ಪರಸ್ಪರ ದ್ವೇಷ, ನಿಂದನೆಯಲ್ಲಿ ತೊಡಗಿಕೊಂಡು ಸಮಾಜ ದಲ್ಲಿ ಅಶಾಂತಿ ಉಂಟು ಮಾಡುತ್ತಿದ್ಧಾರೆ. ಸಾಮಾಜಿಕ ಜಾಲತಾಣಗಳಲ್ಲಂತ್ತು ಕೋಮು ಪ್ರಚೋದನೆಗಳ ದ್ವೇಷದ ಜ್ವಾಲೆ ಧಗಧಗನೆ ಉರಿದು ದೇಶದಲ್ಲಿನ ಸಾಮರಸ್ಯದ ಸೇತುವೆಯನ್ನು ಸುಟ್ಟು ಹಾಕುತ್ತಿದೆ. ಹೀಗಾಗಿ ದೇಶದ ಸರ್ವಾಂಗೀಣ ಏಳ್ಗೆಗೆ ಕೋಮುವಾದ ನುಂಗಲಾರದ ತುತ್ತಾಗಿದೆ.
ಶೋಷಣೆ: ಶತ ಶತಮಾನಗಳಿಂದಲೂ ದೇಶದಲ್ಲಿ ಶೋಷಣೆಯ ಜಿಡ್ಡು ಅಂಟಿಕೊಂಡಿದೆ. ಸ್ವಾತಂತ್ರ್ಯ ದೊರಕಿ ಏಳು ದಶಕಗಳೇ ಉರಳಿದರು ಭಾರತದಲ್ಲಿ ಶೋಷಣೆ ಎಂಬ ಪದ ಮುಕ್ತವಾಗುತ್ತಿಲ್ಲ. ಮಹಿಳೆಯರ ಮೇಲೆ, ಹಿಂದುಳಿದ ಜನರ ಮೇಲೆ, ದಿನ ದಲಿತರ ಮೇಲೆ, ನಿರ್ಗತಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಿಂಸೆ, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗಳು ಸದಾ ಸದ್ದು ಮಾಡುತ್ತಲೇ ಇರುತ್ತವೆ. ಇದರಿಂದಾಗಿ ದೇಶದ ಶ್ರೇಯೊಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತಿದೆ.
ಬಂದ್‌ಗಳು: ದೇಶದಲ್ಲಿ ಇತ್ತೀಚೆಗೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಸಾಕು ಬಂದ್ ಮೇಲೆ
ಬಂದ್‌ಗೆ ಕರೆ ನೀಡಲಾಗುತ್ತಿದೆ. ಒಮ್ಮೊಮ್ಮೆ ಬಂದ್ ವೇಳೆ ಹೋರಾಟಗಾರರು ಮಾಡುವ ಪ್ರತಿಭಟನೆಗಳು, ಹೋರಾಟಗಳು, ಧರಣಿ ಸತ್ಯಾಗ್ರಹಗಳು ಉಗ್ರ ಸ್ವರೂಪಕ್ಕೆ ತಾಳುತ್ತವೆ. ಹಿಂಸೆ, ಗಲಭೆಗಳಿಗೆ ಸಂಭವಿಸಿ ಸರಕಾರದ ಮತ್ತು ಸಾರ್ವಜನಿಕರ ಆಸ್ತಿಗಳು ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿವೆ. ಕೋಟ್ಯಂತರ ಹಣ ನಷ್ಟವಾಗಿ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ.
ಭ್ರಷ್ಟಾಚಾರ: ಭಾರತಕ್ಕೆ ಭ್ರಷ್ಟಾಚಾರದ ಭೂತ ಹೆಗಲೇರಿ ಕುಳಿತಿದೆ. ಈ ಪೆಡಂಭೂತವನ್ನು ನಿಯಂತ್ರಿಸಲು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಾಕಷ್ಟು ಶ್ರಮಿಸು ತಿzರೆ. ಹಂತ ಹಂತವಾಗಿ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರುತ್ತಿದ್ಧಾರೆ. ಅದಾಗ್ಯೂ ಭ್ರಷ್ಟಾಚಾರ ದ ಬೇಲಿ ಹಬ್ಬುತ್ತಲೇ ಇದೆ. ವರದಿ ಯೊಂದರ ಪ್ರಕಾರ 2001 ರಿಂದ 2015 ರವರೆಗೆ ಶೇಕಡಾ 54 ಸಾವಿರಕ್ಕೂ ಅಧಿಕ ಭ್ರಷ್ಟಾಚಾರ ಪ್ರಕರಣಗಳು ದಾಖಲೆ ಆಗಿವೆ ಎಂದು ತಿಳಿದೆ. ಕೆಲವು ಸಮೀಕ್ಷೆಗಳು ನೀಡಿದ ವರದಿಗಳ ಪ್ರಕಾರ ಅತಿ ಹೆಚ್ಚು ಭ್ರಷ್ಟಾಚಾರ ನಮ್ಮ ದೇಶದಲ್ಲಿಯೇ ನಡೆಯುತ್ತಿದೆ ಎಂಬುದು ಸುದ್ದಿ ಇದೆ. ಇದೂ ಕೂಡ ಭಾರತ ವಿಶ್ವ ಗುರು ಆಗದೇ ಇರಲು ಪ್ರಮುಖ ಕಾರಣ ಎನ್ನಬಹುದು.
ಶಿಕ್ಷಣದ ಕೊರತೆ: ಭಾರತ ವಿಜ್ಞಾನ ತಂತ್ರಜ್ಞಾನ ದೆಡೆಗೆ ಸಾಗುತ್ತಿದೆ. ಆದರೂ ಶಿಕ್ಷಣ ಕ್ಷೇತ್ರದಲ್ಲಿ
ಹೇಳಿ ಕೊಳ್ಳುವಷ್ಟು ಸಾಧನೆ ಮಾಡಿಲ್ಲ. ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ತುಂಬಾ ಕಡಿಮೆ ಇದೆ. ಭಾರತ ಹಳ್ಳಿಗಳ ದೇಶ. ಹೀಗಾಗಿ ಗ್ರಾಮೀಣ ಭಾಗ ದಲ್ಲಿನ ಜನತೆಗೆ ಸಮರ್ಪಕವಾದ ಶಿಕ್ಷಣ ದೊರಕು ತ್ತಿಲ್ಲ. ಆದ್ದರಿಂದ ಯುವ ಜನಾಂಗ ಶಿಕ್ಷಣ ವಂಚಿತ ರಾಗಿದ್ಧಾರೆ.
ಅನಕ್ಷರತೆಯಿಂದ ಬಡತನ ಉಂಟಾಗಿ ಕೊಲೆ ಸುಲಿಗೆ, ದರೋಡೆ ನಡೆಯುತ್ತಲೇ ಇವೆ.ಇನ್ನೂ ಕೆಲವುಕಡೆ
ಮಕ್ಕಳು ಬಾಲ ಕಾರ್ಮಿಕತೆಗೆ ಬಲಿ ಆಗುತಿದ್ಧಾರೆ. ಅನಕ್ಷರತೆಯಿಂದ ಬಾಲ್ಯ ವಿವಾಹ, ಮೌಢ್ಯಾಚರಣೆ, ಅಂಧ ಕಾರ ಇನ್ನೂ ಜೀವಂತ ಇದೆ. ಆದ್ದರಿಂದ ಅನಿಷ್ಟ ಆಚರಣೆಗಳು ದೇಶಕ್ಕೆ ಮಾರಕ ವಾಗಿದೆ.
ರಾಷ್ಟ್ರೀಯತೆಯ ಕೊರತೆ: ಒಂದು ದೇಶದ ಅವನತಿ ಅಥವಾ ಪ್ರಗತಿ ಹೊಂದಬೇಕಾದರೆ ಆ ದೇಶದ ಯುವ ಸಮೂಹದ ಪಾತ್ರ ಬಲು ಮುಖ್ಯ. ನಮ್ಮ ಭಾರತದಲ್ಲಿ ಶೇಕಡಾ ಅರ್ಧದಷ್ಟು ಯುವ ಜನತೆಯಿಂದ ತುಂಬಿದೆ. ಆದರೆ ಇವರಲ್ಲಿ ರಾಷ್ಟ್ರಾಭಿಮಾನ, ನೆಲ, ಜಲ, ಭಾಷೆ ಬಗ್ಗೆ ಭಕ್ತಿ, ಕಾಳಜಿ, ಪ್ರೀತಿ ಕಾಣುತ್ತಿಲ್ಲ. ನಮ್ಮ ದೇಶದ ಅನ್ನ ತಿಂದು ಪರದೇಶಗಳಿಗೆ ಜೈಕಾರ ಹಾಕುವ ಯುವ ಸಮೂಹ ಇತ್ತಿಚೆಗೆ ಹೆಚ್ಚುತ್ತಿದೆ. ಇದು ದೇಶದ ಬೆಳವಣಿಗೆಗೆ ಅಪಾಯಕಾರಿಯಾಗಿದೆ. ಇನ್ನೂ ತಮ್ಮ ಹರಿತವಾದ ಬರವಣಿಗೆಯ ಮೂಲಕ ತಿದ್ದಿ, ತಿಡಿ, ಸಮಾಜವನ್ನು ಒಗ್ಗಡಿಸಿ, ಮನುಜ ಮತ ವಿಶ್ವ ಪಥ ಸಾರಬೇಕಾದ ಚಿಂತಕರು, ಸಾಹಿತಿಗಳು ಪ್ರಸ್ತುತ ದಿನಗಳಲ್ಲಿ ಎಡ ಪಂಥ, ಬಲ ಪಂಥ ಎಂದು ಗುರುತಿಸಿಕೊಂಡು ಜಾತಿ, ಧರ್ಮಗಳಿಗೆ ಸಿಮಿತವಾಗಿ ಭಾವೈಕ್ಯತಾ ದೇಶ ಕಟ್ಟಲು ಉತ್ತಮ ಕೃತಿಗಳು, ಚಿಂತನೆಗಳು, ಏಕತೆ ಕುರಿತು ರಾಷ್ಟ್ರೀಯ ಸಮ್ಮೇಳನ ಗಳು, ವಿಚಾರ ಗೋಷ್ಠಿಗಳು
ಹಮ್ಮಿಕೊಳ್ಳದೇ ಇರುವುದು ಕೂಡ ಭಾರತ ವಿಶ್ವ ಗುರುವಾಗದೆ ಇರಲು ಮುಖ್ಯ ಕಾರಣ ಎನ್ನಬಹುದು.
ಆದ್ದರಿಂದ ಇನ್ನೂ ಮುಂದೆಯಾದರೂ ದೇಶದ ಜನರು ಆಂತರಿಕ ಜಗಳ ಬಿಟ್ಟು, ಬಲಿಷ್ಠ ಭಾರತಕ್ಕೆ ಪಟ ತೊಟ್ಟು ನಾವೆಲ್ಲರೂ ಒಂದು ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯತೆ, ದೇಶಾಭಿ ಮಾನ, ನೆಲ, ಜಲ, ಭಾಷೆ ಬಗ್ಗೆ ಗೌರವ, ಪ್ರೀತಿ ಬೆಳೆಸಿಕೊಂಡು ಕೋಮುವಾದ, ಮತಿಯವಾದ, ಶೋಷಣೆ, ತಾರತಮ್ಯ, ಅಸಮಾನತೆ ಎಲ್ಲವನ್ನೂ ಮುಕ್ತಗೊಳಿಸಿ, ಎಡ ಬಲವನ್ನು ಬಿಟ್ಟು ಸಮ ಬಲದತ್ತ ಸಾಗಿದರೆ ಮಾತ್ರ ಭಾರತ ವಿಶ್ವ ಗುರು ಆಗುಲು ಸಾಧ್ಯ ವಾಗುತ್ತದೆ.