ವಿರಾಜಯಾನ
ವಿರಾಜ್ ಕೆ ಅಣಜಿ
virajkvishwavani@gmail.com
ಇಂದಿಗೆ ಸರಿಯಾಗಿ ಮೂವತ್ತು ವರ್ಷದ ಹಿಂದಿನ ಮಾತು. ಅಂದರೆ, ಜೂನ್ 24, 1991. ಭಾರತವೆಂಬ ಬೃಹತ್ ದೇಶ,
ಆರ್ಥಿಕವಾಗಿ ಜರ್ಜರಿತವಾಗಿ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. Financial Emergency ಘೋಷಿಸದೇ ಬೇರೆ ದಾರಿಯೇ ಇಲ್ಲದಂಥ ಸಂದರ್ಭವದು. ಇನ್ನೇನು ಸಾವಿನ ಅಂಚಿನಲ್ಲಿರುವ ವ್ಯಕ್ತಿಯನ್ನು ಉಳಿಸಲು ಕೊನೆಯ ಬಾರಿ ವೈದ್ಯರು ಪ್ರಯತ್ನಿಸು ವಂತೆ, ಭಾರತದ ಆರ್ಥಿಕ ದುಸ್ಥಿತಿ ಸರಿಮಾಡಲು ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಬಜೆಟ್ ಪ್ರತಿ ಹಿಡಿದು ನಿಂತಿದ್ದರು.
ಅಂದು ಪಾರ್ಲಿಮೆಂಟ್ ಭವನದ ಗೋಡೆಗಳೂ ಸೇರಿ ದೇಶವೇ ಕಿವಿಯಗಲಿಸಿ ಅವರೇನು ಹೇಳುತ್ತಾರೆ ಎಂದು ಕಾದಿದ್ದವು. ಎಂದಿನ ಕೀರಲು ದನಿಯಲ್ಲೇ ಮಾತು ಆರಂಭಿಸಿದ್ದ ಸಿಂಗ್,”Victor Hugo once said, no power on earth can stop an idea whose time has come. I suggest to this august house that, the emergence of India has major economic power in the world happens to be one such idea. Let the whole world hear it clear and loud, India is now awake. We shall prevail,
we shall overcome” ಎಂದಿದ್ದರು, ಅದೊಂದು ರೀತಿ ಸಿಂಹ ಘರ್ಜನೆಯಂತೆ ಕೇಳಿತ್ತು!
ಅದೊಂದು ಮಾತು, ದೇಶವಾಗಿ ತಮಗಿನ್ನೂ ಭವಿಷ್ಯವಿದೆ, ತಾನು ದಿವಾಳಿಯಾಗಿ ಇತಿಹಾಸದಲ್ಲಿ ಉಳಿದು ಹೋಗಲಾರೆವು
ಎಂಬ ಭರವಸೆಯನ್ನು ಭಾರತೀಯರಲ್ಲಿ ಮೂಡಿಸಿತ್ತು. ಅಷ್ಟಕ್ಕೂ ಸಿಂಗ್ ಅವರ ಆ ಮಾತಿಗೇಕೆ ಅಷ್ಟು ಮಹತ್ವ ಬಂದಿತ್ತು? ಅಂಥ ಸಂಕಷ್ಟಕ್ಕೆ ನಾವು ಹೋಗಿ ತಲುಪಿದ್ದೇಕೆ? ನಂತರ ಭಾರತವನ್ನು ಮತ್ತೆ ಆರ್ಥಿಕ ಶಕ್ತಿಯಾಗಿ ಬದಲಿಸಿದ ನಿರ್ಧಾರಗಳೇನು? ಮೂವತ್ತು ವರ್ಷಗಳ ಹಿಂದೆ ತನ್ನ ಪಥ ಬದಲಿಸಿ, ವಿಶ್ವ ಭೂಪಟದಲ್ಲಿ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ವಿರಾಜಮಾನ ವಾಗಿರುವ ಭಾರತದ ಬಗ್ಗೆ ಇಂದಿನ ಈ ಯಾನ.
ಭಾರತದ ಅಂದಿನ ದುಸ್ಥಿತಿ ಒಮ್ಮಿಂದೊಮ್ಮೆಲೇ ಬಂದಿದ್ದಲ್ಲ. ಅದರಲ್ಲಿ ಸ್ವಾತಂತ್ರ್ಯಾ ನಂತರ ಸರಕಾರಗಳು ಕೈಗೊಂಡ ನೀತಿಗಳ ಪಾತ್ರ ದೊಡ್ಡದಿದೆ. ಭಾರತವನ್ನು ಒಂದು ಕುಟುಂಬಕ್ಕೆ ಹೋಲಿಸಿ ಹೇಳಿದರೆ ಇದು ಇನ್ನಷ್ಟು ಸುಲಭವಾಗಿ ಅರ್ಥವಾಗಬಹುದು. ಒಂದು ಕುಟುಂಬವಿರುತ್ತದೆ ಎಂದುಕೊಳ್ಳಿ. ಅದು ಕುಟುಂಬದ ಯಜಮಾನನ ಆದಾಯದಿಂದ ನಡೆಯುತ್ತಿರುತ್ತದೆ.
ಕ್ರಮೇಣ ಕುಟುಂಬದ ಜನಸಂಖ್ಯೆ ಹೆಚ್ಚುತ್ತದೆ, ಅಗತ್ಯಗಳ ಪಟ್ಟಿ ಏರುತ್ತದೆ. ಖರ್ಚುಗಳು ದಿನೇ ದಿನೆ ಏರಿಕೆ ಆಗುತ್ತಿರುತ್ತದೆ. ಆದರೆ, ಯಜಮಾನನ ಆದಾಯ ಮಾತ್ರ ಅಷ್ಟೇ. ಆದಾಯ ಆರಕ್ಕೇರದಿದ್ದರೂ ಮೂರಕ್ಕಂತೂ ಆಗಾಗ ಖಂಡಿತ ಇಳಿಯುತ್ತಿತ್ತು. ಇದೇ
ಪರಿಸ್ಥಿತಿ ಮುಂದುವರಿದರೆ, ಎಷ್ಟು ದಿನ ತಾನೇ ಆ ಕುಟುಂಬ ಅದನ್ನು ತಡೆದುಕೊಳ್ಳಲು ಸಾಧ್ಯ? ಒಂದಲ್ಲ ಒಂದು ದಿನ ಖಜಾನೆ ಖಾಲಿ ಆಗುವುದು ಖಚಿತವಲ್ಲವೇ? ಕೂತು ತಿಂದರೆ ಕುಡಿಕೆ ಹೊನ್ನು ಕೂಡ ಕಡಿಮೆಯೇ ಎಂಬುದೇ ಭಾರತದ ಪಾಲಿಗೂ
ನಿಜವಾಗಿತ್ತು. ಇಲ್ಲಿ ಕುಟುಂಬದ ಯಜಮಾನನೆಂದರೆ ಭಾರತ(ಕೇಂದ್ರ) ಸರಕಾರ. ಕೇವಲ ಸರಕಾರವೊಂದೇ ದುಡಿಯಬೇಕು, ತಾನೊಂದೇ ಎಲ್ಲದನ್ನೂ ಸಲಹಬೇಕು ಎಂಬುದೆಲ್ಲ ಎಷ್ಟು ದಿನ ಸಾಧ್ಯವಲ್ಲವೇ? 1947ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ
ಸೋಷಿಯಲಿಸ್ಟ್ ಎಕಾನಮಿ ಪಾಲಿಸಿಕೊಂಡು ಬಂದಿದ್ದ ಭಾರತದ ಖಜಾನೆ 1990 ಬರುವಷ್ಟರಲ್ಲಿ ಬಹುತೇಕ ಬರಿದಾಗ ತೊಡಗಿತ್ತು.
ಜಿಡಿಪಿ (ವರ್ಷದ ಅವಧಿಯಲ್ಲಿ ಉತ್ಪಾದಿಸಲಾದ ಉತ್ಪನ್ನ ಮತ್ತು ಒದಗಿಸಲಾದ ಸೇವೆಗಳ ವಹಿವಾಟಿನ ಒಟ್ಟು ಹಣಕಾಸು ಮೌಲ್ಯ)ಯ ಶೇಕಡ 23ರಷ್ಟು ಹಣವನ್ನು ಸರಕಾರವು ವಿದೇಶಗಳಿಂದ ವಸ್ತುಗಳ ಖರೀದಿಗೆಂದು ಖರ್ಚು ಮಾಡಿಕೊಳ್ಳುತ್ತಿತ್ತು.
ಭಾರತದ ತಲಾ ಆದಾಯವು ಕೇವಲ ಶೇ.1.3ರಷ್ಟಿತ್ತು. ಆರ್ಥಿಕ ಅಭಿವೃದ್ಧಿಯ ದರ ಕೂಡ ಶೇ.3.5ರಷ್ಟಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ವಿದೇಶಿ ವಿನಿಮಯ ಸಂಗ್ರಹ ಇನ್ನು ಕೇವಲ ಮೂರು ವಾರಕ್ಕಾಗುವ (ಆಮದು ಮಾಡಿಕೊಂಡಾಗ ನೀಡುವಷ್ಟು ಹಣ) ಮಟ್ಟಿಗೆ ಬಂದು ತಲುಪಿತ್ತು. ಅಂದರೆ, ಆರ್ಥಿಕ ತುರ್ತು ಪರಿಸ್ಥಿತಿಯ ಬಾಗಿಲಿಗೆ ಭಾರತ ಬಂದು ನಿಂತಿತ್ತು. ಇದೆಲ್ಲದರ ಪೂರ್ವದಲ್ಲಿ ಭಾರತದಲ್ಲಿ ರಾಜಕೀಯ ಮೇಲಾಟಗಳೂ ಕೂಡ ಆರಂಭವಾಗಿದ್ದವು.
1984ರಲ್ಲಿ 514ರಲ್ಲಿ ಬರೋಬ್ಬರಿ 404ಲೋಕಸಭಾ ಸ್ಥಾನಗಳನ್ನು ಗೆದ್ದು, ಏಕಮೇವ ಚಕ್ರಾಧಿಪತಿಯಂತೆ ಪ್ರಧಾನಿ ಯಾಗಿದ್ದ ರಾಜೀವ್ ಗಾಂಧಿಯವರ ಆಡಳಿತದ ಅವಧಿಯ ಬಗ್ಗೆ ನೂರೆಂಟು ಟೀಕೆಗಳು ವ್ಯಕ್ತವಾಗಿದ್ದವು. ಭೂಪಾಲ್
ಅನಿಲ ದುರಂತ, ಎಲ್‌ಟಿಟಿಯ ಜತೆ ಸಂಘರ್ಷ, ಬೊಫೋರ್ಸ್ ಹಗರಣ ಗಳಂಥ ಹಲವಾರು ಸಂಕಷ್ಟಗಳಿದ್ದವು. ಇದರಿಂದಾಗಿ ರಾಜೀವ್ ಗಾಂಧಿ ಸಾರಥ್ಯದ ಕಾಂಗ್ರೆಸ್ 1989ರ ಸಾರ್ವತ್ರಿಕ ಚುನಾವಣೆಯಲ್ಲಿ ನೆಲಕಚ್ಚಿತ್ತು. ಕೇವಲ 197 ಸೀಟು ಪಡೆದಿದ್ದ ರಾಜೀವ್ ಗಾಂಧಿ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅದುವರೆಗೂ ಏಕಪಕ್ಷದ ಆಡಳಿತ ಕಂಡಿದ್ದ ಭಾರತದಲ್ಲಿ ಸಮ್ಮಿಶ್ರ ಸರಕಾರದ ಕಾಲ ಆರಂಭವಾಗಿತ್ತು. ನ್ಯಾಷನಲ್ ಫ್ರಂಟ್ ಹೆಸರಲ್ಲಿ ಐದು ಪಕ್ಷಗಳು ಸೇರಿಕೊಂಡು ವಿ.ಪಿ. ಸಿಂಗ್ ಸಾರಥ್ಯದಲ್ಲಿ ಸರಕಾರ ರಚಿಸಿದ್ದವು. ಅಡ್ವಾಣಿಯವರ ಬಂಧನದ
ಕಾರಣ ಅವರು ಸರಕಾರ ಬಹುಮತ ಕಳೆದುಕೊಂಡಿತ್ತು. ಆಗ ಚಂದ್ರಶೇಖರ್ ಪ್ರಧಾನಿ ಯಾದರು, ಅದಕ್ಕೆ ಕಾಂಗ್ರೆಸ್‌ನ (ರಾಜೀವ್‌ಗಾಂಧಿ) ಬಾಹ್ಯ ಬೆಂಬಲವಿತ್ತು. ಇದಿಷ್ಟೂ ಕೂಡ ಭಾರತದ ಆರ್ಥಿಕತೆ ಐಸಿಯು ಕಡೆ ವಾಲುತಿದ್ದ ಸಂದರ್ಭದಲ್ಲಿ ಆದಂಥ ಬೆಳವಣಿಗೆಗಳು.
1991ರ ಮಾರ್ಚ್ ವೇಳೆಗೆ, ಭಾರತದ ಬಳಿ ಕೇವಲ 2500ಕೋಟಿಯಷ್ಟು ಹಣ ಉಳಿದಿತ್ತು. ವಿದೇಶಿ ವಿನಿಮಯ ಶೇ.23 ಮತ್ತು ಆಂತರಿಕ ಸಾರ್ವಜನಿಕ ಸಾಲದ ಹೊರೆ ಶೇ.55ರಷ್ಟು ತಲುಪಿತ್ತು. ಇನ್ನು ದೇಶವನ್ನು ನಡೆಸಲು ಸಾಧ್ಯವೇ ಇಲ್ಲ ಎನ್ನುವಂತಾ ದಾಗ, ಅಂದಿನ ಹಣಕಾಸು ಸಚಿವ ಯಶವಂತ ಸಿನ್ಹಾ ಮತ್ತು ಆರ್‌ಬಿಐ ಅಧಿಕಾರಿಗಳು ವಾಷಿಂಗ್ಟನ್ ಡಿಸಿಯಲ್ಲಿರುವ ಅಂತಾ ರಾಷ್ಟ್ರೀಯ ಹಣಕಾಸು ಸಂಸ್ಥೆಯ(ಐಎಂಎಫ್) ಬಾಗಿಲು ಬಡಿದಿದ್ದರು. ಭಾರತದ ಬಳಿ ಇದ್ದ ಚಿನ್ನದ ದಾಸ್ತಾನನ್ನು ಅಡವಿಟ್ಟು, ಭಾರತಕ್ಕೆ ಹಣವನ್ನು ತರುವ ಉದ್ದೇಶ ಅವರದಾಗಿತ್ತು.
ಅದೇ ಸಮಯದಲ್ಲಿ, ನೇರ ರಾಷ್ಟ್ರಪತಿಗಳ ಬಳಿ ಹೋದ ರಾಜೀವ್ ಗಾಂಧಿ, ಚಂದ್ರಶೇಖರ್ ಸರಕಾರಕ್ಕೆ ತಮ್ಮ ಬೆಂಬಲ ಹಿಂಪಡೆದ ಪತ್ರ ನೀಡಿದ್ದರು. ಈ ಸುದ್ದಿ ಕೇಳಿದ್ದ ಐಎಂಎಫ್ ಅಧಿಕಾರಿಗಳು, ನೀವು ಯಾವ ಸರಕಾರದ ಪರವಾಗಿ ನಮ್ಮ ಬಳಿ ಬಂದಿದ್ದೀರಿ ಎಂದು ಕೇಳಿ, ಎಲ್ಲರನ್ನೂ ಬರಿಗೈಯಲ್ಲಿ ವಾಪಸ್ ಕಳಿಸಿದ್ದರು. ಗಟ್ಟಿ ಸರಕಾರ, ಸಮರ್ಥ ಆರ್ಥಿಕತೆ, ಕನಿಷ್ಠ ಬಜೆಟ್
ಕೂಡ ಇಲ್ಲದೆಯೇ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಭಾರತ ಸಿದ್ಧವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವೆ ಎಂದು ರಾಜೀವ್ ಗಾಂಧಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದರು.
ಇದೇ ವೇಳೆಯಲ್ಲೇ ಅಂದರೆ, 1991 ಮೇ 21ರಂದು ಶ್ರೀಪೆರಂಬುದೂರಿನಲ್ಲಿ ಎಲ್‌ಟಿಟಿಯ ಮಾನವ ಬಾಂಬ್‌ಗೆ ರಾಜೀವ್
ಬಲಿಯಾದರು. 244 ಸ್ಥಾನ ಗಳಿಸಿದ ಕಾಂಗ್ರೆಸ್‌ನಿಂದ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿ ಜೂನ್ 20ರಂದು ಆಯ್ಕೆ ಯಾಗಿದ್ದರು. ಅಂದೇ ಅವರು ಭಾರಿ ವಿವಾದಕ್ಕೆ ಕಾರಣವಾಗಿದ್ದ ಐಎಂಎಫ್ ಸಾಲವನ್ನು ಸ್ವೀಕರಿಸಲು ನಿರ್ಧರಿಸಿದ್ದರು. ಅಂದು ಪ್ರಧಾನಿ ಸ್ಥಾನ ನಿಜಕ್ಕೂ ಬೆಂಕಿಯ ಕಾವಲಿಯಾಗಿತ್ತು. ರಾಷ್ಟ್ರಪತಿಗಳಿಂದ ಪ್ರಧಾನಿಯಾಗಿ ನೇಮಕಗೊಂಡ ನಂತರ, ಸೋನಿಯಾ
ಗಾಂಧಿಯವರನ್ನು ಭೇಟಿಯಾದ ಪಿವಿಎನ್ ಅವರಿಗೆ ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದ ನರೇಶ್ ಚಂದ್ರ ತುರ್ತು ಕರೆ ಮಾಡಿದ್ದರು.
ಅದು, ಪ್ರಧಾನಿ ಆಗಲಿರುವವರಿಗೆ ಕ್ಯಾಬಿನೆಟ್ ಸೆಕ್ರೆಟರಿ ನೀಡುವ ಒಂದು ಸಹಜ ಬ್ರೀಫಿಂಗ್ ಅಥವಾ ಮೀಟಿಂಗ್ ಮಾತ್ರ ಆಗಿರಲಿಲ್ಲ. ಅದು ದೇಶದ ಭವಿಷ್ಯವನ್ನೇ ನಿರ್ಧರಿಸುವ ಚರ್ಚೆಯಾಗಿತ್ತು. ಹಣಕಾಸು ಕಾರ್ಯದರ್ಶಿ ಮತ್ತಿತರ ಅಧಿಕಾರಿಗಳು ದೇಶದ ಪರಿಸ್ಥಿತಿಯ ಬಗ್ಗೆ ಪಿವಿಎನ್ ಅವರ ಬಳಿ ಸರಿಯಾಗಿ 90 ನಿಮಿಷಗಳ ಭ್ರೀಫಿಂಗ್ ನೀಡಿದ್ದರು. ಇನ್ನು ಮೂರು ವಾರ ಗಳಷ್ಟೇ ದೇಶವನ್ನು ನಿಭಾಯಿಸು ವಷ್ಟು ಆರ್ಥಿಕ ಸಾಮರ್ಥ್ಯ ಉಳಿದುಕೊಂಡಿದೆ. ಇದನ್ನು ನಿಭಾಯಿಸಲು ಐಎಂಎಫ್ನಿಂದ ಸಾಲ ವನ್ನುಕೇಳಿದ್ದೇವೆ. ಇದು ಸಾಧ್ಯವಾಗಬೇಕು ಎಂದರೆ ಸರಕಾರದ ಮಟ್ಟದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು.
ಇಲ್ಲಿಂದ ಮುಂದೆ ನಿಮ್ಮ ನಿರ್ಧಾರ ಎಂದು ನರೇಶ್ ಚಂದ್ರ ಹೇಳಿದ್ದರು. ಹತ್ತು ನಿಮಿಷ ತಮ್ಮ ಕೆಲ ಅನುಮಾನಗಳನ್ನು ಬಗರಹರಿಸಿಕೊಂಡ ಪಿವಿಎನ್ ಐಎಂಎಫ್ನಿಂದ ಸಾಲ ತರುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದರು. ಪಿವಿಎನ್ ಯಾವರೀತಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ದೆಹಲಿಯ ತೀನ್ ಮೂರ್ತಿ ಭವನದ ಹೊರಗೆ ಕಾಂಗ್ರೆಸ್ ನಾಯಕರು, ಕಾತರದಿಂದ ನಿಂತಿದ್ದರು.
ಅಲ್ಲಿದ್ದ ಪ್ರಣವ ಮುಖರ್ಜಿ, ಅರ್ಜುನ್ ಸಿಂಗ್, ಎಂ.ಎಲ್.ಫತೇದಾರ್ ಅವರಿಗೂ ಕೂಡ ಪಿವಿಎನ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಒಳ್ಳಷ್ಟೂ ಅರಿವಿರಲಿಲ್ಲ.
ದೇಶವನ್ನು ಮತ್ತೆ ಹೇಗೆ ಮೇಲೆತ್ತ ಬೇಕು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಜನೆಗಳು ಸಿದ್ಧವಾಗುತ್ತಿದ್ದವು. ಈಗ ದೇಶಕ್ಕೆ ಸಮರ್ಥ ಹಣಕಾಸು ಮಂತ್ರಿ ಅವಶ್ಯವಿತ್ತು. ಇದನ್ನೆಲ್ಲ ಅರಿತಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಸಿ. ಅಲೆಕ್ಸಾಂಡರ್, ಐ.ಜಿ. ಪಟೇಲ್ ಅವರಿಗೆ ಕರೆ ಮಾಡಿ ಹಣಕಾಸು ಇಲಾಖೆ ಮುನ್ನಡೆಸಲು ಕೇಳಿಕೊಂಡಿದ್ದರು. ಆದರೆ, ತೀವ್ರ ಅನಾರಾಗ್ಯದಿಂದಾಗಿ
ಅವರು ಅಲ್ಲಗೆಳೆದಾಗ, ನಂತರ ಕರೆ ನೇರ ಹೋಗಿದ್ದು ಮನಮೋಹನ್ ಸಿಂಗ್ ಅವರಿಗೆ. ಸ್ವತಃ ಸಿಂಗ್ ಅವರೇ ಹೇಳಿಕೊಂಡಂತೆ, ಆ ಕರೆಯನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ, ಯಾವಾಗ ಪಿವಿಎನ್ ಅವರೇ ಕರೆ ಮಾಡಿ, ನೀವು ಹಣಕಾಸು ಇಲಾಖೆ ನಿರ್ವಹಿಸಿ ಎಂದಾಗ ಸಿಂಗ್ ಮುಂದೆ ಬಂದಿದ್ದರು.
ಅಲ್ಲಿಂದ ಮುಂದೆ, ಸಾಂಪ್ರದಾಯಿಕವಾಗಿ ಭಾರತ ನಡೆಸಿಕೊಂಡು ಬಂದಿದ್ದ ಸಮಾಜವಾಗಿ ನಿಲುವಿನಲ್ಲಿ ಬದಲಾವಣೆ ಆಗಲಿದೆ ಎಂಬುದರ ಮುನ್ಸೂಚನೆ ಕಾಂಗ್ರೆಸ್ಸಿನ ಹಿರಿಯ, ನೆಹರೂ ಅವರ ಕಾಲದ ನಾಯಕರಿಗೆ ತಿಳಿಯಿತು. ಹಣಕಾಸು ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ನಂತರ ಸಿಂಗ್ ಅವರು, ಚೀಟಿಯೊಂದರಲ್ಲಿ ಪಿವಿಎನ್ ಅವರಿಗೆ ಯಾವುದೇ ಕಾರಣಕ್ಕೂ ನಮ್ಮ
ನಿರ್ಧಾರಗಳನ್ನು ಕ್ಯಾಬಿನೆಟ್‌ನಲ್ಲಾಗಲಿ, ಪಕ್ಷದ ಸದಸ್ಯರಿಗಾಗಲಿ ತಿಳಿಸಿಬೇಡಿ ಎಂದು ಮನವಿ ಮಾಡಿಕೊಂಡಿದ್ದರಂತೆ. ನಂತರ, ನೂತನ ಸರಕಾರದ ಬಜೆಟ್‌ನಲ್ಲಿ ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ದೇಶಕ್ಕೆ ಉದಾರೀಕರಣ, ಖಾಸಗೀಕರಣ,
ಜಾಗತೀಕರಣಕ್ಕೆ ದೇಶ ತೆರೆದುಕೊಂಡಿದೆ ಎಂದು ಘೋಷಿಸಿದ್ದರು.
ಆರ್ಥಿಕ ಪುನಸ್ಚೇತನದ ಭಾಗವಾಗಿ ಜೂನ್ 30ರಂದು ಭಾರತದ ರುಪಾಯಿಯನ್ನು ಶೇ. 9ರಷ್ಟು ಅಪಮೌಲ್ಯ ಮಾಡಲಾಯಿತು. ಜುಲೈ 2ರಂದು ಮತ್ತೆ 11.83ರಷ್ಟು ಅಪಮೌಲ್ಯ ಮಾಡಲಾಯಿತು. ವಾಣಿಜ್ಯ ಸಚಿವರಾಗಿದ್ದ ಪಿ.ಚಿದಂಬರಂ ನೂತನ ವ್ಯಾಪಾರ ನೀತಿಯನ್ನು ಘೋಷಿಸಿದ್ದರು. ಇದರಲ್ಲಿ ಕೋಟಾ ವ್ಯವಸ್ಥೆಯನ್ನು ಕಿತ್ತು ಹಾಕಿ, ರಫ್ತಿನ ಮೇಲಿದ್ದ ನಿರ್ಬಂಧವನ್ನೂ
ತೆಗೆಯಲಾಯಿತು. ಇದೆಲ್ಲವೂ ಐಎಂಎಫ್ ಹೇಳಿದ್ದ ಮತ್ತು ಹಾಕಿದ್ದ ನಿಯಮಗಳ ಅನುಸಾರವೇ ನಡೆದಿತ್ತು. ತಮ್ಮ ಬಜೆಟ್‌ನಲ್ಲಿ ಸಿಂಗ್ ಅವರು ಪೆಟ್ರೋಲ್, ಡಿಸೇಲ್ ಮತ್ತು ಎಲ್‌ಪಿಜಿ ಮೇಲಿನ ತೆರಿಗೆಯನ್ನು ಶೇ.26ರಷ್ಟು ಏರಿಸಿ ದೇಶದ ಹುಬ್ಬೇರುವಂತೆ ಮಾಡಿದ್ದರು.
ಪಿವಿಎನ್ ಅವರು ನೀಡಿದ್ದ ಮುಕ್ತ ಸ್ವಾತಂತ್ರ್ಯವನ್ನು ಮನಮೋಹನ್ ಸಿಂಗ್ ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದರು. ಇಬ್ಬರೂ ಸೇರಿ ನೆಹರೂ ಅವರ ತತ್ವಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಪಕ್ಷದ ಹಲವು ಹಿರಿಯ ನಾಯಕರು ಸೊಲ್ಲೆತ್ತಿದ್ದರು. ಹೀಗೆಲ್ಲ ಮಾಡಿದರೆ ಇನ್ನೆಂದೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದೆಲ್ಲ ಹೆದರಿಸಲು ನೋಡಿದರು.
ಅದಕ್ಕೆಲ್ಲ ಪಿವಿಎನ್ ಸೊಪ್ಪು ಹಾಕಲಿಲ್ಲ. ಸ್ವಪಕ್ಷೀಯರೇ ಕೊಂಕು ಮಾಡುತ್ತಿದ್ದರೂ ಕೂಡ ತಮ್ಮ ನಿರ್ಧಾರದಲ್ಲಿ ಅಚಲ ವಾಗಿದ್ದ ಪಿವಿಎನ್ ಪ್ರತಿಪಕ್ಷದ ನಾಯಕರ ಸಭೆ ಕರೆದರು.
ರಾಜಕೀಯ ವೈರಿಗಳಾದರೂ ವಿ.ಪಿ.ಸಿಂಗ್, ಚಂದ್ರಶೇಖರ್ ಮತ್ತು ಎಲ್.ಕೆ. ಅಡ್ವಾಣಿ ಅವರನ್ನು ಕೂರಿಸಿಕೊಂಡು ದೇಶಕ್ಕಾಗಿ ತಾವು ತೆಗೆದುಕೊಂಡು ನಿರ್ಧಾರದ ಬಗ್ಗೆ ತಿಳಿಸಿದ್ದರು. ಇನ್ನೊಂದು ದಿನ, ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಯಶವಂತ್
ಸಿನ್ಹಾ, ಸುರ್ಜೀತ್ ಅವರನ್ನೂ ಕರೆದು ದೇಶ ಮುನ್ನಡೆಯುತ್ತಿರುವ ದಿಕ್ಕು ಬದಲಾಗಲಿದೆ ಎಂಬುದನ್ನು ಅರ್ಥ ಮಾಡಿಸಿದ್ದರು. ಅಂದು ಕೈಗೊಂಡ ನಿರ್ಧಾರಗಳಿಂದಾಗಿ, ಭಾರತವಿಂದು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ. ಮೂವತ್ತು
ವರ್ಷಗಳ ಹಿಂದೆ, ಈ ದಿನ ಆಗಿದ್ದ ಕೈಗೊಂಡಿದ್ದ ನಿರ್ಧಾರಗಳತ್ತ ಒಮ್ಮೆ ನೋಡಿದಾಗ ಇಷ್ಟೆಲ್ಲ ಹೇಳಬೇಕೆನಿಸಿತು.