ಸಮಕಾಲೀನ
ಗಣೇಶ್ ಭಟ್, ವಾರಣಾಸಿ
೨೦೧೪ರ ನಂತರದ ಬದಲಾದ ರಾಜಕೀಯ ನಾಯಕತ್ವದಲ್ಲಿ ಭಾರತವು ರಕ್ಷಣಾತ್ಮಕ ಆಟದ ಚಿಪ್ಪಿನಿಂದ ಹೊರಬಂದು ಒಂದಿಷ್ಟು ಆಕ್ರಮಣಶೀಲತೆ ರೂಢಿಸಿಕೊಂಡಿರುವುದನ್ನು ಕಾಣಬಹುದು. ೨೦೧೪ರ ಮೊದಲು ಪಾಕಿಸ್ತಾನದ ಕಡೆಯಿಂದ ಸೈನಿಕರ ಗುಂಡಿನ ದಾಳಿ ಅಥವಾ ಉಗ್ರರ ಆಕ್ರಮಣ ನಡೆದರೆ ಪ್ರತಿದಾಳಿ ನಡೆಸಲು ಭಾರತೀಯ ಸೇನೆಯು ದೆಹಲಿಯಿಂದ ಅನುಮತಿ ಪಡೆಯಬೇಕಾಗುತ್ತಿತ್ತು. ಆದರೆ ಮೋದಿ ಸರಕಾರವು ಪಾಕ್ ದಾಳಿಗಳಿಗೆ ಪ್ರತ್ಯುತ್ತರಿಸುವಲ್ಲಿ ತೀರ್ಮಾನಿಸುವ ಅಧಿಕಾರವನ್ನು ಭಾರತೀಯ ಸೇನೆಗೇ ಕೊಟ್ಟಿದೆ.
ಸ್ವಾತಂತ್ರ್ಯಾನಂತರ ಭಾರತವು ರಕ್ಷಣಾತ್ಮಕ ತಂತ್ರವನ್ನೇ ಅನುಸರಿಸುತ್ತಿತ್ತು. ಪಾಕಿ ಸ್ತಾನವು ಅಕ್ರಮಣ ಮಾಡಿದಾಗ ಭಾರತವು ಪ್ರತಿಕ್ರಿಯೆಯಾಗಿ ಪ್ರತ್ಯಾಕ್ರಮಣ ಮಾಡು ತ್ತಿತ್ತೇ ವಿನಾ, ಅದರ ಮೇಲೆ ಏಕಪಕ್ಷೀಯವಾಗಿ ದಾಳಿ ಮಾಡಿದ್ದಿಲ್ಲ. ಮುಂಬೈ ದಾಳಿಯಿರಲಿ, ಸಂಸತ್‌ನ ಮೇಲಾದ ಆಕ್ರಮಣವೇ ಇರಲಿ ಕಠಿಣ ಶಬ್ದಗಳ ಖಂಡನೆಗೆ ಮಾತ್ರ ಭಾರತದ ಪ್ರತಿಕ್ರಿಯೆ ಸೀಮಿತ ವಾಗುತ್ತಿತ್ತು.
ಭಯೋತ್ಪಾದನೆಯ ವಿರುದ್ಧ ತಮ್ಮ ರಕ್ಷಣೆಗೆ ಅಂತಾರಾಷ್ಟ್ರೀಯ ಸಮುದಾಯವು ಬರಲೆಂದು ಪ್ರಾರ್ಥಿಸುತ್ತಿದ್ದರು ಭಾರತದ ನಾಯಕರು. ಆದರೆ ೨೦೦೧ರ ಸೆಪ್ಟೆಂಬರ್ ೧೧ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್, ಪೆಂಟಗನ್ ಮೊದಲಾದೆಡೆ ಅಲ್ ಖೈದಾ ಉಗ್ರರ ದಾಳಿಯಿಂದಾಗಿ ೨೯೯೭ ನಾಗರಿಕರು ಸಾವಿಗೀಡಾದಾಗ ಆ ಉಗ್ರರ ಮೇಲೆ ಕ್ರಮ ಕೈಗೊಳ್ಳಲು ಅಮೆರಿಕವು ಇತರ ದೇಶಗಳ ಸಹಾಯವನ್ನು ಯಾಚಿಸಲಿಲ್ಲ.
ಬದಲಿಗೆ, ಈ ದಾಳಿಗಳ ಸೂತ್ರಧಾರಿ ಒಸಾಮಾ ಬಿನ್ ಲಾಡೆನ್, ಆತನ ಭಯೋತ್ಪಾದನಾ ಕೂಟವಾದ ‘ಅಲ್ ಖೈದಾ’ ಹಾಗೂ ಅವನಿಗೆ ನೆಲೆ ಕೊಟ್ಟಿದ್ದ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದ ಮೇಲೆ ಯುದ್ಧವನ್ನು ಸಾರಿಯೇಬಿಟ್ಟಿತು. ಪಾಕಿಸ್ತಾನದಲ್ಲಿ ಅಡಗಿದ್ದ ಲಾಡೆನ್ ಅನ್ನು ಕೊಲ್ಲುವವರೆಗೂ ಅಮೆರಿಕ ವಿಶ್ರಮಿಸಲಿಲ್ಲ. ಇಸ್ರೇಲ್ ದೇಶ ವಂತೂ ತನ್ನ ಸೇನೆ ಹಾಗೂ ಪ್ರಜೆಗಳ ಮೇಲೆ ಆಕ್ರಮಣ ಮಾಡಿದ ಪಾತಕಿಗಳು ಯಾವ ದೇಶದಲ್ಲಿ ಅಡಗಿದ್ದರೂ ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ.
ಮೊದಲೆಲ್ಲ ಭಾರತೀಯ ಸೇನೆ ಹಾಗೂ ಬೇಹುಗಾರಿಕಾ ತಂಡಗಳು ಪ್ರತೀಕಾರದ ಪ್ರಸ್ತಾಪಗಳನ್ನು ಮುಂದಿಟ್ಟಾಗ ದೇಶವನ್ನು ಆಳುತ್ತಿದ್ದ ಜನ ನಾಯಕರು ಈ ಯೋಜನೆಗಳಿಗೆ ತಣ್ಣೀರೆರಚುತ್ತಿದ್ದರು. ಮುಂಬೈ ಮಹಾನಗರದಲ್ಲಿ ಸರಣಿ ಬಾಂಬ್ ಸ್ಫೋಟದ ಸಂಚು ರೂಪಿಸಿ, ೨೫೦ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾಗಿ ನಂತರ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅನ್ನು ಕೊಲ್ಲುವ ಯೋಜನೆಯನ್ನು ೨೦೧೩ರ ಸೆಪ್ಟೆಂಬರ್‌ನಲ್ಲಿ ಭಾರತದ ‘ರಾ’ (ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ರೂಪಿಸಿತ್ತು. ಇದಕ್ಕೆ ೯ ಜನರ ತಂಡವು ಸುಡಾನ್, ಬಾಂಗ್ಲಾದೇಶ ಹಾಗೂ ನೇಪಾಳಗಳ ಪಾಸ್‌ಪೋರ್ಟ್ ಗಳಲ್ಲಿ ಪಾಕಿಸ್ತಾನವನ್ನು ಸೇರಿಕೊಂಡಿತ್ತು, ಈ ತಂಡವನ್ನು ‘ದ ಸೂಪರ್ ಬಾಯ್ಸ್’ ಎಂದು ಹೆಸರಿಸಲಾಗಿತ್ತು, ಇಸ್ರೇಲಿನ
ಗೂಢಚಾರ ಸಂಸ್ಥೆ ಮೊಸಾದ್‌ನ ಸಹಾಯವನ್ನೂ ಈ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು.
ಕರಾಚಿಯಲ್ಲಿ ವಾಸವಿದ್ದ ದಾವೂದ್ ಕ್ಲಿ-ನ್ ರೋಡಿನಲ್ಲಿರುವ ತನ್ನ ಮನೆಯಿಂದ ಡಿಫೆನ್ಸ್ ಹೌಸಿಂಗ್ ಸೊಸೈಟಿಗೆ ಸಾಗುವ
ಸಂದರ್ಭದಲ್ಲೇ ಆತನನ್ನು ಹತ್ಯೆಗೈಯುವ ಯೋಜನೆಯನ್ನು ಕಾರ್ಯಗತಗೊಳಿಸಲು ಕಮಾಂಡೋಗಳನ್ನು ಸಜ್ಜುಗೊಳಿಸ ಲಾಗಿತ್ತು. ಆದರೆ ಈ ಯೋಜನೆ ಕೈಗೂಡುವ ಕೆಲವೇ ನಿಮಿಷಗಳ ಮೊದಲು ಭಾರತದಿಂದ ಅಧಿಕೃತವಾಗಿ ಬಂದ ಫೋನ್ ಕಾಲ್ ಈ ಕಾರ್ಯಾಚರಣೆಯನ್ನು ನಿಲ್ಲಿಸಲು ಸೂಚಿಸಿತು.
ದಾವೂದ್ ಅನ್ನು ಬಚಾವ್ ಮಾಡುವ ಉದ್ದೇಶದಿಂದಲೇ ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾ ಗಿತ್ತು. ೨೦೦೫ನೇ ಇಸವಿಯಲ್ಲೂ ಇಂಥದ್ದೇ ಪ್ರಕರಣ ನಡೆದಿತ್ತು. ದಾವೂದ್ ಇಬ್ರಾಹಿಂ ಮಗಳು ಮಹ್ರುಖ್ ಮತ್ತು ಕ್ರಿಕೆಟಿಗ ಜಾವೇದ್ ಮಿಯಾಂದಾದ್‌ನ ಮಗ ಜುನೈದ್ ಮದುವೆ ೨೦೦೫ರ ಜುಲೈ ೯ರಂದು ಮೆಕ್ಕಾದಲ್ಲಿ ನಡೆದು ಅದೇ ತಿಂಗಳ ೨೩ರಂದು ದುಬೈನ ಹೋಟೆಲ್ ಗ್ರ್ಯಾಂಡ್ ಹಯಾತ್‌ನಲ್ಲಿ ವಾಲಿಮ್ಮಾಹ್ (ರಿಸೆಪ್ಷನ್) ನಡೆಸಲಾಗುವುದು ಎಂಬ ಮಾಹಿತಿ ಭಾರತೀಯ ಗುಪ್ತಚರ ಇಲಾಖೆಗೆ ಸಿಕ್ಕಿತ್ತು.
ಈ ಸಂದರ್ಭದಲ್ಲಿ ಛೋಟಾ ರಾಜನ್ ಗ್ಯಾಂಗಿನ ಶಾರ್ಪ್ ಶೂಟರ್‌ಗಳಾದ ವಿಕ್ಕಿ ಮಲ್ಹೋತ್ರಾ ಹಾಗೂ ಫರೀದ್ ತನಾಶಾರನ್ನು ದುಬೈಗೆ ಕಳುಹಿಸಿ ದಾವೂದ್‌ನನ್ನು ಹತ್ಯೆ ಮಾಡಿಸುವ ಯೋಜನೆಯ ಜವಾಬ್ದಾರಿಯನ್ನು ಆಗ ತಾನೇ ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕ ಸ್ಥಾನದಿಂದ ನಿವೃತ್ತರಾಗಿದ್ದ ಹಾಗೂ ಭಾರತದ ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ (ಎನ್‌ಎಸ್‌ಎ) ಅಜಿತ್ ದೋವಲ್ ರಿಗೆ ವಹಿಸಲಾಗಿತ್ತು. ಇದಕ್ಕಾಗಿ ದಕ್ಷಿಣ ಏಷ್ಯಾದ ಯಾವುದೋ ದೇಶದಲ್ಲಿ ತಲೆಮರೆಸಿಕೊಂಡಿದ್ದ ವಿಕ್ಕಿ
ಮಲ್ಹೋತ್ರಾ ಹಾಗೂ ಫರೀದ್ ತನಾಶಾರನ್ನು ಗುಪ್ತವಾಗಿ ಭಾರತಕ್ಕೆ ಕರೆತಂದು ದೆಹಲಿಯಲ್ಲಿ ತರಬೇತಿ ಕೊಡಲಾಗುತ್ತಿತ್ತು.
ಮುಂಬೈ ಪೋಲೀಸರಲ್ಲಿ ಬಹಳಷ್ಟು ಜನರು ದಾವೂದ್‌ನ ಮಾಹಿತಿದಾರರಾಗಿದ್ದು ಅವರಿಗೆ ಈ ರಹಸ್ಯ ಕಾರ್ಯಾಚರಣೆಯ
ಗುಟ್ಟು ಹೇಗೋ ತಿಳಿಯಿತು. ಅವರು ದಾವೂದ್ ಹತ್ಯೆಯ ಈ ಯೋಜನೆಯನ್ನು ವಿಫಲಗೊಳಿಸುವ ಉದ್ದೇಶದಿಂದ ಛೋಟಾ ರಾಜನ್ ಸಹಚರರ ಚಲನ ವಲನಗಳ ಮೇಲೆ ಕಣ್ಣಿಡಲು ಆರಂಭಿಸಿದರು. ಒಂದು ಮಧ್ಯಾಹ್ನ ಅಜಿತ್ ದೋವಲ್, ವಿಕ್ಕಿ ಮಲ್ಹೋತ್ರಾ ಮತ್ತು ಫರೀದ್ ತನಾಶಾ ದೆಹಲಿಯ ಹೋಟೆಲ್ ಒಂದರಲ್ಲಿ ದಾವೂದ್ ಹತ್ಯಾ ಯೋಜನೆಯ ರೂಪುರೇಷೆಗೆ ಅಂತಿಮಸ್ಪರ್ಶ ನೀಡುತ್ತಿದ್ದಾಗ ಮುಂಬೈ ಕ್ರೈಮ್ ಬ್ರಾಂಚ್‌ನ ಡೆಪ್ಯುಟಿ ಕಮಿಷನರ್ ಧನಂಜಯ್ ಕಮ್ಲಾಕರ್ ನೇತೃತ್ವದ ಪೋಲೀಸರ ತಂಡ ಅಲ್ಲಿಗೆ ದಾಳಿ ನಡೆಸಿತು.
ಕಾರ್ಯಾಚರಣೆಯ ಬಗ್ಗೆ ಮನವರಿಕೆ ಮಾಡಿಕೊಡಲು ಅಜಿತ್ ದೋವಲ್ ಯತ್ನಿಸಿದರೂ ಬಗ್ಗದ ಮುಂಬೈ ಪೊಲೀಸರು ವಿಕ್ಕಿ
ಮಲ್ಹೋತ್ರಾ ಮತ್ತು ಫರೀದ್ ತನಾಶಾರನ್ನು ಬಂಧಿಸಿ ಕರೆದೊಯ್ದರು. ಅಲ್ಲಿಗೆ ದಾವೂದ್ ಹತ್ಯಾ ಯೋಜನೆಯೂ ವಿಫಲ ವಾಯಿತು. ಈ ವಿಷಯವನ್ನು ಭಾರತದ ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಅವರು ‘ಇಂಡಿಯಾ ಟುಡೆ’ಗೆ ನೀಡಿದ
ಸಂದರ್ಶನದಲ್ಲಿ ಹೇಳಿದ್ದರು. ೨೦೧೪ರ ನಂತರದ ಬದಲಾದ ರಾಜಕೀಯ ನಾಯಕತ್ವದಲ್ಲಿ ಭಾರತವು ರಕ್ಷಣಾತ್ಮಕ ಆಟದ
ಚಿಪ್ಪಿನಿಂದ ಹೊರಬಂದು ಒಂದಿಷ್ಟು ಆಕ್ರಮಣಶೀಲತೆ ರೂಢಿಸಿಕೊಂಡಿರುವುದನ್ನು ಕಾಣಬಹುದು. ೨೦೧೪ರ ಮೊದಲು ಪಾಕಿಸ್ತಾನದ ಕಡೆಯಿಂದ ಸೈನಿಕರ ಗುಂಡಿನ ದಾಳಿ ಅಥವಾ ಉಗ್ರರ ಆಕ್ರಮಣ ನಡೆದರೆ ಪ್ರತಿದಾಳಿ ನಡೆಸಲು ಭಾರತೀಯ ಸೇನೆಯು ದೆಹಲಿಯಿಂದ ಅನುಮತಿ ಪಡೆಯಬೇಕಾಗುತ್ತಿತ್ತು.
ದೆಹಲಿಯ ನಾಯಕರು ರಾಜಕೀಯ ಲಾಭ-ನಷ್ಟಗಳನ್ನು ಲೆಕ್ಕಹಾಕಿ ಪ್ರತಿದಾಳಿಯ ಬಗ್ಗೆ ತೀರ್ಮಾನಿಸುತ್ತಿದ್ದರು. ಆದರೆ ನರೇಂದ್ರ ಮೋದಿ ಸರಕಾರವು ಪಾಕ್ ದಾಳಿಗಳಿಗೆ ಪ್ರತ್ಯುತ್ತರಿಸುವಲ್ಲಿ ತೀರ್ಮಾನಿಸುವ ಅಧಿಕಾರವನ್ನು ಭಾರತೀಯ ಸೇನೆಗೇ ಕೊಟ್ಟಿದೆ.
ದೇಶವಿರೋಽಗಳ ಹುಟ್ಟಡಗಿಸಲು ಭಾರತದ ಸೇನೆಯೀಗ ಗಡಿಯಾಚೆಯಲ್ಲೂ ಕಾರ್ಯಾಚರಣೆ ಮಾಡುತ್ತಿದೆ. ೨೦೧೬ರ ಸೆಪ್ಟೆಂಬರ್ ೧೮ರಂದು ಜಮ್ಮು-ಕಾಶ್ಮೀರದ ಉರಿಯಲ್ಲಿನ ಸೇನಾನೆಲೆ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರವಾದಿ ಸಂಘಟನೆ
ದಾಳಿ ಮಾಡಿ ೧೯ ಸೈನಿಕರ ಸಾವಿಗೆ ಕಾರಣವಾಯಿತು.
ಈ ಉಗ್ರವಾದಿಗಳಿಗೆ ಹಾಗೂ ಅವರನ್ನು ಸಲಹುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸೆಪ್ಟೆಂಬರ್ ೨೮ರಂದು ಭಾರತೀಯ ಕಮಾಂಡೋಗಳು ‘ಲೈನ್ ಆಫ್ ಕಂಟ್ರೋಲ್’ ದಾಟಿ ದಾಳಿಮಾಡಿ, ಗಡಿಯಾಚೆ ಬೀಡುಬಿಟ್ಟಿದ್ದ ಸುಮಾರು ೨೦ ಉಗ್ರರನ್ನು
ಕೊಂದುಹಾಕಿ ಕ್ಷೇಮವಾಗಿ ಹಿಂದಿರುಗಿದರು. ಜೈಶ್ -ಎ-ಮೊಹಮ್ಮದ್ ಉಗ್ರರು ೨೦೧೯ರ ಫೆಬ್ರವರಿ ೧೪ರಂದು ಪುಲ್ವಾಮಾದಲ್ಲಿ ಸೇನಾವಾಹನಗಳ ಮೇಲೆ ಆತ್ಮಹತ್ಯಾ ದಾಳಿ ನಡೆಸಿ ೪೬ ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದುದರ ಪ್ರತೀಕಾರವಾಗಿ ಭಾರತದ ವಾಯುಪಡೆ ವಿಮಾನಗಳು ಪಾಕಿಸ್ತಾನದ ಗಡಿ ದಾಟಿ ಸಾಗಿ ಬಾಲಾಕೋಟ್‌ನಲ್ಲಿರುವ ಆ ಉಗ್ರಗಾಮಿ ಸಂಘಟನೆಯ ತರಬೇತಿ ಶಿಬಿರದ ಮೇಲೆ ಬಾಂಬಿನ ಮಳೆ ಸುರಿಸಿ ಅದನ್ನು ನಾಶ ಮಾಡಿ ಸುಮಾರು ೨೦೦-೩೦೦ ಉಗ್ರರನ್ನು ಕೊಂದುಹಾಕಿದವು.
೨೦೧೭ರಲ್ಲಿ ಈಶಾನ್ಯ ಭಾರತದ ಡೋಕ್ಲಾಮ್‌ನಲ್ಲಿ ಚೀನಾವು ರಸ್ತೆ ನಿರ್ಮಿಸಲು ಮುಂದಾದಾಗ, ಭಾರತದ ಸೈನಿಕರು ರಸ್ತೆ ನಿರ್ಮಿಸದಂತೆ ಅಡ್ಡ ನಿಲ್ಲಲು ಹಿಂಜರಿಯಲಿಲ್ಲ. ಕೊನೆಗೆ ಭಾರತದ ದೃಢ ನಿರ್ಧಾರದೆದುರು ಚೀನಾ ತಲೆತಗ್ಗಿಸಿ ತನ್ನ ಸೈನ್ಯ ವನ್ನು ಡೋಕ್ಲಾಮ್‌ನಿಂದ ಹಿಂತೆಗೆಯಿತು. ೨೦೨೦-೨೧ರ ನಡುವಿನ ಅವಧಿಯಲ್ಲಿ ಭಾರತ-ಚೀನಾ ಗಡಿಯನ್ನು ಚೀನಾ ಅತಿಕ್ರಮಿಸಲು ಬಂದಾಗ ಭಾರತೀಯ ಸೇನೆಯು ಕಾದಾಡಿ ಚೀನಾವನ್ನು ಹಿಮ್ಮೆಟ್ಟಿಸಿತು.
ಗಾಲ್ವಾನ್‌ನಲ್ಲಿ ಚೀನಾದ ಸೈನಿಕರು ‘ಲೈನ್ ಆಫ್ ಆಕ್ಚುವಲ್ ಕಂಟ್ರೋಲ್’ನಲ್ಲಿ ಭಾರತೀಯ ಭೂಭಾಗ ವನ್ನು ಆತಿಕ್ರಮಿಸಲು ಹವಣಿಸಿದಾಗ ಭಾರತೀಯ ಸೈನಿಕರು ಜೀವದ ಹಂಗು ತೊರೆದು ಕಾದಾಡಿ ಸುಮಾರು ೪೦ ಮಂದಿ ಚೀನಿ ಸೈನಿಕರನ್ನು ಕೊಂದು
ಹಾಕಿದರು. ಈ ಹೋರಾಟದಲ್ಲಿ ೨೦ ಭಾರತೀಯ ಸೈನಿಕರು ವೀರಮರಣವನ್ನಪ್ಪಿದರು. ಈ ಮಾರಾಮಾರಿಯಲ್ಲಿ ನಮ್ಮವರು ಮೇಲುಗೈ ಸಾಧಿಸಿ ಚೀನಿ ಮಿಲಿಟರಿಯು ಒಂದು ಕಾಗದದ ಹುಲಿಯಷ್ಟೇ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಕೊನೆಗೆ
ಮಣಿದ ಚೀನಾ ಮಾತುಕತೆಗೆ ಒಪ್ಪಿ ತನ್ನ ಸೈನ್ಯವನ್ನು ‘ಲೈನ್ ಆ- ಆಕ್ಚುವಲ್ ಕಂಟ್ರೋಲ್’ನಿಂದ ಹಿಂತೆಗೆದುಕೊಂಡಿತು.
೧೯೯೯ರಲ್ಲಿ ನೇಪಾಳದ ಕಾಠ್ಮಂಡುವಿನಿಂದ ಭಾರತಕ್ಕೆ ಬರುತ್ತಿದ್ದ ಭಾರತದ ವಿಮಾನವನ್ನು ಜೈಶ್ -ಎ-ಮೊಹಮ್ಮದ್ ಉಗ್ರರು ಅಪಹರಿಸಿ ಅಫ್ಗಾನಿಸ್ತಾನಕ್ಕೆ ಒಯ್ದಿದ್ದರು. ಅಪಹರಣಕಾರರಲ್ಲಿ ಒಬ್ಬನಾದ ಝಹೂರ್ ಮಿಸಿಯನ್ನು ಪಾಕಿಸ್ತಾನದ ಕರಾಚಿ ಯಲ್ಲಿ ಬೈಕಿನಲ್ಲಿ ಬಂದ ಬಂದೂಕುಧಾರಿಗಳು ೨೦೨೨ರ ಮಾರ್ಚ್ ೧ರಂದು ಕೊಂದುಹಾಕಿದರು. ಭಾರತಕ್ಕೆ ಕಳ್ಳನೋಟು ಪೂರೈಸುತ್ತಿದ್ದ ಮೊಹಮ್ಮದ್ ಲಾಲ್ ಹೆಸರಿನ ಐಎಸ್‌ಐ ಏಜಂಟ್‌ನನ್ನು ನೇಪಾಳದಲ್ಲಿ ಅಪರಿಚಿತರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗುಂಡಿಟ್ಟು ಕೊಂದರು. ಇದೇ ಮಾದರಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರವಾದಿ ಸಂಘಟನೆಯ ಕಮಾಂಡರ್ ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಜ್ ಆಲಂನನ್ನು ಬೈಕಿನಲ್ಲಿ ಬಂದ ಬಂದೂಕುಧಾರಿಗಳು
ಈ ವರ್ಷದ ಫೆಬ್ರವರಿಯಲ್ಲಿ ರಾವಲ್ಪಿಂಡಿಯಲ್ಲಿ ಕೊಂದುಹಾಕಿದರು.
ಅಲ್ ಬದರ್ ಸಂಘಟನೆಯ ಕಮಾಂಡರ್ ಸಯ್ಯದ್ ಖಾಲಿದ್ ರಝಾನನ್ನು ಈ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನದ ಸಿಂಧುದೇಶ್ ರೆವೋಲ್ಯೂಶನರಿ ಆರ್ಮಿಯು ಕರಾಚಿಯಲ್ಲಿ ಹತ್ಯೆಮಾಡಿತು. ಇನ್ನೋರ್ವ ಉಗ್ರ ಸಯ್ಯದ್ ನೂರ್ ಶಾಲೋಬಾರ್ ಅನ್ನೂ ಬಾರಾ ಖೈಬರ್‌ನಲ್ಲಿ ಮಾರ್ಚ್ ೪ರಂದು ಅಪರಿಚಿತರು ಗುಂಡಿಟ್ಟು ಕೊಂದರು. ಈ ವರ್ಷದ ಫೆಬ್ರವರಿಯಲ್ಲಿ, ಇಸ್ಲಾ
ಮಿಕ್ ಸ್ಟೇಟ್‌ನ ಉಗ್ರ ಎಜಾದ್ ಅಹ್ಮದ್ ಅಹಂಗರ್ ಅಫ್ಘಾನಿಸ್ತಾನದಲ್ಲಿ ಗುಂಡಿಗೆ ಬಲಿಯಾದ. ೧೯೮೫ರಲ್ಲಿ ಭಾರತದ ಏರ್ ಇಂಡಿಯಾ ವಿಮಾನಕ್ಕೆ ಬಾಂಬು ಇಟ್ಟು ೩೯೫ ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ ಖಲಿಸ್ತಾನಿ ಉಗ್ರ ರಿಪುದಮನ್ ಸಿಂಗ್
ಮಾಲಿಕ್‌ನನ್ನು ಕೆನಡಾದ ಸರ್ರೆಯಲ್ಲಿ ೨೦೨೨ರ ಜುಲೈನಲ್ಲಿ ಗುಂಡಿಟ್ಟು ಸಾಯಿಸಲಾಯಿತು.
ಖಲಿಸ್ತಾನ್‌ನ ಕಮಾಂಡರ್ ಹಾಗೂ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಪರಮ್ಜೀತ್ ಸಿಂಗ್ ಪಂಜ್ವಾರ್ ಅನ್ನು ಕೂಡಾ ಮಾರ್ಚ್ ೭ರಂದು ಪಾಕಿಸ್ತಾನದ ಲಾಹೋರಿನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿಕೊಂದರು. ಭಾರತ ಸರಕಾರವು ಉಗ್ರನೆಂದು
ಗುರುತಿಸಿದ್ದ ಖಲಿಸ್ತಾನಿ ಉಗ್ರ ಹವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಧಾ ೨೦೨೨ರ ನವೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ಸಾವಿಗೀಡಾದ. ಓವರ್ ಡೋಸ್ ಡ್ರಗ್ ಕೊಟ್ಟು ಈತನನ್ನು ಸಾಯಿಸಲಾಗಿತ್ತು. ರಿಂಧಾ ಸತ್ತ ಮರುದಿನ ಆತನ ಸಹವರ್ತಿಯಾಗಿದ್ದ ಹ್ಯಾಪಿಸಂಗೀರಾ ಇಟೆಲಿಯಲ್ಲಿ ಸಾಯಿಸಲ್ಪಟ್ಟ.
೨೦೨೦ರಲ್ಲಿ ಖಲಿಸ್ತಾನಿ ಹರ್ಮೀತ್ ಸಿಂಗ್ ಪಾಕಿಸ್ತಾನದ ಲಾಹೋರಿನಲ್ಲಿ ಗುಂಡಿಗೆ ಬಲಿಯಾಗಿ ಸತ್ತ. ಇನ್ನೋರ್ವ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಕೆನಡಾದ ವ್ಯಾಂಕೋವರ್‌ನಲ್ಲಿ ಜೂನ್ ೧೯ರಂದು ಅಪರಿಚಿತರ ಗುಂಡಿಗೆ ಬಲಿಯಾದ, ಕೆಲವು
ತಿಂಗಳ ಹಿಂದೆ ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಆಕ್ರಮಣ ನಡೆಸಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ಖಾಂಡಾ ಇಂಗ್ಲೆಂಡಿನಲ್ಲಿ ಅನುಮಾನಾಸ್ಪದವಾಗಿ ಜೂನ್ ೧೫ರಂದು ಸಾವಿಗೀಡಾದ. ವಿಷಪ್ರಾಶನದಿಂದ ಈತನ
ಸಾವು ಸಂಭವಿಸಿತು.
ಭಾರತಕ್ಕೆ ಬೇಕಾಗಿರುವ ಉಗ್ರರು ಬೇರೆ ಬೇರೆ ದೇಶಗಳಲ್ಲಿ ಸಾವಿಗೀಡಾಗುತ್ತಿರುವುದನ್ನು ಗಮನಿಸಿದರೆ ಈ ಸಾವುಗಳು ಆಕಸ್ಮಿಕವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಈ ಹತ್ಯೆಗಳು ಪೂರ್ವ ಯೋಜಿತವಾಗಿ ಹಾಗೂ ಅತ್ಯಂತ ಚಾಣಾಕ್ಷ ರೀತಿಯಲ್ಲಿ ನಡೆದಿವೆ ಹಾಗೂ ಹತ್ಯೆ ಮಾಡಿದವರು ಇದುವರೆಗೂ ಸಿಕ್ಕಿಬಿದ್ದಿಲ್ಲ. ಭಾರತ-ವಿರೋಧಿ ಕೃತ್ಯಗಳಲ್ಲಿ ತೊಡಗಿರುವವರು ವಿಶ್ವದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಅವರನ್ನು ಮಟ್ಟ ಹಾಕುವ ಛಾತಿಯನ್ನು ಭಾರತವು ತೋರುತ್ತಿದೆ.
ಭಾರತೀಯ ಗುಪ್ತಚರ ಇಲಾಖೆ, ‘ರಾ’ ಹಾಗೂ ಸೇನೆ ಒಮ್ಮುಖವಾಗಿ ಕೆಲಸ ಮಾಡುತ್ತಿವೆ, ಭಾರತದ ರಕ್ಷಣಾ ನೀತಿಯು ಬದಲಾಗಿದೆ. ಅದು ರಕ್ಷಣಾತ್ಮಕ ನೀತಿಯಿಂದ ಹೊರಬಂದು ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. ಇದರಿಂದಾಗಿ ಕಳೆದ ೯ ವರ್ಷ ಗಳಲ್ಲಿ ಉಗ್ರರಿಗೆ ಕಾಶ್ಮೀರದ ಗಡಿಯನ್ನು ದಾಟಿ ಬಂದು ದೇಶದೊಳಗೆ ನಾಗರಿಕರ ಮೇಲೆ ಆಕ್ರಮಣ ಎಸಗಲು ಸಾಧ್ಯವಾಗಿಲ್ಲ. ಈ ಎಲ್ಲ ಬದಲಾವಣೆಗಳಿಗೆ ಭಾರತಕ್ಕೆ ಸಿಕ್ಕಿರುವ ನಿರ್ಣಾಯಕ ನಾಯಕತ್ವವೇ ಕಾರಣವಾಗಿದೆ.