ವಿಶ್ಲೇಷಣೆ
ಗಣೇಶ್ ಭಟ್, ವಾರಾಣಸಿ
ಬಡತನ ನಿವಾರಣೆ ಎನ್ನುವುದು ಭಾರತದ ರಾಜಕೀಯ ಪಕ್ಷಗಳ ಚುನಾವಣಾ ಭರವಸೆಗಳಲ್ಲಿನ ಪುನರಾವರ್ತನೆಗೊಳ್ಳುವ ಅಥವಾ ಚರ್ವಿತ ಚರ್ವಣ ವಿಚಾರ. ಇಂದಿರಾ ಗಾಂಧಿಯವರು ೧೯೭೧ರ ಚುನಾವಣೆಯನ್ನು ‘ಗರೀಬಿ ಹಟಾವೋ’ ಬಡತನವನ್ನು
ನಿವಾರಿಸಿ) ಎನ್ನುವ ಘೋಷವಾಕ್ಯದೊಡನೆ ಮಾಡಿದ್ದರು.
ಮುಂದೆ ೫ನೆಯ ಪಂಚವಾರ್ಷಿಕ ಯೋಜನೆಯಲ್ಲೂ ಗರೀಬಿ ಹಟಾವೋ ಕಾರ್ಯಕ್ರಮಗಳನ್ನು ಸೇರಿಸಲಾಗಿತ್ತು. ಆದರೂ ಭಾರತದ ಬಡತನ ಕಡಿಮೆಯಾಗಲೇ ಇಲ್ಲ. ಏಕೆಂದರೆ ಸರಕಾರಗಳು ಜಾರಿ ಮಾಡುತ್ತಿದ್ದ ಬಡತನ ನಿವಾರಣಾ ಯೋಜನೆಗಳು ಪರಿಣಾಮಕಾರಿಯಾಗಿರಲಿಲ್ಲ ಹಾಗೂ ಅವು ಅರ್ಹರನ್ನು ತಲುಪುವ ಮೊದಲೇ ಸೋರಿಹೋಗುತ್ತಿದ್ದವು. ಜನಕಲ್ಯಾಣಕ್ಕೆ ಹಾಗೂ ಬಡತನ ನಿವಾರಣೆಗಾಗಿ ಸರಕಾರವು ಬಿಡುಗಡೆ ಮಾಡುವ ಪ್ರತಿ ೧ ರುಪಾಯಿಯಲ್ಲಿ ೧೫ ಪೈಸೆ ಮಾತ್ರ ಅರ್ಹರನ್ನು ಹಾಗೂ ಫಲಾನುಭವಿಗಳನ್ನು ಸೇರುತ್ತದೆ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಹೇಳಿದ್ದರು.
ಆದರೆ ಅವರ ಮಗ ರಾಹುಲ್ ಗಾಂಧಿಯವರು ೨೦೧೩ರಲ್ಲಿ ‘ಬಡತನ ಎನ್ನುವುದು ಮನಸ್ಸಿನ ಒಂದು ಸ್ಥಿತಿಯಾಗಿದೆ’ ಎಂದಿದ್ದು ಬಹುದೊಡ್ಡ ವಿವಾದವಾಗಿತ್ತು. ಬಹುಶಃ ಅವರ ಸರಕಾರಗಳು ಜಾರಿಗೆ ತಂದಿದ್ದ ಬಡತನ ನಿವಾರಣಾ ಕಾರ್ಯಕ್ರಮಗಳಾವುವೂ ಫಲ ಕೊಡದಿದ್ದುದ ರಿಂದ ರಾಹುಲರು ಹೀಗೆ ಹೇಳಿದ್ದಿರಲೂಬಹುದು. ಭಾರತದಲ್ಲಿ ಕಳೆದ ೧೫ ವರ್ಷಗಳಲ್ಲಿ ೪೧.೫ ಕೋಟಿ
ಬಡವರು ಬಡತನದಿಂದ ಹೊರಬಂದಿದ್ದಾರೆ ಎನ್ನುವ ವರದಿಯನ್ನು ವಿಶ್ವಸಂಸ್ಥೆ ಕೊಟ್ಟಿದೆ. ಇದರನ್ವಯ ೨೦೦೫-೦೬ರಲ್ಲಿ
ಭಾರತದಲ್ಲಿ ೬೪.೫ ಕೋಟಿ ಮಂದಿ ಬಹು ಆಯಾಮಗಳ ಬಡವರಿದ್ದರೆ, ಇವರ ಸಂಖ್ಯೆ ೨೦೨೧ರಲ್ಲಿ ೨೩ ಕೋಟಿಗೆ ಇಳಿದಿತ್ತು.
ಇದೇ ಅವಧಿಯಲ್ಲಿ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಭಾರತೀಯರ ಪ್ರಮಾಣವು ಶೇ.೪೪ ರಿಂದ ಶೇ.೧೨ಕ್ಕೆ ಇಳಿದಿದೆ. ಶಿಶುಮರಣ ಪ್ರಮಾಣವು ಶೇ.೪ ರಿಂದ ಶೇ.೧.೫ಕ್ಕೆ ಇಳಿದಿದೆ. ೨೦೧೫-೧೬ರಿಂದ ೨೦೨೦-೨೧ರ ಅವಧಿಯ ೫ ವರ್ಷ ಗಳಲ್ಲಿ ೧೩ ಕೋಟಿ ಮಂದಿ ಬಡತನದ ಸಮಸ್ಯೆಯಿಂದ ಹೊರಬಂದಿದ್ದಾರೆ. ಇದೇ ಅವಧಿಯಲ್ಲಿ ದೇಶದಲ್ಲಿದ್ದ ಕಡುಬಡವರ ಪ್ರಮಾಣವು ಶೇ.೨೪.೮೫ರಿಂದ ಶೇ.೧೪.೯೬ಕ್ಕೆ ಇಳಿದಿದೆ.
ಗರೀಬಿ ಹಟಾವೋದಂಥ ಬರಿಯ ಘೋಷಣೆಗಳಿಂದ ಬಡತನವು ಪರಿಹಾರವಾಗಿಲ್ಲ. ಸಾಲ ಮನ್ನಾ ಅಥವಾ ಉಚಿತ ಘೋಷಣೆ ಗಳು ರಾಜಕೀಯ ಪಕ್ಷಗಳಿಗೆ ವೋಟುಗಳನ್ನು ತಂದುಕೊಟ್ಟಿರಬಹುದೇ ಹೊರತು ಬಡವರ ಆರ್ಥಿಕತೆಯನ್ನು ಸುಧಾರಿಸಿಲ್ಲ. ಬದಲಿಗೆ, ಅವರ ಮೂಲಭೂತ ಸಮಸ್ಯೆಗಳನ್ನರಿತು ಪರಿಹಾರ ಕ್ರಮಗಳನ್ನು ಕೈಗೊಂಡಿರುವಿಕೆ, ಮೂಲಭೂತ ಸೌಕರ್ಯಗಳು ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಉದ್ಯೋಗಾವಕಾಶಗಳಲ್ಲಿನ ಹೆಚ್ಚಳ, ಸ್ವಯಂ ಉದ್ಯೋಗಗಳಿಗೆ ನೀಡಲಾದ ಉತ್ತೇಜನ, ಜನರಲ್ಲಿ ಹೆಚ್ಚಿಸಲಾದ ಉದ್ಯಮ ಶೀಲತೆ, ಸರಕಾರಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಿರುವಿಕೆ, ಸುಧಾರಿತ ಬ್ಯಾಂಕಿಂಗ್ ವ್ಯವಸ್ಥೆ, ಎಲ್ಲರನ್ನೂ ಒಳಗೊಳಿಸಿದ ಆರ್ಥಿಕತೆ ಇವೇ ಮೊದಲಾದ ಹೆಜ್ಜೆಗಳಿಂದಾಗಿ ಭಾರತೀಯರ ಆರ್ಥಿಕತೆ ಸುಧಾರಿಸಿದೆ ಹಾಗೂ ಬಡವರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.
ಸರಕಾರಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿರುವುದು ಭಾರತದ ಬಡವರ ಪರಿಸ್ಥಿತಿ ಸುಧಾರಿಸುವಲ್ಲಿನ ಪ್ರಮುಖ ಕಾರಣವಾಗಿದೆ. ಈ ಮೊದಲು ಕೇಂದ್ರವು ಜನರ ಅಭಿವೃದ್ಧಿಗೆಂದು ಕೊಡುತ್ತಿದ್ದ ಸಬ್ಸಿಡಿ/ಸಹಾಯಧನ, ಪ್ರೋತ್ಸಾಹಕಧನ, ಪಿಂಚಣಿ, ವಿದ್ಯಾರ್ಥಿ ವೇತನ ಮೊದಲಾದವು ಜನರನ್ನು ತಲುಪುವ ಮೊದಲೇ ಅರ್ಧಕ್ಕಿಂತಲೂ ಹೆಚ್ಚು ಮೊತ್ತವು ಲಂಚ, ಕಮಿಷನ್‌ಗಳ ರೂಪದಲ್ಲಿ ಸೋರಿ ಹೋಗುತ್ತಿತ್ತು. ಈ ಸೋರಿಕೆ ತಡೆಯಲು ಕೇಂದ್ರವು ಕಳೆದ ೯ ವರ್ಷ ಗಳಿಂದ ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.
ಇದೀಗ ಫಲಾನುಭವಿಗಳ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಪರಸ್ಪರ ಬೆಸೆಯಲಾಗಿರುವ ‘ಜಾಮ್’ ವ್ಯವಸ್ಥೆಯನ್ನು ಜಾರಿಗೊಳಿಸಿರುವುದರಿಂದಾಗಿ ಸರಕಾರಿ ಯೋಜನೆಗಳ ಹಣ ಅನ್ಯರ ಪಾಲಾಗದೆ ನೇರವಾಗಿ ಫಲಾನು ಭವಿಗಳ ಬ್ಯಾಂಕ್ ಖಾತೆಗಳನ್ನು ತಲುಪುತ್ತಿವೆ. ಆಧಾರ್ ಬೆಸೆಯುವಿಕೆಯ ಮೂಲಕ ೪.೫ ಕೋಟಿ ನಕಲಿ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.
ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್-ರ್‌ನಿಂದಾಗಿ ಬಡವರ ಹಣವು ಮಧ್ಯವರ್ತಿಗಳ, ಭ್ರಷ್ಟರ ಪಾಲಾಗುವುದು ನಿಂತಿದೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ೧೧.೨೭ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ೪ ತಿಂಗಳಿಗೊಮ್ಮೆ ೨,೦೦೦ ರು.ನಂತೆ ವಾರ್ಷಿಕ ೬,೦೦೦ ರು. ಜಮೆಯಾಗುತ್ತದೆ. ಇದು ೨೦೧೯ರಿಂದಲೂ ನಡೆಯುತ್ತಾ ಬಂದಿದೆ. ಕೇಂದ್ರ ಸರಕಾರವು ವಾರ್ಷಿಕ ೨ ಲಕ್ಷ ಕೋಟಿ ರು.ನಷ್ಟು ಸಬ್ಸಿಡಿ ನೀಡುತ್ತಿರುವ ರಸಗೊಬ್ಬರ ವಿತರಣೆಯನ್ನೂ ರೈತರ ಆಧಾರ್ ಜತೆಗೆ ಬೆಸೆದು, ರಸಗೊಬ್ಬರವು ಕಾಳ ಸಂತೆಕೋರರ ಪಾಲಾಗುವುದನ್ನು ತಡೆದಿದೆ.
ಕಳೆದ ೯ ವರ್ಷಗಳಲ್ಲಿ ೩೨.೩೩ ಲಕ್ಷ ಕೋಟಿ ರು.ನಷ್ಟು ಸರಕಾರದ ಸಹಾಯಧನವು ಫಲಾನುಭವಿಗಳನ್ನು ನೇರವಾಗಿ ತಲುಪಿದೆ; ನೇರ ಹಣ ವರ್ಗಾವಣಾ ಯೋಜನೆಯಿಂದ ಸುಮಾರು ೨.೭ ಲಕ್ಷ ಕೋಟಿ ರು.ನಷ್ಟು ಸರಕಾರಿ ಹಣವು ಸೋರಿಹೋಗುವುದು ತಪ್ಪಿದ್ದು ಆವಶ್ಯಕತೆಯಿರು ವವರನ್ನು ಸಂಪೂರ್ಣವಾಗಿ ತಲುಪಿದೆ. ಬಡವರಿಗಾಗಿ ಸರಕಾರವು ಮೀಸಲಿಟ್ಟ ಹಣವು ಪೂರ್ಣ ವಾಗಿ ಸದ್ವಿನಿಯೋಗ ವಾಗುವಾಗ ಸರಕಾರಿ ಯೋಜನೆಯು ಯಶಸ್ವಿಯಾಗುತ್ತದೆ.
ಬಡತನ ನಿವಾರಣೆಯಾಗುತ್ತದೆ. ದೇಶದ ಶೇ.೧೦೦ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿರುವುದು ಬಡತನವನ್ನು ನಿವಾರಿಸುವಲ್ಲಿ ದೇಶವು ತೆಗೆದುಕೊಂಡ ಪ್ರಧಾನ ಹೆಜ್ಜೆಯಾಗಿದೆ. ೨೦೧೫ರವರೆಗೆ ದೇಶದ ೧೮ ಸಾವಿರಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಈ ಹಳ್ಳಿಗಳ ೨.೫ ಕೋಟಿ ಮನೆಗಳು ವಿದ್ಯುತ್ ವಂಚಿತವಾಗಿದ್ದವು. ಮನೆಮನೆ ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಹರ್ ಘರ್ ಬಿಜಲೀ ಯೋಜನೆಯಡಿ ಇಷ್ಟೂ ಹಳ್ಳಿಗಳು ಹಾಗೂ ಮನೆ ಗಳಿಗೆ ೨೦೧೯ರ ಮೊದಲು ವಿದ್ಯುತ್ ಸಂಪರ್ಕ ವನ್ನು ಕೊಡಲಾಯಿತು. ಅಂಧಕಾರದಲ್ಲಿದ್ದ ಕೋಟ್ಯಂತರ ಬಡಜನರು ಬೆಳಕು ಕಾಣುವಂತಾಯಿತು.
೨೦೧೪ರವರೆಗೆ ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಬಹಿರ್ದೆಸೆಗೆ ಬಯಲನ್ನೇ ಬಳಸುತ್ತಿದ್ದರು. ಇವರೆಲ್ಲರೂ ಬಡವರಾ ಗಿದ್ದರು. ಬಯಲುಶೌಚದಿಂದಾಗಿ ಜನರು ವಿವಿಧ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿದ್ದರು. ೨೦೧೪ರಲ್ಲಿ ಕೇಂದ್ರ ಸರಕಾರವು ಸ್ವಚ್ಛಭಾರತ್ ಅಭಿಯಾನವನ್ನು ಆರಂಭಿಸಿ ದೇಶವನ್ನು ಬಯಲುಶೌಚದಿಂದ ಮುಕ್ತವಾಗಿಸುವ ಪಣ ತೊಟ್ಟಿತು. ಈ ಅಭಿಯಾನದಡಿ ಕಳೆದ ೯ ವರ್ಷಗಳಲ್ಲಿ ದೇಶದ ೧೧.೭ ಕೋಟಿ ಬಡವರ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿ ಕೊಡಲಾಗಿದೆ. ಈ ಹಿಂದೆ ಬಯಲುಶೌಚದಿಂದಾಗಿ ಭಾರತದಲ್ಲಿ ವಾರ್ಷಿಕ ೩ ಲಕ್ಷ ಮಕ್ಕಳು ವಿವಿಧ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿದ್ದು ಇದೀಗ ಭಾರತದ ಬಹುತೇಕ ಮನೆಗಳಿಗೆ ಶೌಚಾಲಯಗಳನ್ನು ಒದಗಿಸಿದುದರ ಪರಿಣಾಮ ವಾಗಿ ಬಯಲುಶೌಚವು ಬಹುತೇಕ ನಿಂತುಹೋಗಿ, ವಾರ್ಷಿಕ ೩ ಲಕ್ಷ ಬಡಮಕ್ಕಳು ಸಾವಿಗೀಡಾಗುವುದು ತಪ್ಪಿದೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಸ್ವಚ್ಛಭಾರತ್ ಅಭಿಯಾನವನ್ನು ಹೊಗಳಿದೆ.
೨೦೧೧ರಲ್ಲಿ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಜನಗಣತಿ ನಡೆಸಲಾಗಿತ್ತು. ಈ ವೇಳೆ ದೇಶಾದ್ಯಂತದ ಪ್ರತಿ ಮನೆ ಹಾಗೂ ವ್ಯಕ್ತಿಯ ಆರ್ಥಿಕ ಸ್ಥಿತಿಗತಿಗಳ ಮಾಹಿತಿಗಳನ್ನು ಸಂಗ್ರಹಿಸಲಾಗಿತ್ತು. ೨೦೧೫ರ ನಂತರ ಸರಕಾರವು ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ೨೦೧೧ರ ಆರ್ಥಿಕ ಗಣತಿಯ ದತ್ತಾಂಶಗಳ ಮೇಲೆಯೇ ಆಯ್ಕೆ ಮಾಡಿತು. ಆರ್ಥಿಕ ಗಣತಿಯ ವೇಳೆ ಯಾರಿಗೆಲ್ಲಾ ಪಕ್ಕಾ ಮನೆಗಳು ಇರಲಿಲ್ಲವೋ ಅಂಥವರಿಗೆ ಪ್ರಧಾನ್‌ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಕಟ್ಟಿಸಿ ಕೊಡಲಾಯಿತು. ಕಳೆದ ೯ ವರ್ಷಗಳಲ್ಲಿ ದೇಶದ ಬಡವರಿಗೆ ೩.೧೫ ಕೋಟಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ.
ಆರ್ಥಿಕ ಗಣತಿಯ ಅಂಕಿ ಅಂಶಗಳ ಆಧಾರದಲ್ಲೇ ಅಡುಗೆ ಅನಿಲದ ಉಚಿತ ಸಂಪರ್ಕ ಕೊಡುವ ಉಜ್ವಲ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡ ಲಾಯಿತು. ೯.೭ ಕೋಟಿ ಬಡ ಮಹಿಳೆಯರಿಗೆ ಉಚಿತ ಎಲ್ ಪಿಜಿ ಸಂಪರ್ಕ ನೀಡಲಾಗಿದೆ. ಆರ್ಥಿಕ ಗಣತಿಯ ಆಧಾರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದ ಕಾರಣ ಯೋಜನೆಯು ನಿಜವಾಗಿಯೂ ಅವಶ್ಯಕತೆಯಿರುವ ಬಡವರನ್ನು ತಲುಪಿತು.
ಮೀನನ್ನು ಹಿಡಿದು ಕೊಡುವುದಕ್ಕಿಂತ, ಮೀನು ಹಿಡಿಯುವುದು ಹೇಗೆ ಎಂದು ಕಲಿಸಿದರೆ ಉತ್ತಮ ಎನ್ನುವ ಮಾತಿದೆ. ಅದೇ ರೀತಿ ಜನರಿಗೆ ಸ್ವಯಂ ಉದ್ಯೋಗಗಳನ್ನು ಆರಂಭಿಸಿ ನಿರ್ವಹಿಸುವಂಥ ವಾತಾವರಣವನ್ನು ರೂಪಿಸಿಕೊಟ್ಟರೆ ಅವರು ಸರಕಾರವನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಯುವಕರಿಗೆ ಸ್ವಯಂ ಉದ್ಯೋಗ ಅಥವಾ ಉದ್ಯಮ ಗಳನ್ನು ಆರಂಭಿಸಲು ಆರ್ಥಿಕ ಅನುಕೂಲ ಮಾಡಿಕೊಡುವ ಮುದ್ರಾ ಸಾಲ ಯೋಜನೆ ದೇಶದ ಕೋಟ್ಯಂತರ ಜನರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿದೆ. ಈ ಯೋಜನೆಯಡಿ ದೇಶದ ೪೩.೫ ಕೋಟಿ ಮಂದಿಗೆ ಸುಮಾರು ೨೩ ಲಕ್ಷ ಕೋಟಿ ರು.ನಷ್ಟು ಸಾಲ ಕೊಡಲಾಗಿದೆ.
ಮುದ್ರಾ ಸಾಲವನ್ನು ಪಡೆದವರಲ್ಲಿ ಶೇ.೬೯ರಷ್ಟು ಮಂದಿ ಮಹಿಳೆಯರು ಎನ್ನುವುದು ವಿಶೇಷ. ಪರಿಶಿಷ್ಟ ಜಾತಿ ಹಾಗೂ ಪಂಗಡ ಗಳ ಯುವ ಜನತೆಯಲ್ಲಿ ಉದ್ಯಮಶೀಲತೆಯನ್ನು ಬೆಳೆಸಲೆಂದು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಆರಂಭಿಸ ಲಾಯಿತು. ೧.೮ ಲಕ್ಷ ಮಂದಿಗೆ ಸುಮಾರು ೪೦ ಸಾವಿರ ಕೋಟಿ ರು.ಗಳನ್ನು ಈ ಯೋಜನೆಯಡಿ ಸಾಲವಾಗಿ ವಿತರಿಸಲಾಗಿದೆ.
೨೦೧೯ರ ಮೊದಲು ದೇಶದ ಶೇ.೮೩.೧೮ರಷ್ಟು ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ದೇಶದ ೧೯.೨೩ ಕೋಟಿ ಮನೆಗಳಲ್ಲಿ ಕೇವಲ ೩.೨೩ ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು. ದೇಶದ ಗ್ರಾಮೀಣ ಭಾಗಗಳ ಶೇ.೯೫ರಷ್ಟು ಮನೆಗಳಿಗೂ ನಲ್ಲಿ ನೀರಿನ ಸಂಪರ್ಕವಿರಲಿಲ್ಲ. ಗ್ರಾಮೀಣ ಭಾಗದ ೧೬ ಕೋಟಿ ಮನೆಗಳ ಹೆಣ್ಣುಮಕ್ಕಳು ಮೈಲು ಗಟ್ಟಲೆ ದೂರದಿಂದ ನೀರನ್ನು ಹೊತ್ತು ತರಬೇಕಾಗಿತ್ತು. ೨೦೨೫ನೇ ಇಸವಿಯ ಒಳಗಾಗಿ ದೇಶದ ಎಲ್ಲಾ ಮನೆಗಳಿಗೆ ನಲ್ಲಿನೀರಿನ ಸಂಪರ್ಕ ಕಲ್ಪಿಸುವ ಜಲ್ ಜೀವನ್ ಮಿಷನ್ ಅನ್ನು ೨೦೧೯ರಲ್ಲಿ ಆರಂಭಿಸಲಾಯಿತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಗ್ರಾಮೀಣ ಭಾಗಗಳ ೧೦.೩೭ ಕೋಟಿ ಮನೆಗಳಿಗೆ ಹೊಸದಾಗಿ ನಲ್ಲಿನೀರಿನ ಸಂಪರ್ಕ ಕಲ್ಪಿಸಲಾಗಿದೆ.
ಜಲ್ ಜೀವನ್ ಯೋಜನೆಗಾಗಿ ಇದುವರೆಗೆ ಸುಮಾರು ೧.೫೫ ಲಕ್ಷ ಕೋಟಿ ರು.ಗಳನ್ನು ಕೇಂದ್ರವು ವ್ಯಯಿಸಿದೆ. ಇದೀಗ ದೇಶದಲ್ಲಿ ದಿನವೊಂದಕ್ಕೆ ೧.೩ ಲಕ್ಷ ಗ್ರಾಮೀಣ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕವು ಲಭಿಸುತ್ತಿದ್ದು ೨೦೨೫ರ ಒಳಗಾಗಿ ದೇಶದ ಎಲ್ಲಾ ಬಡವರ ಮನೆಗಳಿಗೂ ಕುಡಿಯುವ ನೀರು ನಲ್ಲಿ ಮೂಲಕ ಸಿಗಲಿದೆ. ದೇಶದ ೫೦ ಕೋಟಿ ಬಡಜನರಿಗೆ ಉಚಿತ ವೈದ್ಯಕೀಯ
ಸೌಲಭ್ಯ ಒದಗಿಸುವ ಆಯುಷ್ಮಾನ್ ಭಾರತ್ ವೈದ್ಯಕೀಯ ವಿಮೆ ಯೋಜನೆಯ ಪ್ರಯೋಜನವನ್ನು ಇದುವರೆಗೆ ಸುಮಾರು ೫.೭ ಕೋಟಿ ಬಡವರು ಪಡೆದಿದ್ದಾರೆ. ಔಷಧಿಗಳನ್ನು ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಯಲ್ಲಿ ದೊರಕಿಸುವ ‘ಪ್ರಧಾನ ಮಂತ್ರಿ ಜನೌಷಧ’ ಯೋಜನೆಯ ಮೆಡಿಕಲ್ ಶಾಪ್ ಗಳ ಸೌಲಭ್ಯವನ್ನು ಬಡವರು ಮಾತ್ರವಲ್ಲದೆ ಮಧ್ಯಮ ವರ್ಗದವರೂ ಬಳಸುತ್ತಿದ್ದಾರೆ.
ಅತಿವೃಷ್ಟಿ-ಅನಾವೃಷ್ಟಿಗಳಿಗೆ ಈಡಾಗಿ ಬೆಳೆ ನಾಶಹೊಂದುವ ಪರಿಸ್ಥಿತಿಯಲ್ಲಿ ರೈತರು ಬೆಳೆದ ಬೆಳೆಗಳಿಗೆ ವಿಮಾರಕ್ಷಣೆ ನೀಡುವ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯು ೩೭.೬೬ ಕೋಟಿ ರೈತರಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸಿದೆ. ಈ ಹಿಂದಿನ ಸರಕಾರಗಳು ಬಡತನ ನಿವಾರಣೆಗಾಗಿ ಪೂರ್ವ ತಯಾರಿಯಿಲ್ಲದ, ಗೊತ್ತುಗುರಿಯಿಲ್ಲದ ಹಾಗೂ ಕಾಲಮಿತಿಯಿಲ್ಲದ ಯೋಜನೆ ಗಳನ್ನು ಕೈಗೊಂಡಿದ್ದರಿಂದ ದೇಶದಲ್ಲಿ ಬಡತನ ನಿವಾರಣೆಯ ಗುರಿ ಸಾಧಿಸಲು ವಿಫಲವಾದದ್ದು ಹೌದು. ಆದರೆ ಗುರಿ ತಲುಪಲು ನಿರ್ದಿಷ್ಟ ಕಾಲಮಿತಿ ವಿಧಿಸಿ, ಕಾಲಕಾಲಕ್ಕೆ ಡಿಜಿಟಲ್ ಡ್ಯಾಶ್ ಬೋರ್ಡ್‌ಗಳ ಮೂಲಕ ಯೋಜನೆಗಳ ಪ್ರಗತಿ ಪರಿಶೀಲಿಸುವ ವ್ಯವಸ್ಥೆಯನ್ನು ನರೇಂದ್ರ ಮೋದಿ ಸರಕಾರವು ಮಾಡಿತು. ಯೋಜನೆಗಳ ಧನಸಹಾಯವು ಸಂಪೂರ್ಣವಾಗಿ ಅರ್ಹ ಫಲಾನು ಭವಿಗಳನ್ನು ತಲುಪುವಂತೆ ಮಾಡಲಾಯಿತು. ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಕಷ್ಟು ಸಂಪನ್ಮೂಲವನ್ನು ಮೀಸಲಿಡಲಾಯಿತು.
ಇವೆಲ್ಲದರ ಪರಿಣಾಮ ಬಡತನ ನಿರ್ಮೂಲನೆಯ ಯೋಜನೆಗಳು ಯಶಸ್ಸನ್ನು ಪಡೆದವು. ಪರಿಣಾಮವಾಗಿ ದೇಶದ ೪೦ ಕೋಟಿ
ಮಂದಿ ಬಡತನದ ವರ್ತುಲದಿಂದ ಹೊರಬಂದರು.
(ಲೇಖಕರು ಹವ್ಯಾಸಿ ಬರಹಗಾರರು)