ಚರ್ಚಾ ವೇದಿಕೆ
ಮಣಿಕಂಠ ಪಾ.ಹಿರೇಮಠ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ನ ವರಸೆಗಳಿಂದಾಗಿ ಬಿಜೆಪಿಯೇತರ ಪಕ್ಷಗಳ ‘ಇಂಡಿಯ’ ಮೈತ್ರಿಕೂಟ ಛಿದ್ರ ವಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಮೈತ್ರಿಕೂಟವನ್ನು ಆರಂಭಿಸುವಾಗಿನ ಉತ್ಸಾಹವೀಗ ಬತ್ತಿಹೋಗಿದ್ದು, ಈ ಹಡಗು ಪಯಣ ಆರಂಭಿಸುವ ಮುನ್ನವೇ ಮುಳುಗಲಿದೆಯೇ? ಎಂಬ ಪ್ರಶ್ನೆ ಕಾಡತೊಡಗಿದೆ. ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಬರುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಉತ್ತರ ಭಾರತದ ೩ ರಾಜ್ಯಗಳು ಬಿಜೆಪಿಯ ತೆಕ್ಕೆಗೆ ಸೇರುವುದರೊಂದಿಗೆ ಮೈತ್ರಿಕೂಟದ ಉತ್ಸಾಹ ಕುಂದಿತು ಎನ್ನಬೇಕು.
ಕರ್ನಾಟಕವನ್ನು ಗೆದ್ದ ಖುಷಿಯಲ್ಲಿ ‘ಗ್ಯಾರಂಟಿ’ ಯೋಜನೆಗಳನ್ನು ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಮಿಕ್ಕ ರಾಜ್ಯಗಳಿಗೂ ವಿಸ್ತರಿಸಿ ಗೆಲುವು ಸಾಧಿಸಿ, ಲೋಕಸಭಾ ಚುನಾವಣೆಯ ನೇತೃತ್ವ ವಹಿಸಿಕೊಳ್ಳುವುದರೊಂದಿಗೆ ಟಿಕೆಟ್ ಹಂಚಿಕೆಯಲ್ಲೂ ಮೇಲುಗೈ ಸಾಧಿಸುವುದು ಕಾಂಗ್ರೆಸ್‌ನ ಲೆಕ್ಕಾಚಾರ ವಾಗಿತ್ತು. ಆದರೆ ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದ ನಂತರ ಅಲ್ಲವೂ ಉಲ್ಟಾ-ಪಲ್ಟಾ ಆಗಿಹೋಯಿತು.
‘ಇಂಡಿಯ’ ಮೈತ್ರಿಕೂಟವು ಜನ್ಮ ತಳೆಯಲು ಕಾರಣಕರ್ತರಾಗಿದ್ದವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್. ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳೂ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮತ ವಿಭಜನೆಯಾಗುತ್ತದೆ ಎಂದು ಅರಿತಿದ್ದ ಅವರು, ಉತ್ತರ ಪ್ರದೇಶದಿಂದ ಬಿಎಸ್‌ಪಿ, ಬಿಹಾರದಿಂದ ಜೆಡಿಯು, ಮಹಾ ರಾಷ್ಟ್ರದಿಂದ ಉದ್ಧವ್ ಠಾಕ್ರೆ ಬಣದ ಶಿವಸೇನೆ ಮತ್ತು ಶರದ್ ಪವಾರರ ಎನ್‌ಸಿಪಿ, ಪಶ್ಚಿಮ ಬಂಗಾಳದಿಂದ ಟಿಎಂಸಿ, ತಮಿಳುನಾಡಿನಿಂದ ಡಿಎಂಕೆ, ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಹೀಗೆ ಅನೇಕ ಪಕ್ಷಗಳನ್ನು ಆಹ್ವಾನಿಸಿ ಕಲೆಹಾಕಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿದ್ದ ಕಾಂಗ್ರೆಸ್ ಪಕ್ಷವು ಜೆಡಿಎಸ್‌ಗೆ ಆಹ್ವಾನ ಸಿಗದಂತೆ ನೋಡಿಕೊಂಡಿತ್ತು.
ಕಾಂಗ್ರೆಸ್ ವಿರುದ್ಧ ಹೋರಾಡುತ್ತಲೇ ಅಸ್ತಿತ್ವಕ್ಕೆ ಬಂದಿದ್ದ ‘ಆಮ್ ಆದ್ಮಿ’ ಮತ್ತು ಟಿಎಂಸಿ ಪಕ್ಷಗಳಿಗೆ, ಕಾಂಗ್ರೆಸ್ ಇರುವ ಈ ಮೈತ್ರಿಕೂಟ ಸೇರಲು ಇಷ್ಟ ವಿರಲಿಲ್ಲ. ಆದರೆ ಮೋದಿಯ ವರನ್ನು ಸೋಲಿಸುವ ಅನಿವಾರ್ಯದಲ್ಲಿ ಒಲ್ಲದ ಮನಸ್ಸಿನಿಂದಲೇ ಅವು ಕೈಜೋಡಿಸಿದ್ದವು. ಸದ್ಯ ಲೋಕಸಭಾ ಚುನಾವ ಣೆಗೆ ತಯಾರಿ ನಡೆಯುತ್ತಿರುವಾಗಲೇ ಮೈತ್ರಿಕೂಟದಲ್ಲಿ ಒಡಕಿನ ಮಾತು ಶುರುವಾಗಿದೆ. ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವು ದಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದೇ ತಡ, ಇತ್ತ ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್‌ಸಿಂಗ್ ಮಾನ್ ತಮ್ಮ ರಾಜ್ಯದ ೧೩ ಲೋಕ ಸಭಾ ಕ್ಷೇತ್ರಗಳಲ್ಲೂ ಆಮ್ ಆದ್ಮಿ ಸ್ಪಽಸಲಿದೆ ಎಂದಿದ್ದಾರೆ.
ಇಷ್ಟು ಸಾಲದೆಂಬಂತೆ, ‘ಪಲ್ಟು ರಾಮ್’ ಎಂದೇ ಕುಖ್ಯಾತರಾಗಿರುವ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು, ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಸಖ್ಯ ತೊರೆದು ಮತ್ತೊಮ್ಮೆ ಎನ್‌ಡಿಎ ಮೈತ್ರಿಕೂಟದತ್ತ ವಾಲಿದ್ದಾರೆ. ‘ಇಂಡಿಯ’ ಮೈತ್ರಿಕೂಟ ಇಂದು ಇಷ್ಟು ಸದ್ದುಮಾಡಿದೆಯೆಂದರೆ ಅದಕ್ಕೆ ಪ್ರಮುಖ
ಕಾರಣರಾಗಿದ್ದು ಈ ನಿತೀಶರೇ. ಅಲ್ಲಿಯವರೆಗೆ ೮ ಬಾರಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಹೊಂದಿದ್ದ ಅವರಿಗೆ ರಾಜ್ಯ ರಾಜಕಾರಣಕ್ಕೆ ಗುಡ್‌ಬೈ ಹೇಳಿ ರಾಷ್ಟ್ರ ರಾಜಕಾರಣದ ಸವಿ ನೋಡುವ ಬಯಕೆಯಿತ್ತು. ಬಿಜೆಪಿಯೊಂದಿಗೆ ಇದ್ದರೆ ಅದು ಸಾಧ್ಯವಾಗದು ಎಂದು ಲೆಕ್ಕಿಸಿ, ೨೦೨೨ರಲ್ಲಿ ಆರ್‌ಜೆಡಿ ಜತೆ
ಕೈಜೋಡಿಸಿದರು.
ಒಪ್ಪಂದದ ಪ್ರಕಾರ, ೨೦೨೪ಕ್ಕೆ ನಿತೀಶ್ ಸಿಎಂ ಗಾದಿಯಿಂದ ಕೆಳಗಿಳಿದು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲ್ಪಡುವುದು ಮತ್ತು ಲಾಲು ಪ್ರಸಾದ್ ಯಾದವರ ಮಗ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುವುದು ಎಂದಾಗಿತ್ತು. ಈ ಮಹತ್ವಾಕಾಂಕ್ಷೆಯ ಭಾಗವಾಗಿಯೇ ‘ಇಂಡಿಯ’ ಮೈತ್ರಿಕೂಟ ಜನ್ಮತಳೆದಿತ್ತು. ಆದರೆ ಕೆಲ ಕಾಲದ ನಂತರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೈತ್ರಿಕೂಟದ ಸಂಚಾಲಕರಾಗುತ್ತಿದ್ದಂತೆ ನಿತೀಶ್ ವ್ಯಗ್ರರಾ
ದರು. ಮತ್ತೊಂದೆಡೆ, ಲೋಕಸಭಾ ಚುನಾವಣೆಗೂ ಮುಂಚೆ ಮಗನನ್ನು ಸಿಎಂ ಮಾಡುವಂತೆ ಲಾಲು ಪ್ರಸಾದರು ಒತ್ತಡ ಹೇರಿದ್ದರಿಂದ, ನಿತೀಶರು ‘ಇಂಡಿಯ’ ಮೈತ್ರಿಕೂಟದಿಂದ ವಿಮುಖರಾಗಿ ಎನ್‌ಡಿಎ ಒಕ್ಕೂಟದೊಂದಿಗೆ ಕೈಜೋಡಿಸಿ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗುವಂಥ
ಬೆಳವಣಿಗೆಯಾಗಿದೆ.
ವಾಸ್ತವವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ ಎಂದರೆ ತಪ್ಪಾಗದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಜೆಡಿಯು, ಕಾಂಗ್ರೆಸ್ ಮತ್ತು ಆರ್‌ಜೆಡಿ ಒಟ್ಟಿಗೆ ಸೇರಿದರೆ ಬಿಜೆಪಿಗೆ ಕಡಿಮೆ ಸ್ಥಾನ ಗಳು ಬರಬಹುದು ಎಂಬುದು ಮೋದಿಯವರ ಲೆಕ್ಕಾಚಾರ ವಾಗಿತ್ತು. ಇದಕ್ಕೆ ತಕ್ಕಂತೆ, ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿಯ ಘೋಷಣೆಯಾದಾಗ, ಇದು ಮತದಾರರನ್ನು ಸೆಳೆಯುವ ತಂತ್ರವೆಂದೇ ಅನೇಕರು ಭಾವಿಸಿದ್ದರು. ಆದರೆ ಅದನ್ನೂ ಮೀರಿ ಸ್ವತಃ ಬಿಹಾರದ ಮುಖ್ಯಮಂತ್ರಿಯೇ ಕಮಲದ ತೆಕ್ಕೆಗೆ ಬಿದ್ದಿರುವುದು ಬಿಜೆಪಿಯು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ರಾಮಮಂದಿರ ಉದ್ಘಾಟನೆ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವಿಷಯದಲ್ಲಿ ಬಿಜೆಪಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು; ಅದರ ಸಂಪೂರ್ಣ ಶ್ರೇಯಸ್ಸಿಗೆ ಕೇಸರಿ ಪಾಳಯ ಅರ್ಹ ಕೂಡ. ಈ ಸಂದರ್ಭವನ್ನು ಕಾಂಗ್ರೆಸ್ ಸದಪಯೋಗಪಡಿಸಿಕೊಳ್ಳಬಹುದಾಗಿತ್ತಾದರೂ, ಅದನ್ನು
ಧಿಕ್ಕರಿಸುವ ಮೂಲಕ ಬಿಜೆಪಿಯ ನಿರೀಕ್ಷೆಯಂತೆಯೇ ಅದು ನಡೆದುಕೊಂಡಿತು. ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷವು ಮುಂಬರುವ ದಿನಗಳಲ್ಲಿ ಇಂಥ ದೊಡ್ಡ ನಷ್ಟವನ್ನು ಹೇಗೆ ಭರಿಸುವುದೋ ಕಾದುನೋಡಬೇಕಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ತಮಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಬಂಡೆದ್ದು ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರೀಕ್ಷೆಯಂತೆ ‘ಘರ್ ವಾಪ್ಸಿ’ ಮಾಡಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗುತ್ತಿದ್ದಂತೆ ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಶೆಟ್ಟರ್‌ರ ನಿರೀಕ್ಷೆಯಾಗಿತ್ತು; ಆದರೆ ಅದು ನೆರವೇರಲಿಲ್ಲ. ಮತ್ತೊಂದೆಡೆ ಅಯೋಧ್ಯೆಯಲ್ಲಿನ ಬಾಲರಾಮನ ಪ್ರಾಣಪ್ರತಿಷ್ಠಾಪನೆ ವೇಳೆ ಕಾಂಗ್ರೆಸ್ ನಡೆದುಕೊಂಡ
ರೀತಿಯಿಂದಾಗಿ ಜನರ ಒಲವು ಬಿಜೆಪಿಯತ್ತ ತಿರುಗಿರುವುದನ್ನು ಕಂಡ ಶೆಟ್ಟರ್ ಗೊಂದಲದಲ್ಲಿ ಸಿಲುಕಿದ್ದರು.
ಸಾಲದೆಂಬಂತೆ, ಬಿಜೆಪಿ ರಾಜ್ಯಘಟಕದ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕಗೊಂಡ ತರುವಾಯದಲ್ಲಿ ಬಿಜೆಪಿ ಪಾಳಯದಲ್ಲಿ ಮಿಂಚಿನ ಸಂಚಾರ ಶುರುವಾಗಿತ್ತು ಮತ್ತು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲೇಬೇಕೆಂದು ಬಿಜೆಪಿ ಪಣತೊಟ್ಟಿರುವ ಕಾರಣದಿಂದ ಪಕ್ಷದಿಂದ ದೂರ ವಾಗಿರುವ ಅನೇಕ ಹಿರಿಯರನ್ನು ಮರಳಿ ಕರೆತರುವ ಕಾರ್ಯಯೋಜನೆ ರೂಪುಗೊಂಡಿತ್ತು. ಅದರ ಭಾಗವಾಗಿ ಶೆಟ್ಟರ್ ಅವರನ್ನು ಪಕ್ಷವು ಸಂಪರ್ಕಿ ಸಿತ್ತು. ಅಯೋಧ್ಯೆಯ ರಾಮಮಂದಿರದ ಅಲೆಯನ್ನು ನೋಡಿದ ನಂತರ ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ ವೆಂದು ಮನಗಂಡ ಶೆಟ್ಟರ್ ಅವರು ಮತ್ತೊಮ್ಮೆ ಕಮಲ ಪಾಳಯಕ್ಕೆ ಮರಳಿದರು.
ಈ ಎಲ್ಲ ಬೆಳವಣಿಗೆಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ, ‘ಇಂಡಿಯ’ ಮೈತ್ರಿಕೂಟದ ಹಡಗು ಮುಳುಗಲಿದೆಯೇ? ಎಂಬ ಪ್ರಶ್ನೆ ಹೊಮ್ಮಿದರೆ ಅಚ್ಚರಿಯೇನಿಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)