ಪ್ರಸ್ತುತ
ಡಾ.ಜಗದೀಶ್ ಮಾನೆ
ಕೆಲ ದಿನಗಳ ಹಿಂದೆ ಜಪಾನ್‌ನಲ್ಲಿ ನಡೆದ ಶೃಂಗಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ತದನಂತರ ಅವರು ಆಸ್ಟ್ರೇಲಿಯಾ ಹಾಗೂ ಪಪುವ ನ್ಯೂಗಿನಿ ದ್ವೀಪರಾಷ್ಟ್ರಕ್ಕೆ ಭೇಟಿಕೊಟ್ಟು, ಅಲ್ಲಿ ನಡೆದ ‘ಇಂಡಿಯಾ ಪೆಸಿಫಿಕ್ ಐಲೆಂಡ್ಸ್ ಕೋಆಪರೇಷನ್’ ಶೃಂಗಸಭೆ ಯಲ್ಲಿ ಭಾಗವಹಿಸಿದ್ದರು.
ಪಪುವ ನ್ಯೂಗಿನಿ ದೇಶದ ಮರಾ- ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಮೋದಿಯವರು ಮಾತನಾಡುತ್ತ, ‘ಪೆಸಿಫಿಕ್ ಪ್ರಾಂತ್ಯದಲ್ಲಿ ಬರುವಂಥ ಈ ೧೪ ದ್ವೀಪರಾಷ್ಟ್ರಗಳಿಗೂ ಅಗಾಧ ಮಹತ್ವವಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕೀರ್ತಿಯಲ್ಲಿ ಬಹಳ ಮುಂದಿರುವಂಥ ದೇಶಗಳಿವು. ಹಾಗಾಗಿ ದೊಡ್ಡ ರಾಷ್ಟ್ರಗಳಿಗೆ ಯಾವೆಲ್ಲ ರೀತಿಯಲ್ಲಿ ನಾವು ಮಾನ್ಯತೆ ಕೊಡುತ್ತಿದ್ದೇವೋ, ಈ ದ್ವೀಪರಾಷ್ಟ್ರಗಳಿಗೂ ಅಂಥದೇ ಮನ್ನಣೆ ನೀಡಬೇಕಿದೆ’ ಎಂದರು. ಅಷ್ಟೇ ಅಲ್ಲ, ‘ಈ ದ್ವೀಪರಾಷ್ಟ್ರಗಳು ಭಾರತವನ್ನು ಒಬ್ಬ ನಂಬಿಕಸ್ತ ಸಹಭಾಗಿಯಾಗಿ ನೋಡಬಹುದು.
ಭಾರತವು ನಿಮ್ಮ ಏಳಿಗೆಗೆ ಸದಾ ಹೆಜ್ಜೆಯಿರಿಸುತ್ತಲೇ ಇರುತ್ತದೆ ಮತ್ತು ತನ್ನ ಅಭಿವೃದ್ಧಿ ತಂತ್ರಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ’ ಎಂದು ಆ ರಾಷ್ಟ್ರಗಳನ್ನು ಹುರಿದುಂಬಿಸಿ ಮಾತನಾಡಿದರು ಮೋದಿ. ಈ ಮಾತುಗಳಿಂದಾಗಿ ಆ ರಾಷ್ಟ್ರಗಳ ನಾಯಕರುಗಳಲ್ಲಿ ಉತ್ಸಾಹ ಚಿಮ್ಮಿತ್ತು. ವಿಶ್ವದ ಬೆಳೆದು ನಿಂತ ರಾಷ್ಟ್ರಗಳು ಸಣ್ಣಪುಟ್ಟ ದೇಶಗಳಿಗೆ ಸಹಕಾರ ನೀಡುವ ಗೋಜಿಗೆ ಹೋಗುವುದಿಲ್ಲ, ಬದಲಾಗಿ ಅವುಗಳ ಮೇಲೆ ಪಾರುಪತ್ಯ ಸಾಧಿಸಿ ಹುರಿದು ಮುಕ್ಕಲು ಹವಣಿಸುತ್ತವೆ ಎಂಬುದು ವಾಸ್ತವ. ಇಂಥ ಪರಿಸ್ಥಿತಿಯಲ್ಲಿ, ಭಾರತದಂಥ ದೊಡ್ಡ ದೇಶದ ಪ್ರಧಾನಿಯೇ ‘ನಿಮಗೆ ಬಹಳ ಮಹತ್ವ ವಿದೆ, ನಿಮ್ಮೊಂದಿಗೆ ನಾವಿದ್ದೇವೆ’ ಎಂದಾಗ ಆಯಾ ಪುಟ್ಟದೇಶಗಳ ಮುಖ್ಯಸ್ಥರಿಗೆ ಅದೆಷ್ಟು ಸಂತಸವಾಗಿರಬೇಕು? ಕಾರಣಕ್ಕೇ ಇಂಥ ಕೆಲವರು ಮೋದಿ ಯವರ ಕಾಲುಮುಟ್ಟಿ ನಮಸ್ಕರಿಸಿದ್ದೂ ಇದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಾ-ಯವರು ಮಾತನಾಡುತ್ತ, ‘ಮೋದಿಯವರ ಬಗ್ಗೆ ನಮಗೆ ಬಹಳ ನಂಬಿಕೆಯಿದೆ.
ಪೆಸಿಫಿಕ್ ಭಾಗದಲ್ಲಿರುವ ನಮ್ಮಂಥ ದ್ವೀಪರಾಷ್ಟ್ರಗಳು ಜಾಗತಿಕ ಶಕ್ತಿಪ್ರದರ್ಶನಕ್ಕೆ ಬಲಿಪಶುಗಳಾಗುತ್ತಿವೆ’ ಎಂದು ಮಾರ್ಮಿಕವಾಗಿ ನುಡಿದರು. ಅವರ ಮಾತಿನಲ್ಲಿ ಸತ್ಯವಿದೆ. ಜಾಗತಿಕ ಮಟ್ಟದಲ್ಲಿಂದು ನಡೆಯುತ್ತಿರುವುದು ಹೀಗೆಯೇ. ಚೀನಾ, ಅಮೆರಿಕ ಮತ್ತು ರಷ್ಯಾ ದೇಶಗಳ ನಡುವೆ ಬಹಳ ಕಾಲದಿಂದ
ವ್ಯಾಪಾರ ಸಮರ ನಡೆಯುತ್ತಲೇ ಇದೆ. ‘ನಂಬರ್ ಒನ್’ ಆರ್ಥಿಕತೆಯ ರಾಷ್ಟ್ರ ಎಂಬ ಹೆಗ್ಗಳಿಕೆ ಅಮೆರಿಕದ್ದು; ಈ ಬಾಬತ್ತಿನಲ್ಲಿ ೨ನೇ ಸ್ಥಾನದಲ್ಲಿರುವ ಚೀನಾಕ್ಕೆ ಶತಾಯಗತಾಯ ಮೊದಲ ಸ್ಥಾನ ಗಳಿಸುವ ತವಕವಿದೆ.
ಹೀಗಾಗಿ ತೆರೆಮರೆಯಲ್ಲಿ ಅದು ಇನ್ನಿಲ್ಲದಂತೆ ಯತ್ನಿಸುತ್ತಿದೆ. ಆದರೆ ಈ ಪಟ್ಟವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸಿದ್ಧವಿಲ್ಲದ ಅಮೆರಿಕ, ಎಲ್ಲ ಆಯಾಮಗಳಲ್ಲೂ ಚೀನಾಕ್ಕೆ ತಡೆಯೊಡ್ಡುವ ಕೆಲಸವನ್ನು ಮಾಡುತ್ತಲೇ ಇದೆ. ಹೀಗಾಗಿ ಚೀನಾ ಕಾಲಿಟ್ಟ ಕಡೆಯೆಲ್ಲ ಅಮೆರಿಕದ ಉಪಸ್ಥಿತಿ ಇರುತ್ತದೆ.
ಈ ರಾಷ್ಟ್ರಗಳ ಪೈಪೋಟಿ ಮುಂದುವರಿದ ಯಾವ ರಾಷ್ಟ್ರಗಳ ಮೇಲೂ ಆಗುವುದಿಲ್ಲ, ಬದಲಿಗೆ ಅದರ ಪರಿಣಾಮವಾಗುವುದು ಬಡ ಹಾಗೂ ಸಣ್ಣಪುಟ್ಟ
ದ್ವೀಪರಾಷ್ಟ್ರಗಳ ಮೇಲೆ!
ಈ ೧೪ ದ್ವೀಪರಾಷ್ಟ್ರಗಳೊಂದಿಗೂ ಚೀನಾ ಸಂಬಂಧ ಹೊಂದಿದೆ. ಅದು ಎಂಥ ಸಂಬಂಧ ಗೊತ್ತೇ? ಈ ದ್ವೀಪರಾಷ್ಟ್ರಗಳು ಕೇಳಿದಷ್ಟು ಸಾಲವನ್ನು ನೀಡುವ ಚೀನಾ, ನಂತರ ಅವು ಸಾಲದ ಸುಳಿಯಿಂದ ಹೊರಬಾರದಂತೆ ನೋಡಿಕೊಳ್ಳುತ್ತದೆ. ತದನಂತರ ಆ ದೇಶಗಳಲ್ಲಿ ತನ್ನ ಮಿಲಿಟರಿ ಅಧಿಪತ್ಯ ಸಾಽಸಲು ಯತ್ನಿಸುತ್ತದೆ. ಅಂದರೆ, ಆ ದೇಶಗಳಲ್ಲಿ ತನ್ನ ಸೇನಾನೆಲೆಯನ್ನು ಸ್ಥಾಪಿಸುತ್ತದೆ. ಪಪುವ ನ್ಯೂಗಿನಿ ದ್ವೀಪರಾಷ್ಟ್ರದಲ್ಲೂ ತನ್ನ ಸೇನಾನೆಲೆ ಸ್ಥಾಪಿಸಲು ಚೀನಾ ಹಿಂದೆ ಯತ್ನಿಸಿತ್ತು; ಆದರೆ ಅಮೆರಿಕ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ.
ಹೀಗಾಗಿ, ಜಾಗತಿಕ ಶಕ್ತಿಪ್ರದರ್ಶನಕ್ಕೆ ಬಲಿಪಶುಗಳಾಗುತ್ತಿರುವ ತಮ್ಮ ಸಂಕಷ್ಟಕ್ಕೆ ಭಾರತ ಸ್ಪಂದಿಸಿ ತಮ್ಮ ದನಿಯಾಗಿ ಕೆಲಸಮಾಡಬೇಕು ಎಂಬುದು ಈ
ದ್ವೀಪರಾಷ್ಟ್ರಗಳ ಆಶಯ. ಸದರಿ ಶೃಂಗಸಭೆಯಲ್ಲಿ ಮಾತಾಡಿದ ಮತ್ತೊಂದು ದ್ವೀಪರಾಷ್ಟ್ರದ ಪ್ರಧಾನಿ, ‘ಇದೀಗ ನಮ್ಮ ಆಶಾವಾದ ಏನೆಂದರೆ, ಇಡೀ ಗ್ಲೋಬಲ್ ಸೌತ್ ವಲಯದ ನಾಯಕರಾಗಿ ನಮಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಕಾಣಿಸುತ್ತಿದ್ದಾರೆ’ ಎಂದರು.
ಇದು ಸಾಮಾನ್ಯ ಮಾತಲ್ಲ, ಬಹಳ ದೊಡ್ಡ ನಿರೀಕ್ಷೆ. ಚೀನಾ ಕೂಡ ಈ ವಲಯದಲ್ಲಿ ಬರುವಂಥ ರಾಷ್ಟ್ರವಾದ್ದರಿಂದ ಅಂಥದೊಂದು ನಾಯಕತ್ವಕ್ಕಾಗಿ ಬಹಳ ದೊಡ್ಡ ಪ್ರಯತ್ನ ನಡೆಸಿದೆ. ೧೯೮೦ರ ಕಾಲಘಟ್ಟದಲ್ಲಿ ಇಡೀ ವಿಶ್ವವನ್ನು ‘ಶ್ರೀಮಂತ ವಾದ ಉತ್ತರಾರ್ಧ ಗೋಳ’ ಹಾಗೂ ‘ಹಿಂದುಳಿದ
ದಕ್ಷಿಣಾರ್ಧ ಗೋಳ’ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ದಕ್ಷಿಣ ವಲಯದಲ್ಲಿರುವಂಥ ಬಹುತೇಕ ದೇಶಗಳು ಇನ್ನೂ ಅಭಿವೃದ್ಧಿ ಹೊಂದುತ್ತಿರುವಂಥ ರಾಷ್ಟ್ರಗಳು. ಈ ಸಂದರ್ಭದಲ್ಲಿ ಚೀನಾ ಕೂಡ ಅಷ್ಟೇನೂ ಮುಂದುವರಿದಿರಲಿಲ್ಲ.
ಗಣನೀಯ ಅಭಿವೃದ್ಧಿ ಸಾಧಿಸಿರುವ ಉತ್ತರಾರ್ಧ ಗೋಳದ ರಾಷ್ಟ್ರಗಳು, ದಕ್ಷಿಣ ವಲಯದ ಬಡದೇಶಗಳ ಮೇಲೆ ಅಧಿಪತ್ಯ ಸಾಧಿಸಲು ಸದಾ ಹವಣಿಸುತ್ತಿರುತ್ತವೆ, ದಬ್ಬಾಳಿಕೆ ಮಾಡುತ್ತಿರುತ್ತವೆ. ಯುರೋಪ್ ಖಂಡದ ದೇಶಗಳು ಹೆಚ್ಚಾಗಿ ಇಂಥ ಯತ್ನದಲ್ಲಿರುತ್ತಿದ್ದವು. ಅದರಲ್ಲೂ ಅಮೆರಿಕ ವಂತೂ ಎಲ್ಲ ರಾಷ್ಟ್ರಗಳೂ ತಾನು ಹೇಳಿದಂತೆಯೇ ಕೇಳಬೇಕೆಂದು ಆಗ್ರಹಿಸುತ್ತಿತ್ತು. ಇಂಥ ವರ್ತನೆಗಳಿಂದ ಬೇಸತ್ತ ದಕ್ಷಿಣದ ದ್ವೀಪರಾಷ್ಟ್ರಗಳು, ತಮ್ಮ ನೋವಿಗೆ ದನಿಯಾಗಿ ತಮಗೆ ಸಾಥ್ ನೀಡಬಲ್ಲಂಥ ನಿಸ್ವಾರ್ಥಿ ಹಾಗೂ ಪ್ರಾಮಾಣಿಕ ನಾಯಕನ ತಲಾಶೆಯಲ್ಲಿದ್ದವು. ತಾನೊಂದು ಮುಂದುವರಿದ ರಾಷ್ಟ್ರ ಎಂಬ ಅಹಮಿಕೆಯಲ್ಲಿರುವ ಚೀನಾ, ಅರ್ಧ ವಿಶ್ವದ ನಾಯಕತ್ವ ತನಗೇ ಸಿಗುತ್ತದೆ ಎಂದು ಹಗಲುಗನಸು ಕಾಣುತ್ತಾ ಕೂತಿದೆ. ಆದರೆ, ‘ಗ್ಲೋಬಲ್ ಸೌತ್’ನ ನಾಯಕ ಭಾರತದ ಪ್ರಧಾನಿ ಮೋದಿಯವರೇ ಎಂಬ ೧೪ ರಾಷ್ಟ್ರಗಳ ಏಕಕಂಠದ ದನಿಯ ಬಿಸಿ ಚೀನಾಕ್ಕೆ ಬಹಳಷ್ಟು ತಟ್ಟಿದಂತೆ ಕಾಣುತ್ತದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಅಧಿಪತ್ಯ ಸಾಧಿಸಲು ಹವಣಿಸುತ್ತಿರುವ ಚೀನಾಕ್ಕೆ ತಮ್ಮ ನಾಯಕತ್ವವನ್ನು ಕೊಟ್ಟುಬಿಟ್ಟರೆ ತಮಗೇ ಸಮಸ್ಯೆಯಾಗುವುದು ಕಟ್ಟಿಟ್ಟಬುತ್ತಿ; ಬದಲಿಗೆ ಭಾರತಕ್ಕೆ ಅದು ದಕ್ಕಿದರೆ ತಾವು ಸ್ವಲ್ಪವಾದರೂ ಅಭಿವೃದ್ಧಿಯಾಗಬಹುದು ಎಂದು ನಂಬಿವೆ ಈ ದ್ವೀಪರಾಷ್ಟ್ರಗಳು. ಮುಖ್ಯವಾಗಿ ಭಾರತ ನಂಬಿಕಸ್ತ ರಾಷ್ಟ್ರ, ಚೀನಾದಂಥ ನರಿಬುದ್ಧಿ ಭಾರತಕ್ಕಿಲ್ಲ. ಇದುವರೆಗೂ ಭಾರತವು ತನ್ನ ಸಾಮ್ರಾಜ್ಯ ವಿಸ್ತರಣೆಗೆ ಹಪಹಪಿಸಿಲ್ಲ
ಅಥವಾ ಮತ್ತೊಂದು ರಾಷ್ಟ್ರದ ಮೇಲೆ ದಬ್ಬಾಳಿಕೆ ನಡೆಸಿದ ಉದಾಹರಣೆಯಿಲ್ಲ. ಬಹುಪಕ್ಷೀಯ ಬಾಂಧವ್ಯದಲ್ಲಿ ವಿಶ್ವಾಸವಿಟ್ಟಿರುವ ಭಾರತವೇ ತಮ್ಮ ನಾಯಕ ಎಂದು ಈ ದ್ವೀಪರಾಷ್ಟ್ರಗಳು ಒಪ್ಪಿಕೊಂಡಿವೆ.
ಭಾರತ, ಚೀನಾ, ಪಾಕಿಸ್ತಾನ, ಅಫ್ಗಾನಿಸ್ತಾನ, ಸೌದಿ ಅರೇಬಿಯಾ, ಇಂಡೋನೇಷ್ಯಾ, ವಿಯೆಟ್ನಾಂ, ಮ್ಯಾನ್ಮಾರ್, ದಕ್ಷಿಣ ಅಮೆರಿಕಾ, ಆಫ್ರಿಕಾದ ರಾಷ್ಟ್ರಗಳು, ಮೆಕ್ಸಿಕೋ ಸೇರಿದಂತೆ ಅನೇಕ ರಾಷ್ಟ್ರಗಳು ‘ಗ್ಲೋಬಲ್ ಸೌತ್’ ವ್ಯಾಪ್ತಿಯಲ್ಲಿ ಬರುವಂಥವು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
ದೇಶಗಳು ಭೌಗೋಳಿಕವಾಗಿ ಈ ವ್ಯಾಪ್ತಿಯಲ್ಲಿದ್ದರೂ ಅವನ್ನು ‘ಗ್ಲೋಬಲ್ ನಾರ್ತ್’ ಪಟ್ಟಿಗೆ ಸೇರಿಸಲಾಗಿದೆ. ಕಾರಣ, ೧೯೮೦ರ ದಶಕದಲ್ಲೇ ಅವರು ಮುಂದುವರಿದ ರಾಷ್ಟ್ರಗಳಾಗಿದ್ದವು ಮತ್ತು ಅವುಗಳ ಮನಸ್ಥಿತಿಯೂ ಪಾಶ್ಚಾತ್ಯರ ಮನಸ್ಸಿಗೆ ಚೆನ್ನಾಗಿ ಹೊಂದುವಂತಿತ್ತು.
ಹೀಗೆ ಒಂದಿಡೀ ವಿಶ್ವವನ್ನು ಇಬ್ಭಾಗ ಮಾಡಿ, ಹಿಂದುಳಿದ ದೇಶಗಳ ಮೇಲೆ ದಬ್ಬಾಳಿಕೆ ನಡೆಸುವ ಯತ್ನಗಳಾಗಿವೆ. ಇದಕ್ಕೆದುರಾಗಿ ದಕ್ಷಿಣ ಗೋಳದ ರಾಷ್ಟ್ರಗಳು ಒಗ್ಗಟ್ಟಾಗಿ ದನಿಯೆತ್ತಬೇಕಿದೆ. ಈ ಕಾರಣದಿಂದಲೇ ಇತ್ತೀಚೆಗೆ ನಡೆದ ಶೃಂಗಸಭೆಯ ಅಂತ್ಯದಲ್ಲಿ ‘ಗ್ಲೋಬಲ್ ಸೌತ್’ ವಲಯದ ನಾಯಕತ್ವ ವಹಿಸಿಕೊಳ್ಳುವಂತೆ ಈ ೧೪ ರಾಷ್ಟ್ರಗಳು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿಕೊಂಡಿದ್ದು. ಈ ವಿಷಯವೀಗ ಇಡೀ ವಿಶ್ವದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.