Friday, 20th September 2024

ದಶಕದಲ್ಲಿ ಸುರಕ್ಷಿತವಾದ ಭಾರತ

ವೀಕೆಂಡ್ ವಿತ್ ಮೋಹನ್

camohanbn@gmail.com

‘ಭೂಲೋಕದ ಸ್ವರ್ಗ’ ಕಾಶ್ಮೀರವೆಂದರೆ ಹೆದರುವ ಪರಿಸ್ಥಿತಿಯಿತ್ತು. ಇಲ್ಲಿಗೆ ತೆರಳಲು ಪ್ರವಾಸಿಗರಿಗೆ ದಿಗಿಲಾಗುತ್ತಿತ್ತು. ಪ್ರತಿ ವರ್ಷದ ಅಮರ ನಾಥ ಯಾತ್ರೆಯ ವೇಳೆ ಉಗ್ರರ ದಾಳಿಯಾಗುತ್ತಿತ್ತು. ಯಾತ್ರೆಯನ್ನು ಶಾಂತಿಯುತವಾಗಿ ನಡೆಸುವುದೇ ಒಂದು ಸಾಹಸವಾಗಿತ್ತು. ಆದರೆ ಇಂದು ಪರಿಸ್ಥಿತಿ ಹೀಗಿಲ್ಲ.

ಸುಮಾರು ೧೦-೧೫ ವರ್ಷಗಳ ಹಿಂದೆ ಭಾರತದಲ್ಲಿ ನಡೆಯುತ್ತಿದ್ದಂಥ ಭಯೋತ್ಪಾದಕ ಕೃತ್ಯಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಭಾರತದ ಗಡಿಯ ಮೂಲಕ ಭಯೋತ್ಪಾದಕರು ಒಳನುಸುಳಿ ಸಿಕ್ಕಸಿಕ್ಕ ಕಡೆ ದಾಳಿ ನಡೆಸುವುದು ಸಾಮಾನ್ಯವಾಗಿತ್ತು. ವರ್ಷದಲ್ಲಿ ಕನಿಷ್ಠವೆಂದರೂ ನಾಲ್ಕರಿಂದ ಐದು ನಗರಗಳಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದವು. ಕಾಶ್ಮೀರದ ಮೂಲಕ ದೇಶದ ವಿವಿಧೆಡೆಗೆ ಉಗ್ರರ ರವಾನೆಯಾಗುತ್ತಿತ್ತು.

ಭಾರತೀಯ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯವಿರಲಿಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದನ್ನೇ ಅಸ್ತ್ರವಾಗಿಸಿಕೊಂಡ ಪಾಕಿಸ್ತಾನ ಐಎಸ್‌ಐ ಮೂಲಕ ತರಬೇತಿ ನೀಡಿ ಉಗ್ರರನ್ನು ಭಾರತದೊಳಗೆ ನುಸುಳಿಸುತ್ತಿತ್ತು. ೨೦೦೪- ೨೦೧೪ರ ನಡುವೆ ನಡೆದ ಕೆಲವೊಂದು ಪ್ರಮುಖ ಭಯೋತ್ಪಾದಕ ದಾಳಿಗಳನ್ನೊಮ್ಮೆ ನೆನಪಿಸಿಕೊಂಡರೆ ಭಾರತದಲ್ಲಿ ದ್ದಂಥ ಅಭದ್ರತೆಯ ಅರಿವಾಗುತ್ತದೆ.

ಅಯೋಧ್ಯೆಯಲ್ಲಿಂದು ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ. ಆದರೆ ದಶಕಗಳ ಹಿಂದೆ, ಅಲ್ಲಿ ಮಂದಿರ ನಿರ್ಮಾಣವಾದರೆ ರಕ್ತಪಾತವಾಗುತ್ತದೆ ಯೆಂಬ ಸಂದೇಶಗಳು ದೇಶದೆಲ್ಲೆಡೆ ಕೇಳಿಬರುತ್ತಿದ್ದವು. ಜುಲೈ ೨೦೦೫ ರಲ್ಲಿ ಅಯೋಧ್ಯೆಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೬ ಮಂದಿ ಪ್ರಾಣ ಕಳೆದುಕೊಂಡಿದ್ದರು, ನೂರಾರು ಜನ ಗಾಯಗೊಂಡಿದ್ದರು. ಅಕ್ಟೋಬರ್ ೨೦೦೫ರಲ್ಲಿ ದೆಹಲಿ ಯಲ್ಲಿ ಸರಣಿ ಬಾಂಬ್ ಸ್ಫೋಟವಾಗಿತ್ತು. ಅಲ್ಲಿನ ಜನನಿಬಿಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ ಸುಮಾರು ೭೦ ಜನ ಮೃತಪಟ್ಟು, ೨೫೦ಕ್ಕೂ ಹೆಚ್ಚು ಜನ ಗಾಯ ಗೊಂಡರು. ಈ ಕೃತ್ಯದ ಹಿಂದೆ ಮತ್ತದೇ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಕೈವಾಡ ವಿದ್ದದ್ದು ಜಗಜ್ಜಾಹೀರಾಗಿತ್ತು.

ಈ ಕೃತ್ಯ ನಡೆದ ಕೇವಲ ೨ ತಿಂಗಳ ನಂತರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಆವರಣದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿಯಾಗಿತ್ತು. ೨೦೦೬ರ ಭಯೋತ್ಪಾದಕ ಕೃತ್ಯಗಳಲ್ಲಿ ದೊಡ್ಡ ನಗರಗಳೇ ಟಾರ್ಗೆಟ್ ಆಗಿದ್ದವು. ೨೦೦೬ರ ಮಾರ್ಚ್ನಲ್ಲಿ ವಾರಾಣಸಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ೨೮ ಜನ ಮೃತ ಪಟ್ಟು, ೧೫೦ಕ್ಕೂ ಹೆಚ್ಚು ಜನ ಗಾಯಗೊಂಡರು. ತದನಂತರ ಜುಲೈನಲ್ಲಿ, ಮುಂಬೈ ನಗರದ ಜನರ ದಿನನಿತ್ಯದ
ಜೀವನಾಡಿಯಾದ ಲೋಕಲ್ ರೈಲುಗಳ ಮೇಲೆ ಏಳು ಕಡೆ ಭಯೋತ್ಪಾದಕರಿಂದ ಬಾಂಬುಗಳ ದಾಳಿಯಾಯಿತು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭಯೋತ್ಪಾದಕರು ಭಾರತದ ಈ ವಾಣಿಜ್ಯ ರಾಜಧಾನಿಯ ಮೇಲೆ ಎರಗಿದ್ದರು.

ಈ ದಾಳಿಯಲ್ಲಿ ೨೦೯ ಜನ ಮೃತಪಟ್ಟು, ೭೦೯ ಜನ ಗಾಯಗೊಂಡರು. ನಂತರ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ನಡೆದ ದಾಳಿಯಲ್ಲಿ ೪೦ ಜನರು ಮೃತಪಟ್ಟರು. ೨೦೦೭ರಲ್ಲಿಯೂ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿತ್ತು. ಹರಿಯಾಣದಲ್ಲಿ ಸಂಝೋತಾ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ೭೦ ಜನ ಮೃತಪಟ್ಟರು. ನಂತರ ಆಗಸ್ಟ್‌ನಲ್ಲಿ ಹೈದರಾಬಾದಿನ ೨ ಕಡೆ ನಡೆದ ಉಗ್ರರ ದಾಳಿಯಲ್ಲಿ ೪೨ ಜನ ಮೃತಪಟ್ಟು, ೫೪ ಜನ ಗಾಯ ಗೊಂಡರು. ನಂತರ ನವೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ೧೬ ಜನ ಮೃತಪಟ್ಟರು. ೨೦೦೮ರಲ್ಲಿ
ರಾಜಸ್ಥಾನದ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೭೧ ಜನ ಮೃತಪಟ್ಟು, ೨೦೦ಕ್ಕೂ ಅಧಿಕ ಜನ ಗಾಯಗೊಂಡರು.

ಜೈಪುರದ ೬ ಕಡೆಗಳಲ್ಲಿ ೯ ಬಾಂಬುಗಳನ್ನು ಸ್ಪೋಟಿಸಲಾಗಿತ್ತು. ಜುಲೈ ೨೦೦೮ರಲ್ಲಿ ಬೆಂಗಳೂರಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಬ್ಬರು ಮೃತಪಟ್ಟು ೨೦ ಜನ ಗಾಯಗೊಂಡರು. ಅದೇ ತಿಂಗಳು ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ೫೬ ಮಂದಿ ಮೃತಪಟ್ಟು, ೨೦೦ ಜನ ಗಾಯಗೊಂಡು; ಅಲ್ಲಿ ೧೭ ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ತದನಂತರ ನವೆಂಬರ್‌ನಲ್ಲಿ ದೆಹಲಿಯ ಮಾರುಕಟ್ಟೆಗಳ ಮೇಲಾದ ದಾಳಿಯಲ್ಲಿ ೩೩ ಮಂದಿ ಮೃತಪಟ್ಟರು. ನಂತರ ಅಕ್ಟೋಬರ್‌ನಲ್ಲಿ ಅಸ್ಸಾಂನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೪೦ ಮಂದಿ ಸಾವನ್ನಪ್ಪಿದರು.

ನಂತರ ನವೆಂಬರ್ ನಲ್ಲಿ ಪಾಕಿಸ್ತಾನದಿಂದ ದೋಣಿಯ ಮೂಲಕ ಮುಂಬೈಗೆ ಬಂದಿಳಿದ ಭಯೋತ್ಪಾದಕರು ಅಲ್ಲಿನ ರಸ್ತೆಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ನಗರದ ಹೃದಯಭಾಗವಾದ ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ನುಗ್ಗಿ, ಪ್ರಯಾಣಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ನಂತರ ಪ್ರತಿಷ್ಠಿತ ತಾಜ್ ಹೋಟೆಲಿ ನೊಳಗೆ ನುಗ್ಗಿ ಅಮಾಯಕರ ಮೇಲೆ ಗುಂಡಿನ ಮಳೆ ಸುರಿಸಿದ್ದರು. ಅಜ್ಮಲ್ ಕಸಬ್ ಎಂಬ ಪಾಕಿಸ್ತಾನಿ ಉಗ್ರ ಪೊಲೀಸರ ಕೈಗೆ ಸಿಕ್ಕಿ, ದಾಳಿಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದ.

ಮುಂಬೈ ಮೇಲಾದ ದಾಳಿಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ೩ ದಿನಗಳ ಕಾಲ ಸುದ್ದಿ ಮಾಡಿದ್ದವು. ಪಾಕಿಸ್ತಾನದಲ್ಲಿ ಕುಳಿತಿದ್ದವರು ದಾಳಿಯ ಇಂಚಿಂಚೂ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತಿದ್ದರು. ಲೋಕಸಭೆ ಚುನಾವಣೆಗೆ ೫ ತಿಂಗಳ ಸಮಯ ಇರುವಾಗಲೇ ಮುಂಬೈ ನಲ್ಲಿ ದೊಡ್ಡ ಮಟ್ಟದ ದಾಳಿ ನಡೆದಿತ್ತು. ೨೦೦೪-೨೦೦೯ರ ನಡುವೆ ನಡೆದಿದ್ದ ಭಯೋತ್ಪಾದಕ ದಾಳಿಯು, ವಿದೇಶಿ ಪ್ರವಾಸಿಗರು ಭಾರತಕ್ಕೆ ಬರಲು ಹೆದರುವಂತೆ ಮಾಡಿತ್ತು.

ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪಾತಾಳಕ್ಕೆ ತಲುಪಿತ್ತು. ಭಾರತವೆಂದರೆ ಅಸುರಕ್ಷಿತ ದೇಶವೆಂಬ ಮನೋಭಾವನೆ ವಿದೇಶಿಗರಲ್ಲಿತ್ತು. ಭಯೋತ್ಪಾದಕರು ವಿದೇಶಿಗರನ್ನೇ ಗುರಿಯಾಗಿಸಿಕೊಂಡು ಮುಂಬೈ ಮತ್ತು ದೆಹಲಿ ನಗರಗಳ ಮೇಲೆ ದಾಳಿ ನಡೆಸಿದ್ದರು. ಫೆಬ್ರುವರಿ ೨೦೧೦ರಲ್ಲಿ ಪುಣೆಯಲ್ಲಿ ನಡೆದ ಸೋಟದಲ್ಲಿ ೧೭ ಜನ ಮೃತಪಟ್ಟರು. ಏಪ್ರಿಲ್ ಮತ್ತು ಮೇ ೨೦೧೦ರಲ್ಲಿ ನಕ್ಸಲರು ದಾಂತೇವಾಡದಲ್ಲಿ ನಡೆಸಿದ ದಾಳಿ ಯಲ್ಲಿ ೧೩೦ಕ್ಕೂ ಅಧಿಕ ಜನ ಮೃತಪಟ್ಟರು. ಈ ದಾಳಿಯನ್ನು ನಕ್ಸಲರ ಹೋರಾಟದ ಭಾಗವೆಂದಿದ್ದರು ಎಡಚರ ಪತ್ರಕರ್ತೆ ಬರ್ಖಾ ದತ್.

೨೦೧೧ರಲ್ಲಿ ಮುಂಬೈನಲ್ಲಿ ಮತ್ತೊಮ್ಮೆ ಸರಣಿ ಬಾಂಬ್ ಸ್ಫೋಟವಾಗಿ ೨೬ ಮಂದಿ ಮೃತಪಟ್ಟರೆ, ದೆಹಲಿಯಲ್ಲಿ ಮತ್ತೊಮ್ಮೆ ನಡೆದ ಸರಣಿ  ಭಯೋತ್ಪಾದಕ ಕೃತ್ಯದಲ್ಲಿ ೧೫ ಮಂದಿ ಮೃತಪಟ್ಟರು. ೨೦೧೩ರಲ್ಲಿ ಹೈದರಾಬಾದಿನಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ೧೮ ಮಂದಿ ಮೃತಪಟ್ಟರು.
೨೦೦೪-೨೦೧೪ರ ನಡುವೆ ದೇಶದ ಮೂಲೆ ಮೂಲೆಗಳಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದವು. ಭಾರತವನ್ನು ತಮ್ಮ ಕುಕೃತ್ಯಗಳ ಪ್ರಯೋಗಾ ಲಯವಾಗಿಸಿಕೊಂಡ ಉಗ್ರರು, ಅದಕ್ಕೆ ಬಳಸುವ ಕಚ್ಚಾ ವಸ್ತುಗಳನ್ನು ಗಡಿಗಳ ಮೂಲಕ ಸುಲಭವಾಗಿ ಒಳಗೆ ತರುತ್ತಿದ್ದರು. ೨೦೦೮ರಲ್ಲಿ ಮುಂಬೈನಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿ ತಿಳಿದ ನಂತರವೂ ಮನಮೋಹನ್‌ಸಿಂಗ್ ನೇತೃತ್ವದ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಲಿಲ್ಲ.

ಕೇವಲ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳು ವುದಾಗಿ ಹೇಳಿತ್ತು. ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ದೊಡ್ಡ ಮಟ್ಟದ ಪ್ರತಿದಾಳಿ ನಡೆಸಬಹುದಾಗಿತ್ತು, ಭಾರತೀಯ ಸೈನ್ಯ ಇದಕ್ಕೆ ಸನ್ನದ್ಧವಾಗಿತ್ತು; ಆದರೆ ದಾಳಿ ನಡೆಸುವ ಸ್ವಾತಂತ್ರ್ಯ ವನ್ನು ಅದಕ್ಕೆ ಕೇಂದ್ರ ಸರಕಾರ ನೀಡಲಿಲ್ಲ. ಕಳೆದ ದಶಕದಲ್ಲಿ ಬದಲಾದ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾಗರಿಕರನ್ನು ಗುರಿಯಾಗಿಸಿ ಕೊಂಡು ಭಯೋತ್ಪಾದಕರು ನಡೆಸುತ್ತಿದ್ದ ಕೃತ್ಯಗಳು ಕಣ್ಮರೆಯಾಗಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರನ್ನು ಗುರಿಯಾಗಿಸಿ ಕೊಂಡು ನಡೆದಿರುವ ದಾಳಿಯನ್ನು ಹೊರತುಪಡಿಸಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಯ ಉದಾಹರಣೆ ಬೆರಳೆಣಿಕೆಯಷ್ಟು. ೨೦೧೯ರಲ್ಲಿ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ
ನಡೆಸಲಾದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನಿ ಪ್ರಾಯೋ ಜಿತ ಭಯೋತ್ಪಾದಕರ ನೆಲೆಗಳು ಸರ್ವನಾಶವಾದವು. ಕಾಶ್ಮೀರದಲ್ಲಿ ಸಂವಿಧಾನದ ವಿಧಿ  ೩೭೦ನ್ನು ತೆಗೆದ ಬಳಿಕ ರಕ್ತಪಾತವಾಗುತ್ತದೆಯೆಂದು ಹೇಳಲಾಗಿತ್ತು. ಆದರೆ ಕಳೆದ ೫ ವರ್ಷಗಳಲ್ಲಿ ಅಂಥದ್ದೇನೂ ಆಗಲಿಲ್ಲ. ಭಾರತದ ಗಡಿಗಳನ್ನು
ತಂತ್ರಜ್ಞಾನದ ಮೂಲಕ ಮತ್ತಷ್ಟು ಭದ್ರಗೊಳಿಸಲಾಗಿದೆ, ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಭಾರತ ಇಂದು ಭಯೋತ್ಪಾದಕರ ನೆಚ್ಚಿನ ತಾಣವಾಗಿ ಉಳಿದಿಲ್ಲ, ಭಾರತದೊಳಗೆ ಕುಕೃತ್ಯ ನಡೆಸಲು ಉಗ್ರರು ಹೆದರುವಂತಾಗಿದೆ. ವಿದೇಶದಲ್ಲಿ ಕುಳಿತು ಭಾರತದ ಮೇಲೆ ಕತ್ತಿ ಮಸೆಯುತ್ತಿದ್ದವರು ಒಬ್ಬೊಬ್ಬರೇ ಅನಾಮಿಕರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಬಾಲಾಕೋಟ್ ವೈಮಾನಿಕ ದಾಳಿ ಯಲ್ಲಿ ಪಾಕಿಗಳ ಕೈಯಲ್ಲಿ ಸಿಲುಕಿದ್ದ ಅಭಿನಂದನ್ ಕೇವಲ ೭೨ ಗಂಟೆಗಳಲ್ಲಿ ಭಾರತಕ್ಕೆ ವಾಪಸ್ ಬಂದರು. ಒಂದು ಕಾಲದಲ್ಲಿ, ಭಾರತೀಯ ಸೈನಿಕರು ಪಾಕಿಗಳ ಕೈಗೆ ಸಿಕ್ಕರೆ ಚಿತ್ರಹಿಂಸೆ ನೀಡಿ ಸಾಯಿಸುತ್ತಿದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೆರೆಸಿಕ್ಕ ಭಾರತೀಯ ಸೈನಿಕರನ್ನು ಪಾಕಿಗಳು ಅಮಾನುಷವಾಗಿ ನಡೆಸಿ ಕೊಂಡು ಹತ್ಯೆ ಮಾಡಿದ್ದರು.

ಭಯೋತ್ಪಾದಕರಿಗೆ ಭಾರತದ ಗಡಿಗಳು ಬಂದ್ ಆಗುತ್ತಿದ್ದಂತೆ, ದೇಶದೊಳಗಿದ್ದ ‘ಸ್ಲೀಪರ್ ಸೆಲ್’ಗಳಲ್ಲಿರುವ ಉಗ್ರರನ್ನು ಬಂಧಿಸಿ ಜೈಲಿಗಟ್ಟಲಾಗುತ್ತಿದೆ. ಭಾರತದ ನಾಗರಿಕರ ಭದ್ರತೆಗಾಗಿ ಪ್ರತಿನಿತ್ಯ ಆಂತರಿಕ ಭದ್ರತಾ ಪಡೆಗಳು ಒಂದಿಲ್ಲೊಂದು ಕಡೆ ಸ್ಲೀಪರ್ ಸೆಲ್ ಉಗ್ರರನ್ನು ಬಂಧಿಸುತ್ತಿವೆ. ದೆಹಲಿಯ ಕೆಂಪುಕೋಟೆಯಲ್ಲಿ ೨೦೧೩ರವರೆಗೂ ‘ಗುಂಡು ನಿರೋಧಕ’ ಗಾಜಿನ -ಲಕದ ಹಿಂದೆ ನಿಂತು ಪ್ರಧಾನಮಂತ್ರಿ ಗಳು ಭಾಷಣ ಮಾಡುತ್ತಿದ್ದರು. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದ ಕಳೆದ ೧೦ ವರ್ಷಗಳಲ್ಲಿ ಒಂದು ವರ್ಷವೂ ಕೆಂಪುಕೋಟೆಯ ಭಾಷಣದ ವೇಳೆ ಗುಂಡು ನಿರೋಧಕ ಗಾಜಿನ ಫಲಕವನ್ನು ಬಳಸಿಕೊಂಡಿಲ್ಲ.

ಕಾಶ್ಮೀರವೆಂದರೆ ಹೆದರುವ ಪರಿಸ್ಥಿತಿಯಿತ್ತು. ಭೂಲೋಕದ ಈ ಸ್ವರ್ಗಕ್ಕೆ ತೆರಳಲು ಪ್ರವಾಸಿಗರು ಹೆದರುತ್ತಿದ್ದರು. ಪ್ರತಿವರ್ಷದ ಅಮರನಾಥ ಯಾತ್ರೆಯ ವೇಳೆ ಉಗ್ರರ ದಾಳಿ ಯಾಗುತ್ತಿತ್ತು. ಯಾತ್ರೆಯನ್ನು ಶಾಂತಿಯುತವಾಗಿ ನಡೆಸುವುದೇ ಒಂದು ಸಾಹಸವಾಗಿತ್ತು. ಆದರೆ ಇಂದು ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಸೈನಿಕರ ವಾಹನಗಳಿಗೆ ಕಲ್ಲು ಹೊಡೆಯುತ್ತಿದ್ದವರ ಕೈಗೆ ಕೆಲಸ ನೀಡಲಾಗಿದೆ. ಯಾತ್ರೆಗಳು ಸುಗಮವಾಗಿ ನಡೆಯುತ್ತಿವೆ. ದೇಶದ ವಿವಿಧೆಡೆ ಗಳಿಂದ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಆರ್ಥಿಕತೆಗೆ ಉತ್ತೇಜನ ನೀಡುತ್ತಿದ್ದಾರೆ. ‘ಲಾಲ್ ಚೌಕ್’ ಎಂಬ ಹೆಸರನ್ನು ಕೇಳಿದರೆ ಭಯವಾಗು ತ್ತಿದ್ದಂಥ ಕಾಲವಿತ್ತು. ಆದರೆ ಇಂದು ಅದೇ ಲಾಲ್ ಚೌಕ್‌ನಲ್ಲಿ ತ್ರಿವರ್ಣಧ್ವಜ ಹಾರಾಡುತ್ತಿದೆ.

ಅಕ್ಕಪಕ್ಕದ ರಸ್ತೆಗಳಲ್ಲಿ ಪ್ರವಾಸಿಗರು ಕಾಶ್ಮೀರಿ ಕರಕುಶಲ ವಸ್ತುಗಳನ್ನು ಖರೀದಿಸುವುದು ಸಾಮಾನ್ಯವಾಗಿಬಿಟ್ಟಿದೆ. ಸಂಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬಂದು ಗಟ್ಟಿ ನಾಯಕತ್ವವಿದ್ದರೆ, ಆ ದೇಶದ ನಾಗರಿಕರು ಸುರಕ್ಷಿತವಾಗಿ ಇರಬಲ್ಲರೆಂಬುದನ್ನು ನರೇಂದ್ರ ಮೋದಿ ಕಳೆದ ೧೦ ವರ್ಷಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಪ್ರವಾಸಿಗರು ಬರಲು ಹೆದರು ತ್ತಿದ್ದಂಥ ಕಾಲ ಮುಗಿದು, ಜಿ-೨೦ ಶೃಂಗಸಭೆಯನ್ನು ಕಾಶ್ಮೀರದಲ್ಲಿ ನಡೆಸುವ ಮಟ್ಟಕ್ಕೆ ಭಾರತದ ಪರಿಸ್ಥಿತಿ ಬದಲಾಗಿದೆ.

ವಿದೇಶಿ ನೇರ ಬಂಡವಾಳ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಭಾರತಕ್ಕೆ ಹರಿದುಬಂದಿದೆ. ಕಳೆದ ಒಂದು ದಶಕದಲ್ಲಿ ಬದಲಾದ ಭಾರತದಲ್ಲಿ ಭಯೋತ್ಪಾದಕರು ಬಿಲ ಸೇರಿದ್ದಾರೆ, ನಾಗರಿಕರು ಸುರಕ್ಷಿತರಾಗಿದ್ದಾರೆ.