Saturday, 14th December 2024

ದೇವಕಣದಲ್ಲಿ ಅಜರಾಮರವಾದ ಭಾರತೀಯ ವಿಜ್ಞಾನಿ

ತನ್ನಿಮಿತ್ತ

ಎಲ್‌.ಪಿ.ಕುಲಕರ್ಣಿ

ಪ್ರತಿಯೊಬ್ಬರಿಗೂ ಸೃಷ್ಟಿಯ ರಹಸ್ಯ ತಿಳಿದುಕೊಳ್ಳಬೇಕೆಂಬ ಕುತೂಹಲ ವಿರುತ್ತದೆ. ಹೌದು ಈ ಜಗತ್ತು ಹೇಗೆ ರೂಪುಗೊಂಡಿತು? ಅದಕ್ಕಿಂತಲೂ ಮೊದಲು ಇಲ್ಲಿ ಏನಾದರೂ ಇತ್ತೆ? ಹಾಗಾದರೆ ಜಗತ್ತಿನ ಸೃಷ್ಟಿಗೆ ಕಾರಣೀಭೂತವಾದ ಆ ಮೂಲ ಕಣ ಯಾವುದು?.

ಎಂಬೆ ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಹಾಗೆ ಯೋಚಿಸುತ್ತಾ ಕುಳಿತಾಗ ನಮಗೆ ಕಣ್ಣಮುಂದೆ ಬಂದು ನಿಲ್ಲುವುದೇ ಹಿಗ್ಸ್ – ಬೋಸಾನ್ ಕಣ ಅರ್ಥಾತ್ ‘ದೇವ ಕಣ (ಗಾಡ್ ಪಾರ್ಟಿಕಲ್)’. 13.7 ಶತಕೋಟಿ ವರ್ಷಗಳ ಹಿಂದಿನ ಮಹಾ ಸ್ಫೋಟದ (ಬಿಗ್ ಬ್ಯಾಂಗ್) ನಂತರ ನಕ್ಷತ್ರಗಳು ಮತ್ತು ಗ್ರಹಗಳು ಅಸ್ತಿತ್ವಕ್ಕೆ ಕಾರಣವಾದ ಮೂಲ ದ್ರವ್ಯ ಎಂದು ನಂಬಲಾಗಿರುವ ಮೂಲ ಕಣ ಇದು.

ದೇವ ಕಣದ ರಹಸ್ಯ ಭೇದಿಸುವ ನಿಟ್ಟಿನಲ್ಲಿ ಕಳೆದ 50 ವರ್ಷಗಳಿಂದ ನಡೆದಿರುವ ಸಂಶೋಧನೆಗೆ ಫಲ ಸಿಕ್ಕಿದೆ ಎಂದು
ಸ್ವಿಜರ್ಲ್ಯಾಂಡ್‌ನ ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್‌ಎನ್) ಸಂತಸ ವ್ಯಕ್ತಪಡಿಸಿದೆ. ಜಗತ್ತನ್ನು  ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ನಾವಿಂದು ಮಹತ್ವದ ಮೈಲಿಗಲ್ಲು ತಲುಪಿದ್ದೇವೆ. ಹಿಗ್ಸ್ ಬೋಸಾನ್‌ನ ಕಣದ ಪತ್ತೆ, ಹೆಚ್ಚಿನ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ.

ಬ್ರಹ್ಮಾಂಡದ ಅಗೋಚರ ವಿಷಯ ಗಳ ಮೇಲೆ ಬೆಳಕು ಚೆಲ್ಲಲು ಇದರಿಂದ ಸಾಧ್ಯ ವಾಗಲಿದೆ’ ಎಂದು ಸಿಇಆರ್‌ಎನ್ನ ಪ್ರಧಾನ ನಿರ್ದೇಶಕ ರಾಲ ಹ್ಯೂರ್ ಹೇಳಿದ್ದಾರೆ. ಅನ್ವೇಷಣೆಗೆ ಅಗತ್ಯವಿದ್ದ ನಿರ್ದಿಷ್ಟ ಮಟ್ಟವನ್ನು ತಲುಪಿದ್ದೇವೆ. ಆದರೆ, ಪತ್ತೆಯಾಗಿರುವ ಹೊಸ ಕಣವನ್ನು ಹಿಗ್ಸ್ ಬೋಸಾನ್ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಮಹಾಸ್ಪೋಟ ನಡೆಸಿದ ಎರಡು ತಂಡಗಳ ಪೈಕಿ ಒಂದಾದ ಸಿಎಂಎಸ್‌ನ ಮುಖ್ಯಸ್ಥ ಜೊ ಇನ್ಕ್ಯಾಡೆಲಾ ಸಿಇಆರ್‌ಎನ್ ಕೇಂದ್ರದಲ್ಲಿ ಹೇಳಿದ್ದಾರೆ.

ಮಹಾಸ್ಪೋಟದ ನಂತರದ ಸ್ಥಿತಿಯನ್ನು ನಿರ್ಮಾಣ ಮಾಡಲು ಯುರೋಪಿನ ವಿಜ್ಞಾನಿಗಳು 2008ರಲ್ಲಿ ಜಿನೇವಾ ಸಮೀಪ ನೂರು ಮೀಟರ್ ಆಳದಲ್ಲಿ ಒಂದು ಪ್ರತ್ಯೇಕ ಪ್ರಯೋಗಶಾಲೆಯನ್ನೇ ಪ್ರಾರಂಭಿಸಿದರು. ಈ ಪ್ರಯೋಗಶಾಲೆಯಲ್ಲಿ ವಿಶ್ವದ ಅತೀ ದೊಡ್ಡ ಹೆಡ್ರಾನ್ ಕೊಲೈಡರನ್ನು ಸ್ಥಾಪಿಸಿ ಕೃತಕವಾಗಿ ಮಹಾಸ್ಪೋಟವನ್ನು ನಡೆಸಿ ಹಿಗ್ಸ್ ಬೋಸಾನ್‌ಗಾಗಿ ಸಂಶೋಧನೆಯನ್ನು
ನಡೆಸಿದರು. ಇದನ್ನು ಕಂಡು ಹಿಡಿಯುವುದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ.

ಬೇರೆ ಕಣಗಳೊಂದಿಗೆ ಸಂಯೋಗ ಹೊಂದುವ ಕ್ರಿಯೆಯಿಂದ ಅದನ್ನು ಗುರುತಿಸಬೇಕಾಗಿತ್ತು. ಹಿಗ್ಸ್ ಬೋಸಾನ್‌ನ ದ್ರವ್ಯರಾಶಿ ಪ್ರೋಟಾನ್ ದ್ರವ್ಯರಾಶಿಗಿಂತ ಹೆಚ್ಚು. ಇಷ್ಟೆಲ್ಲ ಕಷ್ಟಸಾಧ್ಯವಾದ ಸಂಶೋಧನೆಯಿಂದ ಯುರೋಪಿನ ವಿಜ್ಞಾನಿಗಳ ತಂಡ
ಜುಲೈ 4, 2012ರಂದು ಈ ಕಣಗಳ ಅಸ್ತಿತ್ವದ ಬಗ್ಗೆ ಪುರಾವೆ ಸಹಿತ ಧೃಡ ಪಡಿಸಿದರು. ದಶಕಗಳಿಂದ ಯಾವ ಕಣಕ್ಕಾಗಿ ವಿಜ್ಞಾನಿ ಗಳು ಹುಡುಕಾಟ ನಡೆಸಿದ್ದರೋ ಆ ಕಣ ಈಗ ಸಿಕ್ಕಿದೆ.

ದೇವರೇ ಪ್ರತ್ಯಕ್ಷವಾದಷ್ಟು ಸಂತೋಷವಾಗಿದೆ. ಈ ಶತಮಾನದ ಮಹತ್ವದ ಸಂಶೋಧನೆ ಇದಾಗಿದೆ. ಆದರೂ ಬ್ರಹ್ಮಾಂಡದ ಉಗಮದ ಬಗ್ಗೆ ನಿಖರವಾಗಿ ತಿಳಿಯಬೇಕಾದರೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ. ಇಷ್ಟೆ ಸೃಷ್ಟಿಗೆ ಮೂಲ ಕಾರಣ ಈ ಹಿಗ್ಸ್ – ಬೋಸಾನ್ ಕಣವನ್ನು ವಿವರಿಸಿದ್ದಕ್ಕಾಗಿ ವಿಜ್ಞಾನಿ ಪಿಟರ್ ಹಿಗ್ಸ್‌ಗೆ ಪ್ರತಿಷ್ಟಿತ ನೊಬೆಲ್ ಪಾರಿತೋಷಕ ಸಿಕ್ಕಿತು. ಆದರೆ ಹಿಗ್ಸ್ ಜತೆ ತಳಕು ಹಾಕಿಕೊಂಡ ಬೋಸಾನ್ ಪದ, ಅಂದರೆ ಭಾರತದ ವಿಜ್ಞಾನಿ ಸತ್ಯೇಂದ್ರನಾಥ(ಸತ್ಯೇನ್) ಬೋಸ್‌ರಿಗೆ ಮಾತ್ರ ನೊಬೆಲ್
ಸಿಗಲಿಲ್ಲವೆಂಬುದೇ ನಮಗೆ ಬೇಸರದ ಸಂಗತಿ.

ಈ ಪ್ರಶಸ್ತಿ, ಬಿರುದು – ಬಾವಲಿಗಳು ಒತ್ತಟ್ಟಿಗಿರಲಿ. ಅಂತಹ ಪ್ರಶಸ್ತಿಗಳ ಮೊರೆ ಹೋಗದ ಆ ಮಹಾನ್ ಚೇತನ ಸತ್ಯೇಂದ್ರನಾಥ
ಬೋಸರು ಇದೇ ಜನವರಿ ೧ರಂದು ಬದುಕಿದ್ದರೆ ಅವರಿಗೆ 126ನೇ ಬರ್ತಡೇ ಆಚರಿಸಿಕೊಳ್ಳುತ್ತಿದ್ದರು! ಸತ್ಯೇಂದ್ರನಾಥ ಬೋಸರು ನೊಬೆಲ್ ಮಟ್ಟದ ಮಿದುಳಿನವರು. ಹಾಗಾದರೆ ಅವರಿಗೆ ನೊಬೆಲ್ ಪಾರಿತೋಷಕ ಏಕೆ ಸಿಗಲಿಲ್ಲ? ಎಂಬ ಪ್ರಶ್ನೆಗೆ ಖ್ಯಾತ ಲೇಖಕ ಪಾ.ವೆಂ.ಆಚಾರ್ಯ ಅವರು ಒಂದೆಡೆ ಹೀಗೆ ಉಲ್ಲೇಖಿಸುತ್ತಾರೆ – ಸತ್ಯೇನ್ ಸ್ವಲ್ಪ ಆಲಸ್ಯ ಸ್ವಭಾವದವರು ಅಥವಾ ಒಂದು ವಿಷಯವನ್ನು ಪಟ್ಟುಹಿಡಿದು ಬೆಂಬತ್ತದವರು.

ವಿಜ್ಞಾನಕ್ಕೆ ಸಂಬಂಧಿಸದ ಅನೇಕ ವಿಷಯಗಳಲ್ಲಿ ತೊಡಗಿಸಿಕೊಂಡು ಬಿಡುತ್ತಿದ್ದರು. ಬಹುಶಃ ಇದು ಸತ್ಯವೇ. ಆಲ್ಬರ್ಟ್ ಐನ್ ಸ್ಟೆ ನ್‌ರ ತತ್ತ್ವಗಳನ್ನು ಅವರೇ ಊಹಿಸಿರದ ರೀತಿಯಲ್ಲಿ ವಿಸ್ತರಿಸಿ ಪದಾರ್ಥದ ನಿಜ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು
ನೆರವಾದ ಪ್ರೊ.ಸತ್ಯೇಂದ್ರನಾಥ ಬೋಸರದು ತೈಲ ಬುದ್ಧಿ, ಅಂದರೆ ವಸ್ತುಗಳ ಮೇಲೆ ತೈಲ ಹೇಗೆ ಜಾರಿಕೊಂಡು ಹೋಗುತ್ತದೊ ಹಾಗೆ, ಇವರು ಒಂದೇ ವಿಷಯ ಹಿಡಿದುಕೊಂಡು ಕೂತುಬಿಡುತ್ತಿದ್ದಿಲ್ಲ, ಹೊಸ ಹೊಸ ವಿಷಯಗಳ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡು ಬಿಡುತ್ತಿದ್ದರು.

ಭೌತವಿಜ್ಞಾನದಿಂದ ಸಮಾಜ ವಿಜ್ಞಾನ ಶಿಕ್ಷಣ ತತ್ತ್ವಗಳವರೆಗೆ ಅನೇಕ ರಂಗಗಳಲ್ಲಿ ಅವರು ಗತಿಯನ್ನು ಪಡೆದವರು. ಈ
ರೀತಿಯಾದ ಅವರ ಸ್ವಭಾವ ನೊಬೆಲ್ ಆಯ್ಕೆ ಸಮಿತಿಗೆ ಇಷ್ಟವೆನಿಸಲಿಲ್ಲವೇನೊ ಗೊತ್ತಿಲ್ಲ. ಸತ್ಯೇಂದ್ರನಾಥ ಬೋಸರು ೧ನೇ ಜನವರಿ 1894ರಂದು ಕೋಲ್ಕತಾದಲ್ಲಿ ಜನಿಸಿದರು. ಅವರ ತಂದೆ ಸುರೇಂದ್ರನಾಥ ಬೋಸರು ರೇಲ್ವೆ ಇಲಾಖೆ ಯಲ್ಲಿ ಉನ್ನತ ಹುದ್ದೆಯಲ್ಲಿದ್ದರು.

ಅಲ್ಪ ಅವಧಿಯ ವರೆಗೆ ಬೋಸ್ ಆರಂಭದಲ್ಲಿ ರವೀಂದ್ರನಾಥ ಠಾಕೂರರು ಓದುತ್ತಿದ್ದ ಶಾಲೆಗೆ ಹೋದರು. ಆಮೇಲೆ ಹಿಂದೂ ಶಾಲೆಗೆ ಸೇರಿಕೊಂಡರು. ಇಲ್ಲಿಯೇ ಸತ್ಯೇನ್‌ರು ಗಣಿತದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದರು! ಅಲ್ಲದೇ ಆ ಗಣಿತ ಪರಿಕ್ಷೆ ಯಲ್ಲಿ ನಿಗದಿತ ಸಮಯದ ಒಂದೇ ಲೆಕ್ಕವನ್ನು ಹಲವಾರು ವಿಧಾನಗಳಲ್ಲಿ ಮಾಡಿ ತೋರಿಸಿದ್ದರು! ಇದನ್ನು ಕಂಡ ಇವರ ಶಿಕ್ಷಕ ಉಪೇಂದ್ರ ಭಕ್ಷಿ – ’ ಈ ಹುಡುಗ ಗಣಿತಜ್ಞ ಲ್ಯಾಪ್ಲೇಸನ ಹಾಗೆ ಮುಂದೊಂದು ದಿನ ಮಹಾನ್ ಗಣಿತಶಾಸ್ತ್ರಜ್ಞನಾಗುತ್ತಾನೆ’ ಎಂದು ಭವಿಷ್ಯ ನುಡಿದಿದ್ದರು.

ಮುಂದೆ ಶಿಕ್ಷಕನ ಆ ಭವಿಷ್ಯ ನುಡಿ ಸುಳ್ಳೇನು ಆಗಲಿಲ್ಲ. ವಿಜ್ಞಾನಿ ಹಾಗೂ ಲೇಖಕರಾದ ಅರವಿಂದ ಗುಪ್ತಾರವರು ಸತ್ಯೇನ್‌ರ ಬಗ್ಗೆ ಬಹಳ ಸೊಗಸಾಗಿ ಬರೆಯುತ್ತಾ ಸಾಗುತ್ತಾರೆ. ಶಾಲೆಯ ಅನಂತರ ಸತ್ಯೇನ್ ಇಂಟರ್‌ಮೀಡಿಯೇಟ್‌ನ ಪ್ರವೇಶ ಪರೀಕ್ಷೆಯನ್ನು ಪೂರೈಸಿ, ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿದರು. ಇಲ್ಲಿ ಆಚಾರ್ಯ ಪ್ರಫುಲ್ಲ ಚಂದ್ರ ರಾಯ್ ಹಾಗೂ ಜಗದೀಶ ಚಂದ್ರ ಬೋಸರಂಥ ಪ್ರತಿಭಾನ್ವಿತ ಪ್ರಾಧ್ಯಾಪಕರಿದ್ದರು. ಅತ್ಯಂತ ಚುರುಕಾಗಿದ್ದ ಸತ್ಯೇನ್, ಶರೀರ ಶಾಸದಲ್ಲಿ ಶೇ.100 ಅಂಕಗಳನ್ನು ಗಳಿಸಿದ್ದರು.

1913ರಲ್ಲಿ, ಅವರು ಬಿ.ಎಸ್.ಸಿ ಆನರ್ಸ್ ಪರೀಕ್ಷೆ ತೇರ್ಗಡೆಯಾಗಿ, ಅರ್ಹತಾ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದರು. ಮುಂದೆ ಎಂ.ಎಸ್.ಸಿ ಪರೀಕ್ಷೆಯಲ್ಲಿ ಶೇ.92ರ ಅತಿ ಹೆಚ್ಚಿನ ಅಂಕವನ್ನು ಗಳಿಸಿ ಹೊಸ ದಾಖಲೆಯನ್ನೇ ಸೃಷ್ಟಿಸಿದರು. ಎರಡೂ ಬಾರಿ ಸತ್ಯೇನ್‌ರ ಸಹಪಾಠಿ ಭಾರತ  ಡ ಇನ್ನೊಬ್ಬ ವಿಜ್ಞಾನಿ ಮೇಘನಾದ್ ಸಹ ಎರಡನೆಯ ಸ್ಥಾನದಲ್ಲಿದ್ದರು.

ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ 1914ರಲ್ಲಿ ಸತ್ಯೇನ್‌ರ ವಿವಾಹ ಉಷಾಬತಿಯವರೊಂದಿಗೆ ಆಯಿತು. ಉಷಾಬತಿಯವರ ತಂದೆ ವೈದ್ಯರಾಗಿದ್ದರು. 1916ರಲ್ಲಿ, ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. ಸತ್ಯೇನ್ 1918ರಲ್ಲಿ ಲಂಡನ್ನಿನ ದಿ ಫಿಲಾಸಫಿಕಲ್ ಮ್ಯಾಗಜೀನ್‌ನಲ್ಲಿ ‘ದಿ ಇನ್ಲುಯೆನ್ಸ್ ಆಫ್ ದಿ ಫಿನಿಟ್ ವಾಲ್ಯೂಮ್ ಆಫ್ ಮಾಲಿ ಕ್ಯೂಲ್ಸ್ ಆನ್ ದಿ ಈಕ್ವೇಷನ್ ಆಫ್ ಸ್ಟೇಟ್’ ಎಂಬ ತಮ್ಮ ಪ್ರಥಮ ಸಂಶೋಧನಾ ಲೇಖನವನ್ನು ಪ್ರಕಟಿಸಿದರು.

ಅವರ ಮುಂದಿನ ಎರಡು ಲೇಖನಗಳು ಶುದ್ಧ ಗಣಿತದ್ದಾಗಿದ್ದವು. ಅಲ್ಲದೇ ಸತ್ಯೇನ್, ಮೇಘನಾ ಜತೆಗೂಡಿ ಆಲ್ಬರ್ಟ್ ಐನ್
ಸ್ಟೆ ನ್‌ರ ಥಿಯರಿ ಆಫ್ ಜನರಲ್ ರಿಲೆಟಿವಿಟಿಯನ್ನು ಮೂಲ ಜರ್ಮನ್ ಭಾಷೆಯಿಂದ ಆಂಗ್ಲಭಾಷೆಗೆ ಅನುವಾದಿಸಿದರು.
ಆ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಈ ಅನುವಾದಕ್ಕೆ ತಕರಾರು ತಗೆದರೂ ಐನ್‌ಸ್ಟೈನ್ ತಮ್ಮ ವಿಶಾಲ ಮನೋಭಾವ
ದಿಂದ ಈ ಯುವ ಭಾರತೀಯ ವಿಜ್ಞಾನಿಗಳಿಗೆ ತಮ್ಮ ಅನುಮತಿಯಿತ್ತರು. ಸತ್ಯೇನ್, ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ತಮ್ಮ ಕೆಲವು ಸೂತ್ರ ಗಳನ್ನು ಉತ್ಪತ್ತಿ ಮಾಡಿದ ರೀತಿಯಿಂದ ಅಸಂತೃಪ್ತ ರಾಗಿದ್ದು, ಈ ನಿಟ್ಟಿನಲ್ಲಿ ಕಠಿಣ ಕೆಲಸ ಮಾಡಿ ‘ಪ್ಲಾಂಕ್ಸ್ ಲಾ ಆಂಡ್ ಲೈಟ್ ಕ್ವಾಂಟಂ ಹೈಪಾಥಿಸಿಸ್’ ಎಂಬ ಒಂದು ಅದ್ಭುತ ಲೇಖನವನ್ನು ಬರೆದರು.

ಯಾವ ವಿಜ್ಞಾನ ಸಂಚಿಕೆಯೂ ಅವರ ಲೇಖನವನ್ನು ಪ್ರಕಟಿಸಲು ಇಚ್ಛಿಸಲಿಲ್ಲ. ಆದ್ದರಿಂದ, 1924ರಲ್ಲಿ, 30ರ ಹರೆಯದ ಸತ್ಯೇನ್ ಅದನ್ನು ಸುಪ್ರಸಿದ್ದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನರಿಗೆ, ಅವರ ಅಭಿಪ್ರಾಯವನ್ನು ಕೋರಿ, ಅಂಜುತ್ತ – ಅಳಕುತ್ತಲೇ
ಕಳುಹಿಸಿಕೊಟ್ಟರು. ಬೋಸ್‌ರ ಪ್ರಬಂಧದಿಂದ ಐನ್‌ಸ್ಟೀನ್ ಎಷ್ಟು ಪ್ರಭಾವಿತರಾದರೆಂದರೆ, ಅವರೇ ಸ್ವತಃ ಅದನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿ, ಜರ್ಮನ್ ಭಾಷೆಯ zeitschrift furphysik ಎಂಬ ವಿಜ್ಞಾನ ಸಂಚಿಕೆಯಲ್ಲಿ ಪ್ರಕಟಿಸಿದರು.

ಯಾವುದೇ ಯುವ ಭೌತವಿಜ್ಞಾನಿ ಇದಕ್ಕಿಂತ ಹೆಚ್ಚಿನ ಗೌರವವನ್ನು ಆಶಿಸಲು ಸಾಧ್ಯವೇ? ಸತ್ಯೇನ್ ಐನ್ ಸ್ಟೆ ನ್‌ರನ್ನು ತನ್ನ ಗುರುವೆಂದು ಭಾವಿಸಿದ್ದರು. ಐನ್ ಸ್ಟೀನ್‌ರ ಬಹು ಇಷ್ಟವಾದ ಏಕೀಕೃತ ಕ್ಷೇತ್ರ ಸಿದ್ಧಾಂತದ ವಿಷಯದಲ್ಲಿಯೂ ಬೋಸರು ಪ್ರಾರಂಭದಲ್ಲಿ ನೆಚ್ಚಿಕೊಂಡಿದ್ದರು. ಆದರೆ ಈ ಕೆಲಸವೂ ಗುರುವಿನ ಮನಸ್ಸಿಗೆ ಬಂದಂತೆ ಕಾಣಲಿಲ್ಲ. ಈ ಕ್ಷೇತ್ರ ತಮ್ಮ ಸ್ವಂತ
ಕ್ಷೇತ್ರವೆಂದು ಬಹುಶಃ ಅವರು ಭಾವಿಸಿದ್ದರು. ಕೊನೆಗೆ 1953ರಲ್ಲಿ ಐನ್‌ಸ್ಟೀನರು ಶಕ್ತಿಯ ಸರ್ವ ಅವತಾರಗಳನ್ನು ಒಂದೇ ನಿಯಮಕ್ಕೊಳಪಡಿಸುವ ಏಕೀಕೃತ ಕ್ಷೇತ್ರ ಸಿದ್ಧಾಂತವನ್ನು ಮಂಡಿಸಿದರು.

ಅದಕ್ಕೆ ಮಾತ್ರ ಅವರು ಸಾಪೇಕ್ಷತಾ ಸಿದ್ಧಾಂತಕ್ಕೆ ಸಿಕ್ಕಿದ ಸಾರ್ವತ್ರಿಕ ಮನ್ನಣೆ ಸಿಗಲಿಲ್ಲ. ಕ್ಷೇತ್ರ ಸಿದ್ಧಾಂತದಲ್ಲಿ ಐನ್ ಸ್ಟೆ ನ್‌ರು ತಮ್ಮಿಂದಾಗಬಹುದಾದದ್ದನ್ನೆಲ್ಲ ಮುಗಿಸಿ ಕೈಯೂರಿದ ಮೇಲೆ 1953 -55ರಲ್ಲಿ ಕ್ಷೇತ್ರ ಸಿದ್ಧಾಂತವನ್ನು ಪ್ರತಿಷ್ಠಾಪಿಸುವುದಕ್ಕೆ ಅಗತ್ಯವಾದ ಸಮೀಕರಣದ ಪ್ರಥಮ ಭಾಗವನ್ನು ಬಿಡಿಸಿ ಸತ್ಯೇನ್ ಪ್ರಕಟಿಸಿದರು. ಹೀಗೆ ಐನ್ ಸ್ಟೆ ನ್‌ರಿಂದಲೇ ಆಗದ ಈ
ಕಾರ್ಯವನ್ನು ಸತ್ಯೇಂದ್ರರು ಅಂತಶಃ ಸಾಧಿಸಿದರೂ ವಿಜ್ಞಾನ ಲೋಕ ಏಕೀಕೃತ ಕ್ಷೇತ್ರ ಸಿದ್ಧಾಂತದಲ್ಲಿ ಆಸಕ್ತಿಯನ್ನು ಆಗಲೇ
ಕಳೆದುಕೊಂಡಿದ್ದುದರಿಂದ ಬೋಸರ ಕಾರ್ಯಕ್ಕೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ ಎಂಬುದೇ ನಮಗೆಲ್ಲ ಬೇಸರದ ಸಂಗತಿ.

ಈ ಸಂದರ್ಭದ ಐನ್ ಸ್ಟೆ ನ್‌ರ ಮನೆಗೆ ಸತ್ಯೇನ್ ಭೇಟಿಗೆಂದು ಬಂದಿದ್ದರು. ಆಗ ಮನೆಯಲ್ಲಿ ಐನ್ ಸ್ಟೆನ್ ಒಬ್ಬರೇ ಇದ್ದರು. ರೀಡಿಂಗ್ ರೂಮ್‌ನಲ್ಲಿ ಓದುತ್ತಾ ಕುಳಿತಿದ್ದರು. ಸತ್ಯೇನ್ ಬಂದದ್ದನ್ನು ಕಂಡು ಅವರನ್ನು ಬರಮಾಡಿಕೊಂಡರು. ಸತ್ಯೇನ್‌ರನ್ನು ಅ ಕುಡ್ರಿಸಿ, ಐನ್ ಸ್ಟೆ ನ್ ಏನಾದರು ಡ್ರಿಂಕ್ಸ್ ತರಲು ಅಡುಗೆ ಮನೆಗೆ ಹೋದರು. ಆ ಸಂದರ್ಭ ದಲ್ಲಿ ಸತ್ಯೇನ್‌ರ ದೃಷ್ಟಿ ಐನ್‌ಸ್ಟೆನ್
ರ ಪುಸ್ತಕದ ಕಪಾಟಿನ ಕಡೆ ಹೋಯಿತು. ಎಲ್ಲಾ ಪುಸ್ತಕಗಳನ್ನು ಒಂದರ ಹಿಂದೆ ಜೋಡಿಸಿದ್ದರೆ, ಭಗವದ್ಗೀತಾ ಪುಸ್ತಕವನ್ನು
ಎಲ್ಲರ ಕಣ್ಣಿಗೂ ಕಾಣುವಂತೆ ಎದುರಿಗೆ ಇಟ್ಟಿದ್ದರು.

ಇದನ್ನು ಕಂಡ ಸತ್ಯೇನ್‌ರಿಗೆ ಬಹಳ ಆಶ್ಚರ್ಯವಾಯಿತು. ಅಡುಗೆ ಮನೆಯಿಂದ ಬಂದ ಐನ್ ಸ್ಟೆ ನ್ ರನ್ನು ಈ ಕುರಿತು ಕೇಳಿಯೇ ಬಿಟ್ಟರು. ಆಗ ಐನ್ ಸ್ಟೆ ನ್, ಹೌದು, ಜಗತ್ತಿನ ಸೃಷ್ಟಿಯ ಬಗ್ಗೆ ಹಾಗೂ ಪ್ರತಿಯೊಂದು ಪ್ರಾಣಿಯ ಬದುಕು, ಗುಣ – ಸ್ವಭಾವಗಳನ್ನು ಅಧ್ಯಯನ ಮಾಡಲು ನಾನು ನೆಚ್ಚಿದ ಪುಸ್ತಕವೆಂದರೆ, ಅದು ಈ ಭಗವದ್ಗೀತೆ ಎಂದು ಹೇಳಿಬಿಟ್ಟರು. ರಸಾಯನ ಶಾಸದಲ್ಲಿ ಸಲನಾಮೈಡ್ ಅಣುವಿನ ಸ್ವರೂಪ ಪಲ್ಲಟ ಮಾಡವ ವಿಧಾನ ಕಂಡು ಹಿಡಿದು ಉತ್ತಮ ಕಣ್ಣಿನ ಔಷಧ ತಯಾರಿಸಲು ಸತ್ಯೇನ್ ನೆರವಾದರು.

ಅಲ್ಲದೇ ಸತ್ಯೇಂದ್ರನಾಥ ಬೋಸರು ವಿದ್ಯಾರ್ಥಿಗಳ ನೆಚ್ಚಿನ ಪ್ರೊಫೆಸರ್ ಆಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸತ್ಯೇಂದ್ರನಾಥ ಬೋಸರು ಭೌತಶಾಸ್ತ್ರ ಗಣಿತ, ರಸಾಯನಶಾಸ್ತ್ರ, ಖನಿಜಶಾಸ್ತ್ರ, ಜೀವಶಾಸ್ತ್ರ, ತತ್ವಜ್ಞಾನ, ಪುರಾತತ್ವ ಶಾಸ್ತ್ರ, ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅಲ್ಲದೇ ಇಂಗ್ಲೀಷ್, ಫ್ರೆಂಚ್, ಜರ್ಮನ್, ಇಟಾಲಿಯನ್ ಒಳಗೊಂಡಂತೆ ಬಹುಪಾಲು ಯುರೋಪಿನ ಭಾಷೆಗಳನ್ನು ಬಲ್ಲವರಾಗಿದ್ದರು.

ಇಂಗ್ಲೀಷನ್ನು ಅವರು ಸುಲಭವಾಗಿ ಬರೆಯಬಲ್ಲವರಾಗಿದ್ದರೂ ಪರಭಾಷೆಯಲ್ಲಿ ವಿಷಯಾಭ್ಯಾಸ ಮಾಡುವುದು ಹೆಚ್ಚಿನ
ವಿದ್ಯಾರ್ಥಿಗಳ ಪ್ರತಿಭೆಯನ್ನು ಕಮರಿಸುತ್ತದೆಂದು ಬೋಸರು ಅಭಿಪ್ರಾಯಪಟ್ಟಿದ್ದರು. ಬಂಗಾಲಿಯಲ್ಲಿ ವೈಜ್ಞಾನಿಕ ಶಿಕ್ಷಣ
ಸಾಧ್ಯವೆಂದು ತೋರಿಸಲು ಅವರು ಬಂಗಾಲಿ ಭಾಷೆಯಲ್ಲಿ ವಿಜ್ಞಾನ ಪುಸ್ತಕಗಳನ್ನೇ ಬರೆದರು. ಇದಕ್ಕಾಗಿ ಕೆಲಕಾಲ ಅವರು ‘ಮನೀಷಾ’ ಎಂಬ ಪತ್ರಿಕೆ ನಡೆಸಿದರು. ಅವರ ಬೆಂಬಲದಿಂದ 1941ರಲ್ಲಿ ‘ವಿಜ್ಞಾನ ಪರಿಚಯ’ ಎಂಬ ಬೆಂಗಾಲಿ ಪತ್ರಿಕೆ ಢಾಕಾದಲ್ಲಿ ಚಾಲ್ತಿಗೆ ಬಂದಿತು. 1945-48ರಲ್ಲಿ ಇಂಡಿಯನ್ ಫಿಸಿಕಲ್ ಸೊಸೈಟಿಯ ಅಧ್ಯಕ್ಷರಾದರು.

ಅನಂತರ ಅವರಿಗೆ 1954ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಭಾರತ ಸರಕಾರ ನೀಡಿತು. 1956ರಲ್ಲಿ ನಿವೃತ್ತರಾದ ಮೇಲೆ ವಿಶ್ವ ಭಾರತಿಯ ಉಪಕುಲಪತಿಗಳಾದರು. 1958ರಲ್ಲಿ ಅವರನ್ನು ರಾಯಲ್ ಸೊಸೈಟಿಗೆ ಫೆಲೋ ಆಗಿ ಆರಿಸಲಾಯಿತು. ಬೋಸರು ಎರಡು ಸಲ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ವಾಸ್ತವಿಕವಾಗಿ ಸತ್ಯೇಂದ್ರನಾಥ ಬೋಸರಿಗೆ ಎಂದೂ ಮನ್ನಣೆಯ ಮೋಹ ಇರಲಿಲ್ಲ. ತಮ್ಮ ಆಸಕ್ತಿಗಳು ಎತ್ತ ಎಳೆದವೋ ಅತ್ತ ತಾವೇ ಹೋದವರು. 4ನೇ ಫೆಬ್ರವರಿ 1974ರಲ್ಲಿ ಈ ವಿಜ್ಞಾನದ ಧ್ರುವತಾರೆ ನಮ್ಮನ್ನೆ ಅಗಲಿತು.