Wednesday, 9th October 2024

ಭಾರತದ ವಿಸ್ಕಿ, ವಿಸ್ಕಿಯೇ ಅಲ್ಲ !

ಶಿಶಿರ ಕಾಲ

shishirh@gmail.com

ಮೊದಲೇ ಒಂದೆರಡು ಅಫಿಡವಿಟ್ಟುಗಳನ್ನು ನಿಮ್ಮ ಮುಂದೆ ಇಟ್ಟುಬಿಡುತ್ತೇನೆ; ಚಲನಚಿತ್ರಗಳಲ್ಲಿ ಮದ್ಯಪಾನ ಹಾನಿಕಾರಕ ಎಂದು ತೋರಿಸುವಂತೆ. ಈ ಲೇಖನವನ್ನು ನೀವು ಮದ್ಯ ಪ್ರಿಯರಾದರೆ ತಿಳಿದುಕೊಳ್ಳೋಕೆ ಓದಿ – ಇಲ್ಲವಾದವರು ಕೂಡ ತಿಳಿದುಕೊಳ್ಳೋಕೇ ಓದಿ. ಓದುವಾಗ ತೀರಾ ಮಡಿವಂತಿಕೆಯೆಲ್ಲ ಬೇಡ.

ಇದೇನು ವಿಸ್ಕಿ ಕುಡಿಯಲು ಪ್ರೇರೇಪಿಸಲು ಹೊರಟ ಲೇಖನವಲ್ಲ. ಹಾಗಾಗಿ ವಿಸ್ಕಿ ಯನ್ನು ಸಮಾಜ ಒಪ್ಪುತ್ತದೆಯೋ ಇಲ್ಲವೋ ಎಂದೆಲ್ಲ ವಾದ ಮಾಡಲಿಕ್ಕೆ ಹೋಗಬಾ ರದು. ಸುಮ್ಮನೆ ಗುಂಡುಪ್ರಿಯರು ವಿಸ್ಕಿಯನ್ನು ಒಳಬಿಟ್ಟುಕೊಳ್ಳುವಂತೆ ಈ ಲೇಖನದ ವಿಷಯವನ್ನು ಒಳಬಿಟ್ಟುಕೊಳ್ಳಬೇಕು – ಅಷ್ಟೆ. ವಿಸ್ಕಿಯನ್ನು ಸೇವಿಸಲು ಸಾಂಪ್ರದಾಯಿಕ ವಿಧಾನಗಳಿವೆ. ನೀವು ಸ್ಕಾಟಿಷ್ ಮಂದಿಯನ್ನು ಕೇಳಿದರೆ ವಿಸ್ಕಿ ಕುಡಿಯುವುದು ಹೇಗೆ ಎಂದೇ ಒಂದೆರಡು ಗಂಟೆ ಮಾತನಾಡುತ್ತಾರೆ.

ವಿಸ್ಕಿ ಡ್ರಿಂಕ್ ಅಲ್ಲ, ಅದು ತತ್ವeನ ಎನ್ನುತ್ತಾರೆ. ವಿಸ್ಕಿ ಕುಡಿಯೋದು ಹೇಗೆ ಎನ್ನುವು ದನ್ನು ಹೇಳುವ ನೂರುಗಟ್ಟಲೆ ಪುಸ್ತಕಗಳಿವೆ, ಯುಟ್ಯೂಬ್ ಚ್ಯಾನೆಲ್ಲುಗಳಿವೆ. ವಿಸ್ಕಿ ಹೀಗೆಯೇ ಇರಬೇಕು ಮತ್ತು ಅದನ್ನು ಹೀಗೆಯೇ, ಇಂಥದ್ದೇ ಗ್ಲಾಸಿನಲ್ಲಿ ಕುಡಿಯಬೇಕು ಎನ್ನುವ, ಅದು ತೀರಾ ಪಾರಂಪರಿಕ ಜ್ಞಾನವೆನ್ನುವ ದೊಡ್ಡ ವರ್ಗವೇ ಇದೆ. ಅದು ತಿಳಿದಿದೆಯೆನ್ನುವುದೇ ಒಂದು ಸ್ಟೇಟಸ್ ಎಂದು ಬೀಗುವವರಿದ್ದಾರೆ. ಏನದು ವಿಸ್ಕಿ ಸೇವಿಸುವ ಸಂಪ್ರದಾಯ ಎಂದು ನನ್ನ ಬ್ರಿಟಿಷ್ ಸ್ನೇಹಿತನಲ್ಲಿ ಕೇಳಿದ್ದೆ – ಆತ ಅದನ್ನು ಅರ್ಧ ಗಂಟೆ ವಿವರಿಸಿದ್ದ.

ಅದೇನು ಬಂಡಲ್ ಬಡಾಯಿಯಾಗಿರಲಿಲ್ಲ. ಮೊದಲು ವಿಸ್ಕಿಯನ್ನು ನಿಧಾನಕ್ಕೆ ಗ್ಲಾಸಿಗೆ ಸುರಿಯಬೇಕು. ನಂತರ ಒಂದೆರಡು ಸುತ್ತು ಅಲುಗಾಡಿಸಬೇಕು. ಆಗ ಬಾಟಲಿಯಿಂದ ಹೊರಬಂದ, ಬಂಧನದಿಂದ ವಿಮುಕ್ತವಾದ ವಿಸ್ಕಿ ಆಕ್ಸಿಡೈಜ್ ಆಗುತ್ತದೆ, ಗಾಳಿಯ ಜತೆ ಸೇರಿ ಒಂದು ಅರೋಮಾವನ್ನು ಹೊರಸೂಸುತ್ತದೆ. ಅದಕ್ಕೆ ಒಂದು ನಿಮಿಷ ಕಾಯಬೇಕು. ಗ್ಲಾಸನ್ನು ಇನ್ನು ನಾಲ್ಕು ಸುತ್ತು ಸುರುಳಿಯಲ್ಲಿ ಅಲುಗಿಸಬೇಕು. ನಾಲಿಗೆಗಿಂತ ಮೊದಲು ಮೂಗು ಅದನ್ನು ಸವಿಯಬೇಕು. ಮೂಸಿ ನೋಡಬೇಕು. ಅನಂತರದಲ್ಲಿ ನಿಧಾನಕ್ಕೆ ಗುಟು ಕೊಂದನ್ನು ಬಾಯಿತುಂಬಿಸಿಕೊಳ್ಳಬೇಕು.

ನಾಲಿಗೆಯ ಎಲ್ಲ ಭಾಗವನ್ನೂ ಆ ಮೊದಲ ಗುಟುಕು ತಾಕಬೇಕು. ಬಾಯ್ ಮುಕ್ಕಳಿಸುವುದಲ್ಲ. ತಕ್ಷಣ ಬಾಯಿಯಲ್ಲಿ ಲಾಲಾರಸ
ಸ್ರವಿಸಲು ಶುರುವಾಗುತ್ತದೆ. ಲಾಲಾರಸದಲ್ಲಿನ ಜೀರ್ಣಿಸುವ ಎಂಜೈಮ್‌ಗಳು ಅದನ್ನು ಸಾರಗುಂದಿಸುವುದರೊಳಗೆ ನಿಧಾನಕ್ಕೆ ನುಂಗಬೇಕು. ಅದು ಅನ್ನ ನಾಳದಲ್ಲಿ ಪ್ರವಹಿಸಬೇಕು, ಆ ಬಿಸಿ ಕೂಡ ಅದನ್ನು ಆಸ್ವಾದಿಸುವ ಒಂದು ಭಾಗವೇ. ಆಗ ಮತ್ತೆ ಅದರ ಪರಿಮಳ ಮೂಗಿನ ಅನುಭವಕ್ಕೆ ಉಸಿರಿನಲ್ಲಿ ಬರಬೇಕು. ವಿಸ್ಕಿಯನ್ನು ಹರಿಬರಿಯಲ್ಲಿ ಗಟಗಟನೆ ಕುಡಿಯಲೇ ಬಾರದು. ಅದು ವಿಸ್ಕಿಗೆ, ಅದನ್ನು ತಯಾರಿಸುವ ಜ್ಞಾನಕ್ಕೆ, ಇಡೀ ವಿಸ್ಕಿ ವಂಶಕ್ಕೇ ಮಾಡುವ ಅಪಮಾನ.

ಜಾಸ್ತಿ ಘಾಟೆನ್ನಿಸಿದರೆ ಒಂದಿಷ್ಟು ನೀರ ಹನಿಯನ್ನು ಚಿಮುಕಿಸಿಕೊಳ್ಳಬೇಕು. ನೀರೇ ಜಾಸ್ತಿಯಾಗಬಾರದು. ಐಸ್ ಹಾಕಿದರೆ ಅದು ತೀರಾ ಕರಗಿ ನೀರೇ ಜಾಸ್ತಿಯಾಗುವುದರೊಳಗೆ ಸೇವಿಸಬೇಕು. ಅಸಲಿಗೆ ಐಸ್ ಹಾಕಲೇಬಾರದು… ಇತ್ಯಾದಿ. ನಂತರದಲ್ಲಿ ಆ ಸ್ನೇಹಿತನನ್ನು ಬ್ರೇಕ್ ಹಾಕಿ ಅಲ್ಲಿಗೇ ನಿಲ್ಲಿಸಬೇಕಾಯ್ತು. ಕಾದಂಬರಿ, ಕವನ, ಯಾವುದೇ ಪುಸ್ತಕ, ಲೇಖನಗಳ ಮಟ್ಟಿಗೆ ಕೂಡ ನನ್ನದು ಇಂಥದ್ದೇ ಕೆಲವು ಪ್ರಿನ್ಸಿಪಲ್ಲುಗಳಿವೆ. ಯಾವುದೇ ಸಾಹಿತ್ಯವಿರಲಿ – ಅದನ್ನು ಸ್ಕಾಚ್ ಸೇವಿಸಿದಂತೆ ನಿಧಾನಕ್ಕೆ, ಪ್ರೀತಿಯಿಂದ ಆಸ್ವಾದಿಸಬೇಕು ಎನ್ನುವವನು
ನಾನು. ಆಗಲೇ eನದ ಕಿಕ್ಕಿನ ಅನುಭವವಾಗುವುದು. ಇರಲಿ – ಇಲ್ಲಿ ವಿಸ್ಕಿಯ ಬಗೆಗಿನ ಒಂದಿಷ್ಟು ವಿಚಾರಗಳನ್ನು ಹೇಳುವುದಷ್ಟೇ ಈ ಲೇಖನದ ಕೆಲಸ. ಅದರಾಚೆ ಮತ್ತೇನಿಲ್ಲ.

ಹಲವರಿಗೆ ವಿಸ್ಕಿ ಒಂದು ವಿಧದ ಹೆಂಡ, ಯೆಣ್ಣೆ. ಅದೆಂಥ ಗುಂಡುಪ್ರಿಯನೇ ಆಗಿರಲಿ, ಹೇಗೆ ಸೇವಿಸಬೇಕೆನ್ನುವ ಪ್ರಶ್ನೆ ಬಿಡಿ, ವಿಸ್ಕಿ ಎಂದರೆ ಏನು, ಹೇಗೆ ಮಾಡುತ್ತಾರೆ ಎಂದು ಕೇಳಿದರೆ ಕುಡಿಯದೇ ತೊದಲುತ್ತಾನೆ. ‘ಹೇಗೆ ಮಾಡಿದರೆ ಏನು, ಹೇಗೆ ಕುಡಿದರೆ ಏನು, ಕುಡಿದ ರಾಯ್ತಪ್ಪ!’ ಎಂದು ಹಲ್ಲು ಗಿಂಜುತ್ತಾನೆ. ಬಹಳಷ್ಟು ಮದ್ಯಪಾನಿಗಳಿಗೆ, ಸೋಷಿಯಲ್ ಡ್ರಿಂಕರ್ಸ್‌ಗೆ ಅವರು ಕುಡಿಯುವ ಈ ಪೇಯದ ಬಗ್ಗೆ ಎಂಟಾಣಿಯಷ್ಟೂ ಗೊತ್ತಿರುವುದಿಲ್ಲ – ಕುಡಿಯುತ್ತಲೇ ಇರುತ್ತಾರೆ.

ಜಾಸ್ತಿ ಕೇಳಿದರೆ ಬಾರ್ಲಿ ಕೊಳೆಸಿ ಏನೋ ಮಾಡುತ್ತಾರೆ ಎಂಬ ಉತ್ತರ ಅಷ್ಟೇ!. ಎಷ್ಟೋ ಜನರಿಗೆ ವಿಸ್ಕಿ, ರಮ್ಮು, ವೋಡ್ಕಾ ಇವೇ ಇತ್ಯಾದಿಯ ಭೇದ ಕೇವಲ ಬಣ್ಣ ಮತ್ತು ವಾಸನೆ. ಭಾರತದಲ್ಲಿ ವಿಸ್ಕಿಯ ಬಗ್ಗೆ ಜಾಸ್ತಿಯೇ ಮಡಿವಂತಿಕೆಯಿದೆ. ವಿಸ್ಕಿ ಕುಡಿಯುವವನೆಂದರೆ ಆತ ಮಧ್ಯಪಾನ ಚಟದ ಪರಮೋಚ್ಛ ಸ್ಥಿತಿಯಲ್ಲಿದ್ದಾನೆ ಎಂದೆಲ್ಲ ಕೆಲವರಲ್ಲಿ ಅನಿಸಿಕೆಯಿದೆ. ಆದರೆ ಅಸಲಿಗೆ ಜಗತ್ತಿನ ಅತಿ ಹೆಚ್ಚು ವಿಸ್ಕಿ ಸೇವಿಸುವ ದೇಶ ಭಾರತ. ಸುಮಾರು ಎರಡು ಬಿಲಿಯನ್ ಲೀಟರ್ ವಿಸ್ಕಿಯನ್ನು ಭಾರತದಲ್ಲಿ ಪ್ರತೀ ವರ್ಷ ಸೇವಿಸಲಾಗುತ್ತದೆ. ಅಂದರೆ
ಇಪ್ಪತ್ತು ಕೋಟಿ ಲೀಟರ್. ಆದರೆ ವಿಷಯವೇನೆಂದರೆ ಭಾರತ ದಲ್ಲಿ ಕುಡಿಯಲ್ಪಡುವ ಶೇ. ೯೦ಕ್ಕಿಂತ ಜಾಸ್ತಿ ವಿಸ್ಕಿ ಅಸಲಿಗೆ ವಿಸ್ಕಿಯೇ ಅಲ್ಲ!

ಅದನ್ನು ಭಾರತದಾಚೆ ವಿಸ್ಕಿ ಎಂದು ಕರೆಯುವಂತೆಯೂ ಇಲ್ಲ. ವಿಸ್ಕಿ ಎಂದು ಮಾರುವಂತೆಯೂ ಇಲ್ಲ!. ಅಸಲಿ ವಿಸ್ಕಿಯೆಂದರೆ ಏನು? ಬಾರ್ಲಿಯನ್ನು ತೊಳೆದು, ಸ್ವಚ್ಛಗೊಳಿಸಿ, ನಂತರದಲ್ಲಿ ಒಂದೆರಡು ದಿನ ನೀರಿನಲ್ಲಿ ಹಾಕಿ, ಆಮ್ಲಜನಕವನ್ನು ಹರಿಸಲಾಗುತ್ತದೆ. ಅನಂತರ ದಲ್ಲಿ ನೆಲದ ಮೇಲೆ ಹರಡಿ ಮೊಳಕೆಯೊಡೆಯುವಂತೆ ಕಾಯಲಾಗುತ್ತದೆ. ಮೊಳಕೆಯೊಡೆಯುವಾಗ ಅಲ್ಲಿ ಉಷ್ಣತೆ ಹೆಚ್ಚುತ್ತದೆ ಮತ್ತು ಅದನ್ನು ತಣಿಸುತ್ತಿರಬೇಕು. ಮೊಳಕೆ ಬೀಜದ ಒಂದು ಮೂರರಷ್ಟು ಬಂದಾಕ್ಷಣ ಅದು ಮುಂದಿನ ಕೆಲಸಕ್ಕೆ ರೆಡಿ. ಅಲ್ಲಿಂದ ಬಾರ್ಲಿ ಮೊಳಕೆ ಬೆಳೆಯಲು ಬಿಡುವಂತಿಲ್ಲ. ಹಾಗಾಗಿ ತಕ್ಷಣ ಅದನ್ನು ಒಣಗಿಸಬೇಕು. ಆಗ ಪೀಟ್ ಸುಡುವ ಹೊಗೆಯ ಮೂಲಕ ಒಣಗಿಸಲಾಗುತ್ತದೆ. ನಮ್ಮ ಕಡೆ ಜಾಯಿಕಾಯಿ ಒಣಗಿಸುವಂತೆ ಕೆಳಗಡೆ ಪೀಟ್ ಅನ್ನು ಉರಿಸಿ ಹೊಗೆಯನ್ನು ಅಟ್ಟದಲ್ಲಿಟ್ಟ ಬಾರ್ಲಿಯ ಮೂಲಕ ಹರಿಸಲಾಗು ತ್ತದೆ. ಈ ಪೀಟ್‌ನ ಹೋಗೆ ಇಡೀ ವಿಸ್ಕಿಯ ಪರಿಮಳಕ್ಕೆ ದೆಸೆಯೊಂದನ್ನು ಕೊಡುವುದು.

ಪೀಟ್ ಎಂದರೆ ಹಿಂದೆ ಹಿಮಾಚ್ಚಾದಿತ ಜವುಗು ಪ್ರದೇಶಗಳಲ್ಲಿ, ಒಣಗಿದ ನೆಲದಲ್ಲಿ ಅರ್ಧಂಬರ್ಧ ವಿಭಜನೆಗೊಂಡ ಹುಲ್ಲು, ಸಸ್ಯ ಇತ್ಯಾದಿ ಗಳು ಮಣ್ಣಿನೊಂದಿಗೆ ಸೇರಿಕೊಂಡ ಒಂದು ಉರುವಲು. ಇದು ನೋಡಲು ಗೊಬ್ಬರ ಮಿಶ್ರಿತ ಮಣ್ಣಿನಂತೆ ಕಾಣುತ್ತದೆ. ಇದು ಎಲ್ಲ ಕಡೆ ಸಿಗುವಂಥದ್ದಲ್ಲ ಇತ್ಯಾದಿ ಇತ್ಯಾದಿ. ಮೊಳಕೆ ಬಂದ ಬಾರ್ಲಿ ಬೆಳವಣಿಗೆಯ ಹಾರ್ಮೋನುಗಳಿಂದ ತುಂಬಿರುತ್ತದೆ ಮತ್ತು ಈ ಹೋಗೆ ಕಂಪನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಬಾರ್ಲಿಯನ್ನು ಪುಡಿಮಾಡಿ ಅದರೊಂದಿಗೆ ಯೀಸ್ಟ್ ಅನ್ನು ಸೇರಿಸಿ ಕೊಳೆಸ ಲಾಗುತ್ತದೆ. ಅದು ಫಾರ್ಮೆಂಟೇಶನ್.

ಇದೆಲ್ಲದಕ್ಕೆ ಇಂತಿಷ್ಟೇ ಉಷ್ಣತೆಯ ಪ್ರಮಾಣ – ಲೆಕ್ಕಾಚಾರಗಳಿವೆ. ಅದನ್ನು ನಂತರದಲ್ಲಿ ತಾಮ್ರದ ಬೃಹತ್ ಮ್ಯಾಶ್ ಟನ್‌ನಲ್ಲಿ ಬಿಸಿ ಮಾಡಿ ಆಲ್ಕೋಹಾಲ್ ಆವಿಯನ್ನು ಸಂಗ್ರಹಿಸಲಾಗುತ್ತದೆ. ಅದು ಡಿಸ್ಟಿಲೇಶನ್. ಇದು ವಿಸ್ಕಿಯಲ್ಲ. ಅಲ್ಲಿಂದ ಮುಂದೆ ಓಕ್ ಮರದಿಂದ ತಯಾರು ಮಾಡಿದ ಬ್ಯಾರಲ್ಲುಗಳಲ್ಲಿ ವರ್ಷಾನುಗಟ್ಟಲೆ ಶೇಖರಿಸಿಡಲಾಗುತ್ತದೆ. ಆ ದ್ರವ್ಯ ಸ್ಕಾಟಿಷ್ ವಿಸ್ಕಿಯಾಗಲು ಕನಿಷ್ಠ ಮೂರು ವರ್ಷಗಳ ಕಾಲ ಈ ಬ್ಯಾರಲ್ಲಿನಲ್ಲಿ ಅದನ್ನು ಶೇಖರಿಸಿಡಬೇಕು. ಕೊನೆಯಲ್ಲಿ ತಯಾರಾಗೋದೇ ವಿಸ್ಕಿ.

ಶೇಖರಿಡಿಸುವ ಸಮಯ, ಬಳಸುವ ಪೀಟ್, ತಯಾರಾದ ಗಿಡಗಳ ವಿಧ ಎನ್ನುವುದರ ಮೇಲೆ ವಿಸ್ಕಿಯ ರುಚಿ ನಿರ್ಧರಿತವಾಗುತ್ತದೆ. ಹೀಗೆ ಬ್ಯಾರಲ್ಲಿನಲ್ಲಿ ಶೇಖರಿಸಿಡುವಾಗ ಪ್ರತೀ ವರ್ಷ ಶೇ. ೨ರಷ್ಟು ಆಲ್ಕೋಹಾಲ್ ಆವಿಯಾಗುತ್ತದೆ. ಇದು ದೇವರಿಗೆ – ಅದನ್ನು ಏಂಜೆಲ್ಸ್
ಶೇರ್ ಅಥವಾ ಏಂಜಲ್ಸ್ ಸಿಪ್ ಎನ್ನಲಾಗುತ್ತದೆ. ಇದು ಸಾಂಪ್ರದಾಯಿಕ ವಿಸ್ಕಿ ತಯಾರಾಗುವ ವಿಧಾನ. ಭಾರತದ ವಿಸ್ಕಿ ವಿಸ್ಕಿಯೇ ಅಲ್ಲ ಎನ್ನುವುದಕ್ಕೆ ಕಾರಣವಿದೆ.

ವಿಸ್ಕಿ ಭಾರತೀಯ ಪೇಯವಲ್ಲ. ಭಾರತದಲ್ಲಿ ತಯಾರಾಗುವ ಪೇಯದಲ್ಲಿ ಶೇ.92 ಅಸಲಿಗೆ ರಮ. ಏಕೆಂದರೆ ನಮ್ಮಲ್ಲಿ ತಯಾರಾಗಿ ವಿಸ್ಕಿ ಎಂದು ಲೇಬಲ್ ಹಚ್ಚಿ ಮಾರಲ್ಪಡುವ ಪೇಯವನ್ನು ಮೇಲೆ ಹೇಳಿದಂತೆ ತಯಾರಿಸಲಾಗುವುದಿಲ್ಲ. ಬದಲಿಗೆ ಕಬ್ಬು ಮೊದಲಾದವುಗಳಿಂದ ಉತ್ಪಾದನೆಯಾಗುವ ಸಕ್ಕರೆಯನ್ನು ಕೊಳೆಸುವುದರ ಮೂಲಕ ಆಲ್ಕೋಹಾಲ್ ತಯಾರಿಸಲಾಗುತ್ತದೆ. ನಂತರದಲ್ಲಿ ಬೇರೆ ದೇಶಗಳಿಂದ (ಶೇ.8) ವಿಸ್ಕಿ ಯನ್ನು ತಂದು ಅದಕ್ಕೆ ಮಿಶ್ರಣ ಮಾಡಲಾಗುತ್ತದೆ. ರಮ್ ತಯಾರಾಗುವುದು ಇದೇ ಮೊಲಾಸಿಸ್ ವಿಧಾನದಲ್ಲಿ. ಈ
ಕಾರಣಕ್ಕೆ ಭಾರತದಲ್ಲಿ ಬಿಕರಿಯಾಗುವ ವಿಸ್ಕಿ ವಿಸ್ಕಿಯೇ ಅಲ್ಲ ಎನ್ನುವುದು. ಇದರಲ್ಲಿ ಶೇ.8-10 ಮಾತ್ರ ವಿಸ್ಕಿಯಿರುತ್ತದೆ.

ಉಳಿದದ್ದು ರಮ್ ಅಥವಾ ಇನ್ನೊಂದು ಆಲ್ಕೋಹಾಲ್ ಮಿಶ್ರಣ. ಮಿಸಾಳ್ ಭಾಜಿ! ಆ ಕಾರಣಕ್ಕೆ ಭಾರತದಾಚೆ ಇದನ್ನು ವಿಸ್ಕಿ ಎಂದು ಲೇಬಲ್ ಹಚ್ಚಿ ಮಾರುವಂತೆ ಇಲ್ಲ. ಬದಲಿಗೆ ಸ್ಪಿರಿಟ್ ಡ್ರಿಂಕ್ ಎಂದು ಬೇಕಾದರೆ ಕರೆದು ಮಾರಬಹುದು. ಆ ಕಾರಣಕ್ಕೆ ಭಾರತದಲ್ಲಿ ಕೂಡ ಇಂತಹ ಮಿಸಾಳ್ ಪೇಯವನ್ನು ಬ್ಲೆಂಡೆಡ್ ವಿಸ್ಕಿ ಎಂದೇ ಕರೆಯುವುದು. ಮಿಶ್ರ ಪೇಯವನ್ನು ತಯಾರಿಸುವುದು ತೀರಾ ಅಗ್ಗವಾಗಿರುವುದೇ ಇದಕ್ಕೆಲ್ಲ ಕಾರಣ. ಅಲ್ಲದೆ ಪೀಟ್ ಮೊದಲಾದ ಪಕ್ಕಾ ವಿಸ್ಕಿ ತಯಾರಿಸಲು ಬೇಕಾಗುವ ವಸ್ತುಗಳು ಕೂಡ ಭಾರತದಲ್ಲಿ ಅಲಭ್ಯ. ಅಲ್ಲದೇ ಭಾರತದಲ್ಲಿ ವಿಸ್ಕಿ ಅವಶ್ಯಕತೆಗೆ ಬೇಕಾಗುವಷ್ಟು ಬಾರ್ಲಿ ಬೆಳೆಯುವುದೂ ಇಲ್ಲ.

ಇದೆಲ್ಲದಕ್ಕೆ ಅಪವಾದವೆನ್ನುವಂತೆ ಭಾರತದಲ್ಲಿ ಈಗೀಗ ಕೆಲವೇ ಕೆಲವು ಪಕ್ಕಾ ವಿಸ್ಕಿಗಳು ತಯಾರಿಸಲಾಗುತ್ತಿವೆ. ಆದರೆ ಅದು ಒಟ್ಟೂ ತಯಾರಿಕೆಯ ಶೇ.೮ ಕ್ಕಿಂತ ಕಡಿಮೆ. ಅದನ್ನು ತೀರಾ ಸಾಂಪ್ರದಾಯಿಕವಾಗಿ, ಸ್ಕಾಟ್ಲೆಂಡ್‌ನಂತೆ ಪೂರ್ಣ ಬಾರ್ಲಿಯಿಂದ ತಯಾರಿಸ ಲಾಗುತ್ತದೆ. ‘ಅಮೃತ್ ಫ್ಯೂಜನ್ ವಿಸ್ಕಿ’ 2014ರಲ್ಲಿ ಜಗತ್ತಿನ ಮೂರನೆಯ ಶ್ರೇಷ್ಠ ವಿಸ್ಕಿ ಎನ್ನುವ ಖ್ಯಾತಿ, ಪ್ರಶಸ್ತಿ ಪಡೆದಿತ್ತು. ಇದು ತಯಾ ರಾಗುವುದು ಮತ್ತೆಲ್ಲೂ ಅಲ್ಲ, ನಮ್ಮದೇ ಬೆಂಗಳೂರಿನಲ್ಲಿ! ಅದಲ್ಲದೆ ರಾಂಪುರ್, ಪಾಲ್ ಜಾನ್ ಮೊದಲಾದ ಕೆಲವೇ ಅಸಲಿ ವಿಸ್ಕಿಗಳು ಇಂದು ಭಾರತದಲ್ಲಿ ತಯಾರಾಗುತ್ತಿವೆ.

ಇವೆಲ್ಲ ಶುರುವಾದದ್ದು ಈಗ ಕಳೆದ ಒಂದೆರಡು ದಶಕದಿಂದೀಚೆ. ಇವುಗಳನ್ನು ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಸ್ಕಿ ಎಂದು
ಲೇಬಲ್ ಹಾಕಿ ಮಾರಬಹುದು. ಭಾರತದಲ್ಲಿ ಪಕ್ಕಾ ವಿಸ್ಕಿಗೆ ಬೇಕಾಗುವ ಕಚ್ಚಾವಸ್ತುಗಳ ಕೊರತೆಯಿದೆ ಮತ್ತು ಆಮದು ಮಾಡಿಕೊಳ್ಳ ಬೇಕು, ತುಟ್ಟಿ – ನಿಜ. ಆದರೆ ವಿಸ್ಕಿ ತಯಾರಿಕೆಗೆ ಭಾರತದ ವಾತಾವರಣ ಒಂದು ರೀತಿಯಲ್ಲಿ ಹೇಳಿ ಮಾಡಿಸಿದ್ದು. ಏಕೆಂದರೆ ಭಾರತದಲ್ಲಿ ಬ್ಯಾರಲ್ಲಿಗೆ ಹಾಕಿಟ್ಟ ಪೇಯ ಏಜ್ ಆಗುವ ವೇಗ ಉಷ್ಣ, ಆರ್ದ್ರ ಹವಾಮಾನ ಕಾರಣದಿಂದ ಸ್ಕಾಟ್ಲೆಂಡ್‌ಗಿಂತ ಆರು ಪಟ್ಟು ಜಾಸ್ತಿ. ಎಂದರೆ ಸ್ಕಾಟ್ಲೆಂಡ್‌ನಲ್ಲಿ ಹದಿನೆಂಟು ವರ್ಷ ಬ್ಯಾರಲ್ಲಿನಲ್ಲಿಡುವುದು ಮತ್ತು ಭಾರತದಲ್ಲಿ ಮೂರು ವರ್ಷ ಇಡುವುದು ಇವೆರಡೂ ಒಂದೆ.

ಇರಲಿ – ಇದು ಜಾಗತೀಕರಣದ ಔನ್ನತ್ಯದ ಸಮಯ. ಈಗ ಒಂಚೂರು ಸಮಾಧಾನವಾಗುವ ವಿಚಾರವೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕೆಲ ಭಾರತೀಯ ಅಸಲಿ ವಿಸ್ಕಿಗಳು ಹೆಸರು, ಹಣ ಎರಡನ್ನೂ ಮಾಡುತ್ತಿರುವುದು, ಮಾರ್ಕೆಟ್ ಶೇರ್ ಕಬಳಿಸು ತ್ತಿರುವುದು. ಅಮೆರಿಕದ, ಯೂರೋಪಿನ ಬಹುತೇಕ ಮದ್ಯ ಅಂಗಡಿಗಳಲ್ಲಿ ಈ ಕೆಲ ಅಸಲಿ ವಿಸ್ಕಿಗಳು ಇಂದು ಬಿಸಿಬಿಸಿ ಮಾರಾಟ ವಾಗುತ್ತವೆ. ಈ ಪಕ್ಕಾ ವಿಸ್ಕಿಗಳು ಭಾರತದಲ್ಲಿ ಎಷ್ಟು ಸಿಗುತ್ತವೆ, ಮಾರಾಟವಾಗುತ್ತವೆ? ಗೊತ್ತಿಲ್ಲ. ಸಿಕ್ಕಿದರೂ ಅವು ಕೈಗೆಟುಕುವ ದರದಲ್ಲಿರಲಿಕ್ಕಿಲ್ಲ. ಅದೆಲ್ಲ ಬಿಡಿ – ಏನೇ ಹೇಳಿ, ವ್ಯಾವಹಾರಿಕವಾಗಿ ಇದು ಹೆಮ್ಮೆಯ ವಿಷಯವೇ ಸರಿ.

ಆದರೆ ಮೊದಲು ಹೇಳಿದಂತೆ ವಿಸ್ಕಿಯ ಹೆಸರಲ್ಲಿ ಭಾರತದಲ್ಲಿ ಮಾರಲಾಗುವುದು ಬಹುತೇಕ ರಮ್ಮಿನ ಮಿಶ್ರಣ ಎನ್ನುವುದು ಇನ್ನೊಂದು ಕಡೆ. ಅದನ್ನೇ ವಿಸ್ಕಿ ಎಂದು ಒಳಕ್ಕಿಳಿಸಿಕೊಳ್ಳುತ್ತಾರೆ ನಮ್ಮವರು. ಭಾರತದಾಚೆ ಅದನ್ನು ವಿಸ್ಕಿಯೆಂದು ಕರೆಯಲು ಜಗತ್ತು ಒಪ್ಪದಿರ ಬಹುದು – ಆದರೆ ಅದನ್ನು ಇಂಡಿಯನ್ ವಿಸ್ಕಿ ಎಂದು ನಾವು ಒಪ್ಪಿಸಿಕೊಂಡಾಗಿದೆ.