ವಿಶ್ಲೇಷಣೆ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಕೇಂದ್ರದಲ್ಲಿ ಸತತ ಮೂರನೇಯ ಬಾರಿಗೆ ಎನ್ ಡಿಎ ಅಧಿಕಾರ ಹಿಡಿದ ಈ ಸಮಯದಲ್ಲಿ ಸಿಂಹಾವಲೋಕನದೊಂದಿಗೆ ಆರ್ಥಿಕ ವಿಶ್ಲೇಷಣೆ ಸೂಕ್ತ ವೆನಿಸದೆ ಇರಲಾರದು. ಇಡೀ ಜಗತ್ತು ಆರ್ಥಿಕತೆಯ ಹಿಂಜರಿಕೆಯನ್ನು ಅನುಭವಿಸುತ್ತಿರುವಾಗ, ಅಭಿವೃದ್ಧಿ ಹೊಂದಿದ ದೇಶಗಳು ಕೂಡಾ ಅತೀ ಕಡಿಮೆ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿರುವಾಗ ಭಾರತ ಮಾತ್ರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಸಾಧಿಸುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ಆರ್ಥಿಕತೆ ಹಿಂದೆಂದೂ ಕಾಣದ ಔನ್ನತ್ಯಕ್ಕೇರಿತು. ಒಂದು ದೇಶದ ಆರ್ಥಿಕತೆಯಲ್ಲಿ ವಿತ್ತೀಯ ನೀತಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದೇ ಸಂದರ್ಭದಲ್ಲಿ ಆರ್ಥಿಕತೆಯ ಮೈಲುಗಲ್ಲುಗಳು ಎನ್ನಬಹುದಾದ ಗಮನಾರ್ಹ ಸಾಧನೆಗಳಲ್ಲಿ ಆರ್ಥಿಕ ಸುಧಾರಣೆಗಳು
ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳು ಪ್ರಮುಖವಾಗಿವೆ.
ಬಹಳ ಮಹತ್ವದ ಇನ್ನೊಂದು ವಿಚಾರವೆಂದರೆ ದೇಶದ ಅರ್ಥ ವ್ಯವಸ್ಥೆಯ ನಿಯಂತ್ರಕವಾದ ಆರ್‌ಬಿಐ ಜಗತ್ತಿನಲ್ಲೇ ಅತ್ಯುತ್ತಮ ರೆಗ್ಯುಲೇಟರ್ ಬ್ಯಾಂಕ್ ಗಳಲ್ಲೊಂದಾಗಿದೆ. ಕೋವಿಡ್ ಸಹಿತ ಆರ್ಥಿಕ ಸಮಸ್ಯೆಗಳನ್ನು ಚೆನ್ನಾಗಿ ನಿಭಾಯಿಸಿದ ಹಿರಿಮೆ ಆರ್‌ಬಿಐಗಿದೆ. ಎನ್‌ಡಿಎ ಸರಕಾರ ಹತ್ತು ವರ್ಷದ ಆಡಳಿತದಲ್ಲಿ ಆರ್ಥಿಕ ಸುಧಾರಣೆಗಳ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ೫ ನೇ ಸ್ಥಾನಕ್ಕೇರಿಸಿದ ನಂತರ ಕೇಂದ್ರ ಸರಕಾರದ ಕನಸಿನ ಇದೀಗ ವಿಕಸಿತ ಭಾರತ ಪರಿಕಲ್ಪನೆಗೆ ಚಾಲನೆ ದೊರೆತಂತಾಗಿದೆ.
ವಿಶ್ವಬ್ಯಾಂಕ್ ಕೂಡಾ ಭಾರತದ ಆರ್ಥಿಕತೆಯ ವೇಗ ಅಭಾದಿತ ಎಂದು ವಿಶ್ಲೇಷಿಸಿದೆ. ೨೦೧೪ ರಲ್ಲಿ ಎನ್‌ಡಿಎ ಅಧಿಕಾರ ಪ್ರಾರಂಭವಾದಾಗ ಭಾರತದ ಆರ್ಥಿಕತೆ ಕ್ಷೀಣವಾಗಿತ್ತು. ಕಳೆದ ದಶಕದಲ್ಲಿ ಭಾರತದ ತಲಾವಾರು ಒಟ್ಟು ದೇಶೀಯ ಉತ್ಪನ್ನ ಗಮನಾರ್ಹ ಹೆಚ್ಚಳ ಕಂಡಿದೆ. ೨ಂ೧೪ ರಲ್ಲಿ ತಲಾವಾರು
ಜಿಡಿಪಿ ಸರಿ ಸುಮಾರು ೫೦೦೦ ಡಾಲರ್ ಆಗಿತ್ತು. ೨೦೨೨ ರ ವೇಳೆಗೆ ಅದು ೭೦೦೦ ಡಾಲರ್‌ಗಿಂತಲೂ ಹೆಚ್ಚಾಗಿದ್ದು ಶೇ.೪೦ ಪ್ರತಿಶತದಷ್ಟು ಏರಿಕೆ ಯಾಗಿದೆ.
೨೦೨೩-೨೦೨೪ ರ ದೇಶದ ಜಿಡಿಪಿ ದರವು ವಾರ್ಷಿಕ ನೆಲೆಯಲ್ಲಿ ಶೇ.೮.೨ ರಷ್ಟು ದಾಖಲಾಗಿ ದೇಶದ ಆರ್ಥಿಕತೆ ೩.೫ ಲಕ್ಷ ಕೋಟಿ ಡಾಲರ್‌ಗೇರಿದೆ. ಮುಂದಿನ ದಿನಗಳಲ್ಲಿ ಇದು ೫ ಲಕ್ಷ ಕೋಟಿ ಡಾಲರ್ ಗಳಷ್ಟಾಗಲು ಸಹಕಾರಿಯಾಗಲಿದೆ. ದೇಶದ ರಾಷ್ಟ್ರೀಕೃತ ಹಾಗೂ ಖಾಸಗೀ ಬ್ಯಾಂಕ್‌ಗಳು ನಷ್ಟದ
ಬದಲು ಭರ್ಜರಿ ಲಾಭದ ಹಳಿಯಲ್ಲಿ ಸಾಗುತ್ತಿವೆ. ೨೦೧೭- ೨೦೧೮ ರಲ್ಲಿ ಭಾರತೀಯ ಬ್ಯಾಂಕ್‌ಗಳು ರೂ. ೮೫೩೯೦ ನಷ್ಟ ಅನುಭವಿಸಿದ್ದವು. ೨೦೨೩- ೨೦೨೪ ನೇ ಸಾಲಿನಲ್ಲಿ ೩.೧೦ ಲಕ್ಷ ಕೋಟಿ ರು. ಲಾಭವನ್ನು ದಾಖಲಿಸಿದೆ. ಕೇಂದ್ರ ಸರಕಾರವು ತನ್ನ ಆದಾಯದ ಗುರಿಯನ್ನು ತಲುಪಿದೆ. ತೆರಿಗೆ ಸಂಗ್ರಹ ದಿಂದ ೨೦೨೩-೨೪ ನೇ ವರ್ಷದಲ್ಲಿ ೨೩.೨೬ ಲಕ್ಷ ಕೋಟಿ ರು. ಆದಾಯ ಬಂದಿದೆ.
ದೇಶದ ಒಟ್ಟು ಅಂತರಿಕ ಉತ್ಪಾದನೆಯ ೧೭೩.೮೨ ಲಕ್ಷ ಕೋಟಿ ರು.ಗಳಷ್ಟಾಗಿದೆ. ಅದರ ಹಿಂದಿನ ವರ್ಷ ೧೬೦.೭೧ ಲಕ್ಷ ಕೋಟಿ ರು. ಆಗಿತ್ತು. ಸಂಭ್ರಮಿಸ ಬೇಕಾದ ಆರ್ಥಿಕತೆಯ ಇನ್ನೊಂದು ಪರಿಣಾಮಕಾರಿ ಸುದ್ದಿಯೆಂದರೆ, ಕೇಂದ್ರ ಸರಕಾರಕ್ಕೆ ಆರ್‌ಬಿಐ ನೀಡಿದ ಬಂಪರ್ ಡಿವಿಡೆಂಡ್. ಆರ್‌ಬಿಐ ೨.೧೧ ಲಕ್ಷ ಕೋಟಿ ರು. ಡಿವೆಡೆಂಡ್ ನೀಡುವುದಾಗಿ ಘೋಷಿಸಿರುವುದರ ಪರಿಣಾಮ ದೇಶದ ವಿತ್ತೀಯ ಕೊರತೆಯನ್ನು ಶೇ.೦.೩ ರಷ್ಟು ತಗ್ಗಿಸಬಹುದು. ಇದರಿಂದಾಗಿ ರುಪಾಯಿ ಮೌಲ್ಯ ಮತ್ತು ಸರಕಾರಿ ಬಾಂಡ್ ಈಲ್ಡ್‌ನ ಸ್ಥಿರತೆ ಸಾಽಸುವಲ್ಲಿ ಆರ್‌ಬಿಐ ಮಹತ್ವದ ಪಾತ್ರ ವಹಿಸಿದೆ.
ಇದರಿಂದ ದೇಶದ ಆರ್ಥಿಕತೆ ವೃದ್ಧಿಯಾಗಲಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ೦.೪% ತಗ್ಗಿಸಿ ನೂತನ ಅಭಿವೃದ್ಧಿ ಕಾಮಗಾರಿ
ಅಥವಾ ಹೆಚ್ಚುವರಿ ಖರ್ಚನ್ನು ತೂಗಿಸಲು ಸಾಧ್ಯ. ಈಗ ನೂತನ ಸರಕಾರ ಜುಲೈನಲ್ಲಿ ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ವಿವಿಧ ರೀತಿಯ ಯೋಜನೆಗಳಿಗೆ ಹೆಚ್ಚಿನ ಲಾಭಾಂಶವನ್ನು ಬಳಸಿಕೊಳ್ಳಬಹುದು. ಇದರಿಂದಾಗಿ ಒಂದೇ ದಶಕದಲ್ಲಿ ನೀಡಿದ ಡಿವಿಡೆಂಡ್ ಮೊತ್ತವು ಆರು ಪಟ್ಟು ಹೆಚ್ಚಳವಾಗಿದೆ. ಇದು ದೇಶದ ಆರ್ಥಿಕ ಸುಸ್ಥಿರತೆ ಮತ್ತು ವಿತ್ತ ಆರೋಗ್ಯವನ್ನು ಬಿಂಬಿಸುತ್ತದೆ.
ಆರ್‌ಬಿಇಗೆ ಆದಾಯದ ಮೂಲವೆಂದರೆ ವಾಣಿಜ್ಯ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳಿಗೆ ನೀಡಿದ ಬಡ್ಡಿಯ ಆದಾಯ, ಸರಕಾರಿ ಬಾಂಡ್‌ಗಳಿಗೆ ಬಡ್ಡಿ, ವಿದೇಶೀ ಕರೆನ್ಸಿ, ಚಿನ್ನ, ಐಎಂಎಫ್, ಎಡಿಬಿ, ವರ್ಲ್ಡ್ ಬ್ಯಾಂಕಿನಲ್ಲಿ ಮಾಡಿದ ಹೂಡಿಕೆ ಆದಾಯ ಇವುಗಳು ಮೂಲವಾಗಿದೆ. ಆರ್‌ಬಿಐ ಕಡೆಯಿಂದ ಸಿಕ್ಕಿರುವ ಡಿವಿಡೆಂಡ್ ಮೊತ್ತವು ಸರಕಾರಕ್ಕೆ ಹಣಕಾಸಿನ ದೃಷ್ಟಿಯಿಂದ ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸಿಕೊಡಲಿದೆ. ಆರ್‌ಬಿಐ ನೀಡಿದ ವಿಫಲ ಡಿವಿಡೆಂಡ್ ಪರಿಣಾಮವಾಗಿ ೨೦೨೪-೨೫ ನೇ ಸಾಲಿಗೆ ವಿತ್ತೀಯ ಕೊರತೆ ಶೇ.೫.೧ ಕ್ಕೆ ಇಳಿಸಲು ಅನುಕೂಲವಾಗಿದೆ. ಸಮಗ್ರ ತೆರಿಗೆ ಆದಾಯ ಶೇ.೧೩.೫ ರಷ್ಟು ಉದ್ಯಮಗಳಿಂದ ದೊರೆತ ಭರ್ಜರಿ ಡಿವಿಡೆಂಡ್‌ಗಳಿಂದ ತೆರಿಗೆಯೇತರ ಆದಾಯ ಪರಿಷ್ಕೃತ ಅಂದಾಜಿಗಿಂತಲೂ ಜಾಸ್ತಿಯಾಗಿದೆ. ಕಳೆದ ೫ ವರ್ಷಗಳಲ್ಲಿ ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ.
ವಿವಿಧ ಬಗೆಯ ಸಬ್ಸಿಡಿಗಳನ್ನು ಕಡಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಎ ಸರಕಾರದ ಮೂರನೇಯ ಅವಧಿಯ ಪ್ರಥಮ ವರ್ಷದ ಆರ್ಥಿಕ ನಿರ್ವಹಣೆಯ ಆತಂಕಗಳಿಲ್ಲದೆ, ಸರಾಗವಾಗಿ ಸಾಗುವ ಲಕ್ಷಣಗಳಿವೆ. ಎನ್‌ಡಿಎ ಸರಕಾರದ ಅವಧಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದೇ ಇರಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಆರ್ಥಿಕ ಸುಧಾರಣಾ ಕಾರ್ಯಕ್ರಮಗಳು ಮುಂದುವರಿದು ನಿರುದ್ಯೋಗ, ನಿರುದ್ಯೋಗಕ್ಕೆ ಪರ್ಯಾಯ ಕಾರ್ಯ
ಸಾಧ್ಯ ಮಾನದಂಡಗಳು, ಹಣದುಬ್ಬರದ ಸಮಸ್ಯೆಗಳ ನಿವಾರಣೆಯ ಬಗ್ಗೆ ದೇಶದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಇದನ್ನು ನಿಭಾಯಿಸ ಬೇಕಾದ ಗುರುತರ ಹೊಣೆಗಾರಿಕೆ ಹೊಸ ಸರಕಾರದ ಮೇಲಿದೆ. ಇದಲ್ಲದೆ ಆರ್ಥಿಕ ಸುಧಾರಣೆಯಾದುದೇನೋ ಮುಚ್ಚುಮರೆಯಿಲ್ಲದ ಸತ್ಯ, ಇದರೊಂದಿಗೆ ಆರ್ಥಿಕ ಸುಧಾರಣೆಗಳಿಗೆ ಮಾನವೀಯ ಸ್ಪರ್ಷ ಇರಬೇಕು.
ಅದಲ್ಲದೆ ಜನಪರ ಆರ್ಥಿಕ ಸುಧಾರಣೆಗಳಿಗೆ ಸಾಕ್ಷಿಯಾಗಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆದಾಯ ಕಡಿಮೆಯಾಗಿರುವುದು, ಬೇಡಿಕೆ ಕುಸಿತವನ್ನು ವೃದ್ಧಿಸಲು ಯೋಜನೆಗಳನ್ನು ನಿರೂಪಿಸಬೇಕಾಗಿದೆ. ದೇಶದ ಆರ್ಥಿಕತೆಯಲ್ಲಿ ಜಿಡಿಪಿ ಏರಿಕೆಯಾಗಿದೆ. ಹಣದುಬ್ಬರ ಇಳಿಯುವ ಎಲ್ಲಾ ಸಾಧ್ಯತೆಗಳಿವೆ. ದೇಶದ ವಿದೇಶೀ ವಿನಿಮಯ ದಾಸ್ತಾನು ಅಧಿಕ ಪ್ರಮಾಣದಲ್ಲಿದೆ. ಬಂಗಾರದ ದಾಸ್ತಾನು ತೃಪ್ತಿಕರವಾಗಿದೆಯಲ್ಲದೆ ಜಾಗತಿಕವಾಗಿ
ಆರ್ಥಿಕತೆಯಲ್ಲಿ ಮೂರನೇಯ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ.
ಆರ್‌ಬಿಐ ನಿಲುವುಗಳು: ಇತ್ತೀಚಿನ ಆರ್‌ಬಿಐನ ದ್ವೆಮಾಸಿಕ ನೀತಿಯಲ್ಲಿ ಸತತ ಎಂಟನೇಯ ಬಾರಿಗೂ ರೆಪೋ ದರವನ್ನು ಶೇ. ೬.೫ ರ ಯಥಾ ಸ್ಥಿತಿ ಯಲ್ಲಿಡಲು ನಿರ್ಧರಿಸಿದೆ. ರೆಪೋ ದರವನ್ನು ಬದಲಿಸದೆ ೨೦೨೪-೨೫ ರ ಜಿಡಿಪಿ ಬೆಳವಣಿಗೆಯ ನಿರೀಕ್ಷೆಯನ್ನು ಶೇ.೭ ರಿಂದ ಶೇ.೭.೨ ಕ್ಕೆ ಏರಿಸಿದೆ. ಮುಂದಿನ ಹಣಕಾಸು ನೀತಿ ಸಭೆಯಲ್ಲಿ ರೆಪೋ ದರ ಇಳಿಯುವ ಸಾಧ್ಯತೆ ದಟ್ಟವಾಗಿದೆ. ತನ್ಮೂಲಕ ಗೃಹ, ವಾಹನ, ಸೇರಿದಂತೆ ವಿವಿಧ ರೀತಿಯ ಸಾಲಗಳ ಬಡ್ಡಿದರ ಕಡಿಮೆಯಾಗಲಿದೆ. ದೇಶದ ಆರ್ಥಿಕತೆಯು ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ. ಈಗ ಹಣದುಬ್ಬರವನ್ನು ಶೇ. ೪ ಕ್ಕೆ ತರುವ ಪ್ರಯತ್ನ ದಿಂದಾಗಿ ಆರ್‌ಬಿಐ ರೆಪೋ ದರವನ್ನು ಬದಲಿಸಿಲ್ಲ.
ದೇಶೀಯ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಆಧಾರದ ಮೇಲೆ ಆರ್‌ಬಿಐನ ಹಣಕಾಸು ನೀತಿಗಳನ್ನು ನಿರ್ಧರಿಸಲಾಗುತ್ತದೆ. ಹಣದುಬ್ಬರ
ಶೇ. ೪ ರ ಮಿತಿ ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾದರಷ್ಟೇ ಆರ್‌ಬಿಐನ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದು ಆರ್‌ಬಿಐ ಗವರ್ನರ್ ಸ್ವಷ್ಟ ಮಾಹಿತಿ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಆಹಾರ ಪದಾರ್ಥಗಳ ಬೆಲೆಯು ನಿಧಾನಗತಿಯಲ್ಲಿ ಏರುತ್ತಿದೆ. ಇದೇ ಸಂದರ್ಭದಲ್ಲಿ ದೇಶದ ಗೋಧಿ ಸಂಗ್ರಹಣೆ ಹಾಗೂ ಗೋಧಿ ಮತ್ತು ಅಕ್ಕಿಯ ಕಾಪು ದಾಸ್ತಾನು ಹೆಚ್ಚಿರುವುದರಿಂದ ಹಣದುಬ್ಬರ ಇಳಿಕೆಯಾಗಬಹುದು. ಆದರೆ ಜಾಗತಿಕ ಬಿಕ್ಕಟ್ಟಿನಿಂದ, ಕಚ್ಚಾ ತೈಲ ಬೆಲೆಯು ಅನಿಶ್ಚತತೆಯಿಂದ ಕೂಡಿರುವುದರಿಂದ ಆರ್ ಬಿಐ ರೆಪೋ ದರಕ್ಕೆ ಕೈ ಹಾಕದಿರುವುದಕ್ಕೆ ಕಾರಣ.
ಕೃಷಿ ಮತ್ತು ಹೂಡಿಕೆ ವಲಯಗಳಲ್ಲಿನ ಸುಧಾರಣೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಬೇಕಾಗಿದೆ. ಇದು ಕೃಷಿ, ಕೈಗಾರಿಕೆ, ಸೇವಾ ವಲಯ ಹಾಗೂ ವೈಯಕ್ತಿಕ ಸಾಲದ ಪ್ರಮಾಣವನ್ನು ವಿತರಿಸಲು ಬ್ಯಾಂಕ್ ಗಳಿಗೆ ನೆರವಾಗಲಿವೆ.
(ಲೇಖಕರು : ನಿವೃತ್ತ ಮುಖ್ಯ ಪ್ರಬಂಧಕರು ವಿಜಯ
ಬ್ಯಾಂಕ್ ಮತ್ತು ಸಂದರ್ಶಕ ಪ್ರಾಧ್ಯಾಪಕರು)