Wednesday, 11th December 2024

ಬದಲಾದ ಭಾರತವನ್ನು ಜಗತ್ತು ಹೇಗೆ ಗ್ರಹಿಸುತ್ತಿದೆ ?

ವಿಶ್ಲೇಷಣೆ

ಗಿರೀಶ್ ಲಿಂಗಣ್ಣ

ಇಲ್ಲಿಯ ತನಕ ಭಾರತಕ್ಕೆ ಯಾರಾದರೂ ವಿದೇಶಿ ಗಣ್ಯರು, ರಾಜಕಾರಣಿಗಳು, ನಿಯೋಗಿಗಳು ಭೇಟಿ ನೀಡುವ ಸಂದರ್ಭದಲ್ಲಿ, ಅವರು ರಾಜಧಾನಿ ದೆಹಲಿಯನ್ನು ಸಂದರ್ಶಿಸುತ್ತಿದ್ದುದು ವಾಡಿಕೆಯಾಗಿತ್ತು. ಅದಾದ ಬಳಿಕ ಛಾಯಾಚಿತ್ರಗಳಿಗೆ ಪೋಸ್ ನೀಡಲು ಆಗ್ರಾದ ತಾಜ್‌ಮಹಲ್‌ಗೆ ತೆರಳುತ್ತಿದ್ದರು. ಹೀಗಾಗಿ, ಸಮಗ್ರ ಭಾರತದ ಚಿತ್ರಣವನ್ನು ಕಟ್ಟಿಕೊಡುವಂಥ ಯಾವುದೇ ಕಾರ್ಯಯೋಜನೆ ಅವರ ಬಳಿ ಇರುತ್ತಿರಲಿಲ್ಲ.

ಈಗ ಅಂಥ ಚಿತ್ರಣ ಕ್ರಮೇಣ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತದ ಉದ್ದೇಶವನ್ನು ಚಿತ್ರಿಸಲು ಸಹಾಯ ವಾದ ಚಿಂತನೆಗಳು, ಮಹತ್ವಾಕಾಂಕ್ಷೆಗಳು ಮತ್ತು ಪ್ರಯತ್ನಗಳ ಕುರಿತಾಗಿ ಇಲ್ಲಿ ಕಣ್ಣುಹಾಯಿಸೋಣ. ‘ಭಾರತದ ನಿಜವಾದ ಆತ್ಮ ಮತ್ತು ಹೃದಯ ಕಾಣಸಿಗುವುದು ಅದರ ನಗರಗಳು, ಪಟ್ಟಣಗಳು ಮತ್ತು ಹಳ್ಳಿ ಗಳಲ್ಲೇ ವಿನಾ ಮಹಾನಗರಗಳಲ್ಲಿ ಅಲ್ಲ’ ಎಂದು ಚಿಂತಕರೊಬ್ಬರು ಹೇಳಿದ್ದರು. ಭಾರತದ ವಿವಿಧೆಡೆ ನಡೆದ ಜಿ-೨೦ ಶೃಂಗಸಭೆಗಳು ಈ ಮಾತುಗಳನ್ನು ನಿಜವೆಂದು ಸಾಬೀತುಪಡಿಸಿವೆ.

ಕಳೆದ ವರ್ಷ ಭಾರತದ ೭೫ನೇ ಸ್ವಾತಂತ್ರ್ಯ ಮಹೋತ್ಸವದ (ಆಜಾದಿ ಕಾ ಅಮೃತ್ ಮಹೋತ್ಸವ್) ಅಂಗ ವಾಗಿ ಆಯೋಜಿಸಲಾದ ಮೊಟ್ಟಮೊದಲ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ, ಭಾರತದ ೭೫ ನಗರಗಳಲ್ಲಿ ನಡೆದಿತ್ತು. ಈ ವರ್ಷ ಜಿ-೨೦ ಸದಸ್ಯ ರಾಷ್ಟ್ರಗಳ ಅತಿಥಿಗಳು ಮತ್ತು ಸಂಸ್ಥೆಗಳನ್ನು ಒಳಗೊಂಡ ಹತ್ತತ್ತಿರ ೨೦೦ ಸಭೆಗಳನ್ನು ತನ್ನ ೫೦ ನಗರಗಳಲ್ಲಿ ಆಯೋಜಿಸುವ ನಿರ್ಧಾರವನ್ನು ಭಾರತ ಕೈಗೊಂಡಿತು. ಅತಿಥಿ ಗಳನ್ನು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ಕೆಲವೇ ಪ್ರಮುಖ ಮಹಾನಗರಿಗಳ ಕಾನರೆನ್ಸ್ ಕೊಠಡಿಗಳ ನಾಲ್ಕು ಗೋಡೆಗಳ ಮಧ್ಯೆ ಕೂರಿಸುವ ಬದಲು, ವಿವಿಧ ಊರುಗಳಲ್ಲಿ ಸಭೆಗಳನ್ನು ಆಯೋಜಿಸುವ ಈ ನಿರ್ಧಾರವು ಭಾರತದ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಸಾರಲು ನೆರವಾಗಲಿದೆ.

ಭಾರತದ ಅಧ್ಯಕ್ಷತೆಯಲ್ಲಿ ‘ವಸುಧೈವ ಕುಟುಂಬಕಂ’ (ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ) ಎಂಬ ಘೋಷವಾಕ್ಯದಡಿ ಆಯೋಜಿಸಲಾಗುತ್ತಿರುವ ಈ ಬಾರಿಯ ಜಿ-೨೦ ಸಮಾವೇಶವು ಜಾಗತಿಕ ಸವಾಲುಗಳನ್ನು ಒಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಉದ್ದೇಶ ಹೊಂದಿದೆ. ಸೆಪ್ಟೆಂಬರ್ ೯-೧೦ರಂದು ನಡೆಯ ಲಿರುವ ಸಮಾವೇಶಕ್ಕೆ ಪೂರ್ವಭಾವಿಯಾಗಿ ಬಹುವಿಧದ ಸಭೆಗಳು ಈಗಾಗಲೇ ದೇಶಾದ್ಯಂತ ಜರುಗುತ್ತಿವೆ.

ಥಿಂಕ್ ೨೦ ಸಮಾವೇಶ
ಆಗಸ್ಟ್ ೩ರಂದು, ಕರ್ನಾಟಕದ ಮೈಸೂರಿನಲ್ಲಿ ನಡೆದ ಜಿ-೨೦ಯ ‘ಥಿಂಕ್ ೨೦’ ಸಮಾವೇಶವನ್ನು ವರ್ಚುವಲ್ ಮಾರ್ಗೋಪಾಯದ ಮೂಲಕ ಉದ್ಘಾಟಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ‘ಈ ಬಾರಿಯ ಜಿ-೨೦ ಸಮಾವೇಶವನ್ನು ಬಳಸಿಕೊಂಡು ಭಾರತ ತನ್ನ ಬದಲಾದ ಕಾರ್ಯ ತಂತ್ರವನ್ನು ಜಗತ್ತಿಗೆ ತೋರಿಸಿದೆ. ಜಗತ್ತನ್ನು ಭಾರತಕ್ಕೆ ಸಿದ್ಧಗೊಳಿಸಲು ಮತ್ತು ಭಾರತವನ್ನು ಜಗತ್ತಿಗೆ ಸಿದ್ಧ ಗೊಳಿಸಲು ಅವಶ್ಯಕ ಕ್ರಮಗಳನ್ನು ಕೈಗೊಂಡಿದೆ’ ಎಂದರು.

ಜಾಗತಿಕ ವಿಚಾರಗಳು ಜಗತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ವಿವರಿಸಿದ ಜೈಶಂಕರ್, ‘ಜಗತ್ತಿನ ಮುಂದೆ ಒಂದೇ ಪರಿಣಾಮವನ್ನು ಬೀರುವ ಒಂದೇ ಘಟನೆ ಇಲ್ಲ; ಬದಲಿಗೆ ಅದರಿಂದ ಹಲವಾರು ಪರಿಣಾಮಗಳು ಉಂಟಾಗುತ್ತವೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಅಭಿವೃದ್ಧಿಯ ಸಾಧ್ಯತೆ ಗಳನ್ನು ಅನ್ವೇಷಿಸುತ್ತಲೇ ಜಿ-೨೦ ತನ್ನ ಸಾಧ್ಯತೆಗಳನ್ನು ವಿಸ್ತರಿಸಿದೆ. ಯುರೋಪಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದನ್ನು ಬಾಧಿಸುತ್ತಿವೆ. ಇಂಥ
ಬೆಳವಣಿಗೆಗಳನ್ನು ಹೊಂದಿಕೊಂಡು, ಅನುಸರಿಸಿಕೊಂಡು ಅಭಿವೃದ್ಧಿ ಸಾಽಸಬೇಕಿದೆ’ ಎಂದು ಕರೆ ನೀಡಿದರು.

ವಿಭಿನ್ನ ಅಂಶಗಳ ಅಜೆಂಡಾ
ಭಾರತದ ಜಿ-೨೦ ಅಜೆಂಡಾದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇದು ಎಲ್ಲರನ್ನೂ ಒಳಗೊಂಡಿರುವ, ಮಹತ್ವಾಕಾಂಕ್ಷೆಯ, ಕ್ರಮಪ್ರಧಾನವಾದ ಮತ್ತು ನಿರ್ಣಾಯಕವಾದ ಕಾರ್ಯಸೂಚಿಯಾಗಿದೆ ಎಂದಿದ್ದಾರೆ. ೨೦೨೨ರ ಡಿಸೆಂಬರ್ ೧ರಂದು ಭಾರತವು ಒಂದು ವರ್ಷದ ಅವಧಿಯ ಜಿ-೨೦ ಅಧ್ಯಕ್ಷತೆಯನ್ನು ವಹಿಸಿಕೊಂಡಿತು. ಈ ಹಿಂದಿನ ಜಿ-೨೦ ಅಧ್ಯಕ್ಷರಾದ, ಇಂಡೊನೇಷ್ಯಾ ಅಧ್ಯಕ್ಷ ಜೋಕೋ ವಿಡೊಡೊ ಅವರು ಈ ಅಧಿಕಾರವನ್ನು ಬಾಲಿಯಲ್ಲಿ ಹಸ್ತಾಂತರಿಸಿದರು. ಈಗಾಗಲೇ ಉಲ್ಲೇಖಿಸಲಾಗಿರುವ ಮೋದಿಯವರ ಆಶಯವನ್ನು ಕೇಂದ್ರೀಕರಿಸಿ ಭಾರತವು ಒಂದಷ್ಟು ವಿಶಿಷ್ಟ ಅಂಶಗಳೆಡೆಗೆ
ಪ್ರಧಾನವಾಗಿ ಗಮನ ಹರಿಸಿದೆ.

ಅವೆಂದರೆ: ? ಹಸಿರು ಅಭಿವೃದ್ಧಿ, ಹವಾಮಾನ ಆರ್ಥಿಕತೆ ಮತ್ತು ಲೈಫ್ (ಔಜಿಊಉ) (ಲೈಫ್ ಎಂಬ ಆಯಾಮವು, ಭಾರತದ ಶ್ರೀಮಂತ, ಐತಿಹಾಸಿಕ, ಸಾಂಪ್ರದಾಯಿಕ ನೀತಿಗಳ ಆಧಾರವಾಗಿದ್ದು, ಭಾರತ ಇದರಡಿಯಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಬೆಳೆಸಲು ಪ್ರೇರೇಪಿಸುತ್ತಿದೆ).

? ವೇಗವಾದ, ಚೇತರಿಸಿಕೊಳ್ಳುವ, ಸುಸ್ಥಿರ ಅಭಿವೃದ್ಧಿಯ ಗುರಿಗಳು.
? ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ವ್ಯವಸ್ಥೆಗಳು.
? ೨೧ನೇ ಶತಮಾನಕ್ಕಾಗಿ ಬಹುಪಕ್ಷೀಯ ಸಂಸ್ಥೆಗಳು.
? ಮಹಿಳಾ ಕೇಂದ್ರಿತ ಅಭಿವೃದ್ಧಿ.

ಈ ವರ್ಷಾದ್ಯಂತ ನಡೆಯಲಿರುವ ಸಭೆಗಳು ಭಾರತದ ಸೌಂದರ್ಯ, ಸಾಂಪ್ರದಾಯಿಕ ಶ್ರೀಮಂತಿಕೆಯನ್ನು ಬಿಂಬಿಸಲೆಂದು ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗಿನ ಅಸಾಂಪ್ರ ದಾಯಿಕ ಸ್ಥಳಗಳಲ್ಲಿ ಆಯೋಜನೆಗೊಳ್ಳುತ್ತಿವೆ. ಜಿ-೨೦ ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ ಭಾರತದ ವಿವಿಧ ಭಾಷೆಗಳಲ್ಲಿನ ಶ್ರೀಮಂತ ಪರಂಪರೆ, ಆಹಾರ ವೈವಿಧ್ಯ ಮತ್ತು ಸಾಂಸ್ಕೃತಿಕ ಹಿರಿಮೆಯ ಕುರಿತು ಮಾಹಿತಿ ನೀಡಲಾಗುತ್ತದೆ.

ಭಾರತವು ಜಿ-೨೦ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ, ನಾಗಾಲ್ಯಾಂಡ್‌ನಲ್ಲಿ ನಡೆಯುವ ‘ಹಾರ್ನ್‌ಬಿಲ್ ಉತ್ಸವ’ ವನ್ನು ಪ್ರಮುಖವಾಗಿ ಪ್ರದರ್ಶಿಸಲು ನಿರ್ಧರಿಸಿತು. ಜಿ-೨೦ ರಾಷ್ಟ್ರಗಳ ಅಭಿವೃದ್ಧಿ ಸಚಿವರುಗಳ ಸಭೆಯನ್ನು ಜೂನ್ ಮಧ್ಯ ಭಾಗದಲ್ಲಿ ವಾರಾಣಸಿಯಲ್ಲಿ ಆಯೋಜಿಸಲಾಯಿತು. ಇದರಲ್ಲಿ ಭಾಗವಹಿಸಿದ ಐರೋಪ್ಯ ಒಕ್ಕೂಟದ ಕಮಿಷನರ್ ಜುಟ್ಟಾ ಉರ್ಪಿಲಾಯ್‌ನೆನ್, ‘ವಾರಾಣಸಿಯಲ್ಲಿನ ನನ್ನ ವಾಸ್ತವ್ಯ ರೋಮಾಂಚನಕಾರಿಯಾಗಿತ್ತು; ಒಂದು ವೇಳೆ ಜಿ-೨೦ ಸಭೆಯು ಭಾರತದಲ್ಲಿ ನಡೆಯದೇ ಇದ್ದಿದ್ದರೆ ಇದನ್ನು ನಾನು ಕಳೆದುಕೊಳ್ಳುತ್ತಿದ್ದೆ’ ಎಂದು ಬಣ್ಣಿಸಿದರು.

ವಿವಿಧ ದೇಶಗಳ ಮುಖ್ಯಸ್ಥರ ಸಭೆಗಳನ್ನು ಪಾರಂಪರಿಕ ನಗರಗಳಲ್ಲಿ ಆಯೋಜಿಸಲಾಗಿತ್ತು. ಪ್ರಮುಖ ಸಮಾರಂಭ ಗಳನ್ನು ದೂರ ಪ್ರದೇಶಗಳಲ್ಲಿ ಆಯೋಜಿಸಲಾಗಿತ್ತು. ವಿವಿಧ ನಗರಗಳಲ್ಲಿ ಉದ್ಯಮಗಳ ಅಭಿವೃದ್ಧಿ ಪಥವನ್ನು ತೋರಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಿಲಿಟರಿ ಕಮಾಂಡರ್‌ಗಳ ಸಭೆಗಳನ್ನು ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಯಿತು. ೧೯೪೯ರಲ್ಲಿ ‘ಆರ್ಮಿ ಡೇ ಪರೇಡ್’ ಆರಂಭ ಗೊಂಡ ಬಳಿಕ, ಇದೇ ಮೊದಲ ಬಾರಿಗೆ ೭೫ನೇ ಆರ್ಮಿ ಡೇ ಪರೇಡನ್ನು ದೆಹಲಿಯಿಂದ ಹೊರಗೆ, ಬೆಂಗಳೂರಿನಲ್ಲಿ ಆಯೋಜಿಸಲಾಯಿತು. ತನ್ಮೂಲಕ ಮೊದಲ ಬಾರಿಗೆ ಜಗತ್ತಿಗೆ ‘ನೈಜ ಭಾರತ’ದ ಪರಿಚಯವಾದಂತಾ ಯಿತು.

ಬೆಳೆಯುತ್ತಿರುವ ಸೂಪರ್ ಪವರ್ ರಾಷ್ಟ್ರವಾಗಿ ಭಾರತದ ಶಕ್ತಿ, ವೈಭವ ವನ್ನು ಜಗತ್ತು ಕಣ್ಣಾರೆ ಕಾಣುವಂತಾಯಿತು. ಸರಕಾರ ‘ಸೆಲ್ಫಿಕ್ಯಾಂಪೇನ್’ ಆಯೋಜಿ ಸಿದ್ದು, ಜಿ-೨೦ ಘೋಷವಾಕ್ಯದಡಿ ಸಿಂಗರಿಸಲಾದ ಸ್ಮಾರಕಗಳ ಬಳಿ ಸೆಲ್ಫಿ ತೆಗೆದುಕೊಳ್ಳುವಂತೆ ಅದು ನಾಗರಿಕರಿಗೆ ಕರೆ ನೀಡಿದೆ. ಈ ಯೋಜನೆಗಾಗಿ ನೂರಕ್ಕೂ ಹೆಚ್ಚು ಸ್ಮಾರಕಗಳನ್ನು ಅಂತಿಮಗೊಳಿಸಲಾಗಿದ್ದು, ಇದರಲ್ಲಿ ಯುನೆಸ್ಕೋ ಪಾರಂಪರಿಕ ತಾಣ ಗಳೂ ಸೇರಿವೆ. ಹಲವರಿಗೆ ಇಂಥ ಉಪಕ್ರಮಗಳು ಆರಂಭದಲ್ಲಿ ಕ್ಷುಲ್ಲಕವಾಗಿ ಕಾಣಬಹುದು. ಆದರೆ ಸರಕಾರದ ರಾಜತಾಂತ್ರಿಕ ದೃಷ್ಟಿಯನ್ನು ಅರ್ಥೈಸಿಕೊಳ್ಳಲು ದೂರದೃಷ್ಟಿಯ ಈ ಕ್ರಮಗಳು ಸಾರ್ವಜನಿಕರಿಗೆ ನೆರವಾಗಲಿವೆ.