ವೀಕೆಂಡ್ ವಿತ್ ಮೋಹನ್
camohanbn@gmail.com
ಭಾರತದ ಅಸ್ತಿತ್ವವನ್ನೇ ಅಲುಗಾಡಿಸಿದ ಸರ್ವಾಧಿಕಾರಿ ‘ಇಂದಿರಾ’ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 47 ವರ್ಷಗಳು ಕಳೆದಿವೆ.
ಆಕೆಯ ಸರ್ವಾಧಿಕಾರದಿಂದ ಬಳಲಿದ ಹೋರಾಟಗಾರರು, ರಾಜಕೀಯ ನಾಯಕರು, ಪತ್ರಕರ್ತರು, ವಿದ್ಯಾರ್ಥಿಗಳು ಇವತ್ತಿಗೂ ಆ ದಿನಗಳನ್ನು ನೆನೆದರೆ ಒಮ್ಮೆ ದಿಗಿಲು ಬೀಳುತ್ತಾರೆ. ಮಾತು ಮಾತಿಗೂ ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತ ನಾಡುವ ಕಾಂಗ್ರೆಸಿಗರು ಆ ಕರಾಳದಿನವನ್ನು ನೆನಪಿಸಿಕೊಂಡು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು.
1971ರ ಚುನಾವಣೆಯಲ್ಲಿ ಇಂದಿರಾಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪಽಸಿ ಸ್ಪಷ್ಟ ಬಹುಮತದಿಂದ ತಮ್ಮ ಎದುರಾಳಿ ರಾಜ್ ನಾರಾಯಣ್ ವಿರುದ್ಧ ಜಯಗಳಿಸಿದ್ದರು. ಆದರೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಿರುವ ಹಾಗೂ ಸರ್ಕಾರಿ ಯಂತ್ರ ದುರ್ಬಳಕೆಯ ಆರೋಪ ಕೇಳಿ ಬಂತು. ಈ ಸಂಬಂಧ ರಾಜ್ ನಾರಾಯಣ್ ಅಲಹಾಬಾದ್ ನ್ಯಾಯಾ ಲಯದಲ್ಲಿ ಇಂದಿರಾ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದ್ದರು.
ಸುಮಾರು ನಾಲ್ಕು ವರ್ಷಗಳ ವಿಚಾರಣೆಯ ನಂತರ ಇಂದಿರಾ ಚುನಾವಣೆ ಯಲ್ಲಿ ಅಕ್ರಮವೆಸೆಗಿರು ವುದು ಸಾಬೀತಾಗಿ, ನ್ಯಾಯಮೂರ್ತಿಗಳು ಇಂದಿರಾ ವಿರುದ್ಧ ತೀರ್ಪು ನೀಡಿದರು.
ತೀರ್ಪಿನಲ್ಲಿ 20 ದಿನಗಳಲ್ಲಿ ಇಂದಿರಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಹೇಳಲಾಗಲಿತ್ತು. ಸ್ವಾರ್ಥ ರಾಜಕಾರಣ ಮಾಡಿಕೊಂಡು ಬಂದಿ ರುವ ನೆಹರು ಕುಟುಂಬದ ಕುಡಿಗೆ ಅಧಿಕಾರವಿಲ್ಲದೆ ಇರಲು ಸಾಧ್ಯವಿರಲಿಲ್ಲ. ಸರ್ವಾಧಿಕಾರಿಯಾಗಿದ್ದ ಇಂದಿರಾ ಹೇಗಾದರೂ ಮಾಡಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದ್ದರು. ಇಡೀ ದೇಶವೇ ತನ್ನ ಕುಟುಂಬ ದವರು ಕಟ್ಟಿದ್ದೆಂಬ ಭ್ರಮೆಯಲ್ಲಿದ್ದ ಇಂದಿರಾ ಭಾರತದ ಸಂವಿಧಾನವನ್ನೇ ಅಲು ಗಾಡಿಸುವ ನಿರ್ಧಾರಕ್ಕೆ ಬಂದರು.
ನ್ಯಾಯಾಲಯ ನೀಡಿದ 20 ದಿನಗಳ ಗಡುವನ್ನೇ ದುರುಪಯೋಗ ಮಾಡಿಕೊಂಡ ಇಂದಿರಾ ತನ್ನ ಸ್ವಾರ್ಥಕ್ಕಾಗಿ ಸಂವಿಧಾನ ವನ್ನೇ ತಿದ್ದುಪಡಿ ಮಾಡಿಬಿಟ್ಟರು. ಆ ಮೂಲಕ ನ್ಯಾಯಾಂಗ ವ್ಯವಸ್ಥೆಗಿದ್ದ ಪ್ರಧಾನಮಂತ್ರಿಗಳ ಪದವಿಯ ಅಧಿಕಾರ
ಪರಿಷ್ಕರಿಸುವ ಹಕ್ಕನ್ನೇ ಕಿತ್ತುಕೊಂಡಿತು. ಒಬ್ಬ ವ್ಯಕ್ತಿಯ ಸರ್ವಾಧಿಕಾರಿ ಮನಃಸ್ಥಿತಿ ಅಂದು ಇಡೀ ಜಗತ್ತಿನ ಮುಂದೆ ಭಾರತ ವನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಭಾರತದ ನ್ಯಾಯಾಂಗ ವ್ಯವಸ್ಥೆಗೆ ಇಂದಿರಾ ಬಹುದೊಡ್ಡ ಅವಮಾನ ಮಾಡಿದ್ದರು. ಈ ತಿದ್ದುಪಡಿಯನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ, ಈ ತಿದ್ದುಪಡಿಯ ಮೂಲಕ ಇಂದಿರಾ ಭಾರತದ ಸಂವಿಧಾನದ ಬುಡವನ್ನೇ ಅಲುಗಾಡಿಸಿದ್ದಾರೆಂದು ಹೇಳಿತ್ತು. ಮಾತ್ರವಲ್ಲ, ತಿದ್ದುಪಡಿಯು ಸಂವಿಧಾನ ಬಾಹಿರವಾಗಿದ್ದು, ಇದಕ್ಕೆ ಯಾವ ರೀತಿಯ ಮನ್ನಣೆಯಿಲ್ಲವೆಂದೂ ಹೇಳಿತ್ತು.
ಇಂದಿರಾ ಸರ್ವಾಧಿಕಾರಿ ವರ್ತನೆ ಇಲ್ಲಿಗೇ ಮುಗಿಯಲಿಲ್ಲ. ದೇಶದಾದ್ಯಂತ ಆಕೆಯ ಸಂವಿಧಾನ ತಿದ್ದುಪಡಿಗೆ ಆಕ್ರೋಶ ವ್ಯಕ್ತ ವಾಯಿತು. ಜನರು ದಂಗೆ ಎದ್ದರು. ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ 25ನೇ ಜೂನ್ 1975ರಂದು ಇಂದಿರಾ ತುರ್ತು ಪರಿಸ್ಥಿತಿ ಹೇರಿದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳು, ಪತ್ರಕರ್ತರು, ಪ್ರತಿಪಕ್ಷದ ನಾಯಕರು, ಕೈಗಾರಿಕೋದ್ಯಮಿಗಳನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟಿದ ಕೀರ್ತಿ ಸರ್ವಾಧಿಕಾರಿ ಇಂದಿರಾಗೆ ಸಲ್ಲಬೇಕು.
ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಪ್ರಮುಖ ಅಂಶವಾದ ‘ಮೂಲ ಭೂತ ಹಕ್ಕು’ಗಳಿಗೆ ತಿದ್ದುಪಡಿ ಮಾಡಿ ವಾಕ್ ಸ್ವಾತಂತ್ರ್ಯವನ್ನು ಕಸಿಯಲಾಯಿತು. 1975 ರಿಂದ 1977ರ ನಡುವೆ ತನ್ನ ಸ್ವಾರ್ಥಕ್ಕಾಗಿ ಸಂವಿಧಾನವನ್ನು ಮನಸೋ ಇಚ್ಛೆ ತಿದ್ದುಪಡಿ ಮಾಡಿದ್ದರು ಇಂದಿರಾ. 1976ರ ನವೆಂಬರ್ನಲ್ಲಿ 42ನೆಯ ತಿದ್ದುಪಡಿಯನ್ನು ಮಾಡಿದ ಇಂದಿರಾ ಪತ್ರಿಕಾ ಸ್ವಾತಂತ್ರ್ಯ ವನ್ನೇ ಕಿತ್ತುಕೊಂಡರು, ಸರಕಾರದ ವಿರುದ್ಧ ವಿಷಯ ಪ್ರಕಟಿಸಿದ ಪತ್ರಕರ್ತರನ್ನು ಬಂಧಿಸಲಾಗುತ್ತಿತ್ತು.
ಪ್ರತಿಯೊಂದು ಪತ್ರಿಕೆಯ ವಿಚಾರವನ್ನು ಇಂದಿರೆಯ ಸರಕಾರ ಬೂತಕನ್ನಡಿಯಿಂದ ನೋಡುತ್ತಿತ್ತು, ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಪತ್ರಕರ್ತರನ್ನು ದೇಶದಾದ್ಯಂತ ಜೈಲಿಗಟ್ಟಲಾಯಿತು. ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಹೋರಾಟ
ಮಾಡುತ್ತಿದ್ದುದನ್ನು ಸಹಿಸದ ಇಂದಿರಾ ಸರಕಾರ, ಸಾವಿರಾರು ವಿದ್ಯಾರ್ಥಿಗಳನ್ನು ಜೈಲಿಗಟ್ಟಿತ್ತು. ದೆಹಲಿಯ ಶ್ರೀರಾಂ ಕಾಲೇಜಿ ನಲ್ಲಿ ಓದುತ್ತಿದ್ದಂತಹ ಅರುಣ್ ಜೇಟ್ಲಿ ವಿದ್ಯಾರ್ಥಿ ಚಳವಳಿಯ ಮೂಲಕ ತುರ್ತು ಪರಿಸ್ಥಿಯ ವಿರುದ್ಧದ ಹೋರಾ ಟಕ್ಕೆ ದುಮುಕಿದ್ದರು. ಅವರನ್ನೂ ಬಂಧಿಸಲಾಗಿತ್ತು.
ಸುಬ್ರ ಮಣಿಯನ್ ಸ್ವಾಮಿಯವರನ್ನು ಬಂಧಿಸಲಾಗಿತ್ತು. ಅಂದು ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿಬಿದ್ದಂತಹ ಸ್ವಾಮಿ ಇಂದಿಗೂ ಅವರ ಕುಟುಂಬದ ಕುಡಿಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ಸರ್ವಾಧಿಕಾರಿಯ ವಿರುದ್ಧ ಯಾರೊಬ್ಬರೂ ಧ್ವನಿ
ಎತ್ತುವಂತಿರಲಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ತುರ್ತು ಪರಿಸ್ಥಿಯ ವಿಚಾರವಾಗಿ ಯಾವ ಪತ್ರಿಕೆಯೂ ವರದಿ ಮಾಡು ವಂತಿರಲಿಲ್ಲ. ರೇಡಿಯೋ ಸರಕಾರದ ಅಧೀನ ದಲ್ಲಿದ್ದುದರಿಂದ ಸಂಪೂರ್ಣವಾಗಿ ಇಂದಿರೆಯ ಹಿಡಿತದಲ್ಲಿತ್ತು.
ರೇಡಿಯೋನಲ್ಲಿ ಕೇವಲ ತುರ್ತು ಪರಿಸ್ಥಿಯನ್ನು ಹೇರಲಾಗಿದೆಯೆಂದು ಮಾತ್ರ ಹೇಳಲಾಗುತ್ತಿತ್ತು. ಕೋಟ್ಯಂತರ ಭಾರತೀಯರಿಗೆ ತಮ್ಮ ಮೇಲಾಗುತ್ತಿದ್ದಂತಹ ದೌರ್ಜನ್ಯದ ಅರಿವಿರಲ್ಲದಂತೆ ಮಾಡಲಾಗಿತ್ತು. ದೇಶದಲ್ಲಿ ಏನಾಗುತ್ತಿದೆಯೆಂಬ ಅರಿವು ಸಾಮಾನ್ಯ ಪ್ರಜೆಗಿರಲಿಲ್ಲ. ಇಂದಿನಂತೆ ಅಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಿರಲಿಲ್ಲ. ದೂರದರ್ಶನದ ವ್ಯವಸ್ಥೆ ಹೆಚ್ಚಾಗಿ ಇರಲಿಲ್ಲ. ಕೇವಲ ದಿನಪತ್ರಿಕೆಯನ್ನೇ ಅವಲಂಬಿಸಿದ್ದ ಜನರಿಗೆ ಇಂದಿರೆಯ ಸರ್ವಾಧಿಕಾರದ ಅರಿವು ತಲುಪುತ್ತಿರಲಿಲ್ಲ. ರಾಜ್ಯ ಸರಕಾರಗಳ ಹಲವು ಹಕ್ಕುಗಳನ್ನು ಕಿತ್ತುಕೊಳ್ಳುವ ತಿದ್ದುಪಡಿಯನ್ನು ಸರ್ವಾಧಿಕಾರಿ ಇಂದಿರಾ ಮಾಡಿದ್ದರು.
ಇಷ್ಟೆಲ್ಲ ಯಾವ ಪುರುಷಾರ್ಥಕ್ಕೆ ಹೇಳಿ? ಕೇವಲ ತನ್ನ ಸ್ವಾರ್ಥ ರಾಜಕೀಯಕ್ಕಗಷ್ಟೆ. ನೆಹರು ನಿಧನಾನಂತರ ಕಾಮರಾಜ್ ಕಾಂಗ್ರೆಸಿನ ಅಧಿನಾಯಕನಾಗಬೇಕಿತ್ತು. ಕುಟುಂಬ ನಿಷ್ಠೆಗೊಳಗಾದಂತಹ ಕಾಮರಾಜ್ ತಮ್ಮ ಸ್ಥಾನವನ್ನು ಇಂದಿರಾಗೆ ಬಿಟ್ಟು ಕೊಟ್ಟಿದ್ದರು. ಕಾಮರಾಜ್ ಬಿಟ್ಟುಕೊಟ್ಟಿದ್ದರ ಫಲವನ್ನು ಕಾಂಗ್ರೆಸ್ ಇಂದಿಗೂ ಅನುಭವಿಸುತ್ತಿದೆ.
ನಮ್ಮ ಸಂವಿಧಾನವು ರಾಜ್ಯ ಹಾಗೂ ಕೇಂದ್ರಗಳ ನಡುವೆ ಅಧಿಕಾರ ಹಂಚಿಕೆಯ ಸೂತ್ರಗಳನ್ನು ಸ್ಪಷ್ಟವಾಗಿ ಹೇಳಿದೆ. ಇಂದಿರೆಯ ಸಂವಿಧಾನ ತಿದ್ದುಪಡಿ ರಾಜ್ಯ ಸರಕಾರದ ಅಧಿಕಾರವನ್ನೂ ಕಸಿದುಕೊಂಡಿತ್ತು. ಸಂವಿಧಾನವನ್ನು ತಿದ್ದುಪಡಿ ಮಾಡುವುದು ಸುಲಭವಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಒಕ್ಕೂರಲಿನಿಂದ ಒಪ್ಪಿದರೆ ಮಾತ್ರ ತಿದ್ದುಪಡಿ ಮಾಡಲು ಸಾಧ್ಯ. ಇಂದಿರೆ ಮಾಡಿದ ತಿದ್ದುಪಡಿಯನ್ನು ಬಹುಪಾಲು ರಾಜ್ಯಗಳು ವಿರೋಧಿಸಲಿಲ್ಲ. ಕಾರಣ ಆಕೆಯ ಅಧಿಕಾರಾವಧಿಯಲ್ಲಿ 17 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು.
ಕೇಂದ್ರ ಸರಕಾರದ ಶಕ್ತಿಯ ಜತೆಗೆ ಇಂದಿರಾಗೆ ರಾಜ್ಯ ಸರಕಾರದ ಶಕ್ತಿಯೂ ಇತ್ತು. ಆಕೆ ಹೇಳಿದ ಹಾಗೆ ಕೇಳುವ ಕಾಂಗ್ರೆಸಿನ ‘ರಬ್ಬರ್ ಸ್ಟ್ಯಾಂಪ್’ ಮುಖ್ಯಮಂತ್ರಿಗಳಿದ್ದರು. ಇಂದಿರಾ ಒಂದು ಪೇಪರ್ ಕಳುಹಿಸಿದರೆ ಪರೀಕ್ಷಿಸದೇ ಸಹಿ ಹಾಕುವ ಕಾಂಗ್ರೆಸಿನ ಮುಖ್ಯ ಮಂತ್ರಿಗಳಿದ್ದಂತಹ ಕಾಲವದು. ಆಕೆಯ ಮಾತುಗಳನ್ನು ಒಪ್ಪದಿದ್ದರೆ ರಾಜ್ಯದ ಮುಖ್ಯಮಂತ್ರಿಗಳನ್ನೇ ಬದಲಾಯಿಸಿ ತನಗಿಷ್ಟ ಬಂದವರನ್ನು ಕೂರಿಸುವ ಮನಃಸ್ಥಿತಿಯಲ್ಲಿ ಇಂದಿರಾ ಇದ್ದರು. ಈ ವಿಷಯದಲ್ಲಿ ಇಂದಿರೆಯ ವಕೀಲರಾಗಿದ್ದಂತಹ ನಾನಾ ಪಾಲ್ಕೆವಾಲ, ತುರ್ತು ಪರಿಸ್ಥಿಯ ವಿರುದ್ಧ ನಿಂತರು.
ಇಂದಿರೆಯ ಚುನಾವಣಾ ವ್ಯಾಜ್ಯದಲ್ಲಿ ಆಕೆಯ ಪರವಾಗಿ ವಾದ ಮಾಡಿದ್ದವರು, ಆಕೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಿಂತು ಜಯಪ್ರಕಾಶ ನಾರಾಯಣರ ಚಳವಳಿಯಲ್ಲಿ ಭಾಗಿಯಾದರು. ಪ್ರಜಾಪ್ರಭುತ್ವದ ಕಗ್ಗೊಲೆಗೈದಿದ್ದ ಇಂದಿರಾರ ಸರ್ವಾಧಿ
ಕಾರಿ ಧೋರಣೆಯನ್ನು ಅಂತ್ಯಗೊಳಿಸಿ, ಭಾರತದಲ್ಲಿ ಪ್ರಜಾ ಪ್ರಭುತ್ವವನ್ನು ಪುನರ್ಸ್ಥಾಪಿಸುವುದು ಬಹಳ ಕಷ್ಟದ ಕೆಲಸ ವಾಗಿತ್ತು. ದೇಶದ ಕಾರ್ಯಂಗ, ಶಾಸಕಾಂಗ, ನ್ಯಾಯಾಂಗವನ್ನೇ ತನ್ನ ಹತೋಟಿಗೆ ತೆಗೆದುಕೊಂಡಿದ್ದ ಇಂದಿರೆಯನ್ನು ಕೆಳಗಿಳಿ ಸಲು ದೊಡ್ಡದೊಂದು ಚಳವಳಿಯ ಅವಶ್ಯಕತೆ ಇತ್ತು.
ಮಾಧ್ಯಮಗಳ ಸಂಪರ್ಕವಿಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಸಂಪರ್ಕಿಸಿ ಹೋರಾಟಕ್ಕೆ ಸಜ್ಜುಗೊಳಿಸುವುದು ಸುಲಭದ ಮಾತಾಗಿರಲಿಲ್ಲ. ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಕಾರ್ಯಕರ್ತರು ದೇಶದೆಡೆ ಇದ್ದುದ್ದರಿಂದ ಇಂದಿರೆಯ ವಿರುದ್ಧದ ಚಳವಳಿಗೆ ಒಂದು ವೇಗ ಸಿಕ್ಕಿತ್ತು. ಸಂಘದ ಸರಸಂಘಚಾಲಕರನ್ನು ಜೈಲಿಗೆ ಹಾಕಿದರೆ ತನ್ನ ವಿರುದ್ಧದ ಹೋರಾಟವನ್ನು ಹತ್ತಿಕ್ಕಬಹುದೆಂದುಕೊಂಡಿದ್ದ ಸರ್ವಾಧಿಕಾರಿ ಇಂದಿರಾಗೆ, ಸಂಘದ ವಿಸ್ತಾರವಾದ ಬೇರುಗಳು ದೇಶದಾದ್ಯಂತ ಹಬ್ಬಿರುವುದರ
ಅರಿವಿರಲಿಲ್ಲ. ರಾಷ್ಟ್ರರಕ್ಷಣೆ ಎಂದೊಡೆನೇ ಮುನ್ನೆಲೆಗೆ ಬಂದು ಹೋರಾಟ ಮಾಡುವ ಪ್ರವೃತ್ತಿ ಸಂಘದ ಕಾರ್ಯಕರ್ತರಿಗೆ
ಹೊಸತಾಗಿರಲಿಲ್ಲ.
ಕಾಡ್ಗಿಚ್ಚಿನಂತೆ ದೇಶದಾದ್ಯಂತ ಯುವಕರು ಚಳವಳಿಯಲ್ಲಿ ಧುಮುಕಿದರು. ಈ ಮಧ್ಯೆ, ಜಯಪ್ರಕಾಶ್ ನಾರಾಯಣ್ ನೇತೃತ್ವ ದಲ್ಲಿ ನಡೆದ ಚಳವಳಿ ದೇಶದಾದ್ಯಂತ ಸಂಚಲವನ್ನೇ ಮೂಡಿಸಿತ್ತು. ಜೈಲಿನಿಂದಲೇ ಗುರೂಜಿ ಕಾರ್ಯಕರ್ತರಿಗೆ ರಾಷ್ಟ್ರರಕ್ಷಣೆಯ ಚಳವಳಿಯ ಬಗ್ಗೆ ಆಯಾಯ ಸಮಯಕ್ಕೆ ಬೇಕಾದಂತಹ ಮಾರ್ಗದರ್ಶನವನ್ನು ನೀಡುತ್ತಿದ್ದರು. ಜಯಪ್ರಕಾಶರ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ಹಲವು ನೂತನ ನಾಯಕರು ಮುನ್ನೆಲೆಗೆ ಬಂದರು.
ದೇಶದಲ್ಲಿ ಸರ್ವಾಧಿಕಾರಿ ಕಾಂಗ್ರೆಸ್ ವಿರುದ್ಧ ಮತ್ತೊಂದು ರಾಜಕೀಯ ಸಂಘಟನೆ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಶುರುವಾಯಿತು. ತನ್ನ ಸರ್ವಾಧಿಕಾರಿ ಧೋರಣೆಯ ಮೂಲಕ ಇಂದಿರಾ ಸಂಘಧ ಕಾರ್ಯಕರ್ತರಿಗೆ ಕೊಡಬಾರದ ಹಿಂಸೆ ಕೊಟ್ಟರು. ಆದರೂ ಸಂಘದ ಕಾರ್ಯಕರ್ತರು ಜಗ್ಗಲಿಲ್ಲ. ಇಂದು ಸಂಘದ ವಿರುದ್ಧ ನಾಲಿಗೆ ಹರಿಬಿಡುವ ಸಿದ್ದರಾಮಯ್ಯ ಅಂದು ಇಂದಿರೆಯ ವಿರುದ್ಧದ ಜಯ ಪ್ರಕಾಶರ ಚಳವಳಿಯ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಜಯಪ್ರಕಾಶರ ಚಳವಳಿ ಯಲ್ಲಿ ಸಂಘದ ಪಾತ್ರವೆಷ್ಟಿತ್ತೆಂಬುದು ಸಿದ್ದರಾಮಯ್ಯರಿಗೆ ಗೊತ್ತಿಲ್ಲವೇ? ಸಂಘದ ಸರಘಚಾಲಕರ ಹುದ್ದೆಯ ಬಗ್ಗೆ ನಾಲಿಗೆ ಹರಿದು ಬಿಡುವ ಸಿದ್ದರಾಮಯ್ಯ, ಅಂದಿನ ಸರಸಂಘಸಂಚಾಲಕರನ್ನು ಇಂದಿರಾ ಯಾಕೆ ಜೈಲಿಗಟ್ಟಿದ್ದರೆಂಬುದನ್ನು ಮೊದಲು ಜನತೆಯ ಮುಂದೆ ಹೇಳಬೇಕು.
ತಮ್ಮ ಪಕ್ಷದ ಸರ್ವಾಧಿಕಾರಿ ಇಂದಿರಾ ಅಂತ್ಯಗೊಳಿಸಿದ್ದಂತಹ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರವೇನೆಂಬುದನ್ನು ಮೊದಲು ತಿಳಿಯಲಿ. ಚಡ್ಡಿಯ ಬಗ್ಗೆ ತುಚ್ಛವಾಗಿ ಮಾತನಾಡುವ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸಿಗರಿಗೆ ನೆನಪಿರಲಿ, ಅಂದು ಚಡ್ಡಿಗಳನ್ನು ಹಾಕಿಕೊಂಡಿದ್ದಂತಹ ಸಂಘದ ಲಕ್ಷಾಂತರ ಕಾರ್ಯಕರ್ತರ ಹೋರಾಟದ ಫಲವಾಗಿ ಸರ್ವಾಧಿಕಾರಿ ಇಂದಿರೆಯ ಅಧಿಕಾರ ಅಂತ್ಯವಾಯಿತು. ಸಂವಿಧಾನದ ಬಗ್ಗೆ ಉದ್ದುದ್ದವಾಗಿ ಭಾಷಣ ಮಾಡುವ ಕಾಂಗ್ರೆಸಿಗರು ತಮ್ಮ ಸರ್ವಾಧಿಕಾರಿ ಇಂದಿರಾ, ಸಂವಿಧಾನದ ಮೇಲೆ ನಡೆಸಿದ ನಿರಂತರ ದಾಳಿಗಳ ಬಗ್ಗೆ ಭಾಷಣ ಮಾಡಬೇಕು. ಇಂದಿರಾ ಭಾರತದ ಪ್ರಜಾಪ್ರಭುತ್ವದ ಮೇಲೆ 1975 ರ ಜೂನ್ 25ರಂದು ನಡೆಸಿದ ದಾಳಿ, ಬ್ರಿಟಿಷರು ಭಾರತೀಯರ ಮೇಲೆ
ನಡೆಸಿದ ದಾಳಿಗೆ ಸಮಾನವಾದದ್ದು.