ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
ಕೋವಿಡ್ ವ್ಯಾಕ್ಸೀನ್‌ನ ಬೂಸ್ಟರ್ ಡೋಸ್ ಕೊಡಬೇಕೆ ಬೇಡವೇ ಎಂಬ ವಿವಾದ ಜಗತ್ತಿನ ಹಲವು ಕಡೆಗಳಲ್ಲಿ ನಡೆಯುತ್ತಿರುವಾಗಲೇ ಅಮೆರಿಕದಲ್ಲಿ ಬೂಸ್ಟರ್
ಡೋಸ್‌ಗೆ ಇತ್ತೀಚೆಗೆ ಅನುಮತಿ ಕೊಡಲಾಯಿತು.
ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 14 (2021) ರಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾ ನಿರ್ದೇಶಕ ಡಾ. ಟೆಡ್ರೋಸ್ ಗೆಬ್ರೆಯೇಸಿಸ್ ಅವರು
ಹೊರ ಹಾಕಿದ ಅಂಶಗಳು ಯಾರನ್ನೂ ದಂಗುಪಡಿಸುತ್ತವೆ. ಹಾಗೆಯೇ ಹೆಚ್ಚಿನವರು ಈ ಬಗ್ಗೆ ವಿಚಾರ ಮಾಡುವ ಅವಶ್ಯಕತೆಯೂ ಇದೆ. ಜಗತ್ತಿನಾದ್ಯಂತ ಈವರೆಗೆ 6 ಬಿಲಿಯನ್ ಡೋಸ್ ಗಳಷ್ಟು ವ್ಯಾಕ್ಸೀನ್ ವಿತರಣೆಯಾಗಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮತ್ತು ಮಧ್ಯಮ ವರ್ಗದ ದೇಶಗಳಲ್ಲಿ 80% ನಷ್ಟು ವ್ಯಾಕ್ಸೀನ್ ವಿತರಣೆಯಾಗಿದೆ.
ಆಫ್ರಿಕಾ ಖಂಡದಲ್ಲಿ 3.5% ಗಿಂತ ಕಡಿಮೆ ಜನರಿಗೆ 2 ಡೋಸ್‌ಗಳ ವ್ಯಾಕ್ಸೀನ್ ಹಾಕಲಾಗಿದೆ. ಅದಕ್ಕೆ ವಿರುದ್ಧವಾಗಿ ಅಮೆರಿಕದ ಒಟ್ಟೂ ಜನಸಂಖ್ಯೆಯ 54% ಜನರಿಗೆ ಈಗಾಗಲೇ ವ್ಯಾಕ್ಸೀನ್ ಹಾಕಿಯಾಗಿದೆ. ಈ ಅಗಾಧ ಅಸಮಾ ನತೆಯನ್ನು ಗಮನಿಸಿ. ಇದು ಕೇವಲ ಆಫ್ರಿಕಾದ ಜನರಿಗೆ ಆದ ತೊಂದರೆಯಲ್ಲ. ನಮ್ಮೆಲ್ಲರಿಗೂ ಇದು ತೊಂದರೆ ತರಬಲ್ಲದು. ಎಂದು ಡಾ. ಟೆಡ್ರೋಸ್ ರ ಅಭಿಪ್ರಾಯ. ಈ ರೀತಿಯ ಅಸಮಾನತೆ ಹೀಗೆ ಮುಂದುವರಿ ದರೆ ಕರೋನಾ ವೈರಸ್ ಹಬ್ಬುವುದು ಜಾಸ್ತಿ ಆಗುತ್ತದೆ. ಹಾಗೆಯೇ ವೈರಸ್ ತನ್ನ ತಳಿ ಬದಲಿಸುತ್ತಾ ಹೋಗುತ್ತದೆ.
ದೇಶಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭೇದ ಮುಂದುವರಿಯುತ್ತದೆ. ಹಾಗೆಯೇ ಕರೋನಾ ವೈರಸ್ ತನ್ನ ಪ್ರಭೇದಗಳನ್ನು (Varients) ಬದಲಾಯಿಸಲು ಹೆಚ್ಚಿನ ಅವಕಾಶ ಸಿಕ್ಕ ಹಾಗೆ ಆಗುತ್ತದೆ. ಆಗ ಈ ಹೊಸ ರೀತಿಯ ಪ್ರಬೇಧಗಳ ಬದಲಾವಣೆಗಳಿಗೆ ಈಗಾಗಲೇ ಇರುವ ವ್ಯಾಕ್ಸೀನ್‌ಗಳು ಕಡಿಮೆ ಪರಿಣಾಮಕಾರಿ ಯಾಗುತ್ತದೆ ಎಂಬುದು WHO ಮುಖ್ಯಸ್ಥರ ಅಳಲು. ಶ್ರೀ ಮಂತ ಮತ್ತು ಬಡ ದೇಶಗಳ ವ್ಯಾಕ್ಸೀನ್ ಅಸಮಾನತೆ ತುಂಬಾ ಗಮನಾರ್ಹವಾಗಿದೆ. ಯಾರಿಗೂ ಇದು ಢಾಳಾಗಿ ಕಾಣಿಸುತ್ತದೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿ. ಇಲ್ಲಿಯವರೆಗೆ 75% ಗಿಂತಲೂ ಹೆಚ್ಚು ಲಸಿಕೆಗಳು ಕೇವಲ 10ದೇಶಗಳಲ್ಲಿ ವಿತರಣೆಯಾಗಿವೆ. ವಿಶ್ವ ಸಂಸ್ಥೆಯ ವಿಸ್ತರಣಾ ಕಾರ್ಯಕ್ರಮದ (UNDP) ಅಂಕಿ ಸಂಖ್ಯೆಗಳ ಪ್ರಕಾರ ಸೆಪ್ಟೆಂಬರ್ 16 ರ ಹೊತ್ತಿಗೆ ಶ್ರೀಮಂತ ದೇಶಗಳ 60.1% ಜನರಿಗೆ ಒಂದು ಡೋಸ್ ವ್ಯಾಕ್ಸೀನ್ ಆದರೂ ಲಭ್ಯವಾಗಿದೆ.
ಅದೇ ಕಡಿಮೆ ವರಮಾನ ಇರುವ ಬಡ ದೇಶಗಳಲ್ಲಿ ಈ ಸಂಖ್ಯೆ ಕೇವಲ 3%. ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಎಲ್ಲಾ ದೇಶಗಳ 10% ಜನಸಂಖ್ಯೆಗಾದರೂ ವ್ಯಾಕ್ಸೀನ್ ಕೊಟ್ಟಿರಬೇಕು, ಹಾಗೆಯೇ ಈ ವರ್ಷದ ಕೊನೆಯ ಹೊತ್ತಿಗೆ 40% ಜನಸಂಖ್ಯೆಗೆ ಹಾಗೆಯೇ ಮುಂದಿನ ವರ್ಷ (2022) ಮಧ್ಯ ಭಾಗದ ಹೊತ್ತಿಗೆ ಜಗತ್ತಿನಾದ್ಯಂತ 70% ಜನರಿಗೆ ವ್ಯಾಕ್ಸೀನ್ ಹಾಕಿರಬೇಕು ಎಂಬ ತುಂಬಾ ಆಶೋತ್ತರದ ನಿರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಇಟ್ಟುಕೊಂಡಿತ್ತು. ಆದರೆ ಅದರದ್ದೇ ಮಾಹಿತಿಯ ಪ್ರಕಾರ 10 ರಲ್ಲಿ 8 ಆಫ್ರಿಕಾದ ದೇಶಗಳಲ್ಲಿ ಈ ತಿಂಗಳ ಕೊನೆಯ ಹೊತ್ತಿಗೆ ಅಲ್ಲಿನ ಜನಸಂಖ್ಯೆಯ 10% ಗೂ ವ್ಯಾಕ್ಸೀನ್ ಹಾಕಲು ಸಾಧ್ಯವಾಗುವುದಿಲ್ಲ.
ವಿಶ್ವ ಸಂಸ್ಥೆಯ ಆಫ್ರಿಕಾದ ಪ್ರಾಂತೀಯ ಘಟಕದ ಪ್ರಕಾರ ಆಫ್ರಿಕಾದ 54 ದೇಶಗಳ ಪೈಕಿ 42 ದೇಶಗಳು (ಸುಮಾರು 80%) ಈಗಿನ ವ್ಯಾಕ್ಸೀನ್ ನಿರ್ವಹಣೆ ಮುಂದುವರಿಸಿದರೆ ತಮ್ಮ ಗುರಿಯನ್ನು ಮುಟ್ಟಲಾರರು. ಇದಕ್ಕೆ ವಿರುದ್ಧವಾಗಿ ಶ್ರೀ ಮಂತ ದೇಶಗಳ 90% ದೇಶಗಳು ಸೆಪ್ಟೆಂಬರ್ ಗುರಿಯಾದ 10% ಮುಟ್ಟಿ ಇನ್ನೂ ಸಾಗುತ್ತಿದ್ದಾರೆ. ಹಾಗೆಯೇ ವಷಾಂತ್ಯಕ್ಕೆ 40% ಮುಟ್ಟಬೇಕು ಎಂಬ ಗುರಿಯನ್ನು ಈ ವರ್ಗದ 70% ದೇಶಗಳು ಈಗಾಗಲೇ ಮುಟ್ಟಿಬಿಟ್ಟಿದ್ದಾರೆ.
ಆಶ್ವಾಸನೆ ಪಾಲಿಸಲಿಲ್ಲ : ಎ 7 ದೇಶಗಳು ಜೂನ್‌ನಲ್ಲಿ 870 ಮಿಲಿಯನ್ ಡೋಸ್‌ಗಳಷ್ಟು ವ್ಯಾಕ್ಸೀನ್ ಅನ್ನು ಜಾಗತಿಕ ವ್ಯಾಕ್ಸೀನ್ ನಿಧಿ COVAX ಗೆ ಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಆದರೆ ಅವರು 100 ಮಿಲಿಯನ್ ಡೋಸ್‌ಗಳಷ್ಟು ಮಾತ್ರ ಬಿಡುಗಡೆ ಮಾಡಿದವು. ಇದುವರೆಗೆ ಜಗತ್ತಿನಲ್ಲಿ ವ್ಯಾಕ್ಸೀನ್‌ಗಳಲ್ಲಿ 4% ವ್ಯಾಕ್ಸೀನ್‌ಗಳು ಮಾತ್ರ ಇuಅಗಿ ನಿಽಯ ಮೂಲಕ ಬೇರೆ ಬೇರೆ ದೇಶಗಳಿಗೆ ತಲುಪಿವೆ. ಸುದ್ದಿ ಮೂಲಗಳ ಪ್ರಕಾರ ಸೆಪ್ಟೆಂಬರ್ 15 ರ ವರಗೆ COVAX ಮೂಲಕ 141 ದೇಶಗಳಿಗೆ 272 ಮಿಲಿಯನ್ ವ್ಯಾಕ್ಸೀನ್‌ಗಳನ್ನು ಹಂಚಲಾಗಿದೆ.
ಅತೀ ಶ್ರೀಮಂತ ದೇಶಗಳು 1 ಬಿಲಿಯನ್ ಡೋಸ್ ಗಳನ್ನು COVAX ನಿಧಿಗೆ ಕೊಡುವುದಾಗಿ ಹೇಳಿದ್ದರು. ಆದರೆ 15% ರಷ್ಟು ವ್ಯಾಕ್ಸೀನ್ ಸಹಿತ ಇದುವರೆಗೆ ಕಳಿಸಿಲ್ಲ. COVAX ನಿಧಿಗೆ ದಿನ ಕಳೆದಂತೆ ವ್ಯಾಕ್ಸೀನ್ ಬಂದು ಸೇರುವ ಪ್ರಮಾಣ ಜಾಸ್ತಿಯಾಗಬೇಕಿತ್ತು. ಆದರೆ ದುರದೃಷ್ಟವಶಾತ್ ಆ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹಲವಾರು ಕಾರಣಗಳಿಗಾಗಿ COVAX ಮೂಲಕ ಆಫ್ರಿಕಾ ಖಂಡಕ್ಕೆ ವ್ಯಾಕ್ಸೀನ್‌ನ ಪೂರೈಕೆ ಈ ವರ್ಷದ ಕೊನೆಯ ಹೊತ್ತಿಗೆ 25% ಕಡಿಮೆ ಯಾಗುತ್ತದೆ (ಅಂದರೆ ಸುಮಾರು 150 ಮಿಲಿಯನ್ ಡೋಸ್ ಗಳು)ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾದ ನಿರ್ದೇಶಕ ಡಾ. ಮಷಿಡಿಸೋ ಮೋಯಿಟಿ ಇತ್ತೀಚೆಗೆ ನುಡಿದಿದ್ದಾರೆ.
ಅದರಲ್ಲಿ ಮುಖ್ಯ ಕಾರಣ ಎಂದರೆ ಶ್ರೀಮಂತ ದೇಶಗಳಲ್ಲಿ ಆರಂಭಿಸಿದ ಬೂಸ್ಟರ್ ಡೋಸ್‌ಗಳೂ ಒಂದು ಎಂದು ಅವರ ಅಭಿಮತ. ಇದೆಲ್ಲದರ ಒಟ್ಟೂ ಪರಿಣಾಮ ಎಂದರೆ ಈ ವರ್ಷದ ಕೊನೆಯ ಹೊತ್ತಿಗೆ ಸುಮಾರು 470 ಮಿಲಿಯನ್ ಡೋಸ್ ಗಳಷ್ಟು ವ್ಯಾಕ್ಸೀನ್ ಆಫ್ರಿಕಾದಲ್ಲಿ ಕೊರತೆಯಾಗುತ್ತದೆ. ಮೊದಲಿನ ಯೋಜನೆಯ ಪ್ರಕಾರ ಒಟ್ಟು ಆಫ್ರಿಕಾದ ಜನಸಂಖ್ಯೆಯ 40% ರಷ್ಟು ಜನತೆಗೆ ವ್ಯಾಕ್ಸೀನ್ ತಲುಪಬೇಕೆಂಬುದು ಆಶಯವಾಗಿತ್ತು. ಅಂತಾರಾಷ್ಟ್ರೀಯ ವ್ಯಾಕ್ಸೀನ್ ನಿಧಿ COVAX ಡಿಸೆಂಬರ್ 2021 ರ ಹೊತ್ತಿಗೆ ಕೇವಲ ಒಟ್ಟು 470 ಮಿಲಿಯನ್ ಡೋಸ್‌ಗಳಷ್ಟು ಆಫ್ರಿಕಾಕ್ಕೆ ವಿತರಿಸಲಿದೆ. ಅಂದರೆ ಆಫ್ರಿಕಾದ 17% ಜನಸಂಖ್ಯೆಗೆ ಮಾತ್ರ ಇದು ಸಾಕಾಗುತ್ತದೆ.
2021 ಮಾರ್ಚ್ ಕೊನೆಯ ಹೊತ್ತಿಗೆ ಒಂದೇ ಡೋಸ್ ನ ವ್ಯಾಕ್ಸೀನ್ ಆದ ಜಾನ್ಸನ್ ಮತ್ತು ಜಾನ್ಸನ್ ನ 220 ಮಿಲಿಯನ್ ಡೋಸ್‌ಗಳನ್ನು ಕೊಳ್ಳಲು
ಆಫ್ರಿಕನ್ ಯೂನಿಯನ್ order ಮಾಡಿತು. ಮತ್ತೊಂದು 180 ಮಿಲಿಯನ್ ಡೋಸ್ ಗಳಷ್ಟು ನಂತರ ಕೊಳ್ಳಬೇಕೆಂದು ಅದರ ಇಚ್ಛೆಯಾಗಿತ್ತು. ಹಾಗಲ್ಲದೇ ದಕ್ಷಿಣ ಆಫ್ರಿಕಾವು ನೇರವಾಗಿ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯ ಜೊತೆಗೆ 31 ಮಿಲಿಯನ್ ಡೋಸ್ ವ್ಯಾಕ್ಸೀನ್ ಪೂರೈಸುವಂತೆ ಒಪ್ಪಂದ ಮಾಡಿಕೊಂಡಿತು.
ಆದರೆ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ಆರಂಭದಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಫ್ರಿಕನ್ ಯೂನಿಯನ್‌ಗೆ ವ್ಯಾಕ್ಸೀನ್ ಪೂರೈಸುವ ಬಗ್ಗೆ ಗ್ಯಾರಂಟಿ ಏನೂ ಕೊಟ್ಟಿರಲಿಲ್ಲ. ದಕ್ಷಿಣ ಆಫ್ರಿಕಾವು ಪ್ರಬಲವಾಗಿ ಪ್ರತಿರೋಧ ತೋರಿಸಿದಾಗ 9 ಮಿಲಿಯನ್ ಡೋಸ್‌ನಷ್ಟು ಸಣ್ಣ ಪ್ರಮಾಣವನ್ನು ಅದಕ್ಕೆ ಪೂರೈಸಿತು. ಉಳಿದ ಬಹಳಷ್ಟು ಡೋಸ್ ಗಳನ್ನು ಆ ಕಂಪನಿಯು ಯುರೋಪಿನ ದೇಶಗಳಿಗೆ ಮಾರಿತು. ದಕ್ಷಿಣ ಆಫ್ರಿಕಾದಿಂದ ಮತ್ತಷ್ಟು ಪ್ರತಿರೋಧ ಹಾಗೂ ಜಗತ್ತಿನಾದ್ಯಂತ ಉಳಿದ ದೇಶಗಳು ದೊಡ್ಡ ಹುಯಿಲು ಹಾಕಿದಾಗ ಆ ಕಂಪನಿ ದಕ್ಷಿಣ ಆಫ್ರಿಕಾ ಮತ್ತು ಆಫ್ರಿಕನ್ ಯೂನಿಯನ್‌ಗೆ ವ್ಯಾಕ್ಸೀನ್ ಪೂರೈಸಲಾರಂಭಿಸಿತು.
ಭಾರತದಲ್ಲಿನ ಪರಿಸ್ಥಿತಿ : ಈಗ ಭಾರತದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉಂಟಾಗಿದೆ. ಹೈದರಾಬಾದ್‌ನ ಬಯಲಾಜಿಕಲ್ E ಕಂಪನಿಯು 40 ಮಿಲಿಯನ್
ಡೋಸ್‌ಗಳಷ್ಟು ವ್ಯಾಕ್ಸೀನ್ ಅನ್ನು ಯುರೋಪ್ ಮತ್ತು ಅಮೆರಿಕಗಳಿಗೆ ರಫ್ತು ಮಾಡಲಿದೆ. ಭಾರತದ ಹಲವು ಸಿವಿಲ್ ಸೊಸೈಟಿ ಸಂಸ್ಥೆಗಳು ಭಾರತ ಸರ್ಕಾರಕ್ಕೆ ಮತ್ತು ಜಾನ್ಸನ್ ಕಂಪನಿಗೆ ಬರೆದ ಕಾಗದದಲ್ಲಿ – ಭಾರತದಲ್ಲಿ ಉತ್ಪಾದಿಸಿದ ಜಾನ್ಸನ್ ಕಂಪನಿಯ ವ್ಯಾಕ್ಸೀನ್‌ಗಳು ಆದ್ಯತೆ ಪ್ರಕಾರ ಭಾರತ ಸರ್ಕಾರ, ಆಫ್ರಿಕನ್
ಯೂನಿಯನ್ ಮತ್ತು ಅಂತಾರಾಷ್ಟ್ರೀಯ ವ್ಯಾಕ್ಸೀನ್ ನಿಧಿ COVAX ಗಳಿಗೆ ಮೊದಲು ಕೊಡಬೇಕು.
ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳಲ್ಲಿ ವ್ಯಾಕ್ಸೀನ್ ತೆಗೆದುಕೊಂಡಿಲ್ಲದ ಜನಸಂಖ್ಯೆ ಗಮನಾರ್ಹವಾಗಿರುವುದರಿಂದ ಕೋವಿಡ್ ಕಾಯಿಲೆ ಅಗಾಧ ಪ್ರಮಾಣದಲ್ಲಿ ಜಾಸ್ತಿಯಾಗುತ್ತಾ ಇದೆ, ಹಾಗೆಯೇ ಅದರಿಂದ ಮರಣದ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಹಾಗಾಗಿ ಜಾನ್ಸನ್ ಕಂಪನಿಯು ಈ ಆದ್ಯತೆಯನ್ನು ಗಮನಿಸಲೇಬೇಕು ಎಂದು ಅದು ನ್ಯಾಯಯುತವಾಗಿ ಒತ್ತಾಯಿಸುತ್ತಿದೆ.
ಫೆಬ್ರವರಿ ಕೊನೆಯ ವಾದದಿಂದಲೇ ಭಾರತದ ಸೀರಮ್ ಇನ್ ಸ್ಟಿಟ್ಯೂಟ್ ಅಂತಾರಾಷ್ಟ್ರೀಯ ವ್ಯಾಕ್ಸೀನ್ ನಿಧಿ COVAXಗೆ ವ್ಯಾಕ್ಸೀನ್ ಪೂರೈಸುವುದನ್ನು ನಿಲ್ಲಿಸಿದೆ. ನಾವು ವ್ಯಾಕ್ಸೀನ್ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ. ಭಾರತವು ನಮ್ಮ ಮೊದಲ ಆದ್ಯತೆ. COVAX ಮತ್ತು ಇತರ ದೇಶಗಳಿಗೆ ಈ ವರ್ಷದ ಕೊನೆಯ ಹೊತ್ತಿಗೆ ಮಾತ್ರ ಪೂರೈಸಲು ಸಾಧ್ಯ ಎಂದು ಆ ಕಂಪನಿಯ ಮುಖ್ಯಸ್ಥ ಆದರ್ ಪೂನಾವಾಲಾ ಅಭಿಪ್ರಾಯ ಪಡುತ್ತಾರೆ.
ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿ ವ್ಯಾಕ್ಸೀನ್ ಸಿಗದಿರುವುದರಿಂದ ಅಲ್ಲಿನ ಜನತೆಗೆ ವ್ಯಾಕ್ಸೀನ್ ಪ್ರಮಾಣ ಕಡಿಮೆಯಾಗಿದೆಯಾದರೂ ವ್ಯಾಕ್ಸೀನ್ ಹಾಕಿಸಿಕೊಳ್ಳಲು ಹಿಂಜರಿಕೆಯೂ ಆ ದೇಶಗಳಲ್ಲಿ ಗಮನಾರ್ಹವಾಗಿದೆ ಎಂಬುದನ್ನು ಗಮನಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹಲವು ಆಫ್ರಿಕನ್ ದೇಶಗಳು ತಮ್ಮ ದೇಶದ ವ್ಯಾಕ್ಸೀನ್ ಹಾಕುವ ವೇಗವನ್ನು ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಾಡಿವೆಯಾದರೂ 26 ಇಲ್ಲಿನ ದೇಶಗಳು ತಮಗೆ ಬಂದಿರುವ ವ್ಯಾಕ್ಸೀನ್ ಡೋಸ್‌ಗಳ ಅರ್ಧದಷ್ಟನ್ನೂ ಉಪಯೋಗಿಸಿಲ್ಲ ಎಂಬುದು ದೌರ್ಭಾಗ್ಯದ ವಿಚಾರ.
ವ್ಯಾಕ್ಸೀನ್ ಡೋಸ್ ಗಳ ಪೋಲು (Waste) : ಬೂಸ್ಟರ್ ವ್ಯಾಕ್ಸೀನ್‌ಗೆ ಹೆಚ್ಚಿನ ವ್ಯಾಕ್ಸೀನ್ ಡೋಸ್ ಗಳು ಬೇಕು ಎಂಬುದು ಒಂದು ವಿಚಾರವಾದರೆ , ಶ್ರೀ
ಮಂತ ದೇಶಗಳು ಮಿಲಿಯನ್ ಗಟ್ಟಲೆ ವ್ಯಾಕ್ಸೀನ್ ಡೋಸ್ ಗಳನ್ನು ಪೋಲುಮಾಡಿವೆ ಅಥವಾ ಬಿಸಾಡಿವೆ ಎಂಬುದು ತೀರಾ ವಿಷಾದಕರ ಸಂಗತಿ. ಆಫ್ರಿಕಾದ
ಮತ್ತು ಇನ್ನೂ ಹಲವು ಬಡ ದೇಶಗಳಲ್ಲಿ ಅಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣವಾಗಿ ವ್ಯಾಕ್ಸೀನ್ ಡೋಸ್‌ಗಳನ್ನು ಕೊಡಲು ಸಾಧ್ಯವಾಗದಿರುವಾಗ, ಮಾರ್ಚ್ 21 ರ ನಂತರ ಅಮೆರಿಕ ದೇಶವು ಒಂದೇ 15 ಮಿಲಿಯನ್ ಗಿಂತಲೂ ಅಽಕ ಡೋಸ್ ಗಳನ್ನು ಪೋಲು (Waste) ಮಾಡಿದೆ.
ಹಾಗೆಯೇ ಯುನೈಟೆಡ್ ಕಿಂಗ್‌ಡಮ್ ನಲ್ಲಿ ಆಗಸ್ಟ್ (2021) ಒಂದು ತಿಂಗಳಿನಲ್ಲಿಯೇ 0.8 ಮಿಲಿಯನ್ ಡೋಸ್ ಪೋಲು ಮಾಡಿದೆ. ಅಮೆರಿಕ ಅಷ್ಟು ಹೆಚ್ಚು ವ್ಯಾಕ್ಸೀನ್ ಡೋಸ್ ಗಳನ್ನು ಪೋಲು ಮಾಡಲು ಕಾರಣ ಎಂದರೆ ಅಲ್ಲಿನ ಪ್ರಜೆಗಳು ವ್ಯಾಕ್ಸೀನ್ ಸೆಂಟರ್‌ಗೆ ಬಂದಾಗ ಹೆಚ್ಚು ಡೋಸ್‌ಗಳಿರುವ ವ್ಯಾಕ್ಸೀನ್ ವಯಲ್ (Vial) ಗಳಿಂದ ಒಂದು ಅಥವಾ ಎರಡು ಡೋಸ್ ಕೊಟ್ಟು ಉಳಿದ ಡೋಸ್ ಗಳನ್ನು ರಕ್ಷಿಸಿಡಲು ಸಾಧ್ಯವಾಗದಿದ್ದಾಗ ಅದನ್ನು ಬಿಸಾಡಿದರು. 2019 ರಲ್ಲಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಲ್ಲಿ 10 ಡೋಸ್ ಇರುವ ವಯಲ್ ಉಪಯೋಗಿಸಿದರೆ 15-20% ಗಳಷ್ಟು ಡೋಸ್ ಗಳು waste ಆಗುತ್ತದೆ ಎಂದು ಗೊತ್ತಾಗಿದೆ. ಆದರೆ ಇದನ್ನು ಸರಿಯಾಗಿ ಯೋಜನೆ ಮಾಡಿದರೆ ಆ ತರಹ ಆಗುವುದನ್ನು ನಿಲ್ಲಿಸಬಹುದು.
ಭಾರತದ ಹಲವು ರಾಜ್ಯಗಳು ಆರಂಭದಲ್ಲಿ ಹಲವಾರು ಡೋಸ್‌ಗಳನ್ನು ಪೋಲು ಮಾಡಿದರು . ಆದರೆ ಕಳೆದ ಏಪ್ರಿಲ್ ನಂತರ ಅವೆಲ್ಲಾ ಪೋಲು ಮಾಡುವ ಡೋಸ್ ನ ಪ್ರಮಾಣ ಸೊನ್ನೆಗೆ (zero) ತಂದದ್ದಲ್ಲದೇ ಇನ್ನೂ ಹೆಚ್ಚಿನ ಡೋಸ್ ದೊರಕಿಸಿಕೊಂಡವು. ಏಕೆಂದರೆ 10 ಡೋಸ್ ಇರುವ ವಯಲ್ ನಲ್ಲಿ ಕಂಪನಿ ಯವರು Wastage ಗೆ ಅಂದಾಜಿಟ್ಟು 11 ಅಥವಾ 12 ಡೋಸ್ ತುಂಬಿರುತ್ತಾರೆ. ಅದನ್ನು ಸೂಕ್ತವಾಗಿ ಉಪಯೋಗಿಸಿದರೆ ವ್ಯಾಕ್ಸೀನ್ Wastage ಖಂಡಿತಾ ನಿಲ್ಲಿಸಬಹುದು.
ವ್ಯಾಕ್ಸೀನ್‌ನ ಈ ಅಸಮಾನತೆಯನ್ನು ಮನಗೊಂಡು ಶ್ರೀ ಮಂತ ದೇಶಗಳು ಬಡ ದೇಶಗಳಿಗೆ ಹೆಚ್ಚಿನ ಪ್ರಮಾಣದ ವ್ಯಾಕ್ಸೀನ್ ಗಳನ್ನು ಕಳಿಸುತ್ತಾರಾ ಎಂಬುದನ್ನು ನಿರೀಕ್ಷಿಸಬೇಕು.